ಶರಣ ಪರಿಚಯ : ತೋಂಟದ ಸಿದ್ಧಲಿಂಗೇಶ್ವರರು * ಶರಣ ಗುರು ಎಡೆಯೂರು ಸಿದ್ದಲಿಂಗೇಶ್ವರರು*

ಶರಣ ಪರಿಚಯ. : ತೋಂಟದ ಸಿದ್ಧಲಿಂಗೇಶ್ವರರು
* ಶ್ರೀ ತೋಂಟದ ಸಿದ್ಧಲಿಂಗೇಶ್ವರರು* ಎಡೆಯೂರು
ಜನನ : ಹದಿನೈದನೇ ಶತಮಾನ
ಜನನ ಸ್ಥಳ : ಚಾಮರಾಜನಗರ ಜಿಲ್ಲೆಯ ಹರದನಹಳ್ಳಿ (ವಾಣಿಜ್ಯಪುರಿ)
ತಂದೆ ತಾಯಿ: ಮಲ್ಲಿಕಾರ್ಜುನ ಶೆಟ್ಟಿ, ಜ್ಞಾನಾಂಬೆ 
ಗುರು : ಗುರು ಶ್ರೀ ಚೆನ್ನಬಸವೇಶ್ವರರು
ಸಾಹಿತ್ಯ ರಚನೆಗಳು: ಷಟ್ಸ್ಥಲಜ್ಞಾನಸಾರಾಮೃತ. ೭೦೧ ವಚನಗಳಿಂದ ಕೂಡಿದ್ದ ಈ ಗ್ರಂಥ ಷಟ್ಸ್ಥಲಗಳನ್ನು ಐಕ್ಯದೆಡೆಗೆ ಕೊಂಡೊಯ್ಯುವ ವಿಚಾರಗಳಿಂದ ಕೂಡಿದ ಗ್ರಂಥವಾಗಿದೆ. 
ಸಿದ್ದಲಿಂಗೇಶ್ವರರ ಅಂಕಿತ :
 ಮಹಾಲಿಂಗ ಗುರು ಶ್ರೀ ಸಿದ್ದೇಶ್ವರ ಪ್ರಭು.
ಸಮಾಧಿ : ಕುಣಿಗಳಿಗೆ ಸಮೀಪದಲ್ಲಿರುವ ಎಡೆಯೂರು.ಈ ಊರಿನಲ್ಲಿ ಇವರ ಜ್ಞಾಪಕಾರ್ಥವಾಗಿ ಕಟ್ಟಿಸಿದ ಸಿದ್ಧಲಿಂಗೇಶ್ವರವೆಂಬ  ದೇವಸ್ಥಾನವು ಇದೆ. 
ಗುರುಕುಲದಲ್ಲಿ ಸಿದ್ಧಲಿಂಗೇಶ್ವರರು:
ಸಿದ್ಧಲಿಂಗೇಶ್ವರರು ಎಂಟು ವರ್ಷದವರಾಗಿದ್ದಾಗ ಅವರ ತಂದೆ ತಾಯಿಗಳು ಅವರನ್ನು ಚೆನ್ನಬಸವೇಶ್ವರರ ಗೋಸಲಮಠಕ್ಕೆ , ವಿದ್ಯಾಭ್ಯಾಸಕಾಗಿ ಕಳುಹಿಸುತ್ತಾರೆ. ಅಧ್ಯಾತ್ಮಿಕ, ದೈವೀಕ ಜ್ಞಾನಗಳಲ್ಲಿ ತನ್ನ ವಯಸ್ಸಿಗೆ ಮೀರಿದ ಜ್ಞಾನಿಯಾಗಿದ್ದ ಬಾಲಕ ಸಿದ್ದಲಿಂಗನನ್ನು ಕಂಡು ಗುರು ಚೆನ್ನಬಸವೇಶ್ವರರು ಆಶ್ಚರ್ಯ ಚಕಿತರಾಗುತ್ತಾರೆ. ಗುರುಗಳು ಬಾಲಕನಿಗೆ ಸನ್ಯಾಸತ್ವ ದೀಕ್ಷೆ ನೀಡಿ, ತಮ್ಮ ಶಿಷ್ಯನನ್ನಾಗಿ ಸ್ವೀಕರಿಸುತ್ತಾರೆ. ಗುರುಕುಲ ಪದ್ಧತಿಯಲ್ಲಿ ಲೋಕ ಸಂಚಾರ ಮಾಡುತ್ತಲೆ  ಜ್ಞಾನ ಸಂಪಾದಿಸಿಕೊಳ್ಳುವುದು ಶಿಕ್ಷಣದ ಒಂದು ಮುಖ್ಯ ಭಾಗವಾಗಿತ್ತು. ಅದೇ ರೀತಿ ಸಿದ್ಧಲಿಂಗೇಶ್ವರರು ಚೆನ್ನಬಸವೇಶ್ವರರ ಮಾರ್ಗದರ್ಶನದಲ್ಲಿ ವಿಧ್ಯಾಭ್ಯಾಸ ಮುಗಿಸಿದ ಮೇಲೆ, ಗುರುಗಳ ಅಪ್ಪಣೆಯ ಮೇರೆಗೆ ಲೋಕ ಸಂಚಾರಕ್ಕೆ ಹೊರಟು ನಿಲ್ಲುತ್ತಾರೆ. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ, ಪಶ್ಚಿಮಘಟ್ಟಗಳಿಂದ ಅರುಣಾಚಲ ಪ್ರದೇಶದವರೆಗೂ ಇಡೀ ಭಾರತವನ್ನು ಸಂಚಾರ ಮಾಡಿ ಶಿವಯೋಗ, ಶಿವಭಕ್ತಿಯನ್ನು ಪ್ರಸಾರ ಮಾಡುವ ಕಾರ್ಯದಲ್ಲಿ ತೊಡಗಿಕೊಳ್ಳುತ್ತಾರೆ.

ಕಗ್ಗೆರೆಯ ಸಮೀಪದಲ್ಲಿರುವ ನಾಗಿಣೀ ನದಿಯ ತೀರದಲ್ಲಿ ತೋಂಟದೊಳಗೆ ಬಹಳ ಕಾಲ ಶಿವಯೋಗದಲ್ಲಿ ಇದ್ದುದರಿಂದ ಇವರಿಗೆ "ತೋಂಟದ" ಎಂಬ ವಿಶೇಷಣವು ರೂಢಿಯಾಗಿ ಬಂದಿದೆ. ಇವರು ವೀರಶೈವಲಿಂಗಾಯತರಲ್ಲಿ ಪ್ರಸಿದ್ಧರಾದ ಗುರು. ಇವರ ಚರಿತ್ರೆ ಗ್ರಂಥಗಳಲ್ಲಿ ಇವರು ನಿರಂಜನ ಗಣೇಶ್ವರನ ಅಪರಾವತಾರವೆಂದು ಹೇಳಿದ್ದಾರೆ. ಎಡೆಯೂರು ಸಿದ್ಧಲಿಂಗೇಶ್ವರ ದೇವಸ್ಥಾನದ ಪ್ರಕಾರದಲ್ಲಿ ಸುಮಾರು ೧೫೦೦ರಲ್ಲಿ ಬರೆದ ಒಂದು ಶಿಲಾಶಾಸನವಿದೆ.  ಅಂದರೆ ಸಿದ್ಧಲಿಂಗಯತಿಯು ವಿಜಯನಗರದ ರಾಜನಾದ ವಿರೂಪಾಕ್ಷನ (೧೪೬೭–೧೪೭೮) ಕಾಲದಲ್ಲಿದ್ದಂತೆ, ವಿರೂಪಾಕ್ಷ ಪಂಡಿತನ ೧೫೮೪ ಚನ್ನಬಸವ ಪುರಾಣದಿಂದ ಊಹಿಸಬಹುದಾಗಿದೆ. ಇವರ ಕಾಲವು ಸುಮಾರು ೧೪೭೦ ಆಗಬಹುದು.
ಇವರು “ಷಟಸ್ಥಲ ಬ್ರಹ್ಮಿ”ಗಳೆಂದು ಹೆಸರುವಾಸಿಯಾಗಿದ್ದಾರೆ. ಇವರು ೭೦೧ ವಚನಗಳನ್ನು ಷಟ್ಸ್ಥಲ ವಿಭಾಗ ಕ್ರಮದಲ್ಲಿ ರಚಿಸಿದ್ದಾರೆ. ಇವರ ವಚನಗಳು ಸತ್ವಯುತ ವಾಗಿವೆ. ಅಲ್ಲದೆ ಬೆಡಗಿನ ವಚನಗಳನ್ನೂ ರಚಿಸಿದ್ದಾರೆ. ಇವರ ಶಿಷ್ಯರಾದ ಘನಲಿಂಗಿದೇವರು ಇವರನ್ನು “ತೋಂಟದ ಅಲ್ಲಮ” ಎಂದು ಕರೆದಿದ್ದಾರೆ.  ೧೨ ನೇ ಶತಮಾನದಲ್ಲಿ ಹುಟ್ಟಿದ್ದ ಅನುಭವ ಮಂಟಪ ಕಲ್ಯಾಣಕ್ರಾಂತಿ ನಂತರ ಶೂನ್ಯವಾಯಿತು. ಅನುಭವ ಮಂಟಪದ ಪರಿಕಲ್ಪನೆ ಹದಿನೈದನೆ ಶತಮಾನದವರೆಗೂ ಪುನಃ ಆಕಾರ ಪಡೆಯಲೆ ಇಲ್ಲ. ಇಂತಹ ಸಂದರ್ಭದಲ್ಲಿ ಹದಿನೈದನೆಯ ಶತಮಾನದ ಮಧ್ಯದಲ್ಲಿ ತೋಂಟದ ಸಿದ್ಧಲಿಂಗರು ಅದನ್ನು ಮತ್ತೆ ಅಸ್ತಿತ್ವಕ್ಕೆ ತಂದು ಪೀಠವೇರಿದರು. ಅದಕ್ಕೇ ಇವರನ್ನು “ತೋಂಟದ ಅಲ್ಲಮ” ನೆಂದು ಕರೆದಿದ್ದಾರೆ. ಅಲ್ಲಮಪ್ರಭು, ಚನ್ನಬಸವಣ್ಣ ಹಾಗು ಸೊನ್ನಲಿಗೆ ಸಿದ್ಧರಾಮರು ಅಲಂಕರಿಸಿದ ಶೂನ್ಯ ಪೀಠವನ್ನು ಅಲಂಕರಿಸಿದ ನಾಲ್ಕನೇ ಶೂನ್ಯ ಸಿಂಹಾಸನಾಧ್ಯಕ್ಷರು. 
ಶರಣರ ಪರಂಪರೆಯ ಮುಖ್ಯ ನಾಯಕ ವ್ಯಕ್ತಿಯಾಗಿ ಇವರು ಅನುಭವ ಮಂಟಪವನ್ನು ಮೂರು ಬಗೆಗಳಲ್ಲಿ ಪುನರುಜ್ಜೀವನಗೊಳಿಸಿದನು. 
1.ಹನ್ನೆರಡನೆಯ ಶತಮಾನದಲ್ಲಿ ಅನುಭವ ಮಂಟಪದ ಗೋಷ್ಠಿ ಕೇದ್ರೀಕೃತಗೊಂಡದ್ದು ಕಲ್ಯಾಣದಲ್ಲಿ. ಕಲ್ಯಾಣಕ್ಕೆ ಸೀಮಿತವಾಗಿದ್ದ ಅನುಭವ ಮಂಟಪವನ್ನು ತೋಂಟದಾರ್ಯರು ತಾವು ಚರಿಸಿದ ಬೇರೆ ಬೇರೆ ಗ್ರಾಮ ಪಟ್ಟಣಗಳಿಗೂ ಚರಿಸುವಂತೆ ಮಾಡಿದರು. ಮಹಾಬಳೇಶ್ವರ, ಕಂಗೆರೆ, ಚಿತ್ರಕಾಯಪುರ, ಹೆಬ್ಬೂರು, ತುಮಕೂರು, ದೇವರಾಯ ಪಟ್ಟಣ, ಹೊಳಲುಗುಂದ, ಎಡೆಯೂರು ಈ ಎಲ್ಲ ಗ್ರಾಮಗಳಲ್ಲಿ ಅನುಭವ ಮಂಟಪದ ಸಂಕಥನ ಜರಗುವಂತೆ ಮಾಡಿದರು. 
