ಅಷ್ಟಾವರಣ. - ಲಿಂಗ

ಅಷ್ಟಾವರಣ. -  ಲಿಂಗ
ಅಷ್ಟಾವರಣ - ಲಿಂಗ
ಲಿಂಗ: ಯಾವುದರಿಂದ ಜಗತ್ತು ಉತ್ಪತ್ತಿಯಾಗುವುದೋ, ಯಾವುದರಲ್ಲಿ ಸರ್ವಜಗತ್ತು ಲೀನವಾಗುವುದೋ, ಆ ಪರವಸ್ತುವೇ ಲಿಂಗವು. 
*ಲಿಂಗವೇ ಜಗತ್ ಸೃಷ್ಟಿ, ಸ್ಥಿತಿ, ಲಯಕರ್ತ*


#'ಲಿ' ಕಾರವೆ ಶೂನ್ಯ, ಬಿಂದುವೆ ಲೀಲೆ, 
`ಗ' ಕಾರವೆ ಚಿತ್ತು.
ಈ ತ್ರಿವಿಧದೊಳಗಿದೆ ಲಿಂಗವೆಂಬ ಸಕೀಲ.
ಇದರ ಸಂಚವನಾವಾತ ಬಲ್ಲ ಆತನೆ ಲಿಂಗಸಂಗಿ. ಇದು ಕಾರಣ-
ಲಿಂಗಾನುಭವಿಗಳ ಶ್ರೀಚರಣಕ್ಕೆ
ನಮೋ ನಮೋ ಎಂಬೆ ಕೂಡಲಚೆನ್ನಸಂಗಮದೇವಾ / 1306 
- ಅವಿರಳ ಜ್ಞಾನಿ ಚನ್ನ ಬಸವಣ್ಣ
ಅರ್ಥ:
 "ಲಿ"ಕಾರವು ಲಯವನೆಯ್ದಿಸಿ ಸರ್ವಶೂನ್ಯ ಮಾಡುವುದು. ಹೀಗೆ ಲಿಕಾರವು ಸರ್ವವನ್ನು ಲೀನವಾಗಿಸಿಕೊಳ್ಳುವ ಶೂನ್ಯದ ಸೂಚಕ.

 "0"ಚಿದ್ಬಿಂದುವೆ ಆ ಚಿತ್ ಚೈತನ್ಯಕ್ಕೆ ಅಂಗವಾಗಿ ಲೀಲಸ್ಥಿತಿಯ ನಟಿಸುತ್ತಿಹುದಾಗಿ ಬಿಂದುವೇ ಲೀಲೆ. ಬಿಂದುವು ಸೃಷ್ಟಿಯ ಲೀಲೆಯ ಸೂಚಕ.

 "ಗ"ಕಾರ ಸೃಷ್ಟಿಯ ಉತ್ಪತ್ತಿಗೆ ಮೂಲವಾದ ಚಿತ್ ಶಕ್ತಿಯ ಸೂಚಕವಾಗಿದೆ. ಚಿತ್ ಚೈತನ್ಯ ಗಮಿಸಿ, ಜಗತ್ ಚೈತನ್ಯವಾಗಿ ಸೃಷ್ಟಿರಚನೆಯಾಯಿತು.

ಲಿಕಾರವು ವಿಲೀನವಾಗುವುದರ ಸೂಚಕ , ಗಕಾರವು ಉತ್ಪತ್ತಿಯ ಸೂಚಕ. ಹೀಗೆ ಲಿಂಗವು ಸಕಲ ಸೃಷ್ಟಿಯ ವಿಲೀನ ಹಾಗೂ ಉತ್ಪತ್ತಿಯ ಮೂಲ. ಲಿಂಗವು ಸೃಷ್ಟಿ ಸ್ಥಿತಿ ಲಯ ಈ ಮೂರು ಪ್ರಕ್ರಿಯೆಗಳಿಗೆ ಕಾರಣ. ಈ ಲಿಂಗದ ಮರ್ಮವನರಿದು ಆಚರಿಸುವ ಲಿಂಗನುಭಾವಿಗಳಿಗೆ ಶರಣು ಶರಣು ಎಂದಿದ್ದಾರೆ ಚೆನ್ನಬಸವಣ್ಣನವರು. 

*ಲಿಂಗ ಸ್ವರೂಪ*

#ಲಿಂಗವೆಂಬುದು ಪರಶಕ್ತಿಯುತ ಪರಶಿವನ ನಿಜದೇಹ,
ಲಿಂಗವೆಂಬುದು ಪರಶಿವನ ಘನತೇಜ,
ಲಿಂಗವೆಂಬುದು ಪರಶಿವನ ನಿರತಿಶಯಾನಂದಸುಖವು,
ಲಿಂಗವೆಂಬುದು ಪರಶಿವನ ಪರಮಜ್ಞಾನ,
ಲಿಂಗವೆಂಬುದು ಷಡಧ್ವಮಯ ಜಗಜ್ಜನ್ಮಭೂಮಿ,
ಲಿಂಗವೆಂಬುದು ಅಖಂಡಿತವೇದ ಪಂಚಸಂಜ್ಞೆ,
ಲಿಂಗವೆಂಬುದು ತಾ ಹರಿಬ್ರಹ್ಮರ ನಡುಮನೆಗಳ ಜ್ಯೋತಿರ್ಲಿಂಗ,
ಅಖಿಲಾರ್ಣವಾ ಲಯಾನಾಂ ಲಿಂಗಂ ಮುಖ್ಯಂ ಪರಂ ತಥಾ
ಪರಂ ಗೂಢಂ ಶರೀರಸ್ಥಂ ಲಿಂಗಕ್ಷೇತ್ರಮನಾದಿವತ್
ಯದಾದ್ಯಮೈಶ್ವರಂ ತೇಜಸ್ತಲ್ಲಿಂಗಂ ಪಂಚಸಂಜ್ಞಕಂ
ಎಂದಿದು ಲಿಂಗದ ಮರ್ಮ.
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
ಲಿಂಗದೊಳಿದ ತಿಳಿಯಬಲ್ಲವನೇ ಬಲ್ಲವನು. / 260
- ಶರಣ ಉರಿಲಿಂಗ ಪೆದ್ದಿ
ಎಂದು ಸರ್ವತತ್ವಗಳಿಗೂ ಆಶ್ರಯಸ್ಥಾನವಾದ ಲಿಂಗದ ಸ್ವರೂಪವನ್ನು ಸೂಚಿಸಿದ್ದಾರೆ ಉರಿಲಿಂಗಪೆದ್ದಿ ಶರಣರು. 

*ಲಿಂಗವು ಪರಮಾತ್ಮ ವಾಚಕ, ಪರಶಿವ ಸೂಚಕ*
#ಲಿಂಗವೆಂಬುದು ಸರ್ವಕಾರಣ ಪರಮ ನಿರ್ಮಲ.
ಲಿಂಗವೆಂಬುದು ಸಚ್ಚಿದಾನಂದ ನಿತ್ಯಪರಿಪೂರ್ಣ.
ಲಿಂಗವೆಂಬುದು ಸರ್ವಲೋಕೋತ್ಪತ್ತಿಗೆ ಮೂಲಕಾರಣ.
ಲಿಂಗವೆಂಬುದು ಜನ್ಮವಾರಿಧಿಯ ದಾಂಟಿಸುವ ಭೈತ್ರವು.
ಲಿಂಗವೆಂಬುದು ಶರಣರ ಹೃದಯದಲ್ಲಿ ಬೆಳಗುವ
ಜ್ಯೋತಿರ್ಮಯ ಲಿಂಗವು.
ಇಂತೀ ಲಿಂಗದ ಮರ್ಮವನರಿದವನೇ ಅರಿದವನು,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ. / 332
ಆರ್ಥ:
ಲಿಂಗವು ಸರ್ವಕಾರಣ ನಿರ್ಮಲ, ಸಚ್ಚಿದಾನಂದ ನಿತ್ಯ ಪರಿಪೂರ್ಣ, ಸರ್ವಲೋಕೋತ್ಪತಿಗೆ ಕಾರಣ, ಸರ್ವತತ್ವಪೂರ್ಣ ನಿಜಚೈತನ್ಯ, ಜನ್ಮ
ವಾರಿಧಿಯ ದಾಂಟಿಸುವ ಭೈತ್ರ, ಶರಣರ ಹೃದಯದಲ್ಲಿ ಬೆಳಗುವ ಜ್ಯೋತಿರ್ಮಯ
ಲಿಂಗ ಎಂದು ಮುಂತಾಗಿ ಅದರ ವಿರಾಡ್ರೂಪವನ್ನು ಶರಣರು ಕಂಡಿದ್ದಾರೆ. ಲಿಂಗವು ವಿಭುವಾಗಿ ಜಗತ್ತನ್ನೇ ವ್ಯಾಪಿಸಿದೆ.

