ಅಷ್ಟಾವರಣ - ಜಂಗಮ
ಅಷ್ಟಾವರಣದಲ್ಲಿ ಮೂರನೆಯ ಆವರಣ ಜಂಗಮ.
ಜಂಗಮ ಎಂದರೆ ಅನಂತವಾದ ಮತ್ತು ನಿರಂತರವಾದ ಚೈತನ್ಯ.
ಜಂಗಮ ಎಂದರೆ ಚೈತನ್ಯರೂಪಿ ದೇವರು, ಜಂಗಮ ಎಂದರೆ ಚೈತನ್ಯರೂಪಿ ಅರಿವು, ಜಂಗಮ ಎಂದರೆ ಚೈತನ್ಯವನ್ನು ಒಳಗೊಂಡ ಇಡೀ ವಿಶ್ವ.
ಜಂಗಮ ಎಂದರೆ ಜೀವಜಗತ್ತು,
ಜಂಗಮ ಎಂದರೆ ಸಮಾಜ.
ಜಂಗಮ ಎಂದರೆ, ಮಾನವಕುಲ ಬದುಕಲು ಯೋಗ್ಯವಾಗುವಂಥ ಶರಣ ಸಮಾಜ ನಿರ್ಮಾಣಕ್ಕಾಗಿ ಶರಣಸಂಕುಲ ಕಂಡುಕೊಂಡ
"ಸತ್ಯವನ್ನು ಅರಿಯುವ ಅನುಭಾವ ಪಡೆಯುವ ಪಥವನ್ನು" ಸಮರ್ಪಣಾಭಾವದಿಂದ ಸಾರುತ್ತ ಸಾಗುವ ಶರಣ.
ಹೀಗೆ ಜಂಗಮ ಪದ ನಾನಾ ಅರ್ಥಗಳನ್ನು ಕೊಡುತ್ತ ಶರಣರ ಚಳವಳಿಯ ವಿರಾಟ್ ದರ್ಶನವನ್ನು ಮಾಡಿಸುತ್ತದೆ.
ಶರಣಧರ್ಮದಲ್ಲಿ ಜಂಗಮ ಒಂದು ವಿಶಿಷ್ಟವಾದ ಪದ. ಶರಣರು ವಚನಗಳಲ್ಲಿ ಜಂಗಮ ಪದವನ್ನು ನಿರಾಭಾರವಾಗಿ ಚರಿಸುವ ಶಿವಾನುಭವಿ,
ಸಾಕಾರಗೊಂಡ ಶಿವಕಳೆ, ಶಿವಯೋಗಿ,
ಶೂನ್ಯದಿಂದ ಹೊರಹೊಮ್ಮಿದ ಪರಶಿವ ತತ್ವ ಮತ್ತು ಅದರಿಂದ ರಚನೆಯಾದ ಸದಾ ಚಲಿಸುತ್ತಿರುವ ಬ್ರಹ್ಮಾಂಡ ಹೀಗೆ ವಿವಿಧ ಅರ್ಥಗಳಲ್ಲಿ ಉಪಯೋಗಿಸಿದ್ದಾರೆ.
*ಜಂಗಮ ವ್ಯಕ್ತಿಯಾಗಿ:*
ಬಹಿರಂಗದ ಅಷ್ಟಾವರಣದಲ್ಲಿ ಜಂಗಮ ಎಂದರೆ ಲಿಂಗಾಯತ ತತ್ವಗಳನ್ನು ಅರಿತು ಅನುಭಾವಿಸಿ ಸಮಾಜದಲ್ಲಿ ಪ್ರಸಾರ ಮಾಡುತ್ತ ಲಿಂಗಾಯತ ತತ್ವಗಳನ್ನು ಅನುಷ್ಠಾನಕ್ಕೆ ತರಲು ಸತತ ಪ್ರಯತ್ನಿಸುವ ವ್ಯಕ್ತಿ. ನಿರಾಭಾರವಾಗಿ ಚರಿಸುವ ಶಿವಾನುಭವಿ. ಚಲನಶೀಲ ಕ್ರಿಯಾಶೀಲ ಚೇತನವೇ ಜಂಗಮ. ಅನಿಕೇತನನಾಗಿ' ಜಗದ್ಭರಿತನಾಗಿ ಸಂಚರಿಸುವವನು. ಜಂಗಮ ನಿಂದಿಸಿದಲ್ಲಿ ಕುಂದುವನಲ್ಲ, ವಂದಿಸಿದಲ್ಲಿ ಆನಂದಮಯನಲ್ಲ. ಬಂದ ಉಪಚಾರದಲ್ಲಿ ಸಂದುಗೊಳ್ಳುವನಲ್ಲ. ಬಂದಲ್ಲಿ ನೀಡದಿದ್ದರೆ ಕ್ರೋಧನಲ್ಲ. ದೇಹ, ಪ್ರಾಣ ಮತ್ತು ಮನಸ್ಸಿನ ಧರ್ಮಗಳನ್ನು ಮೀರಿದವನು.
ಘನಲಿಂಗಜಂಗಮಕ್ಕೆ ಸೀಮೆಯೆಲ್ಲಿಯದು
ಅಂಬುದಿಗೆ ಸೀಮೆಯಲ್ಲದೆ
ಹರಿವ ನದಿಗೆ ಸೀಮೆಯೆಲ್ಲಿಯದು
ಭಕ್ತಂಗೆ ಸೀಮೆಯಲ್ಲದೆ
ಜಂಗಮಕ್ಕೆ ಸೀಮೆಯುಂಟೆ
ಕೂಡಲಸಂಗಮದೇವಾ. / 1300
ಎನ್ನುತ್ತಾರೆ ಬಸವಣ್ಣನವರು.
ಸಮುದ್ರಕ್ಕೆ, ಸರೋವರಕ್ಕೆ ಮತ್ತು ಕೆರೆಗಳಿಗೆ ಸೀಮೆ ಇರುವಂತೆ ಸ್ಥಾವರಕ್ಕೆ ಮತ್ತು ಭಕ್ತನಿಗೆ ಸೀಮೆ ಇರುವುದು.
ಆದರೆ ಘನಲಿಂಗಕ್ಕೆ ಮತ್ತು ಜಂಗಮಕ್ಕೆ ಸೀಮೆ ಇಲ್ಲ. ಹರಿವ ನದಿಯಂತೆ ಚಲನ ಶೀಲವಾದ ಜಂಗಮಕ್ಕೆ ಸೀಮೆ ಇಲ್ಲ. ಜಂಗಮ ಸೀಮೆ ಇಲ್ಲದ ನಿಸ್ಸಿಮನಾದವನು.
#ಸಮತೆಯೆಂಬ ಕಂಥೆಯ ಧರಿಸಿಪ್ಪ ನೋಡಾ ಜಂಗಮನು.
ಅಮಿತವೆಂಬ ಭಸ್ಮವ ಧರಿಸಿಪ್ಪ ನೋಡಾ ಜಂಗಮನು.
ಲಿಂಗವೆಂಬ ಕರ್ಪರವ ಕರಸ್ಥಲದಲ್ಲಿ ಧರಿಸಿಪ್ಪ ನೋಡಾ ಜಂಗಮನು.
ಸರ್ವಜೀವ ದಯಾಪಾರಿಯೆಂಬ ವಿಮಲ ರುದ್ರಾಕ್ಷಿಯ ಧರಿಸಿಪ್ಪ
ನೋಡಾ ಜಂಗಮನು.
ನಿರ್ಮೊಹವೆಂಬ ಕೌಪೀನವ ಧರಿಸಿಪ್ಪ ನೋಡಾ ಜಂಗಮನು.
ನಿಸ್ಸಂಗವೆಂಬ ಮೇಖಲಾಪರಿಪೂರ್ಣ ನೋಡಾ ಜಂಗಮನು.
ಸುಮ್ಮಾನವೆ ಕಿರೀಟವಾಗಿ, ಶುದ್ಧ ಜ್ಞಪ್ತಿಯೆ ಮುಕುಟವಾಗಿ,
ನಿರಹಂಕಾರವೆ ಬಹಿರ್ವಾಸವಾಗಿ,
ದುವ್ರ್ಯಸನ ದುಭ್ರ್ರಮೆ ಹೃಷೀಕೋತ್ಪಾತವಿಜಯ
ಶಿವಯೋಗವಾಗಿ,
ಚರಿಸುವನು ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನನೆಂಬ
ಮಹಾಜಂಗಮನು. / 1832
ಎಂದು ಸಿದ್ಧರಾಮೇಶ್ವರರು, ಜಂಗಮದ ವಿರಾಡ್ರೂಪ ವೈಭವವನ್ನು ಚಿತ್ರಿಸಿದ್ದಾರೆ. ಲಿಂಗ ಗಂಭೀರನಾದ ಕಾರಣ, ಆತ ಅಂಗ ವಿಚಾರವನ್ನರಿಯನು; ಇಂದ್ರಿಯ ವಿಕಾರವನ್ನರಿಯನು; ಪರಸತಿಯರ ನೋಡುವಲ್ಲಿ ಅಂಧಕ; ಪರಧನವ ಕಂಡಲ್ಲಿ ಹುಲ್ಲೆಯಂತೆ ಭೀತ; ದುರ್ನರರ ಸಂಭಾಷಣೆಯ ಕೇಳುವಲ್ಲಿ ಅತಿ ಮುಗ್ಧ; ದುಷ್ಕರ್ಮ ಪಥದೊಳರಸುವಲ್ಲಿ ಕಡುಜಡ; ವಿಷಯಗಳಲ್ಲಿ ನಿಷ್ಕರುಣಿ. ಹೀಗೆ ಶರಣ ಮತ್ತು ಐಕ್ಯ ಸ್ಥಲದ ನಿಲವನ್ನು ಪಡೆದು ಮಹಾಂತಜಂಗಮ, ಜಗದ್ಭರಿತನಾಗಿ ಭಕ್ತರ ಉದ್ಧಾರಕ್ಕಾಗಿ ಸಂಚರಿಸುತ್ತಾನೆ.
