ಪಂಚಾಚಾರ. : ಸದಾಚಾರ

ಪಂಚಾಚಾರ. : ಸದಾಚಾರ 
ಸದಾಚಾರ:
ಪಂಚಾಚಾರಗಳಲ್ಲಿ ಸದಾಚಾರ ಬಹಳ ವ್ಯಾಪಕವಾದದ್ದು. ಶರಣರು ನೈತಿಕ ಜೀವನಕ್ಕೆ ತುಂಬಾ ಮಹತ್ವವನ್ನು ಕೊಟ್ಟಿದ್ದಾರೆ. 
ಪರಿಶುದ್ಧವಾದ ಸಾತ್ವಿಕ ನೈತಿಕ ಜೀವನಕ್ಕೆ ಸದಾಚಾರವೇ ಆಧಾರ.

ಮಾನವನ ವೈಯಕ್ತಿಕ ಮತ್ತು ಸಾಮಾಜಿಕ ಜೀವನದ ಶಾಶ್ವತವಾದ ಮೌಲ್ಯಗಳ ವಿಕಾಸಕ್ಕೆ ಕಾರಣವಾದ ಎಲ್ಲ ನೈತಿಕ ಅಂಶಗಳನ್ನು ಶರಣರು ತಮ್ಮ ಧರ್ಮದಲ್ಲಿ ಮತ್ತು ತಮ್ಮ ನಡೆ-ನುಡಿಗಳಲ್ಲಿ ಅಳವಡಿಸಿಕೊಂಡಿದ್ದಾರೆ. ಶರಣರು ಪಲಾಯನವಾದಿಗಳಲ್ಲ. ಪ್ರವೃತ್ತಿಮುಖವಾಗಿ ನಿಂತು ಜೀವನವನ್ನು ಎದುರಿಸಿದವರು. ದೇಹದ ಯಾವ ಪ್ರವೃತ್ತಿಗಳನ್ನೂ ಅವರು ತಿರಸ್ಕರಿಸಲಿಲ್ಲ. ಅದರದರ ಸ್ಥಾನವನ್ನು ಅದಕ್ಕೆ ಕೊಟ್ಟರು. ಆದ್ದರಿಂದಲೇ ಪೂರ್ಣದೃಷ್ಟಿಯಿಂದ ಜೀವನವನ್ನು ನೋಡಿ ಎಲ್ಲ ಸದ್ಗುಣಗಳನ್ನು ಅಳವಡಿಸಿಕೊಂಡರು.
#ಸದಾಚಾರ ಸದ್ಭಕ್ತಿಯಿಲ್ಲದವರನೊಲ್ಲನಯ್ಯಾ,
ಅವರಾರಾಧನೆ ದಂಡ.
ನಿಚ್ಚ ನಿಚ್ಚ ಪ್ರಾಯಶ್ಚಿತ್ತರನು ಒಲ್ಲ
ಕೂಡಲಸಂಗಮದೇವ, ಭೂಮಿಭಾರಕರ./1254
 ಎನ್ನುತ್ತಾರೆ ಗುರು ಬಸವಣ್ಣನವರು.

#“ಸಜ್ಜನಳಾಗಿ ಮಜ್ಜನಕ್ಕೆರೆವೆ, ಶಾಂತನಾಗಿ ಪೂಜೆಯ ಮಾಡುವೆ; ಸಮರತಿ
ಯಿಂದ ನಿಮ್ಮ ಹಾಡುವೆ” 
ಎನ್ನುತ್ತಾರೆ ಅಕ್ಕ ಮಹಾದೇವಿಯವರು.

ಹುಸಿ ಕಳವು ಕೋಪ ವಂಚನೆ ಕಪಟ ಮೊದಲಾದ ದುರ್ಗುಣಗಳನ್ನು ತುಂಬಿಟ್ಟುಕೊಂಡು ಹೊರಗೆ ತೋರಿಕೆಗೆ ಮಾಡುವ ಲಿಂಗಭಕ್ತಿ ವ್ಯರ್ಥವೆಂದು ಸಾರಿದರು ಶರಣರು.