 *ಲಿಂಗತ್ರಯಗಳು* : 
ಇಷ್ಟಲಿಂಗ, ಪ್ರಾಣಲಿಂಗ, ಭಾವಲಿಂಗ 
ಇಷ್ಟಲಿಂಗ, ಪ್ರಾಣಲಿಂಗ, ಭಾವಲಿಂಗ ಇವು ತ್ರಿವಿಧ ಲಿಂಗಗಳು. ಶಿವಯೋಗದಲ್ಲಿ ಶರಣರು ಕಂಡ ಆಂತರಿಕ ಅನುಭವದ ದೃಷ್ಟಿ ಲಿಂಗತ್ರಯಗಳಲ್ಲಿ ಗೋಚರಿಸುತ್ತದೆ.
#ಅಂತರಂಗದೊಳಗಿರ್ದ ನಿರವಯಲಿಂಗವನು ಸಾವಯವಲಿಂಗವ ಮಾಡಿ,
ಶ್ರೀಗುರುಸ್ವಾಮಿ ಕರಸ್ಥಲಕ್ಕೆ ತಂದುಕೊಟ್ಟನಾಗಿ,
ಆ ಇಷ್ಟಲಿಂಗವೆ ಅಂತರಂಗವನಾವರಿಸಿ
ಅಂತರಂಗದ ಕರಣಂಗಳೆ ಕಿರಣಂಗಳಾಗಿ
ಬೆಳಗುವ ಚಿದಂಶವೆ ಪ್ರಾಣಲಿಂಗವು,
ಆ ಮೂಲಚೈತನ್ಯವೆ ಭಾವಲಿಂಗವು.
ಇದನರಿದು, ನೋಡುವ ನೋಟ ಭಾವಪರಿಪೂರ್ಣವಾಗಿ
ತಾನು ತಾನಾದಲ್ಲದೆ, ಇದಿರಿಟ್ಟು ತೋರುವುದಿಲ್ಲವಾಗಿ
ಅಖಂಡ ಪರಿಪೂರ್ಣವಪ್ಪ ನಿಜವು ತಾನೆ, ಕೂಡಲಸಂಗಮದೇವ.
- ವಿಶ್ವಗುರು ಬಸವಣ್ಣನವರು

*ಇಷ್ಟಲಿಂಗ, ಪ್ರಾಣಲಿಂಗ, ಭಾವಲಿಂಗ*
ಇಷ್ಟಲಿಂಗವೆಂದರೆ 
ಸ್ಥೂಲ ಶರೀರದ ಮೇಲೆ ಧರಿಸಿದ ಲಿಂಗವು.
ಪ್ರಾಣಲಿಂಗವೆಂದರೆ ಪ್ರತಿಯೊಂದು ಜೀವಿಯಲ್ಲಿಯೂ ಪ್ರಾಣರೂಪವಾಗಿ ಇರುವ ಲಿಂಗಚೈತನ್ಯ.
ಈ ಪ್ರಾಣಲಿಂಗಾನುಷ್ಟಾನದಿಂದ ಮನಸ್ಸನ್ನು ನಿಲ್ಲಿಸಿ(ಮನೋಲಯ ಮಾಡಿ) ಭಾವದಲ್ಲಿ ಅಂತಃಕರಣದಲ್ಲಿ ಅಚ್ಚೊತ್ತಿದರೆ ಭಾವದಲ್ಲಿ ರೂಪುಗೊಳ್ಳುವ ಲಿಂಗವೇ ಭಾವಲಿಂಗ. 

ಭಕ್ತನ ದೃಷ್ಟಿಗಾಗಿ, ನೆನಹು ನಿರೀಕ್ಷಣೆಗೆ ಸಾಧನೆಗೆ ಉಪಾಸ್ಯವಸ್ತುವಾಗಿ ಕರಸ್ಥಳಕ್ಕೆ ಬಂದ ಶಿವಕಳೆಯ ಸಾಕಾರ ರೂಪುವು ಇಷ್ಟಲಿಂಗ.
 ಭಕ್ತನ ಧ್ಯಾನಯೋಗಕ್ಕಾಗಿ ಮನಸ್ಥಳದಲ್ಲಿ ಕಾಣಬಂದದ್ದೇ ಪ್ರಾಣಲಿಂಗ.
 ಭಕ್ತನ ಜ್ಞಾನಯೋಗಕ್ಕಾಗಿ ಭಾವಸ್ಥಳದಲ್ಲಿ ಅಚ್ಚೊತ್ತಿ, ಭ್ರಮೆಗಳು ನಾಶವಾಗಿ ಕಾರಣ ತನುವಿನಲ್ಲಿ ವ್ಯಕ್ತವಾಗುವುದು ಭಾವಲಿಂಗ. 
ಇಷ್ಟಲಿಂಗವನ್ನ ಹಿಡಿದೇ ಪ್ರಾಣಲಿಂಗವನ್ನು ಭಾವಲಿಂಗವನ್ನು‌ ದರ್ಶಿಸಬೇಕು ಹಾಗಾಗಿ  ಇಷ್ಟಲಿಂಗ ನಿಷ್ಟೆ ಅತ್ಯಂತ ಮುಖ್ಯವಾದದ್ದು. 

#ಅಂಗದ ಮೇಲೆ ಆಯತವಾದುದೆ ಇಷ್ಟಲಿಂಗ,
ಆ ಇಷ್ಟಲಿಂಗವಿಡಿದಿಹುದೆ ಪ್ರಾಣಲಿಂಗ ಸ್ವಾಯತ,
ಇಷ್ಟಲಿಂಗ ಉದಯಿಸಿದಲ್ಲದೆ ಪ್ರಾಣಲಿಂಗವ ಕಾಣಬಾರದು
ಪ್ರಾಣಲಿಂಗ ಉದಯಿಸಿದಲ್ಲದೆ ಇಷ್ಟಲಿಂಗವ ಕಾಣಬಾರದು,
ಈ ಭೇದವ ಭೇದಿಸಬಲ್ಲರೆ ಕೂಡಲಚೆನ್ನಸಂಗನಲ್ಲಿ ಲಿಂಗೈಕ್ಯವು. / 22
- ಚಿನ್ಮಯಜ್ಞಾನಿ ಚೆನ್ನಬಸವಣ್ಣನವರು

*ಇಷ್ಟಲಿಂಗ, ಪ್ರಾಣಲಿಂಗ, ಭಾವಲಿಂಗದ ಪೂಜೆಯ ಸ್ವರೂಪ*
#ಇಷ್ಟಲಿಂಗದ ಪೂಜೆಯಾವುದು,
ಪ್ರಾಣಲಿಂಗದ ಪೂಜೆಯಾವುದು,
ಭಾವಲಿಂಗದ ಪೂಡೆಯಾವುದುಯೆಂದರೆ ಹೇಳಿಹೆ ಕೇಳಿರಯ್ಯ.
*ಇಷ್ಟಲಿಂಗಕ್ಕೆ ಅಷ್ಟವಿಧಾರ್ಚನೆಯ ಮಾಡುವುದು,
ಅದು ಇಷ್ಟಲಿಂಗದ ಪೂಜೆ.*
*ಆ ಲಿಂಗವನು ಮನಸ್ಸಿನಲ್ಲಿ ಧ್ಯಾನಿಸಿ
ಮನೋಮಧ್ಯದಲಿಪ್ಪ ನಿಃಕಲ ಬ್ರಹ್ಮವನು
ಧ್ಯಾನವೆಂಬ ಹಸ್ತದಲ್ಲಿ ಹಿಡಿದು
ಕರಸ್ಥಲದಲ್ಲಿಪ್ಪ ಲಿಂಗದ ಗೊತ್ತಿನಲ್ಲಿ ಕಟ್ಟಿ ನೆರೆವುದೀಗ
ಪ್ರಾಣಲಿಂಗದ ಪೂಜೆಯೆಂದು ಹೇಳಲ್ಪಟ್ಟಿತ್ತಯ್ಯ.*
*ಮನಸು ಲಿಂಗದಲ್ಲಿ ತಲ್ಲೀಯವಾಗಿ ನಚ್ಚಿ ಮಚ್ಚಿ
ಅಚ್ಚೊತ್ತಿ ಅಪ್ಪಿ ಅಗಲದಿಪ್ಪುದೇ
ಭಾವಲಿಂಗದ ಪೂಜೆಯೆಂದು ಹೇಳಲ್ಪಟ್ಟಿತ್ತಯ್ಯ.*
ಇವು ಮೂರು ಲಿಂಗದ ಅರ್ಚನೆ.
ಮೂರು ಲಿಂಗದ ಉಪಚಾರ.
ಶಿವಾರ್ಥಿಗಳಾದ ವೀರಶೈವರುಗಳು ಮಾಡುವ
ಲಿಂಗಾರ್ಚನೆಯ ಕ್ರಮವೆಂದು ಹೇಳಲ್ಪಟ್ಟಿತ್ತಯ್ಯಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ. / 136
- ತೋಂಟದ ಸಿದ್ಧಲಿಂಗೇಶ್ವರರು

