ಶರಣೆ ಪರಿಚಯ - ವರದಾನಿ ದಾನಮ್ಮ :

*ಶರಣೆ ಪರಿಚಯ*
*ವರದಾನಿ ದಾನಮ್ಮ* :
ಶಿವಯೋಗ ಸಾಧನೆ, ದಾಸೋಹ, ಕಾಯಕ, ನಿಷ್ಠೆ, ಸತ್ಯ, ಧರ್ಮ, ನ್ಯಾಯ ಮೊದಲಾದ ಗುಣಗಳನ್ನು ಅಳವಡಿಸಿಕೊಂಡು ಬದುಕಿದ ಶರಣೆ ಗುಡ್ಡಾಪೂರ ದಾನಮ್ಮ. 12 ನೇ ಶತಮಾನದಲ್ಲಿ ಧರ್ಮಜಾಗೃತಿಗಾಗಿ ದೇಶಸಂಚಾರ ಮಾಡುತ್ತ ಲೋಕಕಲ್ಯಾಣಕ್ಕಾಗಿ ಪಾರಮಾರ್ಥದ ಹಾದಿ ಹಿಡಿದು ಗುಡ್ಡಾಪುರದಲ್ಲಿ ನೆಲೆಸಿದ ದಾನಮ್ಮ ಭಕ್ತರ ಪಾಲಿನ ವರದಾನಿ. ಶರಣರ ವಚನಗಳನ್ನು ನಂಬಿ ಅರಿತು, ಆಚರಿಸಿ, ಅನುಭವಿಸಿ, ಪ್ರಚಾರಮಾಡಿದ ಕನ್ನಡದ ಶರಣೆ, ಗುಡ್ಡಾಪುರದ ದಾನಮ್ಮದೇವಿ. ಹಲವರಿಗೆ ಇಷ್ಟಲಿಂಗ ದೀಕ್ಷೆ ಕೊಟ್ಟ ಮಹಿಳಾ ದೀಕ್ಷಾಗುರುಗಳು. ಲಿಂಗಯೋಗವನ್ನು ಕಲಿಸಿದ ಲಿಂಗಾಂಗಯೋಗಿನಿ. ನಿತ್ಯ ವಚನಗಳನ್ನು ಪಠಣ ಮಾಡಿಸುತ್ತಾ  ಶರಣರ ಉದಾತ್ತ ವಿಚಾರಗಳನ್ನು ಜನರಿಗೆ ತಿಳಿಸುತ್ತ ಅನುಭಾವ ಹಂಚಿದ ಅನುಭಾವಿ ಜಂಗಮ ಮೂತಿ೯. ನಿತ್ಯ ದಾಸೋಹ ಮೂರ್ತಿ.

ಲಿಂಗಮ್ಮ ಎಂದು ಕರೆಯಲ್ಪಡುತ್ತಿದ್ದ ಮಹಾಮಹಿಮೆ ದಾನಮ್ಮದೇವಿ ಹುಟ್ಟಿದ್ದು ಈಗಿನ ಮಹಾರಾಷ್ಟ್ರ ರಾಜ್ಯದ ಸಾಂಗ್ಲಿ ಜಿಲ್ಲೆಯ ಜತ್ ತಾಲೂಕಿನ ಉಮರಾಣಿ ಎಂಬ ಗ್ರಾಮದಲ್ಲಿ. ಹನ್ನೆರಡನೆ ಶತಮಾನದ ಆಸುಪಾಸಿಗೆ ಈ ಸ್ಥಳ ಕನ್ನಡನಾಡಾಗಿ ಕನ್ನಡ ಭಾಷಿಗರಿಂದ ಕೂಡಿತ್ತು. ಉಮರಾಣಿಯ ಅನಂತರಾಯ ಮತ್ತು ಶಿರಸಮ್ಮ ದಂಪತಿಗಳಿಗೆ ಬಹಳ ಕಾಲ ಮಕ್ಕಳಾಗಿರಲಿಲ್ಲ. ಈ ಕುರಿತಾಗಿ ದಂಪತಿಗಳು ವೀರಮಲ್ಲಯ್ಯನ ದೇವಸ್ಥಾನಕ್ಕೆ ಹೋಗಿ ಶೃದ್ಧಾಭಕ್ತಿಗಳಿಂದ ಬೇಡಿಕೊಳ್ಳುವರು. ಮುಂದೆ ಕ್ರಿ.ಶ.1146 ರಲ್ಲಿ ಜನಿಸಿದ ಹೆಣ್ಣುಮಗು ಹುಟ್ಟಿದ ನಂತರ ಮಗು ಅಳುವುದಿಲ್ಲ ಹಾಗೂ ಹಾಲನ್ನು ಸೇವಿಸುವುದಿಲ್ಲ. ಆಗ ಮಗುವಿಗೆ ಲಿಂಗದಾರಣೆ ಮಾಡುತ್ತಿದ್ದಂತೆ ಮಗು ಹಾಲು ಕುಡಿಯಲು ಪ್ರಾರಂಭಿಸುತ್ತದೆ. ಸಂಗಮೇಶ ಗುರುಗಳಿಂದ "ಲಿಂಗಮ್ಮ"ಎಂದು ಹೆಸರು ಪಡೆದಳು. ಲಿಂಗಮ್ಮ, ತಂದೆ-ತಾಯಿಗಳಂತೆ ಯಾವಾಗಲೂ ಪೂಜೆ, ಧ್ಯಾನದಲ್ಲಿ ತಲ್ಲಿನಳಾಗಿರುತ್ತಿದ್ದಳು. ಹೆಸರಿಗೆ ತಕ್ಕಂತೆ ಇಷ್ಟಲಿಂಗ ಪೂಜೆಯನ್ನು ಶ್ರದ್ಧಾ ಭಕ್ತಿಗಳಿಂದ ಮಾಡುತ್ತಿದ್ದ ಲಿಂಗಮ್ಮ, ಶ್ರೀಶೈಲ ಮಲ್ಲಿಕಾರ್ಜುನ ದೇವರ ಅನನ್ಯ ಭಕ್ತೆಯಾಗಿರುತ್ತಾಳೆ. ಈ ಲಿಂಗಮ್ಮ 12 ನೆ ಶತಮಾನದಲ್ಲಿದ್ದ ಎಲ್ಲ ಶರಣರ ವಚನಗಳನ್ನು ಓದಿಕೊಂಡು, ಬಡವರಿಗೆ, ದೀನ ದಲಿತರಿಗೆ ಸಹಾಯಮಾಡುತ್ತಾ ಬೆಳೆಯುತ್ತಾ ಹೋದಳು. ಒಂದು ದಿನ ಅವಳು ಒಬ್ಬ ಸಿದ್ಧನು ತನ್ನ ದೃಷ್ಟಿಯೋಗದಿಂದ ಒಂದು ಕಲ್ಲನ್ನು ಪುಡಿ ಪುಡಿ ಮಾಡುವುದನ್ನು ನೋಡಿ ಬೆರಗಾದಳು. ಈ ವಿದ್ಯೆಯ ಬಗ್ಗೆ ತನ್ನ ಗುರುಗಳಾದ ಶಾಂತವೀರ ಸ್ವಾಮಿಗಳ ಹತ್ತಿರ ಪ್ರಶ್ನಿಸುತ್ತಾಳೆ. ಶಿವಯೋಗಿ ಸೊಲ್ಲಾಪುರ ಸಿದ್ಧರಾಮರು ಇದರಲ್ಲಿ ಪರಿಣಿತಿ ಪಡೆದವರು ಎಂದು ತಿಳಿದು, ದೃಷ್ಟಿಯೋಗ ಕಲಿಯಲು ಶಿವಯೋಗಿ ಸೊಲ್ಲಾಪುರ ಸಿದ್ಧರಾಮರನ್ನು ಭೇಟೆ ಆಗುತ್ತಾಳೆ.
