ಶರಣೆ ಪರಿಚಯ : ಹೇಮರೆಡ್ಡಿ ಮಲ್ಲಮ್ಮ *ಆದರ್ಶ ಶರಣೆ ಹೇಮರೆಡ್ಡಿ ಮಲ್ಲಮ್ಮ*

ಶರಣೆ ಪರಿಚಯ : ಹೇಮರೆಡ್ಡಿ ಮಲ್ಲಮ್ಮ
ಶರಣೆ ಪರಿಚಯ : ಹೇಮರೆಡ್ಡಿ ಮಲ್ಲಮ್ಮ
*ಆದರ್ಶ ಶರಣೆ ಹೇಮರೆಡ್ಡಿ ಮಲ್ಲಮ್ಮ*
ಕಾಲ: ಕ್ರಿ. ಶ 1424
ಸಂಸಾರದೊಳಗಿದ್ದೂ ಆಧ್ಯಾತ್ಮಿಕ ಸಾಧನೆ ಮಾಡಬಹುದೆಂಬುದಕ್ಕೆ ಹೇಮರೆಡ್ಡಿ ಮಲ್ಲಮ್ಮನವರು ಒಂದು ಶ್ರೇಷ್ಠ ಉದಾಹರಣೆ. ಬದುಕಿನ ಕಷ್ಟಗಳಿಗೆ ಅಂಜದೆ, ದೈವಭಕ್ತಿಯನ್ನು ಬಿಡದೆ ಬದುಕಿನುದ್ದಕ್ಕೂ ಆದರ್ಶದ ನೆರಳಲ್ಲಿ ನಡೆದ ಮಹಾಸ್ವಾದಿ ಮಲ್ಲಮ್ಮ. ಶ್ರೀಶೈಲದ ಚೆನ್ನಮಲ್ಲಿಕಾರ್ಜುನನ ಕರುಣೆಯ ಕೂಸಾಗಿ ಅರಿವಿಗಿಂತ ಆಚಾರ ದೊಡ್ಡದು ಎಂದು ಸಾಧಿಸಿದ ಹೇಮರೆಡ್ಡಿ ಮಲ್ಲಮ್ಮ ಹೆಣ್ಣು ಕುಲಕ್ಕೆ ಮಾದರಿಯಾಗಿದ್ದಾಳೆ.

