ಪಂಚಾಚಾರ







ಪಂಚಾಚಾರ:
ಪಂಚಾಚಾರ :
ಅಷ್ಟಾವರಣಗಳು, ಪಂಚಾಚಾರಗಳು, ಷಟ್ಸ್ಥಲಗಳು  ಲಿಂಗಾಯತ ಧರ್ಮದ ಪ್ರಮುಖ ಅಂಶಗಳು.
 "ಪಂಚತತ್ವದಲ್ಲಿದ್ದು ಪರತತ್ವವನರಿಬೇಕು". ಅಂದರೆ ಪಂಚಾಚಾರಗಳನ್ನು ಪಾಲಿಸುತ್ತಲೆ,  ಷಟ್ಸ್ತಲದ ಮಾರ್ಗದಲ್ಲಿ ನಡೆದು ಪರತತ್ವವಾದ ಪರಮೇಶ್ವರನನ್ನು ಅನುಭಾವದಿಂದ ಅರಿತು ಒಂದಾಗಬೇಕು.

“ಅಷ್ಟಾವರಣವೆ ಅಂಗವಾಗಿ, ಪಂಚಾಚಾರವೇ ಪ್ರಾಣವಾಗಿ ನಡೆದು ಕಡೆಗೆ
ಚಿರಸುಖಿಯಾಗುತಿರ್ಪೆನು ನೋಡಾ” ಎನ್ನುತ್ತಾರೆ ಶರಣಧರ್ಮದ ರೂಪರೇಷೆ ಬರೆದ ಚೆನ್ನಬಸವಣ್ಣನವರು. 
ಸಾಧಕನ ಕೊನೆಯ ಗುರಿ ಲಿಂಗಾಂಗ ಸಾಮರಸ್ಯದ ಅನುಭಾವ. 
ಅದರ ಪಥ ಷಟ್‌ಸ್ಥಲ ಮಾರ್ಗ. ಅಷ್ಟಾವರಣಗಳು ಈ ಮಾರ್ಗದಲ್ಲಿ ನಡೆಯುವ ಸಾಧಕನಿಗೆ ಅಂಗವಾದರೆ ಪಂಚಾಚಾರಗಳೇ ಪ್ರಾಣ.
ಅಷ್ಟಾವರಣವೆಂಬ ಅಂಗಕ್ಕೆ ಚೈತನ್ಯ ನೀಡುವ ಪ್ರಾಣ ಈ ಪಂಚಾಚಾರಗಳು. ಪಂಚಾಚಾರ ಪಾಲಿಸದೆ ಅಷ್ಟಾವರಣಗಳಾದ ವಿಭೂತಿ ಇಷ್ಟ ಲಿಂಗ ಧರಿಸಿದರೆ ಅದು ಪಂಚಾಚಾರವೆಂಬ ಪ್ರಾಣ ವಿಲ್ಲದ ಅಷ್ಟಾವರಣದ ದೇಹದಂತೆ ಅಂದರೆ ಸತ್ತ ದೇಹಕ್ಕೆ ಸಿಂಗಾರ ಮಾಡಿದಂತೆ. ಪಂಚಪ್ರಾಣವಿಲ್ಲದ ಜಡದೇಹ ಆತ್ಮತತ್ವವನ್ನು ಕಂಡುಕೊಳ್ಳಲಾರದು - ಇದು ಶರಣರ ದೃಷ್ಟಿ. 
ನೈತಿಕ ಜೀವನವಿಲ್ಲದ ಅಷ್ಟಾವರಣಗಳು ಬರೀ  ಬಹಿರಂಗದ ಆಡಂಬರದ ಸಾಧನಗಳಾಗಬಲ್ಲುವೇ, ಹೊರತು ಸಾಧಕನಿಗೆ ಚೈತನ್ಯಾತ್ಮಕವಾದ ವಿಕಾಸವನ್ನು ತಂದುಕೊಡಲಾರವು. ಸಾಧಕ ಶರಣನಾಗಲಾರ. ಇದು  ನೈತಿಕ ಜೀವನಕ್ಕೆ ಶರಣರು ಕೊಟ್ಟ ಮಹತ್ವವನ್ನು ಎತ್ತಿ ತೋರಿಸುತ್ತದೆ. ದೇಹಕ್ಕೆ ಪಂಚಪ್ರಾಣಗಳು ಹೇಗೆ ಮುಖ್ಯವೋ ಹಾಗೇ ಶರಣರಿಗೆ ಪಂಚಾಚಾರಗಳು ಮುಖ್ಯ. "ಅಷ್ಟಾವರಣವೆ ಅಂಗವಾಗಿ ಪಂಚಾಚಾರವೇ ಪ್ರಾಣವಾಗಿ ಷಟ್ಸ್ಥಲ ಮಾರ್ಗದಲ್ಲಿ ನಡೆದರೆ ಅವನಿಗೆ ಲಿಂಗಾಂಗ ಸಾಮರಸ್ಯ ಸಿದ್ಧಿಸುವುದು”. ಇದು ಧರ್ಮದ ಪೂರ್ಣಸ್ವರೂಪವನ್ನು ನಿರೂಪಿಸುತ್ತದೆ

