ಪಂಚಾಚಾರ : ಲಿಂಗಾಚಾರ

ಪಂಚಾಚಾರ  :  ಲಿಂಗಾಚಾರ

ಪಂಚಾಚಾರ - ಲಿಂಗಾಚಾರ
*ಲಿಂಗಾಚಾರ*
ಲಿಂಗಾಚಾರವೆಂದರೆ 
1.ವೈಯಕ್ತಿಕವಾಗಿ ಲಿಂಗನಿಷ್ಠೆ.
2.ಸಾಮಾಜಿಕವಾಗಿ ಸರ್ವಸಮಾನತೆ ಎಂಬರ್ಥವಾಗುತ್ತದೆ. 
*ಲಿಂಗಾಚಾರದ ವೈಯಕ್ತಿಕ ಲಿಂಗನಿಷ್ಠೆ* 
ಧರ್ಮಸಾಧನೆಯ ಪರಮ ಗಂತವ್ಯವನ್ನು ಶರಣರು ಲಿಂಗಾಂಗ ಸಾಮರಸ್ಯ' ಎಂದು ಕರೆದರು; ಮತ್ತು ಇಷ್ಟಲಿಂಗವೇ ಪರಮ ಸಾಧನವೆಂದು ಬಗೆದರು. ಇಷ್ಟಲಿಂಗ ಅವರಿಗೆ ದೈವತ್ವದ ಕಲ್ಪನೆಯ ಅತ್ಯುನ್ನತ ಸಂಕೇತವಾಯಿತು. ಧಾರ್ಮಿಕ ಸಾಧನೆಯ ಪ್ರಾರಂಭದಿಂದ ಹಿಡಿದು ಕೊನೆಯ ಹಂತದವರೆಗೂ ಇಷ್ಟಲಿಂಗ ಅವಿಭಾಜ್ಯ ವಾದ ಅಂಗವಾಗಿ ಒಳಹೊರಗನ್ನು ವ್ಯಾಪಿಸುವಂತಾಯಿತು.
*ಲಿಂಗಾಚಾರದ ಸಾಮಾಜಿಕ ಸರ್ವಸಮಾನತೆ 
 ವೈಯಕ್ತಿಕ ವಿಕಾಸದ ಜೊತೆಗೆ ಸಾಮಾಜಿಕ ಸಮತೆಯನ್ನೂ ಸಾಧಿಸಿದುದು ಇಷ್ಟಲಿಂಗದ ವೈಶಿಷ್ಟ್ಯ. ಇಷ್ಟಲಿಂಗವು ಕುಲ ಜಾತಿ ಮತ ಪಂಥ, ಲಿಂಗ, ವಯಸ್ಸುಗಳ ತಾರತಮ್ಯವನ್ನೆಲ್ಲಾ ಕಿತ್ತೆಸೆದ ಮಾಂತ್ರಿಕ ಶಕ್ತಿಯಾಯಿತು. ಪರುಷ ಮುಟ್ಟಿದುದು ಹೊನ್ನಾಗುವಂತೆ ಲಿಂಗ ಮುಟ್ಟಿದವರೆಲ್ಲಾ ಸತ್ಕುಲಜರಾಗುತ್ತಾರೆ ಎಂಬ ಸರ್ವಸಮಾನತೆಯ ಆಚರಣೆ ಲಿಂಗಾಚಾರ. ವರ್ಣವಿಭೇದಗಳನ್ನು ಸಂಪೂರ್ಣವಾಗಿ ನಿರಾಕರಿಸಿ ಸರ್ವರಿಗೂ ಸಾಮಾಜಿಕ ಸ್ವಾತಂತ್ರ್ಯವನ್ನೂ ಧಾರ್ಮಿಕ ಸಮಾನತೆಯನ್ನೂ  ತಂದುಕೊಟ್ಟಿತು. ಅಸ್ಪೃಶ್ಯರೆನಿಸಿದ ಮಾದಿಗರ ಹರಳಯ್ಯ, ಧೂಳಯ್ಯ, ಶಿವನಾಗಮಯ್ಯ ಮೊದಲಾದವರು ಸ್ಪೃಶ್ಯರಾದುದು ಮಾತ್ರವಲ್ಲ, ತಾವೇ ಸಾಧಕರಾಗಿ ಅತ್ಯುಚ್ಚ ವರ್ಣದವರೊಡನೆ ಸಂಪೂರ್ಣ ಧಾರ್ಮಿಕ ಸಮಾನತೆಯನ್ನು ಪಡೆದರು. ಈ ಸಾಮಾಜಿಕ ಮತ್ತು ಧಾರ್ಮಿಕ ಕ್ರಾಂತಿಯನ್ನು ಬಸವಣ್ಣನವರು ಇಷ್ಟಲಿಂಗದ ಮೂಲಕ ಸಾಧಿಸಿ ತೋರಿಸಿದರು. ಹೀಗೆ ಅದು ಸಾಮಾಜಿಕ ಮತ್ತು ಧಾರ್ಮಿಕ ಸಮತೆಯ ಲಾಂಛನದೊಂದಿಗೆ ಅಂತರಂಗದ ಅರುವಿನ ಕುರುಹಾಯಿತು. ಅರುಹನ್ನು ಪಡೆಯುವ ಸಾಧನವಾಯಿತು. 