ಹೇಮರೆಡ್ಡಿ ಮಲ್ಲಮ್ಮ ಶ್ರೀಶೈಲದ ಮಲ್ಲಿಕಾರ್ಜುನನ ದೈವಿಕ ಪರಿಸರದ ವೆಲ್ಲಟೂರು ಜಿಲ್ಲೆಯ ರಾಮಾಪುರದಲ್ಲಿ ಕ್ರಿ. ಶ 1424ರಲ್ಲಿ ಜನಿಸಿದರು. ತಾಯಿ ಗೌರಮ್ಮ, ತಂದೆ ನಾಗರೆಡ್ಡಿ ದೈವಸಂಪನ್ನರು. ಈಕೆಯ ಜನ್ಮನಾಮ ನರಸಾಂಬೆ. ಆದರೆ ಮಲ್ಲಯ್ಯನ ಕರುಣೆಯಿಂದ ಹುಟ್ಟಿದ ಮಗುವಿಗೆ ಮಲ್ಲಮ್ಮಳೆಂದೆ ಹೆಸರಿಡುತ್ತಾರೆ. ಅಕ್ಕಮಹಾದೇವಿಯಂತೆ ದೈವಭಕ್ತಳಾಗಿ ಬೆಳೆದ ಮಲ್ಲಮ್ಮರಿಗೆ ಮಲ್ಲಿಕಾರ್ಜುನನ ಆಧ್ಯಾತ್ಮಿಕ ಸೆಳೆತ ಬಾಲ್ಯಸಹಜವಾಗಿ ಬಂದಿತು. ಮಲ್ಲಮ್ಮ ಹರೆಯಕ್ಕೆ ಬಂದಾಗ, ಅದೇ ಪರಿಸರದ ಸಿದ್ಧಾಪುರದ ಅರಸು ಮನೆತನದ, ಕೃಷಿಯನ್ನು ಅವಲಂಬಿಸಿದ ಕುಮಾರಗಿರಿ ವೇಮರೆಡ್ಡಿ ಮತ್ತು ಪದ್ಮಾವತಿಯವರ ಐದು ಮಕ್ಕಳಲ್ಲಿ ಮೂರನೇ ಮಗ ಭರಮರೆಡ್ಡಿಯೊಂದಿಗೆ ಕ್ರಿ. ಶ 1444 ರಲ್ಲಿ ವಿವಾಹವಾಯಿತು. ಲೌಕಿಕ ವ್ಯವಹಾರ ಜ್ಞಾನವಿಲ್ಲದ ಗಂಡ, ಸಾತ್ವಿಕ ಸ್ವರೂಪಿ ಮಾವ ಮನೆಯಲ್ಲಿದ್ದರೂ, ಅತ್ತೆ ಮತ್ತು ನೆಗೆಣ್ಣಿಯರಿಂದ ಅನೇಕ ರೀತಿಯ ಕಷ್ಟಕಾರ್ಪಣ್ಯಗಳನ್ನು ಮಲ್ಲಮ್ಮ ಅನುಭವಿಸಬೇಕಾಯಿತು. ತ್ರಿಕಾಲ ಮಲ್ಲಿಕಾರ್ಜುನನ ಧ್ಯಾನದಲ್ಲಿರುತ್ತ, ಅತ್ತೆಮನೆಯವರು ನೀಡಿದ ಕೆಲಸಗಳನ್ನು ಮಾಡಿದ ಮಲ್ಲಮ್ಮ, ಅನೇಕ ಆಪಾದನೆಗಳನ್ನು ಎದುರಿಸಬೇಕಾಯಿತು. ಮೈದುನ ವೇಮನ,  ಯೋಗಿವೇಮನರಾಗಿ ಪರಿವರ್ತನೆಯಾಗಲು ಕಾರಣವಾಗಿದ್ದು ಮಲ್ಲಮ್ಮಳ ದೈವಸಂಪನ್ನ ಕರುಣೆ, ತಿಳುವಳಿಕೆ ಮತ್ತು ತಾಯ್ತನದ ಗುಣಗಳು. ದುಶ್ಚಟಗಳ ದಾಸನಾದ ವೇಮನ ಪರಿವರ್ತನೆಗೊಂಡು ತತ್ವ್ತಜ್ಞಾನ ಹೇಳುತ್ತಾ, ವೈರಾಗಿಯಾಗಿ ತನ್ನ ಸಾಧನೆಯಿಂದ ಮಹಾಯೋಗಿಯಾದನು. ಹೇಮರೆಡ್ಡಿ ಮಲ್ಲಮ್ಮನವರ ಕಾರ್ಯ ಚಟುವಟಿಕೆಗಳೆಲ್ಲ ಅವರ ಜನಪ್ರಿಯತೆಯನ್ನು ಹೆಚ್ಚಿಸಿದವು. ಇದು ಅವರ ನೆಗೆಯಣ್ಣಿಯರಿಗೆ ಹೊಟ್ಟೆಕಿಚ್ಚು ಉಂಟಾಗುವಂತೆ ಮಾಡಿತು. ಅವರು  ಹಿಂಸೆ ನೀಡಿ ಮಲ್ಲಮ್ಮನವರಿಗೆ ಮನೆಯಿಂದಲೇ ಹೊರದಬ್ಬಿದರು! ಕಾಡಿಗೆ ಹೋಗಿ ಗೋವುಗಳನ್ನು ಕಾಯುತ್ತ ಮಲ್ಲಿಕಾರ್ಜುನನ ಉಪಾಸನೆಯಲ್ಲಿ ಮಲ್ಲಮ್ಮನವರು ಮಗ್ನಳಾಗುತ್ತಿದ್ದರು. ಇದನ್ನೂ ಸಹಿಸದ ನಗೆಯಣ್ಣಿಯರು ' ಮಲ್ಲಮ್ಮ ಪರಪುರುಷನ ಸಂಗದಲ್ಲಿದ್ದಾರೆ' ಎಂದು ಆರೋಪ ಹೊರಿಸಿ, ಮಲ್ಲಮ್ಮನವರನ್ನು ಕೊಲ್ಲಲು ಅವರ ಗಂಡ ಭರಮರಡ್ಡಿಗೆ ತಿಳಿಸುತ್ತಾರೆ. ಆದರೆ ಅವರನ್ನು ಕೊಲ್ಲಲು ಹೋದ ಭರಮರಡ್ಡಿಯು ಸಾಕ್ಷಾತ್ ಶ್ರೀಶೈಲ ಮಲ್ಲಿಕಾರ್ಜುನನ ದರ್ಶನ ಪಡೆದು ಪುನೀತನಾದದ್ದಲ್ಲದೇ ತನ್ನ ಅಕ್ಕ-ತಂಗಿಯರು ಎಷ್ಟು ನೀಚರು ಎಂಬುವುದನ್ನೂ ತಿಳಿಯುತ್ತಾನೆ.
ಶರಣೆ ಮಲ್ಲಮ್ಮನವರು ಜೀವನವಿಡೀ ಕಷ್ಟಗಳನ್ನುಂಡರೂ ತನಗೆ ನೋವುಂಟು ಮಾಡಿದವರ ಹಿತವನ್ನೇ  ಬಯಸಿದರು.
