ಅಷ್ಟಾವರಣ
“ಅಷ್ಟಾವರಣವೇ ಅಂಗವಾಗಿ, ಪಂಚಾಚಾರವೇ ಪ್ರಾಣವಾಗಿ,
ಷಟ್ ಸ್ಥಲ ಮಾರ್ಗದಲ್ಲಿ ನಡೆಯುವವನೇ ಶರಣ”.
ಅಷ್ಟಾವರಣ ದೇಹವಾದರೆ ಪಂಚಾಚಾರಗಳು ಆ ದೇಹದಲ್ಲಿರುವ ಪಂಚಪ್ರಾಣಗಳು, ಷಟ್ಸ್ಥಲವೇ ಆತ್ಮ, ಎಂಬ ಈ ಮಾತಿನಿಂದ ಅವುಗಳ ಸ್ವರೂಪ ಸ್ಪಷ್ಟವಾಗುತ್ತದೆ.
ಅಷ್ಟಾವರಣವೆಂದರೆ ಬರೀ ಹೊದಿಕೆ, ಬಹಿರಂಗದ ಲಾಂಛನಗಳಲ್ಲ. ಇವು ಸಾಧಕನನ್ನು ಸಾಧನೆಯಲ್ಲಿ ಮನ ಚಂಚಲವಾಗದಂತೆ ಕಾಯುವ ಮತ್ತು ಶರಣನಾಗಿ ಪರಿವರ್ತಿಸುವ ರಕ್ಷಾಕವಚಗಳು.
ಅಷ್ಟಾವರಣಗಳಲ್ಲಿ ಸ್ಥೂಲತನು, ಸೂಕ್ಷ್ಮತನು, ಕಾರಣತನುವಿಗೆ ಎಂಬ ತ್ರಿವಿಧ ತನುಗಳಿಗೆ ತ್ರಿವಿಧ ಅಷ್ಟಾವರಣಗಳು ಎಂದು ಹೇಳಿದ್ದಾರೆ.
ತ್ರಿವಿಧ ಅಷ್ಟಾವರಣಗಳು:
ಸ್ಥೂಲತನುವಿಗೆ - ಕ್ರಿಯಾ ಅಷ್ಟಾವರಣ
ಸೂಕ್ಷ್ಮತನುವಿಗೆ - ಜ್ಞಾನ ಅಷ್ಟಾವರಣ
ಕಾರಣತನುವಿಗೆ - ಮಹಾಜ್ಞಾನ ಅಷ್ಟಾವರಣ
ಶರಣರು ಬರೀ ಬಹಿರಂಗದ ಆಡಂಬರಕ್ಕೆ, ಆಚರಣೆಗೆ, ತಮ್ಮನ್ನಾಗಲಿ ಧರ್ಮವನ್ನಾಗಲಿ ಸೀಮಿತಗೊಳಿಸಲಿಲ್ಲ. ಬಹಿರಂಗದ ಕ್ರಿಯಾತ್ಮಕ ಆಚರಣೆಯು ಅಂತರಂಗದ ಜ್ಞಾನಾತ್ಮಕ ಮಹಾಜ್ಞಾನಾತ್ಮಕವಾದರೆ ಮಾತ್ರ ಸಾಧಕ ಪರಿಣಾಮಿಸಿ ಶರಣನಾಗಬಲ್ಲ ಎಂದು ಅರಿತು ಬಹಿರಂಗದ ಅಷ್ಟಾವರಣಗಳನ್ನು ಅಂತರಂಗದ ಅಷ್ಟಾವರಣಗಳೊಡನೆ ಅನುಸಂಧಾನ ಮಾಡುವ ಮಾರ್ಗ ಸೂಚಿಸಿದರು. ಹೀಗೆ ಬಹಿರಂಗದ ಅಷ್ಟಾವರಣಗಳು,
ಅಂತರಂಗದ ಅಷ್ಟಾವರಣಗಳು
ಎಂದು ಎರಡೂ ಭಾಗ ಮಾಡಿದರು.
*ಬಹಿರಂಗದ ಅಷ್ಟಾವರಣಗಳು*:
ಗುರು, ಲಿಂಗ, ಜಂಗಮ, ವಿಭೂತಿ, ರುದ್ರಾಕ್ಷಿ, ಮಂತ್ರ, ಪಾದೋದಕ, ಪ್ರಸಾದ ಎಂಬ ಎಂಟು ಆವರಣಗಳು.
ಅಷ್ಟಾವರಣದಲ್ಲಿ ಮೊದಲ ಮೂರು
ಗುರು, ಲಿಂಗ, ಜಂಗಮ ಇವು ಪೂಜ್ಯನೀಯಗಳು. ನಂತರದ
ವಿಭೂತಿ, ರುದ್ರಾಕ್ಷಿ, ಮಂತ್ರ ಇವು ಪೂಜಕಗಳು (ಪೂಜಾ ಸಾಧನಗಳು).
