ಅಷ್ಟಾವರಣ - ಮಂತ್ರ


ಅಷ್ಟಾವರಣ - ಮಂತ್ರ
ಅಷ್ಟಾವರಣಗಳಲ್ಲಿ ಮಂತ್ರ ಎಂಟನೆಯದಾದರೂ ಅದು ಎಲ್ಲ ಹಂತಗಳಲ್ಲಿಯೂ ಕಂಡುಬರುವ ವ್ಯಾಪಕವಾದ ಶಕ್ತಿ. ಗುರು ಮೂಲಕ ಲಿಂಗದೀಕ್ಷೆ ಸ್ವೀಕರಿಸುವಾಗ,  ಉಪಾಸನೆಯ ಮಾರ್ಗದಲ್ಲಿ, ನಿತ್ಯ ಪೂಜೆಯಲ್ಲಿ, ವಿಭೂತಿ ರುದ್ರಾಕ್ಷಿಗಳ ಧಾರಣೆಯಲ್ಲಿ, ಪಾದೋದಕ ಪ್ರಸಾದಗಳ ನಿರ್ವಹಣೆಯಲ್ಲಿ  ಹೀಗೆ ಎಲ್ಲಕಡೆ ಮಂತ್ರವೇ ತಾರಕ ಶಕ್ತಿಯಾಗಿ ಪರಿಣಮಿಸುತ್ತದೆ. ದೀಕ್ಷಾ ಕಾಲದಲ್ಲಿ ಗುರುವು ಮಾಂಸಪಿಂಡವನ್ನು ಮಂತ್ರಪಿಂಡವನ್ನಾಗಿ ಮಾಡಿ ಸಾಧಕನ ದೇಹವನ್ನು ಪರಿವರ್ತನೆ ಗೊಳಿಸುತ್ತಾನೆ. ಷಟ್ಸ್ಥಲದ ಸತತ ಸಾಧನೆಯಲ್ಲಿ ಕ್ರಮೇಣ ಮಂತ್ರಶಕ್ತಿ ಊರ್ಧ್ವಮುಖವಾಗಿ ಸಾಧಕನ ಅಂತರಂಗದಲ್ಲಿರುವ ದೈವತ್ವವನ್ನು ಅನಾವರಣಮಾಡಿ ಸ್ವಸ್ವರೂಪದ ಅರಿವನ್ನು ತಂದುಕೊಡುವುದು.
"ಮನನಾತ್ ತ್ರಾಯತೇ ಇತಿ ಮಂತ್ರಃ  " ಮನನ ಮಾಡುವುದರಿಂದ  ಯಾವುದು ರಕ್ಷಿಸುವದು ಅದುವೇ ಮಂತ್ರ. ನಿರಂತರವಾದ ಮಂತ್ರಾನುಸಂಧಾನದ ಮುಖಾಂತರವಾಗಿ ಜೀವ ಪರಮಾತ್ಮರನ್ನು  ಒಂದುಗೂಡಿಸುವುದೇ ಮಂತ್ರ.
ನಾದಬ್ರಹ್ಮ; ಶಬ್ಧದಿಂದಲೇ ಬ್ರಹ್ಮಾಂಡ ಉಂಟಾಯಿತೆಂದು ವೇದಗಳು  ಹೇಳುತ್ತವೆ. ಶರಣರು "ನಾದ ಬಿಂದು ಕಳೆ" ಯಿಂದ ವಿಶ್ವವು ಉದಯವಾದ ಬಗೆ ತಿಳಿಸಿದ್ದಾರೆ. ಇಲ್ಲಿ ವಿಶ್ವ ಉದಯವಾಗಲು ಕಾರಣವಾದ ನಾದ,  ಪ್ರಣವ ' ಓಂ' :
ಮಂತ್ರ - ಓಂ ನಮಃ ಶಿವಾಯ. 
ನಿರ್ದಿಷ್ಟ ಅಕ್ಷರಗಳನ್ನು ಜೋಡಿಸಿದಾಗ ಅದು ಸಾಧಕನ ಆಂತರಿಕ ಕೋಶಗಳನ್ನು ಉದ್ದೀಪನ ಮಾಡುತ್ತದೆ. ಸಾಧಕನು ಯೋಗ್ಯ ಗುರುವಿನೆಡೆಗೆ ಹೋದಾಗ, ಗುರು ಆ ಮಂತ್ರದ ಕೀಲಕವನ್ನು ತೆಗೆಯಲು ಉತ್ಕೀಲನ ವಿಧಾನ ಹೇಳಿಕೊಡುತ್ತಾನೆ. ಉತ್ಕೀಲನವಿಲ್ಲದೆ ಮಾಡುವ ಮಂತ್ರಗಳು ಫಲವನ್ನು ಕೊಡುವುದಿಲ್ಲ. 

ಉಸಿರಿನಿಂದ ದೇಹದಲ್ಲಿ ಚೈತನ್ಯ ಒಡಮೂಡಿ ಉಸಿರಿನ ಆಧಾರದಲ್ಲಿಯೇ ಜೀವನು ಬಾಳುವನು. ಉಸಿರಿನ ಏರಿಳಿತದಿಂದ ಒಂದು ಬಗೆಯ ಸಪ್ಪಳವಾಗುವದಿಲ್ಲವೆ? ಈ ಸಪ್ಪಳವೇ ಶಬ್ದ ಎಂದೆನ್ನಬಹುದು. ಆದರೆ ಎಲ್ಲ ಸಪ್ಪಳಗಳು ಶಬ್ದವಲ್ಲ, ನಾದವಲ್ಲ. ಆ ಸಪ್ಪಳವು ತಾಳ ಲಯ ಬದ್ಧವಾಗಿ ಅರ್ಥಗರ್ಭಿತವಾಗಿದ್ದರೆ ನಾದವೆನಿಸುವದು. ನಾದದಲ್ಲಿಯೇ ಮಂತ್ರವಿದೆ.
ಏನೂ ಪ್ರಯತ್ನವಿಲ್ಲದೆ ಉಸಿರನ್ನು ಬಿಡುವುದು ತೆಗೆದುಕೊಳ್ಳುವುದು ನಡೆದಿರುವಾಗ 'ಸಂ, ಹಂ ' ಎಂಬ ನಾದ ಹುಟ್ಟುತ್ತದೆ. ಇದರಲ್ಲಿ 'ಸೋಹಂ' (ಅಂದರೆ ಅವನೇ ನಾನು) ಎಂಬುದು ತಾಳಬದ್ಧವಾದ ಶಬ್ದ. ಇದರಲ್ಲಿಯ ಹ ಮತ್ತು ಸ ಎಂಬೆರಡು ಅಕ್ಷರಗಳನ್ನು ಕಳೆದರೆ ಉಳಿಯುವದು ' ಓಂ'. ಇದುವೇ ಮಂತ್ರ. ಈ ಓಂಕಾರವೇ ಶಿವನ ಹೆಸರು.