2. ಹೀಗೆ ತಾವೊಬ್ಬರೆ ಅನುಭವ ಮಂಟಪದ ವ್ಯಕ್ತಿರೂಪವಾಗಿ, ಪರ್ಯಟನ ಪೂರೈಸದೆ ಏಳುನೂರು ಜನ ವಿರಕ್ತರನ್ನು ಸಿದ್ಧ ಪಡಿಸಿ ಇವರೆಲ್ಲ ಅನುಭವ ಮಂಟಪವಾಗಿ ಸಂಚರಿಸುವಂತೆ ವ್ಯವಸ್ಥೆ ಮಾಡಿದರು. ಬಹುಶಃ ಹನ್ನೆರಡನೆ ಶತಮಾನದಲ್ಲಿ ಅಲ್ಲಮ ಪ್ರಭುಗಳು ಮಾತ್ರ ವಿರಕ್ತರಾಗಿದ್ದರು. ಈಗ ಅನುಭವ ಮಂಟಪ ಸಂದೇಶವನ್ನು ದಿಕ್ಕು ದಿಕ್ಕಿಗೂ ಮುಟ್ಟಿಸಲು ಏಳುನೂರು ಜನರ ವಿರಕ್ತ ಪಡೆಯನ್ನು ತೋಂಟದಾರ್ಯರು, ಪರಿಣಾಮಕಾರಿಯಾಗಿ ಬಳಸಿದರು. ಇವರಲ್ಲಿ ಸಪ್ಪೇದೇವರು, ಬೋಳ ಬಸವರಾಜ ದೇವರು, ಉಪ್ಪಿನ ಹಳ್ಳಿ ಸ್ವಾಮಿಗಳು, ಗುಮ್ಮಳಾಪುರ ಸಿದ್ಧಲಿಂಗ, ಪಟ್ಟಣದ ದೇವರು, ಶೀಲವಂತ ದೇವರು, ಘನಲಿಂಗಿ, ಸುತ್ತೂರು ಸಿದ್ಧಮಲ್ಲೇಶ, ಬತ್ತಲೆಯ ದೇಶಿಕ, ಹುಚ್ಚ ಪರ್ವತೇಶ , ಕಂಕಣದ ದೇವರು, ರಾಚವೀಟಿಯ ದೇವರು, ಗುರು ಚಂದ್ರಶೇಖರ, ದೊಡ್ಡ ಸಿದ್ಧೇಶ, ಸ್ವತಂತ್ರ ಸಿದ್ಧಲಿಂಗೇಶ್ವರ, ಮಳೆಯದೇವ, ಕೊಡಗಿನಹಳ್ಳಿಯಾರ್ಯ .......... ಇವರೆ ಮೊದಲಾದ ಏಳನೂರು ಜನರಿಂದಾಗಿ ಸಂಚಾರಿ ಅನುಭವ ಮಂಟಪ ಅರ್ಥ ಪಡೆಯಿತು. 
     ಈ ಸಮಕಾಲೀನರನ್ನು ಬಿಟ್ಟರೂ ಇವರ ಶಿಷ್ಯ ಪರಂಪರೆಯವರೂ ಅನುಭವ ಮಂಟಪ ಸಂಸ್ಕೃತಿಯನ್ನು ಇತಿಹಾಸದುದ್ದಕ್ಕೂ ಹಳ್ಳಿ ಹಳ್ಳಿಗೆ ಮುಟ್ಟಿಸುವ ಕೆಲಸ ಮಾಡುತ್ತಿದ್ದರು. ಇವರಲ್ಲಿ ತೋಂಟದಾರ್ಯರ ಪರಂಪರೆಯವರಂತೂ ತಮ್ಮ ಕರ್ತವ್ಯವೆಂಬಂತೆ ಈ ಹೊಣೆಯನ್ನು ಶತಮಾನದಿಂದ ಶತಮಾನಕ್ಕೆ ಮುನ್ನಡೆಸಿದರು. ಇವರಲ್ಲಿ ಕಟ್ಟಿಗೆಹಳ್ಳಿ ಸಿದ್ಧಲಿಂಗರು ಸಂಸಾರವನ್ನು ಬಿಟ್ಟು ಹರಪನಹಳ್ಳಿಯಲ್ಲಿ ನಿಂತು ಚೀಲಾಳಪ್ರಭುವನ್ನು ಉತ್ತರಾಧಿಕಾರಿ  ಮಾಡಿಕೊಂಡರು. ಚೀಲಾಳಸ್ವಾಮಿ ಹರಪನ ಹಳ್ಳಿಯ ಗುಡ್ಡದ ಓರೆಯಲ್ಲಿ ಮಠ ಕಟ್ಟಿಸಿ ಅನುಭವ ಮಂಟಪ ಸ್ಥಾಪಿಸಿದರು. ಇದರಿಂದಾಗಿ ತೋಂಟದಾರ್ಯರು ಆರಂಭಿಸಿದ ಅನುಭವ ಮಂಟಪ ಸಂಚಾರವನ್ನು ಬಿಟ್ಟು ಸ್ಥಗಿತಗೊಂಡಿತು. ಹದಿನಾರನೆಯ ಶತಮಾನದಲ್ಲಿ ಅನುಭವ ಮಂಟಪಕ್ಕೆ ಚಲನಶೀಲತೆ ನೀಡಿ ಅದು ವ್ಯಾಪಕವಾಗಿ ಹರಡಲು ಕಾರಣವಾದುದು ತೋಂಟದಾರ್ಯರ ದೊಡ್ದ ಸಾಧನೆಯಾಗಿದೆ. 
   3. ಈ ಅನುಭವ ಮಂಟಪವನ್ನು “ಶೂನ್ಯಸಂಪಾದನೆ” ಹೆಸರಿನಲ್ಲಿ ಗ್ರಂಥಸ್ಥ ಗೊಳಿಸಲು ಶಿಷ್ಯರಿಗೆ ಪ್ರೇರಣೆ ನೀಡಿದರು. ನಾಲ್ಕು ಶೂನ್ಯ ಸಂಪಾದನೆಗಳಲ್ಲಿ ಮೂರನ್ನು ರೂಪಿಸಿದವರು ತೋಂಟದಾರ್ಯರ ಶಿಷ್ಯ ಪರಂಪರೆಯ “ ಹಲಗೆದೇವ , ಗುಮ್ಮಳಾಪುರ ಸಿದ್ಧಲಿಂಗ, ಗೂಳೂರು ಸಿದ್ಧವೀರಣ್ಣರು. ಅನುಭವ ಮಂಟಪ ಸಂಸ್ಕೃತಿಯನ್ನು ಗ್ರಂಥಗಳ ಮೂಲಕ ಪ್ರಸಾರಮಾಡಿಸಿದ್ದ ವಿನೂತನ ಉಪಕ್ರಮವಿದು. .