ಕೊನೆಯ ಎರಡು
ಪಾದೋದಕ ಮತ್ತು ಪ್ರಸಾದ ಇವು ಪೂಜಾಫಲಗಳು (ಚಿತ್ ಶಕ್ತಿಯ ಕರುಣೆಯ ಫಲಗಳು).
*ಗುರು, ಲಿಂಗ, ಜಂಗಮ* :
ಗುರುಭಕ್ತಿ ಎಂಬ ಭೂಮಿಯ ಮಣ್ಣ ತಂದು ಪಾತೆಯ ಕಟ್ಟಿದೆ
ಲಿಂಗಭಕ್ತಿ ಎಂಬ ಗೊಬ್ಬರವ ತುಂಬಿದೆ
ಜಂಗಮಭಕ್ತಿ ಎಂಬ ಪರಮಾನಂದದ ಜಲವ ನೀಡಿದೆ
ಇಂತಿವರಿಂದ ಭಕ್ತಿವೃಕ್ಷ ಫಲವ ಧರಿಸೆ
ಗುಹೇಶ್ವರಲಿಂಗದಲ್ಲಿ ಮುಕ್ತನಾದೆನು ಕಾಣಾ ಸಂಗನಬಸವಣ್ಣಾ*. / 1089*
- ಅಲ್ಲಮ ಪ್ರಭುಗಳು
*ಅಂತರಂಗದ ಅಷ್ಟಾವರಣಗಳು*
ಇವೂ ಸಹ ಎಂಟು. ಅರಿವು, ಆಚಾರ, ಅನುಭಾವ ಮತ್ತು ಪಂಚೇಂದ್ರಿಯಗಳಾದ ನಾಶಿಕ, ಜೀಹ್ವ, ತ್ವಕ್ವ, ನೇತ್ರ, ಶೋತ್ರ ಇವು ಎಂಟು ಸೂಕ್ಷ್ಮತನುವಿಗೆ ಸಂಬಂದಿಸಿದ ಅಂತರಂಗದ ಅಷ್ಟಾವರಣಗಳು.
ಬಹಿರಂಗ ಅಂತರಂಗದ ಅಷ್ಟಾವರಣಗಳ ಸಂಬಂಧಗಳು:
ಬಹಿರಂಗ ಅಷ್ಟಾವರಣ- ಅಂತರಂಗ ಅಷ್ಟಾವರಣ
1) ಅರಿವಿಗೆ ಗುರು - ಅರಿವೇ ಗುರು
2) ಆಚರಣೆಗೆ ಲಿಂಗ - ಅಚಾರವೇ ಲಿಂಗ
3) ಅನುಭಾವಕ್ಕೆ ಜಂಗಮ - ಅನುಭಾವವೇ ಜಂಗಮ
4) ನಾಶಿಕಕ್ಕೆ ಪ್ರಸಾದ - ನಾಶಿಕವೇ ಪ್ರಸಾದ
5) ಜೀಹ್ವೇಕ್ಕೆ ಪಾದೋದಕ - ಜೀಹ್ವೇಯೇ ಪಾದೋದಕ
6) ತ್ವಕ್ವಕ್ಕೆ ವಿಭೂತಿ - ತ್ವಕ್ವವೇ ವಿಭೂತಿ
7) ನೇತ್ರಕ್ಕೆ ರುದ್ರಾಕ್ಷಿ - ನೇತ್ರವೇ ರುದ್ರಾಕ್ಷಿ
8) ಶೋತ್ರಕ್ಕೆ ಮಂತ್ರ - ಶೋತ್ರವೇ ಮಂತ್ರ.
ಬಹಿರಂಗದ ಅಷ್ಟಾವರಣಗಳನ್ನು ಅಂತರಂಗದ ಅಷ್ಟಾವರಣಗಳೊಡನೆ ಅನುಸಂಧಾನಿಸಿದರೆ ಅಂತರಂಗದ ಶುದ್ಧಿ ಮತ್ತು ಬಹಿರಂಗ ಶುದ್ಧಿಯಾಗುತ್ತದೆ. ಇಲ್ಲದಿದ್ದರೆ ಬರೀ ಲಾಂಛನವಾಗಿ ಉಳಿದುಬಿಡುತ್ತವೆ. ಬಾಹ್ಯ ಅಷ್ಟಾವರಣಗಳಿಗೆ ಬೆಲೆ ಬರುವುದು ಆಂತರಿಕ ಅಷ್ಟಾವರಣಗಳೊಡನೆ ಅನುಸಂಧಾನ ಮಾಡಿದಾಗ ಮಾತ್ರ..
*ಬಹಿರಂಗದ ಅಷ್ಟಾವರಣಗಳನ್ನು ಅಂತರಂಗದ ಅಷ್ಟಾವರಣಗಳೊಡನೆ ಅನುಸಂಧಾನ ಮಾಡುವ ವಿಧಾನ* :
ಗುರು :
ಗುರುವಿನಿಂದ ಅರಿವು ಪಡೆದು ಮುಂದೆ ಹಾಗೆ ಪಡೆದ ಅರಿವನ್ನೆ ಗುರುವಾಗಿ ಮಾಡಿಕೊಂಡು ಅಂತರಂಗದ ಸಾಧನೆ ಮಾಡಬೇಕು. ಹೀಗೆ > "ಅರಿವೇ ಗುರು".
