ಅಷ್ಟಾವರಣ - ವಿಭೂತಿ

ಅಷ್ಟಾವರಣ  -  ವಿಭೂತಿ
ಅಷ್ಟಾವರಣ  -  ವಿಭೂತಿ:
ವಿಭೂತಿ ಸಾಧಕನ ಅಷ್ಟಾವರಣಗಳಲ್ಲಿ ನಾಲ್ಕನೆಯದು. ಸಾಧಕ ತನ್ನ ಶಟ್ಸ್ಥಳದ ಸಾಧನೆಯ ಪ್ರತಿ ಹಂತದಲ್ಲಿ, ಪರಂಜೋತಿಯ ಸ್ವರೂಪದ ವಿಭೂತಿ ಧರಿಸಿ ಶಿವನ ಆತ್ಮಾನಂದದ ಅಮೃತ ಪಡೆದು  ಶಿವಾನುಭೂತಿಯನ್ನು ಪಡೆಯುತ್ತಾನೆ. ಅಂತರಂಗದ ಅನುಭವಕ್ಕೆ ಪ್ರೇರಕವಾಗುವಂತೆ, ಅಂತರಂಗ ಪರಿವರ್ತನೆಗೆ ಸಂಕೇತವಾಗಬೇಕೆಂಬ ದೃಷ್ಟಯಿಂದ ವಿಭೂತಿಯನ್ನು ಅಳವಡಿಸಿಕೊಳ್ಳಲಾಗಿದೆ.
ವಿಭೂತಿಯು ಶರೀರದಲ್ಲಿಯ ಶಕ್ತಿಚೇತನವನ್ನು ಸಂವಾಹನ ಮಾಡುವಲ್ಲಿ, ನಿರ್ದೇಶಿಸುವಲ್ಲಿ, ನಿಯಂತ್ರಿಸುವಲ್ಲಿ ನೆರವಾಗುವ ಸಾಮರ್ಥವನ್ನು ಪಡೆದಿದೆ. ವಿಭೂತಿ ಸಾತ್ವಿಕ ಗುಣದ ಪ್ರತೀಕವಾಗಿದೆ. ವಿಭೂತಿ ಭಕ್ತಿ ಮುಕ್ತಿಗೆ ಸಾಧನ ಎನ್ನುತ್ತಾರೆ ಶರಣರು. ಆ "ಮಹಾಪರವಸ್ತುವಿನ ದಿವ್ಯತೇಜದ ಸಂಕೇತ"ವೆಂಬ ಭಾವನೆಯಿಂದ ವಿಭೂತಿಯನ್ನು ಧರಿಸಬೇಕೆನ್ನುತ್ತಾರೆ ಶರಣರು. ಅವರಿಗೆ ಭೂಮಿ ಜಲಾಗ್ನಿ ಮರುತಾಕಾಶ ಇವೆಲ್ಲಾ ಶ್ರೀ ವಿಭೂತಿಮಯವಾಗಿ ತೋರುತ್ತವೆ ; ಮನ ಚಕ್ಷುರಾದಿ ಇಂದ್ರಿಯಗಳೆಲ್ಲವೂ ವಿಭೂತಿಮಯವಾಗಿ ತೋರುತ್ತವೆ : ಚಂದ್ರಾದಿತ್ಯ ಸರ್ವದೇವತಾ ರೂಪವೆಲ್ಲಾ ಶ್ರೀ ವಿಭೂತಿಮಯವಾಗಿ ತೋರುತ್ತವೆ. “ಶಿವ ಶಿವಾ ಈ ಪರಿಯಿಂದ ತೋರಿ ವ್ಯಾಪಕವಾಗಿ ಬೆಳಗುವ ಪರಂಜ್ಯೋತಿ ಸ್ವರೂಪ ಶ್ರೀವಿಭೂತಿ ಎಂದು ಒಲಿದು ಧರಿಸಿದವನೇ ಜೀವನ್ಮುಕ್ತನಯ್ಯ ” ಎಂದು ವಿಶ್ವರೂಪ ಸದೃಶವಾಗಿ ವಿಭೂತಿಯನ್ನು ಕಂಡಿದ್ದಾರೆ ಶರಣರು. 