"ಓಂಕಾರ"ವನ್ನು ಪಿಂಡ ದೃಷ್ಟಿಯಿಂದ ನೋಡಿದರೆ ಅದು ಪ್ರತ್ಯಗಾತ್ರ; ಬ್ರಹ್ಮಾಂಡದ ದೃಷ್ಟಿಯಿಂದ ನೋಡಿದರೆ ಅದು ಪರಮಾತ್ಮ. ಶರಣ ಆಯ್ದಕ್ಕಿ ಮಾರಯ್ಯನವರು "ಶಿವನೆ ಮಂತ್ರತಂತ್ರಯಂತ್ರೋಪಕರಣವಾಗಿ ಬಂದ ಲೋಕಹಿತಾರ್ಥ" ಎಂದು ಮಂತ್ರದ ಮಹತ್ವ ತಿಳಿಸಿದ್ದಾರೆ.
#ಏಳುಕೋಟಿ ಮಹಾಮಂತ್ರಗಳ, ಉಪಮಂತ್ರ ಕೋಟ್ಯನುಕೋಟಿಗಳ ಕಲಿತು ತೊಳಲಿ ಬಳಲುವುದೇಕೆ ? ಪಾಳಾಕ್ಷನ ಮೂಲಮಂತ್ರ ಒಂದೇ ಸಾಲದೆ ? ಸಕಲ ವೇದಂಗಳ ಮೂಲವಿದು; ಸಕಲ ಶಾಸ್ತ್ರಗಳ ಸಾರವಿದು; ಸಕಲಾಗಮಂಗಳ ಅರುಹಿದು; ಸಕಲ ಮಂತ್ರಗಳ ಮಾತೆಯಿದು ಇಂತಪ್ಪ ಶಿವಮಂತ್ರವೆಂಬ ಸಂಜೀವನವು ಎನ್ನಂಗಕ್ಕೆ ಸಂಗಿಸಲಾಗಿ, ಎನಗೆ ಮರಣದ ಭಯ ಹಿಂಗಿತ್ತಯ್ಯ ಅಂಖಡೇಶ್ವರಾ
ಎನ್ನುತ್ತಾರೆ ಶಿವಯೋಗಿಗಳು.
"ಅಗ್ರಜನಾಗಲೀ ಅಂತ್ಯಜನಾಗಲಿ; ಮೂರ್ಖನಾಗಲಿ ಪಂಡಿತನಾಗಲಿ; ಜಪಿಸುವುದು. ಪಂಚಾಕ್ಷರಿ ಮಂತ್ರದ ಜಪದಿಂದ ರುದ್ರನಪ್ಪುದು ತಪ್ಪದು” ಎಂದು ಉರಿಲಿಂಗ ಪೆದ್ದಿ ಶರಣರ ಅಭಿಪ್ರಾಯ. ಶ್ರೀಗುರುವಿನಿಂದ ಪಡೆದ ಶಿವಮಂತ್ರವೇ ಎಲ್ಲ ಸಾಧನೆಗೂ ಮೂಲವೆಂದು ಹೇಳುತ್ತಾ ತೋಂಟದ ಸಿದ್ಧಲಿಂಗಯತಿಗಳು  
#...ಶಿವಮಂತ್ರೋಪದೇಶವಿಲ್ಲದಾತನು
ಪ್ರಕೃತಿಕಾಯನೆನಿಸಿಕೊಂಬೆನಯ್ಯ.
ಇದು ಕಾರಣ, ಪ್ರಕೃತಿಕಾಯವೆಂದು ಜ್ಞಾನಕಾಯವೆಂದು ಎರಡು ಭೇದವಾಗಿಪ್ಪುದಯ್ಯ.
ಶಿವಮಂತ್ರದೀಕ್ಷೋಪದೇಶವಾಗಲಾಗಿ,
ಪ್ರಕೃತಿಕಾಯ ಹೋಗಿ ಜ್ಞಾನಕಾಯುವಪ್ಪುದು ತಪ್ಪದಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ ಎನ್ನುತ್ತಾರೆ.
*ಪಂಚಾಕ್ಷರಿ ಮಂತ್ರ* :
ಶ್ರೀ ಮಹಾಪಂಚಾಕ್ಷರಿಯೇ ಸರ್ವಮಂತ್ರವೆಲ್ಲಕ್ಕೆಯೂ, ಉತ್ಪತ್ತಿ ಸ್ಥಿತಿ ಲಯಸ್ಥಾನ - ಸರ್ವಕಾರಣವೆಲ್ಲಕ್ಕೆಯೂ ಮೂಲವು” ಎಂದು ಹೇಳಿದ ಉರಿಲಿಂಗ ಪೆದ್ದಿ ಶರಣರು ಇನ್ನೊಂದು ವಚನದಲ್ಲಿ ಹೀಗೆ ಹೇಳಿದ್ದಾರೆ :
#ಓಂಕಾರವೆಂಬ ವೃಕ್ಷದಲ್ಲಿ 
ಋಗ್ವೇದ ಯಜುರ್ವೇದ ಸಾಮವೇದ
ಅಥರ್ವಣವೇದಗಳೆಂಬ ನಾಲ್ಕು ಶಾಖೆಗಳು,
ಅನಂತವೈ ಉಪವೇದಂಗಳೆಂಬ ಉಪಶಾಖೆಗಳು,ಶಾಸ್ತ್ರಂಗಳೆಂಬ ಅಂಕುರ ಪಲ್ಲವ, ಪುರಾಣಂಗಳೆಂಬ ಪುಷ್ಪ,
ಆಗಮಂಗಳೆಂಬ ಕಾಯಿ ಬಲಿದು,
ಶ್ರೀ ಪಂಚಾಕ್ಷರಿ ಎಂಬ ಮಧುರಪಣ್ಣುಗಳು.
ಅಗಣಿತಫಲವನೂ ಅನಂತಕಾಲ ಭೋಗಿಸಲು ಮತ್ತಂ ಜಿಹ್ವೆಯೊಳಗೆ ಬಂದಿರಲು ಭೋಗಿಸಿ ಸುಖಿಯಹುದಲ್ಲದೆ
ಇದಿರ ವಿದ್ಯೆಗಳೆಂಬ ಸಸಿಯ ಸಾಕಿ ಸಲಹಲುಂಟೆ
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ ?
ಅರ್ಥ: ಪಂಚಾಕ್ಷರಿ ಮಂತ್ರ ಎಲ್ಲಾ ಶಾಸ್ತ್ರಗಳ ಸಾರ. ಮಧುರಸದ ಹಣ್ಣು, ಅದನ್ನು ಭೋಗಿಸಿ ಸುಖಿಯಾದರೆ ಅದರ ಮುಂದೆ ಉಳಿದುದೆಲ್ಲಾ ಅಲ್ಪ ಎಂದು ಮುಂತಾಗಿ ಶರಣರು ಈ ಮಂತ್ರದ ಮಹಿಮೆಯನ್ನು ಎತ್ತಿಹಿಡಿದಿದ್ದಾರೆ.

