ಶರಣ ಪರಿಚಯ : ಮಡಿವಾಳ ಮಾಚಿದೇವರು
ಶರಣ ಪರಿಚಯ : ಮಡಿವಾಳ ಮಾಚಿದೇವರು *ವೀರಗಣಾಚಾರಿ ಮಡಿವಾಳ ಮಾಚಿದೇವರು*: ಗಣಾಚಾರಸಂಪನ್ನ ವೀರ ಶರಣ, ವೀರಗಣಾಚಾರಿ ಎಂದೇ ಹೆಸರು ಮಾಡಿದ ವೀರನಿಷ್ಠೆಯ 12 ನೆಯ ಶತಮಾನದ ಶರಣರು.
ವಿಜಾಪುರ ಜಿಲ್ಲೆಯ ಸಿಂಧಗಿ ತಾಲೂಕಿನ ದೇವರ ಹಿಪ್ಪರಗಿಯಲ್ಲಿ ಪರುವತಯ್ಯ, ಸುಜ್ನಾನವ್ವ ದಂಪತಿಗಳ ಪುತ್ರ ರತ್ನ ಶರಣ ಮಡಿವಾಳ ಮಾಚಿದೇವರು. ದೇವರ ಹಿಪ್ಪರಿಗೆ ಇವರ ಜನ್ಮಸ್ಥಳ. ಕಾರ್ಯಕ್ಷೇತ್ರ ಕಲ್ಯಾಣ. ಆರಾಧ್ಯದೈವ ಕಲ್ಲಿನಾಥ. ಕಾವ್ಯ ಪುರಾಣಗಳಲ್ಲಿ ಇವರನ್ನು ವೀರಭದ್ರನ ಅವತಾರವೆಂದು ಬಣ್ಣಿಸಲಾಗಿದೆ. ಶಾಸನ ಶಿಲ್ಪಗಳಲ್ಲಿಯೂ ಇವರಿಗೆ ಎಡೆ ಲಭಿಸಿದೆ. ಶರಣರ ಬಟ್ಟೆಗಳನ್ನು ತೊಳೆದು ಶುಚಿ ಮಾಡುವುದು ಇವರ ಕಾಯಕ.
ಅನುಭವ ಮಂಟಪ ಕಟ್ಟುವಲ್ಲಿ ಮಡಿವಾಳ ಮಾಚಿದೇವರ ಕಾಯಕ ಅತಿ ಮಹತ್ವದ್ದು. ದೇಶದ ನಾನಾ ಭಾಗಗಳಿಂದ ಕಲ್ಯಾಣಕ್ಕೆ ಬರುವವರಿಗೆ ಪರೀಕ್ಷಿಸಿ , 'ಮಡಿ' ಹಾಸಿ ಸ್ವಾಗತಿಸುವ ಕೆಲಸ ಅವರದಾಗಿತ್ತು. ಮಾಚಿದೇವರ ಪರೀಕ್ಷೆಗೊಳಪಡದ ಹೊರತು ಕಲ್ಯಾಣಪುರ ಪ್ರವೇಶದ ಪ್ರಮಾಣ ಪತ್ರ ಹೊರಗಿನಿಂದ ಬರುವವರಿಗೆ ಸಿಗುತ್ತಿರಲಿಲ್ಲವೆಂಬುದು ಮಾಚಯ್ಯನವರ ಮಹಾ ಘನತೆಗೆ ಸಾಕ್ಷಿಯಾಗಿದೆ...
