ಶರಣ ಪರಿಚಯ : ಸ್ವತಂತ್ರ ಸಿದ್ಧಲಿಂಗೇಶ್ವರ. *ಶರಣಗುರು ಸ್ವತಂತ್ರ ಸಿದ್ಧಲಿಂಗೇಶ್ವರ*

 ಶರಣ ಪರಿಚಯ :  
ಸ್ವತಂತ್ರ ಸಿದ್ದಲಿಂಗೇಶ್ವರರು
ಶರಣ ಪರಿಚಯ :  ಸ್ವತಂತ್ರ ಸಿದ್ದಲಿಂಗೇಶ್ವರ   *ಶರಣಗುರು ಸ್ವತಂತ್ರ ಸಿದ್ದಲಿಂಗೇಶ್ವರ*  
ಕಾಲ : 1501-1600
ಶರಣ ಸ್ವತಂತ್ರ ಸಿದ್ಧಲಿಂಗರು ಎಡೆಯೂರ ತೋಂಟದ ಸಿದ್ಧಲಿಂಗರ ಪರಮಶಿಷ್ಯರು. ವಿರೂಪಾಕ್ಷ ಪಂಡಿತನ (1584 ಕ್ರಿಶ) ಚೆನ್ನಬಸವ ಪುರಾಣದಲ್ಲಿ 
ತೋಂಟದ ಸಿದ್ಧಲಿಂಗರ ಶಿಷ್ಯರೆಂದು ಉಲ್ಲೇಖಿತರಾಗಿದ್ದಾರೆ. ವೀರಶೈವ ಧರ್ಮ ಪ್ರಸಾರಕ್ಕಾಗಿ ಇವರು ತಮ್ಮ ಗುರುಗಳಾದ ತೋಂಟದ ಸಿದ್ಧಲಿಂಗೇಶ್ವರರೊಡನೆ ದೇಶಪರ್ಯಟನವನ್ನೂ ಕೈಗೊಂಡಿದ್ದರು.
ಹುಟ್ಟಿದ ಊರು: ಹರದನ ಹಳ್ಳಿ (ವಾಣಿಜ್ಯಪುರ), ಚಾಮರಾಜನಗರ ತಾಲ್ಲೂಕು,ಚಾಮರಾಜನಗರ ಜಿಲ್ಲೆ.
ಶಿವಯೋಗ ಧಾಮ ಮತ್ತು ನಿರ್ವಾಣಸ್ಥಾನ : ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆ ತಾಲ್ಲೂಕಿನ ಕಾಪನಹಳ್ಳಿ ಎಂಬ ಊರಿನ ಹತ್ತಿರದಲ್ಲಿರುವ ಗಜರಾಜಗಿರಿ.
ಗಜರಾಜಗಿರಿಯಲ್ಲಿ  ದೊರಕಿರುವ ಒಂದು ಗದ್ದುಗೆಯನ್ನು ಇವರದೆಂದು ಗುರುತಿಸಲಾಗಿದೆ. ಅಲ್ಲಿ ಪ್ರತಿವರ್ಷ ಮಾಘ ಶುದ್ಧ ಪೂರ್ಣಿಮಾ ದಿನ ಜಾತ್ರೆ ನಡೆಯುತ್ತ ಬಂದಿದೆ. ಇತ್ತೀಚೆಗೆ ದೊರಕಿರುವ ಮಂಗಳಾರತಿ ಸ್ವರೂಪದ ಸ್ವರವಚನವೊಂದರಿಂದ ಈ ಸಂಗತಿ ಬೆಳಕಿಗೆ ಬಂದಿದೆ.
ಸ್ವರ ವಚನ:
`ಬೆಳಗೀರೆ ಮಂಗಳಾರತಿಯ ಮುಂದೆ
ಹೊಳೆವ ಸ್ವತಂತ್ರ ಸಿದ್ಧಲಿಂಗನಿಗೆ
ಬೆಳಗೀರೆ ಮಂಗಳಾರತಿಯ || ಪಲ್ಲ ||
....... ಶಟ್ಸ್ಥಲ ಸಾರ್ವಭೌಮ
ಕಾಪನಹಳ್ಳಿಯ ಗವಿಯ ಸರ್ವ
ಪಾಪನಾಶನ ನದಿತೀರವಾಸನಿಗೆ
ಬೆಳಗೀರೆ ಮಂಗಳಾರತಿಯ' || 3 ||
(ಕೆ. 1620 (24-5) ಕ.ಅ. ಕೇಂದ್ರ ಬೆಂ.ವಿ.ವಿ.)