ಸಿದ್ಧರಾಮರು ಈ ವಿದ್ಯೆಯನ್ನು ಒಳ್ಳೆಯ ಕಾರ್ಯಕ್ಕೆ ವಿನಿಯೋಗಿಸುವ ಕುರಿತು ವಚನ ಪಡೆದು ವಿದ್ಯೆಯನ್ನು ಕಲಿಸುತ್ತಾರೆ. ದೃಷ್ಟಿಯೋಗದ ಸಾಧನೆಯಿಂದ ಹಲವು ಸಿದ್ಧಿಗಳನ್ನು ಪಡೆದು, ಜನಹಿತಕ್ಕಾಗಿ ಅದನ್ನು ಉಪಯೋಗಿಸಿದಳು. ಸಂಸಾರದಿಂದ ವಿಮುಖಳಾಗುತ್ತಿದ್ದ ತನ್ನ ಬಗ್ಗೆ, ತನ್ನ ಮದುವೆ ಬಗ್ಗೆ, ತಂದೆ-ತಾಯಿಗಳು ಗಂಭೀರವಾಗಿ ಯೋಚಿಸುತ್ತಿದ್ದಾರೆಂದು ಗೊತ್ತಾಗಿ, ಸಿದ್ದರಾಮರಿಗೂ ಬಸವಣ್ಣನವರಿಗೂ ಇರುವ ಪರಿಚಯದ ಮೂಲಕ, ಕಲ್ಯಾಣಕ್ಕೆ ಬಸವಣ್ಣನವರ ದರ್ಶನಕ್ಕಾಗಿ ಹೊರಟಳು. 
 ತನ್ನ ಸ್ವಗ್ರಾಮ ಉಮರಾಣಿಯಿಂದ ಕಲ್ಯಾಣಕ್ಕೆ ಹೊರಡಲುನುವಾದ ಲಿಂಗಮ್ಮ ಮಾರ್ಗಮಧ್ಯದಲ್ಲಿ ಗುಡಿಸಲೊಂದರಲ್ಲಿ ತಂಗುವಳು. ಆ ಗುಡಿಸಲಿನಲ್ಲಿ ರೋಗಗ್ರಸ್ಥ ಮಹಿಳೆಯನ್ನು ಕಂಡು ಸಂಚಾರ ಸ್ಥಗಿತಗೊಳಿಸಿ ಅವಳ ಸೇವೆ ಮಾಡುತ್ತ, ಆ ಮಹಿಳೆಯ ಗಂಡ ಅವಳನ್ನು ತೊರೆದ ಸಂಗತಿ ಅರಿತು ಆ ವ್ಯಕ್ತಿಯನ್ನು ಕರೆತಂದು ದಂಪತಿಗಳನ್ನು ಒಟ್ಟಿಗೆ ಮಾಡುವ ಮೂಲಕ ರೋಗಗ್ರಸ್ಥ ಮಹಿಳೆಯ ರೋಗವನ್ನು ಗುಣಮುಖ ಮಾಡುವಳು. ಕಲ್ಯಾಣದ ಹೊರವಲಯದಲ್ಲಿದ್ದ  ಮಹಾದೇವಿ ಎಂಬ ಬಡವಿಯ ಮನೆಯಲ್ಲಿ ತಂಗಿ, ನೊಂದವರಿಗೆ ರೋಗಿಗಳಿಗೆ ಉಪಚಾರ ಮಾಡಿದಳು. ಕಲ್ಯಾಣ ಸಮೀಪದ ಬಿಲ್ವವನದಲ್ಲಿ 21 ದಿನಗಳ ಕಾಲ ಶಿವಯೋಗಾರೂಡಳಾಗುತ್ತಾಳೆ. ಬಡವ ದೀನರ ಸೇವೆಮಾಡುತ್ತ ಕಲ್ಯಾಣದಲ್ಲಿ ಮನೆಮಾತಾಗುತ್ತಾಳೆ. ಲಿಂಗಮ್ಮನ ಸೇವೆ ಗಮನಿಸಿದ್ದ ಮೋಳಿಗೆ ಮಾರಯ್ಯನವರು ತಮ್ಮ ಸೌದೆ ಕಾಯಕವನ್ನು ಮಾಡುತ್ತ ಲಿಂಗಮ್ಮ ಇಲ್ಲದ ಸಮಯದಲ್ಲಿ ಅವರ ಮನೆಗೂ ಸೌದೆ ಇಟ್ಟು ಹೋಗಲಾರಂಭಿಸಿದರು. ತಮ್ಮ ಮನೆಯಲ್ಲಿ ಸೌದೆ ಇರುವುದನ್ನು ಕಂಡ ಲಿಂಗಮ್ಮ ಇದನ್ನು ಯಾರು ಇಡುತ್ತಿರಬಹುದು ಎಂದು ಸೂಕ್ಷ್ಮವಾಗಿ ಪರಿಶೀಲಿಸಿ ತಿಳಿದು ಮೋಳಿಗೆ ಮಾರಯ್ಯನವರನ್ನು ಕಂಡು ಮಾತನಾಡುವಳು. ಅವರು "ಜನಸೇವೆ ಮಾಡುವ ನಿಮಗೆ ನನ್ನಿಂದಲೂ ಕೂಡ ಸ್ವಲ್ಪವಾದರೂ ಸೇವೆ ಈ ರೀತಿಯಾಗಲಿ" ಎಂದು ಮಾಡುತ್ತಿರುವುದಾಗಿ ತಿಳಿಸಿದರು. ಅಷ್ಟೇ ಅಲ್ಲ, ಲಿಂಗಮ್ಮಳ ಸೇವಾ ಮನೋಭಾವವನ್ನು ಮೋಳಿಗೆ ಮಾರಯ್ಯನವರು ಅನುಭವ ಮಂಟಪದಲ್ಲಿ ಖುದ್ದಾಗಿ ಬಸವಣ್ಣನವರಿಗೆ ತಿಳಿಸಿದಾಗ, ಸ್ವತಃ ಬಸವಣ್ಣನವರು ಶರಣ ಮಾರಯ್ಯ ನೊಂದಿಗೆ ಲಿಂಗಮ್ಮಳ ಸೇವಾ ಪ್ರವೃತ್ತಿಯನ್ನು ನೋಡಲು  ಬರುವರು. ಅಲ್ಲಿ ಇವಳ ದಾನ ಪರಂಪರೆ, ಸೇವಾದಾಸೋಹ ಕಂಡು ಮೆಚ್ಚುತ್ತಾರೆ. ಹೆಣ್ಣು ಮಗಳೊಬ್ಬಳು ನಿಸ್ವಾರ್ಥ ಮನೋಭಾವದಿಂದ ಜನರು ಅವಳ ಸೇವೆಗೆ ಮೆಚ್ಚಿ  ಕೊಟ್ಟ ವಸ್ತುಗಳನ್ನು  ದಾನ ರೂಪದಲ್ಲಿ ಇತರರಿಗೆ ಕೊಡುವ ಮೂಲಕ ತನ್ನಲ್ಲಿ ಏನನ್ನೂ ಉಳಿಸಿಕೊಳ್ಳದೇ ಬದುಕುತ್ತಿರುವ ಪರಿ ಕಂಡು ಮೂಕವಿಸ್ಮಿತರಾಗಿ "ದಾನಮ್ಮ" ಎಂಬ ಬಿರುದು ಕೊಟ್ಟು ಇದೇ ಹೆಸರಿನಿಂದ  ವಿಶ್ವವಿಖ್ಯಾತಿ ಹೊಂದು ಎಂದು ಆಶೀರ್ವದಿಸುತ್ತಾರೆ. ಅಂದಿನಿಂದ "ದಾನಮ್ಮ" ಹೆಸರಿನಿಂದ ಸೇವೆ ಮಾಡತೊಡಗಿದ ಲಿಂಗಮ್ಮಗೆ ಬಸವಣ್ಣನವರು ಕಲ್ಯಾಣಕ್ಕೆ ಬರುವಂತೆ ತಿಳಿಸಿ ಹೊರಟು ಹೋಗುತ್ತಾರೆ.

ಆ ಪ್ರಕಾರ ದಾನಮ್ಮ ಕಲ್ಯಾಣಕ್ಕೆ ಪ್ರಯಾಣ ಬೆಳೆಸಿ ಅಲ್ಲಿಯೂ ಕೂಡ ಶರಣರ ಸೇವೆಗೈಯುತ್ತ ಅನುಭವ ಮಂಟಪದಲ್ಲಿ ತನಗಿದ್ದ ಸಂದೇಹಗಳನ್ನು ಶರಣರಲ್ಲಿ ಪ್ರಶ್ನಿಸುತ್ತ ಸೂಕ್ತ ಉತ್ತರಗಳನ್ನು ಪಡೆಯುತ್ತಾಳೆ.
ಇಂಥ ಸಂದರ್ಭದಲ್ಲಿ ಅಲ್ಲಮಪ್ರಭುಗಳು ದಾನಮ್ಮನಿಗೂ ವಚನ ರಚನೆಯಲ್ಲಿ ತೊಡಗುವಂತೆ ಸಲಹೆ ನೀಡುವರು.
ಆಗ ದಾನಮ್ಮ "ನಮ್ಮ ಎಲ್ಲ ಶರಣರೂ ವಚನ ರಚನೆಯಲ್ಲಿ ತೊಡಗಿದರೆ ವಚನಗಳ ಕಂಪನ್ನು ದೇಶದಾದ್ಯಂತ ಹರಡುವ ಜಂಗಮಕಾರ್ಯ ನನಗಿರಲಿ" ಎಂದು ನಯವಾಗಿ ಉತ್ತರಿಸುವಳು. ಅಲ್ಲಿಯೇ ಶರಣೆ ಅಕ್ಕಮಹಾದೇವಿಯನ್ನು ಸಂಪರ್ಕಿಸುವಳು. ತನ್ನ ವಿವಾಹದ ಬಗೆಗಿದ್ದ ಅನುಮಾನಗಳನ್ನು ದಾನಮ್ಮ "ಅಕ್ಕ ಮಹಾದೇವಿ"ಯಲ್ಲಿ ಪರಿಹರಿಸಿಕೊಳ್ಳುವಳು. ಸಮಾಜ ಸೇವೆಯ ಧ್ಯೇಯ ಉಳ್ಳ ಶರಣರಿಗೆ  ವಿವಾಹ ಎಂದು ತೊಡಕಾಗದು. ಶರಣ ಧರ್ಮದಲ್ಲಿ ಸಂಸಾರ ತ್ಯಾಜ್ಯವಲ್ಲ ಎಂದು ತಿಳಿದು ಸಾಂಸಾರಿಕ ಜೀವನವನ್ನು ಅನುಭವ ಮುಖೇನ ಅರ್ಥ ಮಾಡಿಕೊಳ್ಳುವ ವಿಚಾರಕ್ಕೆ ಬಂದು ಕಲ್ಯಾಣದಿಂದ ಮರಳಿ ಉಮರಾಣಿಗೆ ಬರುತ್ತಾಳೆ. ತಂದೆ-ತಾಯಿಯ ಆಜ್ಞೆ ಮತ್ತು ಇಚ್ಛೆಯಂತೆ, ತನ್ನಷ್ಟೇ ಶಿವನ ಭಕ್ತನಾದ ಸಂಗಮನಾಥ (ಸೋಮಲಿಂಗ)ನನ್ನು ಕ್ರಿ.ಶ 1164 ರಲ್ಲಿ  ಮದುವೆಯಾಗುತ್ತಾಳೆ. ಆ ಕಾಲದಲ್ಲಿಯೇ ತನ್ನ ಮದುವೆಯ ಜೊತೆ 551 ಬಡ ಜೋಡಿಗಳ ಮದುವೆ ಮಾಡಿಸುತ್ತಾಳೆ. ಹೀಗೆ ದಾನಮ್ಮ ಕನ್ನಡ ನಾಡಿನಲ್ಲಿ ಮೊಟ್ಟ ಮೊದಲು  ಸಾಮೂಹಿಕ ವಿವಾಹ ಆಚರಣೆಗೆ ತಂದವರು. ದಾನಮ್ಮ ದೇವಿಯು ಮದುವೆಯಾದ ಸ್ಥಳ ಶಂಕುತೀರ್ಥ ಈಗ ಭಕ್ತರ ಶೃದ್ದಾಕೇಂದ್ರ. ಇಲ್ಲಿ ಇರುವ ಎಂದೂ ಬತ್ತದ  ನೀರಿನ ಹೊಂಡ ಅಮ್ಮನ ಪವಾಡಕ್ಕೆ ಸಾಕ್ಷಿ. ಈ ಮದುವೆಗೆ ಬಸವಣ್ಣ ಮತ್ತು ನೀಲಾಂಬಿಕೆಯರು ಆಗಮಿಸಿ ದಂಪತಿಗಳಿಗೆ ಆಶೀರ್ವಾದ ಮಾಡುತ್ತಾರೆ. ಇದಕ್ಕೆ ಸಾಕ್ಷಿಯಾಗಿ ಸೋಮಲಿಂಗೇಶ್ವರನ ಊರು ಶಂಕುತೀರ್ಥದಲ್ಲಿ ಬಸವಣ್ಣನ ದೇವಸ್ಥಾನ ಇದ್ದು ಅಲ್ಲಿ ಬಸವಣ್ಣ ಮತ್ತು ನೀಲಾಂಬಿಕೆಯರ ಮೂರ್ತಿಗಳಿವೆ. ಮದುವೆಯ ನಂತರ  ದಾನಮ್ಮ  ಪತಿಯೊಂದಿಗೆ ಗುಡ್ಡಾಪುರಕ್ಕೆ ಬಂದು ನೆಲೆಸುತ್ತಾಳೆ. ಸತಿಪತಿಗಳೊಂದಾದ ಭಕ್ತಿ ಹಿತವಪ್ಪುದು ಶರಣಂಗೆ ಎಂಬಂತೆ ದಾನಮ್ಮ ಮತ್ತು ಸಂಗಮೇಶ್ವರ ಇಬ್ಬರೂ ಗುಡ್ಡಾಪುರದಲ್ಲಿ ಬಡವರ, ರೋಗಿಗಳ ಮತ್ತು ಜಂಗಮಸೇವೆಗೈಯುತ್ತ ಜೀವನ ನಡೆಸತೊಡಗಿದರು. 

ಮುಂದೆ ಕಲ್ಯಾಣದಲ್ಲಿ ಕ್ರಾಂತಿಯಾಗಿ ಬಸವೇಶ್ವರರು ಕೂಡಲಸಂಗಮದಲ್ಲಿ ಐಕ್ಯರಾದ ನಂತರದ ದಿನಗಳಲ್ಲಿ ದಾನಮ್ಮ ಶರಣಕುಲಕ್ಕೆ ಬಂದೊದಗಿದ ಆಪತ್ತನ್ನು ಕಂಡು ದಿಗ್ರ್ಭಾಂತಳಾಗುತ್ತಾಳೆ. ತಾನು ಕೂಡ ಮನೆ-ಮಠ ತೊರೆದು ವಚನ ಸಾಹಿತ್ಯದ ಕಂಪನ್ನು ಹರಡಲು ಹಾಗೂ ಶಿವಭಕ್ತಿ ಪ್ರಸಾರ ಕಾರ್ಯದಲ್ಲಿ ತೊಡಗಲು ಟೊಂಕಕಟ್ಟಿ ನಿಲ್ಲುತ್ತಾಳೆ. ಈ ಎಲ್ಲ ಕಾರ್ಯಗಳಲ್ಲಿಯೂ ಪತಿ ಸಂಗಮನಾಥರೂ ಕೂಡ ದಾನಮ್ಮಳಿಗೆ ಬೆನ್ನೆಲುಬಾಗಿ ನಿಲ್ಲುತ್ತಾರೆ. ಹೀಗೆ ದೇಶ ಸಂಚಾರವನ್ನು ಪತಿಯೊಡನೆ ಕೈಗೊಂಡ ದಾನಮ್ಮ ಸೊಲ್ಲಾಪುರದಲ್ಲಿ ಸಿದ್ದರಾಮರನ್ನು ಭೇಟಿಯಾಗಿ 66 ಶಿವಲಿಂಗ ಸ್ಥಾಪಿಸುತ್ತಾರೆ. ಶರಣರ ವಚನಗಳ ಅರ್ಥಗಳನ್ನು ಸಾರುತ್ತಾ, ಕಾಲ್ನಡುಗೆಯಲ್ಲೇ ಉತ್ತರ-ದಕ್ಷಿಣ ಭಾರತ ಯಾತ್ರೆಯನ್ನು ಪೂರೈಸುತ್ತಾರೆ. ಕಾಶಿ, ಗಯಾ, ಪ್ರಯಾಗ ಮುಂತಾದ ಕ್ಷೇತ್ರಗಳನ್ನು ಸಂದರ್ಶಿಸಿ ಶರಣರ ವಚನಗಳನ್ನು, ಲಿಂಗಾಯತ ಧರ್ಮದ ತತ್ವಗಳನ್ನು ಜನರಿಗೆ ತಿಳಿಯುವಂತೆ ಪ್ರಚಾರ ಮಾಡುತ್ತಾಳೆ. ಲಿಂಗಾಯತ ಧರ್ಮವನ್ನು ಸ್ವೀಕರಿಸಲು ಬಂದವರಿಗೆ ಲಿಂಗದೀಕ್ಷೆ ನೀಡುತ್ತಾ ಸಾಗುತ್ತಾಳೆ. ನಂತರ ದಕ್ಷಿಣದತ್ತ ಹೊರಳಿ ಕೂಡಲಸಂಗಮಕ್ಕೆ ಬಂದು ಅಲ್ಲಿ ಕೆಲಕಾಲ ತಂಗುತ್ತಾಳೆ. ಶರಣರ ಸ್ಥಳಗಳನ್ನು ಸಂದರ್ಶಿಸುತ್ತಾರೆ. ಕಂಚಿಯಲ್ಲಿ ಲಿಂಗ ಪ್ರತಿಷ್ಟಾಪನೆ ಮಾಡಿ, ದಾನಮ್ಮ ತನ್ನ ಪತಿಯೊಂದಿಗೆ ರಾಮೇಶ್ವರದ ಕಡೆಗೆ ಸಾಗುತ್ತಾಳೆ. ಬಸವಣ್ಣನವರ ಹಾಗು ಇತರ ಶರಣರ ವಚನಗಳನ್ನು ಜನರಿಗೆ ತಿಳಿಸುತ್ತಾ ತಾನು ಅನುಭವ ಮಂಟಪದಲ್ಲಿ ಕೊಟ್ಟ ಮಾತಿನಂತೆ ಶಿವಭಕ್ತಿ ಪ್ರಸಾರ, ಶರಣತತ್ವ ಪ್ರಸಾರದಲ್ಲಿ ತೊಡಗಿಕೊಳ್ಳುತ್ತಾಳೆ. ಕಾಂಬೆ ನಗರಕ್ಕೆ ದಾನಮ್ಮ ಬಂದಾಗ ಅದಾಗಲೇ ದಾನಮ್ಮನ ಬಗ್ಗೆ ಕೇಳಿ ತಿಳಿದಿದ್ದ ಚೋಳ ರಾಜರ ಮಾನ್ದಲೀಕ ದಾನಮ್ಮನನ್ನು ಗೌರವಾದರದಿಂದ ಬರ ಮಾಡಿಕೊಂಡು ಲಿಂಗದೀಕ್ಷೆ ಪಡೆಯುತ್ತಾನೆ. ಕಂಚಿಯನ್ನು ಶಿವಕಂಚಿ ಯಾಗಿ ಮಾಡುತ್ತಾಳೆ. ಅತ್ಯಂತ ಭಕ್ತಿವಂತನಾಗಿದ್ದ ಮೈಸೂರು ದೊರೆಗೆ ಲಿಂಗದೀಕ್ಷೆ ನೀಡುತ್ತಾಳೆ. ಶಿವ ಭಕ್ತಿಯನ್ನು ಪ್ರಸಾರ ಮಾಡುವ ಸಲುವಾಗಿ ತನ್ನ ಅಸಂಖ್ಯಾತ ಭಕ್ತರಿಗೆ ಲಿಂಗದೀಕ್ಷೆಯನ್ನು ಕೊಟ್ಟು 'ಓಂ ನಮಃ ಶಿವಾಯ' ಎಂಬ ಶಿವ ಮಂತ್ರವನ್ನು ಜಪಿಸುವಂತೆ ಪ್ರೇರಿಪಿಸುತ್ತಾಳೆ. ಬಹುಸಂಖ್ಯಾತರಾದ ನೇಕಾರರು, ಒಕ್ಕಲಿಗರು ಇವಳಿಂದ ಲಿಂಗದೀಕ್ಷೆ ಪಡೆಯುತ್ತಾರೆ.  ದಾನಮ್ಮ ಮಾಹಬ್ರತಿ ಗಳಂತೆ ಗಣಾಚಾರ ಪರಿಪಾಲಿಸಿದಳು ಎಂದು ಶಿವತತ್ವ ಚಿಂತಾಮಣಿ ತಿಳಿಸುತ್ತದೆ.  ಶಿವಶರಣೆ ದಾನಮ್ಮನ ಕುರಿತು ಶಾಸನಗಳಲ್ಲಿ ಮತ್ತು ಕೃತಿಗಳಲ್ಲಿ ಉಲ್ಲೇಖಗಳಿವೆ.  ದಾನಮ್ಮ ಷೊಡಶ ಗಣಂಗಳಲ್ಲಿ ಒಬ್ಬಳು. ಈ ಶರಣೆ ವೀರಶೈವರು ಎಂಬುದಕ್ಕೆ ವಿಜಯಪುರದ ಕ್ರಿಶ ೧೨೭೮ರ ಶಾಸನ ಆಧಾರ ಒದಗಿಸುತ್ತದೆ.  ತಾಳಿಕೋಟೆ ಶಾಸನ (ಕ್ರಿ.ಶ ೧೧೮೪),  ಇಂಗಳಗಿ ಶಾಸನ (ಕ್ರಿ.ಶ ೧೨೦೯),  ವಿಜಯಪುರ ಶಾಸನಗಳು (ಕ್ರಿ.ಶ ೧೨೭೮) ಶಿವಶರಣೆ ದಾನಮ್ಮಳ ವಿವರವನ್ನು ನೀಡುತ್ತವೆ. ಹರಿಹರ ಕವಿಯ ಮಹಾದೇವಿ ಅಕ್ಕನ ರಗಳೆ , ಭೀಮ ಕವಿಯ ಬಸವ ಪುರಾಣ , ಪದ್ಮರಾಜ ಪುರಾಣ,  ಭೈರವೇಶ್ವರ ಕಾವ್ಯದ ಕಥಾಮಣಿ ಸೂತ್ರ ರತ್ನಾಕರ ,  ಚೆನ್ನಬಸವ ಪುರಾಣ ,ಲಕ್ಕಣ್ಣ ದಂಡೇಶನ  ಶಿವತತ್ವ ಚಿಂತಾಮಣಿ  ಕೃತಿಗಳಲ್ಲಿ ಅವಳ ಚರಿತ್ರೆ, ಸಾಧನೆಗಳ ವಿಷಯ ಸಾಮಗ್ರಿ ದೊರೆಯುತ್ತವೆ. ವಚನಪಿತಾಮಹ ಫ.ಗು ಹಳಕಟ್ಟಿಯವರು  ವರದಾನಿ ಗುಡ್ಡವ್ವೆಯ ಚರಿತ್ರೆ ಬರೆದಿದ್ದಾರೆ. ತಮ್ಮ ಶಿವಾನುಭವ ಪತ್ರಿಕೆಯಲ್ಲಿ ಗುಡ್ಡವ್ವೆಯ ಕಾವ್ಯ, ಹೊರ್ತಿ ಗ್ರಾಮದ ಕವಿ ಬರೆದ ಕೃತಿಯಿಂದ ಲೇಖನ ಬರೆದಿದ್ದಾರೆ. ಡಾ.ಎಂ.ಎಂ.ಕಲ್ಬುರ್ಗಿ ಅವರ ಶಾಸನಗಳಲ್ಲಿ ಶಿವಶರಣರು ,ತ.ಸು.ಶ್ಯಾಮರಾಯರ  ಶಿವಶರಣರ ರತ್ನಕೋಶ, ಡಾ.ಎಲ್ ಬಸವರಾಜ ಅವರ ಶಿವದಾಸ ಗೀತಾಂಜಲಿ ಕೃತಿಗಳಲ್ಲಿ ದಾನಮ್ಮನ ಪ್ರಸ್ತಾಪವಿದೆ. ಜೊತೆಗೆ ಅನೇಕ ಭಕ್ತಿ ಕವಿಗಳು ಪುರಾಣದಂತೆ  ಅವಳ ಚರಿತ್ರೆಯನ್ನು ರಚಿಸಿದ್ದಾರೆ. 