"ಆಚಾರ" ಎಂದರೆ ಕೇವಲ
ನೈತಿಕ ನಿಯಮಗಳ ಪಾಲನೆ ಅಥವಾ ಧಾರ್ಮಿಕ ವಿಧಿಗಳ ಅನುಸರಣೆಯಲ್ಲ. ಆಚಾರವೆಂದರೆ ಯಾಂತ್ರಿಕವಾದ ನೀತಿ ನಿಯಮಗಳ ಪರಿಪಾಲನೆಯಲ್ಲ. "ಆಚಾರ"ಎಂಬ ಮಾತನ್ನು ಬಹಳ ವ್ಯಾಪಕವಾದ ಅರ್ಥದಲ್ಲಿ ಶರಣರು ಬಳಸಿ
ದ್ದಾರೆ. ನೈತಿಕನಿಷ್ಠೆ, ಧಾರ್ಮಿಕ ಆಚರಣೆ, ಸಾಧನೆಯನ್ನು ಒಳಗೊಳ್ಳುವ ಪೂರ್ಣದೃಷ್ಟಿ ಇಲ್ಲಿ ಇದೆ.
#ಆಚಾರವೇ ಭಕ್ತಂಗೆ ಅಲಂಕಾರವು, ಆಚಾರವೇ ಭಕ್ತಂಗೆ ಸರ್ವ ಪೂಜ್ಯವು, ಇಂತಿ
ಆಚಾರವುಳ್ಳವನೇ ಭಕ್ತನು. ಆಚಾರವುಳ್ಳವನೇ ಯುಕ್ತನು, ಆಚಾರವುಳ್ಳವನ
ಮುಕ್ತನಯ್ಯ” ಎನ್ನುತ್ತಾರೆ ಶರಣರು. ಇದು ಅಂಗಕ್ರಿಯೆಗಳನ್ನು ಲಿಂಗಕ್ರಿಯೆಗಳನ್ನಾಗಿ
ಪರಿವರ್ತಿಸುವ ಕ್ರಿಯೆ. ಅಂತರಂಗದ ಅರಿವು ಮತ್ತು ಅರಿವಿನಿಂದ ಕೂಡಿದ ಆಚರಣೆ ಎರಡೂ ಸಮ್ಮಿಲನವಾಗಬೇಕು
 #ಆಚಾರವಿಲ್ಲದವರಿಗೆ ಜ್ಞಾನವಿಲ್ಲ, ಜ್ಞಾನವಿಲ್ಲದವರಿಗೆ ಭಾವ ಶುದ್ಧವಿಲ್ಲ. ಭಾವ ಶುದ್ಧವಿಲ್ಲದವರಿಗೆ ಧ್ಯಾನವಿಲ್ಲ. ಧ್ಯಾನವಿಲ್ಲದವರಿಗೆ ಪ್ರಸಾದವಿಲ್ಲ, ಪ್ರಸಾದವಿಲ್ಲದವರಿಗೆ ಮುಕ್ತಿ ಇಲ್ಲ” ಎಂಬ ಮಾತು ಶರಣರು ಆಚಾರಕ್ಕೆ
ಕೊಟ್ಟ ಈ ವ್ಯಾಪಕ ಸ್ವರೂಪವನ್ನು ಸೂಚಿಸುತ್ತದೆ.
ಧರ್ಮ ಸಿದ್ಧಾಂತಗಳೇನೆ ಇದ್ದರೂ ಆಚಾರದಲ್ಲಿ ಪರ್ಯಾಸನವಾದಾಗ ಮಾತ್ರ ಧರ್ಮದ ಸಾರ್ಥಕತೆ. 
#ಕ್ರಿಯೆಯೆ ಜ್ಞಾನ, ಆ ಜ್ಞಾನವೆ ಕ್ರಿಯೆ.
ಜ್ಞಾನವೆಂದಡೆ ತಿಳಿಯುವುದು,
ಕ್ರಿಯೆಯೆಂದಡೆ ತಿಳಿದಂತೆ ಮಾಡುವುದು
ಪರಸ್ತ್ರೀಯ ಭೋಗಿಸಬಾರದೆಂಬುದೆ ಜ್ಞಾನ;
ಅದರಂತೆ ಆಚರಿಸುವುದೆ ಕ್ರಿಯೆ.
ಅಂತು ಆಚರಿಸದಿದ್ದಡೆ ಅದೆ ಅಜ್ಞಾನ ನೋಡಾ,
ಕೂಡಲಚೆನ್ನಸಂಗಮದೇವಾ / 582

