ಶರಣೆ ಪರಿಚಯ : ನೀಲಾಂಬಿಕೆ. *ನಿಜಭಕ್ತೆ ನೀಲಾಂಬಿಕೆ*

ಶರಣೆ ಪರಿಚಯ : ನೀಲಾಂಬಿಕೆ
ಶರಣೆ ಪರಿಚಯ : ನೀಲಾಂಬಿಕೆ
*ನಿಜಭಕ್ತೆ ನೀಲಾಂಬಿಕೆ* 
(ನೀಲಮ್ಮ, ನೀಲಲೋಚನೆ, ನೀಲವ್ವ ) 
ಕಾಲ-1160
ಅಂಕಿತ: ಸಂಗಯ್ಯ. 
ಶಿವಶರಣೆ, ವಚನಾಕಾರ್ತಿ. ಬಿಜ್ಜಳರಾಜನ ಸಾಕುತಂಗಿ. ಬಸವಣ್ಣನವರ ಎರಡನೆಯ ಮಡದಿ. ಸಿದ್ಧರಸ ದಣ್ಣಾಯಕ ಹಾಗೂ ಪದ್ಮಗಂಧಿಯರ ಮಗಳು. ಸಿದ್ಧರಸ ಶಿವಾಧೀನನಾದ ಮೇಲೆ ಬಿಜ್ಜಳ ಬಸವಣ್ಣನವರಿಗೆ ಮಂತ್ರಿ ಪದವಿ ನೀಡಿ ಈಕೆಯನ್ನು ಮದುವೆ ಮಾಡಿಕೊಟ್ಟ. ಪತಿಸೇವೆ, ಜಂಗಮ ದಾಸೋಹ, ಲಿಂಗಾರ್ಚನೆ ಇವು - ಈಕೆಯ ವ್ಯಕ್ತಿತ್ವವನ್ನು ಹಿರಿದಾಗಿಸಿವೆ. ಬಾಲಸಂಗಯ್ಯ ಹೆಸರಿನ ಮಗನಿದ್ದನೆಂದು ಸಣ್ಣ ವಯಸ್ಸಿನಲ್ಲಿ ತೀರಿಕೊಂಡನೆಂದು ತಿಳಿದುಬರುತ್ತದೆ.  ಆ ನೋವನ್ನು ಮರೆಯಲು ನೀಲಾಂಬಿಕೆ ಬಸವಣ್ಣನವರ ಲೌಕಿಕ ಮತ್ತು ಅಲೌಕಿಕ ಜೀವನಕ್ಕೆ ಪೂರಕವಾಗಿ ನಿಂತು, ಅವರ ದಾಸೋಹ ಕಾರ್ಯದಲ್ಲಿ ಸಮರ್ಪಣಾ ಭಾವದಿಂದ ಸಹಕರಿಸುತ್ತಾಳೆ. ಅನುಭಾವಿ ನೀಲಮ್ಮ ಬಸವಣ್ಣನವರನ್ನು ಕೇವಲ ಪತಿಯೆಂದು ಭಾವಿಸದೆ ಗುರುವೆಂದು ದೇವರೆಂದು ನಂಬಿದ್ದಳು. ಅಂದಿನ ಶರಣ ಶರಣೆಯರು ಈಕೆಯನ್ನು ನಿಜಭಕ್ತೆ ನೀಲಾಂಬಿಕೆ ಎಂದು ಗೌರವಿಸುತ್ತಿದ್ದರು. ಈಕೆಯನ್ನು ಕುರಿತು ಅನೇಕರು ನೀಲಮ್ಮನ ಸ್ತೋತ್ರ, ನೀಲಾಂಬಿಕಾ ಪಂಚವಿಂಶತಿ, ನೀಲಮ್ಮನ ತ್ರಿವಿಧಿ  ಪ್ರಸಾದ ಸಂಪಾದನೆಯನ್ನೂ ರಚಿಸಿದ್ದಾರೆ.ಈಕೆ ಆತ್ಮಸಾಕ್ಷಾತ್ಕಾರ ಪಥ, ಷಟ್ಸ್ಥಲ, ದಾಸೋಹ ಮತ್ತು ಶಿವಾನುಭವಗಳಲ್ಲಿ ವಹಿಸಿದ ಪಾತ್ರ ಮಹತ್ತರವಾದುದಾಗಿದೆ. 'ವಿಚಾರ ಪತ್ನಿ' ಎಂದು ತನ್ನನ್ನು ಕರೆದುಕೊಂಡ ಈಕೆ, ಬಸವಣ್ಣನವರ ಬದುಕಿನಲ್ಲಿ ಬಹುಮುಖ್ಯ ಪಾತ್ರವಹಿಸಿದ್ದಾರೆ.

