ಅಷ್ಟಾವರಣ - ಪಾದೋದಕ
ಶರಣರು ಎಲ್ಲ ಅಷ್ಟಾವರಣಗಳನ್ನು ಎರಡೂ ಬಗೆಯಾಗಿ ಕಂಡತೆ ; ಪಾದೋದಕವನ್ನು ಸಹ ಬಹಿರಂಗದ ಆಚರಣೆಯ ಪೂಜೆಯಲ್ಲಿ ಮತ್ತು ಅಂತರಂಗದ ತಾತ್ವಿಕವಾದ ಜ್ಞಾನದ ನಿಲವಿನಲ್ಲಿ ಹೀಗೆ ಎರಡೂ ಬಗೆಯಾಗಿ ಕಂಡಿದ್ದಾರೆ.
ಶರಣರ ಪ್ರಕಾರ ಪಾದೋದಕವೆಂದರೆ
1. ಬಹಿರಂಗ ಪಾದೋದಕ:
ಬಹಿರಂಗ ಪೂಜೆಯಲ್ಲಿ ಇಷ್ಟಲಿಂಗದ ಮೇಲೆ ಏರಿದ ನೀರು ಮತ್ತು ಅಭಿಷೇಕ. ಇದು ಸೇವನೆಗೆ ಯೋಗ್ಯ.
2. ಅಂತರಂಗ ಪಾದೋದಕ:
ಅಂತರಂಗದ ಪೂಜೆಯಲ್ಲಿ ಶಿವಯೋಗ ಸಾಧನೆಯ ಮೂಲಕವಾಗಿ ಅನುಭವ ಅನುಭಾವ ಹಾಗೂ ಅನುಭೂತಿಯನ್ನು ಹಂತ ಹಂತವಾಗಿ ಏರಿ ಅನುಭಾವ ಸ್ಥಿತಿಯಲ್ಲಿ ಪಿನೆಲ್ ಗ್ರಂಥಿಯು (pineal gland ) ಸ್ರವಿಸುವ ಪರಮ ಜ್ಞಾನರಸ. . ಇದು ಸಮಯಕ್ಕೆ ಸರಿಯಾಗಿ ನಿದ್ದೆ, ಸಮಚಿತ್ತ, ಸ್ಥಿತಿಪ್ರಜ್ಞೆ , ಅಂತಃಪ್ರಜ್ಞೆ (intuition), ಆತ್ಮಜ್ಞಾನ (spiritual intelligence ) ಇವುಗಳಿಗೆ ಆವಶ್ಯಕ. ಇದರಲ್ಲಿ ಮೆಲಟೋನಿನ್ (melatonin) ಎಂಬ ಇದನ್ನು ಶರಣರು ಚಿದ್ರಸ, ಅಮೃತ ಎಂದು ವಚನಗಳಲ್ಲಿ ಹೆಸರಿಸಿದ್ದಾರೆ. ಇದು ಅಜ್ಞಾಚಕ್ರದ ಮಹಾಲಿಂಗದ ಮೇಲೆ ಒಸರುವದರಿಂದ ಅದನ್ನು ಸಹ ಲಿಂಗಾಭಿಷೇಕ ಎಂದು ಇದಕ್ಕೆ ಅಂತರಂಗದ ಪಾದೋದಕ ಎಂದರು. ಇದು ಅಂತರಂಗದ ಶುದ್ಧತೆ ನಿರ್ಮಲತ್ವವನ್ನು ಕೊಡುತ್ತದೆ ಎಂಬ ತಾತ್ವಿಕ ಜ್ಞಾನ ಶರಣರದು.
ಪಾದ ಎಂದರೆ ಪರಮಾನಂದ, ಉದಕ ಎಂದರೆ ಜ್ಞಾನ ಎಂಬ ವಿಶಿಷ್ಟವಾದ ಅರ್ಥ ಶರಣಧರ್ಮದಲ್ಲಿ ಇದೆ. ಇದರ ಅರ್ಥ ಪರಮಾನಂದವೆಂಬ ಅನುಭಾವ ಜ್ಞಾನದಿಂದ ಸಂಭವಿಸಿ ಮಹಾಲಿಂಗದ ಮೇಲೆ ಒಸರುವ ನಿರ್ಮಲತ್ವ, ಅಂತರಂಗದ ಶುದ್ಧಿಗೆ ಕಾರಣ ವಾಗುವದೆ ಪಾದೋದಕ ವೆಂದಾಗುತ್ತದೆ.