ಮುಮ್ಮಡಿ ಕೃಷ್ಣರಾಜ ಒಡೆಯರು (1794-1868) ಇವರ ಸಮಾಧಿಗೆ `ಉಂಬಳಿ' ಕೊಟ್ಟಿದ್ದಾರೆ.
ವಚನಗಳ ಅಂಕಿತನಾಮ : 
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ
ಕಸುಬು : ಧರ್ಮ ಪ್ರಚಾರ ಜಂಗಮರು, ವಚನಕಾರರು
ಬಸವೇಶ್ವರರ ತರುವಾಯದ ವಚನಕಾರರಲ್ಲಿ ಪ್ರಸಿದ್ಧರಾದವರು. ಇವರು ವಿಶೇಷ ಮಹಿಮಾನ್ವಿತರೂ ಪವಾಡಪುರುಷರೂ ಆಗಿದ್ದರು. 
ದೊರೆತಿರುವ ವಚನಗಳು : 435
ಇತ್ತೀಚೆಗೆ ಲಭ್ಯವಾದ ಶಕವರ್ಷ 1765ರಲ್ಲಿ ಪ್ರತಿ ಮಾಡಿದ ಕಾಗದದ ಪ್ರತಿಯೊಂದರಿಂದ ಇವರು 700 ವಚನಗಳನ್ನು ರಚಿಸಿದ ಸಂಗತಿ ಬೆಳಕಿಗೆ ಬಂದಿದೆ.
ಈ ವಚನಗಳಲ್ಲಿ ವೀರಶೈವ ಸಿದ್ಧಾಂತ, ಯೋಗ, ಷಟ್ಸ್ಥಲಶಾಸ್ತ್ರ, ಅನುಭಾವ -
 ಇವೇ ಮೊದಲಾದ ವಿಷಯಗಳು ಪ್ರತಿಪಾದಿತವಾಗಿವೆ. ಕೆಲವು ಬೆಡಗಿನ ವಚನಗಳನ್ನೂ ಇವರು ಬರೆದಿದ್ದಾರೆ. ಸ್ವತಂತ್ರ ಸಿದ್ಧಲಿಂಗರು 700 ವಚನಗಳನ್ನಲ್ಲದೆ ಜಂಗಮರಗಳೆ ಹಾಗೂ  
ಮುಕ್ತ್ಯಾಂಗನಾ ಕಂಠಮಾಲೆ ಗಳನ್ನು ರಚಿಸಿದ್ದಾರೆ. ಜಂಗಮ ರಗಳೆಯಲ್ಲಿ 108 ನುಡಿಗಳಿವೆ. ಮುಕ್ತ್ಯಾಂಗನಾ ಕಂಠಮಾಲೆ ಇದು  21 ವಚನಗಳಿಂದ ಕೂಡಿದ ಒಂದು ಅನುಭಾವ ಗ್ರಂಥ. ಆರು ಸ್ಥಲಗಳಲ್ಲಿ ಹಂಚಿಕೊಂಡಿರುವ ಇವರ ವಚನಗಳಲ್ಲಿ ಷಟ್ಸ್ಥಲ ತತ್ವ ನಿರೂಪಣೆ ಮುಖ್ಯವಸ್ತುವಾಗಿದೆ. ಸಾಂಪ್ರದಾಯಿಕ ರೀತಿಯಲ್ಲಿ ಸಕ್ರಮವಾಗಿ ತತ್ವ ಪ್ರತಿಪಾದನೆ ಮಾಡಿದ್ದಾರೆ. ಇವರು ಶರಣರ ಬಸವ ಅಲ್ಲಮರ ವಿರಕ್ತ ಸಂಪ್ರದಾಯದ ಗುರುಗಳು.

*ಸ್ವತಂತ್ರ ಸಿದ್ದಲಿಂಗೇಶ್ವರರ ವಚನಗಳು*:
1.ವಚನ
ಕಣ್ಣು ಕಾಲು ಎರಡುಳ್ಳವ ದೂರ ಎಯ್ದುವನಲ್ಲದೆ
ಕಣ್ಣು ಕಾಲೆರಡರೊಳಗೊಂದಿಲ್ಲದವನು
ದೂರವನೆಯ್ದಲರಿಯನೆಂಬಂತೆ
ಜ್ಞಾನರಹಿತನಾಗಿ ಕ್ರೀಯನೆಷ್ಟು ಮಾಡಿದಡೇನು
ಅದು ಕಣ್ಣಿಲ್ಲದವನ ನಡೆಯಂತೆ
ಕ್ರೀರಹಿತನಾಗಿ ಜ್ಞಾನಿಯಾದಡೇನು
ಅದು ಕಾಲಿಲ್ಲದವನ ಇರವಿನಂತೆ
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ
ನಿಜವ ಬೆರಸುವಡೆ
ಜ್ಞಾನವೂ ಕ್ರೀಯೂ ಎರಡು ಬೇಕು.
 -  ಸ್ವತಂತ್ರ ಸಿದ್ದಲಿಂಗೇಶ್ವರ
ಅರ್ಥ:
ವ್ಯಕ್ತಿಯು ತನ್ನ ಜೀವನದಲ್ಲಿ ಜ್ಞಾನವನ್ನು ಹೊಂದದೆ ಕೇವಲ ದುಡಿಮೆಯನ್ನು ಮಾತ್ರ ಮಾಡುತ್ತಿದ್ದರೆ ಇಲ್ಲವೇ ದುಡಿಮೆಯನ್ನು ಮಾಡದೆ ಕೇವಲ ಜ್ಞಾನವನ್ನು ಮಾತ್ರ ಹೊಂದಿದ್ದರೆ , ಯಾವ ಪ್ರಯೋಜನವೂ ಇಲ್ಲ. ಕ್ರಿಯೆ (ಕಾಯಕ), ಜ್ಞಾನ ಜತೆಗೂಡಿದಾಗ ಮಾತ್ರ ವ್ಯಕ್ತಿಗೆ ಜೀವನದಲ್ಲಿ ನೆಮ್ಮದಿ ಮತ್ತು ಏಳಿಗೆಯು ಉಂಟಾಗುತ್ತದೆ ಎಂಬುದನ್ನು ಈ ವಚನದಲ್ಲಿ ಹೇಳಲಾಗಿದೆ.

