ಶರಣ ಪರಿಚಯ - ಅಂಬಿಗರ ಚೌಡಯ್ಯ
*ನಿಜಶರಣ ಅಂಬಿಗರ ಚೌಡಯ್ಯ* :
ಅಂಬಿಗರ ಚೌಡಯ್ಯನವರು ಹನ್ನೆರಡನೆಯ ಶತಮಾನದ ಒಬ್ಬ ವಚನಕಾರ ಶರಣ. ಇವರ ವಚನಗಳು ನೇರ ಮತ್ತು ಅತೀ ನಿಷ್ಠುರ. ಅಂಬಿಗರ ಚೌಡಯ್ಯನವರ ವಚನಗಳು ಬರೀ ವಚನಗಳಲ್ಲ. ಅವು ವಾಗ್ಬಾಣಗಳು.
ಕಾಲ: ೧೧೬೦
ಮೂಲ ಹೆಸರು : ಚೌಡೇಶ
ತಾಯಿ: ಪಂಪಾದೇವಿ
ತಂದೆ: ವಿರೂಪಾಕ್ಷ
ಕಾಲ: ೧೧೬೦ (೧೨ನೆ ಶತಮಾನ)
ಜನನ : ಚೌಡದಾನಪುರ ,ಚೌಡಯ್ಯನಾಪುರ.
ತಾಲೂಕ ರಾಣಿಬೆನ್ನೂರು
ಮರಣ: ರಾಣಿಬೆನ್ನೂರು
ವೃತ್ತಿ: ಅಂಬಿಗ
ಪ್ರವೃತ್ತಿಯಲ್ಲಿ ಅನುಭಾವಿ.
ಅಂಕಿತ ನಾಮ : ಅಂಬಿಗರ ಚೌಡಯ್ಯ.
ಇವರು ತಮ್ಮ ವಚನಗಳಲ್ಲಿ ಯಾವ ಇಷ್ಟದೈವಕ್ಕೆ ಋಣಿಯಾಗದೆ ತನ್ನ ಹೆಸರನ್ನೇ ವಚನಗಳ ಅಂಕಿತವಾಗಿಯೂ ಬಳಸಿಕೊಂಡು ದಿಟ್ಟತನದ ಎದೆಗಾರಿಕೆಯನ್ನು ತೋರಿಸಿದ್ದಾರೆ. ಹಾವೇರಿ ಜಿಲ್ಲೆಯ ರಾಣೆಬೆನ್ನೂರ ತಾಲೂಕಿನ ಶಿವಪುರದಲ್ಲಿ (ಇಂದಿನ ಚೌಡದಾನಪುರ) ಜನಿಸಿದ ಈ ಮಹಾಶಿವಶರಣರಿಗೆ ಉದ್ದಾಲಕರೆಂಬ ಗುರುಗಳು. ‘ಸತಿಪತಿಗಳೊಂದಾದ ಭಕ್ತಿ ಹಿತವಾಗಿಪ್ಪುದು ಶಿವಂಗೆ’ ಎಂಬ ವಚನಕ್ಕೆ ತಕ್ಕಂತೆ ಇರುವ ಧರ್ಮಪತ್ನಿ ಮತ್ತು ಪುರವಂತ ಎಂಬ ಪುತ್ರ. ಸದ್ಗುರುವಿನ ಕೃಪಾಕಟಾಕ್ಷದಿಂದ ಶ್ರೇಷ್ಠ ತತ್ವಜ್ಞಾನಿಯಾದ ಇವರು ವಚನಗಳನ್ನು ರಚಿಸಿ ಶಿವಶರಣರ ಪಂಕ್ತಿಯಲ್ಲಿ ಅಗ್ರಸ್ಥಾನಕ್ಕೇರಿದರು.
ಚೌಡದಾನಪುರದಲ್ಲಿ ಪೂರ್ವ ಪಶ್ಚಿಮವಾಹಿನಿಯಾಗಿ ಹರಿಯುತ್ತಿರುವ ತುಂಗಭದ್ರಾನದಿಯಲ್ಲಿ ದೋಣಿ ಮೂಲಕ ನದಿ ದಾಟಿಸುವ ಕಾಯಕ ಮಾಡುತ್ತ ವಚನಗಳನ್ನು ರಚಿಸಿದ್ದಾರೆ. ಗುರುವಿನ ಘನಕೃಪೆಗೆ ಪಾತ್ರರಾಗಿ ಅವರ ಮೂಲಕ ಲಿಂಗಾಂಗ ಸಾಮರಸ್ಯವನ್ನರಿತು ಅಪಾರ ಪಾಂಡಿತ್ಯವನ್ನು ಗಳಿಸಿದರು. ಕಲ್ಯಾಣದ ಕೀರ್ತಿಯನ್ನು ಕೇಳಿ ಅನುಭವ ಮಂಟಪಕ್ಕೆ ಬಂದ ಈ ಶರಣದಂಪತಿಯನ್ನು ಶರಣ ಪ್ರಮಥರೆಲ್ಲ ಆದರದಿಂದ ಬರಮಾಡಿಕೊಂಡರಂತೆ. ಬಸವಪ್ರಭುವನ್ನು ಕಂಡು ಆನಂದಪರವಶರಾಗಿ ಭಕ್ತಿಯಿಂದ ಕೈ ಮುಗಿದ ಚೌಡಯ್ಯನವರು;
#ಬಸವಣ್ಣನೇ ಭಕ್ತ, ಪ್ರಭುದೇವರೇ ಜಂಗಮರು
ಇಂತೆಂಬ ಭೇದವಿಲ್ಲಯ್ಯ, ಅರಿವೇ ಗುರು,
ಗುರುವೇ ಪರಶಿವನು ಇದು ತಿಳಿದವನೇ
ಪರಂಜ್ಯೋತಿಯೆಂದ ಅಂಬಿಗರ ಚೌಡಯ್ಯ’
ಎಂಬ ವಚನದ ಮೂಲಕ ಮನಸಾರೆ ಹೊಗಳಿದ್ದಾರೆ.
ಶಿವಶರಣರ ಸಂಗದಲ್ಲಿ ಕಾಲಕಳೆದು ಪರಿಪಕ್ವರಾದರು. ಇವರ ವಚನಗಳನ್ನು ಕಂಡ ಕವಿ ಕಾವ್ಯಾನಂದರು ‘ನಿಜದ ನಗಾರಿ ನಿರ್ಭಯತೆಯ ಭೇರಿ ಈ ಅಂಬಿಗರ ಚೌಡಯ್ಯ’ ಎಂದಿದ್ದಾರೆ. ಮುಪ್ಪಿನ ಷಡಕ್ಷರಿಯವರು ತಮ್ಮ ಸುಬೋಧ ಸಾಗರದಲ್ಲಿ ‘ಅಂಬಿಗರ ಚೌಡಯ್ಯನ ಮುಂಬಾಗಿಲನ್ನು ಕಾಯುವ ನಂಬಿಗೆಯ ಸೇವಕರು ಕುಂಭಿನಿಯೊಳಗಿನ್ನು ಸರಿಯದಾರು?’ ಎಂದು ಹಾಡಿ ಹರಸಿದ್ದಾರೆ. ಘನಲಿಂಗದೇವನು (1480) , ‘ಕುಂಬಾರ ಗುಂಡಯ್ಯ ತಮ್ಮ ಕೃತಿಗಳಲ್ಲಿ ಹಾಡಿ ಹೊಗಳಿದ್ದಾರೆ. ಮಹಾಕವಿ ಷಡಕ್ಷರಿಯವರು ತಮ್ಮ ‘ಬಸವರಾಜ ವಿಜಯ’ದಲ್ಲಿ ‘ನಿಡುಗುಡಿಮಾರನಂಬಿಗರ ಚೌಡಯ್ಯ’ ಎಂದು ಸ್ಮರಿಸಿದ್ದಾರೆ.
