ವಚನ ದಾಸೋಹ : ಬಟ್ಟೆಗೊಂಡು ಹೋಗುತಿಪ್ಪ ಮನುಜನೊಬ್ಬ

ವಚನ ದಾಸೋಹ : ಬಟ್ಟೆಗೊಂಡು ಹೋಗುತಿಪ್ಪ ಮನುಜನೊಬ್ಬ

ವಚನ :
#ಬಟ್ಟೆಗೊಂಡು ಹೋಗುತಿಪ್ಪ ಮನುಜನೊಬ್ಬ
ಹುಲಿ ಕಾಡುಗಿಚ್ಚು ರಕ್ಕಸಿ ಕಾಡಾನೆಗಳು
ನಾಲ್ಕೂ ದೆಸೆಯಲಟ್ಟುತ ಬರೆ
ಕಂಡು ಭಯದಿಂದ ಹೋಗ ದೆಸೆಯಿಲ್ಲದೆ
ಬಾವಿಯ ಕಂಡು ತಲೆಯನೂರಿ ಬೀಳುವಲ್ಲಿ
ಹಾವ ಕಂಡು ಇಲಿಗಡಿದ ಬಳ್ಳಿಯ ಹಿಡಿದು ನಿಲೆ
ಜೇನುಹುಳು ಮೈಯನೂರುವಾಗ
ಮೂಗಿನ ತುದಿಯಲೊಂದು ಹನಿ ಮಧು ಬಂದು ಬೀಳೆ
ಆ ಮಧುವ ಕಂಡು ಹಿರಿದಪ್ಪ ದುಃಖವೆಲ್ಲವೆಲ್ಲವ ಸೈರಿಸಿ
ನಾಲಗೆಯ ತುದಿಯಲ್ಲಿ ಆ ಮಧುವ ಸೇವಿಸುವಂತೆ
ಈ ಸಂಸಾರಸುಖ ವಿಚಾರಿಸಿ ನೋಡಿದಡೆ ದುಃಖದಾಗರ
ಇದನರಿದು ಸಕಲ ವಿಷಯಂಗಳಲ್ಲಿ ಸುಖವಿಂತುಟೆಂದು
ನಿರ್ವಿಷಯನಾಗಿ ನಿಂದ ನಿಲವು ನೀನೇ,
ಸಿಮ್ಮಲಿಗೆಯ ಚೆನ್ನರಾಮಾ. / 102
- ಶರಣ ಚಂದಿಮರಸ
*Translation*:
A man going on his way,
Was chased by a tiger, forest flame, demon and elephants
from all the four directions.
Full of fear, no where to go,
jumped into a well head down.
Saw a snake,
and hung on to a creeper that was being gnawed by a rat.
Suddenly bees began to sting
and a drop of honey fell on the edge of his nose.
And tasting it he forgot all the great travails
and enjoyed its taste.
Similarly, the pleasures of the world,
if you think about it,
are nothing but an ocean of sorrow.
Knowing this, knowing the limitations of pleasures
if you stand without pleasure of sensual things,
You are Simmaligeya Chennaraama. 
- Sharana Chandimarasa
ಅರ್ಥ:
 ಒಂದು ಸುಂದರವಾದ ಶಬ್ದ ಚಿತ್ರಣ ವನ್ನು ಬಿಡಿಸಿದ್ದಾರೆ ಶರಣ ಚಂದಿಮರಸರು.
ಇದು ಸಂಸಾರಹೇಯಸ್ಥಲದ ವಚನ.
ಹೃದಯದ ಕಲಂಕವನ್ನು ಕಳೆದುಕೊಂಡು ನಿತ್ಯಾನಿತ್ಯ ವಿವೇಕಿಯಾದ ಜೀವಿಗೆ ಶುಭವಾಸನಾ ಬಲದಿಂದ ಸಂಸಾರದಲ್ಲಿ ಹೇಯಬುದ್ಧಿಯು ಉಂಟಾಗುತ್ತದೆ.
ಚಂದಿಮರಸರ ವಚನ ಅರ್ಥಗರ್ಭಿತವಾಗಿದೆ. 