*ಆಚರಣೆಯ ಸಾಧನವಾಗಿ ಪಾದೋದಕ*
'ಪಾದೋದಕ' ಪಾದದ ಉದಕ, ಪಾದಜಲ
ಈ ಅರ್ಥದಲ್ಲಿ ನೋಡಿದಾಗ ಪಾದೋದಕದಲ್ಲಿ ಮೂರು ಬಗೆ; ಗುರು ಪಾದೋದಕ, ಲಿಂಗ ಪಾದೋದಕ, ಜಂಗಮ ಪಾದೋದಕ.
*ಕರುಣೆ, ವಿನಯ ಹಾಗೂ ಚಿತ್ತಸಮತೆಗಳೇ ಪಾದೋದಕ*
ಕರುಣಜಲವೆ ಗುರುಪಾದೋದಕ:
ವಿನಯಜಲವೆ ಲಿಂಗಪಾದೋದಕ;
ಸಮತಾಜಲವೆ ಜಂಗಮಪಾದೋದಕ.
ಗುರುಪಾದೋದಕದಿಂದ ಸಂಚಿತಕರ್ಮನಾಸ್ತಿ.
ಲಿಂಗಪಾದೋದಕದಿಂದ ಪ್ರಾರಬ್ಧಕರ್ಮನಾಸ್ತಿ.
ಜಂಗಮಪಾದೋದಕದಿಂದ ಆಗಾಮಿಕರ್ಮನಾಸ್ತಿ.
ಇಂತೀ ತ್ರಿವಿಧೋದಕದಲ್ಲಿ ತ್ರಿವಿಧಕರ್ಮನಾಸ್ತಿ.
ಇದು ಕಾರಣ- ಕೂಡಲಚೆನ್ನಸಂಗಮದೇವಾ
ತ್ರಿವಿಧೋದಕವ ನಿಮ್ಮ ಶರಣನೆ ಬಲ್ಲ. / 478
1.ಗುರು ಪಾದೋದಕ: ಕರುಣಜಲ. ಸಕಲ ಜೀವಿಗಳಲ್ಲಿ ಕರುಣೆಯಿಂದ, ತನ್ನಂತೆ ಪರರು ಎಂದು ಅರಿತು, ವರ್ತಿಸಿ ತನ್ನ ಸ್ಥೂಲ ತನುವನ್ನು ಪರಿಶುದ್ಧವಾಗಿಟ್ಟುಕೊಳ್ಳುವುದೇ ಗುರು ಪಾದೋದಕ. ಇದರಿಂದ ಅಜ್ಞಾನ ಎಂಬ ಮಾಲಿನ್ಯದ ನಾಶ.
2.ಲಿಂಗಪಾದೋದಕ: ವಿನಯಜಲ. ಲೋಕದಲ್ಲಿ ವ್ಯವಹರಿಸುವಾಗ ಸರ್ವರಲ್ಲಿ ವಿನಯಭಾವ ಹೊಂದಿ ಅದರಂತೆ ನಡೆ ನುಡಿ ಆಚಾರ ವಿಚಾರಗಳನ್ನು ಅಳವಡಿಸಿಕೊಂಡು ಅಂತಃಕರಣಗಳಾದ ಚಿತ್ತ ಮನ ಬುದ್ಧಿ ಮತ್ತು ಅಹಂಕಾರಗಳನ್ನು ನಿರ್ಲಿಪ್ತವಾಗಿಸಿ ಕೊಂಡುದೇ ಲಿಂಗಪಾದೋದಕ. ಇದರಿಂದ ಅಹಂಭಾವ ಎಂಬ ಮಾಲಿನ್ಯದ ನಾಶ.
3.ಜಂಗಮ ಪಾದೋದಕ: ಸಮತಾಜಲ. ಸೃಷ್ಟಿಯ ಸಕಲ ಜೀವಿಗಳಲ್ಲಿ ಯಾವುದೇ ಭೇದವೆಣಿಸದೆ ಎಲ್ಲರೂ ತನ್ನವರೆಂಬ ಭಾವವನ್ನಳವಡಿಸಿಕೊಂಡುದೇ ಜಂಗಮ ಪಾದೋದಕ. ಇದರಿಂದ ಭೇದಭಾವ ಎಂಬ ಮಾಲಿನ್ಯದ ನಾಶ.
