ಷಟ್ಸ್ಥಲ - ಐಕ್ಯಸ್ಥಲ

ಷಟ್ಸ್ಥಲ  -  ಐಕ್ಯಸ್ಥಲ
ಷಟ್ಸ್ಥಲ  -  ಐಕ್ಯಸ್ಥಲ
ಐಕ್ಯಸ್ಥಲ :
'ಸ್ಥಲ' ಎಂಬುದು ಸಾಧಕ ಶಿವನೇ ಆಗಿ ವಿಕಾಸಗೊಳ್ಳುವ ಪ್ರಕ್ರಿಯೆಯ ಒಂದು ಹಂತ. ಈ ಹಂತಗಳು ಆರು, ಒಟ್ಟಾರೆ ಇವನ್ನು ಷಟ್ಸ್ಥಲಗಳೆಂದು ಸೂಚಿಸುವುದು ರೂಢಿ : ಭಕ್ತ, ಮಾಹೇಶ್ವರ, ಪ್ರಸಾದಿ, ಪ್ರಾಣಲಿಂಗಿ, ಶರಣ ಮತ್ತು ಐಕ್ಯಗಳೇ ಇವು. 

ಭಕ್ತಿಯಲ್ಲಿ ಧೃಡ ವಿಶ್ವಾಸದ ಭಕ್ತ ಸ್ಥಲ , ಅಚಲ ನಿಷ್ಠೆಯ ಮಹೇಶ್ವರ ಸ್ಥಲ , ಸರ್ವವೂ ಶಿವನ ಪ್ರಸಾದವೆಂಬ ಭಾವದ ಪ್ರಸಾದಿ ಸ್ಥಲ , ಅಂತರಂಗ ಧ್ಯಾನದ ಪ್ರಾಣಲಿಂಗಿ ಸ್ಥಲ , ಶಿವನನ್ನು ಪತಿ ಎಂದಾಗ ಶರಣ ಸ್ಥಲ , ಶಿವನೊಂದಿಗೆ ಐಕ್ಯ ಒಂದಾಗುವ ಹಂತವು ಐಕ್ಯ ಸ್ಥಲ. ಆಗ ಸಾಧಕ  ಶಿವನೇ ಆಗುತ್ತಾನೆ. ಶರೀರವಿದ್ದರೂ ಮೋಹವಿಲ್ಲ. ಜೀವಂತವಿದ್ದರೂ ಐಕ್ಯವನ್ನು ಸಾಧಿಸಬಹುದು. ಹೀಗೆ ದ್ವೈತಿಯಾಗಿದ್ದ ಭಕ್ತನು -ಶಿವಾದ್ವೈತಿಯಾಗುತ್ತಾನೆ.

ಐಕ್ಯಸ್ಥಲ ಜೀವನದ ಪರಮೋಚ್ಚ ಹಾಗು ಅಂತಿಮ ವಿಭಾಗ.  ಜೀವಾತ್ಮವು ಭೌತಿಕ ದೇಹ ತೊರೆದು ಪರಮಾತ್ಮನಲ್ಲಿ ವಿಲೀನವಾಗುವ ಉಚ್ಚ ಸಾಧನಾ ಮಜಲು . ತನ್ನ ಕರ್ತವ್ಯವನ್ನು ನಿರ್ವಹಿಸಿದ ಅನುಭಾವಿ, ಸಂಪೂರ್ಣ ಸಾಮರಸ್ಯದಲ್ಲಿ ಲೀನವಾಗುವುದನ್ನು ಇಲ್ಲಿ ಕಾಣುತ್ತೇವೆ.