2. ವಚನ
ಶಿರ ಮುಖ ಹೃದಯ ಬಾಹುಗಳೆಲ್ಲ 
ಶಿವನ ಅವಯವಂಗಳಾದವು. 
ಶ್ರೋತೃ, ನೇತ್ರ, ಪ್ರಾಣ, ಜಿಹ್ವೆ, ತ್ವಕ್ಕೆಂಬುವೆಲ್ಲ 
ಶಿವನ ಇಂದ್ರಿಯಂಗಳಾದವು.
ಮನ ಬುದ್ಧಿ ಚಿತ್ತಹಂಕಾರಗಳೆಲ್ಲ 
ಶಿವನ ಕರಣಂಗಳಾದವು. 
ಪ್ರಾಣಾಪಾನ, ವ್ಯಾನೊದಾನ ಸಮಾನವೆಂಬಲ್ಲಿ 
ಶಿವ ಚೈತನ್ಯವಿದ್ದುದಾಗಿ ಒಳಗಿದ್ದ ಚೇತನವು ನೀವೇ.
ಒಳಗೆ ನೀವು, ಹೊರಗೆ ನೀವು, ನಾನೆಂಬುದಿಲ್ಲ.
ನಾನೇನು ಮಾಡಿತ್ತು, ಎಲ್ಲವೂ ನಿಮ್ಮ ವಿನೋದ.
ಎನ್ನ ಸರ್ವ ಭೋಗವೆಲ್ಲ ನಿಮ್ಮ ಭೋಗವಯ್ಯ.
ಕತೃತ್ವ ನಿಮ್ಮದಾಗಿ, ಎನಗೆ ಕತೃತ್ವವಿಲ್ಲ. 
ನಾ ನಿಮ್ಮೊಳಗು, ನಿಜಗುರು ಸ್ವತಂತ್ರ ಸಿದ್ಧಲಿಂಗೇಶ್ವರ. 
--  ಸ್ವತಂತ್ರ ಸಿದ್ಧಲಿಂಗೇಶ್ವರ
Translation:
My head, face, heart, arms; 
became Shiva’s body parts.
My hearing, sight, breath, taste, touch; these became Shiva’s sense organs.
My mind, intellect, consciousness, ego; 
all these became Shiva’s tools.
The five kinds of Prana, life-breath within me, draw their vitality from Shiva.
The life force inside me is You, Shiva.
Shiva inside You exist,
 Outside You exist ; I do not exist.
Whatever you make me do;
You do it for your amusement.
All my enjoyments are your enjoyment.
You are the doer, I do nothing. I exist in You,
Nija-guru-swatantra-siddha-lingeshwara, Shiva.
- Swatantra-siddha-lingeshwara
ಅರ್ಥ:
ಎಲ್ಲ ಅವಯವಗಳು ಶಿವನಅವಯವಗಳಾದವು 
 ಎಲ್ಲ ಇಂದ್ರಿಯಗಳು ಶಿವನ ಇಂದ್ರಿಯಗಳಾದವು.
ಮನ ಬುದ್ಧಿ ಚಿತ್ತಹಂಕಾರಗಳೆಲ್ಲ ಶಿವನ ಕರಣಂಗಳಾದವು. 
ಪ್ರಾಣಾಪಾನ, ವ್ಯಾನೊದಾನ ಸಮಾನವೆಂಬಲ್ಲಿ 
 ಒಳಗಿದ್ದ ಚೇತನವು ಶಿವ ಚೈತನ್ಯ ವಾಯಿತು.
ಒಳಗೆ ಶಿವ, ಹೊರಗೆ ಶಿವ, ನಾನೆಂಬುದಿಲ್ಲ.
ಎಲ್ಲವೂ ಶಿವನ ವಿನೋದ.
ಎನ್ನ ಸರ್ವ ಭೋಗವೆಲ್ಲ ಶಿವನ ಭೋಗ.
ಕತೃತ್ವ ಶಿವನದು, ನನಗೆ ಕತೃತ್ವವಿಲ್ಲ. 
ನಾ ಶಿವನೊಳು. ಎಲ್ಲ ಶಿವನೇ.
ಶಿವಾನುಭಾವದಲ್ಲಿ ಎಲ್ಲ ಶಿವನೇ. ಎಲ್ಲ ಶಿವನ ಲೀಲೆ.
ಐಕ್ಯ ಸ್ಥಲ ದಲ್ಲಿ ನಾನು ಎಂಬುದಿಲ್ಲ .ಎಲ್ಲ ನೀನೇ ಎಲ್ಲ ಶಿವನೇ ಹೀಗಾಗಿ ನಾನು ಕತೃನಲ್ಲ.  ಕತೃತ್ವ ಶಿವನದು.