ಪ್ರಣವಸ್ವರೂಪವಾದ ಪಂಚಾಕ್ಷರಿಯ ಉತ್ಪತ್ತಿಯನ್ನು ತೋಂಟದ ಸಿದ್ಧಲಿಂಗೇಶ್ವರ ಶಿವಯೋಗಿಗಳು ಹೀಗೆ ಹೇಳಿದ್ದಾರೆ :
#ನಾಮರೂಪು ಕ್ರೀಗಳೇನುಯೇನೂ ಇಲ್ಲದ
ನಿತ್ಯನಿರಂಜನ ಪರವಸ್ತು ತಾನೆ ನಿರಂಜನಪ್ರಣವ ನೋಡಾ.
ಆ ನಿರಂಜನ ಪರವಸ್ತುವಿನಲ್ಲಿ ಪರಮ ಚಿತ್ಕಲೆ ಉದಯವಾಗಿ,
ಆ ಚಿದ್ರೂಪ ಕಲೆಯ ಶುದ್ಧಪ್ರಣವವೆನಿಸಿತ್ತು ನೋಡಾ.
ಆ ಶುದ್ಧ ಪ್ರಣವದಲ್ಲಿ ಚಿತ್ತು; ಆ ಚಿತ್ತೇ ಸಚ್ಚಿದಾನಂದಸ್ವರೂಪವನುಳ್ಳುದಾಗಿ,
ಚಿತ್‍ಪ್ರಣವವೆನಿಸಿತ್ತು ನೋಡಾ.
ಆ ಚಿತ್ ಪ್ರಣವಸ್ವರೂಪವಪ್ಪ ಪರತತ್ವದಲ್ಲಿ ಪರಶಕ್ತಿ ಉದಯವಾಯಿತ್ತು.
ಆ ಪರಶಕ್ತಿಯಿಂದ ನಾದ ಬಿಂದು ಕಳೆಗಳಾದವಯ್ಯ.
ಆಕಾರವೇ ನಾದ, ಉಕಾರವೇ ಬಿಂದು, ಮಕಾರವೇ ಕಳೆ;
ಇಂತೀ ಮೂರಕ್ಕೆ ಪರಶಕ್ತಿಯೇ ತಾಯಿ.
ಇಂತೀ ನಾಲ್ಕು ಒಂದಾದಲ್ಲಿ ಪ್ರಣವವಾಯಿತ್ತಯ್ಯ.
ಆ ಪ್ರಣವವೇ ಪಂಚಲಕ್ಷಣವಾಯಿತ್ತು; ಅದೆಂತೆಂದಡೆ: 
ತಾರಕಾಕೃತಿ, ದಂಡಕಾಕೃತಿ, ಕುಂಡಲಾಕೃತಿ,
ಅರ್ಧಚಂದ್ರಾಕೃತಿ ಬಿಂದುಕೃತಿ.
ಇಂತೀ ಪಂಚಾಕೃತಿಯಾಯಿತ್ತಯ್ಯ.
ತಾರಕಾಕೃತಿಯಲ್ಲಿ ನಕಾರ ಜನನ;
ದಂಡಕಾಕೃತಿಯಲ್ಲಿ ನಕಾರ ಜನನ.
ಕುಂಡಲಾಕೃತಿಯಲ್ಲಿ ಶಿಕಾರ ಜನನ.
ಅರ್ಧಚಂದ್ರಾಕೃತಿಯಲ್ಲಿ ವಕಾರ ಜನ.
ಬಿಂದುಕೃತಿಯಲ್ಲಿ ಯಕಾರ ಜನನ.
ಇಂತೀ ಪ್ರಣವದಿಂದ 
ಪಂಚಾಕ್ಷರಂಗಳುತ್ಪತ್ತಿಯಾದವಯ್ಯ.
ಪ್ರಣವವೇ ಕೂಡಿ, ಷಡಕ್ಷರವೆಂದು ಹೇಳಲ್ಪಟ್ಟಿತಯ್ಯಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ./
ಪ್ರಣವದ ಉತ್ಪತ್ತಿ ಮತ್ತು ಅದರಲ್ಲಿ ಪಂಚಾಕ್ಷರಿಯ ಜನನ ಇವುಗಳ ಸಾಂಕೇತಿಕ ನಿರೂಪಣೆ ಇಲ್ಲಿದೆ.
  ಭಕ್ತಿಯ ದೃಷ್ಟಿಯಿಂದ ಅದನ್ನು “ನಮಃ ಶಿವಾಯ ಅಂದರೆ ಶಿವನಿಗೆ ನಮಸ್ಕಾರ' ಎಂದು ಕರೆದರು.
" ನಮಮ ಶಿವಸ್ಯ ಸರ್ವಂ " - ಇದು ನನ್ನದಲ್ಲ ಎಲ್ಲವೂ ಶಿವನದು, ಈ ದೃಷ್ಟಿಯಿಂದ ಹೇಳಿದುದು.