#ಕಳಬೇಡ, ಕೊಲಬೇಡ, 
ಹುಸಿಯ ನುಡಿಯಲು ಬೇಡ,
ಮುನಿಯಬೇಡ, 
ಅನ್ಯರಿಗೆ ಅಸಹ್ಯಬಡಬೇಡ,
ತನ್ನ ಬಣ್ಣಿಸಬೇಡ, ಇದಿರ ಹಳಿಯಲು ಬೇಡ.
ಇದೇ ಅಂತರಂಗಶುದ್ಧಿ, ಇದೇ ಬಹಿರಂಗಶುದ್ಧಿ
ಇದೇ ನಮ್ಮ ಕೂಡಲಸಂಗಮದೇವರನೊಲಿಸುವ ಪರಿ. / 493
ಎಂಬ ಪ್ರಸಿದ್ಧ ವಚನದಲ್ಲಿ ಅಂತರಂಗ ಬಹಿರಂಗ ಶುದ್ಧಿಯ ರಹಸ್ಯವನ್ನೇ ಹಿಡಿದಿಟ್ಟಿದ್ದಾರೆ ಗುರು ಬಸವಣ್ಣನವರು. ಭಕ್ತಸ್ಥಲದಲ್ಲಿಯೇ ನೈತಿಕ ನಿಷ್ಠೆಯನ್ನು ಭದ್ರವಾಗಿಸಬೇಕು. ಲಿಂಗಾಚಾರ ಸದಾಚಾರಗಳೆರಡೂ ಭಕ್ತಸ್ಥಲದಲ್ಲಿ ಇರುವಾಗಲೇ ನೆಲಗೊಳ್ಳಬೇಕು.
#ತನು ಕರಗದವರಲ್ಲಿ
ಮಜ್ಜನವನೊಲ್ಲೆಯಯ್ಯಾ ನೀನು.
ಮನ ಕರಗದವರಲ್ಲಿ
ಪುಷ್ಪವನೊಲ್ಲೆಯಯ್ಯಾ ನೀನು.
ಹದುಳಿಗರಲ್ಲದವರಲ್ಲಿ
ಗಂಧಾಕ್ಷತೆಯನೊಲ್ಲೆಯಯ್ಯಾ ನೀನು.
ಅರಿವು ಕಣ್ದೆರೆಯದವರಲ್ಲಿ
ಆರತಿಯನೊಲ್ಲೆಯಯ್ಯಾ ನೀನು.
ಭಾವಶುದ್ಭವಿಲ್ಲದವರಲ್ಲಿ
ಧೂಪವನೊಲ್ಲೆಯಯ್ಯಾ ನೀನು.
ಪರಿಣಾಮಿಗಳಲ್ಲದವರಲ್ಲಿ
ನೈವೇದ್ಯವನೊಲ್ಲೆಯಯ್ಯಾ ನೀನು.
ತ್ರಿಕರಣ ಶುದ್ಧವಿಲ್ಲದವರಲ್ಲಿ
ತಾಂಬೂಲವನೊಲ್ಲೆಯಯ್ಯಾ ನೀನು.
ಹೃದಯಕಮಲ ಅರಳದವರಲ್ಲಿ
ಇರಲೊಲ್ಲೆಯಯ್ಯಾ ನೀನು.
ಎನ್ನಲ್ಲಿ ಏನುಂಟೆಂದು ಕರಸ್ಥಲವನಿಂಬುಗೊಂಡೆ ಹೇಳಾ ಚೆನ್ನಮಲ್ಲಿಕಾರ್ಜುನಯ್ಯಾ ? / 218
ಅರ್ಥ:
ಅಂತರಂಗದ ಶುದ್ಧತೆ, ಸದಾಚಾರವಿಲ್ಲದೆ ಬರೀ ಬಹಿರಂಗದ ಆಚರಣೆ, ಪೂಜೆಗಳನ್ನು ಮಾಡಿ  ಚೆನ್ನಮಲ್ಲಿಕಾರ್ಜುನ ದೇವರನ್ನು ಓಲೈಸಲು ಸಾಧ್ಯವಿಲ್ಲ ಎಂದು ಅಕ್ಕಮಹಾದೇವಿಯು ಹೇಳಿದ್ದಾರೆ. ನಾವು ಮಾಡುವ ಪೂಜೆ ಪರಶಿವನಿಗೆ ಅರ್ಪಿತವಾಗಬೇಕಾದರೆ, ಅವನ ಅನುಗ್ರಹ ದೊರಕಬೇಕಾದರೆ, ನಾವು ಶರಣರ ತತ್ವಗಳನ್ನು, ಸದಾಚಾರವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು.
ತನು ಕರಗದವರು ಅಂದರೆ  ದುಡಿಮೆಯನ್ನು  ಕಾಯಕವನ್ನು ಮಾಡದವರಿಂದ ದೇವರು  ಮಜ್ಜನವನ್ನು  ಸ್ವೀಕರಿಸುವುದಿಲ್ಲ.
ಮನ ಕರಗದವರು ಅಂದರೆ ಪರರ ಹಸಿವು, ಬಡತನ, ನೋವನ್ನು ಕಂಡು ಕರಗದವರಿಂದ ದೇವರು ಪುಷ್ಪ ಹೂವು ಸ್ವೀಕರಿಸುವುದಿಲ್ಲ.
ಹದುಳಿಗರಲ್ಲದವರು ಅಂದರೆ ನಂಬಿಕೆಗೆ ಯೋಗ್ಯರಲ್ಲದವರಿಂದ, ಗಂಧ ಮತ್ತು ಅಕ್ಷತೆ  ಸ್ವೀಕರಿಸುವುದಿಲ್ಲ.
ಅರಿವು ಕಣ್ದೆರೆಯದವರು ಅಂದರೆ ಸುಜ್ಞಾನ ಪ್ರಜ್ಞೆ ಹೊಂದದವರಿಂದ ಆರತಿ ದೀಪಗಳ ಜ್ಯೋತಿ ಸ್ವೀಕರಿಸುವುದಿಲ್ಲ. ಭಾವಶುದ್ಧವಿಲ್ಲದವರು ಅಂದರೆ  ಇತರರಿಗೆ ಕೇಡನ್ನು ಕೆಟ್ಟದ್ದನ್ನು ಬಯಸು ವವರಿಂದ ಸಾಂಬ್ರಾಣಿ ಧೂಪದ ಪರಿಮಳವನ್ನು  ಸ್ವೀಕರಿಸುವುದಿಲ್ಲ.
ಪರಿಣಾಮಿಗಳಲ್ಲದವರು, ಆವೇಶದ ನಡೆನುಡಿಗಳಿಂದ ಸಹಮಾನವರಿಗೆ ಮತ್ತು ಸಮಾಜಕ್ಕೆ ಹಾನಿಯನ್ನುಂಟು ಮಾಡುವವರಿಂದ  ನೈವೇದ್ಯವನ್ನು ಸ್ವೀಕರಿಸುವುದಿಲ್ಲ.
ತ್ರಿಕರಣ ಶುದ್ಧವಿಲ್ಲದವರು, ದೇಹ , ಮನಸ್ಸು, ಮಾತು ಶುದ್ಧವಿಲ್ಲದವರಿಂದ  ವೀಳೆಯ ಎಲೆಯ  ತಾಂಬೂಲವನ್ನು  ಸ್ವೀಕರಿಸುವುದಿಲ್ಲ. ಹೃದಯಕಮಲ ಅರಳದ ಸಂಕುಚಿತವಾದ ಮನಸ್ಸಿನವರಿಂದ ಇತರರ ಒಳಿತಿನ್ನು ಕಂಡು ಕರುಬುವವರ ಹೃದಯದಲ್ಲಿ  ನೆಲೆಸಲು ಬಯಸುವುದಿಲ್ಲ .
ನನ್ನಲ್ಲಿ, ನನ್ನ ನಡೆನುಡಿಗಳಲ್ಲಿ  ಯಾವ ಒಳ್ಳೆಯ ಗುಣವನ್ನು ಕಂಡು ನನಗೆ ಒಲಿದು, ನನ್ನ ಕರಸ್ಥಳದಲ್ಲಿ ಬಂದು ನೆಲೆಸಿರುವಿರಿ ಚೆನ್ನಮಲ್ಲಿಕಾರ್ಜುನಯ್ಯಾ“ ಎಂದು ಅಕ್ಕಮಹಾದೇವಿಯು ಭಾವಾನಂದದಿಂದ ತನ್ನ ಇಷ್ಟದೇವನನ್ನು ಕೇಳುತ್ತಾರೆ.
ಸದಾಚಾರದ ಪಾಲನೆ ಇಲ್ಲದೆ ಮಾಡುವ ಅಷ್ಟವಿಧ ಪೂಜೆಯಾದರೂ ಅದು ವ್ಯರ್ಥ.  ಪರಶಿವನಿಗೆ ಅದು ಅರ್ಪಿತವಾಗುವದಿಲ್ಲ.
ಪೂಜೆ, ಪುನಸ್ಕಾರಗಳಿಗಿಂತ ಶರಣರು ನೈತಿಕ ಜೀವನಕ್ಕೆ ಹೆಚ್ಚು ಮಹತ್ವ ಕೊಟ್ಟರು. ಹುಸಿ ಕಳವು ಕೋಪ ವಂಚನೆ ಕಪಟ ಮೊದಲಾದ ರ್ದುಗಣಗಳನ್ನು ತುಂಬಿಟ್ಟುಕೊಂಡು ಹೊರಗೆ ತೋರಿಕೆಗೆ ಮಾಡುವ ಲಿಂಗಭಕ್ತಿ, ಲಿಂಗಪೂಜೆ, ಅಷ್ಟವಿಧಾರ್ಚನೆ ವ್ಯರ್ಥವೆಂದು ಸಾರಿದರು ಶರಣರು. 
“ಅಟ್ಟವನೇರುವುದಕ್ಕೆ ನಿಚ್ಚಣಿಕೆಯೇ ಸೋಪಾನವಯ್ಯ, ಹರಪದವನೇರುವುದಕ್ಕೆ ಶ್ರೀಗುರು ಹೇಳಿದ ಸದಾಚಾರವೇ ಸೋಪಾನವಯ್ಯ.” ಎಂದು ಹೇಳುತ್ತಾರೆ ಶರಣರು. 