ಪಂಚ ಗೋಮಯದಿಂದ ಶುದ್ಧ ಸಂಸ್ಕಾರ ಹೊಂದಿದ ವಸ್ತು ವಿಭೂತಿ. ಇಂತಹ ವಿಭೂತಿ ಯನ್ನು ತ್ರಿಪುಂಡವಾಗಿ ಧರಿಸುವ ಪ್ರಕ್ರಿಯೆ ಆದಿಯೋಗಿ ಶಿವನಿಂದ ಪ್ರಾರಂಭಗೊಂಡಿದೆ. ಮೂರು ಬೆರಳುಗಳಿಂದ ಮೂರು ರೇಖೆಗಳು ಮೂಡುವಂತೆ ಧರಿಸುವ ತ್ರಿಪುಂಡ ಧಾರಣ ಕ್ರಮವೇ ಸರ್ವಶ್ರೇಷ್ಠವಾದದ್ದು. ಮನಸ್ಸಿನ ಕಾಮನೆಗಳನ್ನು ಗೆದ್ದು ಪರಿಶುದ್ಧವಾದುದನ್ನು ಅದು ಪ್ರತಿಬಿಂಬಿಸುತ್ತದೆ. 
ಮೊದಲ ಸಾಲು ಅಹಂ ಅನ್ನು ತೆಗೆದು ಹಾಕಿದರೆ ಎರಡನೆ ಸಾಲು ಅಜ್ಞಾನವನ್ನು ತೆಗೆದು ಹಾಕುತ್ತದೆ. ಮೂರನೆ ಸಾಲು ಕೆಟ್ಟ ಕಮ೯ಗಳನ್ನು ತೆಗೆದು ಹಾಕುವುದು 
ಈ ಮೂರು ಪಟ್ಟಿಗಳು ಇಚ್ಛಾ, ಕ್ರಿಯಾ, ಜ್ಞಾನ ಶಕ್ತಿಗಳ ಸಂಕೇತ. ಹಾಗೆಯೇ ಪರಬ್ರಹ್ಮನ ಪ್ರತೀಕವಾಗಿರುವ ‘ಓಂ’ ನ ಸಂಕೇತ ಕೂಡ. ಹಣೆ, ಎದೆ, ತೋಳುಗಳಿಗೆ ವಿಭೂತಿ ಪಟ್ಟೆ ಬಳಿದುಕೊಳ್ಳುವುದರಿಂದ ಶಿವನು ಸಂಪ್ರೀತನಾಗುತ್ತಾನೆ ಎಂಬ ನಂಬಿಕೆ ಇದೆ.

ವಿಭೂತಿಯಲ್ಲಿ ಎರಡು ಪ್ರಕಾರ, ಬಹಿರಂಗ ಅಷ್ಟಾವರಣದಲ್ಲಿ ಸೋಪಾದಿಕ ವಿಭೂತಿ ಮತ್ತು ಅಂತರಂಗ ಅಷ್ಟಾವರಣದಲ್ಲಿ ನಿರುಪಾದಿಕ ವಿಭೂತಿ. 

ಸೋಪಾದಿಕ ವಿಭೂತಿ: 
ಪಂಚ ಗೋಮಯ(ಆಕಳ ಸಗಣಿ)ವನ್ನು ಸುಟ್ಟು ಸೋಸಿ ತಯಾರಿಸಿದ ಪುಡಿಯನ್ನು ಶುದ್ಧ ಸಂಸ್ಕಾರದಿಂದ ಮಂತ್ರದೊಂದಿಗೆ ಗಟ್ಟಿ ಮಾಡಿದ ವಿಭೂತಿಯನ್ನು ಅಂಗದ ಮೇಲೆ ಧರಿಸುತ್ತಾರೆ.
ನಿರುಪಾದಿಕ ವಿಭೂತಿ: ಜ್ಞಾನದ ಅಗ್ನಿಯಲ್ಲಿ ಅರಿಷಡ್ವರ್ಗಗಳನ್ನು ಸುಟ್ಟು, ಚಿತಾಗ್ನಿ (ಚಿತ್ ಅಗ್ನಿ - ಮನ ಲಯಗಳಿಸಿದ ಭಸ್ಮ) ಧರಿಸುವುದು. ಮೂರೆಳೆ ವಿಭೂತಿ "ಸೃಷ್ಟಿ ಸ್ಥಿತಿ ಲಯ"ದ ಸಂಕೇತ. ಮೂರೆಳೆ ವಿಭೂತಿ "ಸತ್ ಚಿತ್ ಆನಂದ"ದ ಸಂಕೇತ. ಮೂರೆಳೆ ವಿಭೂತಿ "ಗುರು ಲಿಂಗ ಜಂಗಮ"ದ ಸಂಕೇತ.