ಗುರುವಿನಿಂದ ಲಿಂಗವನ್ನು ಪಡೆದು ಸಾಧನೆಯಲ್ಲಿ ಮಗ್ನನಾದ ಭಕ್ತನ ಬಳಿಗೆ ಲಿಂಗದೇಹಿಯಾದ ಈ ಜಂಗಮ ಬಂದು ತನ್ನ ಅತೀತ ನಿಲವಿನಿಂದ ಭಕ್ತನಲ್ಲಿ ಶ್ರದ್ಧೆ ನಿಷ್ಟೆಗಳನ್ನು ಪ್ರಚೋದಿಸುತ್ತಾನೆ. ಭಕ್ತನಲ್ಲಿರುವ ಮಿತಿಯನ್ನು ಯಾವ ಹಂಗೂ ಇಲ್ಲದೆ ಎತ್ತಿ ತೋರಿಸುತ್ತಾನೆ.
“ಗುರು ಉಪದೇಶ ಮಂತ್ರವೈದ್ಯ ; ಜಂಗಮ ಉಪದೇಶ ಶಸ್ತ್ರವೈದ್ಯ,” ಎಂದು ಬಸವಣ್ಣನವರು ಜಂಗಮ ಪ್ರಭಾವವನ್ನು ವರ್ಣಿಸಿದ್ದಾರೆ.
ಗುರು ಉಪದೇಶ ಮಂತ್ರ ವೈದ್ಯ,ಜಂಗಮ ಉಪದೇಶ ಶಸ್ತ್ರ ವೈದ್ಯ ಭವರೋಗವ ಕಳೆವ ಪರಿಯ ನೋಡಾ
ಈ ಭವ ಎಂಬ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಗುರುವಿನ ಉಪದೇಶವು ಮಂತ್ರವೈದ್ಯರಂತೆ ಅಂದರೆ ಒಂದು ಸಿದ್ಧಾಂತದ(theory) ಪರಿಚಯವನ್ನು ಮಾಡುತ್ತದೆ, ಜಂಗಮ ಉಪದೇಶ ಅಂದರೆ ಪ್ರಾಯೋಗಿಕ (practical) ದ ಪರಿಚಯ ಮಾಡುತ್ತದೆ. ಈ ಭವವ ಗೆಲ್ಲಲು, ಕ್ರಿಯಾ ಜ್ಞಾನ ಹೇಳುವವ ಗುರು ಆದರೆ, ಜ್ಞಾನದ ವಿಸ್ತಾರ ತೋರುವವ ಜಂಗಮ.
*ಅನುಭಾವವೇ ಜಂಗಮ:*
ಅರಿವೇ ಗುರು, ಆಚಾರವೇ ಲಿಂಗ, ಅನುಭಾವವೇ ಜಂಗಮ. ಅರಿವು, ಆಚಾರ , ಅನುಭಾವಗಳ ಸಂಗಮವೇ ಜಂಗಮ.
ಅಲ್ಲಮ ಪ್ರಭುಗಳ ವಚನದಂತೆ ಆಚಾರವೇ ಲಿಂಗ, ಆ ಆಚಾರದ ಅರಿವೇ ಗುರು, ಅಂಗವೆ ಲಿಂಗ , ಚೈತನ್ಯವೇ ಜಂಗಮ. ಇಲ್ಲಿ ಭಕ್ತ ಜಂಗಮ ಒಂದೇ ನಾಣ್ಯದ ಎರಡು ಮುಖಗಳಂತೆ. ಗುರು ಲಿಂಗ ಜಂಗಮ ಈ ಮೂರಕ್ಕೂ ಅವಿನಾಭಾವ ಸಂಬಂಧವಿದ್ದು ಅದನ್ನು ಬಸವಾದಿ ಶರಣರು ಈ ವಚನಗಳಲ್ಲಿ ತಿಳಿಸಿದನ್ನು ಅರಿಯೋಣ
ತನುವಿನ ಪ್ರಾಣ ಆಚಾರ, ಮನದ ಪ್ರಾಣ ಅನುಭಾವ.