ಪಂಚಭೂತಗಳು, ಚಂದ್ರ, ಸೂರ್ಯ, ಆತ್ಮ ಇವರಾರೂ ದೈವವಲ್ಲ, ಬಸವಣ್ಣನೊಬ್ಬನೇ ದೈವವೆಂದು ಹೇಳುವಲ್ಲಿ ಮತ್ತು ಒಂದು ವಚನದಲ್ಲಿ ಪರಮಾತ್ಮನನ್ನು ಸಂಭೋದಿಸುತ್ತ "ನಿಮ್ಮ ಧ್ಯಾನದಲ್ಲಿರಿಸಲೊಲ್ಲದೆ ಬಸವಣ್ಣನ ಧ್ಯಾನದಲ್ಲಿರಿಸಯ್ಯ ಎನ್ನನೂ" ಎಂದ ಪ್ರಖರ ಬಸವಾಭಿಮನಿ ಮತ್ತು ಅವರ ಆಪ್ತ ಶರಣ. ಕಲ್ಯಾಣದ ಬಗೆಗೆ ಮನತುಂಬಿ ಮಾತನಾಡುವ ಮಾಚಿದೇವ ಇಲ್ಲಿ ಬಸವಣ್ಣನೂ ನಾನೂ ಕೂಡಿ ಹುದುಲಿರ್ದೆವು ಎನ್ನುವರು. ಲಿಂಗವಂತನಾದಮೇಲೆ ತನ್ನ ಪೂರ್ವಕಾಲದ ಭವಿ ತಂದೆ-ತಾಯಿ ಬಂಧು-ಬಳಗ, ಸುತ ಸೋದರರ ಮೋಹ ಬಿಟ್ಟಲ್ಲದೆ ಶಿವಭಕ್ತಿಯ ನೆಲೆ ಸಿಕ್ಕದು; ವೇಷಧಾರಿಗಳು ಸೂಳೆವಾರು; ಸೂಳೆ, ಸುರೆ, ಅನ್ಯದೈವ, ತಾಳೆಹಣ್ಣು ಇವುಗಳ ಸಂಬಂದವಿರುವವನು ಭಕ್ತನಲ್ಲ,ಅವನು ಶಿವನದ್ರೋಹಿ, ಗುರುದ್ರೋಹಿ ಆಗುವನು, ಎಂದಿರುವರು. ಒಂದು ವಚನದಲ್ಲಿ ಕೆಂಬಾವಿ ಭೋಗಣ್ಣನ ಹಿಂದೆ ಲಿಂಗಗಳು ಹೋದದ್ದು ತಿಳಿಸಿದ್ದಾರೆ. ಕೊಲ್ಲಲಾಗದು ನಿಂದಿಸಲಾಗದು, ಯಾರನ್ನು ಮಾರ್ಮಿಕವಾಗಿ ನುಡಿಯಲಾಗದು, ಪರಸ್ತ್ರಿಯರನ್ನು ಬಯಸಬಾರದು, ಹೀಗೆ ಪಾಲಿಸಿದರೆ ಕೈಲಾಸ ಅಂಗೈ ಮೇಲಣ ನೆಲ್ಲಿಕಾಯಿ ಎನ್ನುವರು.
*ಪುರಾಣ ಕೃತಿಗಳಲ್ಲಿ ಮಾಚಿದೇವರು*:
ಮಡಿವಾಳ ಮಾಚಿದೇವರ ಕೆಲವು ಪ್ರಸಂಗಗಳು ಜನರಲ್ಲಿ ಕಥಾಸ್ವರೂಪ ಪಡೆದಿವೆ.
ಮೊದಲನೆಯ ಪ್ರಸಂಗ:
ನುಲಿಯ ಚಂದಯ್ಯ ತನ್ನ ಕಾಯಕಕ್ಕೆ ಬೇಕಾದ ಹುಲ್ಲನ್ನು ಕೆರೆಯಲ್ಲಿ ಕುಯ್ಯುತ್ತಿದ್ದಾಗ ಧರಿಸಿದ ಇಷ್ಟಲಿಂಗ ಜಾರಿ ಕೆರೆಯೊಳಗೆ ಬೀಳುತ್ತದೆ. ಜಾರಿಬಿದ್ದ ಲಿಂಗ ಮತ್ತೇಕೆ? ಭಾವ ಲಿಂಗವೊಂದನ್ನೇ ಪೂಜಿಸಿದರೆ ಸಾಕೆಂದು ಹುಲ್ಲಿನ ಹೊರೆ ಹೊತ್ತು ಮನೆಗೆ ಮರಳುವನು. ಆಗ ಮಾಚಿತಂದೆಗಳು 'ಸವಿ ಬೇಕು ಆದರೆ ಹಣ್ಣು ಬೇಡವೆಂದರೆ ಹೇಗೆ? ಗುರು ಪೂಜೆ ಅರಿದೊಡೆ ಲಿಂಗಪೂಜೆ ಬಿಡಲಾಗದೆಂದು ಚಂದ್ರಯ್ಯನವರ ತಪ್ಪನ್ನು ತಿಳಿಸಿ ಅರಿವನ್ನುಂಟುಮಾಡುವರು.
