ವಚನ ದಾಸೋಹ

ವಚನ:
#ಹದತಪ್ಪಿ ಕುಟ್ಟಲು, 
ನುಚ್ಚಲ್ಲದೆ ಅಕ್ಕಿಯಿಲ್ಲ.
ವ್ರತಹೀನನ ನೆರೆಯೆ, 
ನರಕವಲ್ಲದೆ ಮುಕ್ತಿಯಿಲ್ಲ.
ಅರಿಯದುದು ಹೋಗಲಿ, 
ಅರಿದು ಬೆರೆದೆನಾದಡೆ,
ಕಾದ ಕತ್ತಿಯಲ್ಲಿ ಕಿವಿಯ ಕೊಯ್ವರಯ್ಯಾ.
ಒಲ್ಲೆ ಬಲ್ಲೆನಾಗಿ, ನಿಮ್ಮಾಣೆ ನಿರ್ಲಜ್ಜೇಶ್ವರಾ.
- ಶರಣೆ ಕೊಟ್ಟಣದ ಸೋಮಮ್ಮ
ಅರ್ಥ:
 ಕೊಟ್ಟಣದ ಸೋಮಮ್ಮನವರು ೧೨ನೆಯ ಶತಮಾನದಲ್ಲಿ ಅನುಭವ ಮಂಟಪದಲ್ಲಿದ್ದ  ೭೭೦ ಅಮರ ಗಣಗಳಲ್ಲಿ ಒಬ್ಬರು.  ಇವರು ವಚನಕಾರ್ತಿ ಶರಣೆ ಮತ್ತು  ವ್ರತಾಚಾರ ನಿಷ್ಠೆಯ ಶರಣೆ. ಅಪಾರ ಧೈರ್ಯವಂತೆ. ಕಾಯಕದಲ್ಲಿ ಕೈಲಾಸ ಮತ್ತು ನೆಮ್ಮದಿಯನ್ನು ಕಂಡವರು.
ಕಾಯಕ : ಕೊಟ್ಟಣದ ಕಾಯಕ. ಅಂದರೆ, ಒರಳು ಮತ್ತು ಒನಕೆಯ ಬಳಸಿ ಭತ್ತವನ್ನು ಕುಟ್ಟಿ ಅಕ್ಕಿಯಾಗಿ ಮಾಡಿಕೊಡುವುದು. ಭಕ್ತರ ಮನೆಯಲ್ಲಿ ಮತ್ತು ನಿತ್ಯದಾಸೋಹ ಮಾಡುವ  ಮಹಾಮನೆಯಲ್ಲಿ ಭತ್ತವನ್ನು ಕುಟ್ಟಿ ಅಕ್ಕಿಯನ್ನಾಗಿ ಮಾಡಿಕೊಡುತ್ತಿದ್ದರು ಮತ್ತು  ಅದರಿಂದ ಬಂದ ಸಂಪಾದನೆಯಿಂದ  
ಗುರು ಲಿಂಗ ಜಂಗಮ ಸೇವೆಯನ್ನು ನಿತ್ಯವ್ರತದಂತೆ  ಮಾಡುತ್ತಿದ್ದರು. ಇವರ ಒಂದು ವಚನ ಮಾತ್ರ ದೊರೆತಿದೆ. ಅಂಕಿತನಾಮ 'ನಿರ್ಲಜ್ಜೇಶ್ವರ'. ನಿರ್ಲಜ್ಜ ಶಾಂತೇಶ್ವರರು ಈಕೆಯ ದೀಕ್ಷಾಗುರುವಾಗಿರಬೇಕು.
ವಚನವನ್ನು ಅರ್ಥಿಸಿಕೊಳ್ಳಲು ಪ್ರಯತ್ನಿಸೋಣ.

