ಶರಣೆ ಪರಿಚಯ : ಶರಣೆ ಬೊಂತಾದೇವಿ
ಕಾಲ - c 1160
ಕಾಶ್ಮೀರದ ಮಾಂಡವ್ಯಪುರದ ರಾಜಕುಮಾರಿ, ಶರಣೆ, ವಿರಾಗಿಣಿ
ಅಂಕಿತ ನಾಮ: ಬಿಡಾಡಿ
ಬೊಂತಾದೇವಿ ಕಾಶ್ಮೀರದ ಮಾಂಡವ್ಯಪುರ ಅರಸು ಕುಮಾರಿಯಾಗಿದ್ದು, ಶ್ರೇಷ್ಠ ಶರಣ, ಕಾಯಕ ಕಲಿ ಎಂದೇ ಹೆಸರುವಾಸಿಯಾದ ಮೊಳಿಗೆ ಮಾರಯ್ಯ ನ (ಕಾಶ್ಮೀರ ಮಾಂಡವ್ಯಪುರದ ಅರಸು) ಸಹೋದರಿ. ಮೂಲನಾಮವಾದ "ನಿಜದೇವಿ" ಯಿಂದ ಬೊಂತಾದೇವಿಯಾಗಿ ನಾಮಾಂಕಿತಗೊಂಡರು. ಸೂಪ್ತಭಕ್ತಿಗೆ, ಆದ್ಯಾತ್ಮಜ್ಞಾನಕ್ಕೆ, ಅನುಭಾವಕ್ಕೆ ಹೆಸರುವಾಸಿಯಾದರು. ಲೋಕದ ಕಣ್ಣಿಗೆ ಕಾಣದಿದ್ದರೂ ತನ್ನ ಅಸಾಮಾನ್ಯ ಸೂಪ್ತಭಕ್ತಿ, ನಿಷ್ಠೆ, ವಿರಕ್ತಿ, ಸಮಾನತೆ, ಶ್ರದ್ದೆ ಮತ್ತು ಬಡ ರೋಗಿಗಳ ಸೇವೆಗೆ ಹೆಸರಾದವರು ಶರಣೆ ಬೊಂತಾದೇವಿ. ಕಾಶ್ಮೀರಶೈವ ಪಂಥದಿಂದ ಶರಣ ಧರ್ಮಕ್ಕೆ ಬಂದವರು.
“ಬಿಡಾಡಿ” ಎಂಬ ಅಚ್ಚಗನ್ನಡ ಅಂಕಿತದಿಂದ ಅನೇಕ ವಚನಗಳನ್ನು ಬೊಂತಾದೇವಿ ರಚಿಸಿದ್ದಾರೆ. ಪರಮಾತ್ಮನು ಯಾವ ನಿರ್ಬಂಧಕ್ಕೊಳಗಾಗದ, ಕಟ್ಟುಪಾಡುಗಳಿಗೆ ಒಳಗಾಗದವ , “ಸರ್ವತಂತ್ರ ಸ್ವತಂತ್ರ’’ ಎಂಬರ್ಥದಲ್ಲಿ ಆತನನ್ನು ಪ್ರೀತಿಯಿಂದ "ಬಿಡಾಡಿ" ಎಂದು ಕರೆದಿದ್ದಾರೆ ಬೊಂತಾದೇವಿ. ಚಿಕ್ಕಂದಿನಲ್ಲಿಯೇ ಶಿವಭಕ್ತೆ. ಭಕ್ತಿ ನಿಷ್ಠೆಯಲ್ಲಿ ನೆಲೆಗೊಂಡು, ವೈರಾಗ್ಯ ತಾಳಿತು. ಕಲ್ಯಾಣದ ಬಸವಾದಿ ಶರಣರ ಅಧ್ಯಾತ್ಮಿಕ, ಸಮಾಜೋದ್ಧಾರಕ ವಿಚಾರಗಳನ್ನು ಜಂಗಮರಿಂದ ತಿಳಿದುಕೊಂಡು ಅಲ್ಲಿಯ 6000 ಜಂಗಮರೊಡನೆ ಕಲ್ಯಾಣಕ್ಕೆ ಬಂದು ನೆಲೆಸುತ್ತಾರೆ. ಈಕೆಯ ವೀರವೈರಾಗ್ಯ ಭಕ್ತಿಯನ್ನು ಕಾವ್ಯ, ಪುರಾಣಗಳು ಬಣ್ಣಿಸುತ್ತವೆ. ಕಾಶ್ಮೀರದಲ್ಲಿದ್ದಾಗ ವಿಪರೀತ ಚಳಿಯಿಂದ ನಡುಗುತ್ತಿದ್ದ ವೃದ್ಧೆಗೆ ತಾನುಟ್ಟ ಬಟ್ಟೆಯನ್ನೇ ಬಿಚ್ಚಿಕೊಟ್ಟು ಕೌದಿ ಹೊದ್ದ ಬೊಂತಾದೇವಿ ಬಡಜನರ ಸೇವೆಯಲ್ಲಿ ತತ್ವರರಾಗಿದ್ದವರು. ಧನಕನಕದ ಮೋಹದಿಂದ ಹೊರಬಂದವರು. ಕಾಶ್ಮೀರದಿಂದ ಕಲ್ಯಾಣಕ್ಕೆ ಬಂದ ನಂತರ ಅವರು ಕೌದಿಯನ್ನೇ ಹೊದೆಯುತ್ತಿದ್ದುದರಿಂದ ಅವರಿಗೆ "ಬೊಂತಾದೇವಿ" ಎಂಬ ಹೆಸರು ಬಂತೆನ್ನಲಾಗಿದೆ. (ಬೊಂತ ಅಂದರೆ ಕೌದಿ). ಬೊಂತಾದೇವಿ ವಿವಾಹ ಬಂಧನಕ್ಕೆ ಸಿಲುಕದೆ ಶರಣ ದೀಕ್ಷೆ ಸ್ವೀಕರಿಸಿದರು. ಕಲ್ಯಾಣದಲ್ಲಿ ಕೌದಿ ಹೊಲಿದು ಮಾರುವ ಕಾಯಕ ಕೈಕೊಂಡ ಆಕೆ ರೋಗಗ್ರಸ್ತ ಬಡವರಿಗೆ ತಾನೇ ಔಷಧೋಪಚಾರ ಸೇವೆ ಮಾಡುತ್ತಿದ್ದರು.
ಕಲ್ಯಾಣದಲ್ಲಿ ಎಲೆಯ ಮರೆಯ ಕಾಯಿಯಂತೆ ಸಾಧನೆ ಮಾಡುತ್ತಾ ಉಳಿದುಕೊಳ್ಳುತ್ತಾರೆ. ಅಸಂಖ್ಯಾತ ಶರಣರ ತಾಣವಾದ ಕಲ್ಯಾಣದಲ್ಲಿ ಬೊಂತಾದೇವಿಯನ್ನು ಯಾರು ಗಮನಿಸಿರುವುದಿಲ್ಲ. ದಿವ್ಯಜ್ಞಾನಿಯಾದ ಅಲ್ಲಮಪ್ರಭು ಮಾತ್ರ ಆಕೆಯ ಸೂಪ್ತಭಕ್ತಿಯ ನೆಲೆಯನ್ನು ಗಮನಿಸುತ್ತಾರೆ. ಅಕ್ಕಮಹಾದೇವಿ ಶ್ರೀಶೈಲದ ಕದಳಿಗೆ ಹೊರಟು ನಿಂತಾಗ, ಆಕೆಯನ್ನು ಬೀಳ್ಕೊಡಲು ಸೇರಿದ ಶರಣರೆಲ್ಲ ಮಹಾದೇವಿ ಯಂಥವರು ಯಾರು ಎಂದು ಉದ್ಗಾರ ತೆಗೆಯುತ್ತಾರೆ. ಆಗ ನೆರೆದ ಶರಣವೃಂದಕ್ಕೆ ಅಲ್ಲಮಪ್ರಭು ಬೊಂತಾದೇವಿಯ ಮಹಿಮೆಯನ್ನು ತಿಳಿಹೇಳುತ್ತಾರೆ. ಕಲ್ಯಾಣಕ್ರಾಂತಿಯ ನಂತರ ಶರಣರೆಲ್ಲ ದಿಕ್ಕಾಪಾಲಾಗಿ ಅನೇಕ ಕಡೆಗೆ ಚದುರಿಹೋದರು. ಬೊಂತಾದೇವಿ ಮಾತ್ರ ಕಲ್ಯಾಣದಿಂದ 25km ಅಂತರದಲ್ಲಿರುವ ಮೂರಕೇರಾ ಎಂಬ ಗ್ರಾಮದಲ್ಲಿ ಇದ್ದು ತನ್ನ ಸೇವಾಕಾರ್ಯ ಮುಂದುವರಿಸಿ ಅಲ್ಲಿಯೇ ಲಿಂಗೈಕ್ಯರಾಗುವ ಮೂಲಕ ಆದರ್ಶ ಶರಣೆಯೆನಿಸಿದ್ದಾರೆ.