*ಅರಿಷಡ್ವರ್ಗಗಳನ್ನು ಜಯಿಸಬೇಕು*
#ಕಾಮವೇಕೊ, ಲಿಂಗಪ್ರೇಮಿಯೆನಿಸುವಂಗೆ
ಕ್ರೋಧವೇಕೊ, ಶರಣವೇದ್ಯನೆನಿಸುವಂಗೆ
ಲೋಭವೇಕೊ, ಭಕ್ತಿಯ ಲಾಭವ ಬಯಸುವಂಗೆ
ಮೋಹವೇಕೊ ಪ್ರಸಾದವೇದ್ಯನೆನಿಸುವಂಗೆ
ಮದಮತ್ಸರವುಳ್ಳವಂಗೆ ಹೃದಯಶುದ್ಧವೆಲ್ಲಿಯದೊ, ಹದುಳಿಗರಾದಲ್ಲಿಪ್ಪ ಕೂಡಲಸಂಗಮದೇವ. / 510
ಇಂತೀ ಗುಣವಂತರಲ್ಲದೆ ಸಹಜ ಸದ್ಭಕ್ತಿ ನೆಲೆ ಗೊಳ್ಳದಯ್ಯಾ” ಎನ್ನುತ್ತಾರೆ ಶರಣರು.  ಸದಾಚಾರಿಯಲ್ಲದೆ ಭವಿಗೆ ಲಿಂಗದೀಕ್ಷೆಯ ಕೊಟ್ಟರೆ ಕುಂಬಳಕಾಯಿಗೆ ಕಟ್ಟಿ ಕೊಟ್ಟಂತೆ, ಸಗಣಿಯ ಬೇನಕಂಗೆ ಸಂಪಿಗೆಯರಳಲ್ಲಿ ಪೂಜಿಸಿದಂತೆ, ಹೊಟ್ಟೆಯ ಮೇಲೆ ಕಟ್ಟೋಗರದ ಮೊಟ್ಟೆಯ ಕಟ್ಟಿದಂತೆ ಎಂಬುದು ಶರಣರ ಅಭಿಪ್ರಾಯ.