ಗುರುವಿನ ಕರುಣಾಜಲ, ಲಿಂಗದ ವಿನಯಜಲ, ಜಂಗಮದ ಸಮತಾಜಲ ಇವುಗಳನ್ನು ಸೇವಿಸುವುದೇ "ತ್ರಿವಿಧಪಾದೋದಕ ಸೇವನೆ". ಈ ರೀತಿಯ ಆಚರಣೆಗಳು ನಮ್ಮಲ್ಲಿ ನೆಲೆಗೊಂಡುದೇ ಆದರೆ ಸಂಚಿತ, ಆಗಾಮಿ ಹಾಗೂ ಪ್ರಾರಬ್ಧ ಎಂಬ ಕರ್ಮತ್ರಯಗಳು ನಾಸ್ತಿಯಾಗುವವು.
ಬಹಿರಂಗದ ಆಚರಣೆಯಲ್ಲಿ ದೀಕ್ಷಾ ಪಾದೋದಕ, ಶಿಕ್ಷಾ ಪಾದೋದಕ, ಜ್ಞಾನ ಪಾದೋದಕವೆಂಬ ಮೂರು ಮೆಟ್ಟಿಲುಗಳನ್ನು ಮಾಡಲಾಗಿದೆ. ಗುರು ಶಿಷ್ಯರ ಆನಂದದ ಐಕ್ಯವೇ ದಿಕ್ಷಾ ಪಾದೋದಕ, ಗುರುಶಿಷ್ಯರ ಸ್ವರೂಪೈಕ್ಯ ಜ್ಞಾನವೇ ಶಿಕ್ಷಾಪಾದೋದಕ ; ಜ್ಞಾನಗುರುವಿನೊಡನೆ ಶಿಷ್ಯನ ಸಾಮರಸ್ಯವೇ ಜ್ಞಾನಪಾದೋದಕ,
ಇದಲ್ಲದೆ ಚನ್ನಬಸವಣ್ಣನವರು
ದಶವಿಧ ಪಾದೋದಕಗಳನ್ನು ಹೆಸರಿಸಿದ್ದಾರೆ :
#ಪ್ರಮಥದಲ್ಲಿ ಪಾದೋದಕ, ದ್ವಿತೀಯದಲ್ಲಿ ಲಿಂಗೋದಕ,
ತೃತೀಯದಲ್ಲಿ ಮಜ್ಜನೋದಕ, ಚತುರ್ಥದಲ್ಲಿ ಸ್ಪರ್ಶನೋದಕ,
ಪಂಚಮದಲ್ಲಿ ಅವಧಾನೋದಕ, ಷಷ್ಠದಲ್ಲಿ ಆಪ್ಯಾಯನೋದಕ,
ಸಪ್ತಮದಲ್ಲಿ ಹಸ್ತೋದಕ, ಅಷ್ಟಮದಲ್ಲಿ ಪರಿಣಾಮೋದಕ,
ನವಮದಲ್ಲಿ ನಿರ್ನಾಮೋದಕ, ದಶಮದಲ್ಲಿ ಸತ್ಯೋದಕ,-
ಇಂತೀ ದಶವಿಧಪಾದೋದಕವ ತಿಳಿದುಕೊಳಬಲ್ಲ
ಕೂಡಲಚೆನ್ನಸಂಗಾ ನಿಮ್ಮ ಶರಣ / 1012
ಪಾದೋದಕ, ಲಿಂಗೋದಕ,
ಮಜ್ಜನೋದಕ, ಸ್ಪರ್ಶನೋದಕ,
ಅವಧಾನೋದಕ, ಆಪ್ಯಾಯನೋದಕ,
ಹಸ್ತೋದಕ, ಪರಿಣಾಮೋದಕ,
ನಿರ್ನಾಮೋದಕ, ಸತ್ಯೋದಕ,-
ಇವು ದಶವಿಧಪಾದೋದಕಗಳು ಸಾಧನೆಯ ಮೆಟ್ಟಿಲು ಎಂದೂ ಹೇಳಬಹುದು.
ದೀಕ್ಷಾ ಪಾದೋದಕ, ಶಿಕ್ಷಾಪಾದೋದಕ, ಜ್ಞಾನ ಪಾದೋದಕ ಎಂಬ ಮೂರು ಬಗೆಯನ್ನು ಶಿವಾಗಮಗಳ ಆಧಾರದಿಂದ ಚನ್ನಬಸವಣ್ಣನವರು ಧರ್ಮಸ್ಥಾಪನೆಯ ಪ್ರಾಥಮಿಕ ಹಂತದಲ್ಲಿ ತಿಳಿಸಿದ್ದಾರೆ.