ಎರಡನೆಯ ಪ್ರಸಂಗ:
'ಬೇಡುವ ಭಕ್ತರಿಲ್ಲದೆ ಬಡವನಾದೆನೆಂಬ' ಬಸವಣ್ಣನವರ ಮಾತಿಗೆ ಮಾಚಿದೆವರು ಬಸವಣ್ಣನವರಿಗೆ ' ನೀವೊಬ್ಬರೇ ದಾನ ಮಾಡಲು ಹುಟ್ಟಿದ ದಾನಿಗಳೇ' ? ಎಂದು ಪ್ರಶ್ನಿಸುತ್ತಾರೆ. ಮುಂದೆ ಎನ್ನ ಮಹಾನುಭಾವರ ಬಡತನ ತೋರುವೆನೆಂದು ಪಾದದಿಂದ ನೀರನ್ನು ಚಿಮ್ಮಲು ಆ ನೀರು ಹನಿಗಳೆಲ್ಲ ಮುತ್ತು ರತ್ನಗಳಾದವು. ಹೀಗೆ 'ವಿನಯ, ಇಂದ್ರಿಯ ನಿಗ್ರಹ, ನಿರಹಂಕಾರಗಳು ಭಕ್ತಿಯ ಕುರುಹು' ಎಂದು ತಿಳಿಸುತ್ತಾರೆ.
ಮೂರನೆಯ ಪ್ರಸಂಗ:
ಮತ್ತೊಂದು ಸಂದರ್ಭದಲ್ಲಿ ಮೇದರ ಕೇತಯ್ಯ ಬಿದಿರು ಕಡಿಯುವಾಗ ಕೆಳಗೆ ಬೀಳುತ್ತಾನೆ. ಎದೆಗೆ ಬಿದಿರು ಮೊಳೆ ಚುಚ್ಚಿ ಕೇತಯ್ಯ ಶಿವ ಸನ್ನಿಧಿ ಸೇರುತ್ತಾನೆ. ಆಗ ಬಸವಣ್ಣ ನವರು ಮಾಚಯ್ಯನವರನ್ನು ಕರೆಸುತ್ತಾರೆ, ಮಾಚಯ್ಯನವರೂ ಬಂದು ಶಿವಶರಣರ ಪ್ರಾಣವೇ ತನ್ನ ಪ್ರಾಣವೆಂದು ನಂಬಿದ ಬಸವಣ್ಣ ಕೇತಯ್ಯ ಸತ್ತರು ಎಂದು ತಿಳಿದ ನಂತರವೂ ನೀವು ಇನ್ನೂ ಜೀವಂತವಾಗಿದ್ದು ನಿಮ್ಮ ವಚನ ಪಾಲಿಸಿಲ್ಲವೆಂದ. ಇದನ್ನರಿತ ಬಸವಣ್ಣ ನವರೂ ಪ್ರಾಣ ಬಿಡುವರು. ಆ ಪ್ರಾಣ ಕೇತಯ್ಯನನ್ನು ಹಿಂಬಾಲಿಸುತ್ತದೆ. ಬಸವಣ್ಣನವರ ನಿಷ್ಠೆ ಮೆಚ್ಚಿದ ಮಾಚಯ್ಯ, 'ಇಬ್ಬರ ' ಪ್ರಾಣಗಳನ್ನು ಶಿವನಿಂದ ಮರಳಿ ಪಡೆದನೆಂದು ತಿಳಿದು ಬರುತ್ತದೆ.(ಮಾಚಯ್ಯ ನವರು ಪ್ರಜ್ಞೆ ತಪ್ಪಿದ ಇಬ್ಬರನ್ನೂ ಶುಶ್ರೂಷೆ ಮೂಲಕ ಪ್ರಜ್ಞೆಗೆ ತಂದಿರಬಹುದು)
ನಡೆ-ನುಡಿಯಲ್ಲಿ ತಪ್ಪಿದ ವ್ಯಕ್ತಿ ಇಂಥವರೇ ಆಗಿರಲಿ ಆಚರಣೆ ಪ್ರಸಂಗ ಬಂದಾಗ ದೇವರನ್ನೂ, ಗುರು ಬಸವಣ್ಣರನ್ನೂ ಕೂಡಾ ಪ್ರಶ್ನಿಸುವ ದಿಟ್ಟ ನೇರಪ್ರವೃತ್ತಿ ಮಾಚಯ್ಯನವರದಾಗಿತ್ತು.