*ದಯೆಯೇ ಧರ್ಮದ ಮೂಲವಯ್ಯ* ಎಲ್ಲ ಸಾಧನೆಗೂ ಮೂಲಭೂತವಾದದ್ದು, ದಯೆ.
#ದಯವಿಲ್ಲದ ಧರ್ಮವದೇವುದಯ್ಯಾ
ದಯವೇ ಬೇಕು ಸರ್ವಪ್ರಾಣಿಗಳೆಲ್ಲರಲ್ಲಿ.
ದಯವೇ ಧರ್ಮದ ಮೂಲವಯ್ಯಾ,
ಕೂಡಲಸಂಗಯ್ಯನಂತಲ್ಲದೊಲ್ಲನಯ್ಯಾ. / 726
ಎಂದು ಬಸವಣ್ಣನವರು ಇದನ್ನು ಬಹಳ ಸುಂದರವಾಗಿ ಪ್ರತಿಪಾದಿಸಿದ್ದಾರೆ. 
*ಅಹಿಂಸೆ*
'ಸರ್ವ ಜೀವ ದಯಾಪಾರಿ' ಯಾದವನು ಯಾವ ಜೀವಿಯನ್ನೂ ಹಿಂಸಿಸಲಾರ. 
ಅಪಾರವಾದ ಅನುಕಂಪದಿಂದ ತನ್ನಂತೆ ಎಲ್ಲ ಪ್ರಾಣಿಗಳನ್ನೂ ಕಾಣುತ್ತಾನೆ. 
ಹಿಂಸೆಯನ್ನು ಯಾವುದೇ ಕಾರಣಕ್ಕಾಗಲೀ ಶರಣರು ಒಪ್ಪಲಿಲ್ಲ.
#ನಾನೊಂದು ಸುರಗಿಯನೇನೆಂದು ಹಿಡಿವೆನು? ಏನ ಕಿತ್ತೇನನಿರಿವೆನು?
ಜಗವೆಲ್ಲಾ ನೀನಾಗಿಪ್ಪೆ ಕಾಣಾ! ರಾಮನಾಥ./ 103
 ಎನ್ನುತ್ತಾರೆ ಜೇಡರ ದಾಸಿಮಯ್ಯ ಶರಣರು.
ಜಗವೆಲ್ಲಾ ಪರಮಾತ್ಮನೇ ಆಗಿರುವಾಗ ಯಾವ ಪ್ರಾಣಿಯನ್ನು, ಯಾರನ್ನು ಹಿಂಸಿಸಿದರೂ ಅದು ಆತ್ಮಹಿಂಸೆಯೇ ಆಗುತ್ತದೆ. 