ಮಹಾಶಕ್ತಿಸಂಪನ್ನರಾದ ಅಂಬಿಗರ ಚೌಡಯ್ಯನವರ ಮಹಿಮೆಯಿಂದ ಸರ್ಪ ಕಚ್ಚಿ ಮೃತಪಟ್ಟ ಸೈನಿಕನು ಮರುಜೀವ ಪಡೆದ. ಕ್ಷಯ, ಕುಷ್ಠರೋಗಿಗಳು ಗುಣಮುಖರಾದರು. ಅವರು ನುಡಿದ ವಾಣಿಯಿಂದ ಭಕ್ತರ ಸಕಲ ಬೇಡಿಕೆಗಳು ಈಡೇರಿದವು. ಚೌಡಯ್ಯನವರ ಪಾರಮಾರ್ಥ ಸಾಧನೆಯನ್ನು ಕಂಡು ಮಾರುಹೋದ ಗುತ್ತಲ ಅರಸನು ಅವರಿಗೆ ದಾಸೋಹಕ್ಕೆಂದು ಶಿವಪುರಕ್ಕೆ ಹೊಂದಿಕೊಂಡಿರುವ ಭೂಮಿಯನ್ನು ಕಾಣಿಕೆಯಾಗಿ ನೀಡಿದನು. ತಮಗೆ ನೀಡಿದ ಈ ಭೂಮಿಯನ್ನು ಚೌಡಯ್ಯನವರು ತಮ್ಮ ಮಗ ಪುರವಂತ ಹಾಗೂ ಶಿವದೇವರಿಗೆ ದಾನವಾಗಿ ನೀಡಿದರು. ಅದೇ ಕಾರಣಕ್ಕಾಗಿ ಶಿವಪುರಕ್ಕೆ ‘ಚೌಡಯ್ಯ ದಾನಪುರ’ ಎಂಬ ಹೆಸರು ಬಂದಿತೆಂದು ಹೇಳಲಾಗುತ್ತಿದ್ದು, ಅದೇ ಇಂದು ಚೌಡದಾನಪುರವಾಗಿದೆ.
ಸ್ಥಿತಪ್ರಜ್ಞರಾದ ಅವರು ಕೊನೆಯಲ್ಲಿ ಚೌಡದಾನಪುರದ ನದಿಯ ದಡದಲ್ಲಿ ಸಮಾಧಿಸ್ಥರಾದರೆಂದು ತಿಳಿದುಬರುತ್ತದೆ. ಆದ್ದರಿಂದ ಈ ನದಿದಡದಲ್ಲಿರುವ ದಿಬ್ಬದ ಮೇಲಿರುವ ಸಮಾಧಿಯನ್ನು ‘ಅಂಬಿಗರ ಚೌಡಯ್ಯನವರ ಸಮಾಧಿ’ ಎಂದು ಗುರುತಿಸಲಾಗಿದೆ
ಅಂಬಿಗ ಎಂದರೆ ನೀರಿನಲ್ಲಿ ವ್ಯವಹರಿಸುವವನು, ತಾನೆ ದೋಣಿ ಮುಂತಾದವನನ್ನು ನಡೆಸುವವನು ಎಂದರ್ಥ. ಸಂಸಾರ ಸಾಗರವನ್ನು ದಾಟಿ ಮೋಕ್ಷ ಸಾಗರದಲ್ಲಿ ತನ್ನ ದೋಣಿಯನ್ನು ನಡೆಸಿದ ಇವರ ಸುಮಾರು 279 ವಚನಗಳು ದೊರಕಿವೆ. ಮುಚ್ಚು ಮರೆಯಿಲ್ಲದೆ ತೆರೆದ ಮನಸ್ಸಿನ ಇತಿಮಾತಿನ ತಿರುಳು ಅವರ ವಚನಗಳಲ್ಲಿ ಕಾಣ ಸಿಗುತ್ತದೆ.
ಕಸುಬಿನ ಅನುಭವಗಳನ್ನೇ ತನ್ನ ವಚನಗಳಲ್ಲಿ ರೂಪಕ, ನಿದರ್ಶನಗಳನ್ನಾಗಿ ಬಳಸಿಕೊಂಡಿದ್ದಾನೆ. ಧಾರ್ಮಿಕ ಜಿಜ್ಞಾಸೆ, ಜ್ಞಾನದ ಸ್ವರೂಪದಂಥ ತಾತ್ವಿಕ ಚಿಂತನೆಗಳೊಡನೆ ತೀವ್ರವಾದ ಭಾಷೆಯಲ್ಲಿ ಡಾಂಬಿಕತೆ, ಜಾತೀಯತೆಗಳನ್ನು ಟೀಕಿಸುತ್ತಾನೆ. ವಚನಕಾರರರೆಲ್ಲರಲ್ಲಿ ಇದ್ದ ಸುಶಿಕ್ಷತವಾದ ಅಭಿವ್ಯಕ್ತಿ ಮಾರ್ಗವನ್ನು ತುಳಿಯಲಿಲ್ಲ. ತನ್ನ ಹತಾಶೆ, ನೋವು, ಬೇಗುದಿ ಎಲ್ಲವನ್ನೂ ಆತ ತನ್ನದೇ ತೀಕ್ಷ್ಣಪದಗಳ ಆಡುನುಡಿಯ ಮೂಲಕ ನಿರ್ಭಿಡೆಯಿಂದ ಸಮಾಜದಲ್ಲಿದ್ದ ಡಾಂಭಿಕರನ್ನು ಬೆತ್ತಲಾಗಿಸುತ್ತಾ ಹೋದರು. " ನಿಜದ ನಗಾರಿ ನಿರ್ಭಯತೆಯನ್ನು ಬೀರಿದವನು ಅಂಬಿಗರ ಚೌಡಯ್ಯ" ಎಂದು ಶರಣರು ಹೊಗಳಿದ್ದಾರೆ. ಅಂಬಿಗರ ಚೌಡಯ್ಯನ ವಚನಗಳು ಚಾಟಿಯೇಟನ್ನು ಕೊಟ್ಟು ಹೊಡೆದೆಬ್ಬಿಸುವ ಚುಚ್ಚು ಮಾತಿನ ಅನುಭವದ ನುಡಿಗಳು. ನುಡಿದಂತೆ ನಡೆದು, ನಡೆದಂತೆ ನುಡಿದ ಧೀರ ಶರಣ. ಸಮಾಜ ವಿಮರ್ಶೆ,ಮೂಡ ನಂಬಿಕೆ ಗಳನ್ನು ಬೆರಳು ಮಾಡಿ ತೋರಿಸಿದ್ದಾರೆ. ತಾನು ಪರಿಶುದ್ಧನಾಗಿ ಸಿದ್ಧ ಶುದ್ಧ ಬಾಳನ್ನು ಬಾಳಿ ಬೆಳಗಿಸಿ ಕೊಂಡವರು.
ಇವರ ವಚನಗಳು ಅಧರಕ್ಕೆ ಕಹಿಯಾದರೂ ಉದರಕ್ಕೆ ಸಿಹಿ, ಸಮಾಜಕ್ಕಂಟಿರುವ ಭವ ರೋಗವನ್ನು ನಿರ್ಮೂಲನೆ ಮಾಡುವ ವಚನಗಳನ್ನು ಅರುಹಿದ ಮಹಾಶರಣ ಮಹಾನುಭಾವಿ.
ಅಂಬಿಗರ ಚೌಡಯ್ಯ ನಿಜವಾಗಿಯೂ ವಚನಕಾರರಲ್ಲಿ ಒಬ್ಬ ಕ್ರಾಂತಿ ಪುರುಷ.
ಕಾಯಕದಲ್ಲಿ ದುಡಿದು ಉಂಡು
ಪರಿಶುದ್ಧವಾಗಿ ಸಿದ್ಧ ಶುದ್ಧ ಬಾಳನ್ನು ಬಾಳಿ ಬೆಳಗಿಸಿಕೊಂಡವನು ಚೌಡಯ್ಯ.
ಕಲ್ಯಾಣದಲ್ಲಿ ಕ್ರಾಂತಿ ಸಂಭವಿಸಿದ ಬಳಿಕವೂ ಬಹುಕಾಲ ಜೀವಿಸಿದ್ದ ಚೌಡಯ್ಯ ಆಗಿನ ಬೆಳವಣಿಗೆಗಳನ್ನು ಅವರು ವಚನಗಳಲ್ಲಿಯೂ ಚಿತ್ರಿಸಿದ್ದಾರೆ. ಚೌಡಯ್ಯದಾನಪುರದ ಗ್ರಾಮದ ಪಕ್ಕದಲ್ಲಿಯೇ ವಿಶಾಲವಾಗಿ ಹರಿಯುವ ತುಂಗಭದ್ರೆಯ ತಟದಲ್ಲಿ ಚೌಡಯ್ಯ ಲಿಂಗೈಕ್ಯನಾದ ಸ್ಥಳ ಇದೆ.
