ಷಟ್ಸ್ಥಲ
ಲಿಂಗಾಯತ ಧರ್ಮದ ಮೂಲಭೂತ ತಳಹದಿಗಳೆಂದರೆ ಅಷ್ಟಾವರಣ, ಪಂಚಾಚಾರ ಮತ್ತು ಷಟ್ಸ್ಥಲ.
ಶಿವಯೋಗ ಎಂಬುದು ಸಾಧಕ ಶಿವನೇ ಆಗಿ ವಿಕಾಸಗೊಳ್ಳುವ ಪ್ರಕ್ರಿಯೆ. ಈ ಪ್ರಕ್ರಿಯೆಯಲ್ಲಿ ಅನುಸರಿಸುವ ಪಥವೇ ಷಟ್ಸ್ಥಲ.
ಷಟ್ಸ್ಥಲ ವೆಂದರೆ ಸಾಧಕ ಅಜ್ಞಾನ ಸ್ಥಿತಿಯಿಂದ ಪರಮ ಸುಜ್ಞಾನ ಸ್ಥಿತಿಯೆಡೆಗೆ ತಲುಪಲು ಅನುಸರಿಸಬೇಕಾದ ದಿವ್ಯಪಥ. ಸ್ಥಲ ಎನ್ನುವ ಪದಕ್ಕೆ ಸ್ಥಾನ, ಮೆಟ್ಟಿಲು ಎಂಬ ಅರ್ಥವಿದೆ. ಸ್ಥಲವೆಂದರೆ ಈ ಪಥದಲ್ಲಿ ನಿರ್ಮಿತವಾದ ವಿವಿಧ ಹಂತಗಳು ಅಥವಾ ಮೆಟ್ಟಿಲುಗಳು. ಈ ಹಂತಗಳು ಆರು, ಒಟ್ಟಾರೆ ಇವನ್ನು ಷಟ್ಸ್ಥಲಗಳೆಂದು ಸೂಚಿಸುವುದು ರೂಢಿ. ಭಕ್ತ, ಮಾಹೇಶ್ವರ, ಪ್ರಸಾದಿ, ಪ್ರಾಣಲಿಂಗಿ, ಶರಣ ಮತ್ತು ಐಕ್ಯಗಳೇ ಇವು.
ನಾದ ಬಿಂದು ಮಹೇಶ್ವರಸ್ಥಲ.
ಕಳೆ ಬೆಳಗು ಪ್ರಸಾದಿಸ್ಥಲ.
ಅರಿವು ನಿರವಯವು ಪ್ರಾಣಲಿಂಗಿಸ್ಥಲ.
ಜ್ಞಾನ ಸುಜ್ಞಾನ ಶರಣಸ್ಥಲ.
ಭಾವವಿಲ್ಲದ ಬಯಲು ಬಯಲಿಲ್ಲದ ಭಾವ ಆಗಮ್ಯದ ಐಕ್ಯಸ್ಥಲ-
ಇಂತೀ ಷಡುಸ್ಥಲದ ಕೊರಡ ಮೆಟ್ಟಿ ನಿಂದಂಗೆ
ಹೆಸರಿಲ್ಲ ಕುರುಹಿಲ್ಲ ತನಗೆ ತಾನಿಲ್ಲ ಗುಹೇಶ್ವರಾ. / 1507
ಇವುಗಳನ್ನು ಪುನಃ ಒಳವಿಂಗಡಣೆ ಮಾಡಿ ನೂರೊಂದುಸ್ಥಲ ಅಥವಾ ಏಕೋತ್ತರಶತಸ್ಥಲಗಳೆಂದೂ ಕರೆಯಲಾಗುತ್ತದೆ. ಹರಿಹರನು ತನ್ನ ದೀರ್ಘ ರಗಳೆಗಳ ವಿಭಾಗಗಳನ್ನು ಸ್ಥಲ ಎಂದೇ ಕರೆಯುತ್ತಾನೆ. ಪ್ರಾಯಶಃ ತನ್ನ ರಗಳೆಗಳ ನಾಯಕರು ಸಾಧಕರು, ಅವರ ಸಾಧನೆಯ ವಿವಿಧ ಘಟ್ಟಗಳನ್ನೇ ಈ ರೀತಿ ಕರೆದಿರಬಹುದು.
ನೂರೊಂದು ಸ್ಥಲಗಳನ್ನೇ ಪರಿಷ್ಕರಿಸಿ 6 ಸ್ಥಲ ಗಳಲ್ಲಿ ಎಲ್ಲರಿಗೂ ಸುಲಭವಾಗಿ ಅರ್ಥವಾಗುವಂತೆ ಷಟ್ಸ್ಥಲ ಸಾಹಿತ್ಯ ಸೃಷ್ಟಿಸಿ, "ಷಟ್ಸ್ಥಲ ಬ್ರಹ್ಮ" ಎಂದು ಅವಿರಳಜ್ಞಾನಿ ಚನ್ನಬಸವಣ್ಣನವರು ಹೆಸರಾದರು.
ಲಿಂಗಾಯತ ಧರ್ಮದ ಸಿದ್ಧಾಂತಗಳಾದ ಅಷ್ಠಾವರಣ, ಷಟ್ಸ್ಥಲ, ಪಂಚಾಚಾರಗಳನ್ನು ರೂಪಿಸಿ ಧರ್ಮಕ್ಕೆ ಆಚರಣೆಯ ಆಯಾಮ ನೀಡಿದವರೇ ಅವಿರಳ ಜ್ಞಾನಿ ಚನ್ನಬಸವಣ್ಣನವರು.
