ಶರಣ ಪರಿಚಯ - ಮೇದರ ಕೇತಯ್ಯ
*ಶರಣ ಮೇದರ ಕೇತಯ್ಯ*
ಕಾಲ - 1160
ಕೇತಯ್ಯ ಹನ್ನೆರಡನೆಯ ಶತಮಾನದ ಶ್ರೇಷ್ಠ ವಚನಕಾರ, ಶರಣ.
ಅಂಕಿತ: ಗವರೇಶ್ವರ
ಕಾಯಕ: ಬುಟ್ಟಿ ಹೆಣೆಯುವುದು (ಗವರಿಗೆ) "ಮೊರದ ಹೊಲಿಗೆ ಗವರ ನಾನು" ಎಂದು ತನ್ನ ಬಗ್ಗೆ ಹೇಳಿಕೊಂಡಿರುವರು.
ಮೇದರ ವೃತ್ತಿಯ( basket weaving) ಕೇತಯ್ಯ ಮಾನವ ಸರಿಸಮಾನತೆಯ ಸಮಾಜ ರಚನೆ ಮಾಡಲು ಹೊರಟ ಧೀಮಂತ ಶರಣರು. ಅನುಭವ ಮಂಟಪದಲ್ಲಿ ಬೆಳೆದ ಮಹಾಚೇತನ. ಬಸವಣ್ಣನವರ ಸಮಕಾಲೀನ ಶರಣರು, ಅನುಭಾವಿ, ಶುದ್ಧ ಕಾಯಕಜೀವಿ, ನಿತ್ಯ ದಾಸೋಹಿ, ಸದ್ಭಕ್ತ, ನಿಷ್ಠೆಯಿಂದ ಕೂಡಿದ ಆಚಾರವಂತರು. ಸಚ್ಚಾರಿತ್ರ್ಯವುಳ್ಳಾತರು. ತನು-ಮನ-ಧನಗಳನ್ನು ಜಂಗಮಕ್ಕೆ ಅರ್ಪಿಸಿದವರು. ವಚನಗಳಲ್ಲಿ ಶಿವಯೋಗ, ಶಿವಾನುಭವ ತತ್ವಗಳನ್ನು ನಿರೂಪಿಸಿದ ಶ್ರೇಷ್ಠ ಶಿವಾನುಭಾವಿಗಳು.
ಇವರ ಸ್ಥಳ ಬೇಲೂರ ಸಮೀಪದ ಉಳವಿಬೆಟ್ಟ. ಹೆಂಡತಿ ಸಾತವ್ವ. ಇವರು ಕಲ್ಯಾಣದ ಬಸವಣ್ಣನವರ ತತ್ವಗಳನ್ನು ಕೇಳಿ, ಹೆಂಡತಿ ಸಾತವ್ವಳ ಜೊತೆ ಕಲ್ಯಾಣಕ್ಕೆ ಹೋಗಿ ಬಿದಿರುಬುಟ್ಟಿ, ಮೊರ ಮುಂತಾದವುಗಳನ್ನು ಮಾಡಿ ಇದರ (ಮೇದರ)ಕಾಯಕದಿಂದ ಬಂದ ಹಣದಿಂದ ನಿತ್ಯದಾಸೋಹ ನಡೆಸಿ, ಪವಿತ್ರ ಜೀವನವನ್ನು ನಡೆಸಿಕೊಂಡು ಹೋಗುತ್ತಿದ್ದರು.
'ಗವರೇಶ್ವರ' ಅಂಕಿತದಲ್ಲಿ ರಚಿಸಿದ 11 ವಚನಗಳು ದೊರೆತಿವೆ. ವಚನಗಳಲ್ಲಿ ಬಸವಣ್ಣನವರ ಸ್ತುತಿ, ಸಮಕಾಲೀನ ಇತರ ಶರಣರ ಸ್ತುತಿ, ತನ್ನ ನಿತ್ಯಕಾಯಕದ ಮಹತ್ವ, ಅದರಿಂದ ದೊರೆತ ಲಿಂಗಾಂಗ ಸಾಮರಸ್ಯದ ಸುಖ, ನಿತ್ಯದಾಸೋಹದ ಮಹತ್ವ ಬಣ್ಣಿಸಲಾಗಿದೆ.