*ಪುರಾಣ ಕೃತಿಗಳಲ್ಲಿ ಬೊಂತಾದೇವಿ* :
ಈಕೆಯ ವೈರಾಗ್ಯ, ಗುಪ್ತಭಕ್ತಿಯನ್ನು ಕಾವ್ಯ, ಪುರಾಣಗಳು ಬಣ್ಣಿಸುತ್ತವೆ.
ಕಾಶ್ಮೀರದಿಂದ ಕಲ್ಯಾಣದ ಹಾದಿಯಲ್ಲಿ ಪಾದಚಾರಿಯಾಗಿ ಘೋರಾರಣ್ಯಗಳನ್ನು ಪ್ರವೇಶಿಸುತ್ತ ಬರುತ್ತಿರುವ ನಿಜದೇವಿಗೆ ಮಾರ್ಗಮಧ್ಯದಲ್ಲಿ ಜನರು ಕಾಡಿದರೂ ಹೆದರದೆ ಧೈರ್ಯದಿಂದ ಮುಂದುವರಿಯುತ್ತಿದ್ದಳು. ಅತ್ಯಂತ ಲಾವಣ್ಯವತಿಯು ವೈರಾಗ್ಯಶೀಲೆಯಾದ ನಿಜದೇವಿಯನ್ನು ಶಿವನು ಪರೀಕ್ಷಿಸಬೇಕೆಂದು ಸುಂದರ ಯುವಕನ ರೂಪ ಧರಿಸುತ್ತಾ, ಮತ್ತೊಮ್ಮೆ ಒಬ್ಬ ವ್ಯಾಪಾರಸ್ಥನ ವೇಷ ಧರಿಸುತ್ತಾ ಅವಳಿದ್ದ. ಎಡೆಗೆ ಬಂದು ಎಲೇ ನಿಜದೇವಿಯೇ, ನೀನು ನನ್ನ ಸತಿಯಾಗಿ ನನ್ನೊಡನೆ ಸುಖವಾಗಿ ಬಾಳು ಎಂದು ಕೇಳಿಕೊಳ್ಳುತ್ತಾನೆ. ಆದರೆ ನಿಜದೇವಿಯು ಅವನಾರೆಂಬುದುನ್ನು ತಕ್ಷಣವೆ ತನ್ನ ಸುಜ್ಞಾನದಿಂದ ವೇಷಧಾರಿಯಾದ ಶಿವನನ್ನು ಗುರುತಿಸಿ, ನಗುತ್ತಾ ನೀನಾರೆಂಬುದು ನನಗೆ ತಿಳಿಯಿತು. ’ಕಾಮವೈರಿಯಾದ ನಿನ್ನನ್ನು ಹೇಗೆ ಮದುವೆಯಾಗಲಿ? ನಿನಗೆ ಈಗಾಗಲೇ ಇಬ್ಬರು ಹೆಂಡತಿಯರು! ಮತ್ತೊಬ್ಬಳೇಕೆ ಎಂದು ಶಿವನನ್ನೇ ಪ್ರಶ್ನಿಸುತ್ತಾ, ಕಲ್ಯಾಣದ ಕಡೆಗೆ ವಿರಕ್ತಿ ಯಿಂದ ಹೊರಟಿರುವ ನಾನು ನಿನ್ನನ್ನು ವರಿಸಿದರೆ, ಬಸವಾದಿ ಪ್ರಮಥರು ಮೆಚ್ಚದೆ ನಗುವರು ಎಂದು ನುಡಿಯುತ್ತಾಳೆ. ಶಿವನು ನಿಜದೇವಿಯ ವಿರಕ್ತಿಯನ್ನು ನೋಡಿ ಪ್ರತ್ಯಕ್ಷನಾಗಿ, ನಿಜದೇವಿಯೆ ನಿನ್ನ ವೈರಾಗ್ಯಕ್ಕೆ ಮೆಚ್ಚಿದೆನು. ನೀನು ದಿಗಂಬರಿಯಾಗದೆ ಈ ಬೊಂತೆಯನ್ನು (ಬೊಂತೆ ಎಂದರೆ ಕೌದಿ) ಹೊದ್ದುಕೊಂಡು ಹೋಗೆಂದು ಬೊಂತೆಯನ್ನು ಹೊದಿಸುತ್ತಾನೆ. ಶಿವನ ಅಪ್ಪಣೆ ಮೀರಲಾರದೆ ಆ ಕೌದಿಯನ್ನು ಹೊದ್ದುಕೊಂಡು ಬರುವಾಗಲೆ ನಿಜದೇವಿಗೆ ಬೊಂತಾದೇವಿ ಎಂಬ ಹೆಸರು ಬಂತೆಂದು ಕಥೆ ಇದೆ.
