ಶರಣೆ ಪರಿಚಯ - ಗಂಗಾಂಬಿಕೆ
*ಶರಣೆ ಗಂಗಾಂಬಿಕೆ ತಾಯಿ (ಕಾಲ: 1160)*
ಶರಣೆ ಗಂಗಾಬಿಕೆ ತಾಯಿ ಗುರು ಬಸವೇಶ್ವರ ರ ಸೋದರ ಮಾವ, ಬಿಜ್ಜಳನ ಮಂತ್ರಿಯಾಗಿದ್ದ ಬಲದೇವನ ಮಗಳು. ಗುರು ಬಸವೇಶ್ವರರ ಹಿರಿಯ ಪತ್ನಿ. ಶರಣೆ ಗಂಗಾಂಬಿಕೆ ಅನುಭವ ಮಂಟಪದ ೭೭೦ ಅಮರ ಗಣಂಗಳಲ್ಲಿ ಒಬ್ಬ ವಚನಕಾರ್ತಿ ಶರಣೆ. ಗುರು ಘನಲಿಂಗ ರುದ್ರಮುನಿಗಳ ಶಿಷ್ಯೆ. ಯೋಗಿ ಘನಲಿಂಗ ರುದ್ರಮುನಿಗಳಿಂದ ಯೋಗ ವಿದ್ಯೆ ಕಲಿತು ಮಹಾಯೋಗಿನಿಯಾಗಿ ಕಂಗೊಳಿಸಿದರು. ಬಾಲ್ಯದಲ್ಲಿಯೇ ತಾಯಿಯನ್ನು ಕಳೆದುಕೊಂಡಿದ್ದ ಗಂಗಾಂಬಿಕೆ ತಂದೆಯ ಆಶ್ರಯದಲ್ಲಿ ಬೆಳೆದರು. ಕನ್ನಡ, ಸಂಸ್ಕ್ಕತ, ಸಾಹಿತ್ಯದ ಜೊತೆಜೊತೆಗೆ ಕತ್ತಿವರಸೆ ವಿದ್ಯೆಯಲ್ಲೂ ನಿಪುಣಳಾಗಿದ್ದರು.
ಗಂಗಾಂಬಿಕೆ ಹಾಗೂ ಬಸವಣ್ಣನವರ ಮದುವೆಯನ್ನು ಮಂತ್ರಿ ಬಲದೇವ ಕೂಡಲಸಂಗಮದಲ್ಲಿ ನೆರವೇರಿಸಿ, ಬಸವಣ್ಣನವರ ಅಕ್ಕ ನಾಗಲಾಂಬಿಕೆ, ಅವರ ಪತಿ ಶಿವದೇವಸ್ವಾಮಿ ಮತ್ತು ಮಗ ಚೆನ್ನಬಸವಣ್ಣರನ್ನು ಮಂಗಳವಾಡಕ್ಕೆ ಕರೆದುಕೊಂಡು ಹೋದನು. ಬಿಜ್ಜಳ ರಾಜನು ಕಲ್ಯಾಣ ಚಾಲುಕ್ಯ ರಾಜನಾಗಿ, ಮಂಗಳವಾಡವನ್ನು ತೊರೆದು ಕಲ್ಯಾಣವನ್ನು ರಾಜಧಾನಿಯಾಗಿಸಿದ ಮೇಲೆ, ಎಲ್ಲರೂ ಕಲ್ಯಾಣಕ್ಕೆ ಬಂದರು. ಬಲದೇವ ಮಂತ್ರಿ ಮರಣ ಹೊಂದಲು, ಬಸವಣ್ಣನವರ ವ್ಯಕ್ತಿತ್ವಕ್ಕೆ ಮಾರುಹೋಗಿದ್ದ ಬಿಜ್ಜಳನು ಅವರನ್ನು ಮಂತ್ರಿಯಾಗಿಸಿದನು. ಬಸವಣ್ಣನವರ ಎಲ್ಲಾ ಕಾರ್ಯಗಳಲ್ಲೂ ಗಂಗಾಂಬಿಕೆ ಚೈತನ್ಯದಾಯಕ ಸ್ಪೂರ್ತಿಯ ಸೆಲೆಯಾದವರು. ಇವರು ಪತಿಯ ಇಚ್ಛಾನುಸಾರಿಣಿ, ದಾಸೋಹ ನಿರತೆ, ಲಿಂಗನಿಷ್ಠೆಯುಳ್ಳ ಆಧ್ಯಾತ್ಮ ಸಾಧಕಿ.