"ಲಿಂಗ ಕೆಳಗೆ ಬಿದ್ದಾಗ ನಿಂದಿಸಿ ನುಡಿದ ದ್ರೋಹಿಗಳ ಮಾತನ್ನು ಕೇಳಲಾಗದು" "ಭಕ್ತನಾದವನಿಗೆ ಸುಖ-ದುಃಖ, ಉರಿ-ಸಿರಿ ಎರಡೂ ಸಮಾನ ಎನ್ನದಿದ್ದರೆ ಭಕ್ತನಿಗೆ ಅದೇ ಹಾನಿ" ಎಂದವರು.
*ಪುರಾಣ ಕೃತಿಗಳಲ್ಲಿ ಮೇದಾರ ಕೇತಯ್ಯ*
ಒಮ್ಮೆ ಬುಟ್ಟಿ ಮಾಡುವಾಗ ಬಿದಿರ ಸಿಬಿರು ದೇಹಕ್ಕೆ ನಾಟಿ ವಿಪರೀತ ನೋವಾಯಿತು. ಆದರೂ ಆದ ನೋವನ್ನು ಮರೆತು, ದಿನ ನಿತ್ಯದ ದಾಸೋಹ ನಿಲ್ಲಬಾರದು ಎಂದು ಚಿಂತೆ ಮಾಡತೊಡಗಿದರು. ತಾನು ತಂದಿದ್ದ ಬಿದಿರನ್ನು ತೆಗೆದುಕೊಂಡು ಹೆಂಡತಿಗೆ ಹೇಳಿದರು. "ಇದರಲ್ಲಿ ಮೊರ, ಬುಟ್ಟಿ, ಮಾಡಿ ಮಾರಿ ಬಾ. ಆ ಹಣದಿಂದ ಜಂಗಮ ದಾಸೋಹವನ್ನು ಮಾಡಿ ಮುಗಿಸು" ಎಂದರು. ಆಕೆ ಆ ಕಾಯಕ ಮಾಡಿದಳು. ಆಮೇಲೆ ಹೆಂಡತಿಗೆ ಹೇಳಿದರು. "ಈಗ ನನ್ನ ಎದೆಯನ್ನು ಚುಚ್ಚಿರುವ ಬಿದಿರು ಸಿಬಿರನ್ನು ತೆಗೆ". ಆಕೆ ಅದನ್ನು ಕೀಳಲು, ಕೇತಯ್ಯ ಇಹವನ್ನು ತ್ಯಜಿಸಿದರು. ಹೆಂಡತಿಯು ರೋದಿಸಲಾರಂಭಿಸಿದಳು. ಬೆಳಗಾಯಿತು. ಹೂಗಾರ ಮಾದಣ್ಣ ಬಂದು ನೋಡಿ ಈ ವಿಷಯವನ್ನು ಬಸವಣ್ಣನವರಿಗೆ ತಿಳಿಸಿದರು. ಬಸವಣ್ಣನವರು ಬಂದು ನೋಡಿ ತನ್ನ ಪ್ರಾಣವನ್ನು ತೊರೆಯುವರು. ಆಗ ಮಡಿವಾಳ ಮಾಚಯ್ಯ ಇಬ್ಬರನ್ನು ಹೊಗಳುತ್ತಾ ಘಂಟೆಯನ್ನು ಬಾರಿಸಲು ಕೇತಯ್ಯ- ಬಸವಣ್ಣ ಇಬ್ಬರೂ ಶಿವಯೋಗ ನಿದ್ರೆಯಿಂದ ಎಚ್ಚತ್ತೆ (?ಮೂರ್ಛೆಯಿಂದ) ಎಚ್ಚರಗೊಳುತ್ತಾರೆ. ಮುಂದೆ ಮತ್ತೆ ತಮ್ಮ ಕಾಯಕ ಮುಂದುವರಿಸುವರು. ಮತ್ತೆ ಜೀವನದಲ್ಲಿ ದಾಸೋಹ ಮಾಡುವ ಭಾಗ್ಯ ದೊರೆಯಿತಲ್ಲಾ ಎಂದು ಹಿರಿಹಿಗ್ಗುತ್ತಾರೆ ಮೇದಾರ ಕೇತಯ್ಯ.ಅದು ಅವರ ನಿತ್ಯಕಾಯಕ, ನಿತ್ಯ ದಾಸೋಹದ ಮೇಲಿನ ಶ್ರದ್ಧೆ.