'ಲಿಂಗಾಚಾರ' ಎಂಬ ಮಾತನ್ನು ಎರಡು ರೀತಿಯಲ್ಲಿ ಅರ್ಥೈಸುವ ಪ್ರಯತ್ನ ನಡೆದಿದೆ; “ಲಿಂಗದ ಸಿದ್ಧಿಗಾಗಿ ಇರುವ ಆಚಾರ"ಮತ್ತು "ಲಿಂಗವೇ ಆಚಾರ" ಎಂದು ಹೇಳಬಹುದು. ಇವೆರಡೂ ಲಿಂಗಾಚಾರದ ಎರಡು ಮುಖಗಳು. 
ಲಿಂಗಾಚಾರದ ಪ್ರಾಣವೆಂದರೆ ಅತ್ತ ಇತ್ತ ಹರಿವ ಮನವನ್ನು ಚಿತ್ತದಲ್ಲಿ ಗೊತ್ತುಕಟ್ಟುವ ಕೇಂದ್ರೀಕರಣ ಶಕ್ತಿ. ಅಂಗದ ಮೇಲೆ ಲಿಂಗ ಸಂಬಂಧವಾದ ಮೇಲೆ ಇನ್ನೊಂದರ ಚಿಂತೆ ಸಲ್ಲದು ಎಂಬುದು ಇದರ ತಿರುಳು :

