ವಚನ ದಾಸೋಹ
#ವಚನ:
ದೇವಲೋಕ ಮರ್ತ್ಯಲೋಕವೆಂಬುದು
ಬೇರಿಲ್ಲ ಕಾಣಿರಣ್ಣ.
ಸತ್ಯವ ನುಡಿವುದೇ ದೇವಲೋಕ!
ಮಿಥ್ಯವ ನುಡಿವುದೇ ಮರ್ತ್ಯಲೋಕ!
ಆಚಾರವೇ ಸ್ವರ್ಗ! ಅನಾಚಾರವೇ ನರಕ!
ನೀವೇ ಪ್ರಮಾಣ ಕೂಡಲಸಂಗಮದೇವ.
- ಗುರು ಬಸವಣ್ಣನವರು
ಭಾವಾರ್ಥ:
ಇದು ಬಹಳ ಪ್ರಚಲಿತವಿರುವ ಗುರುಬಸವಣ್ಣನವರ ಸದಾಚಾರದ ಮಹತ್ವ ವಿವರಿಸುವ ಸರಳ ಸುಂದರ ವಚನ. ಪಂಚಾಚಾರಗಳಲ್ಲೆಲ್ಲಾ ಸದಾಚಾರ ಬಹಳ ವ್ಯಾಪಕವಾದದ್ದು; ಮೂಲಭೂತವಾದದ್ದು; ಪರಿಶುದ್ಧವಾದ ಸಾತ್ವಿಕ ಜೀವನಕ್ಕೆ ಆಧಾರಭೂತವಾದದ್ದು. ಶರಣರು ನೈತಿಕ ಜೀವನಕ್ಕೆ ಅತೀ ಹೆಚ್ಚಿನ ಮಹತ್ವವನ್ನು ಕೊಟ್ಟಿದ್ದಾರೆ. ಲಿಂಗಾಚಾರದ ಸಾರ್ಥಕತೆ ಇರುವುದು ಸದಾಚಾರದಲ್ಲಿಯೇ. ಸದಾಚಾರಗಳು ಸಾಧಕನನ್ನು ಭಕ್ತಸ್ಥಲಕ್ಕೆ ಅರ್ಹನನ್ನಾಗಿ ಮಾಡಿ ಅಲ್ಲಿಂದ ಮುನ್ನಡೆಯುವ ನಿಷ್ಠೆಯನ್ನೂ ದೃಷ್ಟಿಯನ್ನೂ ತಂದುಕೊಡುತ್ತವೆ. ನೈತಿಕ ಜೀವನದ ನಿಷ್ಠೆಯನ್ನು ಬಹುಪರಿಣಾಮಕಾರಿಯಾಗಿ ಅವರು ತಮ್ಮ ಈ ವಚನದಲ್ಲಿ ತಿಳಿಸಿಕೊಡುತ್ತಾರೆ.
*ದೇವಲೋಕ ಮರ್ತ್ಯಲೋಕವೆಂಬುದು ಬೇರಿಲ್ಲ ಕಾಣಿರೋ*
ದೇವಲೋಕವೆಂದರೆ ಜನಮನದ ಕಲ್ಪನೆಯಲ್ಲಿ, ಪುರಾಣಗಳಲ್ಲಿ, ಕಟ್ಟು ಕಥೆ ಗಳಲ್ಲಿ ರೂಪುಗೊಂಡಿರುವ ಒಂದು ಲೋಕ. ದೇವತೆಗಳು ನೆಲೆಸಿರುವ ಲೋಕ. ಜನಸಮುದಾಯದ ಮನದಲ್ಲಿ ತಾವು ವಾಸಮಾಡುತ್ತಿರುವ ಇಹಲೋಕದ ಮೇಲುಗಡೆಯಲ್ಲಿ ದೇವತೆಗಳು ನೆಲೆಸಿದ ಲೋಕ ಮತ್ತು ಅಲ್ಲಿ ದೇವತೆಗಳು ಸಾವುನೋವುಗಳಿಲ್ಲದೆ ನೆಮ್ಮದಿಯಿಂದಿದ್ದಾರೆ ಎಂಬ ಕಲ್ಪನೆಯಿದೆ. ಸತ್ತಮೇಲೆ ಹೊಂದುವಂತಹದು. ಮರ್ತ್ಯವೆಂದರೆ ಸಾವು ಇರುವ ಲೋಕ. ದೇವಲೋಕ ಮತ್ತು ಮರ್ತ್ಯಲೋಕವೆಂಬ ಎರಡು ಬೇರೆ ಬೇರೆಯಾಗಿರುವ ಲೋಕಗಳು ವಾಸ್ತವದಲ್ಲಿ ಇಲ್ಲ. ದೇವಲೋಕವೆಂಬುದು ಮಾನವರ ಮನದ ಕಲ್ಪನೆಯ ಲೋಕ. ಇಲ್ಲಿ ಇರುವುದು ಒಂದೇ ಇದೇ ಲೋಕ.