ನೀಲಾಂಬಿಕೆ ಅಧಿಕ ಸಂಖ್ಯೆಯ ವಚನಗಳನ್ನು ರಚಿಸಿದ್ದಾಳೆ. ಸದ್ಯ ೨೮೮ ವಚನಗಳು ಉಪಲಬ್ಧವಾಗಿವೆ. ಅವುಗಳಲ್ಲಿ ಹೆಚ್ಚಾಗಿ. ಬಸವ ಸ್ತುತಿ, ಅವರ ಅಗಲಿಕೆಯ ನೋವಿನ ಧ್ವನಿ ಕೇಳಿಬರುತ್ತವೆ. ಈಕೆಯ ಭಕ್ತಿ, ತಾಳ್ಮೆ, ಕಾಯಕನಿಷ್ಠೆ, ಜ್ಞಾನ, ವೈರಾಗ್ಯಗಳು ಅವಳ ವಚನಗಳಲ್ಲಿ ಮೈದಾಳಿವೆ. ತನ್ನ ವಚನಗಳಲ್ಲಿ ಪತಿ ಶರಣ ಬಸವಣ್ಣರನ್ನು "ಬಸವಯ್ಯ" ಎಂದು ಸಂಭೋದಿಸಿದ್ದಾಳೆ.

*ನಿಜಭಕ್ತೆ ನೀಲಾಂಬಿಕೆಯವರ ವಚನಗಳು*  
1.ವಚನ
ಅಲ್ಲಮನ ಸಂಗ, ಅಜಗಣ್ಣನ ಸಂಗ,
ಕಕ್ಕಯ್ಯನ ಸಂಗ, ಚಿಕ್ಕಯ್ಯನ ಸಂಗ,
ಎಲ್ಲರ ಸಂಗ, ಯತಿಗಳ ಸಂಗ, ಜತಿಗಳ ಸಂಗ,
ಮಾನ್ಯರ ಸಂಗ, ಮುಖ್ಯರ ಸಂಗ.
ಸಂಗಯ್ಯಾ,ಎನ್ನ ಸಂಗ,ಎನ್ನ ಬಸವಯ್ಯನ ಸಂಗ.
- ಶರಣೆ ನೀಲಾಂಬಿಕೆ
ಅರ್ಥ-
 ಅನುಭವ ಮಂಟಪದಲ್ಲಿ ತನಗೆ ಸಿಕ್ಕ ಅಲ್ಲಮನ, ಅಜಗಣ್ಣನ, ಕಕ್ಕಯ್ಯನ, ಚಿಕ್ಕಯ್ಯನ, ಎಲ್ಲ ಯತಿಗಳ, ಜತಿಗಳ 
ಮಾನ್ಯರ, ಮುಖ್ಯರ ಸಂಗದಿಂದ ಸಂತೋಷ ಪಟ್ಟು, ಇದಕ್ಕೆ ಕಾರಣಭೂತಿಯಾದ
ಪತಿ ಬಸವಯ್ಯನ ಸಂಗ ಸಿಕ್ಕಿದ್ದಕ್ಕೆ ದೇವರಿಗೆ ಆಭಾರಿಯಾಗಿದ್ದಾಳೆ. 'ಸಂಗಯ್ಯಾ, ಎನ್ನ ಸಂಗ, ಎನ್ನ ಬಸವಯ್ಯನ ಸಂಗ'. 
