ವಚನ ದಾಸೋಹ

#ವಚನ:
ಘಟಪಟನಾದಾ, ಓ ಎಂಬಾತ ಲಿಂಗ.
ತರಗೆಲೆಗಳಿಗೊಂದೆ ಗಾಳಿ
ಹಾರುತ್ತಿಪ್ಪವು.
ಒಂದೆ ಅನಿಲ, ನಿಂದ ದೇಹಪಟ್ಟೆಗಳೊಳಗೆಲ್ಲ.
ಕರೆದಡೆ, ಓ ಎಂಬಾತನೆ ಬಿಡಾಡಿ/1096
*ಅರ್ಥ*:
ಶರಣೆ ಬೊಂತಾದೇವಿ ಕಾಶ್ಮೀರದ ಮಾಂಡವ್ಯಪುರ ಅರಸು ಕುಮಾರಿಯಾಗಿದ್ದು, ಶ್ರೇಷ್ಠ ಶರಣ, ಕಾಯಕಕಲಿ ಎಂದೇ ಹೆಸರುವಾಸಿಯಾದ ಮೊಳಿಗೆ ಮಾರಯ್ಯನವರ (ಕಾಶ್ಮೀರ ಮಾಂಡವ್ಯಪುರದ ಅರಸು)  ಸಹೋದರಿ. ಮೂಲನಾಮವಾದ "ನಿಜದೇವಿ" ಯಿಂದ ಬೊಂತಾದೇವಿಯಾಗಿ ನಾಮಾಂಕಿತಗೊಂಡರು. ಸೂಪ್ತಭಕ್ತಿಗೆ, ಆದ್ಯಾತ್ಮಜ್ಞಾನಕ್ಕೆ, ಅನುಭಾವಕ್ಕೆ ಹೆಸರುವಾಸಿಯಾದರು. ಲೋಕದ ಕಣ್ಣಿಗೆ ಕಾಣದಿದ್ದರೂ ತನ್ನ ಅಸಾಮಾನ್ಯ ಸೂಪ್ತಭಕ್ತಿ, ನಿಷ್ಠೆ, ವಿರಕ್ತಿ, ಸಮಾನತೆ, ಶ್ರದ್ದೆ ಮತ್ತು ಬಡ ರೋಗಿಗಳ ಸೇವೆಗೆ ಹೆಸರಾದವರು ಶರಣೆ ಬೊಂತಾದೇವಿ. ಕಾಶ್ಮೀರ ಶೈವ ಪಂಥದಿಂದ ಶರಣ ಧರ್ಮಕ್ಕೆ ಬಂದವರು.

“ಬಿಡಾಡಿ” ಎಂಬ ಅಚ್ಚಗನ್ನಡ ಅಂಕಿತದಿಂದ ಅನೇಕ ವಚನಗಳನ್ನು ಬೊಂತಾದೇವಿ ರಚಿಸಿದ್ದಾರೆ. ಪರಮಾತ್ಮನು ಯಾವ ನಿರ್ಬಂಧಕ್ಕೊಳಗಾಗದ, ಕಟ್ಟುಪಾಡುಗಳಿಗೆ ಒಳಗಾಗದವ , “ಸರ್ವತಂತ್ರ ಸ್ವತಂತ್ರ’’ ಎಂಬರ್ಥದಲ್ಲಿ ಆತನನ್ನು ಪ್ರೀತಿಯಿಂದ "ಬಿಡಾಡಿ" ಎಂದು ಕರೆದಿದ್ದಾರೆ ಬೊಂತಾದೇವಿ. ಚಿಕ್ಕಂದಿನಲ್ಲಿಯೇ ಶಿವಭಕ್ತೆ. ಭಕ್ತಿ, ನಿಷ್ಠೆಯಲ್ಲಿ ನೆಲೆಗೊಂಡು, ವೈರಾಗ್ಯ ತಾಳಿತು. ಕಲ್ಯಾಣದ ಬಸವಾದಿ ಶರಣರ ಅಧ್ಯಾತ್ಮಿಕ, ಸಮಾಜೋದ್ಧಾರಕ ವಿಚಾರಗಳನ್ನು  ಜಂಗಮರಿಂದ ತಿಳಿದುಕೊಂಡು ಅಲ್ಲಿಯ 6000 ಜಂಗಮರೊಡನೆ ಕಲ್ಯಾಣಕ್ಕೆ ಬಂದು ನೆಲೆಸುತ್ತಾರೆ.

*ಘಟಪಟನಾದಾ, ಓ ಎಂಬಾತ ಲಿಂಗ*.

ಘಟ ಆಕಾಶ (ದೇಹದಲ್ಲಿಯ ಚಿದಾಕಾಶ), ಪಟ ಆಕಾಶ (ಹೊರಗಿನ ಆಕಾಶ)ಈ ಎಲ್ಲ ಸ್ಥಳಗಳಲ್ಲಿ ಮೊಳಗುತ್ತಿರುವ "ಓಂ"ಕಾರ ನಾದಕ್ಕೆ ಓಗೋಡುತ್ತಿರುವ ಲಿಂಗ ಒಬ್ಬನೇ,

*ತರಗೆಲೆಗಳಿಗೊಂದೆ ಗಾಳಿ
ಹಾರುತ್ತಿಪ್ಪವು*.