ತೋಂಟದ ಸಿದ್ಧಲಿಂಗ ಶಿವಯೋಗಿಯು ಅನುಭವ ಮಂಟಪವನ್ನು ಪುನರುಜ್ಜೀವನಗೊಳಸಿದರು
ಮತ್ತು ಅದನ್ನು ವ್ಯಕ್ತಿ ಮಾಧ್ಯಮ, ಗ್ರಂಥ ಮಾಧ್ಯಮಗಳಲ್ಲಿ ಪ್ರಸಾರ ಮಾಡಿದರು. ಎಡೆಯೂರಿನ ಶ್ರೀ ತೋಂಟದ ಸಿದ್ಧಲಿಂಗೇಶ್ವರರು ಕನ್ನಡನಾಡು ಕಂಡ ಅನುಭಾವಿ ಸಂತ ಶರಣರಲ್ಲಿ ಅತ್ಯಂತ ಪ್ರಮುಖರು. 
ವಚನಗಳು :
1. ವಚನ
ಆದಿ ಅನಾದಿಗಳಿಲ್ಲದಂದು,
ನಾದ ಬಿಂದು ಕಳೆ ಮೊಳೆದೋರದಂದು,
ದೇಹ ದೇಹಿಗಳು ಉತ್ಪತ್ತಿಯಾಗದಂದು,
ಜೀವಾತ್ಮ ಪರಮಾತ್ಮರೆಂಬವರಿಲ್ಲದಂದು,
ಸಕಲ ಸಚರಾಚರಂಗಳ ಸುಳುಹಿಲ್ಲದಂದು,
ಇವೇನುಯೇನೂ ಇಲ್ಲದಂದು,
ನೀನು ಶೂನ್ಯನಾಗಿರ್ದೆಯಯ್ಯಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ. 
 - ಶ್ರೀ ತೋಂಟದ ಸಿದ್ಧಲಿಂಗೇಶ್ವರರು
ಅರ್ಥ:
ದೇವರ ಸ್ವರೂಪ - ಶೂನ್ಯದಿಂದ ವಿಶ್ವ, ಜೀವ ಉತ್ಪತ್ತಿ