ಪತಿಭಕ್ತಿ, ಲಿಂಗನಿಷ್ಠೆ, ಜಂಗಮ ದಾಸೋಹದಿಂದ ಗಂಗಾಬಿಕೆ ತನ್ನ ಆತ್ಮ ಶಕ್ತಿಯನ್ನು ಬೆಳೆಸಿಕೊಂಡರು. ನೀಲಾಂಬಿಕೆ, ಗಂಗಾಂಬಿಕೆಯ ಬಾಲ್ಯ ಗೆಳತಿ ಹಾಗೂ ಬಸವಣ್ಣನವರ ಎರಡನೆಯ ಪತ್ನಿ. ಇಬ್ಬರೂ ಕೂಡಿಕೊಂಡು ಮಹಾಮನೆಯ ಉಸ್ತುವಾರಿ, ಶರಣರ ಜಂಗಮರ ಪ್ರಸಾದ, ವಸತಿ ವ್ಯವಸ್ಥೆ ನೋಡಿಕೊಳ್ಳುತ್ತ ಅನುಭವ ಮಂಟಪದ ವಚನ ಚಳುವಳಿಯಲ್ಲಿ ಭಾಗಿಯಾದರು. ಅತಿ ಶೀಘ್ರದಲ್ಲಿಯೇ ಶ್ರೇಷ್ಠ ಅನುಭಾವಿ ಮತ್ತು ವಚನಕಾರ್ತಿಯರಾದರು. ಗಂಗಾಂಬಿಕೆ ಆಚಾರ ಪತ್ನಿ ಎಂದು ಹೆಸರಾಗಿದ್ದರೆ ನೀಲಾಂಬಿಕೆ ವಿಚಾರ ಪತ್ನಿಯಾಗಿ ಶೋಭಿಸಿದ್ದಾರೆ. ಕಲ್ಯಾಣ ಕ್ರಾಂತಿಯಲ್ಲಿ, ಬಸವಣ್ಣನವರು ಗಡಿಪಾರಾಗಿ ಕೂಡಲ ಸಂಗಮಕ್ಕೆ ತೆರಳುತ್ತಾರೆ. ಬಸವಣ್ಣನವರು ಮತ್ತು ನೀಲಾಂಬಿಕೆ ತಾಯಿಯವರು ಲಿಂಗೈಕ್ಯರಾದ ನಂತರ ಬಸವಣ್ಣನವರ ಅಣತಿಯಂತೆ, ವಚನ ಸಾಹಿತ್ಯದ ರಕ್ಷಣೆಯ ಹೊಣೆ ಹೊತ್ತು ಚನ್ನಬಸವಣ್ಣ, ಮಡಿವಾಳ ಮಾಚಿದೇವ, ಕಿನ್ನರಿ ಬೊಮ್ಮಯ್ಯ, ಡೋಹರ ಕಕ್ಕಯ್ಯ, ನಾಗಲಾಂಬಿಕೆ ಮತ್ತು ಗಂಗಾಂಬಿಕೆಯರ ನೇತೃತ್ವದಲ್ಲಿ ಶರಣರ ಪಡೆ ಮೊದಲು ಸೋನ್ನಲಾಪೂರಕ್ಕೆ ಹೋಗಿ ಶಿವಯೋಗಿ ಸಿದ್ಧರಾಮರನ್ನು ಭೇಟಿಯಾಗಿ ಸ್ವಲ್ಪ ಕಾಲ ಅಲ್ಲಿಯೇ ತಂಗುತ್ತಾರೆ. ಅಲ್ಲಿಯೂ ಬಿಜ್ಜಳನ ಸೇನೆ ಆಕ್ರಮಣ ಮಾಡಲು ತಮ್ಮ ಜೀವದ ಭರವಸೆ ಇಲ್ಲದ ಕಾರಣ, ಶಿವಯೋಗಿ ಸಿದ್ಧರಾಮರನ್ನು ಶೂನ್ಯ ಸಿಂಹಾಸನ ಅನುಭವ ಮಂಟಪದ ಮೂರನೆಯ ಅಧ್ಯಕ್ಷರನ್ನಾಗಿ ಮಾಡಿ, ಆ ಕಾಲದಲ್ಲಿ ಅತ್ಯಂತ ದುರ್ಗಮ ಕಾಡು ಪ್ರದೇಶವಾದ ಉಳವಿಯ ಕಡೆಗೆ ಹೊರಡುತ್ತಾರೆ. ಉಳವಿ ಆಗ ವೀರಶೈವ ರಾಜರಾದ ಗೋವೆಯ ಕದಂಬ ರಾಜರ ಆಧಿನದಲ್ಲಿತ್ತು ಮತ್ತು ಶರಣರಿಗೆ ಸುರಕ್ಷಿತ ತಾಣವಾಗಿತ್ತು. ಹಾದಿಯುದ್ದಕ್ಕೂ ಹಸಿವೆ, ತೃಷೆ, ಗಾಳಿ, ಮಳೆ, ಬಿಸಿಲು, ಚಳಿಗಳ ಹಿಂಸೆಯನ್ನು ಸಹಿಸುತ್ತಾ, ಅಲ್ಲಲ್ಲಿ ಬಿಜ್ಜಳನ ಮಗ ಸೋಮಿದೇವನ ಬಲಾಢ್ಯ ಸೇನೆಯನ್ನೂ ಎದರಿಸುತ್ತ, ಕಾದಾಡುತ್ತ ಉಳವಿ ಕಡೆ ನಡೆದರು. ದಾರಿಯುದ್ದಕ್ಕೂ ಶರಣ ಪಡೆಯ ಪ್ರಸಾದ ವ್ಯವಸ್ಥೆ, ಗಾಯಾಳುಗಳ ಶುಶ್ರೂಷೆ ಮಾಡುತ್ತ ಪ್ರಸಂಗ ಬಂದಾಗ ವೀರಗಚ್ಚೆ ಹಾಕಿ ಕೈಯಲ್ಲಿ ಖಡ್ಗ ಹಿಡಿದು ಗಂಗಾಬಿಕೆ ತಾಯಿಯವರು ಹೋರಾಡುತ್ತಾರೆ. ಕಾದ್ರೊಳ್ಳಿ ಗ್ರಾಮದ ಹತ್ತಿರ ಬಿಜ್ಜಳನ ಸೈನಿಕರೊಡನೆ ನಡೆದ ಭೀಕರ ಕಾದಾಟ ದಲ್ಲಿ ಗಂಗಾಬಿಕೆಯವರು ಅಸು ನೀಗುತ್ತಾರೆ. ಮುಗುಟಖಾನ ಹುಬ್ಬಳ್ಳಿಯಲ್ಲಿ ಗಂಗಾಂಬಿಕೆ ಮತ್ತು ಬಾಲ ಸಂಗಯ್ಯನವರ ಸಮಾಧಿ ಇದೆ.