*ಬಟ್ಟೆಗೊಂಡು ಹೋಗುತಿಪ್ಪ ಮನುಜನೊಬ್ಬ
ಹುಲಿ ಕಾಡುಗಿಚ್ಚು ರಕ್ಕಸಿ ಕಾಡಾನೆಗಳು
ನಾಲ್ಕೂ ದೆಸೆಯಲಟ್ಟುತ ಬರೆ
ಕಂಡು ಭಯದಿಂದ ಹೋಗ ದೆಸೆಯಿಲ್ಲದೆ
ಬಾವಿಯ ಕಂಡು ತಲೆಯನೂರಿ ಬೀಳುವಲ್ಲಿ
ಹಾವ ಕಂಡು ಇಲಿಗಡಿದ ಬಳ್ಳಿಯ ಹಿಡಿದು ನಿಲೆ*

ಜೀವನು ಈ ಪ್ರಪಂಚದಲ್ಲಿ ಒಬ್ಬ ದಾರಿಕಾರ . ಈ ಸಂಸಾರವೆಂಬ ದಟ್ಟವಾದ ಕಾಡಿನ ಹಾದಿಯಲ್ಲಿ ಮನುಜನು ನಡೆದುಕೊಂಡು ಹೋಗುತ್ತಿದ್ದಾಗ; ಮನುಜನಿಗೆ ಕಾಮವೆಂಬ ಹುಲಿ, ಕ್ರೋಧವೆಂಬ ಕಾಡುಗಿಚ್ಚು (ಅಗ್ನಿ), ಲೋಭವೆಂಬ ರಕ್ಕಸಿ, ಮದವೆಂಬ ಆನೆ, ನಾಲ್ಕು ದಿಕ್ಕಿನಿಂದ ಇವು ಮನುಜನನ್ನು ಅಟ್ಟಿಸಿಕೊಂಡು ಬರುತ್ತವೆ. ಅದನ್ನು ಕಂಡು ಅಂಜಿದ ಮನುಜ  ಹೋಗಲು ದಾರಿ ಇಲ್ಲದೆ, ಬಾವಿ ಕಂಡು ಈ ಮತ್ಸರವೆಂಬ ಹಾಳು ಬಾವಿಯಲ್ಲಿ ತಲೆ ಕೆಳಗಾಗಿ ಬೀಳುವನು. ಹಾಗೆ ಬೀಳುವಾಗ ಬಾವಿಯಲ್ಲಿ ಬೇರು ಒಂದು ಕಂಡು ಹಿಡಿಯಲು ಹೋದರೆ ಅದು ಹಾವು ಇರುತ್ತದೆ. ತಕ್ಷಣ ಆಯುಷ್ಯವೆಂಬ  ಬಳ್ಳಿಯ ಹಿಡಿದ. ಆ ಆಯುಷ್ಯವೆಂಬ ಬಳ್ಳಿಯನ್ನು ಹಗಲ, ರಾತ್ರಿ ಎಂಬೆರಡು ಇಲಿಗಳು ಕಡಿಯುತಿರುತ್ತವೆ. 

*ಜೇನುಹುಳು ಮೈಯನೂರುವಾಗ
ಮೂಗಿನ ತುದಿಯಲೊಂದು ಹನಿ ಮಧು ಬಂದು ಬೀಳೆ
ಆ ಮಧುವ ಕಂಡು ಹಿರಿದಪ್ಪ ದುಃಖವೆಲ್ಲವೆಲ್ಲವ ಸೈರಿಸಿ
ನಾಲಗೆಯ ತುದಿಯಲ್ಲಿ ಆ ಮಧುವ ಸೇವಿಸುವಂತೆ*