ಚನ್ನಬಸವಣ್ಣನವರು ಗುರುಜಂಗಮರ ಪಾದಪೂಜೆಯ ವಿವರಿಸಿ
“ಅಯ್ಯಾ ಪಾದಪೂಜೆ ಎಂಬುದು ಅಗಮ್ಯ ಅಗೋಚರ ಅಪ್ರಮಾಣ ಅಸಾಧ್ಯ” ಎಂದು
ವರ್ಣಿಸುತ್ತಾರೆ ಚನ್ನಬಸವಣ್ಣ.
ಏಕಾಂತವಾಸದಲ್ಲಿ ಪರಿಣಾಮತರವಾದ ಹಳ್ಳ ಹೊಳೆ ಕೆರೆ ಭಾವಿ ಮಡು ಹೊಂಡ ಚಿಲುಮೆ ಕೋಳ ಮೊದಲಾದ ಸ್ಥಾನಕ್ಕೆ ಹೋಗಿ ಪ್ರಥಮದಲ್ಲಿ ಶಿವಶಿವ, ಹರಹರಾ, ಗುರುಬಸವಲಿಂಗಾ' ಎಂಬ ಮಂತ್ರಸ್ಮರಣೆ ಧ್ಯಾನದಿಂದ ಪಾದವಿಟ್ಟು ಚರಣ ಸೋಂಕಿನಿಂ ಪವಿತ್ರವಾದುದಕವೇ ಪಾದೋದಕವೆನಿಸುವುದಯ್ಯ. ಶ್ರೀಗುರು ಬಸವೇಶ್ವರದೇವರು ತಮ್ಮ ಅಂತರಂಗದೊಳಗಣ
ಪಾದಪೂಜೆಯಿಂದಾದ ತೀರ್ಥಪ್ರಸಾದವ
`ಗಣಸಮೂಹಕ್ಕೆ ಸಲ್ಲಲಿ' ಎಂದು ನಿರ್ಮಿಸಿ, ಭಕ್ತಿಯ ತೊಟ್ಟು ಮೆರೆದರು ಎನ್ನುತ್ತಾರೆ ಶರಣರು.
* ಪಾದೋದಕದ ತಾತ್ವಿಕ ನಿಲವು*.
ಪಾದೋದಕ ಪ್ರಸಾದವನರಿಯದೆ.
ಬಂದ ಬಟ್ಟೆಯಲ್ಲಿ ಮುಳುಗುತ್ತೈದಾರೆ ಗುಹೇಶ್ವರಾ. / 534
ಅರ್ಥ:
ಒಳಗ ತೊಳೆಯಲರಿಯದವರು ಅಂದರೆ ಮನದೊಳಗಿನ ಮಾಲಿನ್ಯವನ್ನು ತೊಳೆಯಲರಿಯದವರು, ಬರಿ ಹೊರಗಿನ ಗುರು, ಲಿಂಗ, ಜಂಗಮರ ಪಾದಗಳನ್ನು ತೊಳೆದು ಅದನ್ನೇ ಪಾದೋದಕವೆಂದು ಕುಡಿಯುತ್ತಲಿದ್ದಾರೆ. ಪಾದೋದಕ ಪ್ರಸಾದಗಳ ನಿಜಸ್ವರೂಪವನ್ನು ಅರಿಯದ ಅವರು ಭವದಲ್ಲಿ ಮುಳುಗಿ ತೇಲುತ್ತಲಿದ್ದಾರೆ. ಈ ಪಾದೋದಕ ಮತ್ತು ಪ್ರಸಾದ ವಿಧಾನಗಳನ್ನು ಯಥಾವತ್ತಾಗಿ, ಭಾವಪೂರ್ಣವಾಗಿ ಭಕ್ತಿನಿರ್ಭರವಾಗಿ ಆಚರಿಸಿದರೆ 'ಬಂದ ಬಟ್ಟೆ' ಅಂದರೆ ಭವ ಹಿಂಗಿ ಹೋಗುತ್ತದೆ. ನಿರಂತರ ಹುಟ್ಟುಸಾವುಗಳಿಂದ ಮುಕ್ತನಾಗುತ್ತಾನೆ. ಭಕ್ತ ಸ್ವಾನಂದಲೋಲನಾಗುತ್ತಾನೆ. ಇದು ಪಾದೋದಕದ ಮಹಿಮೆ. ಇದರ ಸೂಕ್ಷ್ಮ ಜ್ಞಾನವಿರದ ಬಹುಜನರು ಬರಿ ಹೊರಹೊರಗೆ ತೊಳೆದು ಸೇವಿಸುವ ಕ್ರಿಯೆಗಳನ್ನು ಆಚರಿಸಿ, ಭವದಬಟ್ಟೆಯಲ್ಲಿ ನಿರಂತರವಾಗಿ ಭ್ರಮಿಸುತ್ತಾರೆ.