3. ವಚನ
ಹಾವಾಡಿಗ ಹಾವನಾಡಿಸುವಲ್ಲಿ ತನ್ನ ಕಾಯ್ದುಕೊಂಡು
ಹಾವನಾಡಿಸುವಂತೆ
ಆವ ಮಾತನಾಡಿದಡೂ ತನ್ನ ಕಾಯ್ದು ಆಡಬೇಕು
ಅದೆಂತೆಂದಡೆ
ತನ್ನ ವಚನವೆ ತನಗೆ ಹಗೆಯಹುದಾಗಿ
ಅನ್ನಿಗರಿಂದ ಬಂದಿತ್ತೆನಬೇಡ
ಅಳಿವುದು ಉಳಿವುದು ತನ್ನ ವಚನದಲ್ಲಿಯೆ ಅದೆ
ನಿಜಗುರು ಸ್ವತಂತ್ರ ಸಿದ್ಧಲಿಂಗೇಶ್ವರ
ಹಗೆಯು ಕೆಳೆಯು ತನ್ನ ವಚನವೇ ಬೇರಿಲ್ಲ.
-- ಸ್ವತಂತ್ರ ಸಿದ್ಧಲಿಂಗೇಶ್ವರ
Translation:
Just as a snake charmer makes the snake play 
taking enough care about himself, 
whatever you speak you should preserve yourself. 
As your speech can become your enemy, 
don’t say the others cause harm to you. 
Your speech makes you live or die, 
your speech is your friend or foe 
Nijaguru Svatantrasiddhalingeshwara.
— Swatantra-siddha-lingeshwara
ಅರ್ಥ:
“ಮಾತೇ ಮುತ್ತು, ಮಾತೇ ಹಗೆ, ಮಾತೇ ಮಿತ್ತು (ಸಾವು)“ ಎಂಬಂತೆ ವ್ಯಕ್ತಿಯು ಆಡುವ ಮಾತುಗಳು ತನಗೆ ಒಳಿತನ್ನು ಉಂಟುಮಾಡಬಲ್ಲವು ಇಲ್ಲವೇ ಕೇಡನ್ನು ತರಬಲ್ಲವು. ಅಳಿವುದು ಉಳಿವುದು ತನ್ನ ಮಾತಿನಲ್ಲಿಯೇ ಇದೆ.ಆದುದರಿಂದ ಹಾವಾಡಿಗ ಹಾವಾಡಿಸುವಾಗ ಸದಾ ಕಾಲ ಎಚ್ಚರ ವಿದ್ದು ತನ್ನನ್ನು ತಾನು ಕಾಯ್ದು ಕೊಳ್ಳುವಂತೆ,ವ್ಯಕ್ತಿಯು ತಾನಾಡುವ ಮಾತುಗಳ ಬಗ್ಗೆ ಸದಾಕಾಲ ಎಚ್ಚರದಿಂದ ಇರಬೇಕು. 

4. ವಚನ
ಅನಲ ಸಂಗದಿಂದ ಕಾಷ್ಠ ಅನಲವಾದಂತೆ,
ಶಿವಸಂಸ್ಕಾರ ಸಂಪನ್ನನಾದ ಶಿವಭಕ್ತನು,
ಶಿವನಹಲ್ಲದೆ ಮಾನವನಾಗಲರಿಯನಯ್ಯ.
ಅದು ಕಾರಣ,
ಶಿವಭಕ್ತಂಗೆ ಜಾತಿಯಿಲ್ಲ ಸೂತಕವಿಲ್ಲ.
ಶಿವನೆಂತಿಹನಂತೆ ಇಹನು.
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ನಿಜಭಕ್ತನು.
--  ಸ್ವತಂತ್ರ ಸಿದ್ಧಲಿಂಗೇಶ್ವರ
Translation:
As firewood becomes fire by uniting with fire 
a Shiva devotee with the wealth of Shiva culture 
becomes only Shiva and not a mere man. 
That’s why Shiva devotee has no caste, no pollution. 
He exists as Shiva does, the true devotee of 
Nijaguru Svatantrasiddhalingeshwara.
— Swatantra-siddha-lingeshwara
ಅರ್ಥ:
ಬೆಂಕಿಯ ಸಂಗದಿಂದ ಕಟ್ಟಿಗೆ ಬೆಂಕಿ ಯಾಗುವಾದೇ ಹೊರತು ಕಟ್ಟಿಗೆಯಾಗಿ ಉಳಿಯುವುದಿಲ್ಲ. ಅದೇ ರೀತಿ
ಶಿವಸಂಸ್ಕಾರದಿಂದ  ಶಿವಭಕ್ತನು,
ಶಿವನೇ ಆಗುವದಲ್ಲದೆ ಮಾನವನಾಗಿ ಉಳಿಯುವುದಿಲ್ಲ..
ಅದು ಕಾರಣ, ಶಿವನ ಹಾಗೆಯೇ
ಶಿವಭಕ್ತನಿಗೆ ಜಾತಿಯಿಲ್ಲ ಸೂತಕವಿಲ್ಲ.
ಶಿವನಂತೆಹನೇ ಇರುವನು.

5. ವಚನ
ಅಂಧಕನ ಮುಂದೆ ನೃತ್ಯ ಬಹುರೂಪವನಾಡಿದಡೇನು
ಕಂಡು ಪರಿಣಾಮಿಸಬಲ್ಲನೆ ಹೇಳಾ?
ಬಧಿರನ ಮುಂದೆ ಸಂಗೀತ ಸಾಹಿತ್ಯವನೋದಿದಡೇನು
ಕೇಳಿ ತಿಳಿದು ಪರಿಣಾಮಿಸಬಲ್ಲನೆ ಹೇಳಾ?
ಜ್ಞಾನಾನುಭಾವವಿಲ್ಲದವರು ಏನನೋದಿ ಏನ ಕೇಳಿ ಏನು?
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನನರಿಯದವರ ಓದು ಕೇಳಿಕೆ,
ಬಧಿರಾಂಧಕರ ಕೇಳಿಕೆ ನೋಟದಂತಾಗಿತ್ತು.
-- ಸ್ವತಂತ್ರ ಸಿದ್ಧಲಿಂಗೇಶ್ವರ
Translation:
What if you dance and perform many roles 
before a blind person, can he enjoy it? 
What if you read literature and sing songs 
before a deaf person, can he understand and enjoy? 
Those who have no knowledge or experience of awareness ,what use whatever they read or listen? 
Reading and listening of those who do not know 
Nijaguru Svatantrasiddhalingeshwara 
was like the seeing and listening of the blind and the deaf.
— Swatantra-siddha-lingeshwara
ಅರ್ಥ:
ಕುರುಡನ ಮುಂದೆ ನೃತ್ಯ, ಬಹುರೂಪ ಮಾಡಿದರೆ ಅದನ್ನು ಕಂಡು  ಉಪಯೋಗಿಸ ಬಲ್ಲನೆ ?
ಕಿವಿಡನ ಮುಂದೆ ಸಂಗೀತ ಸಾಹಿತ್ಯ ಓದಿದರೆ
ಕೇಳಿ ತಿಳಿದು ಉಪಯೋಗಿಸ ಬಲ್ಲನೆ ?
ಜ್ಞಾನ, ಅನುಭಾವವಿಲ್ಲದವರು ಏನನ್ನು ಓದಿ, ಏನನ್ನ ಕೇಳಿ ಏನು ಪ್ರಯೋಜನ?
 ಶಿವನನ್ನ ಅರಿಯದವರ ಓದು ಕೇಳಿಕೆ,
ಕುರುಡರ ನೋಟ, ಕಿವಿಡರ ಕೇಳಿಕೆ ಯಂತೆ ಆಗಿತ್ತು.

6. ವಚನ
ಇಬ್ಬರು ಮೂವರು ದೇವರೆಂದು ತಬ್ಬಿಬ್ಬುಗೊಂಡು ನುಡಿಯಬೇಡ.
ಒಬ್ಬನೇ ದೇವ ಕಾಣಿರಣ್ಣ.
``ಸರ್ವಸ್ಮಾದಧಿಕೋರುದ್ರಃ ಪರಮಾತ್ಮಾ ಸದಾಶಿವಃ
ಇತಿ ಯತ್ಮ ನಿಶ್ಚಿತಾ ಧೀಃ ಸ ವೈ ಮಾಹೇಶ್ವರಃ ಸ್ಮೃತಃ||'
ಎಂದವಾಗಮಂಗಳು.
`ಶಿವನೇಕೋ ದೇವ'ನೆಂದು ಸಾರುತ್ತಿವೆ ಶ್ರುತಿ ಪುರಾಣಂಗಳು.
ಇದು ಕಾರಣ,
ಶಿವನಲ್ಲದೆ ದೈವವಿಲ್ಲೆಂದರಿದ ಮಾಹೇಶ್ವರನ ಹೃದಯ
ನಿವಾಸವಾಗಿಪ್ಪ, ನಮ್ಮ ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನು.
--  ಸ್ವತಂತ್ರ ಸಿದ್ಧಲಿಂಗೇಶ್ವರ
ಅರ್ಥ:
ವೀರಶೈವಲಿಂಗವಂತರಿಗೆ "ಶಿವ" ನೊಬ್ಬನೇ ದೇವ. ಎರಡು ಮೂರು ಎಂದು ಮೂರ್ಖನಂತೆ ಮಾತಾಡಬೇಡ. `ಶಿವ ಏಕೋ ದೇವ' ನೆಂದು  ಶ್ರುತಿ ಪುರಾಣಗಳು ಸಾರುತ್ತವೆ.ಈ ಕಾರಣ,
ಶಿವನಲ್ಲದೆ ಬೇರೆ ದೈವ ಇಲ್ಲ ಎಂದು ಅರಿತ  ಮಾಹೇಶ್ವರನ ಹೃದಯದಲ್ಲಿ ಶಿವನು
ನಿವಾಸವಾಗಿದ್ದಾನೆ.