ಭಕ್ತಿಯಲ್ಲಿ ಧೃಡ ವಿಶ್ವಾಸದ ಭಕ್ತ ಸ್ಥಲ , ಅಚಲ ನಿಷ್ಠೆಯ ಮಹೇಶ್ವರ ಸ್ಥಲ , ಸರ್ವವೂ ಶಿವನ ಪ್ರಸಾದವೆಂಬ ಭಾವದ ಪ್ರಸಾದಿ ಸ್ಥಲ, ಅಂತರಂಗ ಧ್ಯಾನದ ಪ್ರಾಣಲಿಂಗಿ ಸ್ಥಲ, ಶಿವನನ್ನು ಪತಿ ಎಂದಾಗ ಶರಣ ಸ್ಥಲ, ಶಿವನೊಂದಿಗೆ ಐಕ್ಯ ಒಂದಾಗುವ ಹಂತವು ಐಕ್ಯ ಸ್ಥಲ. ಆಗ ಸಾಧಕ ಶಿವನೇ ಆಗುತ್ತಾನೆ. ಶರೀರವಿದ್ದರೂ ಮೋಹವಿಲ್ಲ. ಜೀವಂತವಿದ್ದರೂ ಐಕ್ಯವನ್ನು ಸಾಧಿಸಬಹುದು. ಹೀಗೆ ದ್ವೈತಿಯಾಗಿದ್ದ ಭಕ್ತನು - ಶಿವಾದ್ವೈತಿಯಾಗುತ್ತಾನೆ.
ಶಿವನು ತನ್ನ ಲೀಲೆಗಳಿಗಾಗಿ ಜಗತ್ತನ್ನು ಸೃಷ್ಟಿಸಿದ. ಸಚ್ಚಿದಾನಂದ ಪರತತ್ವ. ಅಲ್ಲಿ ಶಕ್ತಿ ಕ್ಷೋಭೆಯುಂಟಾದಾಗ ಜಗತ್ತಿನ ಉತ್ಪತ್ತಿ. ಆಗ ಶಿವತತ್ವವು ಲಿಂಗ ಮತ್ತು ಅಂಗ (ಜೀವ) ಎಂದು ಎರಡು ರೂಪ ತಳೆಯುತ್ತದೆ .
#"ನಿಃಕಲ ಶಿವತತ್ವ ತಾನೊಂದೇ ತನ್ನ ಶಕ್ತಿಯ ಚಲನೆ ಮಾತ್ರದಿಂದ ಒಂದೆರಡಾಯಿತ್ತು ನೋಡಾ, ಅದರೊಳಗೊಂದು ಲಿಂಗಸ್ಥಲ; ಮತ್ತೊಂದು ಅಂಗಸ್ಥಲ, ಹೀಗೆ ಅಂಗ ಲಿಂಗ ವೆಂದು, ಉಪಾಸ್ಯ ಉಪಾಸಕರೆಂದು ವರ್ತಿಸುತ್ತಿಹುದು ನೋಡಾ"#
ಅರ್ಥ :
ನಿಕಃಲ ಲಿಂಗ ಚಲನೆಯಿಂದ ಲಿಂಗ ಸ್ಥಲ ಅಂಗಸ್ಥಲ ಎಂದು ಎರಡಾಗುತ್ತದೆ.
ಲಿಂಗಸ್ಥಲವೇ ಶಿವ (ಉಪಾಸ್ಯ) ; ಅಂಗಸ್ಥಲವೇ ಜೀವ (ಉಪಾಸಕ). ಇಲ್ಲಿ ಉಪಾಸ್ಯ ಉಪಾಸಕರಲ್ಲಿ ಭೇದವಿಲ್ಲ. ಎರಡೂ ಪರಶಿವ ಸ್ವರೂಪವೇ. ಲಿಂಗಸ್ಥಲದಂತೆ ಅಂಗಸ್ಥಲವೂ ಪರಶಿವ ಸ್ವರೂಪವಾಗಿಯೇ ಇರುತ್ತದೆ. ಅಧಿಕಶಕ್ತಿ ಸಂಪನ್ನವಾದದ್ದು ಲಿಂಗಸ್ಥಲ, ನ್ಯೂನಶಕ್ತಿ ಸಂಪನ್ನ ವಾದುದು ಅಂಗಸ್ಥಲ. ಎರಡೂ ಶಿವಸ್ವರೂಪವೇ. ಆದುದರಿಂದಲೇ ಲಿಂಗತತ್ವಕ್ಕೆ ಹೇಳುವಂತೆ ಅಂಗತತ್ವಕ್ಕೂ 'ಸ್ಥಲ' ಎಂಬ ಪದವನ್ನೇ ಬಳಿಸುತ್ತಾರೆ.