*ಸತ್ಯವ ನುಡಿವುದೇ ದೇವಲೋಕ!
ಮಿಥ್ಯವ ನುಡಿವುದೇ ಮರ್ತ್ಯಲೋಕ!"
ಎಲ್ಲಿ ಸತ್ಯ ನುಡಿವರೋ ಅದೇ ದೇವಲೋಕ. ಎಲ್ಲಿ ಸುಳ್ಳುಗಳನ್ನ ನುಡಿವರೋ ಅದೇ ಮರ್ತ್ಯಲೋಕ. ದೇವಲೋಕ ಎಂಬುದು ಆಕಾಶದಲ್ಲೆಲ್ಲೂ ಇಲ್ಲ. ಅದಿರುವುದು ಭೂಮಿಯ ಮೇಲೇಯೆ. ಸತ್ಯವನ್ನು ನುಡಿದರೆ ನಮ್ಮ ಸುತ್ತಲಿನ ಪರಿಸರ ದೇವಲೋಕವಾಗಿ ಮಾರ್ಪಡಾಗುವುದು.
*ಆಚಾರವೇ ಸ್ವರ್ಗ! ಅನಾಚಾರವೇ ನರಕ!
ನೀವೇ ಪ್ರಮಾಣ ಕೂಡಲಸಂಗಮದೇವ*
ಆತ್ಮಶುದ್ಧತೆ, ಮನಶುದ್ಧಿಯಿಂದ ಸದಾಚಾರದಿಂದ ಜೀವಿಸುವ ವಾತಾವರಣವೇ ಸ್ವರ್ಗವೆನಿಸುವುದು. ಮಿಥ್ಯಾಚಾರವನ್ನು ಮಾಡಿದರೆ ಅದೇ ಭವಲೋಕ ನರಕವಾಗುವುದು. ಸುವಿಚಾರದ ಅರಿವಿನಿಂದ ಅರಿತು ಮಾಡುವ ಆಚಾರವು, ಸಂತೋಷ, ತೃಪ್ತಿ ಕೊಡುವುದರಿಂದ ಸ್ವರ್ಗ ಎನಿಸುವುದು. ಅನಾಚಾರದಿಂದ ವರ್ತಿಸಿದರೆ ನಮ್ಮ ಮನಸಾಕ್ಷಿ ನರಳಿ ಅದೇ ನರಕ ಎನಿಸುವುದು. ನರಕವೆಂದರೆ ನೋವಿನ ಆಗರ. ಸುಳ್ಳು, ವಂಚನೆ, ಅಸತ್ಯ, ಅನೈತಿಕತೆ ಇಂಥ ಅನಾಚಾರಗಳು ಮಾನವನನ್ನು ನೋವಿನ ಕೂಪಕ್ಕೆ ತಳ್ಳುತ್ತವೆ. ಹೀಗೆ ಎರಡೂ ಲೋಕಗಳು ನಮ್ಮ ಮನಸ್ಸಿನಲ್ಲಿಯೇ ಇವೆ.