ಘೃತ ಘ್ರತವ ಬೆರಸಿದಂತೆ, ಕ್ಷೀರ ಕ್ಷಿರವ ಬೆರಸಿದಂತೆ, ತೈಲ ತೈಲವ ಬೆರಸಿದಂತೆ ಜ್ಯೋತಿ ಜ್ಯೋತಿಯ ಬೆರೆಸಿದಂತೆ, ಬಯಲು ಬಯಲು ಬೆರೆಸಿದಂತೆ, ಪ್ರಾಣ ಪ್ರಾಣ ಸಂಯೋಗವಾಗಿ ಲಿಂಗಸಮರಸವಾಗುತ್ತದೆ. ಕರ್ಪೂರಕ್ಕೆ ಅಗ್ನಿಯ ಸಂಯೋಗವಾಗಿ ಕರ್ಪೂರದ ಗುಣವಳಿದು ಅಗ್ನಿಯಾದಂತೆ, ಲಿಂಗವ ನೆನೆದು ಲಿಂಗವೇ ತಾನಾಗಿ ಪರಿಣಮಿಸುತ್ತಾನೆ ಸಾಧಕ. ಅಂಗ ಲಿಂಗಗಳಲ್ಲಿ ಎರಡು ಎಂಬ ಭಾವವಳಿದು ಏಕೋಭಾವ ಮೂಡುತ್ತದೆ.
ಭಿನ್ನ ಭಿನ್ನವೆಂಬ ಪ್ರಾಪ್ತಿ ಅಳಿದು ಅವಿರಳ ಸಮರಸದ ಸೌಖ್ಯದ ಶಿವಾದ್ವೈತ ಸಿದ್ಧಿಸುತ್ತದೆ. ನದಿಯೊಳಗೆ ನದಿ ಬೆರೆದಂತಾಗುತ್ತದೆ :
ಇದು ಒಂದು ಬಗೆಯ ನಿವೃತ್ತಿ ಮಾರ್ಗ, ತನು ಮನ ಪ್ರಾಣ ಭಾವಗಳು ನಿವೃತ್ತಿ ಯಾಗಿ ಲಿಂಗ ಸ್ವರೂಪ ವಾಗುತ್ತವೆ. ಲಿಂಗಲೀಯ ವಾಗುತ್ತವೆ. "ಭಾವವಿಲ್ಲದ ಬಯಲು, ಬಯಲಿಲ್ಲದ ಭಾವ ಅಗಮ್ಯದ ಐಕ್ಯಸ್ಥಲ".

#ತನು ಬಯಲು ನಿರವಯದೊಳಡಗಿತ್ತು;
ಮನ ಬಯಲು ನಿರವಯದೊಳಡಗಿತ್ತು;
ಭಾವ ಬಯಲು ನಿರವಯದೊಳಡಗಿತ್ತು;
ಬಯಲು ಬಯಲು ಬೆರಸಿ ಬಯಲೆ ಆಯಿತ್ತು !
ಕೂಡಲಚೆನ್ನಸಂಗಯ್ಯನೆಂಬ ನುಡಿಯಡಗಿತ್ತು. / 763

 #ತನು ನಿಮ್ಮನಪ್ಪಿ   ಮಹಾತನುವಾದ ಬಳಿಕ ತನು ವೆಂಬುದು ಮತ್ತೆಲ್ಲಿಯದೋ ? ಮನ ನಿಮ್ಮನಪ್ಪಿ ಘನ ಮನವಾದ ಬಳಿಕ ಮನವೆಂಬುದು  ಮತ್ತೆಲ್ಲಿಯದೋ? ಭಾವ ನಿಮ್ಮನಪ್ಪಿ ನಿರ್ಭಾವವಾದ ಬಳಿಕ ಭಾವವೆಂಬುದು ಮತ್ತೆಲ್ಲಿಯದೋ ?” ಎಂದು ಕೇಳುತ್ತಾರೆ ಚನ್ನಬಸವಣ್ಣನವರು.