ಸಂಗಯ್ಯ, ನನಗೆ ನನ್ನ ಬಸವಯ್ಯನೇ ಜೊತೆ ಎಂದು ಹೆಮ್ಮೆ, ಅಭಿಮಾನ, ಕೃತಜ್ಞತೆಯಿಂದ ದೇವರನ್ನು ಸ್ಮರಿಸಿದ್ದಾರೆ.
2. ವಚನ
ಎನಗೆ ಲಿಂಗವು ನೀವೆ ಬಸವಯ್ಯಾ,
ಎನಗೆ ಸಂಗವು ನೀವೆ ಬಸವಯ್ಯಾ,
ಎನಗೆ ಪ್ರಾಣವು ನೀವೆ ಬಸವಯ್ಯಾ,
ಎನಗೆ ಪ್ರಸಾದವು ನೀವೆ ಬಸವಯ್ಯಾ,
ಎನಗೆ ಪ್ರಭೆಯಮೂರ್ತಿಯು ನೀವೆ ಬಸವಯ್ಯಾ.
ಎನಗೆ ಸಂಗಯ್ಯನು ನೀವೆ ಬಸವಯ್ಯಾ.
- ಶರಣೆ ನೀಲಾಂಬಿಕೆ
ಅರ್ಥ- 
ನನಗೆ ಪತಿ ಬಸವಯ್ಯನೇ ದೇವರು, ನನ್ನ ಪ್ರಾಣ, ಸಂಗಯ್ಯ ಕರುಣಿಸಿದ ಪ್ರಸಾದ ಮತ್ತು ಲಿಂಗಾಂಗ ಸಾಮರಸ್ಯದ ಪ್ರಭೆಯ ಬೆಳಕು ಎಂದು ಸಂಪೂರ್ಣ ತೃಪ್ತಿ ಕಂಡವರು ನೀಲಾಂಬಿಕೆ ತಾಯಿ. ಬಸವಯ್ಯನೇ ತನಗೆ ತಕ್ಕ ಜೊತೆ. 'ನನಗೆ ಆ ಸಂಗಯ್ಯ ದೇವರು  ನೀವೇ ಬಸವಯ್ಯ' ಎಂದು ಪತಿಯ ಸಂಗದಲ್ಲಿ ಧನ್ಯತೆ ಕಂಡಿದ್ದಾರೆ. ಹೀಗೆ ತನ್ನ ಸರ್ವಸ್ವ ಬಸವಯ್ಯ ಎಂದು ಹೇಳಿ ಶರಣೆ ನೀಲಾಂಬಿಕೆ ತಾಯಿ ತಮ್ಮ ಪತಿಭಕ್ತಿ ಎನ್ನು ಮೆರೆದಿದ್ದಾರೆ.
ಬಸವಣ್ಣನವರನ್ನೇ ಅರಿವಿನ ಕುರುಹಾಗಿ, ಸಂಗಯ್ಯನಾಗಿ ತನ್ನ ಲಿಂಗಾನುಭವದ ಬೆಳಗುವ ಪ್ರಭೆಯಾಗಿ  ತನ್ನ ಸಾಧನೆಯ ಪರಮಾವಸ್ಥೆಯ ಸ್ವರೂಪವಾಗಿ ಕಂಡವಳು.  ಬಸವ ಸ್ತುತಿ ಎಷ್ಟು ಮಾಡಿದರೂ ತಾಯಿಗೆ ತೃಪ್ತಿ ಇಲ್ಲ. ನನಗೆ ಬಸವಯ್ಯನೇ ದೇವರು ಪ್ರಾಣ, ಪ್ರಸಾದ ಮತ್ತು ಬೆಳಕು. ಬಸವಯ್ಯನೇ ಜೊತೆ. ನನಗೆ ದೇವರು ನೀವೇ ಬಸವಯ್ಯ.
 3. ವಚನ
ಸರ್ವಾಂಗಶುದ್ಭವಾಗಿ ಲಿಂಗದೇಹಿಯಾನಾದೆನು.