ಬೈಲಹೊಂಗಲ ಎಂ.ಕೆ.ಹುಬ್ಬಳ್ಳಿ ಹತ್ತಿರದಲ್ಲಿ ರಾಷ್ಟ್ತ್ರೀಯ ಹೆದ್ದಾರಿಯ ಪಕ್ಕದಲ್ಲಿ ಮಲಪ್ರಭಾ ನದಿಯ ಮಧ್ಯದಲ್ಲಿ ಗಂಗಾಂಬಿಕೆಯವರ ಸಮಾಧಿ ಇದೆ. ಪ್ರತಿ ವರ್ಷ ಸಂಕ್ರಮಣದಲ್ಲಿ ಇಲ್ಲಿ ಜಾತ್ರೆ ನಡೆಯುತ್ತದೆ. ಗಂಗಾಬಿಕಾ ಮುಕ್ತಿ ಕ್ಷೇತ್ರ ಟ್ರಸ್ಟಿನಿಂದ ಪ್ರತಿ ವರ್ಷ ಶರಣೆ ಗಂಗಾಬಿಕೆಯವರ ಸ್ಮರಣೋತ್ಸವ ನಡೆಯುತ್ತದೆ. ಗಂಗಾಂಬಿಕೆಯ ಬೆಳ್ಳಿ ಮೂರ್ತಿಯ ಮೆರವಣಿಗೆಯಾಗುತ್ತದೆ. ಶಿವಶರಣೆ ಗಂಗಾಂಬಿಕೆ ಅವರ ಸಮಾಧಿ ನದಿ ನೀರಿನಲ್ಲಿ ಮುಳುಗಿ ಹೋಗಿತ್ತು. ಗಂಗಾಂಬಿಕೆಯವರ ಸಮಾಧಿ ಗುಡಿಗೆ ಈಗ ಕೂಡಲ ಸಂಗಮ ಅಭಿವೃದ್ದಿ ಪ್ರಾಧಿಕಾರದವರು ರಕ್ಷಣಾ ಗೋಡೆ ಕಟ್ಟಿ ಅಭಿವೃದ್ಧಿ ಪಡಿಸಿದ್ದಾರೆ. ಸಮಾಧಿ ದರ್ಶನಕ್ಕೆ ಅವಕಾಶ ನೀಡಲು ಸುಮಾರು 60 ಅಡಿ ಎತ್ತರ ಬಾವಿ ನಿರ್ಮಿಸಲಾಗಿದೆ. ಮೇಲಿನಿಂದ ಕೆಳಕ್ಕೆ ಇಳಿದು ದರ್ಶನ ಪಡೆಯಲು ವ್ಯವಸ್ಥೆ ಮಾಡಲಾಗಿದೆ.
ಶರಣೆ ಗಂಗಾಂಬಿಕೆ ತಾಯಿ ವಚನಕಾರ್ತಿಯಾಗಿಯೂ ಶೋಭಿಸಿದ್ದಾರೆ. ಶಿವಯೋಗಿ ಸಿದ್ಧರಾಮರು ತಮ್ಮ ಒಂದು ವಚನದಲ್ಲಿ ಗಂಗಾಬಿಕೆಯವರ ವಚನಗಳು ಒಂದು ಲಕ್ಷ ಎಂಟು ಸಾವಿರ ಎಂದು ಹೇಳಿದ್ದಾರೆ. ಆದರೆ ಅವರ ಒಂಭತ್ತು ವಚನಗಳು ಮಾತ್ರ ದೊರಕಿವೆ. ಇವರ ವಚನಗಳಲ್ಲಿ ಅಂತರಂಗದ ಅಭಿವ್ಯಕ್ತಿತನ, ಅನುಭಾವ, ವೈಯಕ್ತಿಕ ಬದುಕಿನ ನೋವು, ಪತಿಯ ಅಗಲಿಕೆಯ, ಪತಿಯ ಐಕ್ಯದ ನೋವು, ಕಲ್ಯಾಣ ರಕ್ತ ಕ್ರಾಂತಿಯ ಚಿತ್ರಣವಿದೆ.
ಇವರ ವಚನಗಳ ಅಂಕಿತ "ಗಂಗಾಪ್ರಿಯ ಕೂಡಲಸಂಗ".