ನಾಲ್ಕನೆಯ ಪ್ರಸಂಗ:
ಹಿಪ್ಪರಿಗೆಯಿಂದ ಕಲ್ಯಾಣಕ್ಕೆ ನಡೆದು ಬರುವಾಗ ಭೀಮರತಿ ಹೊಳೆ ಪ್ರವಾಹದಿಂದ ಕಟ್ಟಿರಲು, ಹರಿಗೋಲ ಹಂಗಿಲ್ಲದೆ ಶಿವನನ್ನು ನೆನೆಯಲು ನದಿ ಇಬ್ಬಾಗವಾಯ್ತು. ಆ ಮಾರ್ಗ ಮಧ್ಯದಿಂದ ಮಾಚಿತಂದೆ ನಡೆದು ಬರುತ್ತಾರೆ.
ಐದನೆಯ ಪ್ರಸಂಗ:
ಬಿಜ್ಜಳ ತನ್ನ ಬಟ್ಟೆಯನ್ನು ಮಡಿ ಮಾಡಿಸಿಕೊಡಲು ಬಸವಣ್ಣನವರಿಗೆ ದುಂಬಾಲು ಬಿದ್ದನು. ಮಡಿವಾಳಯ್ಯ ಪರಮ ಭಕ್ತ , ಅವನನ್ನು ಅಗಸನೆಂದು ಭಾವಿಸದಿರಲು ಬಸವಣ್ಣ ತಿಳಿಹೇಳಿದರು , ಅದನ್ನು ಲೆಕ್ಕಿಸದೆ ಬಿಜ್ಜಳ ಮಾಸಿದ ಬಟ್ಟೆಗಳ ಗಂಟನ್ನು ಮಡಿ ಮಾಡಲು ಕಳಿಸಿದ. ಭವಿ ಬಿಜ್ಜಳನ ಮೈಲಿಗೆ ಬಟ್ಟೆಯ ಗಂಟನ್ನು ಕಂಡ ಮಡಿವಾಳಯ್ಯ ಕೋಪಗೊಂಡು ಸಿಟ್ಟಿನಿಂದ ನೋಡಲು ಆ ಕ್ಷಣದಲ್ಲಿ ಗಂಟು ಉರಿದು ಹೋಯಿತು.
ಇದು ಮಡಿವಾಳಯ್ಯನ ಅಹಂಕಾರವೆಂದು ಭಾವಿಸಿದ ಬಿಜ್ಜಳ ಅವರನ್ನು ಸೆರೆ ಹಿಡಿದು ತರಲು ಕುಂಟ -ಕುರುಡರ ಪಡೆಯೊಂದನ್ನು ಕಳುಹಿಸಿದ. ಮಡಿವಾಳಯ್ಯ ತನ್ನ ಶಕ್ತಿಯಿಂದ ಕುರುಡರಿಗೆ ಕಣ್ಣು ಕಾಣುವಂತೆ ಮತ್ತು ಕುಂಟರಿಗೆ ಕಾಲು ಬರುವಂತೆ ಮಾಡಿ ಅಂಗ ಸೌಷ್ಟವರನ್ನಾಗಿ ಮಾಡಿ ಕಳುಹಿಸಿದ. ಇದರಿಂದ ಉರಿದೆದ್ದು ಬಿಜ್ಜಳ ಮದೋನ್ಮತ್ತ ಆನೆಯನ್ನ ಮಾಚಯ್ಯನ ಮೇಲೆ ಹರಿ ಹಾಯಲು ಬಿಟ್ಟ. ಸೈನಿಕರ ತುಕಡಿಯೊಂದನ್ನೂ ಕಳುಹಿಸಿದ.ಮಾಚಯ್ಯ ಆನೆ ಹಾಗೂ ಅವರನ್ನೆಲ್ಲ ಸದೆ ಬಡಿದು ಜಯ ಶಾಲಿಯಾದ. ಕಾಲಾಂತರದಲ್ಲಿ ಬಿಜ್ಜಳನಿಗೆ ಮಾಚಿದೇವರ ಉನ್ನತ ಮಹಿಮೆ ತಿಳಿದು ತನ್ನ ತಪ್ಪಿನ ಅರಿವಾಗಿ ಬಿಜ್ಜಳ ಶರಣಾಗತನಾಗುವನು...