2.ವಚನ
ಆದಿ ಮಧ್ಯಾವಸಾನವಿಲ್ಲದಂದು,
ಆದಿ ಅನಾದಿ, ಬಿಂದು ಕಳೆಗಳಿಲ್ಲದಂದು,
ಸಾವಯ, ನಿರವಯವಿಲ್ಲದಂದು,
ತತ್ವ ಬ್ರಹ್ಮಾಂಡಾದಿ
ಲೋಕಾದಿ ಲೋಕಂಗಳೇನುಯೇನೂ ಇಲ್ಲದಂದು;
ನಿತ್ಯ ನಿರಂಜನ ಪರವಸ್ತು ನೀನೊರ್ಬನೆಯಿದ್ದೆಯಲ್ಲ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ. 
 - ಶ್ರೀ ತೋಂಟದ ಸಿದ್ಧಲಿಂಗೇಶ್ವರರು
ಅರ್ಥ:
ನಿತ್ಯ ನಿರಂಜನ ಪರಮಾತ್ಮನಿಂದ ವಿಶ್ವ ಉತ್ಪತ್ತಿ

3.ವಚನ
ಪಶ್ಚಿಮಚಕ್ರದಲ್ಲಿ ನಿತ್ಯ ನಿರಂಜನನ ಬೆಳಗು
ತತ್ತ್ವಬ್ರಹ್ಮಾಂಡದಿಂದತ್ತತ್ತಲಾದ ಘನ ನೋಡಾ.
ಅದು ಪರಂಜ್ಯೋತಿ ಪರತತ್ವ ಪರಾಪರವಸ್ತುವೇ
ಪ್ರಸಾದ ನೋಡಾ.
ಪ್ರತಿಯಿಲ್ಲದ ಅಪ್ರತಿಮ ಪ್ರಸಾದದಲ್ಲಿ ನಿಃಪತಿಯಾಗಿ
ಮಹಾಪ್ರಸಾದಿಯಾದೆನು ನೋಡಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
 - ಶ್ರೀ ತೋಂಟದ ಸಿದ್ಧಲಿಂಗೇಶ್ವರರು
ಅರ್ಥ:
ಪರಂಜ್ಯೋತಿ ಪರತತ್ವ ಪರಾಪರವಸ್ತುವಿನಲ್ಲಿ ನಿಃಪತಿಯಾಗಿ ಮಹಾಪ್ರಸಾದಿ ಯಾದ ಬಗೆ.