ಬಸವರಾಜ ಪುರಾಣ, ಸಿಂಗಿರಾಜ ಪುರಾಣ, ಹರಿಹರನ ರಗಳೆ, ಶಿವತತ್ವ ಚಿಂತಾಮಣಿ, ಮೊದಲಾದ ಗ್ರಂಥಗಳಲ್ಲಿ ಗಂಗಾಬಿಕೆಯ ವಿಷಯ ಬಂದಿದೆ.
"ಗಂಗಾಬಿಕೆಯು ತನು ಮನವನರ್ಪಿಸಿ ಬಸವರಾಜನ ಚಿತ್ತದನುಗುಣದ ಸತಿಯಾದಳು" ಎಂದು ಶಿವತತ್ವ ಚಿಂತಾಮಣಿಯಲ್ಲಿ ಲಕ್ಕಣ್ಣ ದಂಡೇಶ ಕವಿ ಹೇಳಿಕೊಂಡಿದ್ದಾನೆ. ಚರಿತ್ರೆಕಾರರೆಲ್ಲ ಅವರ ಗುಣಗಾನ ಮಾಡಿದ್ದಾರೆ.
"ಬಸವಣ್ಣ, ನೀಲಾಂಬಿಕೆ, ಗಂಗಾಂಬಿಕೆ
ಇವರು ಲೌಕಿಕ ದಾಂಪತ್ಯವನ್ನು ಆದರ್ಶಪ್ರಾಯವಾಗಿ ನಡೆಸಿ ಶರಣ ಸತಿ - ಲಿಂಗ ಪತಿ ಭಾವದಿಂದ ನಡೆಸಿ ಶಿವನಲ್ಲಿ ಒಂದಾದ ಶರಣರಿವರು. ಇಂದಿಗೂ ಪೂಜನೀಯರಾಗಿದ್ದಾರೆ."ಎಂದು ಹೇಳಿದ್ದಾರೆ
- ಡಾ. ಕಾವ್ಯಶ್ರೀ. ಜಿ.
ಶರಣೆ ಗಂಗಾಂಬಿಕೆಯವರ ವಚನಗಳು
1. ವಚನ
#ಅವಳ ಕಂದ ಬಾಲಸಂಗ ನಿನ್ನ ಕಂದ
ಚನ್ನಲಿಂಗ ಎಂದು ಹೇಳಿದರಮ್ಮಾ
ಎನ್ನ ಒಡೆಯರು ಫಲವಿಲ್ಲದ
ಕಂದನಿರ್ಪನವಳಿಗೆ ಎನಗೆ ಫಲವಿಲ್ಲ
ಕಂದನಿಲ್ಲ ಇದೇನೊ ದು:ಖದಂದುಗ
ಗಂಗಾಪ್ರಿಯ ಕೂಡಲಸಂಗಮದೇವಾ ?
- ಶರಣೆ ಗಂಗಾಂಬಿಕೆ
ಅರ್ಥ-
ಅವಳಿಗೆ ಫಲವಿಲ್ಲದ ಕಂದ, ನನಗೆ ಫಲವೂ ಇಲ್ಲ, ಕಂದನೂ ಇಲ್ಲ. ನೀಲಾಂಬಿಕೆ ತಾಯಿಗೆ ಜನಿಸಿದ ಒಬ್ಬನೇ ಮಗ ಬಾಲ ಸಂಗಯ್ಯ ಮರಣ ಹೊಂದಿದಾಗ ದುಃಖ ವ್ಯಕ್ತಪಡಿಸುತ್ತ ಕಂದನಿಲ್ಲದೆ ಚಿಂತೆ ಪಡುತ್ತಿದ್ದ ತನಗೆ ತನ್ನ ಇಷ್ಟಲಿಂಗವೇ (ಚನ್ನಲಿಂಗ) ಕಂದನೆಂದು ಹೇಳಿ ಬಸವಣ್ಣನವರು ಸಂತೈಸಿದುದನ್ನು ಗಂಗಾಂಬಿಕೆ ಈ ವಚನದಲ್ಲಿ ಮನಮಿಡಿಯುವಂತೆ ಹೇಳಿದ್ದಾಳೆ.
2. ವಚನ
ಪ್ರತಿಜ್ಞೆಯ ಪತಿಕರದಲ್ಲಿ ಪೋಪದಿರೆ ಯಾತನೆಯಲ್ಲವೆ ?
ಇವಳ ಲಿಂಗನಿಷ್ಠೆ ಇವಳಿಗೆ,
ನಮ್ಮ ನಿಷ್ಠೆ ಪತಿಯಾಜ್ಞೆಯಲ್ಲಿ ಕಾಣಾ ಗಂಗಾಪ್ರಿಯ ಕೂಡಲಸಂಗಮದೇವಾ
ಅರ್ಥ :
ಪತಿಯ ಆಜ್ಞೆಯಲ್ಲಿ ಚಲಿಸುವ ಸತಿಗೆ ಪ್ರತಿಜ್ಞೆಯ ಹಂಗಿಲ್ಲ. ಪ್ರತಿಜ್ಞೆ ಮಾಡಿ, ಪ್ರತಿಜ್ಞೆಯ ಹಾದಿಯಲ್ಲಿ ನಡೆಯದಿದ್ದರೆ ವೃತಹೀನರಾಗಿ ಯಾತನೆ ದುಃಖ ವಾಗುವುದು. ವಿಚಾರಪತ್ನಿ ನೀಲಾಂಬಿಕೆಯದು ಲಿಂಗನಿಷ್ಠೆ. ನಮ್ಮ ನಿಷ್ಠೆ, ಆಚಾರವೆಲ್ಲ ಪತಿ ಬಸವಯ್ಯರ ಆಜ್ಞೆಯ ಪಾಲನೆಯೇ ಆಗಿದೆ. ಬೇರೆಯ ನಿಷ್ಠೆಯ ಅವಶ್ಯಕತೆ ನಮಗೆ ಇಲ್ಲ ಎನ್ನುತ್ತಾಳೆ ಆಚಾರಪತ್ನಿ ಗಂಗಾಂಬಿಕೆ.