ಈ ಎಲ್ಲ ಸಂಕಟಗಳ ಮಧ್ಯೆ, ಜೇನುಹುಳು ಮೈಯ ಮೇಲೆ ಕುಳಿತು ಕೊಳ್ಳುವಾಗ
ಮೂಗಿನ ತುದಿಯ ಮೇಲೆ ಒಂದು ಹನಿ ಜೇನು ಬಂದು ಬಿದ್ದಿತು. ವಿಷಯ ಸುಖವೆಂಬ  ಆ ಜೇನುಹನಿ ಕಂಡು ಅದನ್ನು ಸವಿಯುವುದರಲ್ಲಿ ದಾರಿಕಾರ ಮನುಜ ತನ್ನ ಎಲ್ಲ ದೊಡ್ದ ಪ್ರಮಾಣದ ದುಃಖ ಮರೆತು ನಾಲಿಗೆಯ ತುದಿಯಲ್ಲಿಯ  ಜೇನನ್ನು ಪೂರ್ಣ ಮಗ್ನನಾಗಿ  ಸವಿಯುತ್ತಾನೆ. ಅದರಂತೆ..

*ಈ ಸಂಸಾರಸುಖ ವಿಚಾರಿಸಿ ನೋಡಿದಡೆ ದುಃಖದಾಗರ
ಇದನರಿದು ಸಕಲ ವಿಷಯಂಗಳಲ್ಲಿ ಸುಖವಿಂತುಟೆಂದು
ನಿರ್ವಿಷಯನಾಗಿ ನಿಂದ ನಿಲವು ನೀನೇ*,
*ಸಿಮ್ಮಲಿಗೆಯ ಚೆನ್ನರಾಮಾ*.

ಈ ಸಂಸಾರಸುಖ ವಿಚಾರಿಸಿ ನೋಡಿದರೆ ಅದು ದುಃಖದ ಸಾಗರವಾಗಿದೆ.
ಇದನ್ನು ಅರಿತು ಸಕಲ ವಿಷಯಗಳಲ್ಲಿ ಸುಖವಿದೆ ಎಂದು ನಿರ್ವಿಷಯನಾಗಿ ನಿಂತರೆ ಆ ನಿಲವೇ ಆ ದೇವರ ನಿಲುವು. ಸ್ತಿತಿಪ್ರಜ್ಞರಾಗಿ ಸುಖ ದುಃಖಗಳನ್ನು ಒಂದೇ ತೆರನಾಗಿ ಸ್ವೀಕರಿಸಬೇಕು. ಅದೇ ದೇವರ ಆಶಯ, ನಿಲುವು.