#ತನು ಸೋಂಕಿ ತನು ನಷ್ಟವಾಯಿತ್ತು,
ಮನ ಸೋಂಕಿ ಮನ ನಷ್ಟವಾಯಿತ್ತು,
ಧನ ಸೋಂಕಿ ಧನ ನಷ್ಟವಾಯಿತ್ತು
ಭಾವ ಸೋಂಕಿ ಭಾವ ನಷ್ಟವಾಯಿತ್ತು.
ಇದು ಕಾರಣ ಕೂಡಲಚೆನ್ನಸಂಗಯ್ಯಾ,
ಲಿಂಗ ಸೋಂಕಿ ಶರಣನ ಸಂದು ನಷ್ಟವಾಯಿತ್ತು,
ನಿಮ್ಮೊಳಗೇಕಾರ್ಥವಾಯಿತ್ತು. / 771

ಎಂಬ ಅವರ ವಚನದಲ್ಲಿ ಇದೇ ಅಭಿಪ್ರಾಯ ವ್ಯಕ್ತವಾಗಿದೆ. ಅಲ್ಲಮಪ್ರಭು ಒಂದು ವಚನದಲ್ಲಿ ಕಾಯಗುಣ, ಪ್ರಾಣಗುಣ, ಭಾವ ಗುಣಗಳನ್ನು ಕಳೆದುಕೊಂಡ ಐಕ್ಯ ಸ್ಥಿತಿಯನ್ನು ಹೀಗೆ ಹೇಳಿದ್ದಾರೆ. 

#ಕಾಯಗುಣ ಕೆಟ್ಟ ಮತ್ತೆ ಅರ್ಚನೆ ಹಿಂಗಿತ್ತು.
ಪ್ರಾಣಗುಣ ಕೆಟ್ಟ ಮತ್ತೆ ಅರ್ಪಿತ ಹಿಂಗಿತ್ತು.
ಭಾವಗುಣ ಕೆಟ್ಟ ಮತ್ತೆ ಉಭಯ ಜಂಜಡ ಹಿಂಗಿತ್ತು.
ಇಂತಾದ ಕಾರಣ-ನಮ್ಮ ಗುಹೇಶ್ವರನ ಶರಣರು
ಲಿಂಗಭೋಗೋಪಭೋಗವೆಂಬ ಖಂಡಿತ ಬುದ್ಧಿಯ ಮೀರಿ,
ಅಖಂಡಾದ್ವೈತಬ್ರಹ್ಮದಲ್ಲಿ ತಲ್ಲೀಯವಾದರು. / 644

#ಕಾಯಗುಣವಳಿದು ಜೀವನ್ಮುಕ್ತನಾದ ಬಳಿಕ
ಸಮ್ಯಕ್ಜ್ಞಾನವೆಂಬ ಶಾಂತಿ ದೊರೆಕೊಂಡಿತ್ತು ನೋಡಿರೆ !
ಅಂತರಂಗ ಬಹಿರಂಗವೆಂಬುದನು ಅರಿಯನಾಗಿ
ದ್ವೈತಾದ್ವೈತವ ನಿರಾಕರಿಸಿ, ನಿರ್ವಾಣ ನಿಷ್ಪತಿಯಾಗಿ,
ಗುಹೇಶ್ವರಾ ನಿಮ್ಮ ಶರಣನನುಪಮ ಸುಖಿಯಾಗಿರ್ದನು. / 645

ಹೀಗೆ ತನು ಮನ ಪ್ರಾಣ ಭಾವಗಳ ನಿವೃತ್ತಿಯಾದಂತೆಲ್ಲ ಗುರು ಲಿಂಗ ಜಂಗಮ ಒಂದಾಗಿ  ಐಕ್ಯವಾಗುತ್ತವೆ. 