ಈ ಚೌಡಯ್ಯದಾನಪುರದ ಜಾಗವನ್ನು ಅಂಬಿಗರ ಚೌಡಯ್ಯ ತನ್ನ ಗುರುವಾದ ಶಿವದೇವಮುನಿಗಳಿಗೆ ದಾನವಾಗಿ ಕೊಟ್ಟಿರುವ ಬಗ್ಗೆ ಶಿಶುನಾಳ ಷರೀಫರು ರಚಿಸಿದ ‘ಶಿವದೇವ ವಿಜಯಂ’ ಎಂಬ ಪುಸ್ತಕದಲ್ಲಿ ಉಲ್ಲೇಖವಿದೆ.
ವೀರಶೈವ ಸಮುದಾಯದ ಶಿವದೇವಮುನಿಗಳು ಆತನಿಗೆ ಲಿಂಗದೀಕ್ಷೆ ನೀಡಿದರೆಂಬ ಕಾರಣಕ್ಕೆ, ಶ್ರೀ ಶಿವದೇವ ಒಡೆಯರ ಎಂಬ ವಕೀಲರು ಚೌಡಯ್ಯ ಲಿಂಗೈಕ್ಯನಾದ ಸ್ಥಳದಲ್ಲಿ ಗದ್ದುಗೆಯ ಜೀರ್ಣೋದ್ಧಾರ ಮಾಡಿ ೧೯೬೮ರಷ್ಟು ಹಿಂದೆಯೇ ಪುಟ್ಟದಾದ ಐಕ್ಯ ಮಂಟಪವನ್ನು ನಿರ್ಮಿಸಿದ್ದಾರೆ. ಪ್ರತಿವರ್ಷ ಅಂಬಿಗರ ಚೌಡಯ್ಯನವರ ಜಯಂತಿಯ ನಿಮಿತ್ಯ ಸಂಕ್ರಮಣದ ಪರ್ವ ಕಾಲದಲ್ಲಿ ಬಹು ಸಡಗರ ಸಂಭ್ರಮದಿಂದ ಇಲ್ಲಿ ಜಾತ್ರಾಮಹೋತ್ಸವವು ಜರಗುತ್ತಲಿದೆ.
ಅವರ ಕುರಿತು ಅಧ್ಯಯನ ಮಾಡಲು 2012ರ ಜನವರಿಯಲ್ಲಿ ಮಂಗಳೂರು ಮತ್ತು ಕಲಬುರ್ಗಿ ವಿಶ್ವವಿದ್ಯಾಲಯ ಗಳಲ್ಲಿ ‘ಅಂಬಿಗರ ಚೌಡಯ್ಯ ಅಧ್ಯಯನ ಪೀಠ’ ಪ್ರಾರಂಭವಾಗಿದೆ. ಕಳೆದ ಕೆಲವು ವರ್ಷಗಳಿಂದ ಕರ್ನಾಟಕ ಸರ್ಕಾರವು ಜನೆವರಿ 21ರಂದು ಚೌಡಯ್ಯನವರ ಜಯಂತಿಯನ್ನು ಆಚರಿಸುತ್ತ ಬಂದಿದೆ.
ಬಸವಣ್ಣನವರ ಗರಡಿಯಲ್ಲಿ ಪಳಗಿದ ಇವರ ಅನುಭವವು ಅಮೃತಧಾರೆಯಾಗಿ ವಚನಗಳ ರೂಪದಲ್ಲಿ ಹರಿದುಬಂದಿವೆ.
ಕಸಬಿನ ರೂಪಕ ಉಪಯೋಗಿಸುತ್ತಾ ಮೋಕ್ಷ ಸಾಗರ ದಾಟಿಸುವ ಅಂಬಿಗ ತಾನು ಎನ್ನುತ್ತಾನೆ.
#ಅಂಬಿಗನು ಜಗದೊಳಗೆ ಇಂಬಿಲೋಲಾಡುವನು;
ತುಂಬಿದ ಸಾಗರದೊಳಗೆ ನೋಡಯ್ಯ.
ನಿಂದ ದೋಣಿಯನೇರಿದಂದಿನ ಹುಟ್ಟ
ಕಂಡವರಂದವನರಿದಾತ ತೊಳಸುತ್ತಿದ್ದನು.
ಛಂದಗೆಟ್ಟವರೆಲ್ಲಾ ಬಂದೇರಿ ದೋಣಿಯನು
ಶಿವನೊಂದೆ ಠಾವಿಗೊಯ್ದಿಳುಹುವೆನೆಂದನಂಬಿಗ ಚೌಡಯ್ಯ./8
ಸಂಸಾರ ಸಾಗರವನ್ನು ದಾಟಿ ಮೋಕ್ಷ ಸಾಗರದಲ್ಲಿ ತನ್ನ ದೋಣಿಯನ್ನು ನಡೆಸಿದೆ. ಬಂದು ಏರಿರಿ. ದೋಣಿಯನ್ನು ಶಿವನಿದ್ದ ಠಾವಿನೊಳಗೆ ಓಯ್ಯುವವನು ಎಂದು ಎದೆತಟ್ಟಿ ಹೇಳಿಕೊಂಡು ತಾನು ತನ್ನ ದೋಣಿ ಮತ್ತು ದೋಣಿಯಲ್ಲಿದ್ದ ಭಕ್ತರನ್ನೆಲ್ಲಾ ಶಿವಪಥದತ್ತ ನಡಿಸಿದವನು.
ಇನ್ನೊಂದು ವಚನದಲ್ಲಿ
#ಅಂಬಿಗ ಅಂಬಿಗ ಎಂದು ಕುಂದ ನುಡಿಯದಿರು,
ನಂಬಿದರೆ ಒಂದೆ ಹುಟ್ಟಲಿ ಕಡೆಯ ಹಾಯಿಸುವನಂಬಿಗರ ಚೌಡಯ್ಯ./7
ಎಂದು ಹೇಳುತ್ತ
ಆವ ಕಾಯಕವಾದರೂ ಜ್ಯೇಷ್ಠತೆಗೆ ಅಡ್ಡಿ ಬರಲಾರದು ಎಂದು ತಮ್ಮ ಕಾಯಕದ ಶ್ರೇಷ್ಠತೆಯನ್ನು ಹೇಳುತ್ತಾರೆ ಚೌಡಯ್ಯನವರು. ನನ್ನನ್ನು ನಂಬಿ ನನ್ನ ಜೊತೆ ಏರ ಬನ್ನಿ ನನ್ನ ದೋಣಿಯನ್ನು. ಒಂದೇ ಹುಟ್ಟಿನಲ್ಲಿ ಭವವೆಂಬ ಸಾಗರವನ್ನು ದಾಟಿಸಿ ಬಿಡುವೆ ಎಂಬಲ್ಲಿ ಅವರ ಧಾರ್ಷ್ಟ್ಯತೆ, ಕಳಕಳಿ, ಗೋಚರವಾಗುತ್ತದೆ. ಆತ್ಮ ವಿಶ್ವಾಸದ ನುಡಿಗಳು ಇವರ ವಚನಗಳಲ್ಲಿ ಪ್ರಜ್ವಲಿಸಿವೆ. ಅದಕ್ಕೆಂದೇ ತಮ್ಮ ಹೆಸರನ್ನೇ ವಚನಾಂಕಿತವನ್ನಾಗಿ ಬಳಸಿದ್ದು ಇದಕ್ಕೆ ಸಾಕ್ಷಿಯಾಗಿದೆ. ಕೇವಲ ತುಂಬಿದ ಹೊಳೆಯಲ್ಲಿ ದೋಣಿಗೆ ಹುಟ್ಟುಹಾಕುವ ಅಂಬಿಗ ಮಾತ್ರವಲ್ಲ, ಭವಸಾಗರದಲ್ಲೂ ಹುಟ್ಟು ಹಾಕುವ ಕೌಶಲವುಳ್ಳವನು.
#ಬಡತನಕ್ಕೆ ಉಂಬುವ ಚಿಂತೆ.
ಉಣಲಾದರೆ, ಉಡುವ ಚಿಂತೆ.
ಉಡಲಾದರೆ, ಇಡುವ ಚಿಂತೆ.
ಇಡಲಾದರೆ, ಹೆಂಡಿರ ಚಿಂತೆ.