 ಗುರು ಬಸವಣ್ಣನವರ ವಚನ
#ನಮಃ ಶಿವಾಯ ನಮಃ ಶಿವಾಯ ನಮಃ ಶಿವಾಯ
ಶರಣೆಂದಿತ್ತು ಲಲಾಟಲಿಖಿತ,
ಬರೆದ ಬಳಿಕ ಪಲ್ಲಟವ ಮಾಡಬಾರದು.
ಎನ್ನ ಉರದ ಉಂಡಿಗೆ, ಶಿರದ ಅಕ್ಷರ
ಕೂಡಲಸಂಗಯ್ಯಾ ಶರಣೆಂದಿತ್ತು.
ಪಂಚಾಕ್ಷರಿ ಮಂತ್ರವು ಶಿವಪೂಜೆಯ ಮಂತ್ರ.
#ಷಡಕ್ಷರಿ ಮಂತ್ರ:  .
ಪ್ರಣವ:
"ಓಂ" ಎಂಬುದು ಒಂದು ಪವಿತ್ರ ಪ್ರಣವ ಬೀಜಾಕ್ಷರ ಮಂತ್ರ. ಹಿಂದೂ, ಸಿಕ್, ಜೈನ ಮತ್ತು ಬೌದ್ಧ ಧರ್ಮಗಳಲ್ಲಿಯೂ ಓಂಕಾರವನ್ನು ಪವಿತ್ರವೆಂದು ಪರಿಗಣಿಸಲಾಗಿದೆ. 
ಓಂ ಶಬ್ಧವು ಸರ್ವೋಚ್ಚ ಶಕ್ತಿಯ ನಿರ್ಗುಣ ರೂಪವನ್ನು ಪ್ರತಿನಿಧಿಸುತ್ತದೆ. ಓಂ ನಿಂದಲೇ ಸೃಷ್ಟಿರಚನೆ ಪ್ರಾರಂಭವಾಯಿತು.
ಓಂ ಎನ್ನುವುದು ಸರ್ವೋತ್ತಮ ಪ್ರಜ್ಞೆ.
ಎಡೆಯೂರು ಸಿದ್ದಲಿಂಗ ಶಿವಯೋಗಿಗಳು ಓಂ ಎಂಬ ಪ್ರಣವವೇ ಪರಬ್ರಹ್ಮವು. ಪ್ರಣವವೇ ಪರಾಪರವಸ್ತು. ಪ್ರಣವವೇ ಪರತತ್ವವು ಪ್ರಣವವೇ ಪರಂಜ್ಯೋತಿ ಪ್ರಕಾಶವು. ಪ್ರಣವವೇ ಪರಶಿವ. ಪ್ರಣವವೇ ಶುದ್ಧಪ್ರಸಾದ. ಪ್ರಣವವೇ ಪರಮಪದ. ಪ್ರಣವವೇ ವೇದಶಾಸ್ತ್ರ ಪುರಾಣಾಗಮಂಗಳುತ್ಪತ್ತಿಗೆ ಕಾರಣ ನೋಡಾ. ಪ್ರಣವವೇ ಸಪ್ತಕೋಟಿ ಮಹಾಮಂತ್ರ, ಅನೇಕಕೋಟಿ ಉಪಮಂತ್ರಂಗಳಿಗೆ ಮಾತೃಸ್ಥಾನ. 
  ಶಿವಸ್ವರೂಪವಪ್ಪ  ಪ್ರಣವವೇ ಪರವಸ್ತು. ಪಂಚಾಕ್ಷರವೇ ಪಂಚಮುಖವನ್ನುಳ್ಳ ಪರಮೇಶ್ವರ ಎಂದು ಪ್ರಣವದ ಮಹತ್ವ ತಿಳಿಸುತ್ತಾರೆ.
 ಓಂ(AUM) ಸಮಯದ, ಮನಸ್ಸಿನ ಎಲ್ಲ ಸ್ಥಿತಿಗಳನ್ನು ಪ್ರತಿನಿಧಿಸುತ್ತದೆ. 
"ಅ"ಕಾರ (A) ಮನಸ್ಸಿನ ಎಚ್ಚರ ಸ್ಥಿತಿಯನ್ನು, "ಉ"ಕಾರ (U) ಕನಸಿನ ಸ್ಥಿತಿಯನ್ನು ಮತ್ತು  
"ಮ"ಕಾರ (M) ಮನಸ್ಸಿನ ಆಳವಾದ ನಿದ್ರೆಯ ಸ್ಥಿತಿಯನ್ನು ಸೂಚಿಸುವುದು.
ಓಂ.... ಅನ್ನುವಾಗ ಕೊನೆಯಲ್ಲಿ  ಉಚ್ಚರಿಸಲಾಗುವ ವಿರಾಮದೊಂದಿಗೆ 'ತುರಿಯಾ' ಅಥವಾ ಅನಂತ ಪ್ರಜ್ಞೆಯ ಸ್ಥಿತಿ ಎಂದು ಸೂಚಿಸುವುದು.
"ಓಂ...ನಮಃ ಶಿವಾಯ" ಎನ್ನುವುದರಿಂದ ಪಿಂಡ - ಬ್ರಹ್ಮಾಂಡಗಳಲ್ಲಿ, ಆತ್ಮ-ಪರಮಾತ್ಮನಲ್ಲಿ ಅಥವಾ ಅಂಗ- ಲಿಂಗದಲ್ಲಿ ಸಮರಸ, ಐಕ್ಯ, ಸಾಮರಸ್ಯ ಸೂಚಿಸಲ್ಪಡುವದು. ಈ ಷಡಕ್ಷರ ಮಂತ್ರದಲ್ಲಿ ಪಿಂಡ ಬ್ರಹ್ಮಾಂಡ ಯೊರೈಕಂ - ಇದು ಆತ್ಮ ಪರಮಾತ್ಮರ ಸಾಮರಸ್ಯವಾಗಿದೆ.
ಹೀಗೆ ಪಂಚಾಕ್ಷರಿ ಮಂತ್ರವು ಶಿವಪೂಜೆಯ ಮಂತ್ರವಾದರೆ, ಷಡಕ್ಷರಿ ಮಂತ್ರವು ಶಿವಾಯೋಗದ ಮಂತ್ರವಾಗುತ್ತದೆ.
"ಪಂಚಾಕ್ಷರ ಮಂತ್ರ" ಸಕಲ ಪಂಚಬ್ರಹ್ಮರೂಪ ಶಿವನನ್ನು ಬೋಧಿಸುತ್ತದೆ. ಸಕಲ ಶಿವನದು ಪ್ರಪಂಚಸ್ವರೂಪ. 