ಬಯಲಲ್ಲಿ ಬಯಲಾದ ಶರಣೆ:
*ಶರಣೆ ಬೊಂತಾದೇವಿಯ ವಚನಗಳು *:
ಶರಣೆ ಬೊಂತಾದೇವಿ ಶಬ್ಧಗಳಲ್ಲಿ ಅಪಾರವಾದ ಅಧ್ಯಾತ್ಮಿಕ ಅರ್ಥವನ್ನು ತುಂಬಿ ತನ್ನ ವಚನ ರಚನಾ ಸಾಮರ್ಥ್ಯವನ್ನು ತೋರಿದ್ದಾರೆ.
1. ವಚನ
ಅನಂತನಿಂತಾತನೆಂದರಿಯಾ ಬಿಡಾಡಿ.
ಕರೆದಡೆ ಓ ಎಂಬುದು ನಾದವೊ ಬಿಂದುವೊ ಪ್ರಾಣವೊ
ಇದಾವುದು ? ಬಲ್ಲಡೆ ನೀ ಹೇಳಾ, ಬಿಡಾಡಿ.
-- ಬೊಂತಾದೇವಿ
ಅರ್ಥ:
ಅಂತಾಯಿತು ಇಂತಾಯಿತು ಎನಬೇಡ. ವಿಶ್ವ ಉತ್ಪತ್ತಿಯಲ್ಲಿ ಮೊದಲು ಪ್ರಣವ ನಾದ, ನಂತರ ಬಿಂದು, ನಂತರ ಸಕಲ ಜೀವರಾಶಿಯ ಪ್ರಾಣಗಳಾದರೂ ಸಹ, ಕರೆದಡೆ ಓ ಎಂಬುವ ಶಿವನ ಸ್ವರೂಪ ಇದರಲ್ಲಿ ಯಾವುದು? ಕರೆದಾಡೆ ಓ ಎನ್ನುವ ಶಿವನು ನಾದವೋ? ಬಿಂದುವೋ? ಪ್ರಾಣವೋ? ಶಿವನದು ಅನಂತ ಸ್ವರೂಪ, ಸದಾಕಾಲ ಅನಂತನಾಗಿ ನಿಂತವನು ಎಂದು ತಿಳಿ.
2. ವಚನ
ಇದಪ್ರತಿ ಬಿಡಾಡಿ.
ಶಬ್ದವೆ ಬ್ರಹ್ಮ, ಶಬ್ದವೆ ಸಿದ್ಧ, ಶಬ್ದವೆ ಶುದ್ಧ ಕಾಣಿರೆ, ಬಿಡಾಡಿ ?