ಗಾಳಿಯಲ್ಲಿ ಅಲುಗಾಡುತ್ತಿರುವ ಹಾರುತ್ತಿರುವ ಎಲ್ಲ ತರಗೆಲೆ(ಎಲೆಗಿಡ)ಗಳಿಗೆ ಗಾಳಿಯು ಒಂದೇ, 

*ಒಂದೆ ಅನಿಲನಿಂದ ದೇಹಪಟ್ಟೆಗಳೊಳಗೆಲ್ಲ.
ಕರೆದಡೆ, ಓ ಎಂಬಾತನೆ ಬಿಡಾಡಿ*

ಸಮಗ್ರ ದೇಹದಲ್ಲಿ ಹರಿದಾಡುವ ಅನಿಲ ಒಂದೇ.  ಕರೆದಡೆ, ಓ ಎಂಬಾತನೆ ಬಿಡಾಡಿ ಎಲ್ಲೆಲ್ಲಿಯೂ ಆವರಿಸಿದ ಶಿವನೊಬ್ಬನೇ.
*ವಚನ ಚಿಂತನೆ*:
ಆಕಾಶವು ಒಂದೇ ಆಗಿದ್ದರೂ ಘಟಾಕಾಶ, ಪಟಾಕಾಶ ಮುಂತಾಗಿ ಭೇದಗಳನ್ನು ಹೊಂದಿದಂತೆ ಒಂದೇ ಯಾದ ಚೈತನ್ಯವು ಶರೀರ, ಅಂತಃಕರಣ ವಿಶ್ವ ಮುಂತಾದ ಉಪಾಧಿಗಳ ಕಾರಣದಿಂದ ಭಿನ್ನವಾಗಿ ಕಾಣುತ್ತದೆ. ಹಾಗಾಗಿ ಭೇದವು (ಭಿನ್ನ) ಸತ್ಯವಲ್ಲ. ಶರಣೆ ಬೊಂತಾದೇವಿ ಈ ವಚನದಲ್ಲಿ ಅಭೇದವನ್ನೇ ಪ್ರತಿಪಾದಿಸುತ್ತಾರೆ.
ಅಣುವಿಂಗೆ ಅಣುವಾಗಿರುವ, ಮಹತ್ತಿಂಗೆ ಮಹತ್ತಾಗಿರುವ ದೇವನು ನೆಲದ ಮರೆಯ ನಿಧಾನದಂತೆ, ಮುಗಿಲ ಮರೆಯ ಮಿಂಚಿನಂತೆ, ಕಂಗಳ ಮರೆಯ ಬೆಳಗಿನಂತೆ, ಬಯಲ ಮರೆಯ ಮರೀಚಿಯಂತೆ ಯಾರಿಗೂ ಕಾಣದಂತಿದ್ದಾನೆ. ನಿರಂಜನ, ನಿರಾಕಾರ ನಿರಾಳ ಸ್ವರೂಪನಾಗಿರುವ ಅವನನ್ನು ಅಲ್ಲಮ ಪ್ರಭುದೇವರು ಬಚ್ಚ ಬರಿಯ ಬಯಲು ಎನ್ನುತ್ತಾರೆ.
ಗುರು ಬಸವಣ್ಣನವರು "ಬಯಲು ರೂಪ ಮಾಡಬಲ್ಲಾತನೇ ಶರಣನು. ಆ ರೂಪ ಬಯಲ ಮಾಡಬಲ್ಲಾತನೇ ಲಿಂಗಾನುಭಾವಿ " ಎಂದು ಉಭಯ ಬೆರೆಯಬೇಕು. ಬೆಳಗು ಬೆಳಗನೆ ಕೂಡಿದಂತಾಗಬೇಕು ಎಂದಿದ್ದಾರೆ.
ಶರಣೆ ಬೊಂತಾದೇವಿಯವರು ತಮ್ಮ ಚಿಕ್ಕ ವಚನ ದಲ್ಲಿ,  ದೇಹದ ಒಳಗೆ ದೇಹದ ಹೊರಗೆ, ಸಂಪೂರ್ಣ ವಿಶ್ವವನ್ನೇ ಆವರಿಸಿದ ಶಿವನ ಸರ್ವಾಂತರ್ಯಾಮಿತ್ವವನ್ನು ವರ್ಣಿಸಲಾಗಿದೆ. 
ಬಯಲೊಳಗೆ ಬಯಲಾಗುವ ಬಸವಾದಿ ಶರಣರ ಪರಿಯನ್ನು ಅನುಭಾವಿಸಲು ಅರಸುತ್ತಾ ಬಂದ ಬೊಂತಾದೇವಿಯವರು ಬಯಲನ್ನು ಕಂಡುಕೊಂಡು ಬಯಲಾದ ಮಹಾವಿರಾಗಿಣಿ.
- ✍️Dr Prema Pangi
# ಪ್ರೇಮಾ_ಪಾಂಗಿ,
#ಘಟಪಟನಾದಾ_ಓ_ಎಂಬಾತ_ಲಿಂಗ

Comments

Popular posts from this blog

Shika chakra or Bindu chakra:Bindu visarga

Hrit Chakra or Eight Petals Chakra

A-Ka-Ta triangle or Akshara Brahma