"ಓಂಕಾರ" ನಿಷ್ಕಲ ಶಿವನನ್ನು ಬೋಧಿಸುತ್ತದೆ. ನಿಷ್ಕಲ ಶಿವ, ಶುದ್ಧ ಜ್ಞಾನಸ್ವರೂಪ.
 ಹೀಗೆ ಉಭಯ ಸ್ವರೂಪನಾದ(ಸಕಲ, ನಿಷ್ಕಲ) ಶಿವನು ಓಂ ನಮಃ ಶಿವಾಯ' ಎಂಬ ಷಡಕ್ಷರ ಮಂತ್ರದಲ್ಲಿ ಅಡಕನಾಗಿರುವನು.
ಇಲ್ಲಿ ಪೂಜಾಸಾಮಗ್ರಿಗಳಿಲ್ಲ. ಅಷ್ಟವಿಧಾರ್ಚನೆ ಮತ್ತು ಷೋಡಷೋಪಚಾರಗಳಿಲ್ಲ. ಸದಾ ಏಕಗ್ರತೆಯಿಂದ ಮಾನಸಿಕವಾಗಿ ಮಂತ್ರ ಪಠನೆಯಿಂದ ಧ್ಯಾನದಲ್ಲಿ ಮುಳುಗಿ ದೈವ ದಾರಣೆಯಾಗಿ ಸಮಾದಿ ಸ್ಥಿತಿಯನ್ನು ತಲುಪಿ ಪಂಚಭೂತಗಳನ್ನು ಗೆದ್ದು ತಾನೆ ಈಶ್ವರನಾಗುವ ಮಂತ್ರ.
ಅಲ್ಲಮ ಪ್ರಭುಗಳು ತಿಳಿಸಿದ ಷಡಕ್ಷರಿ ಮಂತ್ರದ ಮಹಿಮೆ
#'ನ' ಎಂಬುದೆ ನಂದಿಯಾಗಿ, 
'ಮ' ಎಂಬುದೆ ಮಹತ್ತಾಗಿ,
'ಶಿ' ಎನಬುದೆ ರುದ್ರನಾಗಿ,
'ವಾ' ಎಂಬುದೆ ಹಂಸೆಯಾಗಿ, 
'ಯ' ಎಂಬುದೆ ಅರಿವಾಗಿ, 
'ಓಂ' ಕಾರವೆ ಗುರುವಾಗಿ,
ಸಂಬಂಧವೆ ಅಸಂಬಂಧವಾಗಿ, ಅಸಂಬಂಧವೆ ಸಂಬಂಧವಾಗಿ, 
ಎರಡೂ ಒಂದಾಗೆ ಗುಹೇಶ್ವರಲಿಂಗಸಂಬಂಧಿ !
ಅರ್ಥ:
ಪ್ರಣವಾಕ್ಷರಗಳು ಆರು; ಓಂ,ನ,ಮ,ಶಿ,ವಾ,ಯ. ಈ ಆರು ಪ್ರಣವಗಳ ಸುಸಂಬದ್ಧ ಸಮೂಹವೇ ಶಿವಷಡಕ್ಷರ
ಮಹಾಮಂತ್ರ.
 ಪರಶಿವನಿಂದಲೇ ಈ ವಿಶ್ವ ಹೊರಹೊಮ್ಮಿದೆ ಹಾಗೂ ಪರಶಿವನಲ್ಲಿಯೇ ಬಾಳುತ್ತದೆ.
ಶರಣನು ಪರಶಿವನ ಮಂತ್ರ ಅನುಸಂಧಾನದ ಮೂಲಕ ಶಿವಾದ್ವೈತ ದೃಷ್ಟಿಯನ್ನು ಪಡೆದು  ಈ ವಿಶ್ವವನ್ನು ಪರಶಿವನ ಅಭಿವ್ಯಕ್ತರೂಪು ಎಂದೇ ಕಾಣುತ್ತಾನೆ
 ಪ್ರಭುದೇವರು ತಿಳಿಸಿರುವ ಮಾತುಗಳಲ್ಲಿ ಮಂತ್ರ ಮಹಿಮೆ ಸೂಚ್ಯ ವಾಗಿ ವ್ಯಕ್ತವಾಗುತ್ತದೆ. ದೀಕ್ಷೆ ಸಮಯದಲ್ಲಿ ಗುರು ಕೈಯಲ್ಲಿ ಲಿಂಗವ ಕೊಟ್ಟ ಕಿವಿಯಲ್ಲಿ ಮಂತ್ರವನ್ನು ಹೇಳಿ, "ಮಂತ್ರವೇ ಲಿಂಗ, ಲಿಂಗವೇ ಮಂತ್ರ" ಎಂದು ಅರುಹುವನು. ಲಿಂಗವೆಂದರೆ ಷಡಕ್ಷರಿ ಮಂತ್ರ.
ಓಂ ನಮಃ ಶಿವಾಯ , ನಮಃ ಶಿವಾಯ
 ನಿರ್ದಿಷ್ಟ ಅಕ್ಷರಗಳನ್ನು ಜೋಡಿಸಿದಾಗ ಅದು ಸಾಧಕನ ಆಂತರಿಕ ಕೋಶಗಳನ್ನು ಉದ್ದೀಪನ ಮಾಡುತ್ತದೆ. 
ಗುರು ಬಸವಣ್ಣನವರ ವಚನಗಳಲ್ಲಿ ಮಂತ್ರ :
#ಓಂ ನಮಃ ಶಿವಾಯ 
ಎಂಬ ಮಂತ್ರವ ಮೀರಲಮ್ಮದೆ ನಿಂದವು ವೇದ, 
ಓಂ ನಮಃ ಶಿವಾಯ 
ಎಂಬ ಮಂತ್ರವ ಮೀರಲಮ್ಮದೆ ನಿಂದವು ಶಾಸ್ತ್ರ, 
ಓಂ ನಮಃ ಶಿವಾಯ 
ಎಂಬ ಮಂತ್ರವ ಮೀರಲಮ್ಮದೆ ನಿಂದವು ತರ್ಕ, 
ಭಯಂಕರ ಭ್ರಮೆಗೊಂಡಿತ್ತು ಮಂತ್ರ-ತಂತ್ರ, 
ಶಿವನಂತುವನರಿಯದೆ ಚಿಂತಿಸುತ್ತಿದ್ದಿತ್ತು ಲೋಕ, 
ಕೂಡಲಸಂಗಮದೇವ ಶ್ವಪಚನ ಮೆರೆದಡೆ 
ಜಾತಿಭೇದವ ಮಾಡಲಮ್ಮವು.