ಸತ್ಯವಂತರಾಗಿ, ಆಚಾರವಂತರಾಗಿ ಬಾಳಿ ಸ್ವರ್ಗದಂಥ ಪರಿಸರವನ್ನು ಬೆಳೆಸಿ ಎಂದು ಸೂಚಿಸುತ್ತಾ ಜನರ ಎಲ್ಲ ನಡವಳಿಕೆಗಳಿಗೆ ನೀವೇ ಸಾಕ್ಷಿ ಎಂದು ಕೂಡಲಸಂಗಮದೇವನಲ್ಲಿ ಬೇಡಿಕೊಳ್ಳುತ್ತಾರೆ.
*ಶರಣ ಧರ್ಮದಲ್ಲಿ ದೇವಲೋಕ, ಮರ್ತ್ಯಲೋಕ, ಸ್ವರ್ಗ ಮತ್ತು ನರಕ*:
ಜಗತ್ತಿನ ಬಹುತೇಕ ಎಲ್ಲ ಧರ್ಮಗಳಲ್ಲೂ ಸ್ವರ್ಗ ಮತ್ತು ನರಕದ ಕಲ್ಪನೆ ಇದೆ. ಸ್ವರ್ಗವೆಂದರೆ ಅಪ್ಸರೆಯರು, ಸುರೆ, ದೇವಕನ್ಯೆ, ಹಲವು ಕನ್ಯೆಯರನ್ನು ಒದಗಿಸುವ ಸ್ಥಳ. ನರಕವೆಂದರೆ ನೋವು ಯಾತನೆ, ಕುದಿಯುವ ಎಣ್ಣೆಯಲ್ಲಿ ಹಾಕುವ ಸತಾನ, ಸೈತಾನ, ಯಮನ ಸ್ಥಳ. ಹೀಗೆ ಹೆದರಿಕೆ ಪ್ರಲೋಭನೆಗಳಿಂದ ಜನರನ್ನು ಒಳ್ಳೆಯ ನಡತೆಗೆ ಪ್ರಚೋದಿಸುತ್ತಿದ್ದರು. ಆದರೆ ಶರಣ ಧರ್ಮ ಇವೆಲ್ಲವೂಗಳಿಗಿಂತ ಭಿನ್ನವಾದ ಸ್ವತಂತ್ರ ವಿಚಾರವುಳ್ಳ ಧರ್ಮ.
ಶರಣರದು ವೈಜ್ಞಾನಿಕವಾದ ವೈಚಾರಿಕವಾದ ವಾಸ್ತವವಾದ. ಶರಣರು ಸತ್ಯದ ಅನ್ವೇಷಕರು. ಸತ್ತವರು ಯಾರು ತಿರುಗಿ ಬಂದು ಸ್ವರ್ಗ ನರಕದ ವಿಚಾರ ಹೇಳಿಲ್ಲ. ಸತ್ತನಂತರ ದೇಹವನ್ನೇ ಬಿಟ್ಟುಹೋದವರು ಸುರೆ, ಅಪ್ಸರೆ, ಕನ್ಯೆಯರನ್ನು ಅನುಭವಿಸಲು ಸಾಧ್ಯವೇ? ದೇವಲೋಕ, ಮರ್ತ್ಯಲೋಕ ಸ್ವರ್ಗ ನರಕ ಎಂಬ ಕಲ್ಪನೆಯ ಲೋಕಗಳನ್ನು ಶರಣರು ತಳ್ಳಿಹಾಕಿದ್ದಾರೆ. ಜ್ಞಾನ ಪ್ರಜ್ಞೆ ಅರಿವು ಜನರಲ್ಲಿ ಮೂಡಿಸಿ, ಸನ್ನಡತೆ ತಂದರು. ಭಯ ಭೀತಿ ಹುಟ್ಟಿಸಿಯೋ, ಮೂಢ ನಂಬಿಕೆಗಳಿಂದಲೋ ಅಲ್ಲ. ದೇವಲೋಕ, ಮರ್ತ್ಯಲೋಕ, ಸ್ವರ್ಗ, ನರಕಗಳೆಂಬವು ದೂರದಲ್ಲಿ ಬೇರೆ ಎಲ್ಲಿಯೋ ಇರುವಂತಹವಲ್ಲ. ದೇವಲೋಕ, ಸ್ವರ್ಗ, ನರಕಗಳು ಸತ್ತನಂತರ ಹೋಗುವಂತಹ ಸ್ಥಳಗಳಲ್ಲ. ಎಲ್ಲಿ ಸದಾಚಾರ ಸುವಿಚಾರಗಳು ಇರುತ್ತವೆಯೋ, ಎಲ್ಲಿ ಆಚಾರವಂತರು, ವಿನಯವಂತರು ಇದ್ದಾರೋ ಆ ಪರಿಸರವೇ ಸ್ವರ್ಗಲೋಕ ಎಂದು ತಿಳಿಸುತ್ತಾರೆ. ಸತ್ಯದ ಮನೆಯಲ್ಲಿ ಶಿವನಿರುವನಲ್ಲದೆ, ಅಸತ್ಯದ ಮನೆಯಲ್ಲಿ ಶಿವನಿರುವನೇ?” ಎಂದು ಕೇಳುತ್ತಾರೆ ಶರಣರು. ಸತ್ಯವೇ ಶಿವನ ಆವಾಸಸ್ಥಾನ. ಎಲ್ಲಿ ಸುಳ್ಳು, ಅನಾಚಾರ, ಮೋಸ, ಲಂಚ ಇವೆಲ್ಲಾ ಇರುತ್ತದೋ ಅದೇ ನರಕ ಎಂದು ಹೇಳುತ್ತಾ ಬಸವಣ್ಣನವರು ಮನುಷ್ಯನ ಮನೋಲೋಕದೊಳಗೇ ಸರ್ವಲೋಕಗಳ ಸೃಷ್ಟಿಯನ್ನೂ ಕಾಣಿಸಿದ್ದಾರೆ. ಆಚಾರವಂತರಾಗಿ ಬಾಳಿ ಸ್ವರ್ಗದಂಥ ಪರಿಸರವನ್ನು ಬೆಳೆಸಿ ಎಂದು ತಿಳಿಸಿ ಜನರ ಎಲ್ಲ ನಡವಳಿಕೆಗಳಿಗೆ ನೀವೇ ಸಾಕ್ಷಿ ಎಂದು ಕೂಡಲಸಂಗಮದೇವನಲ್ಲಿ ಬೇಡಿಕೊಳ್ಳುತ್ತಾರೆ. ಶರಣರು ನೈತಿಕತೆ, ಸನ್ನಡತೆ, ಸದಾಚಾರಕ್ಕೆ ಅತ್ಯಂತ ಮಹತ್ವ ಕೊಟ್ಟಿದ್ದಾರೆ.
ಹೀಗೆ ಮಾನವನ ವೈಯಕ್ತಿಕ ಮತ್ತು ಸಾಮಾಜಿಕ ಜೀವನದ ಶಾಶ್ವತವಾದ ಮೌಲ್ಯಗಳ ವಿಕಾಸಕ್ಕೆ ಎಲ್ಲ ನೈತಿಕ ಅಂಶಗಳನ್ನು ಶರಣರು ಅರಗಿಸಿಕೊಂಡು ಒಂದು ಆದರ್ಶ ಸಮಾಜದ ನಿರ್ಮಾಣಕ್ಕೆ ಶ್ರಮಿಸಿದರು.
*Translation*:
‘The worlds of Gods and Mortals are not somewhere, separate from our world, see my brothers!
Speaking truth is the heaven!
Speaking untruth is the world of Mortals!
Good conduct is a heaven!
Bad conduct is a hell!
Oh God KudalaSangama (Shiva), You are the witness.
Let us all have ideals of Sharana dharma like truthfulness and good conduct and aim to do good unto others to create "Heaven on Earth".
- ✍️Dr Prema Pangi
#ಪ್ರೇಮಾ_ಪಾಂಗಿ
#ಗುರು_ಬಸವಣ್ಣ,#Guru_Basavanna,
#ದೇವಲೋಕ_ಮರ್ತ್ಯಲೋಕವೆಂಬುದು
Comments
Post a Comment