ಇಷ್ಟಲಿಂಗ ಪೂಜೆ:
 ದೇವಾಲಯಗಳಲ್ಲಿಟ್ಟು ಪೂಜಿಸುವ ಸ್ಥಾವರಲಿಂಗಗಳಿಂದ ಬೇರೆಯಾದುದು ಇಷ್ಟಲಿಂಗ. ಇದು ದೇಹದ ಮೇಲೆ ಆಯತವಾಗಿ, ಅನಿಷ್ಟವನ್ನು ದೂರಗೊಳಿಸಿ, ಲಿಂಗಾಂಗ ಸಾಮರಸ್ಯದ ಇಷ್ಟಾರ್ಥವನ್ನು ಸಾಧಿಸಿಕೊಡುವ ಸಾಧನ. ಅರುಹನ್ನು ಅರಿಯಲು ಕೊಟ್ಟ ಕುರುಹು ಇದು. ಭಕ್ತ ಮಹೇಶ ಪ್ರಸಾದಿ ಸ್ಥಲಗಳು ಇದರ ಅನುಸಂಧಾನದ ಮಾರ್ಗದಲ್ಲಿ ಕಂಡುಬಂದ ವಿಕಾಸದ ಹೆಜ್ಜೆಗಳು. ಅಂಗದ ಮೇಲೆ ಲಿಂಗವನ್ನು ಧರಿಸಿದ ವ್ಯಕ್ತಿ ಅದನ್ನು ಅನನ್ಯ ಶ್ರದ್ಧೆಯಿಂದ ನಂಬುತ್ತಾನೆ. ಏಕೈಕ ನಿಷ್ಠೆಯಿಂದ ಉಪಾಸಿಸುತ್ತಾನೆ. ವಿಶ್ವವೆಲ್ಲಾ ಅದರ ಪ್ರಸಾದವೆಂದು ಭಾವಿಸುತ್ತಾನೆ; ಸಾವಧಾನ ಭಕ್ತಿಯಿಂದ ತನ್ನನ್ನು ಅದಕ್ಕೆ ಆರ್ಪಿಸಿಕೊಂಡು ತಾನೇ ಪ್ರಸಾದರೂಪನಾಗಿ ಪರಿಣಮಿಸುತ್ತಾನೆ. 
ಪ್ರಾಣಲಿಂಗ ಪೂಜೆ: 
ಇದರ ಮುಂದಿನ ಹೆಜ್ಜೆಯೇ ಪ್ರಾಣಲಿಂಗ ಪೂಜೆ.  ಇಷ್ಟಲಿಂಗದ ಶ್ರದ್ಧೆ ಪೂಜೆ ನಿಷ್ಠೆ ಅರ್ಪಣೆಗಳ ಒಳಗೊಂಡು ಆಂತರಿಕ ಜಗತ್ತನ್ನು ಪ್ರವೇಶಿಸುತ್ತದೆ.
ಇಷ್ಟಲಿಂಗವನ್ನು ಕರಸ್ಥಳದಲ್ಲಿಡಿದು 
ಅನಿಮಿಷ ದೃಷ್ಟಿ - ತದೇಕ ಚಿತ್ತದಿಂದ ನೋಡುತ್ತ, ಓಂ ನಮಃ ಶಿವಾಯ ಎಂಬ ಮಂತ್ರವನ್ನು ಜಪಿಸುತ್ತಾ, ನಾಸಿಕರಂದ್ರದಿಂದ ಸಮಚಿತ್ತವಾದ ಉಸಿರಾಟವಾಗಿ ಮನಸ್ಸು ಲಿಂಗಕಳೆಯನ್ನು ಹೊಂದಿ, ಅಷ್ಟದಳ ಕಮಲದಲ್ಲಿ ಚಲಿಸುವ ಹಂಸರೂಪಿ ಜೀವಾತ್ಮನು ಹೃದಯಾಬ್ಜ ಕೋಶದಲ್ಲಿ ಸ್ಥಿರವಾಗುವುದೇ ಪ್ರಾಣಲಿಂಗದ ಅನುಭಾವವು. 
ಭಾವಲಿಂಗ ಪೂಜೆ:
ದೇಹ ಇಂದ್ರೀಯ ಅಂತಃಕರಣಗಳನ್ನೆಲ್ಲವನ್ನು ಲಿಂಗಮುಖವಾಗಿಸಿದ ಅನುಭಾವಿಗೆ ಭಾವವೆಲ್ಲವೂ ಶಿವಮಯವಾಗಿರುತ್ತದೆ , ಅಂಗಭಾವವಿಲ್ಲದೆ ಲಿಂಗಭಾವವಿರುತ್ತದೆ ಇದೇ ಭಾವಲಿಂಗದ ಅನುಭಾವ.
ಲಿಂಗ ಸಾಮಾಜಿಕ ಸರ್ವಸಮಾನತೆಯ ಸಾಧನ:
 ತತ್ವದರ್ಶನದಲ್ಲಿ ಅತ್ಯುನ್ನತವಾದ ನಿಲವನ್ನು ಕಂಡುಕೊಳ್ಳುವುದಕ್ಕೆ ಇಷ್ಟಲಿಂಗ ಕಾರಣವಾದಂತೆ, ಸಾಮಾಜಿಕ ವ್ಯವಸ್ಥೆಯಲ್ಲಿ ವಿಷಮತೆಯನ್ನು ಅಳಿಸಿಹಾಕಿ ಸರ್ವಸಮಾನತೆಯನ್ನು ಸಾಧಿಸುವುದಕ್ಕೂ ಇದು ಸಾಧನವಾಯಿತು.
ಲಿಂಗದ ಈ ವ್ಯಾಪಕತೆಯನ್ನು ಕಂಡೇ ಬಸವಣ್ಣನವರು ಇದನ್ನು ಅಂಗೀಕರಿಸಿ,
ಲೋಕೋದ್ಧಾರದ ಕ್ರಾಂತಿಕಾರಕ ಕಾರ್ಯ ಕ್ಷೇತ್ರಕ್ಕೆ ಕಾರಣಶಕ್ತಿಯನ್ನಾಗಿ ಅಳವಡಿಸಿಕೊಂಡರು. 
ಇಷ್ಟಲಿಂಗವು ಸಾಕಾರವಾದರೂ ನಿರಾಕಾರ ನಿರ್ಗುಣ ನಿರಂಜನ ಶಿವನ ಸಂಕೇತ. ಇಷ್ಟ ಲಿಂಗವು ವಿಶ್ವದ ಸಂಕೇತವೂ ಹೌದು. ಅದನ್ನು ದೇಹದಮೇಲೆ ಧರಿಸಿ ಪೂಜಿಸುವ ಶಿಷ್ಯನ ಚಿತ್ಕಳೆಯ ಪ್ರತೀಕವೂ ಆಯಿತು. ಶಿಷ್ಯನ ಪ್ರಾಣಶಕ್ತಿಯೇ ಇಷ್ಟಲಿಂಗ ರೂಪವನ್ನು ಧರಿಸಿ ಆತನ ಕರಸ್ಥಲಕ್ಕೆ ಬಂದಿದೆ. ಅಂದರೆ ಆ ಲಿಂಗ, ಬ್ರಹ್ಮಾಂಡದ ಕುರುಹೂ ಹೌದು; ಪಿಂಡಾಂಡದ ಸಂಕೇತವೂ ಹೌದು. ಅಂತೆಯೇ ಶರಣರ ಹೃದಯದಲ್ಲಿ ಜ್ಯೋತಿರ್ಮಯವಾಗಿ ಬೆಳಗುತ್ತಿದೆ. ಜ್ಯೋತಿಯೇ ಇಷ್ಟಲಿಂಗದ ರೂಪನ್ನು ಧರಿಸಿ ಕರಸ್ಥಲಕ್ಕೆ ಬಂದಿದೆ. ಅಖಂಡ ಬ್ರಹ್ಮಾಂಡದ ಶಕ್ತಿಸರ್ವಸ್ವವೂ ತಮ್ಮ ಕರಸ್ಕಲದಲ್ಲಿ ಅಡಗಿರುವುದನ್ನು ಪರಿಭಾವಿಸಿ ಪರವಶರಾದ ಬಸವಣ್ಣನವರು ಹೀಗೆ ಹೇಳಿದ್ದಾರೆ. 
*ಲಿಂಗವು ವಿಶ್ವಾತ್ಮನ ಸ್ವರೂಪ*

#ಜಗದಗಲ ಮುಗಿಲಗಲ ಮಿಗೆಯಗಲ ನಿಮ್ಮಗಲ,
ಪಾತಾಳದಿಂದವೆ ಅತ್ತತ್ತ ನಿಮ್ಮ ಶ್ರೀಚರಣ,
ಬ್ರಹ್ಮಾಂಡದಿಂದವೆ ಅತ್ತತ್ತ ನಿಮ್ಮ ಶ್ರೀಮಕುಟ,
ಅಗಮ್ಯ ಅಗೋಚರ ಅಪ್ರತಿಮ ಲಿಂಗವೆ, ಕೂಡಲಸಂಗಮದೇವಯ್ಯಾ,
ಎನ್ನ ಕರಸ್ಥಲಕ್ಕೆ ಬಂದು ಚುಳುಕಾದಿರಯ್ಯಾ. / 652
- ಗುರು ಬಸವಣ್ಣನವರು
ಅಗಮ್ಯ ಅಗೋಚರ ಅಪ್ರತಿಮವಾದ ಶಕ್ತಿ, ಕರಸ್ಥಲಕ್ಕೆ ಬಂದು ಚುಳುಕಾಗಿದೆ ಎಂಬ
ಈ ಮಾತು, ಮಾತಿಗೆ ಮೀರಿದ ಅನುಭವದ ಅಸದೃಶ ಅಭಿವ್ಯಕ್ತಿಯಾಗಿದೆ. ಅಂತೆಯೇ

#ಕಾಣಬಾರದ ಲಿಂಗವು ಕರಸ್ಥಲಕ್ಕೆ ಬಂದಡೆ,
ಎನಗಿದು ಸೋಜಿಗ, ಎನಗಿದು ಸೋಜಿಗ !
ಅಹುದೆನಲಮ್ಮೆನು, ಅಲ್ಲೆನಲಮ್ಮೆನು,
ಗುಹೇಶ್ವರಲಿಂಗವು ನಿರಾಳ ನಿರಾಕಾರ ಬಯಲು ಆಕಾರವಾದಡೆ ! / 625
ಎಂದು ಅಲ್ಲಮಪ್ರಭು “ನಿರಾಳ ನಿರಾಕಾರವಾದ ಬಯಲು” ಆಕಾರ ಧರಿಸಿರುವುದನ್ನು
ಕಂಡು ಸೋಜಿಗಗೊಂಡಿದ್ದಾರೆ. ಸಾಕಾರವಾದರೂ ನಿರಾಕಾರದ ನಿಲವಿನಲ್ಲಿ ನಿಂತಿರುವ ರಹಸ್ಯಕ್ಕೆ ಬೆರಗುಗೊಂಡಿದ್ದಾರೆ.
ಸಂಸಾರ ದುಃಖವನ್ನು ಹೋಗಲಾಡಿಸಿ, ಶಾಶ್ವತವಾದ ಆನಂದವನ್ನು ಅಂದರೆ ಲಿಂಗಾಂಗ ಸಾಮರಸ್ಯದ ಸುಖವನ್ನು ಕೊಡುತ್ತದೆ ಇಷ್ಟಲಿಂಗ. ಅದನ್ನು ಸಾಧಿಸುವುದಕ್ಕಾಗಿ ಕೊಟ್ಟಿರುವ
ಕುರುಹು ಇದು, ಈ ಕುರುಹಿನ ಮೂಲಕ ಆ ಅರುಹನ್ನು ಕಂಡುಕೊಳ್ಳಬೇಕು
“ಅರುಹುವಿಡಿದು ಪೂಜಿಸಲೆಂದು ಕುರುಹು ಕೊಟ್ಟರೆ, ಅರುಹು ಬಿಟ್ಟು ಕುರುಹ
ಪೂಜಿಸುವ ಹೆಡ್ಡರ ನೋಡಾ” ಎಂದು ಅಲ್ಲಮಪ್ರಭು ಇಷ್ಟಲಿಂಗದ ರಹಸ್ಯವನ್ನು
ಅರಿಯದೆ ಪೂಜಿಸುವವರನ್ನು ಎಚ್ಚರಿಸುತ್ತಾರೆ.