#ಅಕಟಕಟಾ ಬೆಡಗು ಬಿನ್ನಾಣವೆಂಬುದೇನೊ !
ಓಂ ನಮಃ ಶಿವಾಯ ಎಂಬುದೇ ಮಂತ್ರ,
ಓಂ ನಮಃ ಶಿವಾಯ ಎಂಬುದೇ ತಂತ್ರ,
ನಮ್ಮ ಕೂಡಲಸಂಗಮದೇವರ ನೆನೆವುದೆ ಮಂತ್ರ.

#ಎನ್ನ ಮನದಲ್ಲಿ ಮತ್ತೊಂದನರಿಯೆನಯ್ಯಾ,
ಓಂ ನಮಃ ಶಿವಾಯ, ಓಂ ನಮಃ ಶಿವಾಯ
ಎನಗಿದೆ ಮಂತ್ರ, ಇದೇ ಜಪ.
ಕೂಡಲಸಂಗಮದೇವಾ ನೀನೆ ಬಲ್ಲೆ, ಎಲೆ ಲಿಂಗವೆ.

#ವಶ್ಯವ ಬಲ್ಲೆವೆಂದೆಂಬಿರಯ್ಯಾ,
ಬುದ್ಧಿಯನರಿಯದ ಮನುಜರು ಕೇಳಿರಯ್ಯಾ.
ವಶ್ಯವಾವುದೆಂದರಿಯದೆ ಮರುಳುಗೊಂಬಿರಿ,
ಎಲೆ ಗಾವಿಲ ಮನುಜರಿರಾ.
ಓಂ ನಮಃ ಶಿವಾಯ ಎಂಬ ಮಂತ್ರ ಸರ್ವಜನವಶ್ಯ
ಕೂಡಲಸಂಗಮದೇವಾ./78

ಚಿನ್ಮಯ ಜ್ಞಾನಿ ಚೆನ್ನಬಸವಣ್ಣ ನವರ ವಚನ ಗಳಲ್ಲಿ ಮಂತ್ರ :
#ನಮಃ ಶಿವಾಯ ಲಿಂಗವು, ಓಂ ನಮಃ ಶಿವಾಯ ಬಸವಣ್ಣನು.
ನೀನೆ ಎನ್ನ ಮನಸ್ಥಲದಲ್ಲಿ ನಿಂದು ಬೆಳಗಿ ತೋರಿದೆಯಾಗಿ
ಇದು ಕಾರಣ, ಕೂಡಲಚೆನ್ನಸಂಗಯ್ಯಾ
ಆದಿಯಾಧಾರವಿಲ್ಲದಂದು
`ಓಂ ನಮಃ ಶಿವಾಯ' ಎನುತಿರ್ದೆನು. / 880