ಕರ್ಮೇಂದ್ರಿಯ, ಭಾವೇಂದ್ರಿಯ, ಜ್ಞಾನೇಂದ್ರಿಯ ಇಂತೀ ತ್ರಿವಿಧವ ಸ್ವಾನುಭಾವ
ವೆ ಸರ್ವಾಚಾರ. ಈ ಆಚಾರಗಳ ಮೂಲಕ ದುರ್ಗುಣಗಳನ್ನೂ ದೌರ್ಬಲ್ಯಗಳನ್ನೂ ದೋಷಗಳನ್ನೂ ಸಾಧಕ ಕಳೆದುಕೊಳ್ಳಬೇಕು. ಶರಣ ಗುಣಗಳನ್ನು ಸಂಪಾದಿಸಿಕೊಳ್ಳಬೇಕು. ಇದು ಸುಲಭವಾದುದಲ್ಲ. ನಿರಂತರಜಾಗ್ರತಿಯಿಂದ
ಸಾಧಿಸಬೇಕಾದುದು.
#ಆಚಾರವೆಂಬುದು ಕೂರಲಗು, ತಪ್ಪಿ ಬಂದಡೆ ಪ್ರಾಣವ ತಗಲುವುದು.
ಅದು ಕಾರಣ, ಅರಿದರಿದು ಆಚರಿಸಬೇಕು ಎನ್ನುತ್ತಾರೆ ಚೆನ್ನಬಸವಣ್ಣನವರು

#ಲಿಂಗವಲ್ಲದೆ ಅನ್ಯವನರಿಯದಿಹುದೆ ಲಿಂಗಾಚಾರ. 
ಸಜ್ಜನ ಕಾಯಕದಲ್ಲಿ ತಂದು ಗುರು-ಲಿಂಗ-ಜಂಗಮಕ್ಕೆ ನೀಡಿ ಸತ್ಯಶುದ್ಧನಾಗಿಹುದೆ ಸದಾಚಾರ. 
ಶಿವಭಕ್ತರಲ್ಲಿ ಕುಲ ಗೋತ್ರ ಜಾತಿ ವರ್ಣಾಶ್ರಮವನರಸದೆ ಅವರೊಕ್ಕುದ ಕೊಂಬುದೆ ಶಿವಚಾರ. 
ಶಿವಚಾರದ ನಿಂದೆಯ ಕೇಳದಿಹುದೆ ಗಣಾಚಾರ. 
ಶಿವಶರಣರೆ ಹಿರಿಯರಾಗಿ ತಾನೆ ಕಿರಿಯನಾಗಿ ಭಯಭಕ್ತಿಯಿಂದ ಆಚರಿಸುವುದೆ ಭೃತ್ಯಾಚಾರ.
ಇಂತೀ ಪಂಚಾಚಾರವುಳ್ಳ ಪರಮಸದ್ಭಕ್ತರ ಒಕ್ಕುದನಿಕ್ಕಿ ಸಲಹಯ್ಯಾ ಪ್ರಭುವೆ
ಕೂಡಲಚೆನ್ನಸಂಗಮದೇವಾ.
 ಎನ್ನುತ್ತಾರೆ ಅವಿರಳಜ್ಞಾನಿ ಚೆನ್ನಬಸವಣ್ಣನವರು.
ಪಂಚಾಚಾರ :
 ಲಿಂಗಾಚಾರ, ಸದಾಚಾರ, ಶಿವಾಚಾರ, ಗಣಾಚಾರ, ಭೃತ್ಯಾಚಾರವೆಂಬ ಐದು ಪಂಚಾಚಾರಗಳ ಈ ವಿವೇಚನೆಯಿಂದ ಶರಣರ ಧಾರ್ಮಿಕ ನೈತಿಕ ಸಾಧನೆಯ ವ್ಯಾಪ
ಕತೆಯನ್ನು ಕಂಡುಕೊಳ್ಳಬಹುದು. 