-- ಬೊಂತಾದೇವಿ
ಅರ್ಥ:
ನಾಲ್ಕು ವೇದಗಳು, ಹದಿನೆಂಟು ಶಾಸ್ತ್ರಗಳು ಹದಿನಾರು ಪುರಾಣಗಳು, ಇಪ್ಪತ್ತೆಂಟು ಆಗಮಗಳು ಇವುಗಳ ಪ್ರತಿ ಪರಶಿವನೆಂಬ ಬಿಡಾಡಿ. ಶಿವನ 4 ಮುಖಗಳಿಂದ ನಾಲ್ಕು ವೇದಗಳು, ಶಿವನ 5 ನೆಯ (ಈಶಾನ) ಮುಖದಿಂದ 28 ಶೈವಾಗಮಗಳು ಉದ್ಭವವಾದವು ಎನ್ನುತ್ತಾರೆ. ಓಂಕಾರ ವೆಂಬ ಶಬ್ಧಬ್ರಹ್ಮ ದಿಂದಲೇ ನಾಲ್ಕು ವೇದಗಳು, ಹದಿನೆಂಟು ಶಾಸ್ತ್ರಗಳು, ಹದಿನಾರು ಪುರಾಣಗಳು, ಇಪ್ಪತ್ತೆಂಟು ಆಗಮಗಳು ಹುಟ್ಟಿದವು.
*ಶಬ್ದವೆ ಬ್ರಹ್ಮ, ಶಬ್ದವೆ ಸಿದ್ಧ, ಶಬ್ದವೆ ಶುದ್ಧ*
ಇದು ಒಂದು ನಿಗೂಢ ಬೋಧನೆ.
ಶಬ್ದ ಅಂದರೆ ಧ್ವನಿಯಿಂದ ಅಭಿವ್ಯಕ್ತಿಗೊಂಡ ಮೌಖಿಕ ಪದ. ಒಂದು ನಿರ್ದಿಷ್ಟ ಅರ್ಥವನ್ನು ತಿಳಿಸುವ ಸಹಜವಾದ ಶಕ್ತಿ ಹೊಂದಿದೆ. ಶಬ್ದ ಬ್ರಹ್ಮ ಮತ್ತು ಅಶಬ್ದ ಬ್ರಹ್ಮ ಎಂದು ಎರಡು ಬಗೆ. ಶಬ್ದಬ್ರಹ್ಮ ಅಂದರೆ ಅತೀಂದ್ರಿಯ ಶಬ್ದ ಅಥವಾ ಧ್ವನಿ ಕಂಪನ. ಶಬ್ದಬ್ರಹ್ಮವು ಸೃಜನಾತ್ಮಕ ಶಕ್ತಿ ಹೊಂದಿದೆ. ಕಾಲವು(time the fourth dimension) ಇದು ಶಬ್ದಬ್ರಹ್ಮದ ಸೃಜನಾತ್ಮಕ ಶಕ್ತಿ. ಆ ಶಕ್ತಿಯಿಂದ ಬ್ರಹ್ಮಾಂಡದ ಸೃಷ್ಟಿ. ಬ್ರಹ್ಮದ ಅಂತಿಮ ವಾಸಸ್ಥಾನವು ಅದೇ.
ಪರಶಿವನೆಂಬ ಪರಬ್ರಹ್ಮವು ನಾಮ ಹಾಗೂ ರೂಪರಹಿತವಾಗಿದೆ. ಪರಬ್ರಹ್ಮವನ್ನು ಅರಿತುಕೊಳ್ಳುವ ಮೊದಲು ಸಾಧಕ
ಶಬ್ದಬ್ರಹ್ಮದಲ್ಲಿ ಚೆನ್ನಾಗಿ ನೆಲೆಗೊಳ್ಳಬೇಕು. ಶಬ್ದವೇ ಸೃಷ್ಟಿಯ ಏಕೈಕ ಕಾರಣ ಮತ್ತು ಶಾಶ್ವತವಾಗಿದೆ. ಮನಸ್ಸು ಮತ್ತು ಇಂದ್ರಿಯಗಳನ್ನು ನಿಗ್ರಹಿಸಿದಾಗ ಒಳಗಿನ ಸೂಕ್ಷ್ಮ ಧ್ವನಿ ಶಬ್ದಬ್ರಹ್ಮವಾಗಿ ಪ್ರಣವ "ಓಂ"ಕಾರ ವಾಗಿ ಸಿದ್ಧಿಯಾಗುತ್ತದೆ. ಆ
ಓಂಕಾರ ಶಬ್ದವೆ ಬ್ರಹ್ಮ, ಓಂಕಾರ ಶಬ್ದವೆ ಶುದ್ಧ, ಓಂಕಾರ ಶಬ್ದವೆ ಸಿದ್ಧ.