 ತ್ರಿವಿದ ಅಕ್ಷರಗಳ ಸಂಕೇತವಾದ ಮೂರಳೆಯ ಭಸ್ಮವನ್ನು ಧರಿಸುವುದರಿಂದ ಅಜ್ಞಾನ ಅಹಂಕಾರ ನಾಶವಾಗಿ ರಕ್ಷಣೆ ಸಿಗುವುದು.

#ಸಕಲಕ್ರಿಯೆಗಳಿಗಿದು ಕವಚ,
ಸಕಲವಶ್ಯಕ್ಕಿದು ಶುಭತಿಲಕ,
ಸಕಲಸಂಪದಕ್ಕೆ ತಾಣವಿದು,
ಅಘಟಿತ ಘಟಿತವೆನಿಸುವ ಅನುಪಮ ತ್ರಿಪುಂಡ್ರ.
ಅಣುಮಾತ್ರ ವಿಭೂತಿಯ ಪಣಿಯೊಳಿಡೆ
ಎಣಿಕೆಯಿಲ್ಲದ ಭವಪಾಶ ಪರಿವುದು.
ತ್ರಿಣಯ ನೀನೊಲಿದು ಧರಿಸಿದೆಯೆಂದೆನೆ,
ಆನು ಧರಿಸಿ ಬದುಕಿದೆ ಕೂಡಲಸಂಗಯ್ಯಾ. / 1239
- ಗುರು ಬಸವಣ್ಣನವರು
ಅರ್ಥ :
  ತ್ರಿಪುಂಡ  ವಿಭೂತಿ ಧರಿಸಲು ಅದು ಎಲ್ಲ ಕಾರ್ಯಗಳಿಗೆ ರಕ್ಷಣಾ ಕವಚವಾಗುವುದು ಎನ್ನುತ್ತಾರೆ ಗುರುಬಸವಣ್ಣನವರು. ವಿಭೂತಿ ಧರಿಸಲು, ಎಲ್ಲ ಸಾದಿಸುವ ಕ್ರಿಯೆಗೆ  ಶುಭತಿಲಕವಾಗುವುದು. ವಿಭೂತಿ ಧರಿಸಲು ನಾವು ಒಳ್ಳೆಗುಣ ಮತ್ತು ಸಕಲ ಸಂಪತ್ತು ಸಂಪಾದಿಸಲು ಸಾಧ್ಯ. ನಾವು ಧರಿಸುವ ವಿಭೂತಿಯು ಸಾದಿಸಲಾರದನ್ನು ಸಾಧಿಸುವಂತೆ ಮಾಡುವುದು. ಮುಂದೆ ಘಟಿಸುವ ಕೆಟ್ಟದನ್ನು ಸರಿಸಿ ಒಳ್ಳೆಯದನ್ನು ಮಾಡುವುದು. ತ್ರಿಪುಂಡ ವಿಭೂತಿ ಅನುಪಮವಾಗಿದೆ. ನಮ್ಮಲಿರುವ ದುರ್ಗುಣಗಳನ್ನು ನಾಶಮಾಡಿ ಸದ್ಗುಣಗಳನ್ನು ಮೂಡಿಸುತ್ತದೆ.  ಅಣು ಮಾತ್ರದಷ್ಟು ವಿಭೂತಿಯ ಹಣೆಯ ಮೇಲೆ ಇಡಲು ಈ  ಸಂಸಾರದ ಬಂಧನ  ಹರಿಯುವುದು. ತ್ರಿನೇತ್ರನೇ,  ನೀನು ಪ್ರೀತಿಯಿಂದ ವಿಭೂತಿ ಧರಿಸಿದರೆ ನಾನು ವಿಭೂತಿ ಧರಿಸಿ ಬದುಕುವೆ  ಎಂದು ಬಸವಣ್ಣನವರು ತಮ್ಮ ಇಷ್ಟ ದೇವರಾದ ಕೂಡಲ ಸಂಗಮದೇವನಿಗೆ (ಶಿವನಿಗೆ) ನಿವೇದನೆ ಮಾಡುತ್ತಾರೆ.