ಮುಂದೆ ಕಲ್ಯಾಣ ಕ್ರಾಂತಿಯ ಸಂದರ್ಭದಲ್ಲಿ ಮಾಚಿದೇವರು ಹೊತ್ತ ಜವಾಬ್ಧಾರಿ ಗುರುತರವಾದುದು. ಶರಣರ ಜೀವ,ಶರಣ ಧರ್ಮ ಸಂರಕ್ಷಣೆ, ವಚನ ಸಾಹಿತ್ಯದ ರಕ್ಷಣೆಯ ದಂಡ ನಾಯಕತ್ವ ಜವಾಬ್ಧಾರಿ ಹೊತ್ತು , ಚೆನ್ನಬಸವಣ್ಣ , ಅಕ್ಕ ನಾಗಮ್ಮ, ಕಿನ್ನರಿ ಬೊಮ್ಮಣ್ಣ ಮೊದಲಾದವರೊಂದಿಗೆ ಮಾಚಿದೇವ, ಶರಣ ಸಮೂಹದ ಭೀಮ ರಕ್ಷೆಯಾಗಿ ನಿಂತರು. ಕಲಚೂರ್ಯ ರಾಯ ಮುರಾರಿಯನ್ನು ಎದುರಿಸಿ ಭೀಮ ನದಿಯನ್ನು ದಾಟಿ ತಲ್ಲೂರು, ಮುರಗೋಡ, ಕಡಕೋಳ,ತಡಕೋಡ, ಮೂಗ ಬಸವ, ಕಾತರವಳ್ಳಿಯಲ್ಲಿ ಅಲ್ಲಲ್ಲಿ ಕಾಳಗ ನಡೆಸಿದರು. ತಮ್ಮ ಧೈರ್ಯ, ಅನುಪಮ ಬಲದಿಂದ ಶರಣರನ್ನು, ವಚನ ಸಾಹಿತ್ಯವನ್ನು ರಕ್ಷಿಸಿದ ಸಾಹಸಿ ಮಾಚಯ್ಯ. ಉಳವಿಗೆ ಹೋಗುತ್ತಿರುವಾಗಲೆ ಮಾರ್ಗ ಮಧ್ಯದ ಮುರಗೋಡದ ಹತ್ತಿರವಿರುವ ಕಾರಿಮಣಿ (ಕಾರಿಮನೆ)ಯಲ್ಲಿ ಲಿಂಗೈಕ್ಯರಾದರು. ಇಂದಿಗೂ ಅಲ್ಲಿ ಅವರ ಗದ್ದುಗೆ ಕಾಣಬಹುದು. ಕೆಲವು ಸಂಶೋಧಕರ ಪ್ರಕಾರ ಮಾಚಯ್ಯನವರ ಗದ್ದಿಗೆ ಸಮೀಪದ ಗೊಡಚಿ ವೀರಭದ್ರೇಶ್ವರ ಗುಡಿಯಲ್ಲಿದೆ. ಕೊರಳಲ್ಲಿ ಕರಡಿಗೆ ಇರುವ ವೀರಭದ್ರನೇ ಮಾಚಯ್ಯರ ವಿಗ್ರಹ ಎಂದು ಅವರ ಅಭಿಪ್ರಾಯ. ಇನ್ನೂ ಕೆಲವು ಸಂಶೋಧಕರ ಮತ್ತು ಮಡಿವಾಳ ಸಮಾಜದ ಪ್ರಕಾರ ಮಾಚಯ್ಯನವರು ಶರಣರನ್ನು ಉಳವಿಗೆ ತಲುಪಿಸಿ ದೇವರ ಹಿಪ್ಪರಿಗಿಗೆ ಮರಳುತ್ತಾರೆ ಮತ್ತೆ ಅದೇ ತಾಲೂಕಿನ ಕಲಿಪುರ (ಈಗಿನ ಕಲಕೇರಿ)ಯಲ್ಲಿ ಗುರುಗಳಾದ ವೀರಘಂಟೆ ಯವರ ಜೊತೆಯಾಗಿ ಜೀವಂತ ಸಮಾಧಿ ಹೊಂದುತ್ತಾರೆ. ಮಾಚಿದೇವರ ಮತ್ತು ಅವರ ಗುರುಗಳಾದ ವೀರಘಂಟೇಯವರ ಜೀವಂತ ಸಮಾಧಿಗಳು ಕಲಿಕೇರಿಯಲ್ಲಿ ಇವೆ.