#ಸಾಕಾರವಿಡಿದು ಅರ್ಚನೆ ಪೂಜನೆಯಂ ಮಾಡುವುದಲ್ಲದೆ
ನಿರಾಕಾರವ ನಂಬಲಾಗದು.
ಅಗ್ನಿಯಲ್ಲಿಹ ಗುಣವು ಪ್ರಕಾಶದಲುಂಟೆ?
ಶ್ರೀಗುರು ಕರಸ್ಥಲದಲ್ಲಿ ಬಿಜಯಂಗೈಸಿ ಕೊಟ್ಟ
ಇಷ್ಟಲಿಂಗವಿದ್ದ ಹಾಂಗೆ ವಜ್ರದೊಳಗೆ ಬಯಲನರಸುವರೆ?
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ. / 347
*ನಿರಾಕಾರವನ್ನರಿಯಬೇಕಾದರೆ ಸಾಕರವಿಡಿಯಲೇಬೇಕು*.
“ಆಕಾಶದಲ್ಲಾಡುವ
ಪಟಕ್ಕಾದರೂ ಮೂಲ ಸೂತ್ರವಿರಬೇಕು. 
 ಅಂಗಕ್ಕೆ ಲಿಂಗಸಂಗವಿಲ್ಲದೆ ನಿಸ್ಸಂಗವಾಗಬಾರದು”
ಎನ್ನುವ ಚನ್ನಬಸವಣ್ಣನವರ ಮಾತಿನಂತೆ ನಿಸ್ಸಂಗತ್ವವನ್ನು ಸಾಧಿಸಲು ಲಿಂಗಸಂಗ
ಅವಶ್ಯಕ.  ಇಷ್ಟಲಿಂಗ ಸಂಬಂಧವಿಲ್ಲದೆ,
ಅದರ ಪೂಜಾದಿ ಕ್ರಿಯೆಗಳಿಂದ ಸಾಧನೆಯಲ್ಲಿ ಮುಂದುವರಿಯದೆ ಕೇವಲ ಪ್ರಾಣ
ಲಿಂಗದ ಸ್ವರೂಪವನ್ನು ಕಂಡುಕೊಳ್ಳುತ್ತೇನೆಂದರೆ ಅದು ಸಾಧ್ಯವಾಗುವುದಿಲ್ಲ. ಸತ್
ಸಾಧನೆಯಿಲ್ಲದೆ ಸತ್ಫಲ ಲಭಿಸಲಾರದು.

#ಸತಿಯ ಸಂಗವತಿಸುಖವೆಂದರಿದಡೇನು ?
ಗಣಸಾಕ್ಷಿಯಾಗಿ ವಿವಾಹವಾಗದನ್ನಕ್ಕರ ?
ಕಣ್ಣು ಕಾಂಬುದೆಂದಡೆ, ಕತ್ತಲೆಯಲ್ಲಿ ಕಾಂಬುದೆ ದೀಪವಿಲ್ಲದನ್ನಕ್ಕರ ?
ಸೂರ್ಯನ ಪ್ರಕಾಶದಿಂದ ಕಂಡು
ತಾನೆ, ಕಂಡೆನೆಂಬ ಜಗದ ನಾಣ್ಣುಡಿಯಂತಾಯಿತ್ತು.
ಅಂಗವ ಬಿಟ್ಟು ಆತ್ಮನುಂಟೆ ? ಶಕ್ತಿಯ ಬಿಟ್ಟು ಶಿವನುಂಟೆ ?
ಇದು ಕಾರಣ-ಸ್ಥೂಲ ಸೂಕ್ಷ್ಮಕಾರಣ ತನುತ್ರಯವಿರಲು,
ಇಷ್ಟ ಪ್ರಾಣ ಭಾವವೆಂಬ ತ್ರಿವಿಧಲಿಂಗಸಂಬಂಧ ಬೇಡವೆಂದಡೆ
ಅಸಂಖ್ಯಾತ ಪ್ರಮಥಗಣಂಗಳೊಪ್ಪುವರೆ ?
ಕೂಡಲಚೆನ್ನಸಂಗಯ್ಯನಲ್ಲಿ ಇಷ್ಟಲಿಂಗಸಂಬಂಧವಿಲ್ಲದವರ ಮುಖವ
ನೋಡಲಾಗದು ಪ್ರಭುವೆ. / 1574
ಎಂದು ಚನ್ನಬಸವಣ್ಣನವರು ಅನೇಕ ಸಾದೃಶ್ಯಗಳನ್ನು ಕೊಟ್ಟು ಇಷ್ಟಲಿಂಗದ ಮಹತ್ವ ಅವಶ್ಯಕತೆ ಹೇಳಿರುವರು.

“ಎಳ್ಳಿಂಗೆ ಪರಿಮಳವ ಕಟ್ಟಿದಲ್ಲದೆ ಎಣ್ಣೆಗೆ ಪರಿಮಳವೇಧಿಸದು.
ದೇಹದಲ್ಲಿ ಇಷ್ಟಲಿಂಗ ಸ್ಥಾಪಿಸಿದಲ್ಲದೆ ಪ್ರಾಣಲಿಂಗ ಸಂಬಂಧವಾಗದು' ಎಂಬುದಾಗಿಯೂ, “ಕರಸ್ಥಲಕ್ಕೆ ಇಷ್ಟಲಿಂಗ ಸಾಹಿತ್ಯವಿಲ್ಲದಿದ್ದರೆ ಜ್ಞಾನಯೋಗದ ಕೂಟ ಸಾಧ್ಯವಾಗದು” ಎಂಬುದಾಗಿಯೂ ಅಲ್ಲಮಪ್ರಭು ಇಷ್ಟಲಿಂಗದ ಆವಶ್ಯಕತೆಯನ್ನು ಒತ್ತಿ ಹೇಳುತ್ತಾರೆ. 
ರತ್ನದೀಪ್ತಿಯಾದರೂ ಬಂಧಿಸಿ ಕುಂದಣದಲ್ಲಿಯೇ ಸಂದಿರಬೇಕು; ಸ್ವಾದುರಸದ ರುಚಿಯ ನೀವ ಫಲವಾದರೂ ವೃಕ್ಷದಿಂದಲೇ ಲಭಿಸಬೇಕು; ಚಿತ್ರ ಸೌಂದಯ್ಯ ನೋಟಕ್ಕೆ ಸುಖವಾದರೂ ಭಿತ್ತಿಯ ಮೇಲೆಯೇ ಅದನ್ನು ಚಿತ್ರಿಸಬೇಕು - ಈ ಮುಂತಾದ ಸಾದೃಶ್ಯಗಳಿಂದ ಅದನ್ನು ಸಮರ್ಥಿಸುತ್ತಾರೆ.
ನಿರಾಕಾರ ತತ್ವವೊಂದೇ ಸತ್ಯವೆಂಬ ಮಾರ್ಗವಲ್ಲ ಶರಣರದು. ಅಂತೆಯೇ
ಕೇವಲ ಸಾಕಾರದಲ್ಲಿಯೇ ಪರವಸಾನವಾಗುತ್ತದೆ ಎಂಬ ದ್ವೈತವೂ ಅಲ್ಲ. ಸಾಕಾರವಿಡಿದು ನಿರಾಕಾರಕ್ಕೇರುವ ಸಮನ್ವಯಮಾರ್ಗ 
ಶರಣರದು. ಇಷ್ಟಲಿಂಗೋಪಾಸನೆಯಲ್ಲಿ ಅದು
ವ್ಯಕ್ತವಾಗುತ್ತದೆ. ಇಷ್ಟಲಿಂಗ ಸಾಕಾರವೂ ಅಲ್ಲ ; ನಿರಾಕಾರವೂ ಅಲ್ಲ. 
“ನಿರಾಕಾರವೆಂಬೆನೆ, ಸಾಕಾರವಾಗಿದೆ ; ಸಾಕಾರವೆಂಬೆನೆ ನಿರಾಕಾರವಾಗಿದೆ.” 
ಎಂದು ಉದ್ದಾರ ತೆಗೆಯುವಂತಹ ಧ್ವನಿಪೂರ್ಣವಾದ ಸಾಂಕೇತಿಕ ಸ್ವರೂಪ ಇದರದು. ಅಂತರಂಗದಲ್ಲಿದ್ದ ನಿರಾಕಾರ ಲಿಂಗವನ್ನು ಗುರು, ಸಾಕಾರಲಿಂಗವ ಮಾಡಿ ಶಿಷ್ಯನ ಕರಸ್ಥಲಕ್ಕೆ ತಂದುಕೊಟ್ಟಿದ್ದಾನೆ. ಹೀಗೆ ನೋಟಕ್ಕೆ ಇದು ಸಾಕಾರವಾಗಿದ್ದರೂ ಇದರ ಮೂಲ ಇರುವುದು ನಿರಾಕಾರದಲ್ಲಿ, ಅದರ ಫಲ ದೊರಕೊಳ್ಳುವುದು ನಿರಾಕಾರದಲ್ಲಿಯೇ,
ಬಯಲಿನಲ್ಲಿ ಬಯಲಾದಾಗಲೇ. ಇದರ ಉಪಾಸನೆಯಲ್ಲಿ ಇತರ ಮೂರ್ತಿ ಪೂಜೆ
ಗಳಂತಹ ದ್ವೈತ ಭಾವನೆ ಉಂಟಾಗುವುದಿಲ್ಲ. ಇದು ಬೇರೊಂದು ಮೂರ್ತಿಯೇ ಅಲ್ಲ : ತನ್ನ ಹೃದಯಕಮಲದ ಬೆಳಗೇ ಮೈವೆತ್ತಿದೆ ಎಂಬ ಭಾವನೆಯೇ ಇಲ್ಲಿ ವ್ಯಾಪಿಸಿರುತ್ತದೆ. ತನ್ನನ್ನೇ ತಾನು ಇಲ್ಲಿ ಕಂಡುಕೊಳ್ಳುತ್ತಾನೆ ಸಾಧಕ. ಆದುದರಿಂದಲೇ ಇದನ್ನು "ಅಹಂಗ್ರಹೋಪಾಸನೆ" ಎಂದು ಕರೆಯಲಾಗಿದೆ.  ಕನ್ನಡಿಯನ್ನು ನೋಡುವ ಅಂಗನೆ, ವಾಸ್ತವವಾಗಿ ನೋಡುತ್ತಿರುವುದು ಕನ್ನಡಿಯನ್ನಲ್ಲ ; ಅದರಲ್ಲಿ ಕಾಣುವ ತನ್ನನ್ನು ; ತನ್ನ ರೂಪ ಹಾವ ಭಾವ ವಿಭ್ರಮಗಳನ್ನು. ಹಾಗೆಯೇ ಇಷ್ಟಲಿಂಗದಲ್ಲಿ ಸಾಧಕ ತನ್ನನ್ನೇ ಕಂಡು
ಕೊಳ್ಳುತ್ತಾನೆ. ಆತನ ಆತ್ಮಸ್ವರೂಪವನ್ನು ಪ್ರತಿಬಿಂಬಿಸುವ ಕನ್ನಡಿ ಇಷ್ಟಲಿಂಗ
“ಕಣ್ಣಿನಿಂದ ಕನ್ನಡಿಯ ನೋಡಿ ಕಂಗಳೊಳಗಣ ಕಲೆಯ ಕಾಂಬಂತೆ, ತನ್ನಿಂದ ನೋಡಿ
ತನ್ನನರಿಯಬೇಕು” ಎನ್ನುತ್ತಾರೆ ಮೋಳಿಗೆ ಮಾರಯ್ಯನವರು. 
ಇದೇ ಅಭಿಪ್ರಾಯವನ್ನು ಅಲ್ಲಮಪ್ರಭು ಹೀಗೆ ಹೇಳಿದ್ದಾನೆ :