#ಲಿಂಗಸ್ಥಲವನಾಶ್ರಯಿಸಿ ಶಕ್ತಿ ಎನಿಸಿತ್ತು. ಅಂಗಸ್ಥಲವನ್ನಾಶ್ರಯಿಸಿ ಭಕ್ತಿ ಎನಿಸಿತ್ತು. ಶಕ್ತಿಯೇ ಪ್ರವೃತ್ತಿ ಎನಿಸಿತ್ತು ; ಭಕ್ತಿಯೇ ನಿವೃತ್ತಿ ಎನಿಸಿತ್ತು. ಶಕ್ತಿ ಭಕ್ತಿ ಎಂದು ಎರಡು ತೆರನಾಯಿತ್ತು.#
ಅರ್ಥ :
ಹೀಗೆ ಶಿವ ಎರಡು ಸ್ಥಲಗಳಾಗಿ ಪರಿಣಮಿಸಿದಂತೆ ಅವನಲ್ಲಿರುವ ಶಕ್ತಿಯೂ ಇಬ್ಬಗೆಯಾಗುತ್ತದೆ , ಕಲಾಶಕ್ತಿ (ಶಕ್ತಿ) ಭಕ್ತಿಶಕ್ತಿ(ಭಕ್ತಿ) ಎಂದು. 'ಶಕ್ತಿ' ಲಿಂಗವನ್ನಾಶ್ರಯಿಸುತ್ತದೆ. ಭಕ್ತಿ ಅಂಗವನ್ನಾಶ್ರಯಿಸುತ್ತದೆ. ಶಕ್ತಿ, ಪ್ರವೃತ್ತಿ ಪರವಾದುದು. ಭಕ್ತಿ, ನಿವೃತ್ತಿ ಪರವಾದುದು. ಅಂದರೆ ಕಲಾಶಕ್ತಿಯಿಂದ ಲಿಂಗ ಪ್ರವೃತ್ತಿಪರವಾಗಿ ಶೃಷ್ಟಿ ರಚಿಸುತ್ತದೆ. ಭಕ್ತಿಯನ್ನು ಆಶ್ರಯಿಸಿ ಅಂಗ, ಮುಕ್ತಿಯ ಕಡೆಗೆ ನಡೆಯುತ್ತದೆ.
ಈ ಚರಚರಾತ್ಮಕವಾದ ಜಗತ್ತು ಯಾವುದರಿಂದ ಹೊರಹೊಮ್ಮಿ ಮತ್ತೆ ಎಲ್ಲಿ ಅಡಗುವುದೋ,
ಅದು ಲಿಂಗಸ್ಥಲ, ಮತ್ತೊಂದು ಅಂಗಸ್ಥಲ.
"ಅಂ" ಎಂದರೆ ಪರಬ್ರಹ್ಮ , ಅದರಕಡೆ ಅಭಿಮುಖವಾದ ಜೀವತತ್ವವೇ ಅಂಗಸ್ಥಲ. ಹೀಗೆ ಲಿಂಗಸ್ಥಲವನ್ನು ಆಶ್ರಯಿಸಿದ ಶಕ್ತಿ ಕಲಾಶಕ್ತಿ ಎಂದು ಹೆಸರು ತಳೆಯಿತು. ಅದೇ ಅಂಗ ಸ್ಥಲವನ್ನು ಆಶ್ರಯಿಸಿದ ಶಕ್ತಿ ಭಕ್ತಿಶಕ್ತಿ ಎನಿಸಿತು. ಜಗತ್ ನಿರ್ಮಾಣದಲ್ಲಿ (ಪ್ರವೃತ್ತಿ ಮಾರ್ಗ) ಶಿವನಿಗೆ ನೆರವಾದ ಶಕ್ತಿಯೇ, ನಿವೃತ್ತಿ ಮಾರ್ಗ (ಯೋಗ ಮಾರ್ಗ)ದಲ್ಲಿ ಜೀವಿಯನ್ನು ಮೇಲೆತ್ತುವ ಭಕ್ತಿ ಎನಿಸಿತು. ಶಕ್ತಿಯೇ ಭಕ್ತಿ ; ಭಕ್ತಿಯೇ ಶಕ್ತಿ ಅವರಡಲ್ಲಿ ಹೆಚ್ಚು ವ್ಯತ್ಯಾಸವಿಲ್ಲ. ಶಕ್ತಿಯಿಂದ ಪ್ರಪಂಚ ಸೃಷ್ಟಿ ; ಭಕ್ತಿಯಿಂದ ಯೋಗಮಾರ್ಗದಲ್ಲಿ ಜೀವಿ ಲಯ. ಶಿವಯೋಗದಲ್ಲಿ ಶಕ್ತಿ ಅಧೋಮುಖಿಯಾದರೆ; ಭಕ್ತಿ ಊರ್ಧ್ವಮುಖಿ.
#ಲಿಂಗ ಆರು ತೆರನಾಯಿತು, ಅಂಗ ಆರು ತೆರನಾಯಿತ್ತು. ಅದುಹೇಗೆಂದೊಡೆ:
ಮೊದಲಲ್ಲಿ ಲಿಂಗ ಮೂರು ತೆರನಾಯಿತ್ತು, ಅದು ಹೇಗೆಂದೊಡೆ: ಭಾವಲಿಂಗವೆಂದು
ಪ್ರಾಣಲಿಂಗವೆಂದು ಇಷ್ಟಲಿಂಗವೆಂದು ಮೂರು ತೆರನಾಯಿತು.
ಆ ಭಾವಲಿಂಗ ಪ್ರಾಣಲಿಂಗ ಇಷ್ಟಲಿಂಗವೆಂಬ ಲಿಂಗತ್ರಯವು ಒಂದೊಂದು ಲಿಂಗ ಎರಡೆರಡಾಗಿ ಆರು ತೆರನಾಯಿತ್ತು, ಅದು ಹೇಗೆಂದೊಡೆ : ಭಾವಲಿಂಗವು ಮಹಾಲಿಂಗವೆಂದು, ಪ್ರಸಾದಲಿಂಗವೆಂದು ಎರಡು ತೆರನಾಯಿತ್ತು. ಪ್ರಾಣಲಿಂಗವು ಜಂಗಮಲಿಂಗವೆಂದು, ಶಿವಲಿಂಗವೆಂದು ಎರಡು ತೆರನಾಯಿತ್ತು. ಇಷ್ಟಲಿಂಗವು ಗುರುಲಿಂಗವೆಂದು ಆಚಾರಲಿಂಗವೆಂದು ಎರಡು ತೆರನಾಯಿತ್ತು.#
ಅರ್ಥ :
ಅಂಗ ಲಿಂಗಗಳು ಮೂರಾಗಿ ಮತ್ತೆ ಅವುಗಳಲ್ಲಿ ಒಂದೊಂದೂ ಎರಡೆರಡಾಗಿ ಒಟ್ಟು ಆರು ಸ್ಥಲಗಳಾಗಿ ಪರಿಣಮಿಸುತ್ತವೆ.