7. ವಚನ
ಅಣುವಿಂಗೆ ಅಣು, ಮಹತ್ತಿಂಗೆ ಮಹತ್ತಾಗಿ
ಎಣಿಸಬಾರದ ಬಹಳ ಬ್ರಹ್ಮಕ್ಕೆ ಎಣೆಯಾವುದು ಹೇಳಾ?
ಅಗಣಿತನಕ್ಷಯ ಸರ್ವಜೀವ ಮನಃಪ್ರೇರಕ ಸರ್ವಗತ ಸರ್ವಜ್ಞ
ಏಕೋದೇವ ಸಂವಿತ್ ಪ್ರಕಾಶ ಪರಮೇಶ್ವರನು
ಮನವೆಂಬ ದರ್ಪಣದೊಳಗೆ, ಬಿಂದ್ವಾಕಾಶರೂಪನಾಗಿ
ಬೆಳಗಿ ತೋರುವ
ಶಿವನ ಅಂದವ ತಿಳಿದು ನೋಡಿ ಕೂಡಬಲ್ಲಾತನೆ
ಪರಮಶಿವಯೋಗಿ.
ಆತನೇ ಜನನ ಮರಣ ರಹಿತ, ಆತನೇ ಸರ್ವಜ್ಞನು,
ಆತನೇ ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನು ತಾನೇ.
- ಸ್ವತಂತ್ರ ಸಿದ್ಧಲಿಂಗೇಶ್ವರ
ಅರ್ಥ:
ಆ ಅನಾದಿ ಪರಶಿವನು ಅಣುವಿಗಿಂತಲೂ ಅಣುವಾಗಿ ಅಂದರೆ ಅತಿ ಚಿಕ್ಕದಾದ ವಸ್ತು ಅಣುವಿಗಿಂತಲೂ ಚಿಕ್ಕವನಾಗಿಯೂ; ಅತಿ ಮಹತ್ತು ಅಂದರೆ  ವಿಶ್ವಕ್ಕಿಂತಲೂ ಮಹತ್ತಾಗಿ, ದೊಡ್ಡವನಾಗಿಯೂ; ಅಸಂಖ್ಯಾತ ಬ್ರಹ್ಮನಿಗೆ ಸಮನಾಗಿ ;ಅಗಣಿತನಕ್ಷಯ ಅಂದರೆ ಲೆಕ್ಕಕ್ಕೇ ಸಿಗದಷ್ಟು ಸರ್ವಜೀವಗಳಿಗೆ ಮನಃಪ್ರೇರಕನು. ಸರ್ವಗತ ಸರ್ವಜ್ಞನು.
ಅವನು ಏಕೋದೇವ ಅಂದರೆ ಅವನೊಬ್ಬನೇ ದೇವನು.. ಸ್ವಯಂ ಪ್ರಕಾಶ ಪರಮೇಶ್ವರನು.
ಮನವೆಂಬ ದರ್ಪಣದೊಳಗೆ, ಬಿಂದು ಮತ್ತು ಆಕಾಶರೂಪನಾಗಿ ಬೆಳಗಿ ತೋರುವ ಶಿವನ ಅಂದವ ತಿಳಿದು ನೋಡಿ ಅವನಲ್ಲಿ ಐಕ್ಯನಾಗ ಬಲ್ಲಾತನೆ ಪರಮ ಶಿವಯೋಗಿ.
ಆತನೇ ಜನನ ಮರಣ ರಹಿತನು, ಆತನೇ ಸರ್ವಜ್ಞನು.ಆತನೇ ನಿಜಗುರು.
ಶರಣರಿಗೆ ಅಣು (atom) ,ಅಣುವಿಗಿಂತಲೂ ಚಿಕ್ಕದಾದ ರೇಣು(subatomic particles), ವಿಶ್ವಗಿಂತ ಮಹತ್ತಾದ  ಕಲ್ಪನೆ ಆ ಕಾಲದಲ್ಲಿಯೇ ಇತ್ತು. ಬಿಂದು ಮತ್ತು ಆಕಾಶ ರೂಪಿ ಶಿವನ ಕಲ್ಪನೆ ವೈಜ್ಞಾನಿಕ ವಾಗಿದೆ. ವಿಶ್ವವೆಲ್ಲ ಶಿವತತ್ವ ದಿಂದ ಕೂಡಿದೆ. ಸರ್ವಜೀವಿಗಳಿಗೆ ಒಬ್ಬನೇ ದೇವ, ಸರ್ವಜೀವಿಗಳಿಗೆ ಒಬ್ಬನೇ ಶೃಷ್ಟಿಕರ್ತಎಂದು ಶರಣರು ತಿಳಿದಿದ್ದರು.