ಉದಾತ್ತವಾದ ತಾತ್ವಿಕ ವಿವೇಚನೆಯ
ಸಾಧನೆಯ ಮಾರ್ಗ ಸಶಕ್ತವಾಗುವುದು 
ಅದನ್ನು ಆಚರಿಸಿ ತೋರಿಸಿದಾಗ ಮಾತ್ರ. ಅಂದರೆ ಶರಣ ಧರ್ಮದ ಸಾರ್ಥಕತೆಯಿರುವುದು
ಆಚಾರದಲ್ಲಿ ಎಂಬುದನ್ನು ಶರಣರು ಪಂಚಾಚಾರಗಳಲ್ಲಿ ಸ್ಪಷ್ಟ ಪಡಿಸಿದ್ದಾರೆ.

ಇಲ್ಲಿ ಕಂಡು ಬರುವ ವಿಶೇಷ ಅಂಶವೆಂದರೆ ವೈಯಕ್ತಿಕ ಉನ್ನತಿಯನ್ನು ಸಾಧಿಸುವುದರ ಜೊತೆಗೆ ಧಾರ್ಮಿಕ ಆಚರಣೆಗಳು ಸಾಮಾಜಿಕ ಹಿತವನ್ನೂ ಸಾಧಿಸಬೇಕು ಎಂಬುದು. ಶರಣರ ಆಚಾರಗಳ ವಿವೇಚನೆಯ ಉದ್ದಕ್ಕೂ ಈ ದೃಷ್ಟಿ ಕಂಡು ಬರುತ್ತದೆ. ವ್ಯಕ್ತಿ ಮತ್ತು ಸಮಾಜಗಳೆರಡನ್ನೂ ಸುಂದರವಾಗಿ ಸಮನ್ವಯಗೊಳಿಸಿರುವ ಪಂಚಾಚಾರಗಳು ಪರಿಭಾವಿಸಿದಷ್ಟೂ ಹೆಚ್ಚು ಅರ್ಥಗರ್ಭಿತವಾಗಿ ಕಾಣುತ್ತವೆ. ಅವುಗಳಲ್ಲಿ ವಿಶ್ವ ಹಿತಭಾವನೆಯನ್ನು, ವಿಶ್ವವ್ಯಾಪಕ ಮನೋಧರ್ಮವನ್ನು ಕಾಣಬಹುದು. ಪಂಚಾಚಾರ (ಪಂಚಶೀಲಗಳು) ಸಕಲ ಮಾನವ ಕುಲದ ಕಲ್ಯಾಣಕ್ಕೆ ಕಾರಣವಾದದ್ದು.
ಪಂಚಾಚಾರಗಳು:
ಲಿಂಗಾಚಾರ ಸದಾಚಾರ ಶಿವಾಚಾರ ಗಣಾಚಾರ ಭೃತ್ಯಾಚಾರವೆಂಬ 5 ಪಂಚಾಚಾರಗಳು ಧರ್ಮದ ದಾರ್ಶನಿಕತೆಯ ನೈತಿಕಾರ್ಥಗಳು.
1. ಲಿಂಗಾಚಾರ: 
ಇಷ್ಟಲಿಂಗದ ಪೂಜೆ, ಸಮಯಾಚಾರ ಕಾಯಕ ಸಂಪಾದನೆಯಿಂದ ಗುರುಲಿಂಗಕ್ಕರ್ಪಿಸಿ ಪ್ರಾಮಾಣಿಕತೆಯಿಂದ ಇರುವುದು.
2. ಸದಾಚಾರ : 
ತನ್ನ ಕಾಯಕ ಮತ್ತು ಕರ್ತವ್ಯಕ್ಕೆ ನಿಷ್ಟೆಯಿಂದಿರಬೇಕು. ಅಲ್ಲದೆ ಏಳು ನಿಯಮಗಳಿಗೆ ಬದ್ಧನಾಗಿರಬೇಕು. ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ, ತನ್ನ ಬಣ್ಣಿಸಬೇಡ, ಇದಿರ ಹಳಿಯಲುಬೇಡ ಮುನಿಯಬೇಡ, ಅನ್ಯರಿಗೆ ಅಸಹ್ಯಪಡಬೇಡ ಇವೇ ಆ ಏಳು ನಿಯಮಗಳು.
3.ಶಿವಾಚಾರ: 
ಶಿವಶರಣರಲ್ಲಿ ಜಾತಿ ವರ್ಗ, ವರ್ಣಗಳನ್ನು ಎಣಿಸದೆ ಸಮಾನತೆ ಕಾಪಾಡುವುದು.
4.ಗಣಾಚಾರ: 
ಶಿವಾಚಾರ ನಿಂದನೆಯನ್ನು ಆಲಿಸದಿರುವುದು.
5,ಭೃತ್ಯಾಚಾರ: 
ಶಿವಭಕ್ತರೇ ಹಿರಿಯರು ತಾವು ಕಿರಿಯರೆಂದು ನಡೆದುಕೊಳ್ಳುವುದು. 
ಇವು ಶರಣ ದರ್ಶನದ ಐದು ಸ್ಥಂಬಗಳು.