ಭಾವಲಿಂಗ, ಪ್ರಾಣಲಿಂಗ, ಇಷ್ಟಲಿಂಗವೆಂದು ಮೂರು ಲಿಂಗತ್ರಯಗಳು. ಭಾವಲಿಂಗವು ಮಹಾಲಿಂಗ ಪ್ರಸಾದಲಿಂಗವೆಂದು ಎರಡು ತೆರ, ಪ್ರಾಣಲಿಂಗವು ಜಂಗಮಲಿಂಗ ಶಿವಲಿಂಗವೆಂದು ಎರಡು ತೆರ, ಇಷ್ಟಲಿಂಗವು ಗುರುಲಿಂಗ ಆಚಾರಲಿಂಗವೆಂದು ಎರಡು ತೆರವಾಯಿತು. ಹೀಗೆ ಲಿಂಗಸ್ಥಲಗಳಲ್ಲಿ ಆರು ಬಗೆಗಳಾಗುತ್ತವೆ. ಅಂತೆಯೇ ಕಲಾಶಕ್ತಿಯೂ ಚಿಚ್ಛಕ್ತಿ, ಆದಿಶಕ್ತಿ, ಪರಾಶಕ್ತಿ, ಜ್ಞಾನಶಕ್ತಿ, ಇಚ್ಛಾಶಕ್ತಿ, ಕ್ರಿಯಾಶಕ್ತಿ ಎಂದು ಆರು ಬಗೆಗಳಾಗಿ ಒಂದೊಂದು ಲಿಂಗವನ್ನು ಆಶ್ರಯಿಸುತ್ತದೆ.
ಲಿಂಗದಂತೆಯೇ ಅಂಗವೂ ಮೊದಲು ಮೂರಾಗಿ ಅನಂತರ ಆರಾಗಿ ಪರಿಣಮಿಸುತ್ತದೆ. ಅದಕ್ಕನುಗುಣವಾಗಿ ಲಿಂಗವನ್ನಾಶ್ರಯಿಸಿದ ಭಕ್ತಿಯೂ ಆರಾಗುತ್ತದೆ. ಅದರ ವಿವರಣೆಯನ್ನು ಶರಣರು ಹೀಗೆ ಮಾಡಿದ್ದಾರೆ :
#ಇನ್ನು ಒಂದಂಗ ಮೂರು ತೆರನಾಯಿತ್ತು ; ಅದು ಹೇಗೆಂದೊಡೆ : ಯೋಗಾಂಗ ಭೋಗಾಂಗ ತ್ಯಾಗಾಂಗವೆಂದು ಮೂರು ಪ್ರಕಾರವಾಯಿತ್ತು. ಈ ತ್ರಯಂಗವೇ ಒಂದೊಂದು ಎರಡೆರಡಾಗಿ ಆರು ತೆರನಾಯಿತ್ತು. ಅದು ಹೇಗೆಂದೊಡೆ,
ಯೋಗಾಂಗವೇ ಐಕ್ಯನೆಂದು ಶರಣನೆಂದು ಎರಡು ತೆರನಾಯಿತ್ತು. ಭೋಗಾಂಗವೇ ಪ್ರಾಣಲಿಂಗಿ ಎಂದು ಪ್ರಸಾದಿ ಎಂದು ಎರಡು ತೆರನಾಯಿತ್ತು. ತ್ಯಾಗಾಂಗವೇ ಮಹೇಶ್ವರನೆಂದು ಭಕ್ತನೆಂದು ಎರಡು ತರನಾಯಿತ್ತು. ಹೀಗೆ ಒಬ್ಬ ಶರಣನು ಆರು ತೆರನಾದನು.
ಸಮರಸ ಭಕ್ತಿ, ಆನಂದ ಭಕ್ತಿ, ಅನುಭಾವ ಭಕ್ತಿ, ಅವಧಾನ ಭಕ್ತಿ, ನೈಷ್ಟಿಕಾ ಭಕ್ತಿ, ಸದ್ಭಕ್ತಿ ಎಂದು ಮಹಾಘನ ಅನುಪಮ ಭಕ್ತಿ ತಾನೇ ಆರು ತೆರನಾಗಿ ಷಟ್ ಪ್ರಕಾರವಾದ ಶರಣರಿಗೆ ಅಂಗರೂಪಾಯಿತ್ತು, ಇದು ಅಂಗಷಟ್ ಸ್ಥಲ.#
*ಅವತರಣಕ್ರಮ (ಪ್ರವೃತ್ತಿ ಕ್ರಮ, ಸೃಷ್ಟಿ ಕ್ರಮ)*:
ಹೀಗೆ ಏಕಮೇವಾದ್ವಿತೀಯವಾಗಿದ್ದ ನಿಷ್ಕಲ ಲಿಂಗಸ್ಥಲ, ಉಪಾಸ್ಯ ಉಪಾಸಕ ಲೀಲೆಯಿಂದ ಎರಡಾಗಿ ಅನಂತರ ಲಿಂಗ ಷಟ್ಸ್ಥಲ, ಅಂಗ ಷಟ್ಸ್ಥಲ, ಎಂದು ಒಂದೊಂದೂ ಆರಾಗಿ ಪರಿಣಮಿಸಿದೆ. ಇದು ಒಂದಾಗಿದ್ದದ್ದು ಮೇಲಿನಿಂದ ಇಳಿದು ಬರುವ ಅವತರಣಕ್ರಮ.