ಧರ್ಮದ ಹೆಸರಿನಲ್ಲಿ ಯಜ್ಞಯಾಗಾದಿಗಳಲ್ಲಿ ಮತ್ತು ಉಗ್ರದೇವತೆಗೆ ಬಲಿಗಳ ರೂಪದಲ್ಲಿ ನಡೆಯುತ್ತಿದ್ದ ಹಿಂಸೆಯನ್ನೂ ಶರಣರು ಕಟುವಾಗಿ ಖಂಡಿಸಿದರು. ಸಾತ್ವಿಕ ಪೂಜೆಯನ್ನು ಸಾತ್ವಿಕ ಆಹಾರವನ್ನು ತಮ್ಮ ಧರ್ಮದ ಅಂಗವನ್ನಾಗಿ ಮಾಡಿಕೊಂಡರು. ಯಜ್ಞಯಾಗಾದಿಗಳಲ್ಲಿ ನಡೆಯುತ್ತಿದ್ದ ಹಿಂಸೆಯನ್ನು ಖಂಡಿಸಿದರು.

#ಮಾತಿನ ಮಾತಿಂಗೆ ನಿನ್ನ ಕೊಂದಹರೆಂದು
ಎಲೆ ಹೋತೇ ಅಳು, ಕಂಡಾ !
ವೇದವನೋದಿದವರ ಮುಂದೆ ಅಳು, ಕಂಡಾ !
ಶಾಸ್ತ್ರ ಕೇಳಿದವರ ಮುಂದೆ ಅಳು, ಕಂಡಾ !
ನೀನತ್ತುದಕ್ಕೆ ತಕ್ಕುದ ಮಾಡುವ ಕೂಡಲಸಂಗಮದೇವ. / 1048
ಎಂದು ವಿಡಂಬಿಸುತ್ತಾರೆ. ಆ ವಿಡಂಬನೆಗಿಂತ ಅದರ ಹಿಂದಿರುವ ಪ್ರಾಣಿ ದಯೆ ಮುಖ್ಯವಾದದ್ದು. ಯಜ್ಞಕ್ಕೆ ತಂದ ಹರಕೆಯ ಕುರಿಯನ್ನು ಕಂಡು ಅವರು ಮರುಗುತ್ತಾರೆ. 
ಈ ಅಹಿಂಸೆಯ ಮಿತಿಯನ್ನು ಶರಣರು ಕಂಡುಕೊಂಡರು. “ಅಹಿಂಸಾ ಪರಮೋ ಧರ್ಮ” ಎಂಬ ಮಾತನ್ನು ಜೈನಧರ್ಮದಷ್ಟು ಅತಿರೇಕಕ್ಕೆ ಎಳೆಯದೆ ವ್ಯಾವಹಾರಿಕ ಮಟ್ಟದಲ್ಲಿ ಅದನ್ನು ಅನುವರಿತು ಅಳವಡಿಸಿಕೊಂಡರು. ಒಂದಲ್ಲ ಒಂದು ಬಗೆಯ ಹಿಂಸೆಯಿಲ್ಲದೆ ಜೀವನ ನಿರ್ವಹಣೆಯೇ ಅಸಾಧ್ಯವೆಂಬುದನ್ನು ಸಹ ಅವರು ಬಲ್ಲವರು.

