ವಚನ ದಾಸೋಹ
ನಾಲ್ಕು ವೇದ, ಶಾಸ್ತ್ರ ಹದಿನೆಂಟು,
ಹದಿನಾರು ಪುರಾಣ, ಇಪ್ಪತ್ತೆಂಟಾಗಮ
ಇದಪ್ರತಿ ಬಿಡಾಡಿ.
ಶಬ್ದವೆ ಬ್ರಹ್ಮ, ಶಬ್ದವೆ ಸಿದ್ಧ, ಶಬ್ದವೆ ಶುದ್ಧ ಕಾಣಿರೆ, ಬಿಡಾಡಿ ?
-- ಶರಣೆ ಬೊಂತಾದೇವಿ
ಅರ್ಥ:
ಶರಣೆ ಬೊಂತಾದೇವಿ ಮಾಂಡವ್ಯಪುರದ ರಾಜಕುಮಾರಿ, ಶರಣೆ, ವಿರಾಗಿಣಿ.
ಅಂಕಿತ ನಾಮ: ಬಿಡಾಡಿ
ಬೊಂತಾದೇವಿ ಕಾಶ್ಮೀರದ ಮಾಂಡವ್ಯಪುರ ಅರಸು ಕುಮಾರಿಯಾಗಿದ್ದು, ಶ್ರೇಷ್ಠ ಶರಣ, ಕಾಯಕ ಕಲಿ ಎಂದೇ ಹೆಸರುವಾಸಿಯಾದ ಮೊಳಿಗೆ ಮಾರಯ್ಯ ನ (ಕಾಶ್ಮೀರ ಮಾಂಡವ್ಯಪುರದ ಅರಸು) ಸಹೋದರಿ. ಮೂಲನಾಮವಾದ ನಿಜದೇವಿ ಯಿಂದ ಬೊಂತಾದೇವಿಯಾಗಿ ನಾಮಾಂಕಿತಗೊಂಡು ಸೂಪ್ತಭಕ್ತಿಗೆ, ಆದ್ಯಾತ್ಮಜ್ಞಾನಕ್ಕೆ, ಅನುಭಾವಕ್ಕೆ ಹೆಸರುವಾಸಿಯಾದರು.“ಬಿಡಾಡಿ” ಎಂಬ ಅಚ್ಚಗನ್ನಡ ಅಂಕಿತದಿಂದ ಅನೇಕ ವಚನಗಳನ್ನು ಬೊಂತಾದೇವಿ ರಚಿಸಿದ್ದಾರೆ. ಪರಮಾತ್ಮನು ಯಾವ ನಿರ್ಬಂಧಕ್ಕೊಳಗಾಗದ, ಕಟ್ಟುಪಾಡುಗಳಿಗೆ ಒಳಗಾಗದವ , “ಸರ್ವತಂತ್ರ ಸ್ವತಂತ್ರ’’ ಎಂಬರ್ಥದಲ್ಲಿ ಆತನನ್ನು ಪ್ರೀತಿಯಿಂದ "ಬಿಡಾಡಿ" ಎಂದು ಕರೆದಿದ್ದಾರೆ ಬೊಂತಾದೇವಿ.
*ನಾಲ್ಕು ವೇದ, ಶಾಸ್ತ್ರ, ಹದಿನೆಂಟು ಹದಿನಾರುಪುರಾಣ, ಇಪ್ಪತ್ತೆಂಟಾಗಮ
ಇದಪ್ರತಿ ಬಿಡಾಡಿ.*
ನಾಲ್ಕು ವೇದಗಳು, ಹದಿನೆಂಟು ಶಾಸ್ತ್ರಗಳು ಹದಿನಾರು ಪುರಾಣಗಳು, ಇಪ್ಪತ್ತೆಂಟು ಆಗಮಗಳು ಇವೆಲ್ಲ ಪರಶಿವನೆಂಬ ಬಿಡಾಡಿಯ ಶಬ್ದಪ್ರತಿಗಳು, ಆವೃತ್ತಿಗಳು. ಶಿವನ 4 ಮುಖಗಳಿಂದ ನಾಲ್ಕು ವೇದಗಳು, ಶಿವನ 5 ನೆಯ (ಈಶಾನ) ಮುಖದಿಂದ 28 ಶೈವಾಗಮಗಳು ಉದ್ಭವವಾದವುಗಳು.
*ಶಬ್ದವೆ ಬ್ರಹ್ಮ, ಶಬ್ದವೆ ಸಿದ್ಧ, ಶಬ್ದವೆ ಶುದ್ಧ ಕಾಣಿರೆ, ಬಿಡಾಡಿ ?*
ಶಬ್ದವೆ ಬ್ರಹ್ಮ, ಶಬ್ದವೆ ಸಿದ್ಧ, ಶಬ್ದವೆ ಶುದ್ಧ
ಇದು ಒಂದು ನಿಗೂಢ ಬೋಧನೆ.