*ಆರೋಹಣ ಕ್ರಮ (ನಿವೃತ್ತಿ ಕ್ರಮ,
ಯೋಗ ಕ್ರಮ)*:
ಮಲತ್ರಯಗಳಿಂದ ಕೂಡಿ ಸಂಸಾರದಲ್ಲಿ ಬದ್ಧವಾದ ಜೀವ, ಉದ್ಧಾರದ ಅಭೀಪ್ಸೆ ಯಿಂದ ಸಾಧನೆಯಲ್ಲಿ ತೊಡಗಿದಾಗ ಅವಲಂಬಿಸಬೇಕಾದ ಮೊದಲನೆ ಹಂತ ಭಕ್ತ ಸ್ಥಲ.
ಭಕ್ತನ ಊರ್ಧ್ವಗಮನ ಪ್ರತೀಕ್ಷೆಯು ಅಂಗಸ್ಥಲಕ್ಕೆ ಆತನನ್ನು ಅರ್ಹನಾಗುವಂತೆ ಮಾಡುತ್ತದೆ. ಕೇವಲ ಬದ್ಧ ಜೀವಿಯಾಗಿದ್ದ ಆತ ಎಚ್ಚರಗೊಂಡು ಗುರುಲಬ್ಧವಾದ ದೀಕ್ಷಾತ್ರಯದಿಂದ
ಶುದ್ಧಜೀವನಾದಾಗಲೇ 'ಅಂಗ' ಎಂದು ಕರೆಯಿಸಿಕೊಳ್ಳುವುದಕ್ಕೆ ಅರ್ಹನಾಗುತ್ತಾನೆ. ತಾನು ಶಿವರೂಪನೆಂದು ತತ್ವತಃ ತಿಳಿದು ಆ ನಿಲವನ್ನು ಕೈಗೂಡಿಸಿ ಕೊಳ್ಳಲು ಸಾಧನೆಯಲ್ಲಿ ಮಗ್ನನಾಗುತ್ತಾನೆ.
ಈ ಸಾಧನೆಯ ಮಾರ್ಗದಲ್ಲಿ, ಭಕ್ತಸ್ಥಲ ಮಹೇಶ್ವರಸ್ಥಲ ಪ್ರಸಾದಿಸ್ಥಲ ಪ್ರಾಣಲಿಂಗಿಸ್ಥಲ ಶರಣಸ್ಥಲ ಐಕ್ಯಸ್ಥಲ ಹೀಗೆ ಮೇಲೆರುತ್ತಾ ಹೋಗುತ್ತಾನೆ. ಆಯಾ ಸ್ಥಲಕ್ಕೆ ತಕ್ಕಂತೆ ಕ್ರಮವಾಗಿ ಆಚಾರಲಿಂಗ ಗುರುಲಿಂಗ ಶಿವಲಿಂಗ ಜಂಗಮಲಿಂಗ ಪ್ರಸಾದಲಿಂಗ ಮಹಾಲಿಂಗಗಳನ್ನು ಉಪಾಸಿಸುತ್ತಾನೆ.
ಈ ಉಪಾಸನೆಗೆ ಆತ ಅವಲಂಬಿಸುವ ಭಕ್ತಿಯೂ ವಿಕಾಸಗೊಳ್ಳುತ್ತಾ ಹೋಗುತ್ತದೆ. ಕ್ರಮವಾಗಿ ಶ್ರದ್ಧಾಭಕ್ತಿ, ನೈಷ್ಠಿಕಾಭಕ್ತಿ, ಅವಧಾನ ಭಕ್ತಿ, ಅನುಭಾವ ಭಕ್ತಿ, ಆನಂದಭಕ್ತಿ, ಸಮರಸಭಕ್ತಿಗಳಿಂದ ಆ ಲಿಂಗಗಳ ಅನುಸಂಧಾನವನ್ನು ಕೈ ಕೊಳ್ಳುತ್ತಾನೆ.
ಈ ಷಟ್ ಸ್ಥಲದ ಒಟ್ಟು ವಿನ್ಯಾಸವನ್ನು ಹೀಗೆ ತೋರಿಸಬಹುದು
*ಲಿಂಗ ಸ್ಥಲಗಳು* :
1)ಇಷ್ಟಲಿಂಗ
2)ಪ್ರಾಣಲಿಂಗ
3)ಭಾವಲಿಂಗ
ಇಷ್ಟಲಿಂಗ - ಆಚಾರಲಿಂಗ - ಕ್ರಿಯಾಶಕ್ತಿ
ಇಷ್ಟಲಿಂಗ - ಗುರುಲಿಂಗ - ಜ್ಞಾನ ಶಕ್ತಿ
ಪ್ರಾಣಲಿಂಗ- ಶಿವಲಿಂಗ - ಇಚ್ಛಾ ಶಕ್ತಿ
ಪ್ರಾಣಲಿಂಗ - ಜಂಗಮಲಿಂಗ - ಆದಿಶಕ್ತಿ
ಭಾವಲಿಂಗ - ಪ್ರಸಾದಲಿಂಗ - ಪರಾಶಕ್ತಿ
ಭಾವಲಿಂಗ - ಮಹಾಲಿಂಗ - ಚಿತ್ ಶಕ್ತಿ
*ಅಂಗ ಸ್ಥಲಗಳು*:
1)ತ್ಯಾಗಾಂಗ
2)ಭೋಗಾಂಗ
3)ಯೋಗಾಂಗ
ತ್ಯಾಗಾಂಗ - ಭಕ್ತ ಸ್ಥಲ - ಶ್ರದ್ಧಾ ಭಕ್ತಿ
ತ್ಯಾಗಾಂಗ - ಮಹೇಶ್ವರಸ್ಥಲ - ನೈಷಿಕಾಭಕ್ತಿ
ಭೋಗಾಂಗ - ಪ್ರಸಾದಿಸ್ಥಲ - ಅವಧಾನಭಕ್ತಿ
ಭೋಗಾಂಗ-ಪ್ರಾಣಲಿಂಗಿಸ್ಥಲಅನುಭಾವಭಕ್ತಿ
ಯೋಗಾಂಗ - ಶರಣಸ್ಥಲ - ಆನಂದಭಕ್ತಿ
ಯೋಗಾಂಗ - ಐಕ್ಯ ಸ್ಥಲ - ಸಮರಸಭಕ್ತಿ
ಇವುಗಳಲ್ಲಿ ಭಕ್ತಸ್ಥಲದಿಂದ ಹಿಡಿದು ಐಕ್ಯಸ್ಥಲದವರೆಗೆ ಸಾಧಕ ಬೆಳೆಯುತ್ತಾ ಬಂದಂತೆ ಆತನ ಲಿಂಗೋಪಾಸನೆಯ ಹಂತವೂ ಉಪಾಸನೆಯ ಸಾಧನವಾದ ಭಕ್ತಿಯೂ ವಿಕಾಸ ಗೊಳ್ಳುತ್ತಾ ಬರುತ್ತದೆ.
