ಪಂಚಾಚಾರ - ಭೃತ್ಯಾಚಾರ
*ಭೃತ್ಯಾಚಾರ*:
ಭೃತ್ಯಾಚಾರ, ಆಧ್ಯಾತ್ಮಿಕ ಸಾಧನೆಯ ಪ್ರಾರಂಭದ ಹಂತದಲ್ಲಿ ಮತ್ತು ಕೊನೆಯ ಹಂತದಲ್ಲಿ ಅವಶ್ಯವಾದದ್ದು.
1.ಸಾಧನೆಯ ಪ್ರಾರಂಭ ಹಂತದ ಭೃತ್ಯಾಚಾರ
“ಶಿವಶರಣರೇ ಹಿರಿಯರಾಗಿ, ತಾನೆ ಕಿರಿಯನಾಗಿ ಭಯಭಕ್ತಿಯಿಂದ ಆಚರಿಸುವದು ಪ್ರಾರಂಭದ ಭೃತ್ಯಾಚಾರ”. ಈ ಕಿಂಕರ ಭಾವದಿಂದ ಸಾಧಕನ ಅಹಂಕಾರ ನಿರಸನವಾಗಿ ಸಾಧನೆ ಪ್ರಾರಂಭವಾಗುತ್ತದೆ.
2.ಸಾಧನೆಯ ಕೊನೆಯ ಹಂತದ ಭೃತ್ಯಾಚಾರ:
ಐಕ್ಯದ ನಿಲುವಿನಲ್ಲಿ ಅಹಂಕಾರ ಹೋಗಿ, ನಾನು ಎಂಬ ಅಹಂ ಭಾವ ('ಅಹಂ') ಅಳಿದು ತಾನೇ ಶಿವಸ್ವರೂಪ ('ಸೋಹಂ')ನೆಂದು ತಿಳಿದಾಗ “ಸೋಹಂ" "ನಾನೇ ಅವನು ಆ ಪರಮಾತ್ಮ" ಎಂಬುದು ಸಹ ಅಹಂಕಾರವಾಗಬಹುದು. ಅದಕ್ಕೆ ಅವಕಾಶ ಕೊಡದೆ ಶರಣರು ಸತತ ಜಾಗೃತಿಯ ಭೃತ್ಯಾಚಾರವನ್ನು ಅವಲಂಬಿಸುತ್ತಾರೆ. ಶಿವನಿಗೆ, ಶಿವಸ್ವರೂಪವಾದ ಜಗತ್ತಿಗೆ ಸಮಾಜಕ್ಕೆ ತಮ್ಮನ್ನು ಅರ್ಪಿಸಿಕೊಂಡು ಸಮಷ್ಟಿ ಹಿತಸಾಧನೆಗಾಗಿ "ದಾಸೋಹಂ" ಭಾವನೆಯಿಂದ ಕರ್ತವ್ಯಮುಖರಾಗುತ್ತಾರೆ. “ಸೋಹಂ ಎಂದರೆ ಅಂತರಂಗದ ಗರ್ವ, ಶಿವೋಹಂ ಎಂದಡೆ ಬಹಿರಂಗದ ಅಹಂಕಾರ, ಈ ಉಭಯವನಳಿದು ದಾಸೋಹಂ ಭಾವವನೆ ಕರುಣಿಸಿ ಬದುಕಿಸಯ್ಯ”
ಎಂದು ಪ್ರಾರ್ಥಿಸುತ್ತಾರೆ ಶರಣರು.
“ದಾಸ, ಪರದಾಸ, ಸ್ವಾಮಿ, ವೀರ, ಸಜ್ಜನ,
ಸಕಲಾವಸ್ಥೆ, ಗುರುಪೂಜೆ, ಲಿಂಗಾರ್ಚನೆ, ಜಂಗಮಾರಾಧನೆ, ಭಕ್ತಿಕಾಂಕ್ಷಿತ, ಸಮರ್ಪಣ
ಹೀಗೆ ಭಕ್ತಿಮುಖವಾಗಿ ಶಿವಭಕ್ತರೇ ಹಿರಿದು ತಾ ಕಿರಿದಾಗಿ ಮಾಡುವ ಭೃತ್ಯತ್ವದಲ್ಲಿ
ಭೃತ್ಯಾಚಾರದ ಸಮರ್ಪಣಭಾವ ಕಾಣುತ್ತದೆ.