#ಅಮೃತಸಾಗರದೊಳಗಿರ್ದು ಆಕಳ ಚಿಂತೆ ಏಕೆ ?
ಮೇರುಮಧ್ಯದೊಳಗಿರ್ದು ಜರಗ ತೊಳೆವ ಚಿಂತೆ ಏಕೆ ?
ಗುರುವಿನೊಳಗಿರ್ದು ತತ್ವವಿದ್ಯೆಯ ಚಿಂತೆ ಏಕೆ ?
ಪ್ರಸಾದದೊಳಗಿರ್ದು ಮುಕ್ತಿಯ ಚಿಂತೆ ಏಕೆ ?
ಕರಸ್ಥಲದೊಳಗೆ ಲಿಂಗವಿರ್ದ ಬಳಿಕ,
ಮತ್ತಾವ ಚಿಂತೆ ಏಕೆ ಹೇಳಾ ಗುಹೇಶ್ವರಾ ? / 132
  ಕರಸ್ಥಲದಲ್ಲಿ ಲಿಂಗವಿರಿಸಿ ನಿತ್ಯವೂ ಅನುಸಂಧಾನಿಸುತ್ತಿರುವ ಸಾಧಕ ಭಕ್ತನಿಗೆ ಈ ಜಗತ್ತಿನಲ್ಲಿ ಯಾವ ಚಿಂತೆಗಳೂ ಬಾಧಿಸುವದಿಲ್ಲ. ಇಷ್ಟಲಿಂಗ ಯೋಗಸಾಧನೆಯಿಂದ ಲಿಂಗಾಂಗ ಸಾಮರಸ್ಯದ ಅನುಭಾವವಾಗಿ ತನ್ನ ನಿಜ ಸ್ವರೂಪದ ದರ್ಶನವಾಗುತ್ತದೆ. ಅಜ್ಞಾನವು ನಷ್ಟವಾಗುತ್ತದೆ. ಲಿಂಗಾಂಗ ಯೋಗ, ಲೌಕಿಕ ಮೋಹಜಾಲದಿಂದ ಬಿಡಿಸಿ, ಜೀವನನ್ನು ಪರಶಿವನಲ್ಲಿ ಸಮ್ಮಿಲೀನಗೊಳಿಸುತ್ತದೆ. ಇಂಥ ಭಕ್ತನ ದೇಹ ಮನಸ್ಸು  ಭಾವ ಪವಿತ್ರ. ಲಿಂಗಭಕ್ತ ಪರವಸ್ತುವಿನಲ್ಲಿ ಏಕೀಭೂತವಾಗಿ ಯಾವ ಚಿಂತೆ ಇಲ್ಲದೆ ನಿಶ್ಚಿಂತನಾಗುತ್ತಾನೆ.
 ಕರಸ್ಥಲದಲ್ಲಿರುವ ಲಿಂಗದಲ್ಲಿ ಸಾಧನೆಯ ಸರ್ವಸ್ವ ವನ್ನು ಕಂಡುಕೊಳ್ಳುತ್ತದೆ ಲಿಂಗಾಚಾರ. 
#ಗುರುನಿಷ್ಠೆ, ಲಿಂಗನಿಷ್ಠೆ, ಜಂಗಮನಿಷ್ಠೆ, ಇಂತೀ ತ್ರಿವಿಧ ನಿಷ್ಠೆಯಲ್ಲಿ ಏಕಾಂಗಲಿಂಗ ನಿಷ್ಠೆ ವೀರಧೀರಂಗಲ್ಲದಾಗದು ಎಂಬ ಮಾತು ಲಿಂಗಾಚಾರದ ನಿಷ್ಠೆಯನ್ನು ಸೂಚಿಸುತ್ತಿದೆ.
ಗುರುನಿಷ್ಠೆ, ಲಿಂಗನಿಷ್ಠೆ, ಜಂಗಮನಿಷ್ಠೆ, ಈ ತ್ರಿವಿಧ ನಿಷ್ಠೆಗಳಲ್ಲಿ ಒಂದಾದ ಲಿಂಗನಿಷ್ಠೆ ವೀರ ಧೀರ ಇಲ್ಲದಿದ್ದರೆ ಸಾಧ್ಯವಿಲ್ಲ. ಈ ಉಗ್ರನಿಷ್ಠೆ ವೀರಧೀರರಿಗೆ ಮಾತ್ರ ಸಾಧ್ಯ ಎಂದು ಶರಣರ ಅಭಿಪ್ರಾಯ. ಏಕನಿಷ್ಠೆ ಇಲ್ಲದವರು ಮುಕ್ತಿಯನ್ನು ಸಾಧಿಸಲಾರರು.
ಅರಿವಿನ ಕುರುಹು ಲಿಂಗವನ್ನು ಗುರು ಕರುಣಿಸಿದ್ದಾನೆ. ಅದನ್ನು ತಿಳಿದರೆ ಅದು ಸತ್ ಚಿತ್ ಆನಂದದ ಮೂಲ,  ಅದಕ್ಕಿಂತಲೂ ಹೆಚ್ಚಿನದೇನೂ ಇಲ್ಲ. ಎಲ್ಲದಕ್ಕೂ ಮೂಲವಾದ ಆ ಪರವಸ್ತು ತನ್ನ ಕರಸ್ಥಲದಲ್ಲಿಯೇ ಇದೆ. ಗುರು ಬಸವಣ್ಣನವರು ಸಾಧನೆಯ ಪ್ರಾರಂಭದ ದೆಸೆಯಲ್ಲಿ ತನ್ನ ಉಪಾಸನೆಯ ದೈವವನ್ನು ಕುರಿತ ಉಗ್ರನಿಷ್ಠೆ ಆವಶ್ಯಕವೆಂದು ಹೇಳುತ್ತಾರೆ. 