“ಭಕ್ತಂಗೆ ಕ್ರಿ, ಮಹೇಶ್ವರಂಗೆ ನಿಶ್ಚಯ,
ಪ್ರಸಾದಿಗೆ ಅರ್ಪಣ, ಪ್ರಾಣಲಿಂಗಿಗೆ ಯೋಗ, ಶರಣಂಗೆ ನಿಬ್ಬೆರಗು, ಐಕ್ಯಂಗೆ
ನಿರ್ಲೇಪ” ಎಂದು ದಾಸೋಹದ ಸಂಗಣ್ಣ ಹೇಳಿದರೆ,
“ಭಕ್ತಂಗೆ ವಿಶ್ವಾಸ, ಮಹೇಶ್ವರಂಗೆ ನಿಷ್ಠೆ, ಪ್ರಸಾದಿಗೆ ಅವಧಾನ, ಪ್ರಾಣಲಿಂಗಿಗೆ ಯೋಗ, ಶರಣಂಗೆ ಮುನ್ನವೇ ಬಿಡುಗಡೆ, ಐಕ್ಯಂಗೆ ಕುರುಹುಗೊಂಬುದಕ್ಕೆ ಮುನ್ನವೇ ನಿರಾಳ” ಎಂದು ಮೋಳಿಗೆ ಮಾರಯ್ಯಗಳ ಪತ್ನಿ ಮಹಾದೇವಮ್ಮ ಹೇಳುತ್ತಾರೆ. ಮೊದಲನೆಯ ಮೂರು ಸ್ಥಲಗಳಲ್ಲಿ ಭಕ್ತಿ, ಕ್ರಿಯೆ, ಜ್ಞಾನರೂಪವಾದ ಪೂರ್ವಸಿದ್ಧತೆ ಪಡೆದು, ನಂತರದ ಮೂರು ಸ್ಥಲಗಳಲ್ಲಿ ದೇಹದಲ್ಲಿರುವ ಅಂತಃಶಕ್ತಿಯನ್ನು ಜಾಗೃತಗೊಳಿಸುವ ಯೋಗಸಾಧನೆಯನ್ನು ಕೈಗೊಳ್ಳುತ್ತವೆ.
ಸ್ಥಲ ವಿಂಗಡನೆ ವಿಪುಲವಾದ ವೈವಿಧ್ಯವನ್ನು ಪಡೆದಿದೆ. ಷಟ್ಸ್ಥಲಗಳನ್ನು ಒಂದು ಕಡೆ ಹದಿನೆಂಟು, ಮೂವತ್ತಾರು, ಇನ್ನೂರ ಹದಿನಾರು ಸ್ಥಳಗಳ ವಿವೇಚನೆಯೂ ಇದೆ.
ಏಕೋತ್ತರ ಶಟ್ಸ್ಥಲ (ನೂರೊಂದು ಸ್ಥಲ)ಗಳಂತೂ ಪ್ರಸಿದ್ಧವಾಗಿವೆ.
36 ಸ್ಥಲಗಳ ವಿಭಾಗಕ್ರಮ ತನುತ್ರಯಗಳ ಆಧಾರದ ಮೇಲೆ ಉಂಟಾದುದು. ಸ್ಥೂಲ, ಸೂಕ್ಷ್ಮ ಕಾರಣ ದೇಹಗಳ ಆಚರಣೆಗೆ ಸಂಬಂಧಿಸಿದಂತೆ ಒಂದೊಂದು ಸ್ಥಲವೂ ಮೂರು ಭಾಗಗಳಾಗಿ ಭಕ್ತಾದಿ ಅಂಗಸ್ಥಲಗಳಲ್ಲಿ ೧೮, ಆಚಾರಾದಿ ಲಿಂಗಸ್ಥಲಗಳಲ್ಲಿ ೧೮, ವಿಭಾಗಗಳಾಗಿ ಪರಿಣಮಿಸುತ್ತವೆ. ಇವುಗಳಲ್ಲಿ ಮೊದಲನೆಯ ಮೂರು ಸ್ಥಲಗಳಲ್ಲಿ ಬರುವ ವಿಭಾಗಗಳನ್ನು ಸಾಕಾರ ಹದಿನೆಂಟು ಸ್ಪಲಗಳೆಂದೂ, ಕೊನೆಯ ಮೂರು ಸ್ಥಲಗಳಲ್ಲಿ ಬರುವುದನ್ನು ನಿರಾಕಾರ ಹದಿನೆಂಟು ಸ್ಪಲಗಳೆಂದೂ ಕರೆಯಲಾಗಿದೆ.