#ನೀರಿಂಗೆ ನೈದಿಲೆಯೆ ಶೃಂಗಾರ,
ಸಮುದ್ರಕ್ಕೆ ತೆರೆಯೆ ಶೃಂಗಾರ,
ನಾರಿಗೆ ಗುಣವೆ ಶೃಂಗಾರ,
ಗಗನಕ್ಕೆ ಚಂದ್ರಮನೆ ಶೃಂಗಾರ,
ನಮ್ಮ ಕೂಡಲಸಂಗನ ಶರಣರಿಗೆ
ನೊಸಲ ವಿಭೂತಿಯೆ ಶೃಂಗಾರ. / 841
- ಗುರು ಬಸವಣ್ಣನವರು
ಅರ್ಥ:
ಸುಂದರವಾದ ಸರೋವರಕ್ಕೆ ಅಲ್ಲಲ್ಲಿ ಬಣ್ಣದ ಅಲಂಕಾರವಾಗಿ ತೋರುವ ಶುಭ್ರವಾದ ನೈದಿಲೆ ಹೂಗಳು( ಬಿಳಿಯ ಕಮಲದ ಹೂಗಳು,Nymphaea nouchali flowers) ಅದರ ಸೌಂದರ್ಯವನ್ನು ಹೆಚ್ಚಿಸುತ್ತವೆ. ಹೀಗೆ ನೈದಿಲೆ ನೀರಿಗೆ ಶೃಂಗಾರ.
ಸಮುದ್ರ ನಿತ್ಯ ನೂತನವಾಗಿ ಅತಿ ಆಕರ್ಷಕವಾಗಿ ಕಾಣುವುದು ದಡಕ್ಕೆ ಬಂದು ಅಪ್ಪಳಿಸಿ ತಿರುಗುವ ಅಲೆಗಳಿಂದ. ಹೀಗೆ ಅಲೆಗಳೇ ಸಮುದ್ರಕ್ಕೆ ಶೃಂಗಾರ.
ಹೆಣ್ಣಿಗೆ ಬಾಹ್ಯ ಸೌಂದರ್ಯಕ್ಕಿಂತ  ಆಂತರಿಕ ಸೌಂದರ್ಯವಾದ  ಒಳ್ಳೆಯ ಗುಣ ಮತ್ತು ವ್ಯಕ್ತಿತ್ವವೇ ಶೃಂಗಾರ' ಎಂದು ಹೇಳಿದ್ದಾರೆ.
ರಾತ್ರಿ ನೀಲಾಕಾಶಕ್ಕೆ ಬೆಳದಿಂಗಳ ಚೈತನ್ಯವನ್ನು ನೀಡುವವನು ಚಂದ್ರಮನು. ಹೀಗೆ ಗಗನಕ್ಕೆ ಚಂದ್ರಮನೇ ಶೃಂಗಾರ. ಪ್ರಕೃತಿಯ ಸಾದೃಶ್ಯಗಳನ್ನು ಸುಂದರ ರೂಪಕ ಗಳಾಗಿ ಹೇಳುತ್ತಾ ಗುರು ಬಸವಣ್ಣನವರು, ನಮ್ಮ ಶರಣರಿಗೆ ನೊಸಲ ವಿಭೂತಿಯೇ ಶೃಂಗಾರ ಎಂದು ನಿತ್ಯ ವಿಭೂತಿ ಧರಿಸಲು ತಿಳಿಸಿದ್ದಾರೆ.
ವಿಭೂತಿಯ ಶೃಂಗಾರ ಕೇವಲ ಬಾಹ್ಯ ಅಲಂಕಾರವಲ್ಲ, ಅದರ ಜೊತೆಗೆ ಅದಕ್ಕಿಂತ ಹೆಚ್ಚಾಗಿ ಅಂತರಂಗದಲ್ಲಿಯ ಸದ್ಗುಣಗಳನ್ನು ಅರಳಿಸಿ ಮಾನಸಿಕ ವಿಕಾಸಕ್ಕೆ ಕಾರಣವಾಗುತ್ತದೆ. 

ಗುರು ಬಸವಣ್ಣನವರು ವಿಭೂತಿ ಧರಿಸದವರ ಮುಖ ನೋಡಲಾಗದು ಎನ್ನುವರು.
#ಅಡ್ಡ ವಿಭೂತಿಯಿಲ್ಲದವರ ಮುಖ ಹೊಲ್ಲ, ನೋಡಲಾಗದು
ಲಿಂಗ ದೇವರಿಲ್ಲದ ಠಾವು ನರವಿಂಧ್ಯ, ಹೋಗಲಾಗದು
ದೇವಭಕ್ತರಿಲ್ಲದೂರುಸಿನೆ, ಹಾಳು ಕೂಡಲ ಸಂಗಮದೇವಾ./
ಶಿವನ ಪವಿತ್ರತೆಯ ಸಂಕೇತವಾದ ಚಿದ್ರೂಪಭಸ್ಮ, ದೇಹಕ್ಕೆ ಸಂಸ್ಕಾರವನ್ನಿತ್ತು ಪರಿಶುದ್ಧಗೊಳಿಸುವುದಲ್ಲದೆ ಆಂತರಂಗಿಕ ವಿಕಾಸದ ಸಾಧನೆಗೂ ಕಾರಣವಾಗಬೇಕು.