ಸರ್ವ ಪ್ರಪಂಚವನಳಿದು ಸಮಯಾಚಾರಮೂರ್ತಿಯ ಪಡದೆನು.
ಸರ್ವಾಂಗಶುದ್ಧವಾಗಿ ವಿವರವನರಿದೆನಯ್ಯ ಸಂಗಯ್ಯ.
ನಾನು ಸರ್ವಾಂಗ ಶುದ್ಧಿಯಾಗಿ ದೇವರ ಸ್ವರೂಪ ವನ್ನ ಅರಿತೆ.
- ಶರಣೆ ನೀಲಾಂಬಿಕೆ
ಅರ್ಥ-  
ಸರ್ವಾಂಗಶುದ್ಭವಾಗಿ ಲಿಂಗದೇಹಿಯಾಗಿ ಸರ್ವ ಪ್ರಪಂಚ ಅಳಿದು ಬಸವಯ್ಯನಂಥ ಸದಾಚಾರ ಸಮಯಾಚಾರಮೂರ್ತಿಯಾದ ಪತಿ ಪಡದೆನು. ಆವರ ಸಂಗದಲ್ಲಿ ಸರ್ವಾಂಗ ಶುದ್ಧಿಯಾಗಿ ದೇವರ ಸ್ವರೂಪವನ್ನ ಅರಿತೆ ಎಂದು ಶರಣೆ ನೀಲಾಂಬಿಕೆ ತಾಯಿ ಅನುಭೂತಿ ಪಡೆಯಲು ಬಸವಣ್ಣನವರ ವಿವರಣೆ, ಆವರ ಅನುಭವ, ಅವರ ಸಾನಿಧ್ಯ ನೆರವಾಯಿತು  ಎಂದು ಸ್ಮರಿಸಿದ್ದಾರೆ.ಸರ್ವಾಂಗಶುದ್ಭವಾಗಿ ಲಿಂಗದೇಹಿಯಾಗಿ ಸರ್ವ ಪ್ರಪಂಚ ಅಳಿದು ಬಸವಯ್ಯನಂಥ ಪತಿ  ಪಡದೆನು.
4. ವಚನ
ಬಸವಣ್ಣನೆ ಗುರುವೆಂದು ಭಾವಿಸಲಾಗಿ,
ಎನಗೆ ಬಸವಣ್ಣನೆ ಗುರುವಾದನಯ್ಯಾ.
ಚೆನ್ನಬಸವಣ್ಣನೆ ಲಿಂಗವೆಂದು ಭಾವಿಸಲಾಗಿ,
ಎನಗೆ ಚೆನ್ನಬಸವಣ್ಣನೆ ಲಿಂಗವಾದನಯ್ಯಾ.
ಪ್ರಭುದೇವರೆ ಜಂಗಮವೆಂದು ಭಾವಿಸಲಾಗಿ,
ಎನಗೆ ಪ್ರಭುದೇವರೆ ಜಂಗಮವಾದನಯ್ಯಾ.
ಚಿಲ್ಲಾಳದೇವನೆ ದೇಹವೆಂದು ಭಾವಿಸಲಾಗಿ,
ಎನಗೆ ಚಿಲ್ಲಾಳದೇವನೆ ದೇಹವಾದನಯ್ಯಾ.
ಇಹಃಪಗೆಯಾಂಡರೆ ಧನವೆಂದು ಭಾವಿಸಲಾಗಿ,
ಇಹಃಪಗೆಯಾಂಡರೆ ಧನವಾದನಯ್ಯಾ.
ಇಂತೀ ಐವರ ಕಾರುಣ್ಯಪ್ರಸಾದವನುಂಡು ಮಹಾಮನೆಯಲ್ಲಿ ಸುಖಿಯಾದೆ, ಸಂಗಯ್ಯಾ.