ಇದು ಕಾರಣ ಕೂಡಲಚೆನ್ನಸಂಗಮದೇವಾ,
ಲಿಂಗವನೂ ಜಂಗಮವನೂ ಬೇರರಸಲಿಲ್ಲ. / 246
ಜಂಗಮವೆಂದರೆ “ಅದು ಭವರೋಗವ ಕಳೆವ ಪರಿಯ ನೋಡಾ ಮಡಿವಾಳನ ಕಾಯಕದಂತೆ” ಎಂಬ ಮಾತು ಅರ್ಥವತ್ತಾಗಿದೆ. ಬಟ್ಟೆಗಳನ್ನು ಎತ್ತಿ ಎತ್ತಿ ಒಗೆದು ಹಿಂಡಿ ಅದರ ಕೊಳೆಯನ್ನು ತೆಗೆಯುವಂತೆ ಜಂಗಮ, ಭಕ್ತನ ಭವರೋಗಕ್ಕೆ ಮಡಿವಾಳನಾಗುತ್ತಾನೆ.
#ಆಚಾರವೆ ಲಿಂಗ,ಆ ಆಚಾದರಿವೆ ಜಂಗಮ,
ಅಂಗವೆ ಲಿಂಗ, ಚೈತನ್ಯವೆ ಜಂಗಮ,
ಆ ಜಂಗಮದ ಸೇವೆಯೆ ಲಿಂಗ,
ಕೈಕೊಂಬುದೆ ಜಂಗಮ.
ನಮ್ಮ ಗುಹೇಶ್ವರನ ಶರಣರು ಮೆಚ್ಚುವಂತೆ,
ಮಡಿವಾಳನ ಕಾಯಕದಂತೆ, ನಿರೂಪಿಸಿದ
ಚನ್ನಬಸವಣ್ಣನ ಕರುಣದಲ್ಲಿ ಬದುಕಾ ಚಂದಯ್ಯಾ. / 273
ಎನ್ನುತ್ತಾರೆ ಅಲ್ಲಮ ಪ್ರಭುಗಳು
*ಜಂಗಮವೆಂದರೆ ಲಿಂಗಸ್ವರೂಪಿ:*
ಲಿಂಗ ಮತ್ತು ಜಂಗಮದಲ್ಲಿ ಒಂದು ಬಗೆಯ ಅವಿನಾಭಾವ ಸಂಬಂಧವನ್ನು
ಶರಣರು ಕಂಡರು. ಆಚಾರವೇ ಲಿಂಗ, ಆ ಆಚಾರದ ಅರಿವೇ ಅನುಭಾವವೇ ಜಂಗಮ, ಅಂಗವೇ ಲಿಂಗ, ಚೈತನ್ಯವೇ ಜಂಗಮ." ಜಂಗಮ ಲಿಂಗ ದೇಹದಲ್ಲಿ ದೈವೀ ಸ್ವರೂಪ ಗುಣಗಳನ್ನು ಹೊಂದಿರುವ ಚಿತ್ ಚೈತನ್ಯ ಎಂದು ಜಂಗಮವೆ ನಮ್ಮಲ್ಲಿರುವ ಚೈತನ್ಯ ವೆಂದ ರು. ತನುವಿನ ಪ್ರಾಣ ಲಿಂಗವಾದರೆ ಮನದ ಪ್ರಾಣ ಜಂಗಮ.
#ಜಂಗಮವೆ ಲಿಂಗವೆನಗೆ, ಜಂಗಮವೆ ಪ್ರಾಣವೆನಗೆ.
ಕೂಡಲಸಂಗಮದೇವಯ್ಯಾ,
ಎನಗೆಯೂ ನಿನಗೆಯೂ ಜಂಗಮಪ್ರಸಾದವೆ ಪ್ರಾಣ. / 647
ಲಿಂಗವೇ ಜಂಗಮನ ದೇಹವನ್ನು ಧರಿಸಿ ಸುಳಿಯುತ್ತದೆ. ಜಂಗಮವನ್ನೇ ಲಿಂಗವೆಂದು ತಿಳಿದು ಕೂಡಿಕೊಂಡರೆ ಭವ ನಾಶ ವಾಗುವುದು ಎನ್ನುತ್ತಾರೆ ಗುರು ಬಸವಣ್ಣನವರು.
#ಜಂಗಮವೆ ಲಿಂಗವೆಂದು ಒಕ್ಕುದ ಕೊಂಡಡೆ
ಎನ್ನ ಭವಂ ನಾಸ್ತಿಯಾಯಿತ್ತು ಕೂಡಲಸಂಗಮದೇವಾ. / 62
ಲಿಂಗಕ್ಕೆ ಸಂತೃಪ್ತಿಯಾಗಬೇಕಾದರೆ ಅದು ಜಂಗಮದ ಮೂಲಕವೇ.