3. ವಚನ
#ಒಂದು ಹಾಳಭೂಮಿಯ ಹುಲಿಬಂದು
ಎನ್ನ ಎಳಗರುವ ಭಕ್ಷಿಸಿತ್ತಲ್ಲಾ!
ಆ ಹುಲಿ ಹಾಳಿಗೆ ಹೋಗದು.
ಆ ಹುಲಿ ಎಳೆಗರುವ ಕಂಡು ಜನನಿಯಾಯಿತ್ತು.ಇದನೇನೆಂಬೆ ಗಂಗಾಪ್ರಿಯ ಕೂಡಲಸಂಗಮದೇವಾ ?
- ಶರಣೆ ಗಂಗಾಂಬಿಕೆ
ಅರ್ಥ:
ಇದು ಬೆಡಗಿನ ವಚನ.
ತಾಮಸ ಗುಣದ ಹುಲಿಯು ಸಾತ್ವಿಕ ಭಕ್ತಿಯ ಎಳೆಗರು ಕಂಡು ತಾನು ಪರಿವರ್ತನೆಯಾಗಿ, ಸಾತ್ವಿಕ ಗುಣದ ಜನನಿಯಾಗಬೇಕೆಂದು ಆಶೆ ಪಟ್ಟಿತು. ಹುಲಿಯೆಂಬ ಹಿಂಸೆಯ ತಾಮಸ ಗುಣವು ಎಳಗರುವೆಂಬ ಸಾತ್ವಿಕ ಗುಣಕ್ಕೆ ಮಾರು ಹೋಗಿ ಪರಿವರ್ತಿತವಾಗಿ
ತಾನು ಆ ಸಾತ್ವಿಕ ಗುಣದ ಜನಿತಕ್ಕೆ ತಾಯಿಯಾಗುತ್ತದೆ. ತಾಮಸ ಗುಣದ ದುಷ್ಟ ಜನರು ಸಾತ್ವಿಕ ಶರಣರನ್ನು ನಾಶ ಮಾಡಲು ಬಂದು, ಅವರ ಸತ್ಸಂಗದಲ್ಲಿ ಶರಣರಾಗಿ ಜಂಗಮರಾಗಿ ಇತರ ಭವಿಗಳನ್ನು ಭಕ್ತರಾಗಿ ಮಾರ್ಪಾಡಿಸುವ ಜನನಿಯಾದರು. ಇದನ್ನು ನೋಡಿ ಗಂಗಾಂಬಿಕೆ ತಾಯಿ ಚಕಿತರಾಗಿದ್ದಾರೆ. ತಾಮಸದ ಕಲ್ಯಾಣ ರಕ್ತ ಕ್ರಾಂತಿಯೆ ಮುಂದೆ ಸಾತ್ವಿಕ ಧರ್ಮದ ಉದಯಕ್ಕೆ ನಾಂದಿಯಾಗುವುದು ಎಂದು ತಿಳಿಸಿದ್ದಾರೆ.
4. ವಚನ
ಸೂಸುವ ಮೂರ್ತಿ
ನೋಡುನೋಡುತ್ತ ಬಯಲಾಯಿತ್ತಲ್ಲಾ!ಗಂಗಾಪ್ರಿಯ ಕೂಡಲಸಂಗಮದೇವಾ.
- ಶರಣೆ ಗಂಗಾಂಬಿಕೆ
ಅರ್ಥ-
ನಮ್ಮ ಅಯ್ಯ ಬಸವಯ್ಯರ ಮನದಲ್ಲಿ ಮಾತಿನಲ್ಲಿ ಸದಾ ಇರುವ ಮಹಾಲಿಂಗ ಮೂರ್ತಿ ತಾನು ಮಾಡುತ್ತಿರುವ ಶಿವಯೋಗದ ಧ್ಯಾನಸ್ಥಿತಿಯಲ್ಲಿ ಬಯಲು ಬಯಲಾಯಿತು ಎಂದು ತನಗಾದ ಅನುಭಾವದ ಬಯಲು ಸ್ಥಿತಿಯನ್ನು ವರ್ಣಿಸಿದ್ದಾರೆ.
5. ವಚನ
#ಇದೇನೋ,ಮೀರಿ ತೋರುವ ಮೂರತಿ
ಪುಷ್ಪ ಗುಂಪಿನಲ್ಲಿ ಕಾಣದೆ ಹೋಗಿದೆ?
ಇದೇನೋ ಮೀರಿ ತೋರುವ ಮೂರುತಿ
ಕರದಲ್ಲಿಯ ಲಿಂಗದಂತೆ ಉಲುಹದ ಸ್ಥಿತಿ ತೋರುತ್ತದೆ?