#ಪ್ರಾಣಲಿಂಗದ ಪ್ರಸನ್ನ ಮುಖವ ಪರಿಣಾಮಿಸಲೋಸುಗ,
ಕರತೇಜವೆಂಬ ದರ್ಪಣವ ಹಿಡಿದಿರ್ಪನು ನೋಡಾ !
ಗುಹೇಶ್ವರ ಲಿಂಗದಲ್ಲಿ ನಿಜವನೈದಿಹೆನೆಂದರೆ
ಕುರುಹುವಿಡಿದು ಕುರುಹುಗೆಡಬೇಕು ಕಾಣಾ
ಸಿದ್ಧರಾಮಯ್ಯ./

ಕುರುಹವಿಡಿದು ಕುರುಹುಗೆಡಬೇಕು ಎಂಬ ಮಾತು ಅರ್ಥವತ್ತಾದುದು. ದರ್ಪಣ
ಹಿಡಿದು ನೋಡುತ್ತಾ ನೋಡುತ್ತಾ ದರ್ಪಣದ ಭಾವವನ್ನು ಮೀರಬೇಕು : ಜ್ಯೋತಿ
ಯನ್ನು ಹಿಡಿದು ನೋಡುತ್ತಾ ನೋಡುತ್ತಾ ತಾನೇ ಸ್ವಯಂ ಜ್ಯೋತಿಯಾಗಿ ಪರಿಣಮಿಸಬೇಕು. ಇದು ಶರಣರು ಇಷ್ಟಲಿಂಗವನ್ನು ಕಂಡ ಬಗೆ ; 
ಇಷ್ಟಲಿಂಗ:
"ಇಷ್ಟಿ’ ಎಂದರೆ ಪೂಜೆ, ಉಪಾಸನೆ, ಈ ಪೂಜೆ ಆಥವಾ ಉಪಾಸನೆಗೆ ಅತ್ಯಂತ ಸೂಕ್ತವು, ಶ್ರೇಷ್ಠವೂ ಆದ ಕಾರಣ ಇದು ಇಷ್ಟಲಿಂಗ. ಇಷ್ಟ ಪಟ್ಟು ಸಾಧಕನು ತನ್ನ ಆತ್ಮದರ್ಶನ, ಸ್ವರೂಪ ಸಾಕ್ಷಾತ್ಕಾರಕ್ಕಾಗಿ ಪಡೆದುಕೊಳ್ಳುವ ಕಾರಣ ಇದು ಇಷ್ಟಲಿಂಗವು. ಇಷ್ಟವನ್ನು, ಒಳಿತನ್ನು, ಲೇಸನ್ನು ಪ್ರತಿಷ್ಠಾಪಿಸುವ ಮನೋಬಲ, ಬುದ್ಧಿಬಲ, ಆತ್ಮಬಲಗಳನ್ನು ಬೆಳೆಸುವುದು ಯಾವುದೋ ಅದೇ ಇಷ್ಟಲಿಂಗ. ಇಷ್ಟಲಿಂಗ ಪರಮಾತ್ಮನ ಕುರುಹಿನ ಪೂಜೆ. ಪರಮ ನಿರಂಜನದ ಕುರುಹು ಎಂದು ಇಷ್ಟಲಿಂಗ ಪೂಜೆ ಸ್ವರೂಪ ಸಿದ್ಧವಸ್ತುವಾಗಿದೆ. ಪರಶಿವನ ಇರುಹಿನ ನೆಲೆಯ ತೋರುವ ಕುರುಹಿದು. ಇದು ನಿರ್ಗಣೋಪಾಸನೆಗೆ ಸಾದನ. ನಿರ್ಗುಣದ ಸಾಕಾರ. ಗುರು ಬಸವಣ್ಣನವರು ಇಷ್ಟಲಿಂಗವನ್ನು ದೇವರ ಅರಿವನ್ನು ಮಾಡಿಕೊಡುವ ಕುರುಹು ಎನ್ನುತ್ತಾರೆ. ದೇವರು ಎನ್ನುವ ಧ್ಯೇಯ ವಸ್ತುವನ್ನು ತಲುಪಲು ಸಹಾಯಕವಾಗುವ ಕರಸ್ಥಲದ ಜ್ಯೋತಿ ಎನ್ನುತ್ತಾರೆ. ಬಸವಣ್ಣನವರು ಇಷ್ಟಲಿಂಗವನ್ನು ವಿಶ್ವದಾಕಾರದ ಗೋಲಾಕಾರದಲ್ಲಿ ರೂಪಿಸಿದರು. ಇದು ಮೂರ್ತಿ ಅಥವಾ ಕಲ್ಲಿನ ಪೂಜೆ ಅಲ್ಲ. ಇಷ್ಟಲಿಂಗದಲ್ಲಿ ದೇವಸ್ಥಾನದ ಮೂರ್ತಿಪೂಜೆಯಂತೆ ಆಹ್ವಾನ ವಿಸರ್ಜನೆಯಿಲ್ಲ. ಪರಮಾತ್ಮನು ಸದಾ ಸರ್ವಾಂತರ್ಗತ. ಇದು ಕಲ್ಲಲ್ಲ. ತ್ರಾಟಕಯೋಗ ಸಾಧನೆಗೆ ಸಹಕಾರಿಯಾಗುವಂತೆ ಹೊಳಪುಳ್ಳ ಆವರಣವನ್ನು ಸಿದ್ಧಪಡಿಸಲಾಗಿದೆ.
ಲಿಂಗಾಯತರಿಗೆ ಇಷ್ಟಲಿಂಗ ನಿರಾಕಾರ, ಸರ್ವವ್ಯಾಪಿ, ಸರ್ವಗತ, ನಾಮರಹಿತ ಶಿವನ ಕುರುಹು. 