ಹೆಂಡಿರಾದರೆ, ಮಕ್ಕಳ ಚಿಂತೆ.
ಮಕ್ಕಳಾದರೆ, ಬದುಕಿನ ಚಿಂತೆ.
ಬದುಕಿದರೆ, ಕೇಡಿನ ಚಿಂತೆ.
ಕೆಡದಿರೆ, ಮರಣದ ಚಿಂತೆ.
ಇಂತಿ ಹಲವು ಚಿಂತೆಯಲಿಪ್ಪವರ ಕಂಡೆನು.
ಶಿವ ಚಿಂತೆಯಲ್ಲಿದ್ದವರೊಬ್ಬರನೂ ಕಾಣೆನು ಎಂದಾತ
ನಮ್ಮ ಅಂಬಿಗರ ಚೌಡಯ್ಯ.
ಅಂಬಿಗರ ಚೌಡಯ್ಯ ವಚನದಲ್ಲಿ ಎಲ್ಲ ಮನುಜರು ಲೌಕಿಕ ಚಿಂತೆಯಲ್ಲಿಯೇ ಮುಳುಗಿದ್ದಾರೆ. ಶಿವನ ಚಿಂತೆಯಿಂದಿರುವವರೊಬ್ಬರನು ಕಾಣೆ ಎಂಬ ಚಿರಸತ್ಯವನ್ನು ಪ್ರತಿಬಿಂಬಿಸುತ್ತದೆ.
ಈ ವಚನದಿಂದ ಯಾವ ಮನೆಯೂ ಚಿಂತೆಯಿಂದ ಬಿಡುಗಡೆ ಆಗಿಲ್ಲವೆಂಬ ಮಾತು ಮನದಟ್ಟಾಗುತ್ತದೆ.ಅಂಬಿಗರ ಚೌಡಯ್ಯ ನಿಜ ಶರಣನು.
ಅನುಗ್ರಹವ ಮಾಡಿದಡೇನಪ್ಪುದೆಲವೋ.
ಅಂಧಕನ ಕೈಯನಂಧಕ ಹಿಡಿದಡೆ
ಮುಂದನಾರು ಕಾಬರು ಹೇಳೆಲೆ ಮರುಳೇ?
ತೊರೆಯಲದ್ದವನನೀಸಲರಿಯದವ ತೆಗೆವ ತೆರನಂತೆಂದನಂಬಿಗ ಚೌಡಯ್ಯ/6/39
ಕುರುಡನ ಕೈಯನ್ನು ಹಿಡಿದು ಕುರುಡ ನಡೆಯಿಸಿಕೊಂಡಿದ್ದರೆ ಮುಂದಿರುವ ದಾರಿಯನ್ನು ತೋರಿಸುವವರು ಯಾರು? ಚೌಡಯ್ಯನವರು ಇದಕ್ಕೊಂದು ಸುಂದರ ಉಪಮೆ ಕೊಡುತ್ತ,ಅಂಧಕನ ಕೈಯನಂಧಕ ಹಿಡಿದಡೆ ಅಂದರೆ 'ಗುರುವೇ ಕತ್ತಲೆಯಲ್ಲಿದ್ದರೆ ಆತ ತನ್ನನ್ನೇ ನಂಬಿಕೊಂಡಿರುವ ಕುರುಡ ಶಿಷ್ಯರಿಗೆ ಅದು ಹೇಗೆ ಬೆಳಕನ್ನು ತೋರಿಸಬಲ್ಲ'? ಎಂದು ಕೇಳುತ್ತಾರೆ.
ಈಸಲರಿಯದವ ತೊರೆಯಲಿದ್ದವನನ್ನು, ಪ್ರವಾಹದಲ್ಲಿ ಸಿಲುಕಿದವನನ್ನು ಅದು ಹೇಗೆ ಕಾಪಾಡುತ್ತಾನೆ? 'ಈಸಲರಿಯದವ' ಅಂದರೆ ಈಜು ಬಾರದ ವ್ಯಕ್ತಿ ಅದು ಹೇಗೆ ಮುಳುಗುತ್ತಿರುವವನನ್ನು ರಕ್ಷಿಸಬಲ್ಲ?ಅಜ್ಞಾನಿಗುರು ಅಜ್ಞಾನಿ ಶಿಷ್ಯನಿಗೆ ಗುರುವಾಗಿ ಅನುಗ್ರಹಮಾಡಿದರೆ ಏನೂ ಪ್ರಯೋಜನ ವಿಲ್ಲ.ಅಷ್ಟಾವರಣದಲ್ಲಿ ಮೊದಲನೆಯದಾದ ಗುರು ಕುರಿತು ಮತ್ತು ಯೋಗ್ಯ ಗುರುಗಳಿಲ್ಲದೆ ಹೋದರೆ ಏನಾಗುತ್ತದೆ ಎಂಬುವುದರ ವಿಚಾರವಾಗಿ ಹೇಳಿದ್ದಾರೆ.
ಸದ್ಗುರುಗಳೇ ಶಿಷ್ಯರನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ.
#ತಡೆನೆಲೆಯಿಲ್ಲದ ಮಹಾನದಿಯಲ್ಲಿ
ಒಡಲಿಲ್ಲದಂಬಿಗ ಬಂದಿದ್ದೇನೆ
ಹಿಡಿವ ಬಿಡುವ ಮನವ ಬೆಲೆಗೊಟ್ಟೊಡೆ
ಕಡೆ ಹಾಯಿಸುವೆ ನೀ ಮಹಾಹೊಳೆಯ
ನುಡಿಯಿಲ್ಲದ ನಿಸ್ಸೀಮ ಗ್ರಾಮದಲ್ಲಿರಿಸುವನೆಂದಾತ
ಅಂಬಿಗರ ಚೌಡಯ್ಯ
ಈ ವಚನದಲ್ಲಿ ಕಾಣುವ ಅಂಬಿಗರ ಚೌಡಯ್ಯ, ತಾನು ಕೇವಲ ಲೌಕಿಕ ನೆಲೆಯಲ್ಲಿ ದೋಣಿ ನಡೆಯಿಸುವ ಅಂಬಿಗರ ಚೌಡಯ್ಯ ಅಲ್ಲ; ಇಲ್ಲಿ, ತಾನು ‘ಒಡಲಿಲ್ಲದ ಅಂಬಿಗ’; ದೋಣಿ ನಡೆಸುವುದು ‘ತಡೆನೆಲೆ ಇಲ್ಲದ ಮಹಾನದಿಯಲ್ಲಿ’; ಇಲ್ಲಿ ದಾಟಲು ಬಯಸುವವರು ಕೊಡಬೇಕಾದದ್ದು ‘ಹಿಡಿವ ಬಿಡುವ’ ಅಂದರೆ ಹೊಯ್ದಾಡುವಂಥ ತಮ್ಮ ಮನಸ್ಸನ್ನು; ಹಾಗೆ ಕೊಟ್ಟರೆ, ಈ ಮಹಾ ಹೊಳೆಯನ್ನೂ ಕಡೆ ಹಾಯಿಸಿ, ಅವರನ್ನು ‘ನುಡಿಯಿಲ್ಲದ ನಿಸ್ಸೀಮ ಗ್ರಾಮದಲ್ಲಿ’ ಇಳಿಸುತ್ತಾನಂತೆ.ಜನರನ್ನು ಈ ದಡದಿಂದ ಆ ದಡಕ್ಕೆ ಸಾಗಿಸುವ ಕ್ರಿಯೆ ಬೇರೊಂದು ಪಾರಮಾರ್ಥಿಕ ಅರ್ಥವಂತಿಕೆಯನ್ನು ಪಡೆದುಕೊಳ್ಳುತ್ತದೆ.