#ಅರಗು ತಿಂದು ಕರಗುವ ದೈವವನೆಂತು ಸರಿಯೆಂಬೆನಯ್ಯಾ
ಉರಿಯ ಕಂಡಡೆ ಮುರುಟುವ ದೈವವನೆಂತು ಸರಿಯೆಂಬೆನಯ್ಯಾ
ಅವಸರ ಬಂದಡೆ ಮಾರುವ ದೈವವನೆಂತು ಸರಿಯೆಂಬೆನಯ್ಯಾ
ಅಂಜಿಕೆಯಾದಡೆ ಹೂಳುವ ದೈವವನೆಂತು ಸರಿಯೆಂಬೆನಯ್ಯಾ
ಸಹಜಭಾವ ನಿಜೈಕ್ಯ ಕೂಡಲಸಂಗಮದೇವನೊಬ್ಬನೆ ದೇವ.

ಇದು ದೈವತ್ವದ ತಾರತಮ್ಯ ಪ್ರೇರಿತವಾದದ್ದಲ್ಲ; ದೈವತ್ವದ ಮಹೋನ್ನತ ಕಲ್ಪನೆಯಿಂದ ಪ್ರೇರಿತವಾದದ್ದು. ಲಿಂಗಾಂಗ ಯೋಗಕ್ಕೆ ಅಗತ್ಯವಾದ ಏಕಾಗ್ರತೆಯ ಸೂಚಕವಾದದ್ದು. ಆದುದರಿಂದಲೇ ಶರಣರು ಸ್ಥಾವರಲಿಂಗಗಳಿಗೆ ಎರಗುವುದನ್ನು ಸಹ ಖಂಡಿಸಿದರು. ದೇವರನ್ನು ಹೊರಗೆ ಹುಡುಕುವುದು ಸಲ್ಲದು. ಆತ ನಮ್ಮ ಅಂತರಂಗದಲ್ಲಿಯೇ ಇದ್ದಾನೆ. ಆ ಅಂತರಂಗದ ಶಕ್ತಿಯೇ ಲಿಂಗರೂಪವಾಗಿ ಕರಸ್ಥಲಕ್ಕೆ ಬಂದಿದೆ. ನಮ್ಮ ನಡೆ ನುಡಿಗಳೆಲ್ಲಾ ಆ ಲಿಂಗದ ಅನುಭವವನ್ನು ತಂದುಕೊಡಲು ಸಹಾಯಕವಾಗುವಂತಿರಬೇಕು. ಅದೇ ಲಿಂಗಾಚಾರ ಆಶಯ,

#ಹುಟ್ಟಿಲೇಕ ನರರ ಜನ್ಮದಲ್ಲಿ? ಕಟ್ಟಲೇಕೋ ಕೊರಳಲ್ಲಿ ಲಿಂಗನ ? ಕಟ್ಟಿಯೂ ಕಾಣದೆ, ತೊಟ್ಟಿನ ತೊಳಲಿ, ಅರಸಬೇಕೋ ಧರೆಯ ಮೇಲೆ ? ಅರಸಿಯ ಕಾಣದೆ, ಸತ್ತು ಮೆಟ್ಟಿ ಮೆಟ್ಟಿ ಹೊಳಿಸಿಕೊಳ್ಳಲೇಕೋ ? ಇದನರಿದರಿದು ಹುಟ್ಟು ಹೊಂದಳಿದ ಶರಣರ ನಿತ್ಯ ನಿತ್ಯನೆನೆದು ಬದುಕಿದೆ ಬಸವಪ್ರಿಯ ಕೂಡಲಚನ್ನಬಸವಣ್ಣ