'ಕಲಿದೇವರದೇವ' ಅಂಕಿತದಲ್ಲಿ ಬರೆದ 354 ವಚನಗಳು ಈಗ ದೊರಿತಿವೆ. ಅವುಗಳಲ್ಲಿ ಗಣಾಚಾರ ನಿಷ್ಠೆ, ಡಾಂಭಿಕತೆ, ಕರ್ಮಠತನ, ಕ್ಷುದ್ರದೈವಾರಾಧನೆ, ಸ್ಥಾವರಲಿಂಗ ಪೂಜೆಗಳನ್ನು ಕುರಿತ ನಿಷ್ಠುರ ಟೀಕೆ ಪ್ರಮುಖವಾಗಿ ಕಂಡುಬರುತ್ತದೆ.
ವಚನಗಳು:
1.
#ಬಸವಣ್ಣ ಮಾಡಲಿಕೆ ಗುರುವಾಯಿತ್ತು.
ಬಸವಣ್ಣ ಮಾಡಲಿಕೆ ಲಿಂಗವಾಯಿತ್ತು.
ಬಸವಣ್ಣ ಮಾಡಲಿಕೆ ಜಂಗಮವಾಯಿತ್ತು.
ಬಸವಣ್ಣ ಮಾಡಲಿಕೆ ಪ್ರಸಾದವಾಯಿತ್ತು.
ಬಸವಣ್ಣ ಮಾಡಲಿಕೆ ಈರೇಳುಲೋಕವಾಯಿತ್ತು.
ಬಸವಣ್ಣನಿಂದಾದ ಕಲಿದೇವಯ್ಯ./682
2.
#ಉಡಿಯ ಲಿಂಗವ ಬಿಟ್ಟು,
ಗುಡಿಯ ಲಿಂಗಕ್ಕೆ ಶರಣೆಂಬ
ಮತಿಭ್ರಷ್ಟರನೇನೆಂಬೆನಯ್ಯಾ
ಕಲಿದೇವರದೇವ. /519
3.
#ಊರ ಕಲ್ಲಿಗೆ ಉರದ ಲಿಂಗವಡಿಯಾಗಿ ಬೀಳುವ
ಕ್ರೂರಕರ್ಮಿಗಳೆನೇನೆಂಬೆನಯ್ಯಾ ಕಲಿದೇವಯ್ಯ./522
#ಎತ್ತೆತ್ತ ನೋಡಿದಡೆ ಅತ್ತತ್ತ ಬಸವನೆಂಬ ಬಳ್ಳಿ.
ಎತ್ತಿ ನೋಡಿದಡೆ ಲಿಂಗವೆಂಬ ಗೊಂಚಲು.
ಒತ್ತಿ ಹಿಂಡಿದಡೆ ಭಕ್ತಿಯೆಂಬ ರಸವಯ್ಯಾ.
ಆಯತ ಬಸವಣ್ಣನಿಂದ, ಸ್ವಾಯತ ಬಸವಣ್ಣನಿಂದ.
ಸನ್ನಹಿತವು ಬಸವಣ್ಣನಿಂದ,
ಗುರು ಬಸವಣ್ಣನಿಂದ, ಲಿಂಗ ಬಸವಣ್ಣನಿಂದ.
ಜಂಗಮ ಬಸವಣ್ಣನಿಂದ.
ಪಾದೋದಕ ಬಸವಣ್ಣನಿಂದ, ಪ್ರಸಾದ ಬಸವಣ್ಣನಿಂದ.
ಅತ್ತ ಬಲ್ಲಡೆ ನೀವು ಕೇಳಿರೆ, ಇತ್ತ ಬಲ್ಲಡೆ ನೀವು ಕೇಳಿರೆ.
ಬಸವಾ ಬಸವಾ ಬಸವಾ ಎಂದು ಮಜ್ಜನಕ್ಕೆರೆಯದವನ ಭಕ್ತಿ,
ಶೂನ್ಯ ಕಾಣಾ, ಕಲಿದೇವರದೇವಾ. /526
5.
#ಎನಗೆ ಶಿವ ತಾನೀತ ಬಸವಣ್ಣನು
ಮರ್ತ್ಯಲೋಕವನು ಪಾವನವ ಮಾಡುವಲ್ಲಿ.