"ಕಾಯಕದಿಂದ ಬಂದ ಹಣದಿಂದಲೇ ತಾನು ತಿನ್ನಬೇಕು. ಜಂಗಮ ದಾಸೋಹಕ್ಕೆ ಉಪಯೋಗಿಸಿದಾಗಲೇ ಅದರ ಸಾರ್ಥಕ, ಅನಾಯಾಸವಾಗಿ ದುಡಿಯದೆ ಬಂದ ಹೊನ್ನನ್ನು ಕಸವಾಗಿ ಭಾವಿಸಬೇಕು" ಎಂಬುದೇ ಕೇತಯ್ಯನವರ ತತ್ವ.
*ಮೇದರ ಕೇತಯ್ಯನವರ ವಚನಗಳು*:
1.ವಚನ
ಎನ್ನ ಕಾಯದ ಕಳವಳವ ನಿಲಿಸಿ, ಗುರುಲಿಂಗವ ತೋರಿದ,
ಎನ್ನ ಮನದ ವ್ಯಾಕುಳವ ನಿಲಿಸಿ, ಜಂಗಮಲಿಂಗವ ತೋರಿದ,
ಇಂತು ಅಂತರಂಗ ಬಹಿರಂಗದಲ್ಲಿ ತಾನೆಯಾಗಿ, ಎನ್ನ ಪಾವನವ ಮಾಡಿದ,
ಅಮರಗಣಂಗಳು ಮುನಿದು ಎನ್ನ ಕೈಲಾಸಕ್ಕೆ ಒಯ್ದಡೆ,
ಸದ್ಯೋನ್ಮುಕ್ತಿಯ ತೋರಲೆಂದು ಮತ್ರ್ಯಕ್ಕೆ ಮರಳಿ ತಂದ
ಸಂಗನಬಸವಣ್ಣನೆ ಗುರುವೆನಗೆ, ಸಂಗನಬಸವಣ್ಣನೆ ಪರವೆನಗೆ.
ಸಂಗನಬಸವಣ್ಣನ ಕರುಣದಿಂದ, ಘನಕ್ಕೆ ಘನಮಹಿಮ ಅಲ್ಲಮಪ್ರಭುವಿನ
ಶ್ರೀಪಾದವ ಕಂಡು ಬದುಕಿದೆನು ಕಾಣಾ, ಗವರೇಶ್ವರಾ./
- ಶರಣ ಮೇದರ ಕೇತಯ್ಯ
ಎನ್ನ ಆಧಾರಚಕ್ರದಲ್ಲಿ ಆಚಾರಲಿಂಗವಾದಾತ ಬಸವಣ್ಣ.
ಎನ್ನ ಸ್ವಾಧಿಷ್ಠಾನಚಕ್ರದಲ್ಲಿ ಗುರುಲಿಂಗವಾದಾತ ಬಸವಣ್ಣ.
ಎನ್ನ ಮಣಿಪೂರಕಚಕ್ರದಲ್ಲಿ ಶಿವಲಿಂಗವಾದಾತ ಬಸವಣ್ಣ.
ಎನ್ನ ಅನಾಹುತಚಕ್ರದಲ್ಲಿ ಜಂಗಮಲಿಂಗವಾದಾತ ಬಸವಣ್ಣ.
ಎನ್ನ ವಿಶುದ್ಧಿಚಕ್ರದಲ್ಲಿ ಪ್ರಸಾದಲಿಂಗವಾದಾತ ಬಸವಣ್ಣ.
ಎನ್ನ ಆಜ್ಞಾಚಕ್ರದಲ್ಲಿ ಮಹಲಿಂಗವಾದಾತ ಬಸವಣ್ಣ.