#ಮುಟ್ಟದ ಮುನ್ನ ಗುರುವುಂಟು,
ಲಿಂಗವುಂಟು ಜಂಗಮವುಂಟು,
ಪಾದೋದಕವುಂಟು, ಪ್ರಸಾದವುಂಟು.
ಮುಟ್ಟಿದ ಬಳಿಕ ಗುರುವಿಲ್ಲ, ಲಿಂಗವಿಲ್ಲ, ಜಂಗಮವಿಲ್ಲ
ಪಾದೋದಕವಿಲ್ಲ ಪ್ರಸಾದವಿಲ್ಲ.
ಇದು ಕಾರಣ ಕೂಡಲಚೆನ್ನಸಂಗಯ್ಯನಲ್ಲಿ
ಸ್ವಯವಲ್ಲದೆ ಪರವಿಲ್ಲವೆಂಬುದು
ನಿನ್ನಲ್ಲಿ ಕಾಣಬಂದಿತ್ತು ಕಾಣಾ ಪ್ರಭುವೆ / 1253

“ತನ್ನ ತಾನರಿದಡೆ ತನ್ನರಿವೇ ಗುರು, ತಾನೇ ಲಿಂಗ, ತನ್ನ ನಿಷ್ಟೆಯೇ ಜಂಗಮ.” ಗುರಿಯನ್ನು ಮುಟ್ಟುವವರೆಗೆ ಈ ಎಲ್ಲ ಪರಿಕರಗಳ ಸಾಧನೆಗಳ ಅವಶ್ಯಕತೆ. ಗುರಿ ಮುಟ್ಟಿದ ಮೇಲೆ ಗುರು ಲಿಂಗ ಜಂಗಮ ಪಾದೋದಕ ಪ್ರಸಾದ ಗಳ ಅವಶ್ಯಕತೆ ಇಲ್ಲ ಎಂದು ಷಟ್ಸ್ಥಲ ಬ್ರಹ್ಮಿ ಅವಿರಲ ಜ್ಞಾನಿ ಚೆನ್ನಬಸವಣ್ಣ ನವರ ಅಂಬೋಣ. ಕರ್ತವ್ಯ ನಿರ್ವಹಣೆ ನಿಲುಗಡೆ ಬಂದಮೇಲೆ ಅವು ಒಂದರಲ್ಲೊಂದು ಐಕ್ಯವಾಗುತ್ತವೆ.

 ಸಾಧಕ ಎಲ್ಲಾ ಕ್ರಿಯೆಗಳನ್ನು ಕಳೆದುಕೊಳ್ಳುತ್ತಾನೆ. ಇದ್ದು ಬದ್ಧನಲ್ಲ, ಸುಳಿದು ಸೂತಕಿಯಲ್ಲ. ಆವ ಸಂಗವು ಇಲ್ಲದ ನೀಜೈಕ್ಯನು.”  ಬೇಕು ಬೇಡವೆನ್ನುವ ಹಂಗು ಇಳಿದು ಕರ್ಪುರದ ಗಿರಿಯನ್ನು ಜ್ವಾಲೆ ತಾಗಿದಂತೆ  ಬೆಳಗಿ ಬಯಲಾಗುತ್ತಾನೆ.

ಈ ಲಿಂಗೈಕ್ಯದ  ಸ್ಥಳವನ್ನು ಕುರಿತು ಶರಣೆ ಸತ್ಯಕ್ಕ ಹೇಳುವ ಒಂದು ವಚನವನ್ನು ಇಲ್ಲಿ ಉದಾಹರಿಸಬಹುದು.

#ಉದಕದೊಳಗಣ ಕಿಚ್ಚಿನಂತೆ ಲಿಂಗೈಕ್ಯವು.
ವಾಯುನುಂಗಿದ ಪರಿಮಳದಂತೆ ಲಿಂಗೈಕ್ಯವು
ಉರಿಯೊಳಡಗಿದ ಕರ್ಪೂರದಂತೆ ಲಿಂಗೈಕ್ಯವು.
ಭಾವವನಡಸಿದ ಬಯಲಿನಂತೆ ಲಿಂಗೈಕ್ಯವು.
ಅರಿವು ನುಂಗಿದ ಮರಹಿನಂತೆ ಲಿಂಗೈಕ್ಯವು.
ಯತೋ ವಾಚೋ ನಿವರ್ತಂತೇ ಅಪ್ರಾಪ್ಯಮನಸಾ ಸಹ್ಳರಿಂದುದಾಗಿ,
ವಾಙ್ಮನಕ್ಕೆ ಅಗೋಚರವಾದ ಮಹಾಶರಣನ ಒಳಗೊಂಡು
ಥಳಥಳಿಸಿ ಬೆಳಬೆಳಗಿ ಹೊಳೆವುತ್ತ,
ನಿಶ್ಶಬ್ದಬ್ರಹ್ಮವಾಗಿರ್ದನಯ್ಯಾ ನಮ್ಮ ಶಂಭುಜಕ್ಕೇಶ್ವರನು. / 8