ನಾನು ಎಂಬುದು ಅಳಿಯಬೇಕಾದರೆ ಅದನ್ನು ಇನ್ನೊಂದು ಬೃಹತಶಕ್ತಿಗೆ ಮಹತ್ತರ
ವಾದ ಉದ್ದೇಶಕ್ಕಾಗಿ ಅರ್ಪಿಸಿಕೊಳ್ಳುವುದು ಅವಶ್ಯಕ. “ಎನಗಿಂತ ಕಿರಿಯರಿಲ್ಲ, ಶಿವ
ಭಕ್ತರಿಂದ ಹಿರಿಯರಿಲ್ಲ.” ಎಂದು ಗುರು ಬಸವಣ್ಣನವರು ಅನ್ನುವುದು ಭೃತ್ಯಾಚಾರ.
ರುದ್ರಪದವಿಯನೊಲ್ಲೆ.
ನಾನು ಮತ್ತಾವ ಪದವಿಯನೊಲ್ಲೆನಯ್ಯಾ.
ಕೂಡಲಸಂಗಮದೇವಾ, ನಿಮ್ಮ ಸದ್ಭಕ್ತರ
ಪಾದವನರಿದಿಪ್ಪ ಮಹಾಪದವಿಯ ಕರುಣಿಸಯ್ಯಾ. / 944
ಅರ್ಥ:
ಬ್ರಹ್ಮ ಪದವಿ ಬೇಡ, ವಿಷ್ಣು ಪದವಿ ಬೇಡ, ರುದ್ರಪದವಿ ಬೇಡ ಯಾವುದೇ ಪದವಿ ಬೇಡ, ಸದ್ಭಕ್ತರ ಪಾದವನಂದಿಪ್ಪ ಮಹಾ
ಪದವಿ ಬೇಕು ಎನ್ನುತ್ತಾರೆ ಭೃತ್ಯಾಚಾರದ ಸಾಕಾರಮೂರ್ತಿ ಬಸವಣ್ಣನವರು, 'ಸದುವಿನಯವೇ ಸದಾಶಿವನ ಒಲುಮೆ” ಎಂದು ಭಾವಿಸಿ ಅದನ್ನು ಜೀವನದಲ್ಲಿ ಸಾಧಿಸಿ ತೋರಿಸಿದರು.
“ಮಾವಿನ ಕಾಯೊಳಗೊಂದು ಎಕ್ಕೆಯ ಕಾಯಿ ನಾನಯ್ಯ” ಎಂದು ಅಹಂಕಾರ ನಿರಸನಗೊಳಿಸಿ, ಭಕ್ತಿ ವಿನಯದಿಂದ ಸಾಧನೆಯ ಪ್ರಾರಂಭ ಮಾಡಿದರು. “ಉತ್ತಮ ಕುಲದಲ್ಲಿ ಹುಟ್ಟಿದವನೆಂಬ ಕಷ್ಟತನದ ಹೊರೆಯ
ಹೊರಿಸದಿರಯ್ಯ” “ಚನ್ನಯ್ಯನ ಮನೆಯ ದಾಸಿಯ ಮಗ ಎಂದು ತಮ್ಮನ್ನು ಕರೆದುಕೊಂಡರು. ತಮ್ಮನ್ನು ತೊತ್ತು ಎಂದು ಕರೆದುಕೊಂಡು ಅಲ್ಪರಾಗಲಿಲ್ಲ. ಮಹತ್ತರವಾದ ಸಾಧನೆಗಾಗಿ ಉದಾತ್ತವಾದುದಕ್ಕೆ ತಮ್ಮನ್ನು ಅರ್ಪಿಸಿಕೊಂಡರು.