- ಶರಣೆ ನೀಲಾಂಬಿಕೆ
ಅರ್ಥ- 
ಶರಣೆ ನೀಲಾಂಬಿಕೆ ತಾಯಿಯ ಭಾವನೆ ಯಲ್ಲಿ ಅನುಭವ ಮಂಟಪದಲ್ಲಿ ಬಸವಣ್ಣ ಅವರ ಗುರು ಸ್ವರೂಪಿ, ಚನ್ನಬಸವಣ್ಣ ಲಿಂಗ ಸ್ವರೂಪಿ, ಅಲ್ಲಮರು ಜಂಗಮ ಸ್ವರೂಪಿ, ಚಿಲ್ಲಾಳದೇವ ದೇಹ ಸ್ವರೂಪಿ ಮತ್ತು ಇಹಃಪಗೆಯಾಂಡರೆ ಧನ ಸ್ವರೂಪಿ ಇವರೆಲ್ಲರ ಕಾರುಣ್ಯದಿಂದ ಅನುಭವ ಮಂಟಪದಲ್ಲಿ ಸುಖಿಯಾಗಿದ್ದೇನು ಎಂದು 
ಬಸವಣ್ಣ, ಚೆನ್ನಬಸವಣ್ಣ, ಪ್ರಭುದೇವ, ಚಿಲ್ಲಾಳದೇವರ ಸ್ತುತಿಸಿದ್ದಾಳೆ.
5. ವಚನ
ಮಡದಿ ಎನ್ನಲಾಗದು ಬಸವಂಗೆ ಎನ್ನನು
ಪುರುಷನೆನಲಾಗದು ಬಸವನ ಎನಗೆ
ಉಭಯ ಕುಳವ ಹರಿದು ಬಸವಂಗೆ
ಶಿಶುವಾದೆನು ಬಸವನೆನ್ನ ಶಿಶುವಾದನು
ಪ್ರಥಮರ ಪುರಾತನರ ಸಾಕ್ಷಿಯಾಗಿ 
ಸಂಗಯ್ಯನಿಕ್ಕದ ದಿಬ್ಬವ ಮೀರದೆ ಬಸವನೊಳಡಗಿದೆ
- ಶರಣೆ ನೀಲಾಂಬಿಕೆ
ಅರ್ಥ- 
ಶರಣರು ಸಾಧನೆಯಲ್ಲಿ ಮೇಲೇರಿದಂತೆ, ವೈರಾಗ್ಯ ಉದಯಿಸಿದಂತೆ  ಶರಣ ಸತಿ - ಲಿಂಗ ಪತಿಯಾದ ಬಳಿಕ ಶರಣಂಗೆ ಸತಿಸಂಗ ನರಕ ಎಂದು ತಿಳಿದರು. ಇದನ್ನು ಬಸವಣ್ಣನವರು,ಅಕ್ಕಮಹಾದೇವಿ ವಚನದಲ್ಲಿ ತಿಳಿಸಿದ್ದಾರೆ.ನೀಲಾಂಬಿಕೆ ಇದು ದೇವರು ಕೊಟ್ಟ ಆಜ್ಞೆ ಎಂದು ತಿಳಿದು ಮೀರಲಿಲ್ಲ. ಹೀಗೆ ಒಬ್ಬರಿಗೆ ಒಬ್ಬರು ಶಿಶು ಎಂದು ಮಕ್ಕಳ ವಿಚಾರಿಸಿದವರಿಗೆ ಉತ್ತರಿಸಿರಬೇಕು. ಅದಕ್ಕೆ ಪ್ರಥಮ ಪುರಾತನ ಶರಣರ ಸಾಕ್ಷಿ ಹೇಳುತ್ತಾಳೆ.

*ಕಲ್ಯಾಣ ಕ್ರಾಂತಿ*
 ಶರಣ ಬಸವಣ್ಣ ಗಡಿಪಾರಾಗಿ ಕೂಡಲಸಂಗಮಕ್ಕೆ ನಡೆದಾಗ ಶರಣರ ರಕ್ಷಣೆ, ಮಾರ್ಗದರ್ಶನದ ಹೊಣೆ  ಹೊರಸಿದಾಗ, ನೀಲಾಂಬಿಕೆ ಕಲ್ಯಾಣ ದಲ್ಲಿಯೇ ಉಳಿದು ತನ್ನ ಶುದ್ಧ 
ನಡೆ - ನುಡಿಯಿಂದ ಎಲ್ಲರ ಮೆಚ್ಚುಗೆ, ಗೌರವಕ್ಕೆ ಪಾತ್ರಳಾದಳು. 
