ಪಂಚಾಚಾರ - ಗಣಾಚಾರ


 
ಪಂಚಾಚಾರ - *ಗಣಾಚಾರ* :
*ಗಣಾಚಾರ* :
ಇದು ಲಿಂಗಾಚಾರ ಸದಾಚಾರಗಳ ನಂತರ ಬರುವ ಮೂರನೆಯ ಆಚಾರ. ಸದಾಚಾರದ ಮತ್ತು ಲಿಂಗಾಚಾರದ ನಿಯಮಗಳನ್ನು  ದೃಢನಿಷ್ಠೆಯಿಂದ ಆಚರಿಸುವುದು ಗಣಾಚಾರ.

"ಏಕೈಕ ನಿಷ್ಠೆ" ಗಣಾಚಾರದಲ್ಲಿ ಕಂಡುಬರುವ ಬಹುಮುಖ್ಯವಾದ ಅಂಶ, “ಶಿವನಿಂದೆಯ ಕೇಳದಿಹುದೇ ಗಣಾಚಾರ,” 
“ಅಷ್ಟಾವರಣಂಗಳ ಮೇಲೆ ನಿಂದೆ ಕುಂದುಗಳು ಬಂದು ತಟ್ಟಿದಲ್ಲಿ ಗಣಸಮೂಹದೊಡಗೂಡಿ ಆ ಸ್ಥಲವ ತ್ಯಜಿಸುವುದೇ ಗಣಾಚಾರವೆಂಬೆನಯ್ಯಾ" ಎಂದರು ಶರಣರು.

   'ಶಿವ'ವನ್ನು ಆಂತರಿಕ ಅಭಿಪ್ಸೆಯಿಂದ ಅರಸುವ ಸಾಧಕ ಶಿವನಿಂದಕರನ್ನು ಅಷ್ಟೇ ಎಚ್ಚರಿಕೆಯಿಂದ ದೂರವಿಡಬೇಕಾಗುತ್ತದೆ. ನೇರವಾದ ನಡೆಯುಳ್ಳ ಶರಣ ಕುಟಿಲ ಕುಹಕ  ಕುತ್ಸಿತ ಕುಬುದ್ಧಿಗಳನ್ನು ದಿಟ್ಟತನದಿಂದ ಖಂಡಿಸುತ್ತಾನೆ. ಅಸತ್ಯದೊಡನೆ, ಅನ್ಯಾಯದೊಡನೆ ಹೇಗೋ ಹೊಂದಿಕೊಂಡು ಹೋಗಬೇಕೆಂಬುದು ಗಣಾಚಾರಕ್ಕೆ ವಿರುದ್ಧವಾದುದು. ನಿಂದೆಯನ್ನು ತಡೆಯಲು ಪ್ರಯತ್ನಿಸುತ್ತಾನೆ. ಆ ವಿಚಾರದಲ್ಲಿ ಆತ ಯಾರಿಗೂ ಅಂಜುವವನಲ್ಲ. ಭಕ್ತಿ ಭಂಡಾರಿ
ಬಸವಣ್ಣನವರು ಸಹ “ನ್ಯಾಯ ನಿಷ್ಠುರಿ, ದಾಕ್ಷಿಣ್ಯಪರನು ನಾನಲ್ಲ" ಎಂದು ಸತ್ಯನಿಷ್ಠೆ
ಯನ್ನು ವ್ಯಕ್ತಪಡಿಸಿದ್ದಾರೆ. "ಮರಣವೇ ಮಹಾನವಮಿ" ಎಂದು ಶರಣರು ತಾವು ಹಿಡಿದ ಕಾರ್ಯದಲ್ಲಿ  ಕಾರ್ಯಪ್ರವೃತ್ತರಾಗಿದ್ದರು.
ಗಣಸಮೂಹದ ಹಿತಕ್ಕಾಗಿ ಅಂದರೆ ಸಮಾಜದ ಸಮಷ್ಟಿ ಹಿತಕ್ಕಾಗಿ ನಿರ್ಭೀತ ಮನೋಧರ್ಮದಿಂದ ಕೈಗೊಳ್ಳುವ ಶಿವಪರವಾದ ಕಾರ್ಯಗಳೆಲ್ಲವೂ ಗಣಾಚಾರಗಳೆ
ಆ ಕಾರ್ಯಕ್ಕೆ ಒದಗುವ ವಿರೋಧಗಳನ್ನು ಆತ ಎದುರಿಸುತ್ತಾನೆ. ಅವುಗಳನ್ನು ಹಿಮ್ಮೆಟ್ಟಿಸುವುದರಲ್ಲಿ ಒಂದುವೇಳೆ ಅವನು ವಿಫಲನಾದರೆ ಆ ಸ್ಥಳವನ್ನೇ ಬಿಟ್ಟು ಹೋಗುತ್ತಾನೆ. ನಿಂದಕರ ಅಮಂಗಳ ಕಾರ್ಯದಲ್ಲಿ  ಭಾಗಿಯಾಗುವುದಿಲ್ಲ.