ಲಿಂಗ :
ಮೊದಲು ಇಷ್ಟಲಿಂಗಕ್ಕೆ ಆಚಾರ ಪೂಜೆ, ಮುಂದೆ ಪ್ರಾಣಲಿಂಗಾನುಸಂಧಾನದ ಆಚಾರದಿಂದ ಪ್ರಾಣಲಿಂಗ ಸಾಕ್ಷಾತ್ಕಾರ. ಇದೇ ಲಿಂಗ ಆನಂದ, ಚಿದಾನಂದ. ಹೀಗೆ ಮೊದಲಿನ ಮೂರು ಸ್ಥಲಗಳಲ್ಲಿ ಸಾಕಾರ ಇಷ್ಟಲಿಂಗ ಹಿಡಿದು ಸಾಕಾರ ಪೂಜೆ ಮುಂದಿನ ಮೂರು ಸ್ಥಲಗಳಲ್ಲಿ ಅಂತರಂಗದ ಪ್ರಾಣಲಿಂಗ, ಭಾವಲಿಂಗದ ನಿರಾಕಾರ ಪೂಜೆ. ಹೀಗೆ "ಪ್ರಾಣಲಿಂಗಾನುಸಂಧಾನದ ಆಚಾರವೇ ಲಿಂಗ"ವಾಗಿ ಪ್ರಾಣಲಿಂಗ ಸಾಕ್ಷಾತ್ಕಾರ. ಆಗ > "ಪ್ರಾಣವೆ ಲಿಂಗ".
ಜಂಗಮ :
ಮೊದಲು ಪರಿಪೂರ್ಣ ಪರವಸ್ತುವಿನ ಜ್ಞಾನ ಕೊಟ್ಟು ಸುಜ್ಞಾನದ ಅನುಭಾವಕ್ಕೆ ಮಾರ್ಗದರ್ಶನ ನೀಡುವವನು ಜಂಗಮ. ಮುಂದೆ ಆ ಅನುಭಾವವೆ ಜಂಗಮವಾಗುವುದು. ಪರಿಪೂರ್ಣ ಪರವಸ್ತುವಿನ ಜ್ಞಾನವೇ ಜಂಗಮವಾಗಿ ಮುಂದಿನ ಸಾಧನೆಯ ಅನುಭಾವದ ದಾರಿ ತೋರುವುದು. ಹೀಗೆ > "ಲಿಂಗಾನುಭಾವವೇ ಜಂಗಮ".
ನಾಶಿಕಕ್ಕೆ ಪ್ರಸಾದ -
ಪ್ರಸಾದದಿಂದ ಪ್ರಸನ್ನತೆ. >
"ಪ್ರಸನ್ನತೆಯೇ ಪ್ರಸಾದ".
ಜೀಹ್ವಗೆ ಪಾದೋದಕ -
ಅಂಗ ಲಿಂಗ ಸಮರಸದಿಂದ ದೇಹದಲ್ಲಿ(pineal gland) ಉತ್ಪನ್ನವಾಗಿ ಒಸರುವ ಜ್ಞಾನಾಮೃತವೇ ಪಾದೋದಕ.>
"ಜ್ಞಾನಾಮೃತವೇ ಪಾದೋದಕ".
ತ್ವಕ್ವಕ್ಕೆ ವಿಭೂತಿ -
ವಿಭೂತಿಯಿಂದ ಚಿದ್ಬಸ್ಮ, ತೇಜಸ್ಸು, ಚಿತ್ಕಾಂತಿ >
"ತೇಜಸ್ಸು ಹೊಂದುವುದೇ ವಿಭೂತಿ ಧಾರಣೆ".
ನೇತ್ರಕ್ಕೆ ರುದ್ರಾಕ್ಷಿ -
ರುದ್ರಾಕ್ಷಿಯಿಂದ ಜ್ಞಾನದೃಷ್ಟಿ ಪ್ರಾಪ್ತಿ. > "ಜ್ಞಾನದೃಷ್ಟಿ ಪ್ರಾಪ್ತವಾಗುವದೇ ರುದ್ರಾಕ್ಷಿ".
ಶೋತ್ರಕ್ಕೆ ಪಂಚಾಕ್ಷರಿ ಮಂತ್ರ -
ಮಂತ್ರದಿಂದ ಚಿತ್ಪ್ರಭೆ, ಪರಿಪೂರ್ಣಪ್ರಸನ್ನತೆ ಉಂಟಾಗಿ ಶಿವ ಜೀವರು ಒಂದಾಗುವರು.ಇದು ಲಿಂಗ ಅಂಗ ಸಮರಸ.>
"ಅಂಗಲಿಂಗರ ಅನುಸಂಧಾನವೇ ಮಂತ್ರ".