ಅಲ್ಲಮಪ್ರಭುಗಳು ಮೊದಲನೇ ಬಾರಿ ಕಲ್ಯಾಣಕ್ಕೆ ಬಂದಾಗ ನಡೆದ ಸಂಭಾಷಣೆ ಯಲ್ಲಿ "ಲಿಂಗಪೂಜೆಗಿಂತ 'ಜಂಗಮವೇ ಲಿಂಗವೆಂದು' ಜಂಗಮಸೇವೆಗೆ ಅಂದರೆ ಸಮಾಜಸೇವೆಗೆ ಆಧ್ಯತೆ ನೀಡಬೇಕು" ಎಂದು ಅಲ್ಲಮಪ್ರಭಗಳು ಬಸವಣ್ಣನವರಿಗೆ ಅರಿವು ಮೂಡಿಸುತ್ತಾರೆ.
“ಅಗ್ನಿಯಾಧಾರದಲ್ಲಿ ಕಬ್ಬಿಣ ನೀರುಂಬುದಯ್ಯ, ಭೂಮಿಯಾಧಾರದಲ್ಲಿ ವೃಕ್ಷ ನೀರುಂಬುದಯ್ಯ, ಜಂಗಮಕ್ಕೆ ಆಪ್ಯಾಯನವಾದರೆ ಲಿಂಗ ಸಂತುಷ್ಟಿಯಹುದಯ್ಯ” ಎನ್ನುತ್ತಾರೆ ಬಸವಣ್ಣನವರು. ಜಂಗಮ ಸೇವೆ ಇಲ್ಲದೆ ಲಿಂಗಸಾಧನೆ ಪೂರ್ಣವಾಗಲಾರದು.
ಚೆನ್ನಬಸವಣ್ಣನವರು ಹೇಳುವಂತೆ ಲಿಂಗವೇ ಕ್ಷೇತ್ರ, ಜಂಗಮವೇ ಬೀಜ.
ಲಿಂಗ ಜಂಗಮರ ಅಭೇದ್ಯ ಸಂಬಂಧವನ್ನು ಸಿದ್ಧರಾಮ ಹೀಗೆ ಹೇಳಿದ್ದಾನೆ :
#ಸಕ್ಕರೆಯ ಬಿಟ್ಟು ರುಚಿಯ ತೆಗೆಯಬಹುದೆ?
ಬೆಣ್ಣೆಯ ಬಿಟ್ಟು ಘೃತವ ತೆಗೆಯಬಹುದೆ?
ಭೂಮಿಯ ಬಿಟ್ಟು ಜಗವ ಮಾಡಬಹುದೆ?
ಜಂಗಮವಿರಹಿತ ಲಿಂಗವಿಲ್ಲ, ಲಿಂಗವಿರಹಿತ ಜಂಗಮವಿಲ್ಲ
ಕೇಳಾ,
ಕಪಿಲಸಿದ್ಧಮಲ್ಲಿಕಾರ್ಜುನಾ. / 1820
ಜಂಗಮ ಇಲ್ಲದೆ ಲಿಂಗವಿಲ್ಲ; ಲಿಂಗ ಇಲ್ಲದೆ ಜಂಗಮವಿಲ್ಲ. ಜಂಗಮನು ಲಿಂಗ ದೇಹದಲ್ಲಿ ದೈವೀ ಸ್ವರೂಪ ಗುಣಗಳನ್ನು ಹೊಂದಿರುವ ಚಿತ್ ಚೈತನ್ಯ ವುಳ್ಳಂಥವನು.
ಪರಶಿವನೇ ಜಂಗಮ ರೂಪದಿಂದ ಸಂಚರಿಸುತ್ತಾನೆ ಎಂಬಂತಹ ಮಾತುಗಳೂ ವಚನಗಳಲ್ಲಿ ಬರುತ್ತವೆ.
#ಅಯ್ಯಾ, ನೀನೆನ್ನ ಭವವ ಕೊಂದೆಹೆನೆಂದು
ಜಂಗಮಲಾಂಛನವಾಗಿ ಬಂದಡೆ
ನಾನು ಭಕ್ತನೆಂಬ ವಾಹನವಾಗಿರ್ದೆ ಕಾಣಾ
ಕೂಡಲಸಂಗಮದೇವಾ.
ಕೂಡಲಸಂಗಮನೇ ಜಂಗಮರೂಪನಾಗಿ ಬರಲು ನನ್ನ ಭವನಾಶವಾಗಿ ಭಕ್ತನಾದೆನು
ಎನ್ನುತ್ತಾರೆ ಬಸವಣ್ಣನವರು.