4.ವಚನ
ಆಧಾರಚಕ್ರದಲ್ಲಿ ನಕಾರ ಸ್ವಾಯತ.
ಸ್ವಾಧಿಷ್ಠಾನಚಕ್ರದಲ್ಲಿ ಮಃಕಾರ ಸ್ವಾಯತ.
ಮಣಿಪೂರಕಚಕ್ರದಲ್ಲಿ ಶಿಕಾರ ಸ್ವಾಯತ.
ಅನಾಹತಚಕ್ರದಲ್ಲಿ ವಾಕಾರ ಸ್ವಾಯತ.
ವಿಶುದ್ಧಿಚಕ್ರದಲ್ಲಿ ಯಕಾರ ಸ್ವಾಯತ.
ಆಜ್ಞಾಚಕ್ರದಲ್ಲಿ ಓಂಕಾರ ಸ್ವಾಯತ.
ಇದು ಕಾರಣ, ಶರಣನ ಕಾಯವೇ ಷಡಕ್ಷರಮಂತ್ರಶರೀರವಾಗಿ,
ಸರ್ವಾಂಗವೆಲ್ಲವು ಜ್ಞಾನ ಕಾಯ ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ
 - ಶ್ರೀ ತೋಂಟದ ಸಿದ್ಧಲಿಂಗೇಶ್ವರರು
ಅರ್ಥ:
ಶಿವಯೋಗದ ಮಾರ್ಗ - ಚಕ್ರ ಗಳಲ್ಲಿ "ಓಂ ನಮಃ ಶಿವಾಯ"ಎಂಬ ಷಡಕ್ಷರಮಂತ್ರ ಜಪದಿಂದ ಸರ್ವಾಂಗ ಜ್ಞಾನವಾಗಿ ಪರಿಣಮಿಸಿದ ಅರಿಹು.
"ಓಂ ನಮಃ ಶಿವಾಯ"ಎಂಬ ಷಡಕ್ಷರಮಂತ್ರದ ಮಹತ್ವ ,ಮಹಿಮೆ.

5.ವಚನ
ಆಜ್ಞಾಚಕ್ರದ ದ್ವಿದಳ ಪದ್ಮದಲ್ಲಿ ಅವಿರಳ ಸುಜ್ಞಾನ ಪೀಠದೊಳಗೆ
ಅಮೃತಮಯ ಲಿಂಗವ ಕಂಡೆನು ನೋಡಾ.
ಆ ಲಿಂಗ ಸಂಗದಿಂದ ಉತ್ಪತ್ತಿ ಸ್ಥಿತಿ ಪ್ರಳಯವ ಗೆಲಿದು
ನಿತ್ಯ ನಿರಂಜನ ಪ್ರಸಿದ್ಧ ಪ್ರಸಾದಿಯಾದೆನು ಕಾಣಾ.
ಆ ಪ್ರಸಿದ್ಧ ಪ್ರಸಾದವೆ ಒಂದೆರಡಾಗಿ ಎರಡು ಮೂರಾಗಿ
ಮೂರು ಆರಾಗಿ ಆರು ಮೂವತ್ತಾರಾಗಿ
ಮೂವತ್ತಾರು ಇನ್ನೂರಹದಿನಾರಾಗಿ
ಆ ಇನ್ನೂರ ಹದಿನಾರರ ಬೆಳಗು
ಪಿಂಡಾಂಡದಲ್ಲಿ ಪರಿಪೂರ್ಣವಾಗಿ
ಸದಾ ಸನ್ನಿಹಿತವಾಗಿಪ್ಪುದು.
ನಿಮ್ಮ ಶರಣ ಸಂಗನ ಬಸವಣ್ಣ
ಮೊದಲಾದ ಪ್ರಮಥರಿಗೆ ಸಾಧ್ಯವಲ್ಲದೆ
ಅಜ ಹರಿ ಸುರ ಮನು ಮುನಿಗಳಿಗೆ
ಅಗಮ್ಯ ಅಗೋಚರ ಅಪ್ರಮಾಣ ಅಸಾಧ್ಯ ನೋಡಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ. 
 - ಶ್ರೀ ತೋಂಟದ ಸಿದ್ಧಲಿಂಗೇಶ್ವರರು
ಅರ್ಥ:
ಅಜ ಹರಿ ಸುರ ಮನು ಮುನಿಗಳಿಗೆ
ಅಗಮ್ಯ ಅಗೋಚರ ಅಪ್ರಮಾಣ ಅಸಾಧ್ಯ ವಾದ ಲಿಂಗ, ಬಸವಣ್ಣ ಆದಿ ಶರಣ ರಿಗೆ ಶಿವಯೋಗದ 
ಆಜ್ಞಾಚಕ್ರದ ದೃಷ್ಟಿ ಯೋಗ ದಿಂದ ಸನ್ನಿಹಿತ ವಾಯಿತು. ಶಿವಯೋಗದ ಮಹತ್ವ ಅರುಹಿದ್ದಾರೆ.

 6.ವಚನ
ಒಳಗೆ ನೋಡಿದರೆ ಒಳಗೆ ಬಯಲು
ಹೊರಗೆ ನೋಡಿದರೆ ಹೊರಗೂ ಬಯಲು
ನೆನೆವೆನೆಂದರೆ ನೋಡಾ ಮನ ಬಯಲು
ನೆನೆಸಿಕೊಂಬೆನೆಂದರೆ ನೀನಿಲ್ಲವಾದೆ ನಾ
ಬಯಲು ನೀ ಬಯಲು ನೋಡಾ
ಭಾವಿಸಿಕೊಂಬ ವಸ್ತು ಇನ್ನಿಲ್ಲವಾಗಿ
ಭಾವ ಬಯಲೆಂಬೆನು ನೋಡಾ
ಮಹಾಲಿಂಗ ಗುರು ಸಿದ್ಧೇಶ್ವರ ಪ್ರಭುವೇ.
 - ಶ್ರೀ ತೋಂಟದ ಸಿದ್ಧಲಿಂಗೇಶ್ವರರು
ಅರ್ಥ: 
ಶಿವಯೋಗದ ತನ್ಮತೆ-  ಒಳಗೂ ಬಯಲು ಹೊರಗೂ ಬಯಲು. ಭಾವ ಬಯಲು. 
ಶರಣರು ಪರಮಾತ್ಮನನ್ನು ಲಿಂಗ, ಬಯಲು, ಜ್ಯೋತಿರ್ಲಿಂಗ, ಶೂನ್ಯ, ಅರಿವು, ಶಿವ ಎಂದು ಕರೆದಿದ್ದಾರೆ.