ಗುಡ್ಡಾಪುರಕ್ಕೆ ಮರಳಿ ಬಂದ ದಾನಮ್ಮ ಗುಡ್ಡಾಪುರದ ಶ್ರೀ ಸೋಮೇಶ್ವರನಾಥ ದೇವಸ್ಥಾನದಲ್ಲಿ ತನ್ನ ದಿನ ನಿತ್ಯದ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸುತ್ತ ಅಲ್ಲಿ ಬಂದ ಭಕ್ತರಿಗೆ ದಾನ ಮಾಡುತ್ತ ಸಹಾಯಹಸ್ತ ನೀಡುತ್ತ ಜನಸೇವೆಯಲ್ಲಿ ತೊಡಗಿದಳು. ಶರಣೆ ದಾನಮ್ಮ ಮಾಡುತ್ತಿರುವ ಜನಸೇವೆ, ದಾನ-ಧರ್ಮವನ್ನು ನೋಡಿ  ಶ್ರೀಮಂತರು, ರಾಜರು ಅವಳಿಗೆ ತಮ್ಮಲ್ಲಿರುವ ದವಸ-ಧಾನ್ಯಗಳನ್ನು, ಬಂಗಾರ-ಬೆಳ್ಳಿಗಳನ್ನು ಕೊಡಲಾರಂಭಿಸಿದರು. ಬಂದದ್ದನೆಲ್ಲವನ್ನೂ ದಾನ ಮಾಡುತ್ತಿದ್ದಳು. ಶಿವಾರ್ಪಣಮಸ್ತು ಎನ್ನುತ್ತಿದ್ದಳು. ದಾನವೇ ಅವಳ ಜೀವನದ ಧ್ಯಾನ, ಪೂಜೆ ಮತ್ತು ಕಾಯಕವಾಗಿತ್ತು. ಜೀವಿತ ಕಾಲದಲ್ಲಿ ಸಾವಿರಾರು ಪವಾಡಗಳನ್ನು ಮಾಡಿ ಭಕ್ತರ ಪಾಲಿನ ಕಾಮಧೇನುವಾಗಿ ದಾಸೋಹದ ಪ್ರತಿರೂಪವಾಗಿ ಜನಸೇವೆಗೈದಳು.
 ಹೀಗೆ ದಿನಗಳು ಸಾಗುತ್ತಿರಲು ಒಮ್ಮೆ ತನ್ನ ಶಿವಪೂಜೆ ಮುಗಿದ ನಂತರ ಯಾವುದೋ ಒಂದು ಅಂತರ್ಶಕ್ತಿಯ ಕರೆಯನ್ನು ಆಲಿಸಿ ತಾನು ಇಲ್ಲಿಗೆ ಬಂದ ಕಾರ್ಯ ಮುಗಿಯಿತು ಎಂದು ತನ್ನ ಆಶೀರ್ವಾದದಿಂದ ಜನಿಸಿದ ಅಡಿಗಲ್ಲೇಶನ ಮುಂದೆ  ಹೇಳಿ ಸಮಾಧಿ ಸಿದ್ಧಪಡಿಸುವಂತೆ ಸೂಚಿಸುತ್ತಾಳೆ. ತನ್ನ ಅಪಾರ ಭಕ್ತ ಸಂಕುಲವನ್ನು ಬಿಟ್ಟು ದಾನಮ್ಮ ಅಂದೇ ಗುರುವಾರ ಸೂರ್ಯಾಸ್ತದ ಸಮಯದಲ್ಲಿ ಲಿಂಗಪೂಜೆಯ ವೇಳೆ  ಇಚ್ಛಾ ಮರಣ ಹೊಂದುತ್ತಾಳೆ. 75 ವರ್ಷ ಬಾಳಿ ಕ್ರಿ.ಶ.1221 ರಲ್ಲಿ ಗುಡ್ಡಾಪುರದಲ್ಲಿ ಲಿಂಗೈಕ್ಯ ಆದ ದಾನಮ್ಮಳ ಸಮಾಧಿಯನ್ನು, ಸಮಾಧಿ ಮಂದಿರಕ್ಕೆ ದೇವಸ್ಥಾನವನ್ನು ವಿಜಯಪುರ ಪ್ರದೇಶವನ್ನು ಆಳುತ್ತಿದ್ದ  ದೇವಗಿರಿಯ ಯಾದವ ವಂಶದ ಮಹಾದೇವರಾಜ ಅರಸನ ಮಾಂಡಲೀಕ ಸಾಯಿನಾಥ   ನಿರ್ಮಿಸಿದನು.
ಮುಂದೆ ಟ್ರಸ್ಟ ರಚನೆಯಾಗುವ ಮೂಲಕ ದೇವಸ್ಥಾನದ ಅಭಿವೃದ್ಧಿ ಹಾಗೂ ಭಕ್ತರ ಸಹಕಾರದಿಂದ ವಸತಿಗೃಹಗಳ ನಿರ್ಮಾಣಗೊಂಡು ಈಗ ಇದೊಂದು ಸುಪ್ರಸಿದ್ಧ ಯಾತ್ರಾ ಸ್ಥಳವಾಗಿ ಪರಿಣಮಿಸಿದೆ. ಸೋಮಲಿಂಗೇಶ್ವರ, ವೀರಭದ್ರೇಶ್ವರ, ಶ್ರೀಶೈಲ ಮಲ್ಲಿಕಾರ್ಜುನ,  ಭಕ್ತ ಅಡಿಗಲ್ಲೇಶ ಗುಡಿಗಳು, ಗುರುಗಳಾದ ಶಾಂತವೀರ ಸ್ವಾಮಿಗಳ ಪಾದುಕೆಗಳು ದೇವಸ್ಥಾನದ ಆವರಣದಲ್ಲಿವೆ.
ದೇವಸ್ಥಾನದಲ್ಲಿ ಪ್ರತಿದಿನ‌ ದೇವಿಗೆ ತ್ರಿಕಾಲ ಪೂಜೆ ಮಾಡಲಾಗುತ್ತದೆ. ನಸುಕಿನ ಜಾವ ಬಾಲ್ಯವಸ್ಥೆಯಲ್ಲಿ ಹೂವಿನ‌ ಅಲಂಕಾರ, ಮಧ್ಯಾಹ್ನ ಯುವತಿಯ ಅಲಂಕಾರ, ರಾತ್ರಿವೇಳೆ ಮುಪ್ಪಾವಸ್ಥೆಯ ಅಲಂಕಾರ  ಶತಮಾನಗಳಿಂದಲೂ ಮಾಡಲಾಗುತ್ತಿದೆ. 