3. ವಚನ
ಅರಿವೆ ಬಿಡಾಡಿ, ಅರಿಯದೆ ಬಿಡಾಡಿ,
ಮರವೆ ಬಿಡಾಡಿ, ಮರೆಯದೆ ಬಿಡಾಡಿ,
ಅರಿವರತು ಕುರುಹಿಲ್ಲದಾತ ನೀನೆ ಬಿಡಾಡಿ./1093
-- ಬೊಂತಾದೇವಿ
ಅರ್ಥ:
ಅರಿವೇ ಬಿಡಾಡಿ (ದೇವರು).
ಅರಿವರಿತು ಕುರುಹಿಲ್ಲದಾತ ನೀನೇ ದೇವರು.
ಅರಿವನ್ನು ಅರಿತವರಿಗೆ ಕುರುಹಿಲ್ಲ. ಅರಿವಿನಿಂದ ಪ್ರಾಣಲಿಂಗ ಭಾವಲಿಂಗ ಅರಿತು ಲಿಂಗಾಂಗ ಸಾಮರಸ್ಯ ಹೊಂದಿದವರಿಗೆ ಕುರುಹು ಇಷ್ಟಲಿಂಗದ ಅವಶ್ಯಕತೆಯಿಲ್ಲ. ಅರಿವು ಅರಿತ ಆ ಕುರುಹಿಲ್ಲದಾತನು ಸಹ ಬಿಡಾಡಿ ಬಯಲು ಎಂದು ಅರ್ಥಗರ್ಭಿತವಾಗಿ ಹೇಳಿದ್ದಾಳೆ ಶರಣೆ ಬೊಂತಾದೇವಿ. ಯಾವುದೇ ಬಂಧನಕ್ಕೆ ಸಿಲುಕದೆ ಇರುವದು ಬಯಲು.
ಬಯಲಿನಿಂದಲೇ ಶೂನ್ಯ. ಈ ಶೂನ್ಯದಿಂದಲೆ ವಿಶ್ವ. ಬಯಲಿನಲ್ಲಿ ಒಂದಾಗಿ ಎಲ್ಲರೂ ಬಯಲಾಗುವದೇ ಜೀವನದ ಅಂತ್ಯ ಎಂದು ಅರ್ಥಗರ್ಭಿತವಾಗಿ ಹೇಳಿದ್ದಾಳೆ ಬೊಂತಾದೇವಿ.
4. ವಚನ
ತರಗೆಲೆಗಳಿಗೊಂದೆ ಗಾಳಿ
ಹಾರುತ್ತಿಪ್ಪವು.
ಒಂದೆ ಅನಿಲ, ನಿಂದ ದೇಹಪಟ್ಟೆಗಳೊಳಗೆಲ್ಲ.
ಕರೆದಡೆ, ಓ ಎಂಬಾತನೆ ಬಿಡಾಡಿ/1096
ಅರ್ಥ:
ಘಟ ಆಕಾಶ (ದೇಹದಲ್ಲಿಯ ಚಿದಾಕಾಶ), ಪಟ ಆಕಾಶ (ಹೊರಗಿನ ಆಕಾಶ)ಈ ಎಲ್ಲ ಸ್ಥಳಗಳಲ್ಲಿ ಮೊಳಗುತ್ತಿರುವ ನಾದಕ್ಕೆ ಓಗೋಡುತ್ತಿರುವ ಲಿಂಗ ಒಬ್ಬನೇ, ಗಾಳಿಯಲ್ಲಿ ಅಲುಗಾಡುತ್ತಿರುವ ಹಾರುತ್ತಿರುವ ಎಲ್ಲ ತರಗೆಲೆಗಳಿಗೆ ಗಾಳಿಯು ಒಂದೇ, ಸಮಗ್ರ ದೇಹದಲ್ಲಿ ಹರಿದಾಡುವ ಅನಿಲ ಒಂದೇ. ಕರೆದಡೆ, ಓ ಎಂಬಾತನೆ ಬಿಡಾಡಿ ಶಿವನೊಬ್ಬನೇ.