ಗುರು ಬಸವಣ್ಣನವರ ಈ ಕೆಳಗಿನ ವಚನ ಅದನ್ನು ಸ್ಪಷ್ಟ ಪಡಿಸುತ್ತದೆ :
#ಸಾಕಾರ ಹದಿನೆಂಟು ಸ್ಥಲ, ಅಂಗದಲ್ಲಿ ಆಚರಿಸುತ್ತ ಅಲ್ಲಲ್ಲಿಗೆ ಭಕ್ತಿ, ಅಲ್ಲಲ್ಲಿಗೆ ಮಹೇಶ್ವರ, ಅಲ್ಲಲ್ಲಿಗೆ ಪ್ರಸಾದಿಯಾಗಿಪ್ಪ ಆ ಸಾಕಾರವೇನೆಂದು ಉಪಸುವೆನಯ್ಯಾ? ನಿರಾಕಾರ ಹದಿನೆಂಟು ಸ್ಥಲವ ಆತ್ಮನಲ್ಲಿ ಆಚರಿಸುತ್ತ ಅಲ್ಲಲ್ಲಿಗೆ ಪ್ರಾಣಲಿಂಗಿ, ಅಲ್ಲಲ್ಲಿಗೆ ಶರಣ, ಅಲ್ಲಲ್ಲಿಗೆ ಐಕ್ಯನಾಗಿರ್ಪ ಆ ನಿರಾಕಾರವನೇನೆಂದು ಉಪಮಿಸುವೆನಯ್ಯ? ಆ ಸಾಕಾರ ಹದಿನೆಂಟು ಸ್ಥಲವ ಅಂಗದಲ್ಲಿ ಆಚರಿಸುವುದು ಭಕ್ತಸ್ಥಲ. ಆ ನಿರಾಕಾರ ಹದಿನೆಂಟು ಸ್ಥಲ ಆತ್ಮನಲ್ಲಿ ಆಚರಿಸುವುದು ಜಂಗಮ ಸ್ಥಲ. ಇಂತೀ ಉಭಯ ಸ್ಥಲ ಒಂದಾಗಿ ನಿಂದ ನಿಜದ ನಿಲವು ನಮ್ಮ ಕೂಡಲ ಸಂಗಯ್ಯನಲ್ಲಿ ಲಿಂಗೈಕ್ಯವು#.
ಹೀಗೆ ಹದಿನೆಂಟು ಸ್ಥಲಗಳಲ್ಲಿ ಸಾಕಾರ ನಿರಾಕಾರಗಳಿಗೆ ಅನ್ವಯವಾಗುವಂತೆ ಭಕ್ತ ಸ್ಥಲ, ಜಂಗಮಸ್ಥಲ ಎಂದು ಎರಡು ಮುಖ್ಯ ವಿಭಾಗಗಳನ್ನು ಮಾಡಿ ಈ ಉಭಯಸ್ಥಲ ಒಂದಾದುದೆ ಐಕ್ಯವೆಂದು ಹೇಳಿದ್ದಾರೆ ಚನ್ನಬಸವಣ್ಣನವರು.
ಮೂವತ್ತಾರು ಸ್ಥಲಗಳ ವಿಭಾಗಕ್ರಮ ವಚನಶಾಸ್ತ್ರದಲ್ಲಿ ವಿಪುಲವಾಗಿ ಬರುತ್ತದೆ. ಇದರ ಹಿಂದಿರುವ ತತ್ವ ಗಮನಾರ್ಹವಾದುದು. ಭಕ್ತಸ್ಥಲದಿಂದ ಮಹೇಶ್ವರ ಸ್ಥಲಕ್ಕೆ ಮತ್ತು ಅಲ್ಲಿಂದ ಮುಂದೆ ಇತರ ಸ್ಥಲಗಳಿಗೆ ಸಾಧಕ ಮುನ್ನಡೆಯುತ್ತಿರುವಾಗ ಗೆರೆ ಕೊರೆದಂತೆ ಅದನ್ನು ವಿಭಜಿಸಿ ಆತನನ್ನು ಯಾವುದೇ ಒಂದು ಸ್ಥಲಕ್ಕೆ ಮಾತ್ರ ಸೀಮಿತಗೊಳಿಸಲಾಗುವುದಿಲ್ಲ. ಭಕ್ತಸ್ಥಲದಲ್ಲಿರುವಾಗಲೇ ಮಹೇಶನ ಅಂಶಗಳು ಗೋಚರವಾಗಬಹುದು; ಪ್ರಸಾದಿ ಪ್ರಾಣಲಿಂಗಿಗಳು ಕಾಣಬಹುದು. ಅಂತೆಯೇ ಮುಂದಿನ ಸ್ಥಲಕ್ಕೆ ಹೋದಮೇಲೆ ಹಿಂದಿನದು ಬಿಟ್ಟು ಹೋಗುತ್ತದೆಂದೂ ಹೇಳುವಂತಿಲ್ಲ. ಮಹೇಶನ ಸ್ಥಲದಲ್ಲಿ ಭಕ್ತಸ್ಥಲವೂ ಅಡಕವಾಗಿರುತ್ತದೆ. ಅಂತೆಯೇ ಇತರ ಸ್ಥಲಗಳು. ಈ ತಾತ್ವಿಕ ದೃಷ್ಟಿಯಿಂದ ಆರು ಸ್ಥಳಗಳಲ್ಲಿ ಒಂದೊಂದನ್ನು ಮತ್ತೆ ಆರು ಆರು ಸ್ಥಲಗಳನ್ನಾಗಿ ವಿಭಾಗಿಸಲಾಗಿದೆ.