 ಅತ್ತೆ - ನೆಗೆಣ್ಣಿಯ ಕಾಟದಿಂದ ಕಷ್ಟ ಪರಂಪರೆಗೆ ಸಿಲುಕುವ ಹೇಮರೆಡ್ಡಿ ಮಲ್ಲಮ್ಮ ಮಲ್ಲಿಕಾರ್ಜುನನ ಅನುಗ್ರಹದಿಂದ ಎಲ್ಲ ಕಷ್ಟಗಳಿಂದ ಬಿಡುಗಡೆ ಹೊಂದಿ, ನಿಸ್ವಾರ್ಥಭಕ್ತಿ, ಜಂಗಮ ಪ್ರೇಮ, ದಾಸೋಹ ಗುಣ, ಸರ್ವರಲ್ಲಿ ಪ್ರೀತಿ ಆದರ ತೋರುವ ಆದರ್ಶ ಶರಣೆಯಾಗಿ ರೂಪುಗೊಂಡಳು. ಸಂಸಾರದೊಳಗಿದ್ದರೂ ಆಧ್ಯಾತ್ಮಿಕ ಸಾಧನೆಯಿಂದ ಆತ್ಮೋನ್ನತಿಯನ್ನು ಪಡೆದು ದೈವತ್ವದ ಪಟ್ಟಕ್ಕೇರಿ ಶ್ರೀಶೈಲ ಮಲ್ಲಿಕಾರ್ಜುನನ ಕರುಣೆಯ ಕೂಸಾದಳು. ಹೇಮರೆಡ್ಡಿ ಮಲ್ಲಮ್ಮ ಕಷ್ಟಕರ ಸನ್ನಿವೇಶಗಳ ನಡುವೆಯೂ ಸತ್ಯ, ಪ್ರಾಮಾಣಿಕತೆ, ಆದರ್ಶ ಗಳನ್ನು ಅನುಸರಿಸಿದರು. ಶ್ರೀಶೈಲ ಪ್ರದೇಶವನ್ನು ಆಳುತ್ತಿದ್ದ ಕೊಂಡವೀಡು ರಾಜವಂಶಸ್ಥರ ಹೇಮರಡ್ಡಿ ಮನೆಯ ಸೊಸೆಯಾದ ಕಾರಣ ಹೇಮರಡ್ಡಿ ಮಲ್ಲಮ್ಮ ಎಂದು ಪ್ರಖ್ಯಾತಳಾದಳು. ಜೀವನವಿಡಿ ಕಷ್ಟವನ್ನುಂಡರೂ, ಇತರರು ಕಷ್ಟದಲ್ಲಿರುವಾಗ, ತನ್ನ ನೋವನ್ನೆಲ್ಲ ಮರೆತು ಅವರನ್ನು ಉಪಚರಿಸುತ್ತಿದ್ದಳು.
ಕಾಯಕದಲ್ಲಿ ಕೈಲಾಸವನ್ನು ಕಾಣುತ್ತ ಶರಣತತ್ತ್ವಗಳನ್ನು ಅನುಸರಿಸಿದ ಆದರ್ಶಜೀವಿ.
ದಾನಗುಣ, ದಾಸೋಹ ತತ್ಪರತೆ ಹಾಗೂ ನಿಸ್ವಾರ್ಥ ಭಕ್ತಿಗೆ ಹೆಸರಾದ ಹೇಮರೆಡ್ಡಿ ಮಲ್ಲಮ್ಮ ತನ್ನವರಿಂದ ತಿರಸ್ಕರಿಸಲ್ಪಟ್ಟು, ಗುಡಿಸಲಿನಲ್ಲಿದ್ದರೂ, ಸಾಕ್ಷಾತ್ ಮಲ್ಲಿಕಾರ್ಜುನನೇ ಪರೀಕ್ಷಾರ್ಥವಾಗಿ ಬಂದಾಗ ತನ್ನಲ್ಲಿರುವುದೆಲ್ಲವನ್ನು ಉಣ್ಣಲಿಕ್ಕಿದ ಮಹಾತಾಯಿ ಮಲ್ಲಮ್ಮ ಜಂಗಮ ಸೇವೆಯೇ ಪರದೈವ ಸೇವೆಯೆಂದು ಬದುಕಿದವರು. ಮಲ್ಲಯ್ಯನ ಕೃಪೆಯಿಂದ ನೂರಾರು ಜನರ ರೋಗ-ರುಜಿನಗಳನ್ನು ವಾಸಿ ಮಾಡುವ ಮಲ್ಲಮ್ಮ ಜನರ ದೃಷ್ಠಿಯಲ್ಲಿ ದೈವತ್ವ ಪಡೆದುಕೊಳ್ಳುತ್ತಾಳೆ. ಮಲ್ಲಮ್ಮನ ಕುರಿತು ಹಲವು ಪುರಾಣ, ಪವಾಡದ ಪುಣ್ಯಕತೆಗಳಿವೆ. ಜನಪದರು, ಶಿಶುನಾಳ ಶರೀಫರು ಅವಳ ಜೀವನ ಚರಿತ್ರೆಯನ್ನು ಗೀತೆ ರಚಿಸಿ ಹಾಡಿದ್ದಾರೆ. 
*ಶ್ರೀಶೈಲ ದೇವಾಲಯದಲ್ಲಿ ಶರಣೆ ಹೇಮರೆಡ್ಡಿ ಮಲ್ಲಮ್ಮ ನವರ ಮೂರ್ತಿ*
ಹೇಮರೆಡ್ಡಿ ಮಲ್ಲಮ್ಮಳಿಗೆ ಜೀವಿತಾವಧಿಯ ಕೊನೆಯಲ್ಲಿ ಶ್ರೀಶೈಲ ಮಲ್ಲಿಕಾರ್ಜುನನ ದಿವ್ಯದರ್ಶನವಾಗುತ್ತದೆ. ಆಗ ಮಲ್ಲಿಕಾರ್ಜುನನು ಮಲ್ಲಮ್ಮಳ ಕೊನೆಯ ಆಸೆಯನ್ನು ಕೇಳಿದಾಗ, ತನಗಾಗಿ ಏನನ್ನೂ ಕೇಳದ ಆಕೆ, ತನ್ನ ಬಂಧು ಬಳಗಕ್ಕೆ ಬಡತನವು ಸಮೀಪ ಸುಳಿಯಬಾರದು. ರೆಡ್ಡಿ ಜನಾಂಗವು ದಾನಗುಣವನ್ನು ಮೈಗೂಡಿಸಿಕೊಂಡು, ಆಪತ್ಕಾಲದಲ್ಲಿರುವವರಿಗೆ, ದೀನ ದಲಿತರಿಗೆ ಸಹಾಯ ಮಾಡಬೇಕು. ತಮ್ಮಲ್ಲಿರುವ ಸಂಪತ್ತನ್ನು ಸಮಾಜೋಪಯೋಗಿ ಸತ್ಕಾರ್ಯಕ್ಕಾಗಿ ವಿನಿಯೋಗಿಸಬೇಕು. ದುರ್ವ್ಯಸನಗಳಿಗಾಗಿ ಹಾಳು ಮಾಡಬಾರದು. ಹಣ, ಅಧಿಕಾರ ಸಿಕ್ಕಾಗ ಸೊಕ್ಕಿನಿಂದ ವರ್ತಿಸಬಾರದು ಎಂದು ಕೇಳಿ ಕೊಳ್ಳುತ್ತಾಳೆ. ಮಲ್ಲಿಕಾರ್ಜುನನ ಪೂಜೆ, ಜಾತ್ರೆ ಮತ್ತು ಉತ್ಸವಗಳು ನಿರಂತರ ನಡೆಯಬೇಕು ಎನ್ನುತ್ತಾಳೆ. 
ಮೇ 10 ಆದರ್ಶ ಶರಣೆ ಹೇಮರೆಡ್ಡಿ ಮಲ್ಲಮ್ಮ ಜನ್ಮದಿನಾಚರಣೆ.