ಆಕಾಶವು ಒಂದೇ ಆಗಿದ್ದರೂ ಘಟಾಕಾಶ, ಪಟಾಕಾಶ ಮುಂತಾಗಿ ಭೇದಗಳನ್ನು ಹೊಂದಿದಂತೆ ಒಂದೇ ಚೈತನ್ಯವು ಶರೀರ, ಅಂತಃಕರಣ ವಿಶ್ವ ಮುಂತಾದ ಉಪಾಧಿಗಳ ಕಾರಣದಿಂದ ಭಿನ್ನವಾಗಿ ಕಾಣುತ್ತದೆ. ಹಾಗಾಗಿ ಭೇದವು (ಭಿನ್ನ) ಸತ್ಯವಲ್ಲ. ಬೊಂತಾದೇವಿ ಅಭೇದವನ್ನೇ ಪ್ರತಿಪಾದಿಸುತ್ತಾರೆ.
5. ವಚನ
ಘಟದೊಳಗಣ ಬಯಲು, ಮಠದೊಳಗಣ ಬಯಲು,
ಬಯಲು ಬಯಲು ಬಯಲು ?
ತಾನೆಲ್ಲಾ ಬಯಲು, ಬಿಡಾಡಿ ಬಯಲು.
-- ಬೊಂತಾದೇವಿ/1085
ಅರ್ಥ:
ದೇಹದ ಒಳಗೂ ಮತ್ತು ತಾನು ವಾಸಿಸುತ್ತಿರುವ ಮಠದ ಒಳಗೂ ಎಲ್ಲ ಕಡೆಯೂ ಬರೀ ಬಯಲು, ಬಯಲೆಂಬ
ಶಿವ. ಯೋಗಸಾಧನೆಯಿಂದ ತಾನೂ ಬಯಲು, ಆ ಪರಶಿವನೆಂಬ ದೇವರೂ ಬಯಲು. ಹೀಗೆ ಬಯಲು ಬಯಲನ್ನೆ ಸೇರಿದ ಅತ್ಯುನ್ನತ ಅನುಭಾವ ಅವಳದು.
6. ವಚನ
ಊರ ಹೊರಗಣ ಬಯಲೆಂದುಂಟೆ?
ಊರೊಳಗೆ ಬ್ರಾಹ್ಮಣಬಯಲು
ಊರ ಹೊರಗೆ ಹೊಲೆಬಯಲೆಂದುಂಟೆ?
ಎಲ್ಲಿ ನೋಡಿದಡೆ ಬಯಲೊಂದೆ.
ಭಿತ್ತಿಯಿಂದ ಒಳಹೊರಗೆಂಬ ನಾಮವೈಸೆ.
ಎಲ್ಲಿ ನೋಡಿದಡೆ ಕರೆದಡೆ ಓ ಎಂಬಾತ ಬಿಡಾಡಿ ./1094
-- ಬೊಂತಾದೇವಿ
Meaning:
God(Shiva) has not made separate space for upper and lower castes.There is no separate or different Shiva for upper and lower castes. He is everywhere and roams free everywhere and he will come to you irrespective of from where you call him.
ಅರ್ಥ:
ಬಯಲು ದೇವರ ಸ್ವರೂಪವೂ ಹೌದು,ಅನಾದಿ ವಿಶ್ವದ ಸ್ವರೂಪವೂ ಹೌದು ಹಾಗೂ ಭೌತಿಕ ಸ್ವರೂಪದ ನೆಲವೂ ಹೌದು.
‘ಬಯಲು’ ಎಂಬುದು ಎಲ್ಲೆಲ್ಲಿಯೂ ಒಂದೇ ಆಗಿದ್ದು , ‘ಒಳಗಣ ಬಯಲು’ ಮತ್ತು ‘ಹೊರಗಣ ಬಯಲು’ ಎಂದು ಎರಡಾಗಿರಲು ಸಾಧ್ಯವಿಲ್ಲ . 'ಬಯಲು' ಕಾಣಲಿಕ್ಕೆ ಹೊರಗೆ ಭಿತ್ತಿಯಿಂದ (ರೂಪದಿಂದ) ಹಾಗೆ ತೋರಿದರೂ ಅದು ಸರ್ವತ್ರವೂ ಸಮಗ್ರವಾಗಿದೆ. ಮೇಲ್ವರ್ಗದ ಬಯಲು ಕೆಳವರ್ಗದ ಬಯಲು ಇಲ್ಲ.