ಹೀಗೆ ಬಹಿರಂಗ ಅಂತರಂಗ ಅಷ್ಟಾವರಣಗಳ ಅನುಸಂಧಾನದಿಂದ ಪ್ರಸನ್ನತೆ, ಅಂತರಂಗ ಶುಧ್ಧಿ, ಬಹಿರಂಗ ಶುದ್ಧಿಯಾಗಿ ಲಿಂಗಾಂಗ ಸಾಮರಸ್ಯ ಲಭಿಸುವುದು.
"ಹೀಗೆ ಸರ್ವವ್ಯಾಪಿಯಾದ ಪರಮಾತ್ಮನನ್ನು ಹೃದಯದಲ್ಲಿಟ್ಟುಕೊಂಡು ನಿಜವಾದ ಭಕ್ತಿಯಿಂದ ಪೂಜಿಸುವ ಅಂತರಂಗದ ಪೂಜೆಯೇ ಸರ್ವಶ್ರೇಷ್ಟವಾದದ್ದು" ಎಂಬುದು ಶರಣರ ದೃಷ್ಟಿ.
#ಗುರುಕೃಪೆಯಿಂ ಪಡೆದಿಷ್ಟಲಿಂಗ ಪೂಜೆಯ ಮಾಡಿ
ಹರುಷದಿಂ ಜಂಗಮಾರ್ಚನೆಗೈದು ಬಳಿಕವರ
ಚರಣತೀರ್ಥವ ಕೊಂಡು ಸುಪ್ರಸಾದವನುಂಡು
ಚಿದ್ ಭಸಿತ ರುದ್ರಾಕ್ಷಿಯಂ ವರಚಿದಂಗಕ್ಕಲಂಕರಿಸಿ
ಪಂಚಾಕ್ಷರಿಯ ಸ್ಮರಿಸುವೀಪರಿಯೊಳಷ್ಠಾವರಣದಾಚರಣೆ
ಶರಣಂಗಲ್ಲದೆ ಹರನಿಗಿಲ್ಲವಾದುದರಿಂದ
ಹರನಿಂದಧಿಕ ಶರಣನು
- ಮೈಲಾರ ಬಸವಲಿಂಗ ಶರಣರು
ಈ ಭಾಗ್ಯ ಹರನಿಗಿಲ್ಲ ಶರಣನಿಗಿದೆ. ಹಾಗಾಗಿ ಹರನಿಗಿಂತ ಶರಣನು ಅಧಿಕ.! ಎನ್ನುತ್ತಾರೆ ಶರಣರು.
"ಅಷ್ಟಾವರಣದ ಸ್ಥೂಲದ ಮಾನವ ಜನ್ಮ ಹುಟ್ಟಿ ಬರುವುದೇ ದುರ್ಲಭ". ಎಂಬ ಕಡಕೋಳ ಮಡಿವಾಳಪ್ಪನವರ ತತ್ವಪದದ ಸಾಲು ಅಂದರೆ ಅಷ್ಟಾವರಣದ ಲಿಂಗವಂತ ಆಗಿ ಹುಟ್ಟುವುದು ದುರ್ಲಭ ಅವಕಾಶ. ಆದ್ದರಿಂದ ಜೀವನ ವ್ಯರ್ಥ ಮಾಡದೇ ಸಾರ್ಥಕ ಮಾಡಿಕೊಳ್ಳಬೇಕು.
#ಸದ್‍ಭಕ್ತನ ಸತ್ಕ್ರಿಯವೆ ಗುರುವೆನಿಸಿ,
ಮಂಗಳ ಅಂಗಪೀಠದ ಮುಹೂರ್ತಗೊಂಡ ಹರರೂಪವೇ ಲಿಂಗವೆನಿಸಿ,
ಲಿಂಗನ ಪೂಜಿಸುವ ಸದಾಚಾರವೇ ಜಂಗಮವೆನಿಸಿ,
ಪಾದ್ಯದಲ್ಲಿ ಪಾದೋದಕವಾಗಿ, ಜಿಹ್ವೆಯಲ್ಲಿ ಪ್ರಸಾದವಾಗಿ,
ಲಲಾಟದಲ್ಲಿ ವಿಭೂತಿಧಾರಣವಾಗಿ,
ಉರ, ಸಿರ, ಕಂಠದಲ್ಲಿ ಶಿವಾಕ್ಷಿಮಣಿಯೆನಿಸಿ,
ಶ್ರೋತ್ರದಲ್ಲಿ ಮಂತ್ರವಾಗಿ
ಇಂತು ಇವು ಬಾಹ್ಯ ಅಷ್ಟಾವರಣದ ಕ್ರಮವೆನಿಸಿತ್ತು.
ಇನ್ನು ಅಂತರಂಗದಿ ಆತ್ಮನ ಅರುವೆ ಗುರುವೆನಿಸಿತ್ತು.
ಪ್ರಾಣವೆ ಲಿಂಗವಾಗಿ ತೋರಿತ್ತು.