#ಮರ ಗಿಡು ಬಳ್ಳಿ ಧಾನ್ಯಂಗಳ ಬೆಳಸೆಲ್ಲವ ತರಿತರಿದು
ಪ್ರಾಣವ ಕೊಂದುಂಡು, ಶರೀರವ ಹೊರೆವ ದೋಷಕ್ಕೆ
ಇನ್ನಾವುದು ವಿಧಿಯಯ್ಯಾ
ಒಂದಿಂದ್ರಿಯ ಮೊದಲಾಗಿ ಐದಿಂದ್ರಿಯ ಕಡೆಯಾದ
ಜೀವಜಾಲದಲ್ಲಿದೆ ಚರಾಚರವೆಲ್ಲ.
ಅದು ಕಾರಣ,
ಕೂಡಲಸಂಗನ ಶರಣರು ಲಿಂಗಕ್ಕರ್ಪಿಸಿ ಪ್ರಸಾದವ ಕೊಂಡು
ನಿರ್ದೋಷಿಗಳಾಗಿ ಬದುಕಿದರು. / 1020

ಮರ ಗಿಡ ಬಳ್ಳಿ ಧಾನ್ಯಗಳೆಲ್ಲವೂ ಜೀವಿಗಳೇ. ಅವುಗಳನ್ನು ಹಿಂಸಿಸದೆ  ಬದುಕು ನಡೆಯಲಾರದು. ಜೀವನ ನಿರ್ವಹಣೆಗೆ ಅನಿವಾರ್ಯವಾದ ಮಟ್ಟಿಗೆ ಪ್ರಕೃತಿಯೊಡನೆ ಹೊಂದಿಕೊಳ್ಳಬೇಕಾಗುತ್ತದೆ.  ನಾನು ಎಂಬ ಅಹಂಕಾರವನ್ನು ಬಿಟ್ಟು ಎಲ್ಲವನ್ನೂ ಲಿಂಗಕ್ಕರ್ಪಿಸಿ ಪ್ರಸಾದರೂಪದಲ್ಲಿ ಕಂಡು ನಿರ್ದೋಷಿಗಳಾಗಿ ಬದುಕಬೇಕೆನ್ನುತ್ತಾರೆ ಶರಣರು.

 ಅಹಿಂಸೆ' ಎಂಬುದು ಪ್ರಾಣಿಗಳನ್ನು ಕೊಲ್ಲದಿರುವಿಕೆ ಎಂಬರ್ಥಕ್ಕೆ ಮಾತ್ರ ಸೀಮಿತವಾದದ್ದಲ್ಲ.
 “ಒಬ್ಬರ ಮನವ ನೋಯಸಿ ಒಬ್ಬರ ಮನೆಯ ಘಾತವ ಮಾಡಿ ಗಂಗೆಯಲ್ಲಿ ಮುಳುಗಿದರೆ ಆಗುವದೇನಯ್ಯ?” ಎಂದು ಹೇಳುವಂತೆ ಒಬ್ಬರ ಮನಸ್ಸನ್ನು ನೋಯಿಸುವುದೂ ಹಿಂಸೆಯೇ ಎಂದು ದಯೆ, ಕರುಣೆಯ, ಕ್ಷಮೆಯ ಮೌಲ್ಯವನ್ನು ತಿಳಿಸಿದರು. 
*ನುಡಿದಂತೆ ನಡೆ*. 
ನಡೆನುಡಿ ಒಂದಾಗಬೇಕು. ನಡೆಯೊಳಗೆ ನುಡಿ ತುಂಬಿ, ನುಡಿಯೊಳಗೆ ನಡೆ ತುಂಬಿ, ನಡೆ ನುಡಿ ಎರಡನ್ನು ಪರಿಪೂರ್ಣ ತುಂಬಿ ಲಿಂಗವ ಕೂಡಬಲ್ಲಾತ ಮಾತ್ರ ಶರಣನಾಗುತ್ತಾನೆ.
"ನುಡಿಯಲ್ಲಿ ಎಚ್ಚೆತ್ತು ನಡೆಯಲ್ಲಿ ತಪ್ಪಿದರೆ ಹಿಡಿದಿರ್ದ ಲಿಂಗವು ಘಟಸರ್ಪನಂತೆ !"
ಎಂದು ಅನ್ನುತ್ತಾರೆ ಚೆನ್ನಬಸವಣ್ಣನವರು. 