ಶಬ್ದ ಅಂದರೆ ಧ್ವನಿಯಿಂದ ಅಭಿವ್ಯಕ್ತಿಗೊಂಡ ಮೌಖಿಕ ಪದ. ಒಂದು ನಿರ್ದಿಷ್ಟ ಅರ್ಥವನ್ನು ತಿಳಿಸುವ ಸಹಜವಾದ ಶಕ್ತಿ ಹೊಂದಿದೆ. ಶಬ್ದ ಬ್ರಹ್ಮ ಮತ್ತು ಅಶಬ್ದ ಬ್ರಹ್ಮ ಎಂದು ಎರಡು ಬಗೆ. ಶಬ್ದಬ್ರಹ್ಮ ಅಂದರೆ ಅತೀಂದ್ರಿಯ ಶಬ್ದ ಅಥವಾ ಧ್ವನಿ ಕಂಪನ. ಶಬ್ದಬ್ರಹ್ಮವು ಸೃಜನಾತ್ಮಕ ಶಕ್ತಿ ಹೊಂದಿದೆ. ಕಾಲವು(time the fourth dimension) ಇದು ಶಬ್ದಬ್ರಹ್ಮದ ಸೃಜನಾತ್ಮಕ ಶಕ್ತಿ. ಆ ಶಕ್ತಿಯಿಂದ ಬ್ರಹ್ಮಾಂಡದ ಸೃಷ್ಟಿ. ಬ್ರಹ್ಮದ ಅಂತಿಮ ವಾಸಸ್ಥಾನವು ಅದೇ.
ಪರಶಿವನೆಂಬ ಪರಬ್ರಹ್ಮವು ನಾಮ ಹಾಗೂ ರೂಪರಹಿತವಾಗಿದೆ. ಪರಬ್ರಹ್ಮವನ್ನು ಅರಿತುಕೊಳ್ಳುವ ಮೊದಲು ಸಾಧಕ
ಶಬ್ದಬ್ರಹ್ಮದಲ್ಲಿ ಚೆನ್ನಾಗಿ ನೆಲೆಗೊಳ್ಳಬೇಕು. ಶಬ್ದವೇ ಸೃಷ್ಟಿಯ ಏಕೈಕ ಕಾರಣ ಮತ್ತು ಶಾಶ್ವತವಾಗಿದೆ. ಮನಸ್ಸು ಮತ್ತು ಇಂದ್ರಿಯಗಳನ್ನು ನಿಗ್ರಹಿಸಿದಾಗ ಒಳಗಿನ ಸೂಕ್ಷ್ಮ ಧ್ವನಿ, ಶಬ್ದಬ್ರಹ್ಮವಾಗಿ ಪ್ರಣವ "ಓಂ"ಕಾರ ವಾಗಿ ಸಿದ್ಧಿಯಾಗುತ್ತದೆ. ಆ ಓಂ ಕಾರವೇ ಬ್ರಹ್ಮ, ಶುದ್ಧ ಪ್ರಣವ, ಸಿದ್ಧ.
ಓಂಕಾರ ದಿಂದಲೇ ಸರ್ವ ಸೃಷ್ಟಿ, ಓಂ ಕಾರವೇ ಶಬ್ದಬ್ರಹ್ಮ .
#ಓಂಕಾರವೆಂಬ ವೃಕ್ಷದಲ್ಲಿ
ಋಗ್ವೇದ ಯಜುರ್ವೇದ ಸಾಮವೇದ ಅಥರ್ವಣವೇದಗಳೆಂಬ
ನಾಲ್ಕು ಶಾಖೆಗಳು,
ಅನಂತವೈ ಉಪವೇದಂಗಳೆಂಬ ಉಪಶಾಖೆಗಳು,
ಶಾಸ್ತ್ರಂಗಳೆಂಬ ಅಂಕುರ ಪಲ್ಲವ, ಪುರಾಣಂಗಳೆಂಬ ಪುಷ್ಪ
ಆಗಮಂಗಳೆಂಬ ಕಾಯಿ ಬಲಿದು,
ಶ್ರೀ ಪಂಚಾಕ್ಷರಿ ಎಂಬ ಮಧುರಪಣ್ಣುಗಳು.
..............
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ / 88
- ✍️Dr Prema Pangi
#ಪ್ರೇಮಾ_ಪಾಂಗಿ,
#ನಾಲ್ಕು_ವೇದ_,ಶಾಸ್ತ್ರ_ಹದಿನೆಂಟು,
Comments
Post a Comment