ಪರಿಪೂರ್ಣ ಪರವಸ್ತುವಿನ ಜ್ಞಾನವೆ ಜಂಗಮವೆನಿಸಿತ್ತು.
ಜಿಹ್ವಾಗ್ರವೇ ಪಾದೋದಕವಾಗಿ, ನಾಶಿಕವೆ ಪ್ರಸಾದವಾಗಿ,
ತ್ವಕ್ಕಿನಲ್ಲಿ ಶ್ರೀವಿಭೂತಿ, ನೇತ್ರದಲ್ಲಿ ಪರಾಕ್ಷಮಣಿ,
ಕರ್ಣದ್ವಾರದೊಳು ಮೊಳಗುವ ಮಂತ್ರದಿಂದೆ
ಕೂಡಿಕೊಂಡ ಈ ಪರಿಯೇ ಅಂತರಾತ್ಮಷ್ಟಾವರಣವೆನಿಸಿತು.
ನೀನೊಂದು ಇದ್ದು ಇಂತುಪರಿಯಲ್ಲಿ
ಪೂಜೆ ಪೂಜಕ ಪೂಜ್ಯನೆನಿಸಿ ಮೆರೆದಿಯಲ್ಲಾನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ.
-ಕಡಕೋಳ ಮಡಿವಾಳಪ್ಪ ಶರಣರು
*ಅಷ್ಟಾವರಣವೇ ಅಂಗ,ಪಂಚಾಚಾರವೇ ಪ್ರಾಣ*
#ಅಯ್ಯಾ, ಭಕ್ತಜಂಗಮವೆಂದು ಒಪ್ಪಕ್ಕೆ ನುಡಿಯಬಹುದಲ್ಲದೆ ಭಕ್ತಜಂಗಮವಾಗಿ ನಿಂದ ನಿಲುಕಡೆಯ ಹೇಳಿರಣ್ಣ. ಅದೆಂತೆಂದಡೆ: ಸದ್ಗುರುಮುಖದಿಂದ ವೇಧಾಮಂತ್ರಕ್ರಿಯಾದೀಕ್ಷೆಯ ತಿಳಿದು, ಪಂಚಾಚಾರವೆ ಪ್ರಾಣವಾಗಿ, ಅಷ್ಟಾವರಣವೆ ಅಂಗವಾಗಿ, ಸದ್ಭಕ್ತಿಯೆ ಮುಕ್ತಿಮಂದಿರವಾಗಿ, ಸತ್ಕ್ರಿಯಾ ಸಮ್ಯಕ್ಜ್ಞಾನವೆ ಸಂಜೀವನವಾಗಿ, ಕೊಡುವಲ್ಲಿ ಕೊಂಬಲ್ಲಿ ನಡೆನುಡಿ ಬೀಸರವೋಗದೆ, ಬಹಿರಂಗದಲ್ಲಿ ಆಚರಣೆ, ಅಂತರಂಗದಲ್ಲಿ ಸಂಬಂಧವ ಸದ್ಗುರು ಲಿಂಗಜಂಗಮ ಕರುಣಕಟಾಕ್ಷೆಯಿಂ ತಿಳಿದು, ಸನ್ಮಾರ್ಗವಿಡಿದು ಸತ್ಯನಡೆನುಡಿಯಿಂದಾಚರಿಸುವ ಶರಣಗಣಂಗಳೆ ಅನಾದಿ ಭಕ್ತಜಂಗಮ ಕಾಣಾ, ಕಲಿದೇವರದೇವ ಸಾಕ್ಷಿಯಾಗಿ ಸಂಗನಬಸವೇಶ್ವರಾ. / 33 |
-ವೀರಗಣಾಚಾರಿ ಮಡಿವಾಳ ಮಾಚಿದೇವರು
ಕಾರಣತನುವಿಗೆ ಸಂಬಂದದ ಅಷ್ಟಾವರಣಗಳು:
ಸತ್ಯವೇ ಗುರು
ಚಿತ್ತವೇ ಲಿಂಗ
ಆನಂದವೇ ಜಂಗಮ
ಕರಣಾರ್ಪಣವೇ ಪ್ರಸಾದ
ಪರಂಜ್ಯೋತಿಯೇ ಪಾದೋದಕ
ನಿತ್ಯನೇಮವೇ ವಿಭೂತಿ
ಪರಿಪೂರ್ಣವೇ ರುದ್ರಾಕ್ಷಿ
ಅವಿರಳ ಸ್ಮರಣೆಯೇ ಮಂತ್ರ.