 7.ವಚನ
ಭಕ್ತಸ್ಥಲ ಮಹೇಶ್ವರಸ್ಥಲದಲ್ಲಡಗಿ
ಮಹೇಶ್ವರಸ್ಥಲ ಪ್ರಸಾದಸ್ಥಲದಲ್ಲಡಗಿ
ಪ್ರಸಾದಸ್ಥಲ ಪ್ರಾಣಲಿಂಗಸ್ಥಲದಲ್ಲಡಗಿ
ಪ್ರಾಣಲಿಂಗಸ್ಥಲ ಶರಣಲಿಂಗಸ್ಥಲದಲ್ಲಡಗಿ
ಶರಣ ಸ್ಥಲ ಐಕ್ಯದಲ್ಲಡಗಿ
ಇಂತಿ ಷಡಾಂಗ ಯೋಗ ಸಮರಸವಾಗಿ
ಷಡ್ ಸ್ಥಲವ ಮೀರಿ ನಿರವಯಸ್ಥಲವ ನೇಯ್ದು
ಆ ನಿರವಯ ಸ್ಥಲವ ನಿರಾಳದಲ್ಲಡಗಿ
ಆ ನಿರಾಳ ನಿತ್ಯ ನಿರಂಜನ ಪರವಸ್ತು ತಾನಾಯತ್ತಾಗಿ
ಕ್ರಿಯಾ ನಿಷ್ಪತ್ತಿ, ಜ್ಞಾನ ನಿಷ್ಪತ್ತಿ, ಭಾವ ನಿಷ್ಪತ್ತಿ,
ಮಾಡುವ ಕ್ರಿಯೆಗಳೆಲ್ಲ ನಿಷ್ಪತ್ತಿಯಾಗಿ ಅರಿವ
ಅರುಹೆಲ್ಲ ಅಡಗಿ ಭಾವಿಸುವ ಭಾವವೆಲ್ಲ
ನಿರ್ಭಾವವಾಗಿ ನಿರ್ಲೇಪ ನಿರಂಜನ ವಸ್ತು
ತಾನು ತಾನಾದಲ್ಲದೇ ಧ್ಯಾನಿಸಲಿಕ್ಕೇನು ಇಲ್ಲ
ಮಹಾಲಿಂಗ ಗುರು ಶಿವ ಸಿದ್ಧೇಶ್ವರ ಪ್ರಭುವೇ. 
- ಶ್ರೀ ತೋಂಟದ ಸಿದ್ಧಲಿಂಗೇಶ್ವರರು
ಅರ್ಥ: 
ಸಾಧಕ, ಷಟಸ್ಥಲ ಮಾರ್ಗದಲ್ಲಿ ಭಕ್ತ ಮಾಹೇಶ್ವರ ,ಪ್ರಸಾದಿ, ಪ್ರಾಣಲಿಂಗಿ, ಶರಣ, ಐಕ್ಯ ಐಕ್ಯದಲ್ಲಿಯೇ ಮಹನ್ನೋತವಾದ ನಿರವಯ
ಸ್ಥಲವನು ಏರಿ ನಿರಾಳವಾಗಿ, ಆ ನಿರಾಳ ನಿತ್ಯ ನಿರಂಜನ ಪರಮಾತ್ಮ ತಾನಾಗಿ ಕ್ರಿಯಾ,ಜ್ಞಾನ,ಭಾವನಿಷ್ಪತ್ತಿಯಾಗಿ,ನಿರ್ಭಾವವಾಗಿ  ನಿರ್ಲಿಪ್ತ ನಿರಂಜನ ವಸ್ತುವೇ ತಾನಾದ ಬಳಿಕ
ಧ್ಯಾನಿಸಲಿಕ್ಕೆ, ಪೂಜಿಸಲಿಕ್ಕೆ ಏನು ಇಲ್ಲ.
ಷಟಸ್ಥಲ ಮಾರ್ಗ- ಸಾಧಕನೇ ಶಿವನಾಗುತ್ತಾನೆ.

8.ವಚನ
ಚಿನ್ಮಯ ವಸ್ತುವಿನಿಂದ ಚಿದ್ಬಿಂದು ಉದಯಿಸಿತ್ತು. ಆ ಚಿತ್ತಿನ ಪ್ರಭೆಯಲ್ಲಿ ಶರಣನುದಯಿಸಿದನು. ಇದು ಕಾರಣ
ಚಿನ್ಮಯ,ಚಿದ್ರೂಪ,ಚಿತ್‍ಪ್ರಕಾಶ
ಚಿದಾತ್ಮನೆ ಶರಣನೆಂಬ ವಾಕ್ಯ ಸತ್ಯಕಂಡಯ್ಯಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ
 - ಶ್ರೀ ತೋಂಟದ ಸಿದ್ಧಲಿಂಗೇಶ್ವರರು
ಅರ್ಥ:
ಚಿನ್ಮಯ ಶಿವನಿಂದ ಚಿದ್ಬಿಂದು ಉದಯಿಸಿ ಅದರ ಚಿತ್ತಿನ ಪ್ರಭೆಯಲ್ಲಿ ಶರಣನು ಉದಯಿಸಿದನು. ಈ ಕಾರಣ ಶರಣ ಚಿನ್ಮಯ,ಚಿದ್ರೂಪ, ಚಿತ್‍ಪ್ರಕಾಶ,ಚಿದಾತ್ಮನು. ಇದು ಸತ್ಯ.
9
ಶಿವನ ಕಾಯವೇ ಭಕ್ತ,
ಭಕ್ತನ ಕಾಯವೇ ಶಿವ.
ಶಿವನ ಚೈತನ್ಯವೇ ಭಕ್ತ,
ಭಕ್ತನ ಚೈತನ್ಯವೇ ಶಿವನು ನೋಡಾ.
ಭಕ್ತನ ಮನ ಭಾವ ಕರಣಂಗಳೇ 
ಭಕ್ತನು ನೋಡಾ. ಇದು ಕಾರಣ
ಶಿವನೇ ಭಕ್ತನು; ಭಕ್ತನೇ ಶಿವನು
ದೇವ ಭಕ್ತನೆಂಬ ಅಂತರವೆಲ್ಲಿಯದೋ?ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
-- ತೋಂಟದ ಸಿದ್ಧಲಿಂಗ ಶಿವಯೋಗಿಗಳು

ತೋಂಟದ ಸಿದ್ಧಲಿಂಗೇಶ್ವರರು ಶರಣರ ಬಸವ ಅಲ್ಲಮ ವಿರಕ್ತ ಸಂಪ್ರದಾಯದ ಗುರುಗಳು. ಅವರು ಬಸವಣ್ಣ ನವರನ್ನು ವರ್ಣಿಸಿದ ಬಗೆ ಅಪೂರ್ವ ಅಮೋಘ ಅನುಪಮವಾದದ್ದು.