*ಹದತಪ್ಪಿ ಕುಟ್ಟಲು 
ನುಚ್ಚಲ್ಲದೆ ಅಕ್ಕಿಯಿಲ್ಲ.*
ಹಿಂದೆ ಭತ್ತವನ್ನು ಒರಳಿನಲ್ಲಿ ಒನಕೆಯಿಂದ ಕುಟ್ಟಿ ಅಕ್ಕಿಯನ್ನಾಗಿ ಮಾಡುತ್ತಿದ್ದರು. ಅದನ್ನು ಹದವಾಗಿ ಕುಟ್ಟಿದರೆ ಮಾತ್ರ ಪೂರ್ಣವಾದ ಅಕ್ಕಿಯ ಕಾಳುಗಳು  ಸಿಗುತ್ತಿತ್ತು. ಕಡಿಮೆ ಶಕ್ತಿಯಿಂದ ಕುಟ್ಟಿದರೆ, ಭತ್ತ ಭತ್ತವಾಗಿಯೆ ಉಳಿದು ಅಕ್ಕಿಯ ಕಾಳುಗಳು ಸಿಗುವುದಿಲ್ಲ. ಹೆಚ್ಚು ಶಕ್ತಿಯಿಂದ ಕುಟ್ಟಿದರೆ, ಅಕ್ಕಿಯ ಪೂರ್ಣ ಕಾಳು ಸಿಗದೆ ನುಚ್ಚಕ್ಕಿ (ತುಣುಕಾದ ಅಕ್ಕಿ) ಸಿಗುತ್ತದೆ. ಮನ ಚಂಚಲವಾಗಿದ್ದರೆ ಕುಟ್ಟುವ ಕ್ರಿಯೆಯಲ್ಲಿ ಹದತಪ್ಪಿ ಅಕ್ಕಿಯ ಪೂರ್ಣಕಾಳು ಸಿಗದೆ ನುಚ್ಚಕ್ಕಿಯೆ ಸಿಗುತ್ತದೆ.

*ವ್ರತಹೀನನ ನೆರೆಯೆ 
ನರಕವಲ್ಲದೆ ಮುಕ್ತಿಯಿಲ್ಲ.
ಅರಿಯದುದು ಹೋಗಲಿ, 
ಅರಿದು ಬೆರೆದೆನಾದಡೆ,
ಕಾದ ಕತ್ತಿಯಲ್ಲಿ ಕಿವಿಯ ಕೊಯ್ವರಯ್ಯಾ!*
ವ್ರತಹೀನರು ಅಂದರೆ ವ್ರತಗಳನ್ನು ನಿಷ್ಠೆಯಿಂದ ಆಚರಿಸದವರು. ಅವರ ಸಾಂಗತ್ಯವು ನರಕದಂತೆ. ಅವರ ಸಾಂಗತ್ಯ ದಿಂದ ಮುಕ್ತಿ ಸಿಗುವದಿಲ್ಲ. ಹಿಂದೆ ಅರಿಯದೆ ಅವರೊಡನೆ ಬೆರೆದಿದ್ದು ಹೋಗಲಿ. ಈಗ ಶರಣಪಥಕ್ಕೆ ಬಂದ ಮೇಲೆ ಅರಿವು ಮೂಡಿದ ಮೇಲೆ ಅರಿತು ಸಹ ಮತ್ತೇ ಬೆರೆತೆ ನೆಂದರೆ, ಕಾದ ಕತ್ತಿಯಲ್ಲಿ ಕಿವಿಯ ಕೊಯ್ವರು.
ವ್ರತಗಳಿಗೆ ಶರಣರ ಬದ್ಧತೆ ಎಷ್ಟು ಮತ್ತು ಅವರ ವ್ರತನಿಷ್ಟೆ ಎಷ್ಟು ನಿಷ್ಠುರವಾಗಿರುತಿತ್ತು  ಅನ್ನುವುದನ್ನು  ಶರಣೆ ಕೊಟ್ಟಣದ ಸೋಮಮ್ಮ ವಿವರಿಸಿದ್ದಾರೆ.