*ಅಷ್ಟಾವರಣಗಳ ಅವಶ್ಯಕತೆ*:
1.ಅಂತರಂಗ ಬಹಿರಂಗ ಶುದ್ಧಿ ಲಭಿಸುವುದಕ್ಕೆ
2.ದೇಹದಲ್ಲಿರುವ ಸೂಪ್ತ ಶಕ್ತಿ ಗಳನ್ನು ಜಾಗೃತಮಾಡಿ ವಿಕಾಸಗೊಳಿಸಿ ಕೊಳ್ಳುವುದಕ್ಕೆ,
3.ಧ್ಯಾನದಲ್ಲಿ ಏಕಾಗ್ರತೆ ಪಡೆಯಲು
4.ಸಾಧನಾ ಪಥದಲ್ಲಿ ಅಂಗ ಗುಣಗಳನ್ನು ಕಳೆದುಕೊಂಡು ಲಿಂಗ ಗುಣ ಪಡೆಯುವುದಕ್ಕೆ ,
5.ಅಧೋಮುಖವಾಗಿ ಹರಿಯುತ್ತಿರುವ ಕುಂಡಲಿನಿ ಶಕ್ತಿಯನ್ನು ಲಿಂಗಶಕ್ತಿಯನ್ನಾಗಿಸಿ ಊರ್ದ್ವಮುಖವಾಗಿ ಹರಿಯಲುಬೇಕು ಅಷ್ಟಾವರಣಗಳು.
6.ಗುರುವಿನಲ್ಲಿ ಭಕ್ತಿ, ಲಿಂಗದಲ್ಲಿ ನಿಷ್ಠೆ, ಜಂಗಮದಲ್ಲಿ ಅವಧಾನ ತಂದು ಕೊಡುವಲ್ಲಿ ಅಷ್ಟಾವರಣಗಳು ಮುಖ್ಯವಾಗಿವೆ.
ಅಷ್ಟಾವರಣದ ಅಳವಡಿಕೆಯನ್ನು ಶೃದ್ದೆ , ನಿಷ್ಠೆ, ಸಮರ್ಪಣಾ ಭಾವನೆಯಿಂದ ಏಕದೇವೋಪಾಸನೆ ಮತ್ತು ಪಂಚಾಚಾರಗಳನ್ನು ಸಹ ಆಚರಣೆಯಲ್ಲಿ ತಂದಾಗ ಮಾತ್ರ ಭಕ್ತಿಯು ಅಳವಟ್ಟು ಸಾಧಕನು, ಭಕ್ತನಾಗಿ ಷಟಸ್ಥಲಾತ್ಮಕ ಅನುಭಾವವನ್ನು ಸಾಧಿಸುತ್ತಾ ಸಾಗುವನು.
ಬ್ರಹ್ಮಾಂಡದ ಅಷ್ಟಾವರಣಗಳು:
ಆತ್ಮ, ಸೂರ್ಯ, ಚಂದ್ರ, ಆಕಾಶ, ವಾಯು, ಅಗ್ನಿ, ನೀರು, ಭೂಮಿ ಎಂಬ ಎಂಟು
ಅಷ್ಟಾವರಣಗಳು.
ಸೋಪಾದಿಕ ಅಷ್ಟಾವರಣ ಸ್ಥೂಲತನುವಿಗೆ,
ನಿರುಪಾದಿಕ ಅಷ್ಟಾವರಣ ಸೂಕ್ಷ್ಮತನುವಿಗೆ ಇವೆ. ಗುರು, ಲಿಂಗ, ಜಂಗಮ, ಪ್ರಸಾದ, ಪಾದೋದಕ, ವಿಭೂತಿ, ರುದ್ರಾಕ್ಷಿ, ಮಂತ್ರ ವೆಂಬ ಸೋಪಾದಿಕ ಅಷ್ಟಾವರಣಗಳನ್ನು ಆಶ್ರಯಿಸಿ ಅಂತರಂಗದೊಳಗೆ ಪ್ರಕಾಶಿಸುವ
ನಿರುಪಾದಿಕ ಅಷ್ಟಾವರಣಗಳನ್ನು ಅರಿಯಬೇಕು.
*ಅಂತರಂಗದ ನಿರಾಕಾರ ನಿರ್ಗುಣ ಪೂಜೆಯಲ್ಲಿ ಬಹಿರಂಗದ ಅಷ್ಟಾವರಣಗಳು*
ಲಿಂಗ ಸ್ವಾಯತವಾದ ಬಳಿಕ ಲಿಂಗವ ಮರೆಯಬೇಕಯ್ಯಾ,
ಜಂಗಮಸ್ವಾಯತವಾದ ಬಳಿಕ ಜಂಗಮವ ಮರೆಯಬೇಕಯ್ಯಾ,
ಪ್ರಸಾದ ಸ್ವಾಯತವಾದ ಬಳಿಕ ಪ್ರಸಾದವ ಮರೆಯಬೇಕಯ್ಯಾ.
ಇಂತೀ ಗುರುಲಿಂಗಜಂಗಮಪ್ರಸಾದದಲ್ಲಿ ಪರಿಣಾಮಿಯಾಗಿ,
ಸಮಯಭಕ್ತಿಯಲ್ಲಿ ಸಂತೋಷಿಯಾಗಿ ಬದುಕಿದೆನು ಕಾಣಾ,
ಕೂಡಲಸಂಗಮದೇವಾ. / 601
ಎನ್ನುತ್ತಾರೆ ಗುರು ಬಸವಣ್ಣನವರು.