*ಜನಪದರಲ್ಲಿ ಶರಣೆ ಹೇಮರೆಡ್ಡಿ ಮಲ್ಲಮ್ಮಳ ಪವಾಡಗಳು*:
1. ದಾನಚಿಂತಾಮಣಿಯಾದ ಮಲ್ಲಮ್ಮನಿಗೆ ಬುದ್ಧಿ ಕಲಿಸಲು ಅವಳ ಅತ್ತೆ ಮನೆಯ ಮುಂದೆ ಭಿಕ್ಷುಕ ಬಂದಾಗ ಸಿಟ್ಟುಗೊಂಡು ಒಲೆಯಲ್ಲಿನ ನಿಗಿನಿಗಿ ಕೆಂಡವನ್ನು ಅವಳ ಬೊಗಸೆಗೆ ಹಾಕಿ, ಬಾಗಿಲಲ್ಲಿ ನಿಂತಿದ್ದ ಭಿಕ್ಷುಕನಿಗೆ ನೀಡಲು ಹೇಳಿದಾಗ, ಮಲ್ಲಮ್ಮ ಅತ್ತೆ ಕೊಟ್ಟ ಕೆಂಡವನ್ನು ಸ್ವೀಕರಿಸಿ ಮನದಲ್ಲಿ ಮಲ್ಲಿಕಾರ್ಜುನನನ್ನು ನೆನೆದು ಭಿಕ್ಷಾರ್ಥಿಯ ಜೋಳಿಗೆಗೆ ಅದನ್ನೇ ನೀಡಿದಾಗ ಅದು ಧಾನ್ಯವಾಗಿ ಮಾರ್ಪಡುತ್ತದೆ. ಅಂದಿನಿಂದ ಮಲ್ಲಮ್ಮನ ಹೆಸರು "ಬೆಂಕಿದಾನದ ಮಲ್ಲಮ್ಮ" ಎಂದಾಯಿತು.
2. ಮೈದುನನ ಮನಃಪರಿವರ್ತನೆ
ದುಶ್ಚಟಗಳ ದಾಸನಾದ ವೇಮನ ಮಹಾತಾಯಿ ಮಲ್ಲಮ್ಮಳ ತಿಳುವಳಿಕೆಯಿಂದ ಸುಪ್ರಸಿದ್ಧ ಮಹಾಯೋಗಿಯಾಗಿ ಲೋಕ ಬೆಳಗಿದನು.
3. ಶ್ರೀಶೈಲ ಮಲ್ಲಿಕಾರ್ಜುನನಲ್ಲಿ ವರವನ್ನು ಕೇಳಿ ಪಡೆದ ಸಂದರ್ಭವನ್ನು ವಿವರಿಸುವ
 ಸಂತ ಶಿಶುನಾಳ ಶರೀಫರ ಕಾವ್ಯ :
ಹೇಮರೆಡ್ಡಿ ಮಲ್ಲಮ್ಮ
ರೆಡ್ಡಿಕುಲಧರ್ಮ ಉದ್ಧಾರ ಮಾಡಿದೆಯಮ್ಮಾ || ಪ ||
ನಿನ್ನ ಭಕ್ತಿಭಾಗ್ಯದ ನೇಮ
ಮಲ್ಲಯ್ಯನ ಕಟ್ಟಿದ ಪ್ರೇಮ
ಶ್ರೇಷ್ಟವಾಗಿ ತೋರುವದು ರಡ್ಡಿಕುಲಧರ್ಮ
ಶ್ರೀಶೈಲ ನಿನಗಾಗಿದೆ ಕಾಯಮ ||ಅ.ಪ.||