#ನನ್ನ ಕುಲ ಹೆಚ್ಚು, ನಿನ್ನ ಕುಲ ಕಡಿಮೆ
ಎಂದು ಹೊಡೆದಾಡುವಂತಹ ಅಣ್ಣಗಳನ್ನು
ಹಿಡಿತಂದು ಮೂಗನೆ ಸವರಿ ಮೆಣಸಿನ ಹಿಟ್ಟು
ತುಪ್ಪವ ತುಂಬಿ ನಮ್ಮ ಪಡಿಹಾರಿ ಉತ್ತಣ್ಣನ
ವಾಮ ಪಾದುಕೆಯಿಂದ ಫಡಫಡನೆ ಹೊಡೆಯಬೇಕೆಂದ
ನಮ್ಮ ಅಂಬಿಗರ ಚೌಡಯ್ಯ
ಅಂಬಿಗರ ಚೌಡಯ್ಯ ಬಂಡಾಯ ವಚನ ಸಂಸ್ಕೃತಿಯ ಹರಿಕಾರ.ಅಂಬಿಗರ ಚೌಡಯ್ಯನೂ ಸನಾತನ ಧರ್ಮದ ಓರೆಕೋರೆಗಳನ್ನು ಖಂಡಿಸಿದ್ದಷ್ಟೇ ಅಲ್ಲ, ಜಾತಿ ಪದ್ಧತಿಯನ್ನು ನಿರಾಕರಿಸಿದ.ವಚನಗಳು ತುಂಬಾ ಕಟುವಾಗಿ ನಿಷ್ಠುರವಾಗಿದ್ದು, ಇದು ಇವರ ಆತ್ಮಬಲವನ್ನು ಹಾಗೂ ಸತ್ಯವನ್ನು ಪ್ರತಿಪಾದಿಸುವಲ್ಲಿ ಅವರು ಹೊಂದಿದ್ದ ಧೈರ್ಯವನ್ನು ತೋರಿಸುತ್ತದೆ
#ಕಂತೆ ತೊಟ್ಟವ ಗುರುವಲ್ಲ
ಕಾವಿ ಹೊತ್ತವ ಜಂಗಮನಲ್ಲ
ಶೀಲ ಕಟ್ಟಿದವ ಶಿವಭಕ್ತನಲ್ಲ
ನೀರು ತೀರ್ಥವಲ್ಲ, ಕೂಳು ಪ್ರಸಾದವಲ್ಲ
ಹೌದೆಂಬವನ ಬಾಯಿ ಮೇಲೆ
ಅರ್ಧ ಮಣೆಯ ಪಾದರಕ್ಷೆಯ ತೆಗೆದುಕೊಂಡು
ಮಾಸಿ ಕಡಿಮೆಯಿಲ್ಲದೆ ತೂಗಿ ತೂಗಿ ಟೊಕಟಕನೆ
ಹೊಡಿ ಎಂದಾತ ನಮ್ಮ ಅಂಬಿಗರ ಚೌಡಯ್ಯ
ಮಾತು ಕಟುವಾದರೂ ದಿಟವನ್ನೆ ನುಡಿದ ದಿಟ್ಟನೀತ. ನುಡಿದಂತೆ ನಡೆದವನು, ನಡೆದಂತೆ ನುಡಿದವನು.
#ಓಡುವಾತ ಲೆಂಕನಲ್ಲ ಬೇಡುವಾತ ಭಕ್ತನಲ್ಲ
ಓಡಲಾಗದು ಲೆಂಕನು, ಬೇಡಲಾಗದು ಭಕ್ತನು
ಓಡೆನಯ್ಯ, ಬೇಡೆನಯ್ಯ ಎಂದ ಅಂಬಿಗರ ಚೌಡಯ್ಯ’
ಎಂದು ಭಕ್ತ ಹೇಗೆ ಇರಬೇಕು ಎಂದು ಸಾರಿದ್ದಾರೆ.
ಭಕ್ತ ಏನನ್ನೂ ಬೇಡದೆ ಕಾಯಕಯೋಗಿ ಯಾಗಿ ಜೀವನ ನಿರ್ವಹಣೆ ಮಾಡಬೇಕು.
‘#ಅಸುರ ಮಾಲೆಗಳಿಲ್ಲ, ತ್ರಿಶೂಲ ಡಮರುಗವಿಲ್ಲ , ಬ್ರಹ್ಮಕಪಾಲವಿಲ್ಲ ಭಸ್ಮಭೂಷಣನಲ್ಲ,ವೃಷಭ ವಾಹನನಲ್ಲ, ಋಷಿಯ ಮಗಳೊಡನಿರ್ದಾತನಲ್ಲ
ಎಸಗುವ ಸಂಸಾರದ ಕುರುಹಿಲ್ಲದಾತಂಗೆ
ಹೆಸರಾವುದೆಂದಾತ ಅಂಬಿಗರ ಚೌಡಯ್ಯ’
ಶಿವನ ಸಾಕಾರ ರೂಪ ಪುರಾಣದ ಕಥೆಗಳನ್ನು ಅಲ್ಲಗಳೆದು ಸಂಸಾರದ ಕುರುಹು, ನಾಮ ವಿಲ್ಲದ ಪರಮಾತ್ಮನ ನಿಜಸ್ವರೂಪವನ್ನು
ನಿರೂಪಿಸಿದ್ದಾರೆ.
ಅಂಬಿಗರ ಚೌಡಯ್ಯ ವಿಚಾರವಂತ, ಹಿರಿಯರು ಹೇಳಿದ್ದಾರೆಂದು ಯಾವುದೇ ತತ್ವವನ್ನು ಕುರುಡಾಗಿ ಅನುಸರಿಸುತ್ತಿರಲಿಲ್ಲ, ದಾಕ್ಷಿಣ್ಯ ವಿಲ್ಲದೆ ಚರ್ಚೆ ಮಾಡಿ ಮನಸ್ಸು ಒಪ್ಪಿದರೆ ಮಾತ್ರ ಅಂಗೀಕರಿಸುತ್ತಿದ್ದನು.
ಅಂಬಿಗರ ಚೌಡಯ್ಯ ಏಕದೇವೋಪಾಸಕನು, ಇಷ್ಟಲಿಂಗ ಆರಾಧಕನು. ಲಿಂಗಾಂಗ ಸಾಮರಸ್ಯವರಿತ ಮೇಲೆ ಭಾವಲಿಂಗ ಪೂಜೆ; ಕುರುಹಿನ ಅಗತ್ಯವಿಲ್ಲ ಎಂದು ವಿವರಿಸುತ್ತಾರೆ.
#ಅಂಗದ ಗುಣವನರತು ಲಿಂಗವನರಿಯಬೇಕೆಂಬರು
ಅಂಗವರತ ಮತ್ತೆ ಲಿಂಗಕ್ಕೆ ಕುರುಹುಂಟೆ ?
ಅಂಗವೆ ಲಿಂಗ, ನಿರಂಗವೆ ಸಂಗ.
ಭಾವದ ಅಂಗವನರಿಯಬೇಕೆಂದನಂಬಿಗ ಚೌಡಯ್ಯ./1
ಅಷ್ಟಾವರ್ಣದ ರುದ್ರಾಕ್ಷಿಯ ಆಚಾರ ವಿಧಿ ಹೇಳುತ್ತಾ ಅಂಬಿಗರ ಚೌಡಯ್ಯ ಶರಣನ ಲಕ್ಷಣ ತಿಳಿಸಿದ್ದಾರೆ.
#ಮಸ್ತಕದಲ್ಲಿ ರುದ್ರಾಕ್ಷಿಯಂ ಧರಿಸಿ
ಅನ್ಯದೈವದ ಗುಡಿಯ ಹೊಗಲಾಗದು ಶರಣ.
ಕರಣಂಗಗಳಲ್ಲಿ ರುದ್ರಾಕ್ಷಿಯಂ ಧರಿಸಿ
ಹರನಿಂದೆ ಗುರುನಿಂದೆಯ ಕೇಳಲಾಗದು ಶರಣ.
ತೋಳುಗಳಲ್ಲಿ ರುದ್ರಾಕ್ಷಿಯಂ ಧರಿಸಿ
ಪರಸತಿಯನಪ್ಪಲಾಗದು ಶರಣ.
ಮುಂಗೈಯಲ್ಲಿ ರುದ್ರಾಕ್ಷಿಯಂ ಧರಿಸಿ
ಅನ್ಯರಿಗೆ ಕೈಮುಗಿಯಲಾಗದು ಶರಣ.
ಇದನರಿದು ಧರಿಸಿದಡೆ ಶ್ರೀರುದ್ರಾಕ್ಷಿಯಹುದು.