ಮನಸ್ಸಿನ ಕಾಮನೆಗಳನ್ನು ಗೆದ್ದು ಪರಿಶುದ್ಧವಾದುದನ್ನು ಅದು ಪ್ರತಿಬಿಂಬಿಸುತ್ತದೆ.
ಅದೇ ರೀತಿ ಅವಿರಳ ಜ್ಞಾನಿ ಚೆನ್ನಬಸವಣ್ಣನವರು ವಿಭೂತಿಯ ಮಹತ್ವ  ಈ ರೀತಿ ತಿಳಿಸಿದ್ದಾರೆ.                      
#ಅಯ್ಯಾ ಎನಗೆ ವಿಭೂತಿಯೆ ಕುಲದೈವ;
ಅಯ್ಯಾ ಎನಗೆ ವಿಭೂತಿಯೆ ಮನೆದೈವ;
ಅಯ್ಯಾ ಎನಗೆ ವಿಭೂತಿಯೆ ಸರ್ವಕಾರಣ;
ಅಯ್ಯಾ ಎನಗೆ ವಿಭೂತಿಯೆ ಸರ್ವಸಿದ್ಧಿ;
ಅಯ್ಯಾ ಎನಗೆ ವಿಭೂತಿಯೆ ಸರ್ವವಶ್ಯ;
ಅಯ್ಯಾ ಕೂಡಲಚೆನ್ನಸಂಗಮದೇವಾ
ಶ್ರೀಮಹಾಭೂತಿಯೆಂಬ ಪರಂಜ್ಯೋತಿ ನೀವಾದಿರಾಗಿ, ಎನಗೆ ವಿಭೂತಿಯೆ ಸರ್ವಸಾಧನ/ಎನ್ನುತ್ತಾರೆ.

#ಪಂಚಬ್ರಹ್ಮದಿಂದುದಯವಾದ 
ನಂದೆ ಭದ್ರೆ ಸುರಭಿ, ಸುಶೀಲ ಸುಮನೆ-ಎಂಬ ಪಂಚಗೋವಿನಿಂದಾದ ವಿಭೂತಿ ಭಸಿತ ಭಸ್ಮ ಕ್ಷರೆ ರಕ್ಷ ಎಂಬ ಪಂಚ ನಾಮವಾಯಿತ್ತು, ಅದೆಂತೆಂದೊಡೆ ಶಿವಜ್ಞಾನ ಸುಖದ ಮಹದೈಶ್ವರ್ಯ ಸ್ವರೂಪಿನಿಂಭೂತಿಯಾಯಿತ್ತು, ಸಕಲಕಾಂಕ್ಷೆಗಳ ಬಯಕೆಯಂ ಸುಟ್ಟ ನಿಃಕಾಮರೂಪಿನಿಂ ಭಸಿತವಾಯಿತ್ತು, ಪೂರ್ವಕರ್ಮವನುರುಪಿ 
ನಿಃಕರ್ಮರೂಪಿನಿಂ ಭಸ್ಮವಾಯಿತ್ತು. ಮಲಮಾಯೆಯ ಕಳೆವುದರಿಂ ಕ್ಷರೆಯಾಯಿತ್ತು. ಭೂತ ಪ್ರೇತ ಪಿಶಾಚ ರಾಕ್ಷಸಂಗಳ ಹೊದ್ದಲೀಯದಿಪ್ಪುದರಿಂ ರಕ್ಷೆಯಾಯಿತ್ತು. ಇಂತಪ್ಪ ವಿಭೂತಿಯ ಮಹಾತ್ಮೆಯನರಿದು ನೀನೊಲಿದ ವಿಭೂತಿಯ ನಾನು ಧರಿಸಿ ಬದುಕಿದೆನು ಕಾಣಾ ಸೌರಾಷ್ಟ್ರ ಸೋಮೇಶ್ವರಾ/ಎನ್ನುತ್ತಾರೆ ಆದಯ್ಯ ಶರಣರು. “ದುರುಳ ಮಾರಿಯ ಹುರುಳುಗೆಡಿಸಿ ಅಂತಕನ ಹಲ್ಲು ಕಿತ್ತು ವಿಧಿಲಿಖಿತವ ತೊಡೆವುದು ವಿಭೂತಿ, ಶಿವಲಿಖಿತವ ಲಿಖಿಸುವುದು”-ಎಂದು ಮುಂತಾಗಿ ಇದರ ಮಹಿಮೆಯನ್ನು ವರ್ಣಿಸಿದ್ದಾರೆ.