ಊರ ‘ಒಳಗಣ ಬಯಲು’ ಮತ್ತು ಊರ ‘ಹೊರಗಣ ಬಯಲು’ ಎಲ್ಲಿ ನಿಂತು ಕರೆದರೂ ಓ ಎಂಬಾತನೆ ಯಾವ ನಿರ್ಬಂಧಕ್ಕೊಳಗಾಗದ, ಕಟ್ಟುಪಾಡುಗಳಿಗೆ ಒಳಗಾಗದ , “ಸರ್ವತಂತ್ರ ಸ್ವತಂತ್ರ ಬಿಡಾಡಿ ಎಂಬ ಶಿವನೇ. ಶಿವನಲ್ಲಿ ಜಾತಿ ಭೇದವಿಲ್ಲ.
ಕುಲ ಒಂದೇ. ಭಿತ್ತಿ (ರೂಪ)ಮಾತ್ರದಿಂದ ಬಯಲಿನಲ್ಲಿ ಒಳಹೊರಗೆಂಬ ಅಂತರ ಉಂಟಾಗುವಂತೆ, ಮಾನವ ತನ್ನ ಕಲ್ಪನೆಯ ಭಿತ್ತಿಯಿಂದ ಮೇಲು ಕೀಳೆಂಬ ಜಾತಿಯ ಕೃತ್ರಿಮತೆಯನ್ನುಂಟು ಮಾಡಿಕೊಂಡಿದ್ದಾನೆ. ಅನಂತವಾದ ಬಯಲೊಂದೇ ಇರುವಂತೆ ಸರ್ವವ್ಯಾಪಿ ಭಗವಂತನೊಬ್ಬನೇ, ಕುಲವೊಂದೇ ಎಂಬ ಭಾವನೆಯನ್ನು ವಚನಗಳ ಮೂಲಕ ವ್ಯಕ್ತಪಡಿಸಿದ್ದಾಳೆ.
ಸೃಷ್ಟಿ ಸ್ಥಿತಿ ಲಯ ಗಳ ಕಾರಣಿಕರ್ತನಾದ ನಿರಾಕಾರ ನಿರ್ಗುಣ ನಿರ್ಮಾಯಿ ಶಿವನೇ ಬಯಲು.
ಈಗ ದೊರೆತ ಆರು ವಚನಗಳಲ್ಲಿ ಶಿವನ ಸ್ವರೂಪ, ಅನಂತತೆಯನ್ನು ತಿಳಿಸಿದ್ದಾರೆ. ದೇಹದ ಒಳಗೆ ದೇಹದ ಹೊರಗೆ, ಊರ ಒಳಗೆ ಊರ ಹೊರಗೆ, ಸರ್ವ ಜನಾಂಗ, ಸಕಲ ಚರಾಚರ ಜೀವಿಗಳನ್ನು, ಸಂಪೂರ್ಣ ವಿಶ್ವವನ್ನೇ ಆವರಿಸಿದ ಸರ್ವಾಂತರ್ಯಾಮಿತ್ವವನ್ನು ವರ್ಣಿಸಲಾಗಿದೆ. ಜೊತೆಗೆ ಅಧ್ಯಾತ್ಮಿಕ ಸಾಧನೆ, ಸಮತಾಭಾವ ಮತ್ತು ಸಾಮಾಜಿಕ ಕಳಕಳಿ ಅವುಗಳಲ್ಲಿ ವ್ಯಕ್ತವಾಗಿದೆ.
ಬಯಲೊಳಗೆ ಬಯಲಾಗುವ ಬಸವಾದಿ ಶರಣರ ಪರಿಯನ್ನು ಅನುಭಾವಿಸಲು ಅರಸುತ್ತಾ ಬಂದ ಬೊಂತಾದೇವಿಯವರು ಬಯಲನ್ನು ಕಂಡುಕೊಂಡು ಬಯಲಾದ ಮಹಾವಿರಾಗಿಣಿ.
- ✍️Dr Prema Pangi
Comments
Post a Comment