6. ವಚನ
ಅಟ್ಟಡವಿಯಲ್ಲಿ ಬಿಟ್ಟುಹೋದಿರಿ ಬಸವಯ್ಯಾ.
ನಟ್ಟನಡುಗ್ರಾಮವ ಕೆಡಿಸಿಹೋದಿರಿ ಬಸವಯ್ಯಾ.
ಹುಟ್ಟಿಲ್ಲದ ಬಂಜೆಗೆ ಮಕ್ಕಳಕೊಟ್ಟಿರಿ ಬಸವಯ್ಯಾ.
ಆ ಮಕ್ಕಳ ಫಲವಿಲ್ಲದಂತೆ ಮಾಡಿದಿರಿ ಬಸವಯ್ಯಾ.
ಸಂಗಯ್ಯನಲ್ಲಿ ನೀನೆಂತಪ್ಪ ಮಹಿಮನಯ್ಯಾ ಬಸವಯ್ಯಾ ? 
- ಶರಣೆ ನೀಲಾಂಬಿಕೆ
 ಅರ್ಥ- 
ಪತಿಯ ಅಗಲಿಕೆಯ ನೋವಿನ ಧ್ವನಿ, ಶರಣರನ್ನು ಮಕ್ಕಳಾಗಿ ತಿಳಿದ ಅವಳ ಮನಸ್ಸು, ಆ ಶರಣ ಮಕ್ಕಳ ಕೊಲೆಗಳಿಂದಾದ ತೀವ್ರ ಹತಾಶೆ, ಪತಿಯ ಮೇಲಿನ ಮುನಿಸು ವಚನದಲ್ಲಿ ಕಾಣಬಹುದು. ನೂರಾರು ಶರಣ ಮಕ್ಕಳ ಪಡೆದರೂ ಫಲವಿಲ್ಲದಂತಾಯಿತು.
7. ವಚನ
ನಾನಾರ ಸಾರುವೆನೆಂದು ಚಿಂತಿಸಲೇಕಯ್ಯಾ? ನಾನಾರ ಹೊಂದುವೆನೆಂದು ಭ್ರಮೆಪಡಲೇಕಯ್ಯಾ? ನಾನಾರ ಇರವನರಿಯೆನೆಂದು ಪ್ರಳಾಪಿಸಲೇಕಯ್ಯಾ? ಪರಿಣಾಮಮೂರ್ತಿ ಬಸವನರೂಪು ಕರಸ್ಥಲದಲ್ಲಿ ಬೆಳಗಿದ ಬಳಿಕ ಸಂಗಯ್ಯನ ಹಂಗು ನಮಗೇತಕೆ ಅಪ್ಪಣ್ಣಾ
- ಶರಣೆ ನೀಲಾಂಬಿಕೆ
ಅರ್ಥ- 
ತಾನು ಯಾರನ್ನಾದರೂ ಸೇರುವೆನೆಂದು ತಾನು ಯಾರನ್ನಾದರೂ ಹೊಂದುವೆನೆಂದು ಯಾರಾದರೂ ಆಶ್ರಯದಲ್ಲಿ ಇರುವೆನೆಂಬ  ಆತಂಕ ಬೇಡ. ಬಸವಣ್ಣನವರ ರೂಪವು ತನ್ನ ಇಷ್ಟಲಿಂಗದ ಕರಸ್ಥಲದಲ್ಲಿರಲು ಕೂಡಲಸಂಗಮದ ಸಂಗಯ್ಯನ ಹಂಗೇಕೆ ಎಂದು ಪ್ರಶ್ನಿಸುತ್ತಾರೆ. ಬಸವರಸರೇ ತನ್ನ ಲಿಂಗದಲ್ಲಿರುವಾಗ ಸಂಗಯ್ಯನ ಸಾನ್ನಿಧ್ಯದ ಆಶೆ ತನಗಿಲ್ಲ. ಬಸವಯ್ಯನೇ ನನ್ನ ಕರಸ್ಥಲದಲ್ಲಿ ಬೆಳಗುವ ದೇವರು ಎಂದು ಸಂದೇಶ ಕಳಿಸಿ.