*ಜಂಗಮ ಎಂದರೆ ಸಮಾಜ*
ತ್ರಿವಿಧ ದಾಸೋಹದಲ್ಲಿ ಬಸವಣ್ಣನವರು ರೂಢಿಸಿಕೊಟ್ಟ ಬಹಳ ಅರ್ಥವತ್ತಾದ ಸೂತ್ರ ಇದು : “ಜಂಗಮಕ್ಕೆರೆದರೆ ಸ್ಥಾವರ ನೆನೆಯಿತ್ತು” ಎಂಬುದು. ಇಲ್ಲಿ ಜಂಗಮ ಎಂಬುದು ಬಹಳ ವ್ಯಾಪಕವಾದ ಅರ್ಥ ತೆಗೆದುಕೊಳ್ಳುತ್ತದೆ. ಸಾಕ್ಷಾತ್ಕಾರದ ಕೊನೆಯ ಹಂತದಲ್ಲಿ ನಿಂತವರನ್ನೂ ಅನುಭಾವಿಗಳನ್ನೂ ಜೀವನ್ಮುಕ್ತರನ್ನೂ ಜಗದ್ಭರಿತ ಮಹಾಂತ ಜಂಗಮರೆಂದು ಕರೆಯುವದು ರೂಢಿಯಾದರೆ, ಬಸವಾದಿ ಶರಣರು ಈ ಮಹಾಂತ ಚೈತನ್ಯಾತ್ಮಕ ನಿಲವನ್ನು ಸುಪ್ತವಾಗಿ ಉಳ್ಳ ಸಮಸ್ತ ಜೀವಕೋಟಿಗೂ ಇದನ್ನು ಅನ್ವಯಿಸಿದರು.
ವೃಕ್ಷದ ತಳಕ್ಕೆ ನೀರೆರೆದರೆ ವೃಕ್ಷ ಮೇಲೆ ಪಲ್ಲವಿಸುವಂತೆ ಲಿಂಗದ ಮುಖ ಜಂಗಮವೆಂದು ಜಂಗಮಕ್ಕೆರೆದರೆ ಸ್ಥಾವರ ನೆನೆಯುತ್ತದೆ ಎನ್ನುತ್ತಾರೆ ಬಸವಣ್ಣನವರು.
#ಮರಕ್ಕೆ ಬೇರು ಬಾಯಿಯೆಂದು ತಳುಂಕೆ ನೀರನೆರೆದಡೆ
ಮೇಲೆ ಪಲ್ಲವಿಸಿತ್ತು ನೋಡಾ.
ಲಿಂಗದ ಬಾಯಿ ಜಂಗಮವೆಂದು ಪಡಿಪದಾರ್ಥವ ನೀಡಿದಡೆ
ಮುಂದೆ ಸಕಳಾರ್ಥವನೀವನು.
ಆ ಜಂಗಮವ ಹರನೆಂದು ಕಂಡು, ನರನೆಂದು ಭಾವಿಸಿದಡೆ
ನರಕ ತಪ್ಪದು, ಕಾಣಾ ಕೂಡಲಸಂಗಮದೇವಾ. / 1021
ದೀನರು, ದುಃಖಿಗಳು, ಮರಪದಹತಿಗೆ ಗುರಿಯಾಗಿ ನರುಳುತ್ತಿದ್ದವರು ಇವರೆಲ್ಲರನ್ನೂ ಬಸವಣ್ಣನವರು ಜಂಗಮಸ್ವರೂಪರೆಂದೇ ಕಂಡರು. ಇಷ್ಠಲಿಂಗಧಾರಿಗಳಾದ ಸಮಸ್ತ ಸಮಾಜವೇ ಜಂಗಮವಾಗಿ ತೋರುವುದು. ಆ ಸಮಸ್ತ ಜನಕೋಟಿಯ ಸೇವೆ ಲಿಂಗಪೂಜೆಯ ಒಂದು ಅನಿವಾರ್ಯವಾದ ಅಂಗ ಅಂದರು ಮಾನವತಾವಾದಿ ಬಸವಣ್ಣನವರು. ಈ ಸಾಮಾಜಿಕ ನೆಲೆಗಟ್ಟಿನಲ್ಲಿ ನಿಂತು ನೋಡಿದಾಗ “ಜಂಗಮಕ್ಕೆರೆದರೆ ಸ್ಥಾವರ ನೆನೆಯಿತ್ತು” ಎಂಬ ಸೂತ್ರ ಬಹಳ ವ್ಯಾಪಕವಾದ ಮಹಾಮಂತ್ರವಾಯಿತು. ಜಂಗಮ ಅಂದರೆ ಸಾಮಾಜಿಕ ಪ್ರಜ್ಞೆ. ಜಂಗಮ ಅಂದರೆ ಸಮಷ್ಠಿ ಪ್ರಜ್ಞೆ.