ವಿಭೂತಿ, ಬಸಿತ, ಭಸ್ಮ, ಕ್ಷಾರ ಮತ್ತು ರಕ್ಷಾ ಎಂಬ ಐದು ಹೆಸರುಗಳಿದ್ದು ;
ವಿಭೂತಿ ಅಷ್ಟೆಶ್ವರ್ಯಗಳನ್ನು ನೀಡಿದರೆ, ಬಸಿತವು ತತ್ವವನ್ನು ತಿಳಿಸಿ ಶಿವನ ಸ್ವರೂಪವನ್ನು ಪ್ರಕಾಶಗೊಳಿಸುತ್ತದೆ.
“ಶ್ರೀ ವಿಭೂತಿ ಪರಶಿವನ ಪರಮ ಚೈತನ್ಯ ಚಿತ್ ಸ್ವರೂಪು ನೋಡಾ”ಎನ್ನುತ್ತಾರೆ ಶರಣರು. ಭಸ್ಮವು ನಮ್ಮ ಪಾಪಗಳನ್ನು ನಾಶ ಮಾಡಿದರೆ, ಕ್ಷಾರವು ವಿಪತ್ತುಗಳನ್ನು ಕ್ಷಯಗೊಳಿಸಿ ಆಪತ್ಭಾಂದವನಾಗಿರುತ್ತದೆ. ರಕ್ಷಾ ನಮಗೆ ರಕ್ಷೆಯನ್ನು ನೀಡುತ್ತದೆ. 

ವಿಭೂತಿ ಧರಿಸುವ ಸ್ಥಳಗಳು ಮತ್ತು ಕ್ರಮ:
ನಿರ್ದಿಷ್ಟ ಬಿಂದುಗಳ ಮೇಲೆ ವಿಭೂತಿಯನ್ನು ಧರಿಸಿದಾಗ ಅವುಗಳ ಸಂವೇದನಾಶಕ್ತಿಯು ವೃದ್ಧಿಯಾಗುತ್ತದೆ. ಸುತ್ತಲೂ ಇರುವ ದೈವೀಶಕ್ತಿ ಸ್ವೀಕೃತವಾಗಿ ಗ್ರಹಣಶಕ್ತಿ ತೀವ್ರವಾಗುತ್ತದೆ. 
ಮನಸ್ಸು ಉನ್ನತ ಸ್ವಭಾವದೆಡೆಗೆ ಸಾಗುತ್ತದೆ. ಲಿಂಗಭಕ್ತರು ಎಂಟು ಕಡೆಗಳಲ್ಲಿ:
ಮಸ್ತಕ, ಲಲಾಟ, ಗ್ರೀವ, ಎರಡು ಬಾಹುಗಳು, ಹೃದಯ, ನಾಭಿ, ಪ್ರಷ್ಟ ಈ  ವಿಭೂತಿಯನ್ನು ಧರಿಸಬೇಕು. 
ಉಪಾಧಿಭಕ್ತರು ಹದಿನಾರು ಕಡೆಗಳಲ್ಲಿ: ಶಿರಸ್ಸು, ಭಾಳ, ಕರ್ಣಯುಗ್ಮ, ಓಷ್ಣದ್ವಯ, ಕಂಠ, ಬಾಹುಯುಗ, ಭುಜಯುಗ, ಮಣಿಬಂಧದ್ವಯ, ಹೃದಯ ಅಪರನಾಭಿ, 
ನಿರುಪಾಧಿಭಕ್ತರು ಮೂವತ್ತೆರಡು ಕಡೆಗಳಲ್ಲಿ: ಮೂರ್ಧ್ನ, ಲಲಾಟ, ಕರ್ಣದ್ವಯ,ನೇತ್ರದ್ವಯ ಗಳಿಂದ ಹಿಡಿದು ಪಾದದ್ವಯಗಳವರೆಗೆ ಧರಿಸಬೇಕು. ಚನ್ನಬಸವಣ್ಣನವರ ವಚನಗಳಲ್ಲಿ ಮಂತ್ರ ಸಹಿತವಾಗಿ ಧರಿಸುವ ಕ್ರಮ ವಿವೇಚಿಸಿದ್ದಾರೆ. 