ಇಂಥ ಅತ್ಯಂತ ಕಷ್ಟ ವಿಷಮ ಸಂದಿಗ್ಧತೆಯಲ್ಲಿ ಶರಣ ಮಕ್ಕಳನ್ನು ತೊರೆಯಲು ಮನಸ್ಸು ಮಾಡುವದಿಲ್ಲ.
 ಬಸವಣ್ಣನವರು  ಶರಣ ಹಡಪದ ಅಪ್ಪಣ್ಣನವರ ಮೂಲಕ ಕಲ್ಯಾಣದಲ್ಲಿದ್ದ ತನ್ನ ಪತ್ನಿಯನ್ನು ಶರಣರ ರಕ್ಷಣೆ, ವಚನಕಟ್ಟುಗಳ ರಕ್ಷಣೆಯ ಚಿಂತಿತರಾಗಿ  ಮುಂದಿನ ಹಾದಿಯ ಸಲಹೆ ಕೇಳಲು  ಕರೆತರುವಂತೆ ಹೇಳಿ ಕಳುಹಿಸಿದಾಗ ನೀಲಾಂಬಿಕೆ ಹೀಗೆ ಉತ್ತರಿಸುತ್ತಾರೆ. ಬಸವಣ್ಣ ಕರೆಸಿದ ಕಾರಣ ಅರಿಯದೇ, ಕೂಡಲ ಸಂಗಮಕ್ಕೆ ಹೋಗಲು ನಿರಾಕರಿಸಿ ಬಸವರಸರೇ ತನ್ನ ಇಷ್ಟಲಿಂಗದಲ್ಲಿರುವಾಗ ಸಂಗಯ್ಯನ ಸಾನ್ನಿಧ್ಯದ ಆಶೆ ತನಗಿಲ್ಲವೆಂದು ಹೇಳಿ ಕಳುಹಿಸಿ ಕಲ್ಯಾಣದಲ್ಲಿ ಕಷ್ಟದಲ್ಲಿದ್ದ ಶರಣರಿಗೆ ಬೆಂಬಲವಾಗಿ ನಿಲ್ಲುತ್ತಾಳೆ. ಈ ಒಂದು ವಚನ ಆಗಿನ ಆಕೆಯ ಶರಣರಪ್ರತಿ ಇರುವ ಮಾತೃ ಮನೋಭಾವವನ್ನು ತಿಳಿಸುತ್ತದೆ.
ಬಸವರಸರೇ ತನ್ನ ಲಿಂಗದಲ್ಲಿರುವಾಗ ಸಂಗಯ್ಯನ ಸಾನ್ನಿಧ್ಯದ ಆಶೆ ತನಗಿಲ್ಲ. ನಿಮ್ಮ ಬಿಟ್ಟು ಯಾರನ್ನೂ ನಾನು ಹೊಂದುವದಿಲ್ಲ. ಬಸವಯ್ಯನೇ ನನ್ನ ಕರಸ್ಥಲದಲ್ಲಿ ಬೆಳಗುವ ದೇವರು. 
8. ವಚನ
ಅಲ್ಲಲ್ಲಿಯ ಶರಣರು ಅಲ್ಲಲ್ಲಿಯೇ ನಿಲಲು,
ಅಲ್ಲಲ್ಲಿಯ ಭಕ್ತಿ ಅಲ್ಲಲ್ಲಿಯೆ ಅಡಗಿತ್ತು.
ಅಲ್ಲಲ್ಲಿಯ ಕಾಯವಲ್ಲಲ್ಲಿಯೆ ಸಂದು ನಾನು
ಅಲ್ಲಲ್ಲಿಯೆ ಅಡಗಿಯಾನು ಅನುಮಿಷ ದೃಷ್ಟಿಯುಳ್ಳವಳಾದೆನು.