*ಜಂಗಮ ಜಾತಿ ದೇಶ ಕಾಲಕ್ಕೆ ಸೀಮಾತೀತನು*
ಶರಣರು ರೂಪಿಸಿದ ಜಂಗಮಕ್ಕೂ ಸನಾತನ ಪುರೋಹಿತಶಾಹಿ ಜಾತಿ ಜಂಗಮಕ್ಕೂ ಸಂಬಂಧವೇ ಇಲ್ಲ. ಜಂಗಮ ಅನ್ನುವುದು ಹುಟ್ಟಿನಿಂದಲೂ ಜಾತಿಯಿಂದಲೂ ಬರುವಂತಹುದಲ್ಲ. ಅದು ಒಂದು ಅರ್ಹತೆ ಆಗಿದೆ. ಆಧ್ಯಾತ್ಮಿಕ ನೆಲೆಗಟ್ಟಿನಮೇಲೆ ಜಂಗಮ ತನ್ನ ಸಾಧನೆಯಿಂದ ಜಗದ್ಭರಿತನಾಗಿ ಬೆಳೆದ ಒಂದು ಮಹಾಚೇತನ. ಜಾತಿ ಕುಲ ದೇಶ ಕಾಲ ಯಾವ ಪರಿಮಿತಿಗೆ ಬಂಧಿತನಲ್ಲ. ಆ ನಿಲವಿಗೇರಿದವರು ಯಾರೇ ಆಗಲಿ, ಅವರೇ ಜಂಗಮರು. ಜಂಗಮ ಎಂಬುದೊಂದು ಜಾತಿಯಲ್ಲ, ಅದು ಅಧ್ಯಾತ್ಮಿಕದ ನಿಲುವು. ಅನುಭಾವದ ತುತ್ತು ತುದಿ. ಗುರುವಿನಿಂದ ಲಿಂಗವನ್ನು ಪಡೆದ "ಭಕ್ತ" ತನ್ನ ಸಾಧನೆಯಿಂದ ಆ ಶಿಖರವನ್ನೇರಿ ಜಂಗಮನಾಗಬಲ್ಲನು.
#ಶ್ರೀಗುರು ಶಿಷ್ಯನ ಭವಿಪೂರ್ವಾಶ್ರಯವ ಕಳೆದು ಭಕ್ತನ ಮಾಡಿದ ಬಳಿಕ
ಆ ಭಕ್ತ ಹೋಗಿ ಜಂಗಮವಾಗಿ, ಗುರುವಿನ ಮಠಕ್ಕೆ ಬಂದಡೆ
ಆ ಜಂಗಮವೆನ್ನ ಶಿಷ್ಯನೆಂದು ಗುರುವಿನ ಮನದಲ್ಲಿ ಹೊಳೆದಡೆ
ಪಂಚಮಹಾಪಾತಕ.
ಆ ಜಂಗಮಕ್ಕೆ ಎನ್ನ ಗುರುವೆಂದು ಮನದಲ್ಲಿ ಭಯಬಿತಿ ಹೊಳೆದಡೆ
ರೌರವನರಕ.
ಇಂತೀ ಭೇದವ ಕೂಡಲಚೆನ್ನಸಂಗಯ್ಯನಲ್ಲಿ ಶರಣರೆ ಬಲ್ಲರು / 1541
ಎಂಬ ವಚನದಲ್ಲಿ ಚೆನ್ನಬಸವಣ್ಣನವರು ಇದನ್ನು ಸ್ಪಷ್ಟವಾಗಿ ಹೇಳಿದ್ದಾರೆ. ಗುರುವಿನಿಂದ ದೀಕ್ಷೆಯನ್ನು ಪಡೆದ ಭಕ್ತ, ಜಂಗಮನಾಗಬಹುದು ಎಂಬುದು ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ಮಾತು. ಹೀಗೆ ಜಂಗಮತ್ವ ಎಂಬುದು ಹುಟ್ಟಿನಿಂದ ಪಡೆಯುವದಲ್ಲ. ಸ್ವಸಾಧನೆಯಿಂದ ಪಡೆಯಬಹುದಾದ ಆಧ್ಯಾತ್ಮಿಕ ನಿಲವು. ಶರಣಧರ್ಮದಲ್ಲಿ ಜಂಗಮ ಜಾತಿಯಲ್ಲ.
ಗುರುವಾಗಲೀ, ಜಂಗಮನಾಗಲಿ ತನ್ನ ಸ್ಥಾನಕ್ಕನುಗುಣವಾದ ಯೋಗ್ಯತೆಯನ್ನು ಸಾಧಿಸಿದಾಗಲೇ ಆತ ಪುರಸ್ಕೃತ, ಬಾಹ್ಯವೇಷ ಆಡಂಬರಗಳಿಂದ ಅಲ್ಲ. ಗುರು ಉಪದೇಶ ಪೂರ್ವಕ ವಾದರೆ, ಜಂಗಮ ಕಾರ್ಯ ಅನುಭಾವ ಪೂರಕ.