ದಾಸಿಮಯ್ಯನವರ ಭೃತ್ಯಾಚಾರದ ವಚನ :
#ಎತ್ತಪ್ಪೆ ಶರಣಂಗೆ, ತೊತ್ತಪ್ಪೆ ಶರಣಂಗೆ
ಭೃತ್ಯನಾಗಿ ಸದ್ಭಕ್ತರ ಮನೆಯ ಬಾಗಿಲು ಕಾಯ್ದಿಪ್ಪ ಸೊಣಗನಪ್ಪೆ.
ಕರ್ತಾರ! ನಿನಗೆ ಕರವೆತ್ತಿ ಹೊಡವಡುವ
ಭಕ್ತರ ಮನೆಯ ಹಿತ್ತಿಲ ಬೇಲಿಯಾಗಿಪ್ಪೆನಯ್ಯಾ,ರಾಮನಾಥ. / 38
ವೀರ ವಿರಾಗಿಣಿ ಮಹಾನ್ ಯೋಗಿ ಅಕ್ಕಮಹಾದೇವಿ ತಾವು "ಅಹಂಕಾರವಳಿದಿಹಂತಹ ಪುರಾತನರ ಮನೆಯಲ್ಲಿ ಭೃತ್ಯರ ಭೃತ್ಯಳಾಗಿಪ್ಪೆನಯ್ಯಾ" ಎನ್ನುತ್ತಾರೆ.
ಗುರು ಲಿಂಗ ಜಂಗಮಕ್ಕೆ ಅರ್ಥಪ್ರಾಣಾಭಿಮಾನವಂ ಸಮರ್ಪಿಸಿ,
ಅಹಂಕಾರವಳಿದಿಹಂತಹ ಪುರಾತನರ ಮನೆಯಲ್ಲಿ ಭೃತ್ಯರ ಭೃತ್ಯಳಾಗಿಪ್ಪೆನಯ್ಯಾ.
ಇದು ಕಾರಣ, ಚೆನ್ನಮಲ್ಲಿಕಾರ್ಜುನಯ್ಯನ ಗಣಂಗಳಲ್ಲದನ್ಯವ ನಾನರಿಯೆನಯ್ಯಾ./ 62
ನಂಬಿ ನೆಚ್ಚಿದ ತತ್ವಕ್ಕಾಗಿ ಮತ್ತು ಅದರ ಸಾಧನೆಗಾಗಿ ತನ್ನ ಸರ್ವಸ್ವವನ್ನು ಅರ್ಪಿಸಿಕೊಳ್ಳುವ ಈ ನಿಷ್ಠೆಯೇ ಭೃತ್ಯಾಚಾರದ ತಿರುಳು.
ಭೃತ್ಯಾಚಾರದಲ್ಲಿ ಭಾವದಾಸತ್ವ, ವೀರದಾಸತ್ವ, ಭೃತ್ಯತ್ವ, ವೀರಭೃತ್ಯತ್ವ- ಎಂಬ ನಾಲ್ಕು ಭಾಗ
ಗಳನ್ನು ಮಾಡುವುದುಂಟು.
ಶರಣ ಧರ್ಮದಲ್ಲಿ ಬರುವ ತ್ರಿವಿಧ ದಾಸೋಹ ಭಾವ-ದಾಸತ್ವಕ್ಕೆ ಸೇರುತ್ತದೆ.
ಈ ಭಾವ-ದಾಸತ್ವದಲ್ಲಿ ವೀರನಿಷ್ಠೆಯನ್ನು ಪಡೆಯುವುದೇ ವೀರ-ದಾಸತ್ವ ಎನಿಸುತ್ತದೆ.
ಎಲ್ಲ ಶರಣರು ನನ್ನ ಬಂಧುಗಳು-ಇದು ಭೃತ್ಯತ್ವ.
ಈ ಲೋಕಸೇವಾಕಾರ್ಯ ಸುಲಭವಲ್ಲ. ಲೋಕದ ಜನರ ಕೊಂಕು ನುಡಿ, ಕುತ್ಸಿತ ಬುದ್ಧಿ ಎದುರಿಸಲು ಅಂಜದಿರುವ ವೀರನಿಷ್ಠೆ ಬೇಕು. ಇದೇ
ವೀರ-ಭೃತ್ಯತ್ವ.
