ವಚನ ದಾಸೋಹ
ಊರ ಒಳಗಣ ಬಯಲು,
ಊರ ಹೊರಗಣ ಬಯಲೆಂದುಂಟೆ?
ಊರೊಳಗೆ ಬ್ರಾಹ್ಮಣಬಯಲು
ಊರ ಹೊರಗೆ ಹೊಲೆಬಯಲೆಂದುಂಟೆ?
ಎಲ್ಲಿ ನೋಡಿದಡೆ ಬಯಲೊಂದೆ.
ಭಿತ್ತಿಯಿಂದ ಒಳಹೊರಗೆಂಬ ನಾಮವೈಸೆ.
ಎಲ್ಲಿ ನೋಡಿದಡೆ ಕರೆದಡೆ ಓ ಎಂಬಾತ ಬಿಡಾಡಿ ./1094
-- ಶರಣೆ ಬೊಂತಾದೇವಿ
ಅರ್ಥ:
ಬಯಲು ದೇವರ ಸ್ವರೂಪವೂ ಹೌದು, ಅನಾದಿ (ವಿಶ್ವದ ರಚನೆಗಿಂತ ಮೊದಲಿನ) ಸ್ವರೂಪವೂ ಹೌದು ಹಾಗೂ ಭೌತಿಕ ಸ್ವರೂಪವೂ (space) ಹೌದು.
‘ಬಯಲು’ ಎಂಬುದು ಎಲ್ಲೆಲ್ಲಿಯೂ ಒಂದೇ ಆಗಿದ್ದು , ‘ಒಳಗಣ ಬಯಲು’ ಮತ್ತು ‘ಹೊರಗಣ ಬಯಲು’ ಎಂದು ಎರಡಾಗಿರಲು ಸಾಧ್ಯವಿಲ್ಲ. 'ಬಯಲು' ಕಾಣಲಿಕ್ಕೆ ಹೊರಗೆ ಭಿತ್ತಿಯಿಂದ (ರೂಪದಿಂದ) ಹಾಗೆ ತೋರಿದರೂ ಅದು ಸರ್ವತ್ರವೂ ಸಮಗ್ರವಾಗಿದೆ. ಮೇಲ್ವರ್ಗದವರ ಊರ ಒಳಗಣ ಬಯಲು ಕೆಳವರ್ಗದವರ ಊರ ಹೊರಗಣ ಬಯಲು ಅಂತ ಬೇರೆ ಇಲ್ಲ.
ಊರ ‘ಒಳಗಣ ಬಯಲು’ ಮತ್ತು ಊರ ‘ಹೊರಗಣ ಬಯಲು’ ಎಲ್ಲಿಯೆ ನಿಂತು ಕರೆದರೂ ಓ ಎಂಬಾತನೆ ಯಾವ ನಿರ್ಬಂಧಕ್ಕೊಳಗಾಗದ, ಕಟ್ಟುಪಾಡುಗಳಿಗೆ ಒಳಗಾಗದ , “ಸರ್ವತಂತ್ರ ಸ್ವತಂತ್ರ ಬಿಡಾಡಿ ಎಂಬ ಶಿವ ಒಬ್ಬನೇ. ಶಿವನಲ್ಲಿ ಜಾತಿ, ಕುಲ ಭೇದವಿಲ್ಲ.
ಭಿತ್ತಿ (ರೂಪ) ಮಾತ್ರದಿಂದ ಬಯಲಿನಲ್ಲಿ ಒಳಗೆ ಹೊರಗೆಂಬ ಅಂತರ ಉಂಟಾಗುವಂತೆ, ಮಾನವ ತನ್ನ ಕಲ್ಪನೆಯ ಭಿತ್ತಿಯಿಂದ ಮೇಲು ಕೀಳೆಂಬ ಜಾತಿಯ ಕೃತ್ರಿಮತೆಯನ್ನುಂಟು ಮಾಡಿಕೊಂಡಿದ್ದಾನೆ. ಅನಂತವಾದ ಬಯಲೊಂದೇ ಇರುವಂತೆ ಸರ್ವವ್ಯಾಪಿ ದೇವನೊಬ್ಬನೇ; ಕುಲವೊಂದೇ ಎಂಬ ಭಾವನೆಯನ್ನು ವಚನಗಳ ಮೂಲಕ ವ್ಯಕ್ತಪಡಿಸಿದ್ದಾರೆ.
ಸೃಷ್ಟಿ ಸ್ಥಿತಿ ಲಯ ಗಳ ಕಾರಣಿಕರ್ತನಾದ ನಿರಾಕಾರ ನಿರ್ಗುಣ ನಿರ್ಮಾಯ ನಿರಂಜನ ಜಾತಿ ಮತ ಕುಲ ಬೇಧವಿಲ್ಲದ ಶಿವನೇ ಬಯಲು.
ದೇವರ ಸ್ವರೂಪ, ಅನಂತತೆಯನ್ನು ತಿಳಿಸಿ, ಊರ ಒಳಗೆ ಊರ ಹೊರಗೆ, ಸರ್ವ ಜನಾಂಗ, ಸಕಲ ಚರಾಚರ ಜೀವಿಗಳನ್ನು, ಸಂಪೂರ್ಣ ವಿಶ್ವವನ್ನೇ ಆವರಿಸಿದ ದೇವರ ಸರ್ವಾಂತರ್ಯಾಮಿತ್ವವನ್ನು ವರ್ಣಿಸಿದ್ದಾರೆ.. ಜೊತೆಗೆ ಅಧ್ಯಾತ್ಮಿಕ ಸಾಧನೆ, ಸಮತಾಭಾವ ಮತ್ತು ಸಾಮಾಜಿಕ ಕಳಕಳಿ ವ್ಯಕ್ತವಾಗಿದೆ.
ಬಯಲೊಳಗೆ ಬಯಲಾಗುವ ಬಸವಾದಿ ಶರಣರ ಪರಿಯನ್ನು ಅನುಭಾವಿಸಲು ಅರಸುತ್ತಾ ಬಂದ ಬೊಂತಾದೇವಿಯವರು ಬಯಲನ್ನು ಕಂಡುಕೊಂಡು ಬಯಲಾದ ಮಹಾವಿರಾಗಿಣಿ.
Meaning:
God has not made separate space for upper and lower castes.There is no separate or different Shiva for upper and lower castes. He is everywhere and roams free everywhere and he will come to you irrespective of from where you call him.
- ✍️ Dr Prema Pangi
#ಪ್ರೇಮಾ_ಪಾಂಗಿ, #ಬೊಂತಾದೇವಿ
#ಊರ ಒಳಗಣ ಬಯಲು
Comments
Post a Comment