ಸಮಸ್ತ ಸಮಾಜವನ್ನು ತಮ್ಮ
ನಡೆ-ನುಡಿ ಗಳಿಂದ ಒಂದಾಗಿಸಿ, ಕ್ರಿಯಾಶೀಲ ವ್ಯಕ್ತಿತ್ವಗಳನ್ನ ನಿರ್ಮಿಸುವವವನೇ ಜಂಗಮ.
ಭುವಿಯ ಬೆಳಗಿಗೆ ರವಿ ಹೇಗೆ ಕಾರಣನೋ ಹಾಗೆ ಪಿಂಡಾಂಡದ ಆಂತರ್ಯದ ಜ್ಞಾನದ ಬೆಳಗಿಗೆ ಸಾಕಾರ ರೂಪದ ಗುರು, ನಿರಾಕಾರರೂಪದ ಲಿಂಗತತ್ವ , ಚಲನಶೀಲ ಜಂಗಮತತ್ವ ಕಾರಣವಾಗಬಲ್ಲವು.
#ಉದಯಮುಖದಲ್ಲಿ ಲಿಂಗದರುಶನ,
ಹಗಲಿನ ಮುಖದಲ್ಲಿ ಜಂಗಮ ದರುಶನ,
ಲೇಸು, ಲೇಸು, ಲಿಂಗವಂತಂಗೆ ಇದೇ ಪಥವು, ಸದ್ಭಕ್ತಂಗೆ ಇದೇ ಪಥವು.
ಲೇಸು ಲೇಸು ಕೂಡಲಚೆನ್ನಸಂಗಯ್ಯನಲ್ಲಿ,
ಅಚ್ಚ ಲಿಂಗೈಕ್ಯಂಗೆ! / 357*
ಎಂದು ಚಿನ್ಮಯಜ್ಞಾನಿ ಚೆನ್ನಬಸವಣ್ಣನವರು ಲಿಂಗ ಜಂಗಮದ ಮಹತ್ವ ತಿಳಿಸಿದ್ದಾರೆ.
“ಸುಳಿವ ಜಂಗಮ ಕಾಲಿಲ್ಲದೆ ಸುಳಿಯಬೇಕು; ಮಾಡುವ ಭಕ್ತ ಕೈಯಿಲ್ಲದೆ ಮಾಡಬೇಕು" ಎಂದು ಬಹಳ ಅರ್ಥವತ್ತಾದ ಮಾತಿನಲ್ಲಿ ಚೆನ್ನಬಸವಣ್ಣನವರು ಭಕ್ತ ಜಂಗಮರ ಕರ್ತವ್ಯವನ್ನೂ ಸೂಚಿಸಿದ್ದಾರೆ.
*ಜಂಗಮ ವೆಂದರೆ ಶೂನ್ಯದಿಂದ ಹೊರಹೊಮ್ಮಿದ ಪರಶಿವ ತತ್ವ* ಬಸವಣ್ಣನವರ ಪ್ರಕಾರ ಜಂಗಮವೆಂದರೆ ಅಮೂರ್ಥ ಚಲನಶೀಲತೆಯ ತತ್ವ .
ಜಂಗಮವೆಂದರೆ ಚಲನಶೀಲತೆ ಎಂಬ ಅರ್ಥವನ್ನು ಇನ್ನೂ ವ್ಯಾಪಕವಾಗಿ ಉಪಯೋಗಿಸಿ ಇಡೀ ಬ್ರಹ್ಮಾಂಡವೇ ಜಂಗಮವಾಯಿತು.
ಅಣು ಅಣುವಿನಲ್ಲಿಯ (ಎಲೆಕ್ಟ್ರಾನ್ನನಲ್ಲಿ) ಚಲನ ಶೀಲತೆ ಇದೆ. ಮಹತ್ತಾದ ವಿಶ್ವದಲ್ಲಿಯೇ ಚಲನಶೀಲತೆ ಇದೆ. ಸದಾಕಾಲ ವಿಸ್ತಾರ ವಾಗುತ್ತಿದೆ ಈ ವಿಶ್ವ. ಗ್ರಹ ನಕ್ಷತ್ರ ಸಮಸ್ತ ಆಕಾಶ ಕಾಯಗಳು ಸದಾಕಾಲ ಚಲನೆ ಯಲ್ಲಿಯೇ ಇವೆ. ಯಾವುದೂ ಸ್ಥಿರವಿಲ್ಲ. ಎಲ್ಲವೂ ಕಾಲದ ಪರಿಧಿಗೆ ಒಳಗಾಗಿವೆ. ಪರಶಿವನ ಚಿದ್ಶಕ್ತಿ ಯೇ ಆದಿಶಕ್ತಿಯಾಗಿ ಶೃಷ್ಟಿಯ ರಚನೆಯಾಯಿತು. ಇದು ಸದಾಕಾಲ ಚಲನಶೀಲಜಂಗಮ.
-✍️ Dr Prema Pangi
#ಜಂಗಮ
Comments
Post a Comment