ಅಂತಲ್ಲದಿರ್ದಡೆ, ಡಂಬ ಹಗರಣವ ಹೊತ್ತು ಬಂದಂತೆ ಎಂದಾತನಂಬಿಗರ ಚೌಡಯ್ಯ. / 216
ದೇವಾಲಯ ಗುಡಿಗುಂಡಾರ ವಿರೋಧಿಯಾತ, ಇಷ್ಟಲಿಂಗಪೂಜೆ ಪ್ರತಿಯೊಬ್ಬರು ಮಾಡಬೇಕು. ಇಲ್ಲಿ ಯಾವ ಭೇಧಭಾವ ಇಲ್ಲ. ದೇಹವನ್ನೇ ದೇವಾಲಯವಾಗಿಸಿಕೊಳ್ಳಲು ಅದು ಸಾಧನ ಎಂದನು. ಇಷ್ಟಲಿಂಗವನ್ನು ಪೂಜಿಸದೆ ಬೆಟ್ಟದ ಲಿಂಗ, ಅಂದರೆ ಸ್ಥಾವರಲಿಂಗಕ್ಕೆ ಹೋಗಿ ಬೀಳುವ ಮೂಢರನ್ನು ಕಂಡ ಚೌಡಯ್ಯ ಹೀಗೆ ಹೇಳಿದ್ದಾನೆ.
#ಕಟ್ಟಿದ ಲಿಂಗವ ಬಿಟ್ಟು
ಬೆಟ್ಟದ ಲಿಂಗಕ್ಕೆ ಹೋಗಿ
ಅಡಿಮೇಲಾಗಿ ಬೀಳುವ
ಲೊಟ್ಟೆಮೂಳರ ಕಂಡಡೆ
ಗಟ್ಟಿ ಪಾದರಕ್ಸೆಯ ತೆಗೆದುಕೊಂಡು
ಲೊಟಲೊಟನೆ ಹೊಡೆಯೆಂದಾತ
ನಮ್ಮ ಅಂಬಿಗರ ಚೌಡಯ್ಯ.
ಇಷ್ಟಲಿಂಗವನ್ನು ಪೂಜಿಸದೆ ಕಾಶಿಗೆ ಹೋಗಿ ,ತೀರ್ಥಸ್ಥಳಕ್ಕೆ ಹೋಗಿ ಸ್ಥಾವರಲಿಂಗಕ್ಕೆ ಎರಗುವ ಮೂರ್ಖತನ ಬಿಟ್ಟು ನಿನ್ನಲ್ಲಿ ನೀ ಅರಿವಿನಿಂದ ನೋಡಿದರೆ ನಿನ್ನಲ್ಲೇ ಕಾಣುವನು ಶಿವ.
ಪರದೇಶಕ್ಕೆ ಹೋಗಿ ಬಳಲದಿರು.
ಕಾಶಿಯಲ್ಲಿ ಕಾಯುವ ವಿನಾಶವ ಮಾಡಲು ಬೇಡ.
ನಿನ್ನಲ್ಲಿ ನೀ ತಿಳಿದು ನೋಡಾ.
ಜಗವು ತನ್ನೊಳಗೆಂದಾತ
ನಮ್ಮ ಅಂಬಿಗರ ಚೌಡಯ್ಯನು.
#ಜಂಗಮವೆಂದಡೆ ನಡೆನುಡಿ ಸಿದ್ಧಿಯಾಗಿರಬೇಕು.
ಮೂರು ಮಲಕ್ಕೆ ಸಿಕ್ಕದೆ, ಆರರಡಿಗೆ ಅಡಿಮೆಯಾಗದೆ,
ಆ ಗುಣ ತೋರುವುದಕ್ಕೆ ಮೊದಲೆ
ಮೀರಿ ಇರಬೇಕೆಂದನಂಬಿಗ ಚೌಡಯ್ಯ. / 134
ಜಂಗಮರ ನಡೆ ನುಡಿ ಪರಿಶುದ್ಧವಾಗಿರಬೇಕು. ಮಲತ್ರಯಗಳಾದ ಆಣವಮಲ, ಮಾಯಾಮಲ ಮತ್ತು ಕಾರ್ಮಿಕಮಲಗಳು ಜಂಗಮನನ್ನು ಆವರಿಸ ಬಾರದು. ಅಜ್ಞಾನದ ಕಾರಣ ತನ್ನನ್ನು ಅಲ್ಪನೆಂದು ತಿಳಿಯುವುದೆ ಆಣವಮಲ. ಸಂಕುಚಿತ ಭಾವದಿಂದ ಅರಿಷಡ್ವರ್ಗಗಳ ಮೋಹಕ್ಕೆ ಒಳಗಾಗುವುದೇ ಮಾಯಾಮಲ. ಇನ್ನು ಕ್ರಿಯಾಶಕ್ತಿಯನ್ನು ಕುಂಠಿತಗೊಳಿಸುವುದೇ ಕಾರ್ಮಿಕಮಲ. ಜಂಗಮ ಈ ಮೂರು ಮಲಗಳಿಗೆ ಅಶುದ್ಧಿ ಗಳಿಗೆ ಒಳಗಾಗಬಾರದು
ಆರರಡಿಗೆ ಅಂದರೆ ಕಾಮ ಕ್ರೋಧ ಮದ ಮತ್ಸರ ಮೋಹ ಲೋಭ ಎಂಬ ಅರಿಷಡ್ವರ್ಗಗಳನ್ನು ಮೆಟ್ಟಿ ನಿಲ್ಲುವ, ಮೀರಿ ನಿಲ್ಲುವ ಆತ್ಮಸ್ಥೈರ್ಯ ಇರಬೇಕು.
#ಅರಿವಿನ ಪಥವನರಿಯದಿರ್ದಡೆ, ಮುಂದೆ ಹೆರರಿಗೆ ದೀಕ್ಷೆಯ ಮಾಡಲೇಕೆ? ತೊರೆಯಲದ್ದವನಸೀಲರಿಯದವ ತೆಗೆಯ ಹೋದಂತಾಯಿತ್ತರಂದನಂಬಿಗ ಚೌಡಯ್ಯ./26
ಅರಿವಿನ ಪಥ ಷಟ್ಸ್ಥಲ ಪಥ ಅರಿಯದವ
ನಿಗೆ ಲಿಂಗ ದೀಕ್ಷೆ ಕೊಟ್ಟರೆ ಅದು ಈಸಲರಿಯದವ ನೀರಿನ ತೆರೆಯಲ್ಲಿ ಮುಳುಗುವವರನ್ನು ನೀರಿಂದ ತೆಗೆಯಲು ಹೋದಂತೆ ಎಂದು ದೀಕ್ಷಗುರುವಿನ ಅರ್ಹತೆ
ಪ್ರಶ್ನಿನಿಸುತ್ತಾರೆ. ಇವರ ಸಮಕಾಲೀನ ಸಮಾಜ ವಿಡಂಬನೆಯ ವ್ಯಗ್ರದೃಷ್ಟಿ ಬೇರೆಯವರಲ್ಲಿ ವಿರಳವೆಂದೇ ಹೇಳಬೇಕು.
#ಅಂಬಿನ ಹಿಳಿಕಿನಲ್ಲಿ ಕಟ್ಟಿದ ವಿಹಂಗನ ಗರಿಯಂತೆ, ತಾಗುವ ಮೊನೆಗಾಧಾರವಾಗಿ ದೂರ ಎಯಿದುವುದಕೆ ಸಾಗಿಸುವ ಗುಣ ತಾನಾಗಿ ಕ್ರೀ ಅರಿವಿನ ಭೇದದ ನೆರಿಗೆಯ ಕಾಬನ್ನಕ್ಕ, ಅರಿವು ಕುರುಹು ಎರಡು ಬೇಕೆಂದನಂಬಿಗ ಚೌಡಯ್ಯ.
ಯಾರನ್ನೇ ಆಗಲಿ ಯಾವುದನ್ನೇ ಆಗಲಿ ಅಂಬಿಗರ ಚೌಡಯ್ಯನವರು ಟೀಕಿಸದೆ ಬಿಡುವುದಿಲ್ಲ. ಇವರ ಮಾತಿನ ಬಹುಭಾಗ ಹರಿತ ವಾದದ್ದು.