#ಶ್ರೀಮತ್ಸಜ್ಜನ ಶುದ್ಧಶಿವಾಚಾರರಾಗಿ
ಅಷ್ಟಾವರಣವೆ ಅಂಗವಾಗಿ, ಪಂಚಾಚಾರವೆ ಪ್ರಾಣವಾಗಿ,
ಬಸವೇಶ್ವರದೇವರ ಸಾಂಪ್ರದಾಯಕರೆಂದು
ನುಡಿದು ನಡೆದರೆ ಭಕ್ತರೆಂಬೆ, ಪುರಾತನರೆಂಬೆ.
ಅಂತಪ್ಪ ಭಕ್ತಂಗೆ ಈ ಮೂಜಗವೆಲ್ಲ ಸರಿಯಲ್ಲವೆಂಬೆ.
ಆ ಭಕ್ತಂಗೆ ಶಿವನ ಗದ್ದುಗೆಯೆ ಕೈಲಾಸವಾಗಿಪ್ಪುದು ನೋಡಾ.........................
ನಿಸ್ಸಂಗ ನಿರಾಳ ನಿಜಲಿಂಗಪ್ರಭುವೆ.
ಎಂದು ವಿವರಿಸಿದ್ದಾರೆ ನಿರಾಲಂಬ ಪ್ರಭುದೇವ ಶರಣರು. ಬಸವಭಕ್ತರಿಗೆ, ಬಸವೇಶ್ವರ ಸಂಪ್ರದಾಯದವರಿಗೆ ಅಷ್ಟಾವರಣವೇ ಅಂಗ ಪಂಚಾಚಾರವೇ ಪ್ರಾಣ ಎನ್ನುತ್ತಾರೆ.

ಪಂಚಾಚಾರಗಳು ಧರ್ಮಕ್ಕೆ ನೈತಿಕ ತಳಹದಿಯನ್ನು ಹಾಕಿಕೊಟ್ಟಿವೆ. ಲಿಂಗಾಚಾರ, ಸದಾಚಾರ, ಶಿವಾಚಾರ, ಗಣಾಚಾರ, ಭೃತ್ಯಾಚಾರ ಈ ಐದು ಆಚಾರಗಳಲ್ಲಿ ಶರಣರು ಪ್ರತಿಪಾದಿಸಿರುವ ನೈತಿಕ ನಿಷ್ಠೆ ಅವರ ಪೂರ್ಣ ದೃಷ್ಟಿಗೆ ಸಾಕ್ಷಿಯಾಗಿದೆ. 
ಅವರ ಮನೋಧರ್ಮ ಮತ್ತು ಗುರಿ ಸಕಲ ಮಾನವ ಕುಲದ ಕಲ್ಯಾಣ. 
ಪಂಚಾಚಾರಗಳಲ್ಲಿ ಕಂಡುಬರುವ ಪ್ರಮುಖ ಅಂಶವು ಸಕಲ ಚರಾಚರ ಜೀವಿಗಳ ಹಿತ.
ಈ ವಿಶ್ವಹಿತಭಾವನೆಯಿಂದ ಶರಣಧರ್ಮ ಒಂದು ವಿಶ್ವಧರ್ಮವಾಗಿದೆ. ಇದನ್ನು ಪ್ರತಿಪಾದಿಸಿದ ಗುರು ಬಸವಣ್ಣನವರು "ವಿಶ್ವಗುರು"ಗಳಾದರು.
-✍️ Dr Prema Pangi
#ಪ್ರೇಮಾ_ಪಾಂಗಿ, #ಪಂಚಾಚಾರ-1


Comments

Popular posts from this blog

Shika chakra or Bindu chakra:Bindu visarga

Hrit Chakra or Eight Petals Chakra

A-Ka-Ta triangle or Akshara Brahma