ಅರ್ಥ:
ಲಿಂಗ ಆಯತದಿಂದ ಸ್ವಾಯತ ಆದಮೇಲೆ ಪ್ರಾಣಲಿಂಗವೆಂಬ ಅಂತರಂಗದ ನಿರಾಕಾರ ನಿರ್ಗುಣ ಪೂಜೆಯಲ್ಲಿ ಬಹಿರಂಗದ ಅಷ್ಟಾವರಣಗಳನ್ನು ಮರೆಯಬೇಕು ಎನ್ನುತ್ತಾರೆ ಗುರು ಬಸವಣ್ಣನವರು. ಅಂತರಂಗದ ಪೂಜೆ ಯಲ್ಲಿ ಅಂತರಂಗದ ಅಷ್ಟಾವರಣಗಳನ್ನು ಅಳವಡಿಸಿಕೊಳ್ಳಬೇಕು. ಹೀಗೆ ಗುರು ಲಿಂಗ ಜಂಗಮ ಸ್ವಾಯತ್ತ ಆದ ಬಳಿಕ ಬಹಿರಂಗದ ವಸ್ತುವಿಷಯಗಳನ್ನೂ ಮರೆಯಬೇಕಾಗುತ್ತದೆ. ಅಂದರೆ ಮಾತ್ರ ಆಂತರ್ಯದಲ್ಲಿ ಪರಿಣಾಮದ ಪ್ರಸಾದದ ಆನಂದವನ್ನು ಅನುಭವಿಸುವದಕ್ಕೆ ಸಾಧ್ಯ ಎನ್ನುತ್ತಾರೆ ಗುರು ಬಸವಣ್ಣನವರು. ಹೀಗೆ ಲಿಂಗ ಆಯತದಿಂದ ಸ್ವಾಯತವಾದ ಮೇಲೆ ತಮ್ಮಷ್ಟಕ್ಕೆ ತಾನೆ ಉದಯವಾಗುವ ಅರಿವೇ ಗುರುವಾಗುವುದು.
ಒಳಹೊರಗೆ ಬೆಳಗುವ ಜ್ಯೋತಿಯೆ ಪ್ರಾಣಲಿಂಗವಾಗಿ ಬೆಳಗುವದು. ಎಲ್ಲವೂ ಪರಮನೇ ಆಗುವುನು.
ಎನ್ನ ಗತಿಮತಿ ನೀವೆ ಕಂಡಯ್ಯ,
ಎನ್ನ ಅರಿವಿನ ಜ್ಯೋತಿ ನೀವೆ ಕಂಡಯ್ಯ,
ಎನ್ನಂತರಂಗ ಬಹಿರಂಗದ ಮಹವು ನೀವೆ ಕಂಡಯ್ಯ.
ಕೂಡಲಸಂಗಮದೇವಾ,
ನೀವೆನಗೆ ಗುರು, ನಾ ನಿಮಗೆ ಶಿಷ್ಯನೆಂಬುದನು
ನಿಮ್ಮ ಶರಣ ಸಿದ್ಧರಾಮಯ್ಯದೇವರೆ ಬಲ್ಲರು. / 340
ಅರ್ಥ:
ಲಿಂಗ ಸ್ವಾಯತ ಆದ ಶರಣನಿಗೆ ಪರಮ ಪರಶಿವನೇ, ಅವನ ಅರಿವಿನ ಜ್ಯೋತಿಯಾಗಿ ಪರಮಗುರುವಾಗುತ್ತಾನೆ ಎನ್ನುತ್ತಾರೆ ಗುರು ಬಸವಣ್ಣನವರು.
#ಗುರುವೇ ಪರಶಿವನು.
........................................