#ಅಡ್ಡಬಿದ್ದು ಶಿಷ್ಯನ ಮಾಡಿಕೊಂಬ ದಡ್ಡ ಪ್ರಾಣಿಗಳನೇನೆಂಬೆನಯ್ಯ. ಏನೇನೂ ಅರಿಯದ ಎಡ್ಡ ಮಾನವರಿಗೆ ಉಪದೇಶವ ಮಾಡುವ ಗೊಡ್ಡ ಮಾನವನ ಮುಖವ ತೋರದಿರಯ್ಯಾ. ಅದೇನು ಕಾರಣವೆಂದಡೆ: ಆ ಮೂಢಜೀವಿಯ ಪ್ರಪಂಚವ ಕಳೆಯಲಿಲ್ಲ. ಅವನ ಪಂಚೇಂದ್ರಿಯಂಗಳು, ಸಪ್ತವ್ಯಸನಂಗಳು, ಅಷ್ಟಮದಂಗಳೆಂಬ ಖೊಟ್ಟಿ ಗುಣಂಗಳ ಬಿಡಿಸಲಿಲ್ಲ. ಸೂತಕ ಪಾತಕಂಗಳ ಕೆಡಿಸಿ, ಮೂರು ಮಲಂಗಳ ಬಿಡಿಸಿ ಮುಕ್ತಿಪಥವನರುಹಲಿಲ್ಲ. ಮಹಾಶೂನ್ಯ ನಿರಾಳ ನಿರಂಜನಲಿಂಗವ ಕರ-ಮನ-ಭಾವ ಸರ್ವಾಂಗದಲ್ಲಿ ತುಂಬಿ ನಿತ್ಯನೆಂದೆನಿಸಲಿಲ್ಲ. ಇದನರಿಯದ ವ್ಯರ್ಥಕಾಯರುಗಳ ಗುರುವೆಂದಡೆ ಪ್ರಮಥರು ಮೆಚ್ಚುವರೆ ? ಇಂತಪ್ಪ ಗುರು ಶಿಷ್ಯರೀರ್ವರು ಅಜ್ಞಾನಿಗಳು. ಅವರು ಇಹಲೋಕ ಪರಲೋಕಕ್ಕೆ ಹೊರಗೆಂದಾತನಂಬಿಗ ಚೌಡಯ್ಯ.
ಡಾಂಭಿಕ ಗುರು ಜಂಗಮರನ್ನು ಅತ್ಯಂತ ಕಠೋರವಾಗಿ, ನೇರವಾಗಿ, ನಿಷ್ಠೂರವಾಗಿ ಟೀಕಿಸಿದ ಅಂಬಿಗರ ಚೌಡಯ್ಯನವರು ಗಣಾಚಾರಿಗಳು. ಅವರು ಶೋಷಣೆಯ ಕರಾಳ ಮುಖವನ್ನು ಸ್ವತಃ ಅನುಭವಿಸಿದ್ದರಿಂದ ಕ್ರೋಧ, ನೋವು ವ್ಯಕ್ತ ವಾಗಿವೆ.
ಒಂದು ವಚನದಲ್ಲಿ
ನಾವು ಪರಮವಿರಕ್ತರು, ಪಟ್ಟದ ಅಯ್ಯನವರು, ಚರಮೂರ್ತಿಗಳು, ಪರದೇಶಿಗಳು ಎಂದು ವಿವಿಧ ಬಿರುದು ಪಡೆದು, ಕಾವಿ ಕಾಷಾಯಾಂಬರ ಹಾಕಿಕೊಂಡು, ತಾವೇ ಸರ್ವಕಾರ್ಯ ಶ್ರೇಷ್ಠ ರೆಂದು ಗರ್ವದಲ್ಲಿ ಕೊಬ್ಬಿ, ಕಾಮನಾಟದಲ್ಲಿ ಕಲಕಿ, ಮನಸ್ಸಿನಲ್ಲಿ ದುರ್ಗುಣವನ್ನಿಟ್ಟುಕೊಂಡು ಬರೀ ಮಾತಿನಲ್ಲಿ ನೀತಿಯ ಹೇಳುವ ಕಪಟರನ್ನು ಅತ್ಯಂತ ನಿಷ್ಟುರರಾಗಿ ಟೀಕಿಸಿದ್ದಾರೆ.
ಒಂದು ವಚನದಲ್ಲಿ
ಗುರುಲಿಂಗಜಂಗಮವಾದ ಬಳಿಕ ಅಷ್ಟಾವರಣದಲ್ಲಿ ನಿಷ್ಟಾಪರರಾಗಿರಬೇಕು. ಪರಧನ ಪರಸತಿಯರ ಹಿಡಿಯೆ ಎಂಬ ನೇಮದಲ್ಲಿ ಬಲ್ಲಿದರಾಗಿರಬೇಕು. ಶಿವಭಕ್ತರಾದವರ ಭವವ ಗೆಲಿಸಿ ಮೋಕ್ಷವ ಹೊಂದಿಸಬೇಕು. ಶಿವಲಾಂಛನವ ಹೊತ್ತ ಬಳಿಕ ಶಿವನಂತಿರಬೇಕು. ಅದು ಬಿಟ್ಟು ನಾನು ಮಾಹೇಶ್ವರನೆಂದು, ನಾನು ಶಿವಭಕ್ತನೆಂದು ತನ್ನ ಜಂಗಮಲಿಂಗಕ್ಕೆ ತನು-ಮನ-ಧನವೆಂಬ ತ್ರಿವಿಧಪದಾರ್ಥವ ಅರ್ಪಿಸಿರಿ. ಆ ತ್ರಿವಿಧಪ್ರಸಾದವ ಸೇವಿಸಿ, ಪ್ರಸನ್ನಪ್ರಸಾದವ ಸ್ವೀಕರಿಸಿ ಬೇರೆ ಧರ್ಮಗಳ ಪ್ರಚಾರದಲ್ಲಿ ತನ್ನನ್ನೇ ತೊಡಗಿಸಿಕೊಂಡು ಉಚ್ಚಂಗಿದುರ್ಗಿಗೆ ಬಿಟ್ಟ ಪೋತರಾಜನಂತೆ ಮೂರು ಮೂರು ಜಡೆಗಳ ಬಿಟ್ಟು, ಹಿರಿಯ ಹೋತಿನಂತೆ ಮೊಳ ಮೊಳ ಗಡ್ಡವ ಬಿಟ್ಟು, ಡಾಂಭಿಕ ಜಾತಿಗಾರನಂತೆ ವೇಷವ ತೊಟ್ಟು, ಮೀಸೆಯ ಬೋಳಿಸಿಕೊಂಡು, ಕೈಪವ ಧರಿಸಿ, ಸಂಸ್ಕೃತ ಗೀರ್ವಾಣಭಾಷೆಯ ಕಲಿತು, ಕಾಕ ಕುಟಿಲ ಕುಹಕದ ಗಾಳಿಪೂಜೆಯಿಂದ ಬಂದ ಸುಡಗಾಡು ಸಿದ್ಧಯ್ಯಗಳಂತೆ, ಗಿಡಮೂಲಿಕೆಗಳು ತಂತ್ರ ಮಂತ್ರ ಯಂತ್ರದ ಭಾಷೆಗಳ ಕಲಿತುಕೊಂಡು ಪುರಜನರ ಮೆಚ್ಚಿಸಲು ಅಯ್ಯಾ, ನಾವು ಕೆರೆ ಭಾವಿಯ ಅಗೆಸಬೇಕು, ಮಠ ಗುಡಿಯ ಕಟ್ಟಿಸಬೇಕು, ಬಿಲ್ವಗಿಡಗಳ ಹಚ್ಚಬೇಕು, ಮದುವೆ ಅಯ್ಯಾಚಾರವ ಮಾಡಬೇಕು, ಅನ್ನಕ್ಷೇತ್ರ ಅರವಟ್ಟಿಗೆಯ ಇಡಿಸಬೇಕು, ಪುರಾಣಗಳ ಹಚ್ಚಿಸಬೇಕು, ಇಂತಹ ದುರಾಸೆಯಿಂದ ನಾನಾ ದೇಶವ ತಿರುಗಿ, ಕಾಡಿ ಬೇಡಿ, ಹುಸಿಯನೆ ಬೊಗಳಿ ಶ್ರೀಮಂತರನ್ನು ಮಾತಿನಿಂದೊಲಿಸಿ, ಅವರು ಕೊಟ್ಟಡೆ ಹೊಗಳಿ, ಕೊಡದಿರ್ದಡೆ ತೆಗಳಿ, ಕೊಟ್ಟ ದ್ರವ್ಯಗಳ ತೆಗೆದುಕೊಂಡು ಬಂದು, ಕಡೆಗೆ ಚೋರರು ಒಯ್ದರೆಂದು ಸುಳ್ಳು ಹೇಳಿ, ಶಿವಪಥಕ್ಕೆ ದೂರಾಗಿ, ದುರಾಚಾರವ ಆಚರಿಸುವವರಿಗೆ ಮತ್ತು ಅವರನ್ನು ಪರಮ ನಿರಂಜನ ಜಂಗಮಲಿಂಗದೇವರೆಂದು ಕರೆತಂದು, ಪಾದತೀರ್ಥ ಪ್ರಸಾದವ ತೆಗೆದು ಕೊಳ್ಳುವವರಿಗೆ ನರಕ ತಪ್ಪುವುದಿಲ್ಲ ಎಂದು ಇಂಥ ಡಾಂಭಿಕ ಗುರು ಭಕ್ತ ಇರ್ವರನ್ನೂ ಅತ್ಯಂತ ನಿಷ್ಟುರರಾಗಿ ಟೀಕಿಸಿದ್ದಾರೆ.