8.ವಚನ
ಬ್ರಹ್ಮಸ್ಥಾನದ ಬಳಿಯ ಸಹಸ್ರದಳ 
ಕಮಲ ಮಧ್ಯದಲ್ಲಿ, ಸೂಕ್ಷ್ಮ ರಂಧ್ರ 
ವೆಂಬುದೊಂದು ಕೈಲಾಸ ದ್ವಾರವುಂಟು,  
ಆ ದ್ವಾರದ ಕವಾಟವ ತೆಗೆದು ನೋಡಲು, 
ಕೋಟಿ ಚಂದ್ರ ಪ್ರಕಾಶದ ದಿವ್ಯ ಪೀಠದ 
ಮೇಲೆ ಮೂರ್ತಿಗೊಂಡಿದ್ದ ಶಿವನ ಕಂಡು, 
ನೋಡಿದ ನೋಟವಲ್ಲಿಯೆ ಸಿಕ್ಕಿ ಭಾವವಚ್ಚೊತ್ತಿ, 
ಸರ್ವ ಕರಣಂಗಳು ನಿವೃತ್ತಿಯಾಗಿ ಮನ 
ಉನ್ಮನಿಯಲ್ಲಿ ನಿಂದು, ಸಮರಸ ಸಮಾಧಿಯಲ್ಲಿ ಇದ್ದನಯ್ಯ ನಿಮ್ಮ ಶರಣ ನಿಜಗುರು ಸ್ವತಂತ್ರ ಸಿದ್ಧಲಿಂಗೇಶ್ವರಾ.   
- ಸ್ವತಂತ್ರ ಸಿದ್ದಲಿಂಗೇಶ್ವರ
ಅರ್ಥ:
 ಶಿವಯೋಗದ ಅಂತಿಮ ಚರಣದ ವರ್ಣನೆ ಇದೆ. ಬ್ರಹ್ಮಸ್ಥಾನದ ಬಳಿಯ ಸಹಸ್ರಾರ ಚಕ್ರ (ಸಹಸ್ರ ದಳದ ಮೇಲ್ಮುಖ ಮಾಡಿದ ಕಮಲ) ಮಧ್ಯದಲ್ಲಿಯ, ಸೂಕ್ಷ್ಮ ರಂಧ್ರವೆ ಕೈಲಾಸದ ದ್ವಾರ,  ಆ ದ್ವಾರ ತೆಗೆದು ನೋಡಲು, ಕೋಟಿ ಚಂದ್ರ ಪ್ರಕಾಶದ ದಿವ್ಯ ಪೀಠದ 
ಮೇಲೆ  ಶಿವನ ಮೂರ್ತಿ ಕಂಡು, 
ನೋಡಿದ ನೋಟದಲ್ಲಿಯೆ ಸಿಕ್ಕಿ, ಭಾವ ಅಚ್ಚೊತ್ತಿ, 
ಸರ್ವ ಕರಣಂಗಳು, ಸರ್ವ ಇಂದ್ರಿಯಗಳು ಸ್ಥಬ್ದ ವಾಗಿ ಲಿಂಗಾಂಗ ಸಮರಸ ಸಮಾಧಿಯಲ್ಲಿ ಇದ್ದೆನು.. 

9. ವಚನ
ಅರೆದೆರೆದೆವೆ ದೃಷ್ಟಿಯ ನಾಸಿಕಾಗ್ರದಲ್ಲಿರಿಸಿ ನೋಡುತ್ತ,
ಹೃದಯಕಮಲದಲ್ಲಿದ್ದ ಅಚಲಲಿಂಗವ
ಒಳಗೆ ಜ್ಞಾನಲೋಚನದಿಂದ ನೋಡುತ್ತ,
ತನುಮನೇಂದ್ರಿಯ ತರಹರವಾಗಿ,
ಮನ ನಿವಾತಜ್ಯೋತಿಯಂತೆ ನಿಂದು ನಿಜವ ಕೂಡಬಲ್ಲಾತನೆ,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನಲ್ಲಿ ಸಹಜಯೋಗಿ.
-ಸ್ವತಂತ್ರ ಸಿದ್ದಲಿಂಗೇಶ್ವರ
ಅರ್ಥ:
ಸಹಜ ಶಿವಯೋಗ ವಿಧಾನವನ್ನು ಸುಂದರವಾಗಿ ಅರ್ಥಿಸಿದ್ದಾರೆ.