ಎನ್ನುತ್ತಾರೆ ಶರಣ ಹಡಪದ ಅಪ್ಪಣ್ಣನವರು.
ಇಷ್ಟಲಿಂಗ ಕರಸ್ಥಲದಲ್ಲಿರುವಾಗ ಧರೆಯಮೇಲೆ ಇರುವ ದೈವಗಳ ಅರಸಲೇತಕ್ಕೆ ? ಸತ್ತು ಮತ್ತೇ ಹೂಳಿಸಿಕೊಳ್ಳಲೇತಕ್ಕೆ ? ನಿಜೈಕ್ಯ ಸಾಧಿಸುವ ಇಷ್ಟಲಿಂಗ ಕೈಯಲ್ಲಿ ಇರುವಾಗ ಸತ್ತು ಮತ್ತೆ ಹುಟ್ಟುವ  ಪುನರ್ಜನ್ಮಯಾತಕ್ಕೆ ಎಂದು ಹಡಪದ ಅಪ್ಪಣ್ಣನವರು ಕೇಳುವ ಮಾರ್ಮಿಕ ಪ್ರಶ್ನೆಗಳು ಈ ಅಂಶವನ್ನು ಸೂಚಿಸುತ್ತವೆ.

 ಭವದಿಂದ ಮೇಲೆತ್ತುವ ಮೊದಲನೆ ಮೆಟ್ಟಿಲು ಲಿಂಗಾಚಾರ. ಲಿಂಗಾಂಗ ಸಾಮರಸ್ಯದ ಅಭಿಪ್ಸೆಯಿಂದ ಅದು ಪ್ರೇರಿತವಾದದ್ದು. ಪಿಂಡಜ್ಞಾನಿಯಾಗಿ ಶುದ್ಧಾತ್ಮನಾದ ಸಾಧಕ ಅಂಗಪದವಾಚ್ಯನಾಗಿ ಗುರುವಿನಿಂದ ಲಿಂಗವನ್ನು ಪಡೆಯುತ್ತಾನೆ. ಅದು ಕರಸ್ಥಲದ ಜ್ಯೋತಿಯಾಗುತ್ತದೆ. 
 “ಲಿಂಗದ ನಡೆ, ಲಿಂಗದ ನುಡಿ, ಲಿಂಗದ ನೋಟ, ಲಿಂಗದ ಬೇಟ, ಲಿಂಗದ ಕೂಟ” ಇದೇ ಅವನ ನಿರಂತರ ಹಂಬಲವಾಗುತ್ತದೆ. ಲಿಂಗದಲ್ಲಿ ಮನವಿರಿಸಿರ್ದ ಲಿಂಗಾನುಭಾವಿಗಳ ಸಂಗಕ್ಕಾಗಿ ಹಾತೊರೆಯುತ್ತಾನೆ. ಏಕೆಂದರೆ ಲಿಂಗ ಸರ್ವಾಂಗಭರಿತವಾಗಿದ್ದರೂ ಮತ್ತು ಕರಸ್ಥಲದಲ್ಲಿದ್ದರೂ ಅದರ ಅನುಭವ ತನಗಾಗಿಲ್ಲವಲ್ಲಾ ಎಂಬ ಅತೃಪ್ತಿ ಆತನನ್ನು ದಹಿಸುತ್ತದೆ.. “ಲಿಂಗವು ಸರ್ವಾಂಗದಲ್ಲಿ ಭರಿತವಾಗಿರಲು ಮನವರಿಯದು, 
ತನು ಸೊಂಕದು; ಜ್ಞಾನ ಕಾಣಿಸದು; ಭಾವ ಮುಟ್ಟದು, ಶಿವಶಿವಾ ! ವಿಶ್ವಾಸದಿಂದ ಗ್ರಹಿಸಿ ಹಿಡಿಯದು, ಶಿವಾಶಿವಾ, ಕೆಟ್ಟೆ, ಕೆಟ್ಟೆ” ಎಂದು ತಳಮಳಗೊಳ್ಳುತ್ತಾನೆ. ಮತ್ತು ಅಂತರಂಗ ಬಹಿರಂಗಭರಿತವಾಗಿ ಲಿಂಗವಿದ್ದಾನೆ. ಮನ ವಿಶ್ವಾಸದಿಂದ ಗ್ರಹಿಸಿದಡೆ ಸತ್ಯನಪ್ಪೆ, ನಿತ್ಯನಪ್ಪೆ, ಮುಕ್ತನಪ್ಪ” ಎಂದು ತನ್ನ ಮಾರ್ಗವನ್ನು ಕಂಡುಕೊಳ್ಳುತ್ತಾನೆ. ಹೀಗೆ ಲಿಂಗವನ್ನು ವಿಶ್ವಾಸದಿಂದ ಗ್ರಹಿಸಿ ಅದಕ್ಕೆ ತನ್ನನ್ನು ಅರ್ಪಿಸಿಕೊಳ್ಳುವುದೇ ಲಿಂಗಾಚಾರ. ಆತ ಮಾಡುವುದೆಲ್ಲಾ ಲಿಂಗಕ್ಕಾಗಿ :