- ಶರಣೆ ಗಂಗಾಂಬಿಕೆ
ಅರ್ಥ-
ಅನುಭಾವದ ಸ್ಥಿತಿ ಮತ್ತು
ಪತಿಯ ಐಕ್ಯದ ನೋವು.
ಎಲ್ಲವನ್ನೂ ಎಲ್ಲರನ್ನೂ ಮೀರಿದ ಮೂರ್ತಿ ಆದ ಕರಸ್ಥಲದ ಇಷ್ಟಲಿಂಗ ಪುಷ್ಪಗಳ ನಡುವೆ ಕಾಣದ ಹೋದ ಹಾಗೆಯೇ; ಎಲ್ಲವನ್ನೂ ಎಲ್ಲರನ್ನೂ ಮೀರಿದ ಮೂರ್ತಿಯಾದ ಪತಿ ಬಸವಯ್ಯ ಆ ಇಷ್ಟಲಿಂಗದಂತೆಯೇ ಮಾತನಾಡದ ಸ್ಥಿತಿ ತೋರಿದ್ದಾನೆ ಎಂದು ಪತಿ ಬಸವಯ್ಯನವರನ್ನು ತನ್ನ ಕರಸ್ಥಲದ ಇಷ್ಟಲಿಂಗದ ಜೊತೆ ಹೋಲಿಕೆ ಮಾಡಿ ಶೋಕ ವ್ಯಕ್ತಪಡಿಸಿದ್ದಾರೆ.
6. ವಚನ
#ಮಡಿವಾಳಣ್ಣಂಗೇಕೆ ಬಾರದವ್ವಾ ಕರುಣಾರಸ ?
ಮಡಿವಾಳಣ್ಣಂಗೇಕೆ ಬಾರದವ್ವಾ ಶೌರ್ಯರಸ ?
ಮಡಿವಾಳಣ್ಣಂಗೇಕೆ ಬಾರದವ್ವಾ ಅದ್ಭುತರಸ ?
ಮಡಿವಾಳಣ್ಣಂಗೇಕೆ ಬಾರದವ್ವಾ
ಗಂಗಾಪ್ರಿಯ ಕೂಡಲಸಂಗನ ಶರಣಪ್ರಾಣ ದಾನರಸ ಸಿದ್ಧರಾಮಯ್ಯಾ ?
- ಶರಣೆ ಗಂಗಾಂಬಿಕೆ
ಅರ್ಥ-
ಉಳವಿಯ ದಾರಿಯಲ್ಲಿ ಶೌರ್ಯದಿಂದ ಸೈನ್ಯ ಎದರಿಸುವ ಇಚ್ಛೆ ಗಂಗಾಂಬಿಕೆಗೆ, ಎದುರಿಸಿ ವೀರ ಮರಣ ಹೊಂದುವುದೇ ಲೇಸು ಎಂಬ ಭಾವ. ಇದನ್ನೇ ಶಿವಯೋಗಿ ಸಿದ್ಧರಾಮ ನವರಿಗೆ ಸೋನ್ನಲಿಗೆಯಲ್ಲಿ ಹೇಳಿದ್ದಾರೆ. ಕರುಣಾರಸ, ಶೌರ್ಯರಸ, ಅದ್ಭುತರಸ , ಕೂಡಲಸಂಗನ ಶರಣರ ಪ್ರಾಣದಾನ ರಸ ವನ್ನು ಮಡಿವಾಳ ಮಾಚಿದೇವರು ಏಕೆ ಒಪ್ಪುತ್ತಿಲ್ಲ? ಎಂದು ಶಿವಯೋಗಿ ಸಿದ್ಧರಾಮರಿಗೆ ಕೇಳುತ್ತಾರೆ. ಮಡಿವಾಳ ಮಾಚಿದೇವರಿಗೆ ಶರಣರ ಜೀವ ಮತ್ತು ವಚನ ಸಾಹಿತ್ಯ ಉಳಿಸುವ ಅತಿ ದೊಡ್ದ ಜವಾಬ್ದಾರಿ ಇರುತ್ತದೆ. ಅದಕ್ಕಾಗಿ ಸೋಮಿದೇವನ ಅತೀ ಭಲಾಡ್ಯ ಸೇನೆ ಎದುರಿಸಿ ಎಲ್ಲ ಶರಣರ ಕೊಲೆ, ವಚನ ಸಾಹಿತ್ಯದ ಸಂಪೂರ್ಣ ನಾಶ ತಪ್ಪಿಸುವ ಹಾದಿ ಅನುಸರಿಸುತ್ತಾರೆ. ತುಂಬಾ ಸಂಯಮದಿಂದ ಅವರನ್ನು ಉಳುವಿಯ ದಿಕ್ಕಿನಲ್ಲಿ ಕರೆದುಕೊಂಡು ಹೋಗುತ್ತಾರೆ.
7. ವಚನ
#ಲಿಂಗವಸನದಂತರಂಗವಸನ ತರಿಸಿದೆಯೆ ಚೆನ್ನ.
ಲಿಂಗದರ್ಚನೆಗುದಕವ ತರ ಪೆರಿಸಿದೆಯೆ ಚೆನ್ನ.