ಭಾವ-ದಾಸತ್ವ, ವೀರ-ದಾಸತ್ವಗಳಲ್ಲಿ ವೈಯಕ್ತಿಕ ವಿಕಾಸವಾದರೆ ಭೃತ್ಯತ್ವ, ವೀರ-ಭೃತ್ಯತ್ವಗಳಲ್ಲಿ ಸಾಮಾಜಿಕ ದೃಷ್ಟಿ ಎದ್ದು ಕಾಣುತ್ತದೆ.
ಹೀಗೆ ಭೃತ್ಯಾಚಾರ ವೈಯಕ್ತಿಕ ಸಾಧನೆಯಿಂದ ಪ್ರಾರಂಭವಾಗುತ್ತದೆ. ದಾಸೋಹಮಾರ್ಗದ ಭಕ್ತಿಸಾಧನೆಯಿಂದ ಅಹಂಕಾರವನ್ನು ಕಳೆದುಕೊಂಡು ನಿರ್ಲಿಪ್ತರಾಗಿ
ಏನೇ ಬಂದರೂ ಎದುರಿಸಬಲ್ಲವರಾಗುತ್ತಾರೆ.
ಆಯುಷ್ಯ ತೀರಿದಲ್ಲದೆ ಮರಣವಿಲ್ಲ ಎಂದು ಚಿತ್ತಸಮತೆಯನ್ನು ಕಾಯ್ದುಕೊಳ್ಳಬಲ್ಲವರಾಗುತ್ತಾರೆ.
ಹಾಳುಗೆಟ್ಟೋಡುವ ಆಳು ನಾನಲ್ಲವಯ್ಯಾ.
ಕೇಳು, ಕೂಡಲಸಂಗಮದೇವಾ,
ಮರಣವೆ ಮಹಾನವಮಿ. / 669
ಎಂದ ಬಸವಣ್ಣನವರು ತಾವು ಕೈಕೊಂಡ ಸಾಮಾಜಿಕ ಹಿತದ ಕ್ರಾಂತಿಸಾಧನೆಯಲ್ಲಿ
'ಮರಣವೇ ಮಹಾನವಮಿ” ಎಂಬುದನ್ನು ಅಂಜದೆ ಅಳುಕದೆ ಕಾರ್ಯತಃ ಸಾಧಿಸಿ
ತೋರಿಸಿದರು. ಶರಣರ ಭೃತ್ಯಾಚಾರದ ನಡೆ, ಅವರನ್ನು ಸಮಾಜದ ಸೇವಕರಾಗಿ, ಸಮಾಜಕ್ಕಾಗಿ ತಮ್ಮನ್ನು ಅರ್ಪಿಸಿಕೊಂಡು ಸಮಾಜಕ್ಕಾಗಿ ದುಡಿಯುವಂತೆ ಮಾಡಿತು. ಸಿದ್ಧರಾಮೇಶ್ವರರು ಹೇಳುವಂತೆ : “ತನ್ನವರೆನ್ನಬಾರದು, ತನ್ನ ಬಂಧುಗಳೆನ್ನಬಾರದು, ತನ್ನಗನ್ಯರೆನಬಾರದು. ತಮ್ಮ ತಮ್ಮ ಮನಕೆ ಮನವೇ ಸಾಕ್ಷಿ” ಎಂದು
ಸಮಾಜದ ಸೇವಕರಾಗಿ ದುಡಿದ ಶರಣರ ಭೃತ್ಯಾಚಾರದ ನಡೆ ಲೋಕದ ಮುಂದೆ ಅಲೌಕಿಕವಾದ ಶಾಶ್ವತವಾದ ಆದರ್ಶವಾಗಿ ಉಳಿದಿದೆ.
- ✍️Dr Prema Pangi
#ಭೃತ್ಯಾಚಾರ
Comments
Post a Comment