ಅಲ್ಲಲ್ಲಿಯೇ ಭ್ರಮಿಸಲು ಭ್ರಮೆಯಡಗಿ
ಸಂಗಯ್ಯನಲ್ಲಿ ಮುಖವರಿತೆನಯ್ಯ ಬಸವಪ್ರಭುವೆ.. 
- ಶರಣೆ ನೀಲಾಂಬಿಕೆ
ಅರ್ಥ-
  ಎಲ್ಲ ಭ್ರಮೆಯಡಗಿ ಸಂಗಯ್ಯನೇ ತನ್ನ ಇಷ್ಟಲಿಂಗದಲ್ಲಿ ಇರುವದನ್ನು ಅರಿತು ಲಿಂಗದಲ್ಲಿ ಅನಿಮಿಷ ದೃಷ್ಟಿಯುಳ್ಳವಳಾಗಿದ್ದೇನೆ. ಸಂಗಯ್ಯನಲ್ಲಿ ನಿಮ್ಮ ಮುಖವರಿತೆನಯ್ಯವೆಂದು ಹೇಳಿ, ಪತಿಯ ಅಗಲಿಕೆ, ಅಸಂಖ್ಯಾತ ಶರಣರ ಕಗ್ಗೊಲೆ ಗಳಿಂದಾದ ತೀವ್ರ ಹತಾಶೆಯಿಂದ ಶಿವನ ಮೊರೆಹೋಗುತ್ತಾರೆ. ಅನಿಮಿಷ ದೃಷ್ಟಿಯಿಂದ ಶಿವಯೋಗದಲ್ಲಿ  ನಿರತರಾದಾಗ ಎಲ್ಲಾ  ಭ್ರಮೆ ಅಳಿದು ನಿಜೈಕ್ಯರಾಗುತ್ತಾರೆ.
9. ವಚನ
ಎಲೆ ಅಯ್ಯ ಕರಸ್ಥಲ ಬಯಲಾಯಿತ್ತು, ಎನಗೆ ಕರಸ್ಥಲ ಮನಸ್ಥಲವಾಯಿತ್ತು ಸಂಗಯ್ಯ ಬಸವಹೋದನತ್ತ, ನಾನಡಗಿದೆನಯ್ಯ ನಿನ್ನತ್ತ.
- ಶರಣೆ ನೀಲಾಂಬಿಕೆ
ಅರ್ಥ- 
ಮುಂದೆ ಬಸವಣ್ಣನವರು ಕೂಡಲ ಸಂಗಮನಾಥನಲ್ಲಿ ಐಕ್ಯರಾದ ಸುದ್ದಿ ಕೇಳಿದ ನೀಲಾಂಬಿಕೆ ತನ್ನ ದುಃಖವನ್ನು ಶಮನಮಾಡಿಕೊಂಡು  ತಾನೂ ಪರಶಿವನಲ್ಲಿ ಐಕ್ಯಳಾಗುತ್ತಾಳೆ.
ಉಕ್ಕಿ ಹರಿಯುವ ನದಿ ದಾಟಿ ಬಸವಣ್ಣರ ಕೂಡಲು ಆಗದೆ ಕೂಡಲಸಂಗಮ ಸಮೀಪ ನದಿಯ ಎದುರಿನ ದಂಡೆ ತಂಗಡಗಿಯಲ್ಲಿ ಐಕ್ಯಳಾಗುತ್ತಾಳೆ. ತಂಗಡಗಿಯಲ್ಲಿ ಅವರ ಸಮಾಧಿ ಸ್ಥಳ, ದೇವಸ್ಥಾನ ಇದೆ.
- ✍️Dr Prema Pangi
#ಪ್ರೇಮಾ_ಪಾಂಗಿ, #ನಿಜಭಕ್ತೆ_ನೀಲಾಂಬಿಕೆ, #ನೀಲಾಂಬಿಕೆ,

Comments

Popular posts from this blog

Shika chakra or Bindu chakra:Bindu visarga

Hrit Chakra or Eight Petals Chakra

A-Ka-Ta triangle or Akshara Brahma