 ದೇವನ ಚಿಂತನೆಯಿಲ್ಲದ ಎಲ್ಲ ಜನರ ಬದುಕು ಹೀಗೆಯೇ ಎಂದು ಶರಣ ಚಂದಿಮರಸರ ಈ ವಚನದ ಅರ್ಥ.
 ಈ ಜಗತ್ತಿನಲ್ಲಿ ಹುಟ್ಟಿ ಬೆಳೆದು ಬಾಳಿ ಸಾಯುತ್ತಿರುವ, ಅರಿಷಡ್ವರಿಗಳ ಬಂಧನ ದಲ್ಲಿ  ಬಂಧಿತರಾದ ಮಾನವರಲ್ಲಿ ಬಹುತೇಕ ಮಂದಿಯ ಬದುಕಿನಲ್ಲಿ ನಾನಾ ರೀತಿಯ ಸಂಕಟ, ವೇದನೆ, ಸೋಲು, ಅಪಮಾನ, ನೋವಿನ ಪ್ರಸಂಗಗಳನ್ನೆ ಹೆಚ್ಚಾಗಿ ಅನುಭವಿಸುತ್ತಾರೆ. ಇವುಗಳ ನಡುವೆಯೇ ತಮ್ಮ ಜೀವನದಲ್ಲಿ ದೊರೆಯುವ ಒಲವು ನಲಿವಿನ ಅವಕಾಶವನ್ನು ಕಳೆದುಕೊಳ್ಳದೆ, ಅದನ್ನು ಪಡೆದು ಆನಂದಪಡುವಂತಹ ಆಸಕ್ತಿಯನ್ನು ಮನದಲ್ಲಿ ಹೊಂದಿರುವರು ಅನೇಕ. ಅವರು ಸ್ತಿತಿಪ್ರಜ್ಞರಾಗಿ ಸುಖ ದುಃಖಗಳನ್ನು ಒಂದೇ ತೆರನಾಗಿ ಸ್ವೀಕರಿಸಿದರೆ ದೇವ ಮಾನವರಾಗುವರು ಎಂದು ಶಬ್ದಚಿತ್ರವೊಂದರ ಮೂಲಕ ಈ ವಚನದಲ್ಲಿ ಹೇಳಲಾಗಿದೆ.
*ಶರಣ ಚಂದಿಮರಸ ಪರಿಚಯ*:
ಶಿವಶರಣರು, ವಚನಕಾರರು.
ಕಾಲ : ಸು. 1020.  (ಬಸವಣ್ಣನವರ ಹಿರಿಯ ಸಮಕಾಲೀನ 1160 ಎಂದು ಹಲವರ ಅಭಿಪ್ರಾಯ. ಒಬ್ಬರೇ ,ಇಬ್ಬರೇ ಚಂದಿಮರಸ ಎಂದು ಸಹ ಭಿನ್ನಾಭಿಪ್ರಾಯ ಇದೆ.) ಗುಲ್ಬರ್ಗ ಜಿಲ್ಲೆಯ ಕೆಂಭಾವಿಯಲ್ಲಿ ಅರಸನಾಗಿದ್ದನು.
ವಚನಗಳು : 157 ವಚನಗಳು ದೊರೆತಿವೆ.  
ಅಂಕಿತನಾಮ : ಸಿಮ್ಮಲಿಗೆಯ ಚೆನ್ನರಾಮಾ 
ಭೋಗಣ್ಣನೆಂಬ ಶರಣನನ್ನು ಊರಿನಿಂದ ಓಡಿಸಿದನೆಂದೂ ಆತನ ಹಿಂದೆಯೇ ಆ ಊರಿನ ಲಿಂಗಗಳೆಲ್ಲ (ಲಿಂಗವಂತರು) ಹೋಗಲು ರಾಜ ಆ ಶರಣನನ್ನು ಹಿಂದಕ್ಕೆ ಕರೆಸಿ ತಾನು ಅದೇ ಧರ್ಮವನ್ನು ಸ್ವೀಕರಿಸಿ, ರಾಜ್ಯಕೋಶಗಳನ್ನು ತೊರೆದು, ಕೃಷ್ಣಾ ನದೀತೀರದ ಚಿಮ್ಮಲಿಗೆಯಲ್ಲಿ ವಾಸಿಸುತ್ತ ಗುರು ನಿಜಗುಣನಿಂದ ದೀಕ್ಷೆ ಪಡೆದು ತಾನೂ ಗುರುವಿನಂತೆ ವಚನಕಾರನಾಗಿ ಧರ್ಮಪ್ರಸಾರ ಕೈಗೊಂಡು ಚಿಮ್ಮಲಿಗೆಯಲ್ಲಿಯೇ ಸಮಾಧಿಸ್ಥನಾದನೆಂದೂ ಪ್ರತೀತಿ. ಚಿಮ್ಮಲಿಗೆಯಲ್ಲಿ ಈತನ ಹೆಸರಿನ ಒಂದು ಗುಡಿ ಇಂದಿಗೂ ಇದೆ. ಘನಲಿಂಗರು ಈತನನ್ನು ಮಹಾತ್ಮನೆಂದು ತನ್ನ ವಚನಗಳಲ್ಲಿ ಹಾಡಿದ್ದಾರೆ.
ಅಂಕಿತ: ಸಿಮ್ಮಲಿಗೆಯ ಚೆನ್ನರಾಮ