*ಲಿಂಗಧಾರಣೆ - ಲಿಂಗದೀಕ್ಷೆ*
ಲಿಂಗಾಯತರಲ್ಲಿ ಲಿಂಗಧಾರಣೆಯ ದೀಕ್ಷಾ ಕಾರ್ಯಕ್ರಮವಿರುವುದು.  ಗುರುವು ಶಿಷ್ಯನಿಗೆ ಲಿಂಗಧಾರಣವನ್ನು ಮಾಡುತ್ತಾನೆ. ಈ ಲಿಂಗಕ್ಕೆ ಇಷ್ಟಲಿಂಗವೆಂದು ಹೆಸರು. ಲಿಂಗವನ್ನು ಎಲ್ಲರೂ ಆಜೀವ ಪರ್ಯಂತ ಧರಿಸಬೇಕು. ಗಂಡು ಹೆಣ್ಣಿನ ಬೇಧವಿಲ್ಲ. ನಿತ್ಯ ಪೂಜೆ ಮಾಡಬೇಕು. ಇದನ್ನು ಹೃದಯದಲ್ಲಿರುವ ಪರಶಿವನ ರೂಪವಾಗಿ ಎದೆಯಮೇಲೆ ಧರಿಸಬೇಕು.
ಈ ಇಷ್ಟಲಿಂಗವನ್ನು ಚಿಕ್ಕ ಬಟ್ಟೆಯಲ್ಲಿ ಸುತ್ತಿ ಅಥವಾ ಬೆಳ್ಳಿಯ ಅಥವಾ ಬಂಗಾರದ ಕರಂಡಿಕೆಯಲ್ಲಿ ಇಟ್ಟು ಕಟ್ಟಿಕೊಳ್ಳುವರು. ಮಗು ಗರ್ಭಸ್ಥವಾಗಿರುವಾಗಲೇ ಅದಕ್ಕೆ ಲಿಂಗಸಂಸ್ಕಾರ ತಾಯಿಯ ಮೂಲಕ ಆಗಬೇಕೆಂಬ ನಿಯಮ, ಲಿಂಗನಿಷ್ಠೆಯ ಪ್ರತೀಕವಾಗಿ ಬೆಳೆದುಬಂದಿದೆ. ಸಾಮಾನ್ಯವಾಗಿ ಮಗು ಹುಟ್ಟಿದಾಗ ಗುರುವು ಪೂಜೆ ಮಾಡಿ, ಮಗುವಿಗೆ ಇಷ್ಟಲಿಂಗವನ್ನು ಕೊರಳಲ್ಲಿ ಕಟ್ಟುತ್ತಾನೆ.ಮಗು ಹುಟ್ಟಿದಾಗ ಕಟ್ಟುವ ಲಿಂಗವನ್ನು ಸಾಮಾನ್ಯವಾಗಿ ಕಪ್ಪು ಪದರಶಿಲೆಯಿಂದ(slate) ಮಾಡಲಾಗುವುದು. ಇದು ಹುಟ್ಟುಲಿಂಗ, ಆಗ ಧರಿಸುವುದು ವಿಧ್ಯುಕ್ತವಾದ ಪ್ರೀತಿಯಲ್ಲಿ ನಿರ್ಮಿತವಾದ ಬಹು ಚಿಕ್ಕ ಆಕಾರದ ಲಿಂಗ: ಪಾಣಿಪಟ್ಟಲು, ಜಲಹರಿ
ಮತ್ತು ಗೋಳಾಕಾರಗಳಿಂದ ಕೂಡಿ ಸ್ಥಾವರಲಿಂಗವನ್ನೇ ಹೋಲುವಂತಹದು. ಮಗು
೭-೮ ವರ್ಷಗಳವರೆಗೂ ಆ ಹುಟ್ಟುಲಿಂಗವನ್ನು ಧರಿಸಿಕೊಂಡಿರುತ್ತದೆ. 
ಆ ಮಗು ೮ ವರ್ಷವಾದಾಗ ಮನೆತನದ ಗುರುವಿನಿಂದ ಪೂಜೆಯ ಕ್ರಮವನ್ನು ತಿಳಿದುಕೊಂಡು ಗುರುವಿನಿಂದ ದೀಕ್ಷೆಯನ್ನು ಪಡೆಯುತ್ತಾನೆ . ಎಂಟನೆ ವರ್ಷದಲ್ಲಿ ವಿಧ್ಯುಕ್ತವಾಗಿ ದೀಕ್ಷೆ ನಡೆಯಬೇಕು.
ವೇಧಾ, ಮಂತ್ರ, ಕ್ರಿಯಾದೀಕ್ಷೆಗಳಿಂದ ಇದು ಕೂಡಿರುತ್ತದೆ. ಗುರು, ಶಿಷ್ಯನ ಕರಸ್ಥಲ
ದಲ್ಲಿ ಇಷ್ಟಲಿಂಗವನ್ನು ಕೊಟ್ಟು ಅದರ ರಹಸ್ಯವನ್ನು ನಿರೂಪಿಸಿ ಪಂಚಾಕ್ಷರಿ ಮಂತ್ರ
ವನ್ನು ಬೋಧಿಸುತ್ತಾನೆ.
ಮಗು ಧರಿಸಿದ ಹುಟ್ಟುಲಿಂಗ, ಇಷ್ಟಲಿಂಗವಾಗುವುದಕ್ಕೆ ಮುನ್ನ ಇನ್ನೊಂದು
ಸಂಸ್ಕಾರವನ್ನು ಪಡೆಯುತ್ತದೆ. ಆ ಲಿಂಗದ ಮೇಲೆ ಕಪ್ಪು ಬಣ್ಣದ ಆಚ್ಛಾದನೆಯೊಂದು
ಬರುತ್ತದೆ. ಇದನ್ನು ಕಂಥೆ ಅಥವಾ ಕಾಂತಿ ಎಂದು ಕರೆಯುತ್ತಾರೆ. ಇದು ಮುಖ್ಯವಾಗಿ
ಗೇರುಬೀಜದ ಎಣ್ಣೆ ಮತ್ತು ತುಪ್ಪದ ಅಥವಾ ಕರ್ಪೂರದ ಕಾಡಿಗೆಯ ಮಿಶ್ರಣದಿಂದ
ಸಿದ್ಧವಾಗುತ್ತದೆ. ಲಿಂಗಕ್ಕೆ ಈ ಕಂಥೆಯನ್ನು ಕಟ್ಟುವುದೇ ಒಂದು ಕಲೆಯಾಗಿ,
ಕಾಯಕವಾಗಿ ಬೆಳೆದುಬಂದಿದೆ. ಹುಟ್ಟು ಲಿಂಗವನ್ನು ಮಧ್ಯದಲ್ಲಿ ಒಳಗೊಂಡು ಅದರ
ಸುತ್ತ ಸ್ವಲ್ಪಮಟ್ಟಿಗೆ ಅಂಡಾಕಾರವಾಗಿರುವಂತೆ ಕಂಥೆಯನ್ನು ಕಟ್ಟುತ್ತಾರೆ. ಒಳಗಿರುವ
ಲಿಂಗ ಮೇಲ್ಮುಖವಾಗಿರುವಂತೆ ಅಂಡಾಕಾರದ ಒಂದು ಕೊನೆಯನ್ನು ಚಪ್ಪಟೆಯಾಗಿ
ಮಾಡಿ ಅದನ್ನು ಅಂಗೈಲಿಟ್ಟು ಪೂಜಿಸಲು ಅನುಕೂಲವಾಗುವಂತೆ ನಿರ್ಮಿಸಲಾಗುತ್ತದೆ.
ಒಂದು ಹದದಲ್ಲಿ ತಯಾರಿಸಿದ ಈ ಕಂಥೆ ಉಜ್ಜಿದಷ್ಟೂ ಹೊಳಪನ್ನು ಕೊಡುತ್ತಾ
ಕಾಂತಿ ಎಂಬ ಹೆಸರಿಗೆ ಅನ್ವರ್ಥವಾಗುತ್ತದೆ. ಬ್ರಹ್ಮಾಂಡದ ಆಕಾರವನ್ನು ಹೋಲುವ
ಆ ಕಾಂತಿ, ಅದರೊಳಡಗಿರುವ ಪಿಂಡಾಂಡದ ಸಂಕೇತದಂತಿರುವ ಹುಟ್ಟು ಲಿಂಗ. ಹುಟ್ಟುಲಿಂಗ  ಜೀವಾತ್ಮ ಪ್ರತೀಕವಾದರೆ, ಕಂತೆ ಕಟ್ಟಿದ ಮೇಲೆ ವಿಶ್ವಾತ್ಮನ ಪ್ರತೀಕ. ಜೀವಾತ್ಮ ಪರಮಾತ್ಮನಲ್ಲಿರುವ ಸಿದ್ಧಾಂತವಿದು.
ಅದನ್ನು ಹಸ್ತದಲ್ಲಿಟ್ಟುಕೊಂಡು ದಿಟ್ಟಿಸಿದರೆ ಪ್ರತಿಫಲನವನ್ನು ಕೊಡುವ ಕಪ್ಪುಕಂಥೆ ಕಾಣುತ್ತದೆ. ಲಿಂಗದರ್ಪಣ ಎಂಬ ಹೆಸರನ್ನು ಸಾರ್ಥಕಗೊಳಿಸಿ ದರ್ಪಣದಂತೆ ಹೊಳೆಯುತ್ತದೆ. ಈ ಕಂಥೆಯಲ್ಲಿ ಶಿಷ್ಯನ ಚಿಕ್ಕಳೆಯನ್ನು ಕೇಂದ್ರೀಕರಿಸಿ ನಿಕ್ಷೇಪಿಸಿದ ಗುರು ಅದನ್ನು ಶಿಷ್ಯನ ಕರಸ್ಥಲದಲ್ಲಿಡುತ್ತಾನೆ. ಅಲ್ಲಿಂದ ಮುಂದೆ ಅದು "ಅಹಂಗ್ರಹೋಪಾಸನೆ"ಯ ಸ್ವಾತ್ಮಸಾಕ್ಷಾತ್ಕಾರದ ಅನುಸಂಧಾನಕ್ಕೆ ಕಾರಣವಾಗುತ್ತದೆ.