ಮಂತ್ರದ ಅರ್ಥವನ್ನು ಕುರಿತು ಮನನ ಮಾಡಬೇಕು.ಆಗ ಮಾತ್ರ ಅದು ಮಂತ್ರವೆನಿಸಲು ತಕ್ಕದಾಗುವದು.
ಮಂತ್ರದಲ್ಲಿರಿಸಿದ ವಿಶ್ವಾಸ ನಿಷ್ಠೆ ಮತ್ತು ಚಿತ್ತದ ಏಕಾಗ್ರತೆ ಇವುಗಳ ಮೂಲಕ ಯೋಗಿಯು ಭೌತಿಕ ಬಂಧನಗಳಿಂದ ಮುಕ್ತನಾಗಿ ಆತ್ಮತತ್ವ ಸಾಕ್ಷಾತ್ಕಾರವನ್ನು ಮಾಡಿಕೊಳ್ಳುತ್ತಾನೆ. 
 ಮಂತ್ರ ಜಪದಿಂದ ಚಂಚಲ ಮನಸ್ಸಿನ ಹೊಯ್ದಾಟ ನಿವಾರಿಸಿ ದೃಢ ನಿರ್ಧಾರ ತೆಗೆದುಕೊಳ್ಳಬಹುದು. ಮಂತ್ರ ಜಪದಿಂದ ಮನವು ಸ್ಥಿರವಾಗಿ ಸ್ಥಿಮಿತಕ್ಕೆ ಬರುತ್ತದೆ. ಮಂತ್ರ ಒಂದು ಶಕ್ತಿಯಾಗಿದೆ, ಸರಿಯಾಗಿ ಉಪಯೋಗ ಮಾಡಿಕೊಳ್ಳುವುದರಿಂದ ಮಂತ್ರ, ಆಧ್ಯಾತ್ಮಿಕ ವಿಕಾಸದಲ್ಲಿಯೂ ಅತ್ಯಧಿಕವಾದ ಸಹಾಯವನ್ನು ಮಾಡುತ್ತದೆ.

*ಮಂತ್ರಜಪ ವಿಧಾನ* :
 ಮಾನಸ, ವಾಚಕ, ಉಪಾಂಸಿಕ ವೆಂದು ಪ್ರಣಮ ಪಂಚಾಕ್ಷರಿಯ ಜಪ ಮೂರು ವಿಧವಾಗಿದೆ. ಮನಸ್ಸಿನಲ್ಲಿಯೇ ಪ್ರಣಮ ಮಂತ್ರವ ಜಪ್ಪಿಸುವುದು ಮಾನಸ. ಎಲ್ಲರಿಗೂ ಕೇಳುವಂತೆ ವಾಕ್ಯದಿಂದ ಶಿವಾಯ ಹರಾಯ ಭವಾಯ ಮೃಡಾಯ ಶರಣೆಂಬುದು ವಾಚಕ,  ಒಬ್ಬರೂ ಕೇಳದ ಹಾಗೆ ತನ್ನ ಕಿವಿ ಕೇಳುವ ಹಾಗೆ ಶಿವಮಂತ್ರದಲ್ಲಿ ಸುಯಿಧಾನಿಯಗಿ ತುಟಿಯನ್ನು ಮಾತ್ರ ಅಲ್ಲಾಡಿಸಿ ಮಂತ್ರಪಠಣ ಮಾಡುವುದು  ಉಪಾಂಸಿಕ.
ಮಾನಸಿಕ ಜಪವೇ ನಿಜವಾದ ಜಪ. ಮಂತ್ರ ಜಪದಲ್ಲಿ ಮನಃಪೂರ್ವಕವಾಗಿ ಮನದಲ್ಲಿ ನೆನೆಯುವುದೇ ಶ್ರೇಷ್ಠವಾದ ಜಪವಾಗಿದೆ.
ಬಾಹ್ಯಮೂರ್ತಿಯೊಂದನ್ನು ಕುರಿತು ಭ್ರಾಂತಿಗೀಡಾಗಿ ಮಂತ್ರಜಾಪಿಯಾಗದೆ  ಅಂತರಂಗದಲ್ಲಿ ಗುರು ಭೋದಿಸಿದ ಮಂತ್ರವನ್ನು ಜಪಿಸಿ ಮುಕ್ತನಾಗಿರಬೇಕು.
* ಮಂತ್ರ ಜಪ ಸಾಧಕನ ಅರ್ಹತೆ* :
ದಯವಿರಬೇಕು ಸಕಲ ಪ್ರಾಣಿಗಳಲ್ಲಿ, ಭಯವಿರಬೇಕು ಗುರು-ಹಿರಿಯರಲ್ಲಿ ಸೈಯವಿರಬೇಕು ಸಕಲ ಗುಣಗಳಲ್ಲಿ ಸಂಯಮನ ಸತ್ಯವಿರಬೇಕು ನುಡಿಗಡಣದಲ್ಲಿ; ಅಂಥವರು ಮಂತ್ರಯೋಗವನಾಚರಿಸಲು ಅರ್ಹರು.
ಮಂತ್ರದಲ್ಲಿ ಸರಿಯಾದ ಉಚ್ಚಾರಣೆ, ಪ್ರಾಣಾಯಾಮ ಅಳವಡಿಸಿಕೊಂಡರೆ ದೈಹಿಕ ಮಾನಸಿಕ ಆರೋಗ್ಯ ಸುಧಾರಿಕೆಯೂ  ಸಾಧ್ಯ. ಮಂತ್ರದ ಅನುಸಂಧಾನದಿಂದ ಶಾಂತಿ ಆನಂದಗಳು ಲಭಿಸುವವು, ಸಾಮರಸ್ಯ ಒಡೆಮೂಡುವುದು.
ತೋಂಟದ ಸಿದ್ಧಲಿಂಗ ಶಿವಯೋಗಿಗಳು
#ಎನ್ನ ರೇಚಕ ಪೂರಕ ಕುಂಭಕಗಳೆಲ್ಲವು ಶಿವಮಂತ್ರಮಯವಾಗಿ ಸಂಚರಿಸುತಿಪ್ಪವು. ಎನ್ನ ಪೂರಕವೇ 'ಓಂ ಓಂ ಓಂ' ಯೆಂಬ ಪ್ರಣವ ಸ್ವರೂಪವಾಗಿಪ್ಪುದು ನೋಡಾ. ಎನ್ನ ರೇಚಕವೇ `ನಮಃ ಶಿವಾಯ ನಮಃ ಶಿವಾಯ ನಮಃ ಶಿವಾಯ' ಯೆನುತಿಪ್ಪುದು ನೋಡಾ. ಎನ್ನ ಕುಂಭಕವೇ ಪರಶಕ್ತಿಯಮಯವಾಗಿ ಪರಂಜ್ಯೋತಿಸ್ವರೂಪವಾಗಿ ಪರಮಚಿದ್ಭಾಂಡಸ್ಥಾನವಾಗಿಪ್ಪುದು ನೋಡಾ. ಎಂದು ಹೇಳುತ್ತಾ ತೋಂಟದ ಸಿದ್ಧಲಿಂಗಯತಿಗಳು
#ಎನ್ನ ರೇಚಕ ಪೂರಕ ಕುಂಭಕ ಸ್ವರೂಪವಪ್ಪ ಶಿವಮಂತ್ರವೇ ಶಿವಲಿಂಗಸ್ವರೂಪವಾಗಿ ಎನ್ನ ಕರಸ್ಥಲದಲ್ಲಿ ಕರತಾಳಮಳಕವಾಗಿ ಕಾಣಲ್ಪಟ್ಟಿತ್ತು ನೋಡಾ. ಆ ಕರಸ್ಥಲದಲ್ಲಿ ಲಿಂಗವ ಕಂಗಳು ತುಂಬಿ ನೋಡಿ ಮನಮುಟ್ಟಿ ನೆನೆದು ಸಂದಿಲ್ಲದಿಷ್ಟಲಿಂಗದಲ್ಲಿ ಭಾವವಬಲಿದು ಲಿಂಗವನಪ್ಪಿ ಅಗಲದೆ ಆ ಲಿಂಗದಲ್ಲಿ ಸದಾ ಸನ್ನಿಹಿತನಾಗಿರ್ದು ಶಿವಶಿವಾ ಹರಹರಾ ಯೆನುತಿರ್ದೆನಯ್ಯ. ನಿಮ್ಮ ನೆನಹಿನಿಂದ ನಿಮ್ಮುವನೆ ನೆನವುತಿರ್ದೆನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
 ಎಂದು  ಮಂತ್ರದ ತನ್ಮಯತೆಯಲ್ಲಿ ನುಡಿದಿದ್ದಾರೆ 
“ಪಂಚಾಕ್ಷರವೇ ಪಂಚಮುಖವಾಗಿ ಪಂಚೇಂದ್ರಿಯಗಳಾಗಿರ್ಪುವು ನೋಡಾ, ಪ್ರಣವವೇ ಪ್ರಾಣಮೂರ್ತಿಯಾಗಿರ್ಪುದಯ್ಯ
ಇದು ಕಾರಣ ಪರತತ್ವಜ್ಞಾನಮಯವಾಗಿ ಓಂ ನಮಃಶಿವಾಯ ಎಂಬ ಶಿವಷಡಕ್ಷರ ಮಂತ್ರವನೇ ಜಪಿಸಿ ಭವಸಾಗರವನ್ನೇ ದಾಟಿಮುಕ್ತರಾಗಿದ್ದಾರೆ :