ಐಕ್ಯಸ್ಥಲದ ನಿಲುವನ್ನು ಈ ಮಾತು ನಿಚ್ಚಳವಾಗಿ ನಿರೂಪಿಸುತ್ತದೆ.

#ಲಿಂಗವೆನ್ನೆ ಲಿಂಗೈಕ್ಯವೆನ್ನೆ, ಸಂಗವೆನ್ನೆ ಸಮರಸವೆನ್ನೆ.
ಆಯಿತೆನ್ನೆ ಆಗದೆನ್ನೆ, ನೀನೆನ್ನೆ ನಾನೆನ್ನೆ.
ಚೆನ್ನಮಲ್ಲಿಕಾರ್ಜುನನಲ್ಲಿ ಐಕ್ಯವಾದ ಬಳಿಕ ಏನೆನ್ನೆ.
ಎಂಬ ಅಕ್ಕ ಮಹಾದೇವಿಯವರ ವಚನದಂತೆ  ಶರಣ ಆನಂದದ ಅನುಭೂತಿಯನ್ನು ಪಡೆಯುತ್ತಾನೆ. ಆ ಅನುಭವ ಮಾತಿಗೂ ಮೀರಿದುದು. ''ಮಾತೆಂಬುದು ಜ್ಯೋತಿರ್ಲಿಂಗ' ನಿಜ. ಆದರೆ ಮಾತೆಂಬ ಜ್ಯೋತಿರ್ಲಿಂಗವು ಅಂತರಂಗದ ಆತ್ಮ ಲಿಂಗದಲ್ಲಿ ಅಡಗಬೇಕಾದದು ಐಕ್ಯದ ಸ್ಥಿತಿ . ಇಲ್ಲಿ ಮಾತು “ ಭವಭಾರ ಘೋರವಾಗಿ ಪರಿಣಮಿಸುತ್ತದೆ. 
ಪ್ರಕೃತಿ ಮಾರ್ಗದಲ್ಲಿ ಒಂದು ಮೂರಾಗಿ, ಮೂರು ಆರಾದಂತೆ, ನಿವೃತ್ತಿ ಮಾರ್ಗದಲ್ಲಿ ಆರು ಮೂರಾಗಿ, ಮೂರು ಒಂದರಲ್ಲಿಯೇ ಅಡಗುತ್ತದೆ.
 