*ಸಿದ್ಧಲಿಂಗೇಶ್ವರಯತಿಗಳು ತೋಂಟದ ಸಿದ್ಧಲಿಂಗೇಶ್ವರರು ಆದ ಬಗೆ* :
ಈಗಿನ ತುಮಕೂರು ಜಿಲ್ಲೆಯ  ಗ್ರಾಮಗಳಿಗೆ ಮಾಂಡಲೀಕರಾಗಿದ್ದವರು ವಕ್ಕಲಿಗರ ನಂಬಿಯನ. ಸಿದ್ಧಲಿಂಗೇಶ್ವರರು ಲೋಕ ಸಂಚಾರ ಮಾಡುತ್ತಾ ಈ ನಂಬಿಯನ ತೋಟದಲ್ಲಿ ಬೀಡು ಬಿಡುತ್ತಾರೆ. ನಂಬಿಯನ ಖುದ್ದು ತಾನೇ ಬಂದು ಸ್ವಾಮಿಯವರನ್ನು ಭೇಟಿಯಾಗುತ್ತಾನೆ ಹಾಗು ತಮ್ಮ ಮನೆಗೆ ಆಗಮಿಸಿ ಆತಿಥ್ಯವನ್ನು ಸ್ವೀಕರಿಸಿ ಊರಿನ ಜನಗಳನ್ನು ಆಶಿರ್ವದಿಸಬೇಕಾಗಿ ಕೇಳಿಕೊಳ್ಳುತ್ತಾನೆ. ಇದಕ್ಕೆ ಒಪ್ಪಿದ ಸಿದ್ಧಲಿಂಗೇಶ್ವರರು ಮತ್ತೊಮ್ಮೆ ನಂಬಿಯನ ಬಂದು ಕರೆಯುವವರೆಗೂ ತಾವು ಅದೇ ತೋಟದಲ್ಲಿ ಇರುವುದಾಗಿ ತಿಳಿಸುತ್ತಾರೆ. ಸಂತೋಷದಿಂದ ನಂಬಿಯನ ತನ್ನ ಮನೆಗೆ ಹಿಂದಿರುಗಿ ಸ್ವಾಮಿಯವರ ಸೇವೆಗೆ ಅಣಿ ಮಾಡಲು ಮೊದಲಾಗುತ್ತಾನೆ. ಇದೇ ಸಮಯಕ್ಕೆ ಬಹಳ ವರ್ಷಗಳಿಂದ ಆ ಊರಿನೊಂದಿಗೆ ವೈರತ್ವ ಸಾಧಿಸುತ್ತಿದ್ದ ದಕ್ಷಿಣ ಪ್ರಾಂತ್ಯದ ಗುಡ್ಡಗಾಡು ಪ್ರದೇಶದ ಬೇಡರ ಗುಂಪು ಕಗ್ಗೆರೆ ಮತ್ತಿತರ ಪ್ರದೇಶಗಳ ಮೇಲೆ ಯುದ್ಧ ಸಾರುತ್ತದೆ. ಯುದ್ಧದಲ್ಲಿ ಪ್ರಬಲರಾಗಿದ್ದ ಬೇಡರ ಪಡೆ ಯುದ್ಧದಲ್ಲಿ ವಿಜಯಿಗಳಾಗಿ ಅಲ್ಲಿನ ಮಾಂಡಲೀಕರು ಸೇರಿದಂತೆ ಎಲ್ಲರನ್ನು ಸೆರೆಯಾಳುಗಳನ್ನಾಗಿ ಹೊತ್ತೊಯ್ಯಲಾಗುತ್ತದೆ. ಮುಂದೆ ಈ ಸಂಕಷ್ಟದಿಂದ ಪಾರಾಗಲು ಅವರಿಗೆ ಸುಮಾರು ಹನ್ನೆರಡು ವರ್ಷಗಳೇ ಬೇಕಾಗುತ್ತವೆ. ಬಂಧನಮುಕ್ತರಾಗಿ ಊರಿಗೆ ಹಿಂದಿರುಗಿದ ಎಲ್ಲರಿಗೂ ನಂಬಿಯನ ತೋಟದಲ್ಲಿ ಹುತ್ತ ಬೆಳೆದಿರುವುದು ಕಂಡಿತ್ತು. ಆದರೆ ಅದರ ಬಗ್ಗೆ ಯಾರು ಹೆಚ್ಚಾಗಿ ತಲೆ ಕೆಡಿಸಿಕೊಳ್ಳಲು ಹೋಗಲಿಲ್ಲ. ಆದರೆ ಅಲ್ಲೊಂದು ಆಶ್ಚರ್ಯ ನಡೆಯಲು ಶುರುವಾಗುತ್ತದೆ. ಮೇಯಲು ಬಿಟ್ಟಿದ್ದ ದನಗಳ ಗುಂಪಿನಿಂದ ತಪ್ಪಿಸಿಕೊಂಡ ಹಸುವೊಂದು  ಓಡಿ ಬಂದು ನಂಬಿಯನ ತೋಟದಲ್ಲಿರುವ ಹುತ್ತದ ಮೇಲೇರಿ ತನ್ನಷ್ಟಕ್ಕೆ ತಾನೇ ಹುತ್ತಕ್ಕೆ ಹಾಲು ಕರೆಯಲು ಆರಂಭಿಸುತ್ತದೆ.  ಹಸುಗಳು ಸರತಿಯ ಪ್ರಕಾರ ದಿನವೂ ಹೋಗಿ ಸ್ವಪ್ರೇರಿತವಾಗಿ ನಂಬಿಯನ ತೋಟದಲ್ಲಿರುವ ಹುತ್ತಕ್ಕೆ ಹಾಲು ಎರೆಯುವುದನ್ನು ಕಂಡು  ದನಗಾಹಿಗಳು ಹುತ್ತವನ್ನು ಒಡೆಯಲು ಮುಂದಾಗುತ್ತಾರೆ. ಆದರೆ ಅಲ್ಲಿ ಭಯಂಕರ ವಿಷ ಸರ್ಪಗಳು ಓಡಾಡುತ್ತಿದುದನ್ನು ಕಂಡು ಭಯದಿಂದ ದೂರ ಸರಿದು ಈ ವಿಷಯವನ್ನು ಕೂಡಲೇ ಊರಿಗೆ ತಿಳಿಸುತ್ತಾರೆ. ಊರ ಜನರ ಸಮೇತ ನಂಬಿಯನ ತೋಟಕ್ಕೆ ಬಂದು ಕೂಲಂಕುಶವಾಗಿ ಹುತ್ತದ ಹತ್ತಿರ ನಿಂತು ಪರಿಶೀಲಿಸಿದಾಗ ಹುತ್ತದ ಒಳಗಿಂದ "ಓಂ ನಮಃ ಶಿವಾಯ" ಎಂದು ಶಿವ ಷಡಕ್ಷರಿ ಮಂತ್ರ ನಿರಂತರವಾಗಿ ಕೇಳಿಬರುತ್ತಿದ್ದುದನ್ನು ಗ್ರಹಿಸುತ್ತಾರೆ. ಊರಿನ ಜನರೆಲ್ಲಾ ಇಲ್ಲಿ ಯಾರೋ ಮಹಾತ್ಮರು ತಪಸ್ಸು ಮಾಡುತ್ತಿರಬಹುದು ಎಂದು ತಮ್ಮ ತಮ್ಮಲ್ಲೇ ಮಾತಾಡಿಕೊಂಡಾಗ ನಂಬಿಯನ ತಾನು ಸಿದ್ಧಲಿಂಗೇಶ್ವರರಿಗೆ ವರ್ಷಗಳ ಹಿಂದೆ ಕೊಟ್ಟಿದ್ದ ವಚನ ಜ್ಞಾಪಕವಾಗುತ್ತದೆ. ತನ್ನಿಂದ ಅತಿ ದೊಡ್ಡ ಪ್ರಮಾದವಾಗಿ ಈ ಅಚಾತುರ್ಯಕ್ಕೆ ಕಾರಣವಾಯಿತು ಎಂದು ಬಹಳ ಬೇಸರ ಪಟ್ಟುಕೊಳ್ಳುತ್ತಾನೆ. ಕೂಡಲೇ ಹುತ್ತದ ಹೊರಗೆ ನಿಂತುಕೊಂಡೆ ಸಿದ್ಧಲಿಂಗೇಶ್ವರರನ್ನು ಕರೆಯುತ್ತಾನೆ. ಅದಕ್ಕೆ ಪ್ರತಿಕ್ರಿಯಿಸುವ ಸಿದ್ಧಲಿಂಗೇಶ್ವರರು ತನ್ನ ಸುತ್ತಲು ಇರುವ ಹುತ್ತದಲ್ಲಿ ಅನೇಕ ಜೀವಿಗಳು ವಾಸಿಸುತ್ತಿರುವುದರಿಂದ ಹುತ್ತವನ್ನು ಒಡೆದರೆ ಅವುಗಳಿಗೆ ತೊಂದರೆಯಾಗುತ್ತದೆ. ಆದ್ದರಿಂದ ಅವುಗಳು ಈ ಸ್ಥಳ ಬಿಟ್ಟು ತೆರಳಿದ ನಂತರ ನೀವು ಹುತ್ತವನ್ನು ಕೆಡವಬಹುದು ಎಂದು ಆಜ್ಞಾಪಿಸುತ್ತಾರೆ. ಅಪ್ಪಣೆ ಅನುಸರಿಸಲು ಅಲ್ಲೇ ನಿಲ್ಲುವ ನಂಬಿಯನ ಅಲ್ಲಿನ ವಿಷಪೂರಿತ  ಜೀವಿಗಳು ಆ ಹುತ್ತವನ್ನು ತೊರೆಯುವ ತನಕ ಕಾದು ಅನಂತರ ಇದೇ ಹುತ್ತವನ್ನು ಹಸುವಿನ ಹಾಲಿನಿಂದ ಕರಗಿಸಿ ತನ್ನಿಂದ ಆದ ಪ್ರಮಾದವನ್ನು ಮನ್ನಿಸುವಂತೆ ಸಿದ್ಧಲಿಂಗೇಶ್ವರರನ್ನು ಭಿನ್ನವಿಸಿಕೊಳ್ಳುತ್ತಾನೆ. ಭಕ್ತನೊಬ್ಬನಿಗೆ ಕೊಟ್ಟ ಮಾತು ಉಳಿಸಿಕೊಳ್ಳುವ ಸಲುವಾಗಿ ಕುಳಿತ ಜಾಗದಿಂದ ಕದಲದೇ ಹನ್ನೆರಡು ವರ್ಷಗಳ ಕಾಲ ತೋಟವೊಂದರಲ್ಲಿ ತಪೋನಿಷ್ಠರಾಗಿದ್ದ ಸಿದ್ಧಲಿಂಗೇಶ್ವರರು ಜಗತ್ತು ಕಂಡ ಮಹಾ ಶರಣರು ಹಾಗು ಪವಾಡ ಪುರುಷರು, ಹಾಗಾಗಿ ಅವರಿಗೆ ‘ತೋಂಟದ ಸಿದ್ಧಲಿಂಗೇಶ್ವರ’ ಎಂಬ ಹೆಸರು ಪ್ರಾಪ್ತವಾಯಿತು.
- ✍️Dr Prema Pangi
#ಪ್ರೇಮಾ_ಪಾಂಗಿ
#ತೋಂಟದ_ಸಿದ್ಧಲಿಂಗೇಶ್ವರ

Comments

Popular posts from this blog

Shika chakra or Bindu chakra:Bindu visarga

Hrit Chakra or Eight Petals Chakra

A-Ka-Ta triangle or Akshara Brahma