ನಿನ್ನ ಕಷ್ಟ ದುಃಖ ಹೇಳಲಾರೆನಮ್ಮ
ಗಂಡನ ಮೇಲೆ ಪ್ರೇಮ
ಹೊತ್ತಿಗಂಬಲಿ ಸಿಗಲಿಲ್ಲವಮ್ಮ
ಮಣ್ಣು ಪಾತ್ರೆ ಮಜ್ಜಿಗೆ ನೇಮ
ಮಲ್ಲಯ್ಯನು ಪಾಲುಗಾರನಮ್ಮ
ಉಂಡುಹೋದ ಉಳಿಯಲಿಲ್ಲವಮ್ಮ ||೧||

ನೀ ಬೀಸುದು ನೇಮ ದಿನ ದಿನ ಕಾಯಮ
ಕೈಯಲ್ಲಿ ಗುರುಳೆಮ್ಮ
ಬೀಸಿಹೋದ ಭಕ್ತಳಮ್ಮ
ಭಕ್ತಿಗೊಲಿದು ಬಂದನು ಜಂಗಮ
ಭಿಕ್ಷೆ ಬೇಡಿ ನಿಂತ ನೋಡಮ್ಮ
ಬಿಡದ ನಚ್ಚುನೇಗರನಮ್ಮ ||೨||