#ಅರಳೆಯ ಮರನು ವಿಷ್ಣುಕಾಂತಿ ಬನ್ನಿ ಮುತ್ತಕ ತೊಳಚಿ ಹರಿ ಹರಿಯೆಂದು ಹೊಡವಡುವಿರಿ. ಎಲ್ಲಿ ಭೋ! ಎಲ್ಲಿ ಭೋ! ನಿಮ್ಮ ನಿಮ್ಮ ಹೊಡವಡುವ ದೈವಗಳೆಲ್ಲಾ ಗಿಡುಮರನಾಗಿ ಹೋದವಲ್ಲಾ! ನಿಮ್ಮ ನಡೆಯೆಲ್ಲಾ ಅನಾಚಾರ, ನುಡಿಯೆಲ್ಲಾ ಶಿವದ್ರೋಹ! ಇವದಿರ ಗಡಣ ಬೇಡೆಂದನಂಬಿಗ ಚೌಡಯ್ಯ./26
#ಅರಿವನರಿದಲ್ಲಿ ತಾನೆನ್ನದೆ ಇದಿರೆನ್ನದೆ, ಪಥವನರಿಯದಿರ್ದಡೆ, ಮುಂದೆ ಹೆರರಿಗೆ ದೀಕ್ಷೆಯ ಮಾಡಲೇಕೆ ? ತೊರೆಯಲದ್ದವನನೀಸಲರಿಯದವ ತೆಗೆಯ ಹೋದಂತಾಯಿತ್ತೆಂದನಂಬಿಗ ಚೌಡಯ್ಯ.
#ಅಂಗದ ಗುಣವನರತು ಲಿಂಗವನರಿಯಬೇಕೆಂಬರು ಅಂಗವರತ ಮತ್ತೆ ಲಿಂಗಕ್ಕೆ ಕುರುಹುಂಟೆ ? ಅಂಗವೆ ಲಿಂಗ, ನಿರಂಗವೆ ಸಂಗ. ಭಾವದ ಅಂಗವನರಿಯಬೇಕೆಂದನಂಬಿಗ ಚೌಡಯ್ಯ.
#ಅರ್ಚನೆಯ ಮಾಡುವಲ್ಲಿ ಆವೇಶ ಅರತಿರಬೇಕು. ಪೂಜೆಯ ಮಾಡುವಲ್ಲಿ ಪುಣ್ಯಮೂರ್ತಿಯಾಗಿರಬೇಕು. ಕೊಡುವ ಕೊಂಬಲ್ಲಿ ಸರ್ವಭೂತಹಿತನಾಗಿರಬೇಕು. ಇಂತೀ ಸಡಗರಿಸಿಕೊಂಡಿಪ್ಪಾತನ ಅಡಿಗೆರಗುವೆನೆಂದನಂಬಿಗ ಚೌಡಯ್ಯ.
#ಅರಿವುದೊಂದು ವಾಯು, ಮರೆವುದೊಂದು ವಾಯು. ಉಭಯದಿಂ ತೋರುವ ವಾಯು ಒಂದೆಯಾಗಿ, ವಾಳುಕದ ಒಳ ಹೊರಗಿನ ನೀರಿನಂತೆ ವೆಗ್ಗಳಿಸಿದಡೆ ನಿಂದು ತೆಗೆದಡೆ ಅಲ್ಲಿಯ ಅಡಗುವಂತೆ, ಅರಿದು ನುಡಿದು ನಡೆದಡೆ ಜ್ಞಾನಿ, ನುಡಿದ ನುಡಿಗೆ ನಡೆಯಡಗೆ ಆತನೆ ಜೀವಭಾವಿ ಎಂದನಂಬಿಗ ಚೌಡಯ್ಯ.
#ಅಡವಿಯೊಳಗರಸುವಡೆ ಸಿಡಿಗಂಟಿ ತಾನಲ್ಲ. ಮಡುವಿನೊಳಗರಸುವಡೆ ಮತ್ಸ್ಯಮಂಡೂಕನಲ್ಲ. ತಪಂಬಡುವಡೆ ವೇಷಕ್ಕೆ ವೇಳೆಯಲ್ಲ. ಒಡಲ ದಂಡಿಸುವಡೆ ಕೊಡುವ ಸಾಲಿಗನಲ್ಲ. ಅಷ್ಟತನುವಿನೊಳಗೆ ಹುದುಗಿದ್ದ ಲಿಂಗವ ನಿಲುಕಿ ನೋಡಿಯೆ ಕಂಡನಂಬಿಗ ಚೌಡಯ್ಯ.
--------------
ಭವಬಂಧನವನ್ನು ಕಳಚಿಕೊಳ್ಳುವುದು ಹೇಗೆ ಎಂಬುದಕ್ಕೆ ವಚನವೊಂದರಲ್ಲಿ ಹೀಗೆ ಉತ್ತರಿಸುತ್ತಾರೆ ಚೌಡಯ್ಯ:
#ಅಷ್ಟಮದಂಗಳ ಘಟ್ಟಿಯನೆ ಕರಗಿಸಿ,
ಸತ್ವ ರಜ ತಮಂಗಳ ಬಿಟ್ಟು ಕಳೆದು,
ಸುತ್ತುವ ಮನದ ಸುಳಿಯ ತಪ್ಪಿಸಿ
ಮುಂದೆ ಹುಟ್ಟದೆ ಹೋಗೆಂದನಂಬಿಗ ಚೌಡಯ್ಯ.
ಇವರ ವಚನಗಳಲ್ಲಿ ಆಳವಾದ ಅನುಭವ, ಸಾಮಾಜಿಕ ಪ್ರಜ್ಞೆ ಎದ್ದು ಕಾಣುತ್ತದೆ. ಸಮಾಜದ ಅನಾಚಾರ, ಅತ್ಯಾಚಾರ, ಢಂಬಾಚಾರಗಳನ್ನೆಲ್ಲವನ್ನು ನಿರ್ಭೀತಿಯಿಂದ ಕಟುವಾಗಿ ಟೀಕಿಸಿದ ನಿಜ ಶರಣರಿವರು. ಜನ ಸಮೂಹದಲ್ಲಿದ್ದ ಮೂಢನಂಬಿಕೆ ಗಳನ್ನೆಲ್ಲ ಚೌಡಯ್ಯನವರು ಹೊಡೆದೋಡಿಸುತ್ತಲೇ ವಿಚಾರಪರವಾದ, ವಾಸ್ತವವಾದ ಅಂಶಗಳನ್ನು ಜನಮನದಲ್ಲಿ ಮೂಡಿಸಿದವರು. ಅಷ್ಟೇ ಅಲ್ಲದೆ ತಮ್ಮ ವಚನಗಳನ್ನು ವೈಚಾರಿಕವಾಗಿ ನಿರೂಪಿಸಿದ ಮಹಾ ಮಾನವತಾವಾದಿ ಈ ನಿಜ ಶರಣ ಅಂಬಿಗರ ಚೌಡಯ್ಯನವರು. ತಮ್ಮ ವಚನಗಳ ಮೂಲಕ ಅಂಬಿಗ ಚೌಡಯ್ಯ ಶರಣರು ಅಂದು ಸಾರಿದ ಮೌಲ್ಯಗಳು ಇಂದಿಗೂ ಪ್ರಸ್ತುತವಾಗಿವೆ.
-✍️ Dr Prema Pangi
#ಪ್ರೇಮಾ_ಪಾಂಗಿ, #ಅಂಬಿಗರ_ಚೌಡಯ್ಯ,
Comments
Post a Comment