#ಭಕ್ತಸ್ಥಲ ಮಹೇಶ್ವರಸ್ಥಲದಲ್ಲಡಗಿ
ಮಹೇಶ್ವರಸ್ಥಲ ಪ್ರಸಾದಸ್ಥಲದಲ್ಲಡಗಿ
ಪ್ರಸಾದಸ್ಥಲ ಪ್ರಾಣಲಿಂಗಸ್ಥಲದಲ್ಲಡಗಿ
ಪ್ರಾಣಲಿಂಗಸ್ಥಲ ಶರಣಲಿಂಗಸ್ಥಲದಲ್ಲಡಗಿ
ಶರಣ ಸ್ಥಲ ಐಕ್ಯದಲ್ಲಡಗಿ
ಇಂತಿ ಷಡಾಂಗ ಯೋಗ ಸಮರಸವಾಗಿ
ಷಡ್ ಸ್ಥಲವ ಮೀರಿ ನಿರವಯಸ್ಥಲವ ನೇಯ್ದು
ಆ ನಿರವಯ ಸ್ಥಲವ ನಿರಾಳದಲ್ಲಡಗಿ
ಆ ನಿರಾಳ ನಿತ್ಯ ನಿರಂಜನ ಪರವಸ್ತು ತಾನಾಯತ್ತಾಗಿ
ಕ್ರಿಯಾ ನಿಷ್ಪತ್ತಿ, ಜ್ಞಾನ ನಿಷ್ಪತ್ತಿ, ಭಾವ ನಿಷ್ಪತ್ತಿ,
ಮಾಡುವ ಕ್ರಿಯೆಗಳೆಲ್ಲ ನಿಷ್ಪತ್ತಿಯಾಗಿ ಅರಿವ
ಅರುಹೆಲ್ಲ ಅಡಗಿ ಭಾವಿಸುವ ಭಾವವೆಲ್ಲ
ನಿರ್ಭಾವವಾಗಿ ನಿರ್ಲೇಪ ನಿರಂಜನ ವಸ್ತು
ತಾನು ತಾನಾದಲ್ಲದೇ ಧ್ಯಾನಿಸಲಿಕ್ಕೇನು ಇಲ್ಲ
ಮಹಾಲಿಂಗ ಗುರು ಶಿವ ಸಿದ್ಧೇಶ್ವರ ಪ್ರಭುವೇ. 

ಎಂದು ಐಕ್ಯದ  ನಿರವಯ ಸ್ಥಲವನ್ನು ವರ್ಣಿಸುತ್ತಾರೆ ಶ್ರೀ ತೋಂಟದ ಸಿದ್ಧಲಿಂಗೇಶ್ವರರು. ಸಾಧಕ, ಷಟಸ್ಥಲ ಮಾರ್ಗದಲ್ಲಿ ಭಕ್ತ, ಮಾಹೇಶ್ವರ, ,ಪ್ರಸಾದಿ, ಪ್ರಾಣಲಿಂಗಿ, ಶರಣ, ಐಕ್ಯ ಐಕ್ಯದಲ್ಲಿಯೇ ಮಹನ್ನೋತವಾದ ನಿರವಯಸ್ಥಲವನು ಏರಿ ನಿರಾಳವಾಗಿ, ಆ ನಿರಾಳ ನಿತ್ಯ ನಿರಂಜನ ಪರಮಾತ್ಮ ತಾನಾಗಿ ಕ್ರಿಯಾ ಜ್ಞಾನ ಭಾವ ನಿಷ್ಪತ್ತಿಯಾಗಿ, ನಿರ್ಭಾವವಾಗಿ  ನಿರ್ಲಿಪ್ತ ನಿರಂಜನ ವಸ್ತುವೇ ತಾನಾದ ಬಳಿಕ ಧ್ಯಾನಿಸಲಿಕ್ಕೆ, ಪೂಜಿಸಲಿಕ್ಕೆ ಏನು ಇಲ್ಲ.
ಹೀಗೆ ಷಟಸ್ಥಲ ಮಾರ್ಗದಲ್ಲಿ ಸಾಧಕನೇ ಶಿವನಾಗುತ್ತಾನೆ. ಭಾವವೆಲ್ಲ ನಿರ್ಭಾವವಾಗುತ್ತದೆ. ನಿರ್ಲೇಪ ನಿರಂಜನ ವಸ್ತು ತಾನೇ ತಾನಾಗುತ್ತದೆ. ಷಟ್‌ಸ್ಥಲಗಳಿಗೂ ಅತೀತವಾದ ನಿಃಕಲ ಸ್ಥಲದ ನಿಲುವು ಇಲ್ಲಿ ಕಾಣುತ್ತದೆ. 