ಲಿಂಗನಿಮಿತ್ತ ಕುಸುಮಾರಾಮ ವಿರಚಿಸ ಹೋದೆಯೆ ಚೆನ್ನ.
ಬಸವಯ್ಯನಾಚರಣೆ ಸೊಗಸಾಗದಾಗಿ ಹೋದೆಯೆ ಗಂಗಾಪ್ರಿಯ ಕೂಡಲಸಂಗ ಚೆನ್ನ.
- ಶರಣೆ ಗಂಗಾಂಬಿಕೆ
ಅರ್ಥ-
ಕಲ್ಯಾಣ ಕ್ರಾಂತಿಯ ಹತಾಶೆ, ಪತಿಯ ಲಿಂಗೈಕ್ಯದ ಶೋಕದಿಂದ ದೇವರಲ್ಲಿ ಮೊರೆ ಹೋಗಿದ್ದಾಳೆ.
ಲಿಂಗ ವಸ್ತ್ರವಾಗಿ ಅಂತರಂಗದ ಹೊದಿಕೆ ಬೇಕೆಂದು ತರಿಸಿದೆಯೆ ಕೂಡಲಸಂಗ?.
ಲಿಂಗದ ಅರ್ಚನೆಗೆ ಜಲದ ತರ ಪೆರಿಸಿದೆಯೆ ಕೂಡಲಸಂಗ? ಲಿಂಗಕ್ಕೆ ನಿಮಿತ್ತವಾಗಿ ಕುಸುಮವಾಗಿ ರಚಿಸಲು ಹೋದೆಯೆ ಕೂಡಲಸಂಗ? ಬಸವಯ್ಯನ ಆಚರಣೆ ಸೊಗಸಾಗದಾಗಿ ಹೋದೆಯೆ ಗಂಗಾಪ್ರಿಯ ಕೂಡಲಸಂಗ ಚೆನ್ನ ಎಂದು ದೇವರಲ್ಲಿ ಪ್ರಶ್ನಿಸುತ್ತಾಳೆ.
ಪತಿಯ ಅಗಲಿಕೆಯ ಶೋಕದಲ್ಲಿ ದೇವರಲ್ಲಿ ಮೊರೆ ಹೋಗಿ
ಕೂಡಲ ಸಂಗಮ ಚೆನ್ನನೆ, ನಿನಗೆ ಬಸವಯ್ಯನ ಆಚರಣೆ ಸೊಗಸಾಗದಾಗಿ ಕರೆಯಿಸಿ ಕೊಂಡೆಯಾ? ಎಂದು ಹಲಬುತ್ತಾಳೆ.
8. ವಚನ
#ಸಾಂದ್ರವಾಗಿ ಹರಗಣಭಕ್ತಿಯ ಮಾಳ್ಪನೆಂತೊ
ಮಾದಲಾಂಬಿಕಾನಂದನನು ?
ಸಾಂದ್ರವಾಗಿ ಬಿಜ್ಜಳನರಮನೆಯ ನ್ಯಾಯ ನೋಳ್ಪನೆಂತೊ
ಮಾದರಸನ ಮೋಹದ ಮಗನು ?
ಸಾಂದ್ರವಾಗಿ ಲಿಂಗಾರ್ಚನೆ ಲಿಂಗತೃಪ್ತಿ ಅನುಗೆಯ್ವನೆಂತೊ ಗಂಗಾಪ್ರಿಯ ಕೂಡಲಸಂಗನ ಶರಣ ಚಿನ್ನ ?
- ಶರಣೆ ಗಂಗಾಂಬಿಕೆ
ಅರ್ಥ-
ಪತಿ ಬಸವಯ್ಯನವರ ಲಿಂಗೈಕ್ಯದಿಂದಾದ ಹತಾಶೆ, ದೇವರಲ್ಲಿ ಮೊರೆ ಹೋಗುತ್ತಾಳೆ.
ಮಾದಲಾಂಬಿಕೆಯ ಪುತ್ರನು (ಮಾದಲಾಂಬಿಕಾನಂದನ) ಇನ್ನೂ ಹೇಗೆ ಅಧಿಕ ಗಟ್ಟಿಯಾಗಿ ದಟ್ಟವಾಗಿ ಹರ
ಗಣಭಕ್ತಿಯ ಮಾಡುವನು?
ಮಾದರಸನ ಮೋಹದ ಮಗ ಮುಖ್ಯದಂಡನಾಯಕ ಬಸವಯ್ಯ ಇನ್ನೂ ಹೇಗೆ ಸಾಂದ್ರವಾಗಿ ಅಧಿಕ ಗಟ್ಟಿತನ ದಿಂದ ಬಿಜ್ಜಳನ ಅರಮನೆಯ ನ್ಯಾಯವನ್ನು ನೋಡಿಕೊಳ್ಳುವನು?
ಗಂಗಾಪ್ರಿಯ ಕೂಡಲಸಂಗನ ಶರಣ ಬಸವಯ್ಯ ಇನ್ನೂ ಹೇಗೆ ಅಧಿಕ ದಟ್ಟವಾಗಿ(ಸಾಂದ್ರವಾಗಿ) ಲಿಂಗಾರ್ಚನೆ ಲಿಂಗತೃಪ್ತಿ ಮಾಡಿಕೊಳ್ಳುವನೋ? ಎಂದು ಹಲಬುತ್ತಾಳೆ.