ಇಂತಿದನರಿದೆನಾಗಿ ಗವರೇಶ್ವರಲಿಂಗದಲ್ಲಿರ್ದೆನಯ್ಯಾ./
- ಶರಣ ಮೇದರ ಕೇತಯ್ಯ
3.ವಚನ
ಎನ್ನ ಚಿತ್ತಕ್ಕೆ ಆಚಾರಲಿಂಗವಾದಾತ, ಬಸವಣ್ಣ.
ಎನ್ನ ಬುದ್ಧಿಗೆ ಗುರುಲಿಂಗವಾದಾತ, ಬಸವಣ್ಣ.
ಎನ್ನ ಅಹಂಕಾರಕ್ಕೆ ಶಿವಲಿಂಗವಾದಾತ, ಬಸವಣ್ಣ.
ಎನ್ನ ಮನಕ್ಕೆ ಜಂಗಮಲಿಂಗವಾದಾತ, ಬಸವಣ್ಣ.
ಎನ್ನ ಜೀವಕ್ಕೆ ಪ್ರಸಾದಲಿಂಗವಾದಾತ, ಬಸವಣ್ಣ.
ಎನ್ನ ಅರುವಿಂಗೆ ಮಹಾಲಿಂಗವಾದಾತ, ಬಸವಣ್ಣ.
ಎನ್ನ ಸ್ಥೂಲತನುವಿಂಗೆ ಇಷ್ಟಲಿಂಗವಾದಾತ, ಬಸವಣ್ಣ.
ಎನ್ನ ಸೂಕ್ಷ್ಮತನುವಿಂಗೆ ಪ್ರಾಣಲಿಂಗವಾದಾತ, ಬಸವಣ್ಣ.
ಎನ್ನ ಕಾರಣತನುವಿಂಗೆ ತೃಪ್ತಿಲಿಂಗವಾದಾತ, ಬಸವಣ್ಣ.
ಇಂತೆಂದರಿದೆನಾಗಿ, ಗವರೇಶ್ವರಲಿಂಗದಲ್ಲಿ ಆನು ಸುಖಿಯಾಗಿರ್ದೆನಯ್ಯಾ
- ಶರಣ ಮೇದರ ಕೇತಯ್ಯ
4.ವಚನ
ಎನ್ನ ಪ್ರಾಣಕ್ಕೆ ಆಚಾರಲಿಂಗವಾದಾತ ಬಸವಣ್ಣ.
ಎನ್ನ ಜಿಹ್ವೆಗೆ ಗುರುಲಿಂಗವಾದಾತ ಬಸವಣ್ಣ.
ಎನ್ನ ನೇತ್ರಕ್ಕೆ ಶಿವಲಿಂಗವಾದಾತ ಬಸವಣ್ಣ.
ಎನ್ನ ಶ್ರೋತ್ರಕ್ಕೆ ಪ್ರಸಾದಲಿಂಗವಾದಾತ ಬಸವಣ್ಣ.
ಎನ್ನ ಹೃದಯಕ್ಕೆ ಮಹಲಿಂಗವಾದಾತ ಬಸವಣ್ಣ.
ಇಂತಿದನರಿದೆನಾಗಿ ಗವರೇಶ್ವರಲಿಂಗದಲ್ಲಿರ್ದೆನಯ್ಯಾ.
- ಶರಣ ಮೇದರ ಕೇತಯ್ಯ
5.ವಚನ
ಎನ್ನ ಜ್ಞಾನ, ಚೆನ್ನಬಸವಣ್ಣನಲ್ಲಿ ಬಯಲಾಯಿತ್ತು.
ಎನ್ನ ವೈರಾಗ್ಯ, ಪ್ರಭುದೇವರಲ್ಲಿ ಬಯಲಾಯಿತ್ತು.
ಇಂತೀ ಮೂವರು ಒಬ್ಬರೊಂದ ಬಯಲಮಾಡಿದರಾಗಿ,
ಗವರೇಶ್ವರಲಿಂಗದಲ್ಲಿ ನಿಶ್ಚಿಂತವಾಯಿತ್ತು.
- ಶರಣ ಮೇದರ ಕೇತಯ್ಯ
- ✍️ Dr.Prema Pangi
#ಪ್ರೇಮಾ_ಪಾಂಗಿ,#ಮೇದರ ಕೇತಯ್ಯ
Comments
Post a Comment