#ಮನವೇ ಲಿಂಗವಾದ ಬಳಿಕ ಅಲ್ಲಿ ಯಾರನ್ನು ಯಾರು ನೆನೆಯುವುದು ? ಭಾವವೇ ಐಕ್ಯವಾದ ಬಳಿಕ 
ಬಯಸುವುದೇನನ್ನು ? 
ಈ ಸ್ಥಿತಿಯನ್ನು ಶರಣರು ಹೀಗೆ ವರ್ಣಿಸುತ್ತಾರೆ. 
ಅಂತೆಯೇ ಬೆಳಗಿನೊಳಗಣ ಮಹಾಬೆಳಗು ಆಡಗುವುದು?” “ಬಯಲಲ್ಲಿ ಬಯಲಾಗುವುದು”. ಈ ಹೋಲಿಕೆಗಳು ಅವರಿಗೆ ಬಹಳ ಪ್ರಿಯವಾದವು :

#ಘನಗಂಬಿರ ಮಹಾಘನದೊಳಗೆ
ಘನಕ್ಕೆ ಘನವಾಗಿದ್ದೆನಯ್ಯಾ.
ಕೂಡಲಸಂಗಮದೇವಯ್ಯನೆಂಬ
ಮಹಾಬೆಳಗಿನ ಬೆಳಗಿನೊಳಗಿದ್ದೇನೆಂಬ ಶಬ್ದ
ಮುಗ್ಧವಾದುದೆನೇನೆಂಬೆನಯ್ಯಾ / 620

ಎಂದು ಬಸವಣ್ಣನವರು ಐಕ್ಯದ ಆ ಅನುಭವವನ್ನು ವ್ಯಕ್ತಪಡಿಸುತ್ತಾರೆ. ಶರಣರು ಮೋಕ್ಷ ಕಲ್ಪನೆಯನ್ನು ಹೇಳುವಾಗ "ಬೆಳಗಿಂಗೆ ಬೆಳಗು ಸಿಂಹಾಸನವಾಗಿ ಕೂಡಿದ ಕೂಟ”ವನ್ನು ಹೇಳುತ್ತಾರೆ.  ಇಲ್ಲಿ ಚನ್ನಬಸವಣ್ಣನವರು ಹೇಳುವ ಒಂದು ಮಾತನ್ನು ಗಮನಿಸಬಹುದಾಗಿದೆ.

#ತನುವ ಕೊಟ್ಟು ತನು ಬಯಲಾಯಿತ್ತು,
ಮನವ ಕೊಟ್ಟು ಮನ ಬಯಲಾಯಿತ್ತು,
ಧನವ ಕೊಟ್ಟು ಧನ ಬಯಲಾಯಿತ್ತು,
ಈ ತ್ರಿವಿಧವನು ಕೊಟ್ಟು ಕೂಡಲಚೆನ್ನಸಂಗಯ್ಯನಲ್ಲಿ
ಬಸವಣ್ಣಂಗೆ ಬಯಲಸಮಾದಿಯಾಯಿತ್ತು /
779
 ತನು ಮನದ ಭಾವಗಳು ಬಯಲಾಗಿ ಬಯಲನ್ನು ಸೇರುತ್ತವೆ. ಕೂಡಲ ಚನ್ನಸಂಗಯ್ಯನೆಂಬಲ್ಲಿ ಅಡಗಿರುತ್ತವೆ. ಹೀಗೆ ಷಟಸ್ಥಲ ಮಾರ್ಗದಲ್ಲಿ ಸಾಧಕನೇ ಶಿವನಾಗುತ್ತಾನೆ.
- ✍️ Dr Prema Pangi
 #ಪ್ರೇಮಾ_ಪಾಂಗಿ, #ಐಕ್ಯಸ್ಥಲ, #ಷಟ್ಸ್ಥಲ

Comments

Popular posts from this blog

Shika chakra or Bindu chakra:Bindu visarga

Hrit Chakra or Eight Petals Chakra

A-Ka-Ta triangle or Akshara Brahma