#ಲಿಂಗಕ್ಕೆಂದೆ ನೆನೆವೆ, ಲಿಂಗಕ್ಕೆಂದೆ ಮಾಡುವೆ ಲಿಂಗಕ್ಕೆಂದೆ ಕೊಡುವೆ ನಾನಯ್ಯ.
ಸಕಲ ಪದಾರ್ಥoಗಳ 
ಅಂಗಗುಣಂಗಳನರಿಯೆನಯ್ಯ,
ಲಿಂಗಕ್ಕೆಂದೆ ಕಾಮಿಸುವನು ನಿಃಕಾಮಿಯಾಗಿ, 
ಎನ್ನ ದೇಹೇಂದ್ರಿಯ ಮನ ಪ್ರಾಣಾದಿಗಳು ಲಿಂಗದ ಸತಿಯಲಾಗಿ ಆನರ್ಪಿತವನರಿಯೆ ಕೂಡಲ ಸಂಗಮದೇವಾ

ಹೀಗೆ ಸರ್ವವನ್ನೂ ಲಿಂಗಕ್ಕೆ ಅರ್ಪಿಸುವ ತನ್ಮಯತೆಯ ಆಚಾರವೇ ಲಿಂಗಾಚಾರ. ತಾನೇ ಲಿಂಗಸ್ವರೂಪವಾಗಿ ಪರಿಣಮಿಸುವ ಲಿಂಗಾಂಗ ಸಾಮರಸ್ಯದ ಮಾರ್ಗದಲ್ಲಿ ಈ ಲಿಂಗಾಚಾರ ಮೊದಲನೆ ಮೆಟ್ಟಿಲು, ಸಾಧನೆಯಲ್ಲಿ ಮುಂದುವರಿದಂತೆ ಇತರ ಆಚಾರಗಳ ಬೆಂಬಲದಿಂದ ಲಿಂಗಾಚಾರದ ವ್ಯಾಪ್ತಿಯೂ ಬೆಳೆಯುತ್ತಾ ಹೋಗುತ್ತದೆ. ಷಟ್ಸ್ಥಲಗಳನ್ನು ಅವಲಂಬಿಸಿರುವ ಷಡ್ಡಿಂಗಗಳಲ್ಲಿ ಮೊದಲನೆಯದು ಆಚಾರಲಿಂಗ. ಆಚಾರಲಿಂಗ ಕ್ರಮೇಣ ಗುರುಲಿಂಗ ಶಿವಲಿಂಗ ಜಂಗಮಲಿಂಗ ಪ್ರಸಾದಲಿಂಗ ಮಹಾಲಿಂಗ ಮೊದಲಾಗಿ ವಿಕಾಸಗೊಳ್ಳುತ್ತಾ ಹೋಗುತ್ತದೆ. 
- ✍️ Dr Prema Pangi
#ಪ್ರೇಮಾ_ಪಾಂಗಿ,#ಪಂಚಾಚಾರ,
#ಲಿಂಗಾಚಾರ

Comments

Popular posts from this blog

Shika chakra or Bindu chakra:Bindu visarga

Hrit Chakra or Eight Petals Chakra

A-Ka-Ta triangle or Akshara Brahma