10. ವಚನ
ಲಿಂಗವೆಂಬುದು  ಸರ್ವಕಾರಣ ನಿರ್ಮಲ ,
ಲಿಂಗವೆಂಬುದು ಸಚ್ಚಿದಾಂದ ನಿತ್ಯಪರಿಪೂರ್ಣ,
ಲಿಂಗವೆಂಬುದು ಸರ್ವ ಲೋಕೋತ್ಪತ್ತಿಗೆ ಕಾರಣ,
ಲಿಂಗವೆಂಬುದು  ಸರ್ವತತ್ವ ಪುರಾಣ ನಿಜ ಚೈತನ್ಯವು,
ಲಿಂಗವೆಂಬುದು  ಜನ್ಮವರಿಧಿಯ ದಾಂಟಿಸುವ ಭ್ಯೇತ್ರವು;
ಲಿಂಗವೆಂಬುದು  ಶರಣರ ಹೃದಯದಲ್ಲಿ ಬೆಳಗುವಜ್ಯೋತಿರ್ಮಯ ಲಿಂಗವು. ಇಂತಿ ಲಿಂಗದ ಮರ್ಮವನರಿದವನೆಅರಿದವನು ನಿಜಗುರು ಸ್ವತಂತ್ರ ಸಿದ್ದಲಿಂಗೇಶ್ವರಾ...
-ಸ್ವತಂತ್ರ ಸಿದ್ದಲಿಂಗೇಶ್ವರ
ಅರ್ಥ:
'ಲಿಂಗ' ವೆಂದರೆ ಸರ್ವಕಾರಣ ನಿರ್ಮಲನು, ತಾನು ಬದಲಾವಣೆ ಯಾಗದೆಯೇ ಎಲ್ಲವನ್ನು, ಸರ್ವ ಲೋಕವನ್ನು ಸೃಷ್ಟಿಸಬಲ್ಲ.ಎಲ್ಲ ಸೃಷ್ಟಿಗೆ ಆದಿ ಕಾರಣವಾದ ಆದಿಶಕ್ತಿಯೇ, ಶಿವನ ಚಿತ್ ಶಕ್ತಿ.ಲಿಂಗವು ಸತ್-ಚಿತ್-ಆನಂದ, ನಿತ್ಯಪರಿಪೂರ್ಣ ಲಕ್ಷಣಗಳನ್ನು ಹೊಂದಿದ, ಸಕಲ ತತ್ವಗಳಿಗೆ ಆಶ್ರಯೀಭೂತವಾದ ಚೈತನ್ಯ ಸ್ವರೂಪವು. ಇದು  ಜ್ಯೋತಿರ್ಮಯ ಸ್ವರೂಪವು. ಮಾತ್ರವಲ್ಲ ಹೃದಯ ಕಮಲದಲ್ಲಿ ಅಂಶರೂಪದಲ್ಲಿ ಆತ್ಮವಾಗಿ ನೆಲೆಸಿರುತ್ತದೆ.
"ಜನ್ಮ ವಾರಿಧಿಯ ದಾಂಟಿಸುವ ಭ್ಯೇತ್ರ" ಅಂದರೆ ಲಿಂಗ  ಮಾನವ ಜನ್ಮವೆಂಬ ಭಾವ ಸಾಗರವನ್ನು ದಾಟಿಸುವ  ನಾವೆ . ಈ ಮರ್ಮವನ್ನರಿತು ನಡೆದಾಗಲೇ ಸಾಧಕ ಶಿವನುಭಾವಿಯಾಗಬಲ್ಲ ನಿಜಗುರು ವಾಗಬಲ್ಲ. ಹೀಗೆ "ಲಿಂಗ" ಪದವು ಪರಮಾತ್ಮ ಸೂಚಕ, ಪರಶಿವ ಸೂಚಕ.

11. ವಚನ
ಆಜ್ಞಾಚಕ್ರದ ಮಧ್ಯಹೃದಯದಲ್ಲಿ ಭರಿತವಾಗಿ
ನಾದ ಬಿಂದು ಕಲೆಯೆಂಬ ದಿವ್ಯಪೀಠದ ಮೇಲೆ ತೋರುತ್ತ 
ತನ್ನ ಕಲೆಯನ್ನೆಲ್ಲಾ ದ್ವಾರಂಗಳಲ್ಲಿ ಬೀರುತ್ತ
ಮತ್ತೆಲ್ಲವ ಮೀರಿದ ನಿರ್ಮಲ ಶಿವಲಿಂಗರೂಪು
ತಾನೆ ಪರಮ ಪದವು.
ಆ ಪರಮ ಪದವನರಿದ ನಿರ್ಮಲ ಜ್ಞಾನಿಯೇ
ನಿಜಮುಕ್ತನಯ್ಯಾ,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ.
-ಸ್ವತಂತ್ರ ಸಿದ್ದಲಿಂಗೇಶ್ವರ
ಅರ್ಥ:
ಶಿವಯೋಗ ವಿಧಾನವನ್ನು ಅನುಭಾವದಿಂದ ಅರಿತ  ನಿರ್ಮಲ ಜ್ಞಾನಿ ನಿಜವಾಗಿ ಮುಕ್ತನು.

-✍️ Dr Prema Pangi
#ಪ್ರೇಮಾ_ಪಾಂಗಿ,#ಸ್ವತಂತ್ರ_ಸಿದ್ದಲಿಂಗೇಶ್ವರ,

Comments

Popular posts from this blog

Shika chakra or Bindu chakra:Bindu visarga

Hrit Chakra or Eight Petals Chakra

A-Ka-Ta triangle or Akshara Brahma