9. ವಚನ
#ನೇತ್ರಮಧ್ಯದಲ್ಲಿ ಸೂಸುವ ತ್ರಿಣೇತ್ರನ ರೂಪವೆ ಸಿದ್ಧರಾಮಯ್ಯನಾದ.
ಜಿಹ್ವೆಯಮಧ್ಯದಲ್ಲಿ ಸೂಸುವ ರುಚಿಯೆ ಸಿದ್ಧರಾಮಯ್ಯನಾದ.
ಶ್ರೋತ್ರದಲ್ಲಿ ತುಂಬಿ ಪೂರೈಸುವ ಶಬ್ದವೆ ಸಿದ್ಧರಾಮಯ್ಯನಾದ.
ಘ್ರಾಣದಲ್ಲಿ ತುಂಬಿತುಳುಕುವ ಮೂರ್ತಿಯೆ ಸಿದ್ಧರಾಮಯ್ಯನಾದ.
ತ್ವಕ್ಕಿನಲ್ಲಿ ಅರಿವ ಮೂರ್ತಿಯೆ ಅಚ್ಚೊತ್ತಿದ ಸಿದ್ಧರಾಮಯ್ಯನಾದ.
ಇಂತಪ್ಪ ಪರಶಿವಮೂರ್ತಿ ಸಿದ್ಧರಾಮಯ್ಯನ ಪಾದೋದಕವ ಕೊಂಡುಪರವಸ್ತು ನಾನಾದೆ, ಗಂಗಾಪ್ರಿಯ ಕೂಡಲಸಂಗಮದೇವಾ.
- ಶರಣೆ ಗಂಗಾಂಬಿಕೆ
ಅರ್ಥ- ಶಿವಯೋಗಿ ಶರಣ ಸಿದ್ಧರಾಮರಿಂದ ಅನುಭವವಾಣಿ, ಉಪದೇಶ, ಸ್ವಾಂತಾನ ಮಾತು ಕೇಳಿ ಸಮ ಸ್ಥಿತಿ ಹೊಂದಿ, ಹುಟ್ಟು ಸಾವಿನ ಭ್ರಮೆ ನಿವಾರಣೆಯಾದ ನಂತರ ನುಡಿದ ವಚನವಿದು. ಶಿವಯೋಗಿ ಸಿದ್ಧರಾಮರು, ನೇತ್ರಗಳ ಮಧ್ಯದಲ್ಲಿ ಸೂಸುವ ತ್ರಿನೇತ್ರ, ಜಿಹ್ವೆಯ ಮಧ್ಯದಲ್ಲಿ ಸೂಸುವ ರುಚಿ,
ಶ್ರೋತ್ರದಲ್ಲಿಯ ಶಬ್ದ, ಘ್ರಾಣದಲ್ಲಿ ತುಂಬಿದ ಮೂರ್ತಿ, ತ್ವಕ್ಕಿನಲ್ಲಿ ಅರಿವಿನ ಮೂರ್ತಿ, ಹೀಗೆ
ಪೂರ್ಣ ಪರಶಿವಮೂರ್ತಿಯ ಸ್ವರೂಪ. ಸಿದ್ಧರಾಮಯ್ಯನವರ ಉಪದೇಶ ಕೃಪೆ ಎಂಬ ಪಾದೋದಕ ತೆಗೆದುಕೊಂಡು ನಾನು ಸ್ವಯಂ ಪರವಸ್ತು ಆದೆನು.
ಕಲ್ಯಾಣ ಕ್ರಾಂತಿಯ ನಂತರ ಉಂಟಾದ ವಚನ ಸಾಹಿತ್ಯದ ನಾಶ, ಪತಿ ಬಸವಯ್ಯರ ಅಗಲಿಕೆ, ಅವರ ಲಿಂಗೈಕ್ಯರಾದ ಹತಾಶೆ, ಅನೇಕ ಶರಣರ ಕಗ್ಗೊಲೆಯ ದುಃಖ ಇವೆಲ್ಲ ಶಮನ ಮಾಡಿ ಅವಳನ್ನು ನಿಜೈಕ್ಯಸ್ಥಿತಿಗೆ ತಲುಪಿಸಿದ, ಪರಶಿವಸ್ಥಿತಿ ಪರವಸ್ತು ಮಾಡಿದ ಗುರು ಶಿವಯೋಗಿ ಸಿದ್ಧರಾಮ ಗುರುವಿನಲ್ಲಿ ಪರಶಿವನ ಕಂಡಳು.
ಗಂಗಾಂಬಿಕೆ ತಾಯಿ ಧೈರ್ಯ ಸಾಹಸಗಳ ಪ್ರತಿಮೂರ್ತಿಯಾಗಿ, ಆದರ್ಶಸತಿಯಾಗಿ, ಕಾಯಕನಿಷ್ಠರಾಗಿ ಜಗಜ್ಯೋತಿ ಬಸವಣ್ಣನವರಿಗೆ ಸಾತ್ವಿಕವಾದ, ನೈತಿಕವಾದ ಬೆಂಬಲ ನೀಡಿದ ಅಪೂರ್ವ ಮಹಿಳೆ.
- ✍️Dr Prema Pangi
Comments
Post a Comment