*ಸತ್ಯನಿಷ್ಠೆ* 
ಸತ್ಯವೇ ಶಿವನ ಆವಾಸಸ್ಥಾನ.
 “ಸತ್ಯದ ಮನೆಯಲ್ಲಿ ಶಿವನಿರ್ಪನಲ್ಲದೆ, ಅಸತ್ಯದ ಮನೆಯಲ್ಲಿ ಶಿವನಿರ್ಪನೇ?” ಎಂದು ಕೇಳುತ್ತಾರೆ ಶರಣರು. 
#ಸತ್ಯವಿಲ್ಲದವರೊಡನೆ ಸಹಸ್ರಕ್ಕೊಮ್ಮೆ ನುಡಿಯಲಾಗದು,
ಲಕ್ಷಕ್ಕೊಮ್ಮೆ ನುಡಿಯಲಾಗದು, ಕೋಟಿಗೊಮ್ಮೆ ನುಡಿಯಲಾಗದು.
ಸುಡಲಿ-ಅವಂದಿರ ಕೂಡೆ ಮಾರಿ ಹೋರಲಿ.
ಗುಹೇಶ್ವರಾ ನಿಮ್ಮ ಶರಣರಲ್ಲದವರೊಡನೆ,
ಬಾಯಿದೆರೆಯಲಾಗದು. / 1498
ಎಂದು ಸತ್ಯವಿಲ್ಲದವರೊಡನೆ ಮಾತನ್ನೇ ಆಡಬಾರದು ಎನ್ನುತ್ತಾರೆ ಅಲ್ಲಮಪ್ರಭುಗಳು.
ಜೀವನದ ಎಲ್ಲ ಕ್ರಿಯೆಗಳೂ ಸತ್ಯದಿಂದ ನಿಯಂತ್ರಿತವಾಗಬೇಕು. ನಡೆ ನುಡಿಗಳೆರಡರಲ್ಲೂ ಸತ್ಯವೇ ಅಳವಡಬೇಕು. 

 *ಸತ್ಯ ಶುದ್ಧ ಕಾಯಕ*
ಶುದ್ಧ ಕಾಯಕದಿಂದ ಬಂದ ಕಾರೆ ಸೊಪ್ಪಾದರೂ ಸರಿ, ಅದು ಶಿವನಿಗೆ ಅರ್ಪಿತವಾಗುತ್ತದೆ ಎನ್ನುತ್ತಾರೆ ಶರಣರು.
 *ಭಾವಶುದ್ಧಿ*
#ನಡೆಶುದ್ಧಿ, ನುಡಿಶುದ್ಧಿ, ತನುಶುದ್ಧಿ, ಮನಶುದ್ಧಿ , ಭಾವಶುದ್ಧಿ - ಇಂತೀ ಪಂಚತೀರ‌್ಥವನ್ನೊಳಗೊಂಡ ಮರ‌್ತ್ಯದಲ್ಲಿ, ನಿಮ್ಮ ಸಿಂಹ ಶರಣರ ಸಂಗವಿತ್ತು ಎನ್ನನುಳುಹಿಕೊಳ್ಳಾ ಚೆನ್ನಮಲ್ಲಿಕಾರ‌್ಜುನಾ .

ನಡೆಶುದ್ಧಿ, ನುಡಿಶುದ್ಧಿ, ತನುಶುದ್ಧಿ, ಮನಶುದ್ಧಿ , ಭಾವಶುದ್ಧಿ ಈ ಪಂಚ ತೀರ್ಥಗಳನ್ನು ಶರಣರು ಒಳಗೊಂಡಿದ್ದರು ಎಂದು ಅಕ್ಕಮಹಾದೇವಿ ಯವರು ಶರಣರ ಲಕ್ಷಣ ತಿಳಿಸುತ್ತಾರೆ.