ಎನ್ನ ಕರಸ್ಥಲಕ್ಕೆ ಇಷ್ಟಲಿಂಗಸ್ವರೂಪವಾಗಿ
ಮತ್ತೆ ಮನಸ್ಥಲಕ್ಕೆ ಪ್ರಾಣಲಿಂಗಸ್ವರೂಪವಾಗಿ
ಮತ್ತೆ ಭಾವಸ್ಥಲಕ್ಕೆ ಭಾವಲಿಂಗಸ್ವರೂಪವಾಗಿ
ಈ ತ್ರಿವಿಧಮೂರ್ತಿಯೇ ಅಷ್ಟಾವರಣಸ್ವರೂಪವಾಗಿ
ಎನ್ನ ಅರುಹಿನಲ್ಲಿ ಗುರು
ಎನ್ನ ಪ್ರಾಣದಲ್ಲಿ ಲಿಂಗ
ಎನ್ನ ಜ್ಞಾನದಲ್ಲಿ ಜಂಗಮ
ಎನ್ನ ಜಿಹ್ವೆಯಲ್ಲಿ ಪಾದೋದಕ
ಎನ್ನ ನಾಸಿಕದಲ್ಲಿ ಪ್ರಸಾದ
ಎನ್ನ ತ್ವಕ್ಕಿನಲ್ಲಿ ವಿಭೂತಿ
ಎನ್ನ ನೇತ್ರದಲ್ಲಿ ರುದ್ರಾಕ್ಷಿ
ಎನ್ನ ಶ್ರೋತ್ರದಲ್ಲಿ ಪಂಚಾಕ್ಷರಿ
ಇಂತಿವು ಅಷ್ಟಾವರಣಸ್ವರೂಪವಾಗಿ
ಎನ್ನೊಳು ತನ್ನ ಕರುಣಕೃಪೆಯ ತೋರಿದಾತ
ನಮ್ಮ ಶಾಂತಕೂಡಲಸಂಗಮದೇವ./17
- ಗಣದಾಸಿ ವೀರಣ್ಣ ಶರಣರು
ಅರ್ಥ:
ತಮ್ಮ ಇಷ್ಟದೈವ ಶಾಂತ ಕೂಡಲಸಂಗಮದೇವನೇ ಗುರು. ಕರಸ್ಥಲಕ್ಕೆ ಇಷ್ಠಲಿಂಗ, ಮನಸ್ಥಲಕ್ಕೆ ಪ್ರಾಣಲಿಂಗ, ಭಾವಸ್ಥಲಕ್ಕೆ ಭಾವಲಿಂಗವಾಗಿ , ಅಷ್ಟಾವರಣ ಸ್ವರೂಪನಾಗಿ, ಅರುಹಿನಲ್ಲಿ ಗುರು, ಪ್ರಾಣದಲ್ಲಿ ಲಿಂಗ, ಜ್ಞಾನದಲ್ಲಿ ಜಂಗಮ, ಜೆವ್ಹೆಯಲ್ಲಿ ಪಾದೋದಕ, ನಾಸಿಕದಲ್ಲಿ ಪ್ರಸಾದ, ತ್ವಕ್ಕಿನಲ್ಲಿ ವಿಭೂತಿ, ನೇತ್ರದಲ್ಲಿ ರುದ್ರಾಕ್ಷಿ, ಸೂತ್ರದಲ್ಲಿ ಪಂಚಾಕ್ಷರಿಯಾಗಿ ಎನ್ನೊಳಗೆ ತನ್ನನ್ನು ತೋರಿದ ಎಂದು ಅರುಹಿದ್ದಾರೆ.
ಯಾವ ಆವರಣವೂ ಇಲ್ಲದ ಅನಂತವಾದ ಅನುಭವವನ್ನು ಕೈಗೂಡಿಸಿಕೊಡುವುದೇ ಎಲ್ಲ ಧರ್ಮಗಳ ಅಂತಿಮಗುರಿ. ಆದರೆ ಅದನ್ನು ಈಡೇರಿಸಿಕೊಳ್ಳುವ ಮಾರ್ಗ, ತಾತ್ಕಾಲಿಕವಾಗಿಯಾದರೂ ಕೆಲವು ಆವರಣಗಳಿಗೆ ಒಳಗಾಗದೆ ಬೆಳೆಯುವುದು ಸಾಧ್ಯವಿಲ್ಲ. ಗಿಡ ಚಿಕ್ಕದಾಗಿರುವಾಗ ಅದರ ಸುತ್ತ ಒಂದು ಬೇಲಿಯನ್ನು ಹಾಕುವುದು ಅದರ ಬೆಳವಣಿಗೆಗೆ ಅವಕಾಶಮಾಡಿಕೊಡು
ವುದಕ್ಕಾಗಿಯೇ ಹೊರತು ಬೇಲಿಯ ಒಳಗಡೆಯೇ ಅದು ಮುರುಟಿ ಸಾಯಬೇಕೆಂದಲ್ಲ. ಆದರೆ
ಬೇಲಿಯೇ ಗಿಡವನ್ನು ಬೆಳೆಸುವುದೆಂದು ಭಾವಿಸಿ ನೀರು ಗೊಬ್ಬರದ ಪೋಷಣೆಯ ಕಾರ್ಯವನ್ನು ಕೈಬಿಟ್ಟರೆ, ಆ ಬೇಲಿಯ ಆವರಣವೇ ಅದಕ್ಕೆ ಮಾರಕವಾಗುತ್ತದೆ. ತಿರುಳನ್ನು ಬಿಟ್ಟು ಸಿಪ್ಪೆಯನ್ನು ಮಾತ್ರ ಹಿಡಿದುಕೊಂಡಾಗ, ಧಾರ್ಮಿಕ ಆಚರಣೆಗಳೂ ಬರೀ ಬೇಲಿಯಾಗುತ್ತವೆ. ಅಷ್ಟಾವರಣಗಳು ಹಾಗಾಗದಂತೆ ಶರಣರು ಆಚಾರ ವಿಚಾರ ಸಾಧನೆಯಲ್ಲಿ ಹಿಡಿದು ಅದನ್ನು ಅಂತರಂಗದ ಅನುಭವದೊಡನೆ ಬೆಸೆದಿದ್ದಾರೆ.
-✍️ Dr Prema Pangi
Comments
Post a Comment