#ನಿನ್ನ ನೀ ತಿಳಿದು ನೋಡಿದರೆ ಶಿವಮಯ ಜಗತ್ತು ನೋಡಾ. 
ಓಂಕಾರ ಪ್ರಣಮವೇ ಪ್ರಕೃತಿಯಾಗಿ ನಿಂದಿತ್ತು.
ನಕಾರ ಪ್ರಣಮವೇ ಪೃಥ್ವಿಯಾಗಿ ನಿಂದಿತ್ತು. ಮಕಾರ ಪ್ರಣಮವೇ ಉದಕವಾಗಿ ನಿಂದಿತ್ತು. ಶಿಕಾರ ಪ್ರಣಮವೇ ಅಗ್ನಿಯಾಗಿ ನಿಂದಿತ್ತು. 
ವಕಾರ ಪ್ರಣಮವೇ ವಾಯುವಾಗಿ ನಿಂದಿತ್ತು. 
ಯಕಾರ ಪ್ರಣಮವೇ ಸರ್ವವನ್ನು ಆಚರಿಸುವುದಕ್ಕೆ ಆಕಾಶವಾಗಿ ನಿಂದಿತು.
ನೆನೆನೆನೆದು ಸುಖಿಯಾದೆನು ನೋಡಾ
ಕಪಿಲಸಿದ್ಧ ಮಲ್ಲಿಕಾರ್ಜುನ ಲಿಂಗವೇ
ಎನ್ನುತ್ತಾರೆ ಸಿದ್ಧರಾಮೇಶ್ವರ ಶಿವಯೋಗಿಗಳು.
ಮಂತ್ರದ ಸ್ಥಾನವನ್ನು ಶರಣರು ಬಹಳ ಪರಿಣಾಮಕಾರಿಯಾದ ರೀತಿಯಲ್ಲಿ ಆಚರಿಸಿ ತೋರಿದ್ದಾರೆ. ಧ್ಯಾನದಲ್ಲಿ ಪೂಜೆಯಲ್ಲಿ ಆಚರಣೆಯಲ್ಲಿ ನಿತ್ಯದ ನಡೆಯಲ್ಲಿ, ನಿಂತಲ್ಲಿ ಕುಳಿತಲ್ಲಿ ಎಲ್ಲೆಲ್ಲಿಯೂ ಮತ್ತು ಯಾವಾಗಲೂ ಮಂತ್ರ ಅವರ ಒಳಗು ಹೊರಗುಗಳನ್ನು 
ವ್ಯಾಪಿಸಿರುತ್ತದೆ. ಶರಣರು ಈ ಸರ್ವವ್ಯಾಪಕವಾದ ಪರಿಭಾವನೆಯಿಂದ ಈ ಮಂತ್ರವನ್ನು ಸಾಧನೆಯಲ್ಲಿ ಅಳವಡಿಸಿಕೊಂಡು ಅನುಭಾವದ ನಿಲವಿಗೇರಿದ್ದಾರೆ. 
-✍️ Dr Prema Pangi
#ಪ್ರೇಮಾ_ಪಾಂಗಿ,#ಬಯಲು11,
#ಶಿವಯೋಗ3

Comments

Popular posts from this blog

Shika chakra or Bindu chakra:Bindu visarga

Hrit Chakra or Eight Petals Chakra

A-Ka-Ta triangle or Akshara Brahma