*ತ್ರಿಕರಣ ಶುದ್ಧಿ*
ದೇಹ, ಮನಸ್ಸು, ಮಾತಿನ ಶುದ್ಧಿ ಇವುಗಳಿಂದ ಪರಶಿವನನ್ನು ಪೂಜಿಸಿದರೆ ಮಾತ್ರ ಅವನ ಒಲುಮೆ ಕೃಪೆ ಸಾಧ್ಯ.

ಸದಾಚಾರ ಇದರಲ್ಲಿ ಎಂಟು ವಿಭಾಗಗಳನ್ನು ಮಾಡಲಾಗಿದೆ. 
ಉತ್ಪನ್ನಶೀಲ, ಆಚಾರ ಶೀಲ, ಉದ್ಯೋಗ ಶೀಲ, ಉತ್ಕುಲ ಶೀಲ, ಸಂಬಂಧ ಶೀಲ, ಪ್ರಸನ್ನಶೀಲ, ಉತ್ತಮಶೀಲ, ಜ್ಞಾನಶೀಲ,  ಆ ಎಂಟು ಬಗೆಗಳು.
ಉತ್ಪನ್ನಶೀಲ:
ದೀಕ್ಷೆಯನ್ನು ಪಡೆದನಂತರ ಲಿಂಗಪೂಜೆ ಧ್ಯಾನಾದಿಗಳಿಂದ ಲಿಂಗಗುಣಗಳನ್ನು ಅಳವಡಿಸಿಕೊಳ್ಳುವ ಪ್ರಯತ್ನವನ್ನು ಉತ್ಪನ್ನಶೀಲವೆಂದು ಕರೆಯಲಾಗಿದೆ. ಆಚಾರಶೀಲ:
ತಾನೊಬ್ಬನು ಮಾತ್ರವಲ್ಲದೆ ಇತರರನ್ನೂ ಅದರಲ್ಲಿ ತೊಡಗಿಸಲು ನೇರವಾಗುವುದು ಆಚಾರಶೀಲ. 
ಉದ್ಯೋಗಶೀಲ:
ಸದಾಚಾರದಲ್ಲಿ ಬಹಳ ಮಹತ್ವದ ಕಲ್ಪನೆ. ಪರಾವಲಂಬಿಯಾಗದೆ ಯಾವುದಾದರೊಂದು ಉದ್ಯೋಗವನ್ನು ಕೈಕೊಂಡು, ಸತ್ಯಶುದ್ಧವಾದ ಕಾಯಕದ ಮಾರ್ಗದಲ್ಲಿ ನಡೆಯಬೇಕು. ಕಾಯಕವೇ ಕೈಲಾಸ' ಎಂಬ ಶರಣರ ನುಡಿ. ಎಲ್ಲ ಕಾಯಕಜೀವಿಗಳಿಗೆ ಗೌರವ ಕೊಟ್ಟು ಅದನ್ನು ಅವರು ಸಾಧಿಸಿ ತೋರಿಸಿದರು. ಇದು ಶರಣರು ಕೊಟ್ಟ ಅದ್ವಿತಿಯವಾದ ಕಾಣಿಕೆ.  
ಉತ್ಕಲಶೀಲ, ಸಂಬಂಧ ಶೀಲ, ಪ್ರಸನ್ನಶೀಲ, ತನಗೆ ಮಾತ್ರವಲ್ಲದೆ ತನ್ನ ಸುತ್ತಲ ಪರಿಸರಕ್ಕೂ ನೈತಿಕ ಪ್ರಭಾವದ ರಕ್ಷೆಯನ್ನು ನಿರ್ಮಿಸಬೇಕು.  ಸದಾಚಾರಗಳು ಭವಿಯನ್ನು ಭಕ್ತಸ್ಥಲಕ್ಕೆ ಅರ್ಹನನ್ನಾಗಿ ಮಾಡಿ ಅಲ್ಲಿಂದ ಮುನ್ನಡೆಯುವ ನಿಷ್ಠೆಯನ್ನೂ ದೃಷ್ಟಿಯನ್ನೂ ತಂದುಕೊಡುತ್ತವೆ.
- ✍️Dr Prema Pangi
#ಪ್ರೇಮಾ_ಪಾಂಗಿ, #ಪಂಚಾಚಾರ, #ಸದಾಚಾರ



Comments

Popular posts from this blog

Shika chakra or Bindu chakra:Bindu visarga

Hrit Chakra or Eight Petals Chakra

A-Ka-Ta triangle or Akshara Brahma