೧. ಭಕ್ತಸ್ಥಲದಲ್ಲಿ : ಭಕ್ತನಭಕ್ತ, ಭಕ್ತನ ಮಹೇಶ, ಭಕ್ತನ ಪ್ರಸಾದಿ, ಭಕ್ತನ ಪ್ರಾಣಲಿಂಗಿ, ಭಕ್ತನ ಶರಣ, ಭಕ್ತನ ಐಕ್ಯ.
೨ ಮಹೇಶ ಸ್ಥಲದಲ್ಲಿ : ಮಹೇಶನ ಮಹೇಶ, ಮಹೇಶನ ಭಕ್ತ, ಮಹೇಶನ ಪ್ರಸಾದಿ, ಮಹೇಶನ ಪ್ರಾಣಲಿಂಗಿ, ಮಹೇಶನ ಶರಣ, ಮಹೇಶನ ಐಕ್ಯ,
೩ ಪ್ರಸಾದಿ ಸ್ಥಲದಲ್ಲಿ : ಪ್ರಸಾದಿಯ ಪ್ರಸಾದಿ, ಪ್ರಸಾದಿಯ ಭಕ್ತ, ಪ್ರಸಾದಿಯ ಮಹೇಶ, ಪ್ರಸಾದಿಯ ಪ್ರಾಣಲಿಂಗಿ, ಪ್ರಸಾದಿಯ ಶರಣ, ಪ್ರಸಾದಿಯ ಐಕ್ಯ
೪, ಪ್ರಾಣಲಿಂಗಿ ಸ್ಥಲದಲ್ಲಿ : ಪ್ರಾಣಲಿಂಗಿಯ ಪ್ರಾಣಲಿಂಗಿ, ಪ್ರಾಣಲಿಂಗಿಯ ಭಕ್ತ, ಪ್ರಾಣಲಿಂಗಿಯ ಮಹೇಶ, ಪ್ರಾಣಲಿಂಗಿಯ ಪ್ರಸಾದಿ, ಪ್ರಾಣಲಿಂಗಿಯ ಶರಣ, ಪ್ರಾಣಲಿಂಗಿಯ ಐಕ್ಯ,
೫. ಶರಣ ಸ್ಥಲದಲ್ಲಿ : ಶರಣನ ಶರಣ, ಶರಣನ ಭಕ್ತ, ಶರಣನ ಮಹೇಶ, ಶರಣನ ಪ್ರಸಾದಿ, ಶರಣನ ಪ್ರಾಣಲಿಂಗಿ, ಶರಣನ ಐಕ್ಯ.
೬. ಐಕ್ಯ ಸ್ಥಲದಲ್ಲಿ : ಐಕ್ಯನ ಐಕ್ಯ, ಐಕ್ಯನ ಭಕ್ತ, ಐಕ್ಯನ ಮಹೇಶ, ಐಕ್ಯನಪ್ರಸಾದಿ, ಐಕ್ಯನ ಪ್ರಾಣಲಿಂಗಿ, ಐಕ್ಯನ ಶರಣ. ಹೀಗೆ ಒಟ್ಟು ಮೂವತ್ತಾರು ಸ್ಥಲಗಳಾಗುತ್ತವೆ. ಮೂವತ್ತಾರು ಸ್ಥಲಗಳ ಕ್ರಮ ಹೆಚ್ಚು ಪ್ರಚಲಿತವಾಯಿತು. ಬಸವಾದಿ ಶರಣರ ವಚನಗಳಲ್ಲಿ ಹೆಚ್ಚು ಪಾಲು ಈ ಕ್ರಮದಲ್ಲಿಯೇ ಅಳವಟ್ಟಿವೆ.
ಇದರ ಜೊತೆಗೆ ಹಿಂದೆ ಮುಂದೆ ಏಕೋತ್ತರ ಶತಸ್ಥಲದ ಕೆಲವು ಸ್ಥಲಗಳೂ ಶರಣರ ವಚನಗಳಲ್ಲಿ ಸೇರಿರುವುದು ಕಂಡುಬರುತ್ತದೆ. ಮಹಾಲಿಂಗ, ಜಕ್ಕಣಾರರು (೧೫ನೇ ಶತಮಾನ) ಈ ನೂರೊಂದು ಸ್ಥಲಗಳಿಗೆ ಅನುಗುಣವಾಗಿ ಶರಣರ ವಚನಗಳನ್ನು ಸಂಕಲಿಸಿ, ಅವರ ಹಾಡುಗಳನ್ನು ಸೇರಿಸಿ, ಏಕೋತ್ತರ ಶತಸ್ಥಲ ಎಂಬ ಗ್ರಂಥಗಳನ್ನು ನಿರ್ಮಿಸಿದ್ದಾರೆ.
ಏಕೋತ್ತರ ಶತಸ್ಥಲ' ಬಹಳ ಪ್ರಮುಖವಾದ ವಿಭಾಗಕ್ರಮವಾಗಿ ಪರಿಣಮಿಸಿತು.
ಮುಂದೆ ಮುಖ್ಯವಾದ ಭಕ್ತಸ್ಥಲ, ಮಹೇಶ್ವರಸ್ಥಲ, ಪ್ರಸಾದಿಸ್ಥಲ, ಪ್ರಾಣಲಿಂಗಿಸ್ಥಲ, ಶರಣಸ್ಥಲ, ಐಕ್ಯಸ್ಥಲ ಈ 6 ಸ್ಥಲಗಳನ್ನು ಅರಿಯೋಣ.
- ✍️ Dr Prema Pangi
Comments
Post a Comment