*ಒಲ್ಲೆ ಬಲ್ಲೆನಾಗಿ, 
ನಿಮ್ಮಾಣೆ ನಿರ್ಲಜ್ಜೇಶ್ವರಾ*. 
ಶರಣಧರ್ಮದಲ್ಲಿ  ವ್ರತಗಳು ಅಂದರೆ ದೃಢ ಸಂಕಲ್ಪದಿಂದ, ನಿಷ್ಠುರವಾಗಿ ಪಾಲಿಸುವ ಸತ್ಯಶುದ್ಧ ನಿಜಜ್ಞಾನದ ಮೂಢನಂಬಿಕೆಗಳು ಇಲ್ಲದ ಆಚರಣೆಗಳು. ಇವು ನಿಷ್ಠುರವಾಗಿಯೂ ಕಠೋರವೂ ಇರುವುದರಿಂದ ನಾನು ಅದನ್ನು ಅಷ್ಟೇ ನಿಷ್ಠೆಯಿಂದ ಆಚರಣೆ ಮಾಡುವವಳು. ಶರಣರ ವ್ರತಗಳನ್ನು  ಬಿಡಲಾರೆ‌, ನಿಮ್ಮಾಣೆ ಎಂದು ಹೇಳುವ ಮೂಲಕ ಶರಣ ಧರ್ಮದ ನಡೆ ನುಡಿ ಸಿದ್ಧಾಂತದ ಮಹತ್ವವನ್ನು ಶರಣೆ ಸೋಮಮ್ಮ ತನ್ನದೇ ಕಾಯಕದ ರೂಪಕದ ಮೂಲಕ ವಿವರಿಸಿದ್ದಾರೆ.
*ವಚನದ ಭಾವ*:
 ಶರಣೆ ಸೋಮಮ್ಮ ಭತ್ತ ಕುಟ್ಟಿ ಅಕ್ಕಿಯ ಕಾಳು ತೆಗೆಯುವ ತನ್ನ ಕಾಯಕದ  ಕ್ರಿಯಾತ್ಮಕ ಸದೃಶದ ಮೂಲಕ  ಶರಣ ಧರ್ಮದಲ್ಲಿ ಸತ್ಸಂಗದ ಮಹತ್ವ, ನಿಜಜ್ಞಾನದ ವ್ರತದ ನಿಷ್ಠೆಯ ಆಚರಣೆಗೆ ಶರಣರು ಕೊಟ್ಟ ಮಹತ್ವವನ್ನು ಅರ್ಥಪೂರ್ಣವಾಗಿ ವಿವರಿಸಿದ್ದಾರೆ. ಭತ್ತವನ್ನು ಹದವಾಗಿ ಕುಟ್ಟುವಂತೆ ವ್ರತಗಳನ್ನೂ ಸಹ ತಮ್ಮ ಇತಿಮಿತಿ ಅರಿತು ಹದವಾಗಿ ಮಾಡಬೇಕು. ಮಾಡದೇ ಇದ್ದರೆ ಮನದಲ್ಲಿ ನಿಷ್ಠೆ ನೆಲೆ ಊರದೆ ಭವಿ ಭಕ್ತ ನಾಗುವದಿಲ್ಲ. ಅತೀ ಕಷ್ಟದ ವ್ರತ ಆಚರಣೆ ಮುಂದುವರಿಸಲು ಸಾಧ್ಯವಾಗದೆ ವ್ರತಹೀನ ನಾಗುವ ಸಾಧ್ಯತೆಯೆ ಹೆಚ್ಚು. ವ್ರತ ಗಳನ್ನು ಮಾಡದಿದ್ದರೆ ಅಥವಾ ಅತೀ ಕಠಿಣವಾಗಿ ಮಾಡಿದರೆ ಪ್ರಯೋಜನ ವಾಗುವದಿಲ್ಲ. ಕಾಯಕದ ಪರಿಭಾಷೆಯನ್ನು ಬಳಸಿ ತಾರ್ಕಿಕವಾಗಿ ಹಾಗೂ ಅಷ್ಟೇ ಸಮರ್ಥವಾಗಿ ಶರಣರ ನಿಷ್ಠೆ ಪ್ರತಿಪಾದಿಸಿದ್ದಾರೆ. ಒಳ್ಳೆಯ ನಡೆನುಡಿಯಲ್ಲಿ ಶರಣರ ಪಥದಲ್ಲಿ ಇರುವವರೊಂದಿಗೆ ನಾವು ಸಂಪರ್ಕದಲ್ಲಿದ್ದರೆ ನಮಗೆ ಯಾವುದೇ ರೀತಿಯ ತೊಂದರೆಗಳು ಬಾಧಿಸವವು. ಆದರೆ ವ್ರತಹೀನರನ್ನು ಬೆರೆಯುವುದರಿಂದ ಜೀವನ ನರಕ ವಾಗುವುದು ಖಚಿತ ಎಂದಿದ್ದಾರೆ. ಅರಿಯದೆ ಬೆರೆಯುವುದು ಸಹಜ, ಆದರೆ ಶರಣ ಪಥದಲ್ಲಿ ಬಂದು ಅರಿತು ಬೆರೆತೆವೆಂದರೆ ದೊರಕುವ ಶಿಕ್ಷೆ , ಕಾಯಿಸಿದ ಕತ್ತಿಯಿಂದ ಕಿವಿಯ ಕೊಯ್ಯುವ ನೋವಿನಂತೆ ಘೋರವಾದದ್ದು ಎಂದಿದ್ದಾರೆ. ನಾನಂತೂ ಇಂತಹ ವೃತಹೀನರಿಂದ ದೂರ ಇರುತ್ತೇನೆ ಎಂದು ಹೇಳಿದ್ದಾರೆ. ಹೀಗೆ ತನ್ನ ಕಾಯಕದ ದೃಷ್ಟಾಂತ ಬಳಸಿ ಸೋಮಮ್ಮ ಶರಣ ಧರ್ಮದಲ್ಲಿ ವ್ರತ ಪಾಲನೆಯ ಮಹತ್ವ  ಯಾರೊಂದಿಗೆ ನಾವು ಬೆರೆಯಬೇಕು  ಯಾರೊಂದಿಗೆ ಬೆರೆಯಬಾರದು ಎಂದು ಸೂಕ್ಷ್ಮವಾಗಿ ಅರ್ಥಪೂರ್ಣವಾಗಿ ತಿಳಿಹೇಳಿದ್ದಾರೆ.