 ಅರಿವು, ಗುರು-ಶಿಷ್ಯರ ಸಂಬಂಧ, ಇಷ್ಟಲಿಂಗ ದೀಕ್ಷೆ, ದೈವ, ಮಾಯೆ, ಅರಿವು. ಆತ್ಮಜ್ಞಾನ, ಶರಣಸ್ತುತಿ, ಅನುಭಾವ  ಈ ಮುಂತಾದ ವಿಷಯಗಳನ್ನು ಚಂದಿಮಸರರು ತಮ್ಮ ವಚನಗಳಲ್ಲಿ ಪ್ರಸ್ತಾಪಿಸಿದ್ದಾರೆ. ತಮ್ಮ ಅರಿವೇ ತಮಗೆ ಗುರು. ಈ ಅರಿವನ್ನು ಪ್ರತಿಯೊಬ್ಬರು ಜಾಗೃತಗೊಳಿಸಿ ಬಾಳಬೇಕೆಂದು ಇವರ ವಚನಗಳಲ್ಲಿ ಮೂಡಿಬರುತ್ತವೆ. ಮನುಷ್ಯನಲ್ಲೇ ದೇವರಿದ್ದಾನೆ. ಸತ್ಯವನ್ನರಿತು, ಸಾಧನೆ ಮಾಡಿದರೆ ತಾನೇ ದೇವನಾಗುವನು. ಮಾನವನು ಶಿವಯೋಗ ಸಾಧನೆ ಮಾಡುತ್ತಾ ಕೊನೆಗೆ ಮಹಾಂತವನ್ನು ಹೊಂದಬಹುದು ಎಂದು ತಮ್ಮ ವಚನದಲ್ಲಿ ತಿಳಿಸಿದ್ದಾರೆ. ಇವರು ವಾಸ್ತವವಾದಿ, ಬದುಕನ್ನು ಪ್ರೀತಿಸಿದವರು, ಇರುವಷ್ಟು ದಿನ ಚೆನ್ನಾಗಿ ಭಕ್ತಿಯಿಂದ ಗುರು ಲಿಂಗ ಜಂಗಮ ಸೇವೆ ಮಾಡುತ್ತಾ, ಅವರ ತತ್ತ್ವವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಜನರಿಗೆ ಕರೆ ನೀಡಿದವರಾಗಿದ್ದಾರೆ. ಇವರು ಸದಾಚಾರಿ, ಸದ್ಗುಣಿ, ಸಂಸಾರ ಮತ್ತು ಪಾರಮಾರ್ಥ ಎರಡನ್ನು ಸಮನಾಗಿ ಸ್ವೀಕರಿಸಿದವರು. ಸಂಸಾರಿಯಾಗಿದ್ದುಕೊಂಡೇ ಶರಣರಾಗಬಹುದು, ಮುಕ್ತಿಯನ್ನು ಪಡೆಯಬಹುದೆಂದು ತಮ್ಮ ಅನೇಕ ವಚನಗಳಲ್ಲಿ ತಿಳಿಸಿದ್ದಾರೆ. ಸಮಾಜದ ಓರೆ-ಕೋರೆಗಳನ್ನು ತಮ್ಮ ವಚನಗಳಲ್ಲಿ ಸೆರೆಹಿಡಿದಿದ್ದಾರೆ. ಇವರು ಮಹಾಮಹಿಮ ವೀರ ಶಿವಶರಣರು. ಈತನ ವಚನಗಳು ಅಧ್ಯಾತ್ಮಿಕ ಜ್ಞಾನದಲ್ಲಿ ತುಂಬಾ ಶ್ರೇಷ್ಠತರವಾಗಿವೆ . 

Sharana Chandimarasa (c:1020)
Pen Name: Simmaligeya Chennaraama
There is difference of opinion whether he lived in 1020 or was a contemporary to Basavanna and whether there were two different Chandimarasa. He hailed from Chimmalige on the banks of Krishna near Alamatti. There is a memorial temple in Chimmalagi. Nijaguna Shivayogi was his guru. His 157 vachanas are available with the signature Simmaligeya Chennaraama.
-✍️ Dr Prema Pangi
#ಪ್ರೇಮಾ_ಪಾಂಗಿ,
#Chandimarasa, #ಚಂದಿಮರಸ #ಬಟ್ಟೆಗೊಂಡು_ಹೋಗುತಿಪ್ಪ_ಮನುಜನೊಬ್ಬ
Picture post created by me. A small service to popularise Vachana Sahitya.

Comments

Popular posts from this blog

Shika chakra or Bindu chakra:Bindu visarga

Hrit Chakra or Eight Petals Chakra

A-Ka-Ta triangle or Akshara Brahma