ವಿಭೂತಿ ಧಾರಣೆಯು ಅಧ್ಯಾತ್ಮಿಕ  ಬೆಳವಣಿಗೆಯ ಒಂದು ಸಾಧನವೆಂದು ಭಾವಿಸಲಾಗಿದೆ. ಯುಕ್ತರೀತಿಯಲ್ಲಿ ಸಿದ್ಧಪಡಿಸಿದ ಪವಿತ್ರ ವಿಭೂತಿ ಬೇರೆ ರೀತಿಯ ಕಂಪನವನ್ನು ಹೊಂದಿರುತ್ತದೆ. 
ಅನಾಹತ ಚಕ್ರದ ಮೇಲೆ ಧಾರಣೆ ಮಾಡಿದರೆ ವಿಶ್ವ ಚೇತನ ಪ್ರೀತಿಯಾಗಿ, ವಿಶುದ್ಧಿ ಚಕ್ರದ ಮೇಲೆ ಧಾರಣೆ ಮಾಡಿದರೆ ವಿಶ್ವ ಚೇತನ  ಶಕ್ತಿಯಾಗಿ,  ಆಜ್ಞಾ ಚಕ್ರದ ಮೇಲೆ ಧಾರಣೆ ಮಾಡಿದರೆ ವಿಶ್ವ ಚೇತನ ಜ್ಞಾನವಾಗಿ ಸ್ವೀಕೃತ ವಾಗುವುದು. ಪ್ರಾಣಶಕ್ತಿ  ಹೆಚ್ಚು ಬಲ ಮತ್ತು ಸಾಮರ್ಥ್ಯವಾಗಿ  ಸುತ್ತಮುತ್ತಲಿನ ಸನ್ನಿವೇಶ, ಬದುಕಿನ ಮೇಲೆ ಶರಣನ ಉಪಸ್ಥಿತಿಯು ಪ್ರಭಾವವನ್ನು ಬೀರುತ್ತದೆ. ಇದರ ಹಿಂದಿರುವ ವಿಜ್ಞಾನವನ್ನು ಪುನಶ್ಚೇತನಗೊಳಿಸಿ ಅದರ ಉಪಯೋಗವನ್ನು ಪಡೆದುಕೊಳ್ಳುವ ಅಗತ್ಯವಿದೆ.
ಶಿವಯೋಗ ಮಂದಿರ, ಬಾದಾಮಿಯಲ್ಲಿ ವಿಭೂತಿ ತಯಾರಿಕಾ ಕೇಂದ್ರದಲ್ಲಿ  ವಿಭೂತಿ ಶಾಸ್ತ್ರೋಕ್ತ ವಾಗಿ ಮಾಡಿರುವುದರಿಂದ ಅವು ಬಹಳ ಪ್ರಸಿದ್ಧಿಯಾಗಿವೆ.
ಮುಂಚೆ ವಿಭೂತಿಯನ್ನು ದೇಸಿ ಹಸುವಿನ ಗೋಮಯ(ಸಗಣಿ), ಗೋಮೂತ್ರ ಉಪಯೋಗಿಸಿ ಮನೆಯಲ್ಲೇ ತಯಾರಿಸುತ್ತಿದ್ದರು. ಈ ವಿಭೂತಿ ಉಂಡೆಗಳು ಬಹಳ ದಿನಗಳವರೆಗೂ ಬಾಳಿಕೆ ಬರುತ್ತವೆ. 
ವಿಭೂತಿಯ ಮಹತ್ವ:
-ಆಯುರ್ವೇದದಲ್ಲಿ ವಿಭೂತಿಗೆ ವಿಶೇಷ ಮಹತ್ವವಿದೆ.
- ವಿಭೂತಿ  ಧರಿಸಲು ಹೆಣ್ಣು-ಗಂಡು ಎಂಬ ಲಿಂಗ ಬೇದವಿಲ್ಲ, ಜಾತಿ ಬೇದವಿಲ್ಲ, ವರ್ಗ  ಬೇದವಿಲ್ಲ, ಸನ್ಯಾಸಿ-ಸಂಸಾರಿ, ಆಶ್ರಮ ಬೇದವಿಲ್ಲ.
- ನಿತ್ಯ ಎಲ್ಲ ಕಾಲದಲ್ಲಿಯೂ ಧರಿಸಬಹುದು.
- ಸಾತ್ವಿಕ ಕಳೆ ವೃದ್ದಿಯಾಗುಲು (ಕಾಯವು ಮಂತ್ರ ಪಿಂಡವಾಗುತ್ತದೆ.)