ಈ ಲಿಂಗವನ್ನು ದೇಹದ ಮೇಲೆ ನಿರಂತರವೂ ಧರಿಸಬೇಕು. ಚಿನ್ನದ ಬೆಳ್ಳಿಯ
ಅಥವಾ ಗಂಧದ “ಕರಡಿಗೆ'ಯಲ್ಲಿಟ್ಟು ಎದೆಯ ಮೇಲೆ ಬರುವಂತೆ ಅದನ್ನು ಕಟ್ಟಿಕೊಳ್ಳುತ್ತಾರೆ. ಶುಭ್ರವಾದ ಕಾವಿಯ ಬಟ್ಟೆಯಲ್ಲಿ ಅದನ್ನಿಟ್ಟು ಕಟ್ಟಿ ಕೊಳ್ಳುವುದೂ ಉಂಟು. ಈ ಲಿಂಗವನ್ನು ದಿನಕ್ಕೆ ಎರಡು ಮೂರು ಸಾರಿಯಾದರೂ ಪೂಜಿಸಬೇಕೆಂಬುದು ನಿಯಮ.

 ಲಿಂಗಾಂಗ ಯೋಗ:
ಲಿಂಗಾಂಗ ಯೋಗವು ಮೂರು ಹಂತದಲ್ಲಿ ನಡೆಯುತ್ತದೆ.
1.ಇಷ್ಟಲಿಂಗ ಪೂಜೆ
2. ದೃಷ್ಠಿಯೋಗ
3.ಅಂಗ-ಲಿಂಗ ಸಮರಸ.  
ಸ್ನಾನಮಾಡಿ ಶುಭ್ರ ವಸ್ತ್ರಧಾರಿಯಾಗಿ , ಪೂಜಾಗೃಹ ಪ್ರವೇಶಿಸಿ, ಸಂಕಲ್ಪ ಪೂರ್ವಕವಾಗಿ ಪೂಜೆಯನ್ನು ಪ್ರಾರಂಭಿಸಬೇಕು. ವಿಭೂತಿ, ರುದ್ರಾಕ್ಷಿ, ಧೂಪ, ದೀಪ ಮತ್ತು ಬಗೆಬಗೆಯ ಪುಷ್ಪಗಳು ಅಭಿಷೇಕದ ಪರಿಕರಗಳೂ ಇಲ್ಲಿ ಬರುತ್ತವೆ. ಇಷ್ಟಲಿಂಗವನ್ನು ಸಜ್ಜೆಯಿಂದ ಹೊರತೆಗೆದು ಎಡ ಅಂಗೈ ಮೇಲಿಟ್ಟುಕೊಂಡು ಪೂಜೆಯನ್ನು ಪ್ರಾರಂಭಿಸುತ್ತಾರೆ.
 ಲಿಂಗವನ್ನು ಮಂತ್ರೋದಕದಿಂದ ತೊಳೆಯಬೇಕು. ಶುದ್ಧ ವಸ್ತ್ರದಿಂದ ಒಣಗಿಸಬೇಕು.ಇವೆಲ್ಲಾ ಬಹುಶಃ ಮನಸ್ಸನ್ನು ಕೇಂದ್ರೀಕರಿಸುವ ವಾತಾವರಣವನ್ನು ನಿರ್ಮಿಸಲು ಪೂರ್ವ ಪೀಠಿಕೆ ಎನ್ನಬಹುದೇ ಹೊರತು ಅನಿವಾರ್ಯವಾದ ನಿಯಮಗಳಲ್ಲ. ಪೂಜೆಯಲ್ಲಿ ಪ್ರಾಣಾಯಾಮ ಧ್ಯಾನ ಧಾರಣಾದಿಗಳೂ ಸೂಕ್ತವಾದ ಪರಿವರ್ತನೆಯಿಂದ ಇಲ್ಲಿ ಸ್ಥಾನವನ್ನು ಪಡೆದಿವೆ. ಪದ್ಮಾಸನ ಇಲ್ಲವೇ ಸಿದ್ಧಾಸನ ಇಲ್ಲವೇ ಸುಖಾಸನದಲ್ಲಿ ಕುಳಿತು, ಎಡಗೈಯಲ್ಲಿ ಲಿಂಗವನ್ನಿಟ್ಟು ಅದನ್ನು ಮೂಗಿನ ನೇರದಲ್ಲಿ ಕಣ್ಣಿನಿಂದ ಸುಮಾರು ಒಂದು ಅಡಿದೂರದಷ್ಟು ಚಾಚಿ, ಅರ್ಧನಿಮೀಲಿತ ದೃಷ್ಟಿಯಿಂದ ಲಿಂಗವನ್ನು ದೃಷ್ಟಿಸುವ ಬಗೆಯನ್ನು ಗುರುಮುಖದಿಂದ ತಿಳಿದುಕೊಳ್ಳಬೇಕು. 

ಲಿಂಗಪೂಜೆಗೆ ಕುಳಿತ ಆ ಆಕಾರವೇ ಲಿಂಗಸ್ವರೂಪವನ್ನು ಹೋಲುತ್ತದೆ. ಶಿವನಾಗಿಯೇ ಶಿವನನ್ನು ಪೂಜೆಸುವುದು ಮಾನಸಿಕ ನಿಲವಿನಲ್ಲಿ ಕಂಡುಬರುವಂತೆ, ಕೈಕೊಂಡಿರುವ ಆಸನ ಕ್ರಮದಲ್ಲಿಯೂ ಗೋಚರವಾಗುತ್ತದೆ.ಇಷ್ಟಲಿಂಗದ ಮೇಲೆ ದೃಷ್ಟಿ ನೆಟ್ಟು ಓಂ ನಮಃ ಶಿವಾಯ ಮಂತ್ರವನ್ನು ಸಾವಧಾನವಾಗಿ ಉಚ್ಚರಿಸಬೇಕು. ಮಂತ್ರವನ್ನು ಎಷ್ಟು ಸಲವಾದರೂ ಉಚ್ಚರಿಸಬಹುದು. ಪೂಜೆ ಅಭಿಷೇಕಾದಿಗಳು ಮುಗಿದನಂತರ ಈ ಕ್ರಮದಲ್ಲಿ ಕುಳಿತು ಉಸಿರಾಟವನ್ನು ಕ್ರಮಗೊಳಿಸಿ ಪಂಚಾಕ್ಷರಿ ಮಂತ್ರ ಜಪಿಸುತ್ತಾ ಇಷ್ಟಲಿಂಗವನ್ನೇ ಎವೆಯಿಕ್ಕದ ಏಕಾಗ್ರತೆಯಿಂದ ದಿಟ್ಟಿಸುವುದು ಪೂಜೆಯ ಬಹುಮುಖ್ಯವಾದ ಭಾಗ. ಇದೇ ಅಂಗ ಲಿಂಗಗಳ ಅನುಸಂಧಾನ. ಹೊಳೆಯುತ್ತಿರುವ ಕಪ್ಪುವರ್ಣದ ಕಂಥೆ, ಕಂಥೆಯನ್ನು ಕಟ್ಟುವಾಗ ಒಳಗಿರುವ ಲಿಂಗದ ಜಲಹರಿಯನ್ನು ಸೂಚಿಸಲು ಕಂಥೆಯ ಮೇಲೆ ಒಂದು ಗುರುತನ್ನು ಮಾಡಿರುತ್ತಾರೆ. ಲಿಂಗವನ್ನು ಅಂಗೈ ಮೇಲೆ ಇಟ್ಟು ಕೊಂಡಾಗ ಅ ಗುರುತು ಎಡಗೈ ಹೆಬ್ಬೆರಳಿನ ಕಡೆ ತಿರುಗಿರಬೇಕು, ಲಿಂಗವೇ ತಾನಾಗಿ ಪೂಜಿಸುವ ಸೂಚನೆಯ ಅಲ್ಲಿದೆ ಎನ್ನುತ್ತಾರೆ.
ದೃಷ್ಠಿ ಯೋಗ:
ದೃಷ್ಟಿಯನ್ನು ಆಕರ್ಷಿಸಿ ಮನಸ್ಸನ್ನು ಕೇಂದ್ರೀಕರಿಸಲು ನೆರವಾಗುತ್ತದೆ. ಮೊದಮೊದಲು ಕೇಂದ್ರೀಕರಣ ಸ್ವಲ್ಪ ಕಷ್ಟವಾಗುತ್ತದೆ. ಕ್ರಮೇಣ ಈ ದೃಷ್ಟಿಯೋಗ
ಅಥವಾ ತ್ರಾಟಕಯೋಗದಿಂದ
ಮನೋಲಯವಾಗಿ ಬಚ್ಚಬರಿಯ ಬೆಳಗು, ಲಿಂಗದಲ್ಲಿ ಗೋಚರವಾಗುತ್ತದೆ. ಆ ಬೆಳಗಿನೊಳಗೆ ತಾನೂ ಬೆಳಗಾಗುವ ಸಾಮರಸ್ಯದ ಸುಖ ಸಾಧಕನ ಅನುಭವಕ್ಕೆ ಬರತೊಡಗುತ್ತದೆ.