*ವಚನ ಚಿಂತನೆ*:
ವ್ರತ ಅಂದರೆ ಏನು?
ವ್ರತಗಳು ಅಂದರೆ ನಿಷ್ಠೆಯಿಂದ ದೃಢಸಂಕಲ್ಪದಿಂದ ಮಾಡುವ ಆಚರಣೆಗಳು
(ನೇಮಗಳು,ನಿಯಮಗಳು,ಶರಣರು ಉಪಯೋಗಿಸಿದ ಪದ ಆಚಾರಗಳು). ಹಿಂದೂ ಧರ್ಮದಲ್ಲಿ ವ್ರತಗಳು : 
ಸಮಯ, ದಿನ, ಮಾಸ ಪಂಚಾಂಗ ನೋಡಿ ಆಚರಣೆ ಮಾಡುವುದು. 
ಉಪವಾಸ ಮಾಡುವುದು, 
ರಾತ್ರಿಯಲ್ಲಿ ಜಾಗರಣಿ ಮಾಡುವುದು; 
ಹಳ್ಳ ನದಿ  ಸಮುದ್ರಕ್ಕೆ ಹೋಗಿ ತಣ್ಣೀರೊಳಗೆ ಮುಳುಗುವುದು;
ಆಹಾರದ ವೃತ -  ಕೆಲವು ಆಹಾರ ಪದಾರ್ಥಗಳನ್ನು ತ್ಯಜಿಸುವುದು. ಅಕ್ಕಿ  ಉಪ್ಪು, ಮೆಣಸಿನಕಾಯಿ, ಖಾರ, ಅಡಕೆ 
ಬಾಳೆಹಣ್ಣು , ದ್ರವ್ಯಪದಾರ್ಥಗಳ ವ್ರತವು
ಹೀಗೆ ಹಿಂದೂ ಧರ್ಮದಲ್ಲಿ 66 ತರಹದ ವ್ರತಗಳಿವೆ.
ಬಸವಾದಿ ಶರಣರು ಈ ಬಹಿರಂಗದ ಆಚರಣೆಗಳನ್ನು ಒಪ್ಪದೆ ಖಂಡಿಸಿದ್ದಾರೆ. ನಿಜವಾದ ವ್ರತ ಹೇಗಿರಬೇಕೆಂದು ಹೇಳಿದ್ದಾರೆ. ನಿಜವಾದ ವ್ರತವೆಂದರೆ "ನಿಜದ ಜ್ಞಾನದ ಮನದ ಅರಿವಿನ ವ್ರತಗಳು". 
ಗುರು ಬಸವಣ್ಣನವರ ನೇತೃತ್ವದಲ್ಲಿ ಅಲ್ಲಮ ಪ್ರಭುಗಳ ಮಾರ್ಗದರ್ಶನದಲ್ಲಿ 'ಲಿಂಗಾಯತ  ಧರ್ಮಕ್ಕೆ ಆಚರಣೆಯ, ಆಚಾರದ ಆಯಾಮ ನೀಡಿದವರು ಅವಿರಳ ಜ್ಞಾನಿ ಚನ್ನಬಸವಣ್ಣನವರು.' 50 ಆಚಾರಗಳನ್ನು ವಿಧಿಸಿ ಅವನ್ನು ಸ್ವಾಭಾವಿಕವಾಗಿ ಮೊದಲಿನಿಂದಲೂ ಪಾಲಿಸಿದ  ಗುರು ಬಸವಣ್ಣನವರನ್ನು "ಪೂರ್ವಾಚಾರಿ" ಎಂದು ಕರೆದರು ಶರಣರು. 
-✍️ Dr Prema Pangi
#ಪ್ರೇಮಾ_ಪಾಂಗಿ,
#ಹದತಪ್ಪಿ_ಕುಟ್ಟಲು_ನುಚ್ಚಲ್ಲದೆ_ಅಕ್ಕಿಯಿಲ್ಲ
Picture post created by me.Hope you all will like it.A small service to popularise Vachana Sahitya.

Comments

Popular posts from this blog

Shika chakra or Bindu chakra:Bindu visarga

Hrit Chakra or Eight Petals Chakra

A-Ka-Ta triangle or Akshara Brahma