 ಅತ್ಯಂತ ಪ್ರಭಾವಿ ಪುಣ್ಯಕ್ಷೇತ್ರವಾಗಿದೆ. ಭಕ್ತರೇ ಮುಂದೆ ನಿಂತು  ಕಲ್ಯಾಣ ಮಂಟಪ, ವಸತಿ ಸೌಕರ್ಯ, ನಿತ್ಯಅನ್ನ ದಾಸೋಹ ಇತರ ಮೂಲಭೂತ ಸೌಕರ್ಯ ಒದಗಿಸಿದ್ದಾರೆ. ಪ್ರತಿವರ್ಷ ಕಾರ್ತಿಕ ಮಾಸದ ಛಟ್ಟಿ ಅಮವಾಸ್ಯೆಯಂದು ದಾನಮ್ಮ ದೇವಿಯ ಜಾತ್ರೆ ನಡೆಯುತ್ತದೆ. ಮಹಾರಾಷ್ಟ್ರ, ಆಂದ್ರ, ಕರ್ನಾಟಕದ  ಲಕ್ಷಾಂತರ ಭಕ್ತರು ಸೇರಿ ಉತ್ಸವ ಮಾಡುತ್ತಾರೆ. ಸಾವಿರಾರು ಭಕ್ತರು ಪಾದಯಾತ್ರೆಯಲ್ಲಿ ಕ್ಷೇತ್ರಕ್ಕೆ ಬರುತ್ತಾರೆ. ದಾರಿಯಲ್ಲಿ ಗ್ರಾಮಸ್ತರು ವಸತಿ ಊಟದ ವ್ಯವಸ್ಥೆ ಮಾಡುತ್ತಾರೆ. ಇಲ್ಲಿ ಭಕ್ತರು ಸಲ್ಲಿಸುವ ವಿಶೇಷ ಸೇವೆಯೆಂದರೆ "ಹೋಳಿಗೆ" ಸೇವೆ. ಇಲ್ಲಿ ವಿವಿಧ ರೀತಿಯ ಹೋಳಿಗೆಯನ್ನು ನೈವೇದ್ಯ ಮಾಡಿ ಅನಂತರ ತಾವು ಹಂಚಿ ತಿನ್ನುವ ಸಂಪ್ರದಾಯವಿದೆ. ಭಕ್ತರ ಪಾಲಿನ ವರದಾನಿ ಎಂದೇ ಕರೆಯುವ ದಾನಮ್ಮಳಿಗೆ ಅರ್ಚನೆ ಸಲ್ಲಿಸಿ ಇಷ್ಟಾರ್ಥ ಸಿದ್ಧಿಗಾಗಿ ಕೋರುವರು. 
ದಾನಮ್ಮ ದೇವಿಯ ಕ್ಷೇತ್ರವು ಬೆಂಗಳೂರಿನಿಂದ 800 ಕಿ.ಮೀ ವಿಜಯಪುರದಿಂದ 100 ಕಿ.ಮೀ ಅಂತರವಿದೆ.
ಜನರಲ್ಲಿ ಪ್ರಚಲಿತವಿರುವ ದಾನಮ್ಮಳ ಸೇವೆ, ಪವಾಡಗಳು:
ಒಮ್ಮೆ ಅಂಟು ರೋಗವೊಂದು ಹರಡುತ್ತದೆ. ಅದರಿಂದ ತತ್ತರಿಸಿದ ಜನರೆಲ್ಲರೂ ನಿತ್ರಾಣರಾಗಿ ಹೋಗುತ್ತಾರೆ. ದಾನಮ್ಮ ಅವರನ್ನೆಲ್ಲಾ ತನ್ನಲ್ಲಿಗೆ ಕರೆತಂದು ಉಪಚರಿಸುತ್ತಾಳೆ. ಆ ರೋಗ ಗುಣಮುಖವಾಗುವವರೆಗೂ ಇಡೀ ಊರಿನ ಜನರನ್ನೆಲ್ಲ ತನ್ನಲ್ಲೇ ಇರಿಸಿಕೊಂಡು, ಅದಾದ ನಂತರ ಅವರಿಗೆ ತಕ್ಷಣಕ್ಕೆ ಬೇಕಾದ ಆಹಾರ ಪದಾರ್ಥಗಳನ್ನೆಲ್ಲ ಕೊಟ್ಟು ಮನೆಗೆ  ಕಳುಹಿಸುತ್ತಾಳೆ.  
ವಿಷ ಪ್ರಾಶನ ಮಾಡಿದ ಬಾಲಕನಿಗೆ ಮರಳಿ ಜೀವದಾನ, ಸತ್ತ ಮಗುವಿಗೆ ಪುನಃ ಪ್ರಾಣದಾನ, ಕಲ್ಲು ಬಸವನಿಗೆ ಕಬ್ಬು ತಿನ್ನಿಸುವ ಮತ್ತು ತ್ರಿವೇಣಿ ಸಂಗಮದಲ್ಲಿ ಮಳಲು ಪಾಯಸಗಳಂಥ ಪವಾಡಗಳನ್ನು ಮಾಡಿದ ಖ್ಯಾತಿ ಇವಳದು.