- ಪ್ರಸಾದಿಕರಿಸುವದು : ಹೊಸ ವಸ್ತುಗಳನ್ನು ಉಪಯೋಗಿಸುವ ಮೊದಲು.
- ವಿಭೂತಿಯದಾರಣದಿಂದ ದುಷ್ಟಶಕ್ತಿಗಳ    ಕಾಟದಿಂದ  ತಪ್ಪಿಸಿಕೂಳ್ಳುಬಹುದು.
- ವಿಭೂತಿ ದಾರಣದ ಮುಖ ನೋಡಿದವರಿಗೆ  ಶುಭಕರ ಚಿನ್ಹೆ.
- ವಿಭೂತಿಯಲ್ಲಿ  ರೋಗನಿವಾರಣ ಶಕ್ತಿ ಇರುತ್ತದೆ 
-ಮುಖದಲ್ಲಿ ಚಿತ್ಕಳೆ, ಸಾತ್ವಿಕತೆ ವೃದ್ಧಿ ಯಾಗುವದು.
 - ಧಾರಣದಿಂದ ಮನಸ್ಸು ಶಾಂತಿಯ ಕಡೆ ವಾಲುತ್ತದೆ.
 - ಇದು ಬಾಹ್ಯ ಶರೀರದ ರಕ್ಷಕ ಹಾಗೂ 
ಆಧ್ಯಾತ್ಮ ವಿಕಾಸಕ್ಕೆ ಅನುಕೂಲ.
- ದುರ್ಗುಣ ಸುಟ್ಟು , ಜ್ಞಾನನೇತ್ರ ಪಡೆಯಲು ಬೇಕು.
- ಬರಿ ಪೂಜಾ ಸಾದನೆಯಾಗದೇ, ಭಕ್ತಿಗೆ ಮುಕ್ತಿಗೆ ಸಾಧನ.
 - ಮಲತ್ರಯ (ಕಾಮಿ೯ಕ, ಮಾಯ, ಅಣವ) ಗಳು ಕಳೆಯುತ್ತವೆ .
- ಅರಿವು, ಆಚಾರ, ಅನುಭಾವ ಅಳವಡುವದು.
-  ಗೌರವ ಭಾವನೆ ತಂದುಕೊಡುತ್ತದೆ.
-  ಅರಿಷಡ್ವರ್ಗಗಳನ್ನು ಸುಟ್ಟು ದೈವತ್ವವನ್ನು ತಂದುಕೊಡುತ್ತದೆ.
- ಇದು ಬಹಿರಂಗದ ಆಚರಣೆಯಾದರೂ ಅಂತರಂಗದಲ್ಲಿ  ಅಗೋಚರವಾಗಿರುವ ದಿವ್ಯ ಪ್ರಭೆಗಳನ್ನು ಬಹಿರಂಗವಾಗಿಸುತ್ತದೆ.
- ಶಿವನ ಆರಾಧನಾ ಅಂಶವಾದ ವಿಭೂತಿಯಿಂದ ಆಧ್ಯಾತ್ಮದ ಶಕ್ತಿ ಲಭಿಸುತ್ತದೆ. ಅನಾರೋಗ್ಯ  ನಕಾರಾತ್ಮಕ ಶಕ್ತಿಗಳಿಂದ  ರಕ್ಷಣೆ  ನೀಡುತ್ತದೆ. ಆರೊಗ್ಯವನ್ನು ಗುಣಪಡಿಸುವ  ಶಕ್ತಿಯಿದೆ. ವಿಭೂತಿ ಧಾರಣೆಯ ಹಿಂದಿರುವ ವಿಜ್ಞಾನವನ್ನು ಅರಿತು ಸರಿಯಾಗಿ ಉಪಯೋಗಿಸಿ ಅದರ ಉಪಯೋಗವನ್ನು ಪಡೆದುಕೊಳ್ಳುವ ಅಗತ್ಯವಿದೆ.
- ✍️Dr Prema Pangi
#ಪ್ರೇಮಾ_ಪಾಂಗಿ,#ಅಷ್ಟಾವರಣ,#ವಿಭೂತಿ
Picture post designed and created by me. Hope you all will like it. A small service to popularise Vachana Sahitya.

Comments

Popular posts from this blog

Shika chakra or Bindu chakra:Bindu visarga

Hrit Chakra or Eight Petals Chakra

A-Ka-Ta triangle or Akshara Brahma