ಎನಗೆ ಗುರು ತಾನೀತ ಬಸವಣ್ಣನು
ಎನ್ನ ಭವರೋಗವ ಛೇದಿಸಿ ಭಕ್ತನೆನಿಸುವಲ್ಲಿ.
ಎನಗೆ ಲಿಂಗ ತಾನೀತ ಬಸವಣ್ಣನು
ಘನವಿಸ್ತಾರವಪ್ಪ ನಿಜಮಹಿಮೆಯುಳ್ಳಲ್ಲಿ.
ಎನಗೆ ಜಂಗಮ ತಾನೀತ ಬಸವಣ್ಣನು
ಅನಾದಿಸಂಸಿದ್ಧ ಘನಪ್ರಸಾದರೂಪನಾದಲ್ಲಿ.
ಎನ್ನ ನಿಂದ ನಿಲುಕಡೆಯೀತ ಬಸವಣ್ಣನು
ಎನ್ನ ಸರ್ವಸ್ವಾಯತವ ಮಾಡಿ ಸಲಹುವಲ್ಲಿ.
ಇದು ಕಾರಣ, ಕಲಿದೇವರದೇವರು ಸಾಕ್ಷಿಯಾಗಿ
ಎನ್ನ ಪೂರ್ವಾಚಾರಿ ಸಂಗನಬಸವಣ್ಣನ
ಕರುಣದಿಂದಲಾನು ಬದುಕಿದೆನು. /527
6.
#ಗುರು ಕೊಟ್ಟ ಲಿಂಗ ತನ್ನ ಕರಸ್ಥಲದಲ್ಲಿರುತಿರಲು,
ಧರೆಯ ಮೇಲೆ ಪ್ರತಿಷ್ಠಿಸಿದ ಭವಿಶೈವದೈವ,
ತೀರ್ಥಕ್ಷೇತ್ರಂಗಳಿಗೆ ಹರಿದುಹೋಗುವ ಪರವಾದಿಗಳಿಗೆ
ಅಘೋರನರಕ ತಪ್ಪದೆಂದ, ಕಲಿದೇವಯ್ಯ./581
7.
#ಬಸವಣ್ಣನ ನೆನೆವುದೆ ಷೋಡಶೋಪಚಾರ.
ಬಸವಣ್ಣನ ನೆನೆವುದೆ ಪರಮತತ್ವ.
ಬಸವಣ್ಣನ ನೆನೆವುದೆ ಮಹಾನುಭಾವ.
ಕಲಿದೇವಾ, ನಿಮ್ಮ ಶರಣ ಬಸವಣ್ಣನ ನೆನೆದು,
ಸಮಸ್ತಗಣಂಗಳೆಲ್ಲರೂ
ಅತಿಶುದ್ಧರಾದರಯ್ಯ. /
8.
#ಅಯ್ಯಾ, ತನ್ನಾದಿ ಮಧ್ಯಾವಸಾನವ ತಿಳಿದು,
ಭವಿ ಭಕ್ತ, ಆಚಾರ ಅನಾಚಾರ, ಯೋಗ್ಯ ಅಯೋಗ್ಯ,
ಅರ್ಪಿತ ಅನರ್ಪಿತ, ಸುಸಂಗ ದುಸ್ಸಂಗ,
ಸುಚಿತ್ತ ಕುಚಿತ್ತ, ಸುಬುದ್ಧಿ ಕುಬುದ್ಧಿ,
ಅಹಂಕಾರ ನಿರಹಂಕಾರ, ಸುಮನ ಕುಮನ,
ಸುಜ್ಞಾನ ಅಜ್ಞಾನ, ಸದ್ಭಾವ ದುರ್ಭಾವ, ಪಾಪ ಪುಣ್ಯ,
ಧರ್ಮ ಕರ್ಮ, ಸ್ವರ್ಗ ನರಕ, ಇಹಪರವೆಂಬ
ಭೇದಾಭೇದವ ತಿಳಿದು, ಶೈವಮಾರ್ಗದಷ್ಟಾಂಗಯೋಗವನುಳಿದು,
ವೀರಶೈವ ಶಿವಯೋಗಸಂಪನ್ನನಾಗಿ
ಭಕ್ತಿ ಜ್ಞಾನ ವೈರಾಗ್ಯದಲ್ಲಾಚರಿಸಿ, ಬಕಧ್ಯಾನವನುಳಿದು,
ರಾಜಹಂಸನ ಹಾಗೆ ಅಸತ್ಯವನುಳಿದು,
ಸುಸತ್ಯದಲ್ಲಾಚರಿಸುವ ಭಕ್ತ ಜಂಗಮವೇ ದ್ವಿತೀಯ ಶಂಭುವೆಂದು
ಅವರಂಗಣವ ಕಾಯ್ದು, ಅವರುಟ್ಟುದ ತೊಳೆದು,
ಅವರೊಕ್ಕುದ ಕೈಕೊಂಡು, ಅವರುಗಳ ಹಾರೈಸಿ,
ಅವರ ಕಡೆಬಾಗಿಲ ಕಾಯ್ದು, ಅವರ ತೊತ್ತಿನ ತೊತ್ತಾಗಿ
ಬದುಕಿದೆ ಕಾಣಾ, ಕಲಿದೇವರದೇವ./25
#ಅಂಧಕಾರದ ದೆಸೆಯಿಂದ ಚಂದ್ರನ ಪ್ರಭೆಯಾಯಿತು.