ಅಲಂಪೂರದಲ್ಲಿ ಬ್ರಹ್ಮೇಶ್ವರ ಲಿಂಗ ಪ್ರತಿಷ್ಠಾಪನೆ ಮಾಡುತ್ತಾಳೆ. ದಕ್ಷಿಣ ದೇಶದಲ್ಲಿ ತುಂಗಭದ್ರಾ ತೀರದಲ್ಲಿದ್ದ ಶಿವನ ದೇಗುಲದ  ಶಿವಲಿಂಗವನ್ನು ವೈಷ್ಣವರು ಕಿತ್ತು ನದಿಯಲ್ಲಿ ಎಸೆದು ಅದೇ ದೇವಸ್ಥಾನದಲ್ಲಿ ವಿಷ್ಣುವಿನ ವಿಗ್ರಹ ಇಟ್ಟುಕೊಂಡು ಪೂಜಿಸುತ್ತಿರುತ್ತಾರೆ. ಅಲ್ಲಿನ ಶಿವ ದೇವಸ್ಥಾನದ ಅರ್ಚಕರು ಈ ಸಮಸ್ಯೆಗೆ ಪರಿಹಾರಕ್ಕಾಗಿ ದಾನಮ್ಮನ ಬಳಿಗೆ ಬರುತ್ತಾರೆ. ಪತಿಯೊಂದಿಗೆ ದಕ್ಷಿಣ ದೇಶಕ್ಕೆ ದಾನಮ್ಮ ಹೊರಟು ಬಂದು ನದಿಯ ದಂಡೆಗೆ ಬಂದು ಕೈಮುಗಿದು ಪ್ರಾರ್ಥಿಸಲು ಶುರು ಮಾಡುತ್ತಾಳೆ. ದಾನಮ್ಮನ ಪ್ರಾರ್ಥನೆ ಮನ್ನಿಸಿದಂತೆ ಅವರು ಕಿತ್ತು ಬಿಸಾಡಿದ್ದ ಆ ಶಿವಲಿಂಗ ನದಿಯಲ್ಲೇ ತೇಲಿಕೊಂಡು ದಡಕ್ಕೆ ಬಂದು ನಿಲ್ಲುತ್ತದೆ. ಇದನ್ನೆಲ್ಲಾ ನೋಡಿದ ವೈಷ್ಣವರು ಮತ್ತೆ ಲಿಂಗ ಸ್ಥಾಪಿಸಲು ಒಪ್ಪುತ್ತಾರೆ. ಇದನ್ನು ಲಕ್ಕಣ್ಣ ದಂಡೇಶನು ತನ್ನ ಶಿವತತ್ವ ಚಿಂತಾಮಣಿಯಲ್ಲಿ ತಿಳಿಸುತ್ತಾನೆ.ವೀರ ಗಣಾಚಾರಿ ಯಂತೆ ಲಿಂಗಾಯತ ಧರ್ಮ ರಕ್ಷಿಸಿದಳು.
ದಾನಮ್ಮ ಸಮಾಧಿಯಾದಾಗ ಊರಿನಲ್ಲಿ ಇರದಿದ್ದ ದಾನಮ್ಮನ ಪರಮ ಭಕ್ತನೊಬ್ಬ ದಾನಮ್ಮ ದೇವಿಯ ಐಕ್ಯದ ವಿಷಯ ತಿಳಿದು ರೋದಿಸುತ್ತಾ ಬಂದು ಸಮಾಧಿಯ ಬಳಿ ನಿಂತಾಗ ದಾನಮ್ಮ ಮತ್ತೆ ದರ್ಶನ ಕೊಟ್ಟು, ಹುಟ್ಟು ಕುರುಡನಾಗಿದ್ದ ಅವನಿಗೆ ದೃಷ್ಟಿ ಬರುವಂತೆ ಅನುಗ್ರಹಿಸುತ್ತಾಳೆ. ದಾನಮ್ಮನ ಎಲ್ಲ ಪವಾಡಗಳನ್ನು ೧೦೮ ನಾಮಾವಳಿಗಳಲ್ಲಿ ಸ್ತುತಿಸಲಾಗಿದೆ. ದಾನಮ್ಮ ಮಹಾತ್ಮೆಯ ಚಲನಚಿತ್ರವನ್ನು ಮಾಡಲಾಗಿದೆ. 
ಶ್ರೀ ಲಕ್ಕಣ್ಣ ದಂಡೇಶ "ಶಿವತತ್ವಚಿಂತಾಮಣಿ" ಯಲ್ಲಿ ಶರಣೆ ದಾನಮ್ಮ ಅವರ ಗಣಾಚಾರವನ್ನು ತುಂಬ ಮನಸ್ಸಿನಿಂದ ಪ್ರಶಂಸಿದ್ದಾನೆ.

#ಶಿವನಲ್ಲದನ್ಯಮುಂಟೆಂಬರ್ಗೆ ಎದೆಶೂಲಿ
ಶಿವನಿಂದಕರನೊತ್ತಿ ಕೊರೆವ ಮೂಗಿನ ಕತ್ತಿ
ಶಿವಮಾರ್ಗ ಕಂಟಕರ ಪರ್ವತಕೆ ಕುಲಿಶಮಾ
ಶಿವಸಮಯ ಕಮಲಮಿತ್ರಾ.
ಶಿವಲಾಂಛನದ ವಿರೋಧಿಯ ವಂಶದಾವಾಗ್ನಿ
ಶಿವಸುಪ್ರಸಾದ ವಿರಹಿತ ಶರಧಿ ಬಡಬಾಗ್ನಿ
ಯವತರಿಸಿ ಬಂದುದೋ ಎನಿಪ
ಗುಡ್ಡಮ್ಮಗಳ ಚರಣಾಂಬುಜಕ್ಕೆ ಶರಣು.

ಶರಣೆ ದಾನಮ್ಮ ಕರ್ನಾಟಕ ಮತ್ತು ಮಹಾರಾಷ್ಟ್ರದ ಭಕ್ತರಿಗೆ ಕನ್ನಡ ಮತ್ತು ಮರಾಠಿ ಸಂಸ್ಕೃತಿಯ ಸೌಹಾರ್ದದ ಸೇತುವೆಯಾಗಿದ್ದಾಳೆ. ಧರ್ಮ ರಕ್ಷಣೆಯಲ್ಲಿ "ಗಣಾಚಾರಿ"ಯಾಗಿ, ಶರಣರ ಧರ್ಮ ವಚನ ಆದರ್ಶ ಪ್ರಚಾರದಲ್ಲಿ "ಜಂಗಮ"ವಾಗಿ, ಸಾವಿರಾರು ಜನರಿಗೆ ಲಿಂಗ ದೀಕ್ಷೆ ಕೊಟ್ಟು "ಗುರು"ವಾಗಿ, "ಅವರ ಕುಲದೇವತೆ"(ಲಿಂಗ)ಯಾಗಿ , ದಾನದಲ್ಲಿ "ದಾಸೋಹಿ"ಯಾಗಿ *ವರದಾನಿ ದಾನಮ್ಮ* ಎಂದ ಕರೆಸಿಕೊಂಡು ಅಸಂಖ್ಯಾತ ಭಕ್ತರಿಂದ ಆರಾಧಿಸಲ್ಪಡುತ್ತಿದ್ದಾಳೆ. ಅವಳು ಏರಿದ ಎತ್ತರ ನಿಜಕ್ಕೂ ಅದ್ಭುತ.
- ✍️Dr Prema Pangi
#ಪ್ರೇಮಾ_ಪಾಂಗಿ, #ಶರಣೆ_ದಾನಮ್ಮ

Comments

Popular posts from this blog

Shika chakra or Bindu chakra:Bindu visarga

Hrit Chakra or Eight Petals Chakra

A-Ka-Ta triangle or Akshara Brahma