#ನೋಟವೆ ಕೂಟ, ಕೂಟವೆ ಪ್ರಾಣ,
ಪ್ರಾಣವೆ ಏಕ, ಏಕವೆ ಸಮರಸ,
ಸಮರಸವೆ ಲಿಂಗ, ಲಿಂಗವೆ ಪರಿಪೂರ್ಣ,
ಪರಿಪೂರ್ಣವೆ ಪರಬ್ರಹ್ಮ, ಪರಬ್ರಹ್ಮವೆ ತಾನು !
- ಇಂತೀ ನಿಜವ ಗುಹೇಶ್ವರ ಬಲ್ಲನಲ್ಲದೆ ಕಣ್ಣುಗೆಟ್ಟಣ್ಣಗಳು ಎತ್ತಬಲ್ಲರು ನೋಡಯ್ಯಾ
/1070
ಎಂದು ಈ ನೋಟದ ಕೂಟವನ್ನು ಅಲ್ಲಮಪ್ರಭು ಅನುಭಾವ ಪೂರ್ವಕವಾಗಿ
ಹೇಳಿದ್ದಾನೆ.
*ಇಷ್ಟಲಿಂಗದಿಂದಾದ ಕುಲ ಜಾತಿ ಮತ ಲಿಂಗ ಸಮಾನತೆ*
ಕುಲ ಜಾತಿ ಅಂತಸ್ತು ಅಧಿಕಾರಗಳ ಹಂಗಿಲ್ಲದೆ ಎಲ್ಲರೂ ಇಷ್ಟಲಿಂಗವನ್ನು ಧರಿಸಬಹುದಾಗಿತ್ತು. ಸಾತ್ವಿಕ ಜೀವನಕ್ಕೆ ಸಂಪೂರ್ಣವಾಗಿ ಪರಿವರ್ತಿತಾದವರು ದೀಕ್ಷೆಯನ್ನು ಪಡೆಯುವುದಕ್ಕೆ ಅಧಿಕಾರಿಯಾಗುತ್ತಾರೆ. ವಯಸ್ಸಿನ ನಿರ್ಬಂಧವಿಲ್ಲ. ಜಾತಿ ಮತಗಳ ಅಡ್ಡಿಯಲ್ಲ, ಸ್ತ್ರೀ ಪುರುಷರೆಂಬ ಭೇದವಿಲ್ಲ. ದೀಕ್ಷೆಯಿಂದ ಆತ ಮರುಹುಟ್ಟು ಪಡೆಯುತ್ತಾನೆ. ಹಿಂದಿನ ಕುಲ ಗೋತ್ರಗಳ ಭವಿಜನ್ಮವನ್ನು ಕಳೆದು ಭಕ್ತನೆನಿಸುತ್ತಾನೆ. “ಲಿಂಗವ ಪೂಜಿಸಿ ಕುಲವನರಸುವರೇ ಅಯ್ಯಾ?”
ಎನ್ನುತ್ತಾರೆ ಬಸವಣ್ಣನವರು
*ಇಷ್ಟಲಿಂಗ ಮತ್ತು ಧಾರ್ಮಿಕ ಸ್ವಾತಂತ್ರ* 
ನನ್ನ ಆತ್ಮದ ಉದ್ಧಾರಕ್ಕಾಗಿ ನಾನು ಇನ್ನೊಬ್ಬರ ಕೈಕಾಯಬೇಕಾಗಿಲ್ಲ;
ಇನ್ನೊಂದೆಡೆ ದೇವರನ್ನು ಹುಡುಕಿಕೊಂಡು ಹೋಗಬೇಕಾಗಿಲ್ಲ. ನನ್ನ ಉದ್ಧಾರ ನನ್ನ
ಲ್ಲಿಯೇ ಇದೆ, ನನ್ನ ಕೈಯಲೇ ಇದೆ. ನನ್ನ ಪರವಾಗಿ ಇನ್ನಾರೋ ಪೂಜೆಮಾಡುತ್ತಾರೆ,
 ಮಂಗಳಾರತಿ ಎತ್ತುತ್ತಾರೆ ಎಂಬುದು ಹಾಸ್ಯಾಸ್ಪದವಾದದ್ದು. “ತಾನುಂಬ
ಊಟವನು, ತನ್ನಾಶ್ರಯದ ರತಿಸುಖವನು ಬೇರೆ ಮತ್ತೊಬ್ಬರ ಕೈಯಲ್ಲಿ ಮಾಡಿಸ
ಬಹುದೆ ?” ಎಂದು ಬಸವಣ್ಣನವರು  ಕೇಳುತ್ತಾರೆ. ದೇವನಿಗೂ ಭಕ್ತನಿಗೂ ಮಧ್ಯೆ ಪೂಜಾರಿ ಪುರೋಹಿತರ ದಲ್ಲಾಳಿಯನ್ನು ಅವರು ಒಪ್ಪಲಿಲ್ಲ.
*ಧಾರ್ಮಿಕ ಸುಲಿಗೆ ಶೋಷಣೆಗಳಿಂದ ಪರಿಹಾರ*
ಹೀಗೆ ಮೂರ್ತಿಪೂಜೆಯ ಎಲ್ಲ ದೌರ್ಬಲ್ಯಗಳನ್ನು ತೆಗೆದುಹಾಕುವುದಕ್ಕೂ, ಧರ್ಮದ ಹೆಸರಿನಲ್ಲಿ ನಡೆಯುತ್ತಿದ್ದ ಸುಲಿಗೆ ಶೋಷಣೆಗಳನ್ನು ತಪ್ಪಿಸುವುದಕ್ಕೂ ಇಷ್ಟಲಿಂಗ ಪರಿಣಾಮಕಾರಿಯಾದ ಸಾಧನವಾಯಿತು.
*ಇಷ್ಟಲಿಂಗ ಏಕದೇವೋಪಾಸನೆ*
ಇಷ್ಟಲಿಂಗದಿಂದ ಉದ್ದೇಶಿತವಾದ ಮುಖ್ಯ ಸಾಧನೆಯೆಂದರೆ ಏಕದೇವೋಪಾಸನೆ.
ಭಕ್ತಿಯ ಹೆಸರಿನಲ್ಲಿ ನೂರಾರು ದೇವರುಗಳನ್ನು ಸೃಷ್ಟಿಸಿಕೊಂಡು ಅವುಗಳನ್ನು ಮೊರೆಹೋಗುವುದರಲ್ಲಿ ಮನಸ್ಸು ಹರಿದು ಹಂಚಿಹೋಗುತ್ತಿರುವುದನ್ನು ಕಂಡು ಬಸವಣ್ಣನವರು ಮರುಗಿದರು. “ದೇವನೊಬ್ಬ ನಾಮ ಹಲವು. ಪರಮ ಪತಿವ್ರತೆಗೆ ಗಂಡನೊಬ್ಬ”ಎಂಬಂತಹ ನಿಷ್ಠೆ ಸಾಧಕನಿಗೆ ಅವಶ್ಯಕ. ದೈವಭಕ್ತಿಯನ್ನು ಕೈಕೂಲಿಯಂತೆ ಸಣ್ಣ ಪುಟ್ಟ ಲೌಕಿಕ ಸುಖಗಳಿಗಾಗಿ ಬಯಕೆಗಳಿಗಾಗಿ ಬಳಸಿಕೊಳ್ಳಬಾರದು. ಅನೇಕ ದೇವತೆಗಳ ಉಪಾಸನೆಯಲ್ಲಿ ಕಂಡುಬರುವ ಮನೋಧರ್ಮ ಈ ಲೌಕಿಕ ಸಾಮಾಜಿಕ ಧಾರ್ಮಿಕ ಕ್ರಾಂತಿಗೆ ಅದನ್ನು ಕೇಂದ್ರ ಶಕ್ತಿಯನ್ನಾಗಿ ಬಳಸಿಕೊಂಡಿದ್ದಾರೆ.
*ಇಷ್ಟಲಿಂಗ ಒಂದು ಕುರುಹು*
*ಅರುಹ ಬರಲೆಂದು ಕುರುಹನಿಟ್ಟೊಡೇ, ಅರುಹನೇ ಮರೆತು ಕುರುಹನೇ ದೇವರೆಂದು ಪೂಜಿಸುವವನಿಗೆ ಕೆರವಿಲೆ ಹೊಡೆಯೆಂದ ಸರ್ವಜ್ಞ*.                       
ನಿರಾಕಾರ ನಿರ್ಗುಣ ದೇವರ ಕುರುಹಾಗಿ ಸಾಕಾರ  ಇಷ್ಟಲಿಂಗದ ಪೂಜೆ ಕೈಗೊಳ್ಳಲಾಯಿತು. ನಿರಾಕಾರ ದೇವರ ಅರಿವು ಬರಲೆಂದು ಇಷ್ಟಲಿಂಗಪೂಜೆ  ಮಾಡಿದರೇ ವಿನಹಃ. ನಿರಾಕಾರನಾದ ದೇವರನ್ನೇ ಮರೆಯಲೆಂದಲ್ಲ.  ಉದ್ದೇಶವನ್ನೇ ಮರೆತು ಇಷ್ಟಲಿಂಗವೇ ದೇವರೆಂದು ಪೂಜಿಸುವವನಿಗೆ  ಕೆರ (ಮೆಟ್ಟು ,ಚಪ್ಪಲಿ)ದಲ್ಲಿ ಹೊಡೆಯೆಂದು ಸರ್ವಜ್ಞನು ಹೇಳುತ್ತಾನೆ. ಇಷ್ಟಲಿಂಗಕ್ಕೆ ಮಹತ್ವ ಎಷ್ಟೇ ಇದ್ದರೂ ಅದು ತನಗೆ ತಾನೇ ಅಲ್ಲ. “ಅರುಹನ್ನು ಪಡೆಯಲೆಂದು ಕುರುಹ ಕೊಟ್ಟರೇ ಆರುಹ ಮರತು ಕುರುಹ ಹಿಡಿವ ಅರೆಮರುಳರನ್ನು ಕಂಡು ಬಸವಾದಿ ಶರಣರು ನಗುತ್ತಾರೆ. 
- ✍️Dr Prema Pangi
#ಪ್ರೇಮಾ_ಪಾಂಗಿ,#ಅಷ್ಟಾವರಣ_ಲಿಂಗ

Comments

Popular posts from this blog

Shika chakra or Bindu chakra:Bindu visarga

Hrit Chakra or Eight Petals Chakra

A-Ka-Ta triangle or Akshara Brahma