“ಭವಿತನಕ್ಕೆ ಹೇಸಿ ಭಕ್ತನಾದ ಬಳಿಕ ಭವಿಯ ಸಂಗ ಭಂಗವೆಂದರಿಯರು ಕೂಡಲಚನ್ನಸಂಗಯ್ಯ" ಎನ್ನುತ್ತಾರೆ ಚನ್ನಬಸವಣ್ಣನವರು. ಭವಿತನವನ್ನು ಬಿಟ್ಟು ಭಕ್ತನಾದಮೇಲೆ ಮತ್ತೆ ಭವಿತ್ವದ, ಭವಿಗಳ, 
ಅನ್ಯದೈವಗಳ ಸಂಗವನ್ನು ಕಟ್ಟಿಕೊಳ್ಳಬಾರದು ಎನ್ನುತ್ತಾರೆ.

#ಮಡಿಲಲ್ಲಿ ಸುತ್ತಿದ ಹಾವಿನಂತೆ ಮಡಿಲಲ್ಲಿ ಕಟ್ಟಿದಡೇನು ?
ಕೊರಳಲ್ಲಿ ಸುತ್ತಿದ ಹಾವಿನಂತೆ ಕೊರಳಲ್ಲಿ ಕಟ್ಟಿದಡೇನು ?
ಕಳವು ಹಾದರ ಭವಿಯ ಸಂಗ ಅನ್ಯದೈವವ ಬಿಡದನ್ನಕ್ಕ ಲಿಂಗಭಕ್ತನೆನಿಸಲು ಬಾರದಯ್ಯ.
ಅನಾಚಾರದಿಂದ ನರಕ, ಆಚಾರದಿಂದ ಸ್ವರ್ಗ.
ಕೂಡಲಚೆನ್ನಸಂಗಯ್ಯನೊಲ್ಲ ಭೂಮಿಭಾರಕರ. / 1181
ಅನಾಚಾರದಿಂದ ನರಕ, ಆಚಾರದಿಂದ ಸ್ವರ್ಗ ಎಂಬ ಚನ್ನಬಸವಣ್ಣನ ಮಾತು ಅದನ್ನು ಸ್ಪಷ್ಟವಾಗಿ ಹೇಳಿದೆ. ಆಚಾರ ನಿಷ್ಠೆಯನ್ನು ಗಣಾಚಾರ ಒತ್ತಿ ಹೇಳುತ್ತದೆ.

ಭಕ್ತನಾದಮೇಲೆ ಆ ಮಾರ್ಗದಲ್ಲಿ ದೃಢ ನಿಶ್ಚಯದಿಂದ ನಡೆಯಬೇಕು. ಇದೂ
ಒಂದು ರೀತಿಯ ಹಠ, ಛಲ. ಆದರೆ ಇದು ಅಹಂಕಾರ, ಮೇಲುಕೀಳು, ಅಸೂಯಾದಿಗಳಿಂದ ಪ್ರೇರಿತವಾದದ್ದಲ್ಲ, ಸತ್ವಶಕ್ತಿಯ ಶಾಂತ ಮನೋಧರ್ಮದಿಂದ ಪೋಷಿತವಾದದ್ದು.