ನಿಂದಕರ ನುಡಿಯ ಏಡಿಸಲ್ಕೆ ಶಿವಭಕ್ತಿಯ ಪ್ರಭೆಯಾಯಿತು.
ಅಹುದೆಂದಡೆ ಅಲ್ಲವೆಂದತಿಗಳೆವರು.
ಕುತರ್ಕ ಶಾಸ್ತ್ರದಿಂದ ಯಮಗತಿಗರ ಕೂಡೆ
ನಾನಾ ಜನ್ಮಕ್ಕೇರದೆ, ಶಿವಾಚಾರದ ಪಥವ ತೋರಿಸಯ್ಯಾ
ಕಲಿದೇವರದೇವ. /9
10.ಸುಖವೊಂದು ಕೋಟಿ ಬಂದಲ್ಲಿ ಬಸವಣ್ಣನ ನೆನೆವುದು.
ದುಃಖವೊಂದು ಕೋಟಿ ಬಂದಲ್ಲಿ ಬಸವಣ್ಣನ ನೆನೆವುದು.
ಲಿಂಗಾರ್ಚನೆಯ ಮಾಡುವಲ್ಲಿ ಬಸವಣ್ಣನ ನೆನೆವುದು.
ಜಂಗಮಾರ್ಚನೆಯ ಮಾಡುವಲ್ಲಿ ಬಸವಣ್ಣನ ನೆನೆವುದು.
ಇಂತೀ ಬಸವಣ್ಣನ ನೆನೆದಲ್ಲದೆ ಭಕ್ತಿಯಿಲ್ಲ.
ಮುಕ್ತಿಯಿಲ್ಲವೆಂದು ನಾನು ಬಸವಣ್ಣ ಬಸವಣ್ಣ
ಬಸವಣ್ಣನೆನುತಿರ್ದೆನು ಕಾಣಾ, ಕಲಿದೇವರದೇವಾ./
11.
ಆಕಾರ ನಿರಾಕಾರವಾಯಿತ್ತಲ್ಲಾ ಬಸವಣ್ಣ.
ಪ್ರಾಣ ನಿಃಪ್ರಾಣವಾಯಿತ್ತಲ್ಲಾ ಬಸವಣ್ಣ.
ಅಂಗಜಂಗಮದ ಮಾಟ ಸಮಾಪ್ತಿಯಾಯಿತ್ತಲ್ಲಾ ಬಸವಣ್ಣ.
ನಿಃಶಬ್ದವೇದ್ಯವಾದೆಯಲ್ಲಾ ಬಸವಣ್ಣ.
ಕಲಿದೇವರದೇವನ ಹೃದಯಕಮಲವ ಹೊಕ್ಕು,
ದೇವರಿಗೆ ದೇವನಾಗಿ ಹೋದೆಯಲ್ಲಾ ಸಂಗನಬಸವಣ್ಣ./
ಇದು ಬಸವಣ್ಣನವರು ಬಯಲಾದನಂತರ ಮಾಚಿದೇವರು ಶೋಕತಪ್ತರಾಗಿ ರಚಿಸಿದ ಚರಮಗೀತೆ.
- ✍️Dr Prema Pangi
#ಪ್ರೇಮಾ_ಪಾಂಗಿ, #ಮಡಿವಾಳ_ಮಾಚಿದೇವರು
Picture post created by me.A small service to popularise Sharana Sahitya.
Comments
Post a Comment