ನಿನ್ನ ಮೂಗುತಿ ಮರ್ಮ
ತಿಳಿಲಿಲ್ಲ ಹೇಮ ಬೇಡಿ ಒಯ್ದನಮ್ಮ
ಶಿಶುನಾಳ ಊರು ಗ್ರಾಮ
ಗುರುಗೋವಿಂದನ ನಾಮ
ಆತನ ಪಾದಸೇವೆ
ನಂಬಿ ನಾನು ಮಾಡಿದೆನಮ್ಮ ||೩||
- ಸಂತ ಶಿಶುನಾಳ ಶರೀಫರು

ಮಹಾತಾಯಿ ಹೇಮರೆಡ್ಡಿ ಮಲ್ಲಮ್ಮರಿಗೆ  ಶರಣು ಶರಣಾರ್ಥಿ.
- ✍️Dr Prema Pangi
#ಪ್ರೇಮಾ_ಪಾಂಗಿ 
#ಹೇಮರೆಡ್ಡಿ_ಮಲ್ಲಮ್ಮ,#ಆದರ್ಶ_ಶರಣೆ

Comments

Popular posts from this blog

Shika chakra or Bindu chakra:Bindu visarga

Hrit Chakra or Eight Petals Chakra

A-Ka-Ta triangle or Akshara Brahma