#ಛಲಬೇಕು ಶರಣಂಗೆ ಪರಧನವನೊಲ್ಲೆನೆಂಬ,
ಛಲಬೇಕು ಶರಣಂಗೆ ಪರಸತಿಯನೊಲ್ಲೆನೆಂಬ,
ಛಲಬೇಕು ಶರಣಂಗೆ ಪರದೈವವನೊಲ್ಲೆನೆಂಬ,
ಛಲಬೇಕು ಶರಣಂಗೆ ಲಿಂಗಜಂಗಮವನೊಂದೆಂಬ,
ಛಲಬೇಕು ಶರಣಂಗೆ ಪ್ರಸಾದ ದಿಟವೆಂಬ,
ಛಲವಿಲ್ಲದವರ ಮೆಚ್ಚ ಕೂಡಲಸಂಗಮದೇವ. / 636
ಎಂಬ ಮಾತಿನಲ್ಲಿ ಈ ಅರ್ಥವನ್ನು ಕಾಣುತ್ತೇವೆ. 

 ಆಧ್ಯಾತ್ಮಿಕದ ಅಮೃತರಸವನ್ನು ಕುಡಿಯುವುದು ಅಳಿಯಾಸೆಯ ಚಂಚಲಚಿತ್ತರಿಗೆ ಸಲ್ಲಲಾರದು. ಅದನ್ನು ಪಡೆಯಲು ಸಾಧಕನಲ್ಲಿ ದೃಢನಿಷ್ಠೆ ಇರಬೇಕು. 
ಶರಣರು ಈ ಗಣಾಚಾರದಲ್ಲಿ ಅನೇಕ ಕಟುವಾದ ಮಾತುಗಳನ್ನು ಹೇಳಿರುವುದು ಕಂಡುಬರುತ್ತದೆ. ಆ ಕಟುತ್ವದ ಹಿಂದಿರುವ ಕರುಣೆ ಮತ್ತು ಸಮಾಜ ಸುಧಾರಣೆಗಾಗಿ ಪ್ರಯತ್ನಿಸುವ ಶ್ರದ್ದೆ ಗೋಚರವಾಗುತ್ತದೆ. ಆ ಕಾಲದಲ್ಲಿ ಅವರು ಎದುರಿಸಿದ ಕಠಿಣ ಸನ್ನಿವೇಶಗಳನ್ನು, ನಿಂದನೆ, ವಿರೋಧಗಳನ್ನು ಮತ್ತು ಅವರ ನೈತಿಕ ಸಮಾಜ ನಿರ್ಮಿಸುವ ಉದ್ದೇಶವನ್ನು ಅರ್ಥಮಾಡಿಕೊಳ್ಳಬೇಕು. ಅನ್ಯಾಯವನ್ನು ಅಳಿಸಿಹಾಕುವ, ವ್ಯಕ್ತಿ ಮತ್ತು ಸಮಾಜದ ಸರ್ವಹಿತದ ಉದ್ಧಾರಕ ಶಕ್ತಿಯಾಗಿ ಗಣಾಚಾರವನ್ನು ಅರಿಯಬೇಕು. ಆ ಕಾಲದ ಸನ್ನಿವೇಶವನ್ನು, 12ನೆಯ ಶತಮಾನದಲ್ಲಿ ಶರಣರು ಎದುರಿಸಿದ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡು ಚಲನಶೀಲ (ಜಂಗಮ) ಧರ್ಮದ ಗಣಾಚಾರವನ್ನು  ಪ್ರಸ್ತುತ ಕಾಲಕ್ಕೆ ತಕ್ಕ ಹಾಗೆ ಅಳವಡಿಸಿಕೊಂಡು ವಿವಿಧ ಮತ ಪಂಥಗಳಿರುವ ಸಮಾಜದಲ್ಲಿ ಯಾರನ್ನೂ ದ್ವೇಷಿಸದೇ ಶಾಂತಿ ಸಮರಸ ಸ್ಥಾಪಿಸಲು ನೇರವಾಗಬೇಕು.
- ✍️Dr Prema Pangi
#ಪ್ರೇಮಾ_ಪಾಂಗಿ, #ಪಂಚಾಚಾರ, #ಗಣಾಚಾರ

Comments

Popular posts from this blog

Shika chakra or Bindu chakra:Bindu visarga

Hrit Chakra or Eight Petals Chakra

A-Ka-Ta triangle or Akshara Brahma