ಮನಸ್ಸಿನ ಮಾಲಿನ್ಯಗಳು ಮೂರು, ಅಜ್ಞಾನ, ಅಹಂಕಾರ ಮತ್ತು ಭೇದಭಾವ, ಅಮೃತತ್ತ್ವವನ್ನು ಪಡೆಯಲೆಳಸುವ ಮನುಷ್ಯ ಈ ಮೂರನ್ನು ತೊಳೆಯಬೇಕು. ಗುರುವಿನ ಕರುಣೆಯಿಂದ ಅಜ್ಞಾನವೆಂಬ ಮಾಲಿನ್ಯ, ಲಿಂಗದ ಅನುಸಂಧಾನದಿಂದ ಅಹಂಕಾರವೆಂಬ ಮಾಲಿನ್ಯ, ಅನುಭಾವಿಯಾದ ಜಂಗಮನ ಸಂಗದಿಂದ ಭೇದಭಾವವೆಂಬ ಮಾಲಿನ್ಯ ಇವು ಇಲ್ಲದಾಗುತ್ತವೆ. ಈ ರೀತಿ ಗುರು ಲಿಂಗ ಜಂಗಮದ ಕರುಣೆಯಿಂದ, ಅಜ್ಞಾನ, ಅಹಂಕಾರ, ಬೇಧಭಾವವೆಂಬ ಒಳಗಿನ ಮಾಲಿನ್ಯಗಳನ್ನು ಕಳೆಯಲು ಅರಿಯದ ಮೂಢ ಜನ, ಗುರು, ಲಿಂಗ, ಜಂಗಮದ ಪಾದಗಳನ್ನು ತೊಳೆದು ಕುಡಿದು ಕೃತಾರ್ಥರಾದವೆಂದು ತಿಳಿದಿದ್ದಾರೆ.
ಜಲವಿಲ್ಲದ, ಜಲದಲ್ಲಿ ಪಾದಾರ್ಚನೆಯ ಮಾಡಿದಡೆ, ಮಾಡಿದ ಆ ಪಾದೋದಕವೆ ಮಹಾಪದವಯ್ಯಾ,
ಸ್ವಚ್ಛಾನಂದಜಲೇ ನಿತ್ಯಂ ಪ್ರಕ್ಷಾಲ್ಯ ಚರಪಾದುಕಾಂ
ತಚ್ಚ ಪಾದೋದಕಂ ಪೀತ್ವಾ ಸ ಮುಕ್ತೋ ನಾತ್ರ ಸಂಶಯಃ ಎಂದುದಾಗಿ,
ಆ ಪಾದೋದಕದಲ್ಲಿ ಪರಮಪರಿಣಾಮಿ
ಕೂಡಲಚೆನ್ನಸಂಗಾ ನಿಮ್ಮ ಶರಣ. / 905
ಎಂಬ ಚೆನ್ನಬಸವಣ್ಣನ ಮಾತಿನಲ್ಲಿ ಜಲವಿಲ್ಲದ, ಜಲದಲ್ಲಿ ಪಾದಾರ್ಚನೆಯ ಮಾಡಿದಡೆ, ಮಾಡಿದ ಆ ಸ್ವಚ್ಛಾನಂದ ವೆಂಬ ಪಾದೋದಕದಿಂದ ಪರಮಪರಿಣಾಮಿ ಆದೆ ಎನ್ನುತ್ತಾರೆ. ಅಂಗೇಂದ್ರಿಯಗಳೆಲ್ಲಾ ಲಿಂಗೇಂದ್ರಿಯಗಳಾಗಿ ಆತ್ಮ-ಪರಮಾತ್ಮರ ಸಮರಸವಾಗುವುದು, ಇದೇ ಪರಮಾನಂದ ಭಾವಸಮರಸ.
#ಗುರುಲಿಂಗ ಜಂಗಮದ ಪಾದವೇ ತನ್ನ ಸರ್ವಾಂಗದಲ್ಲಿ ಅಷ್ಟೊತ್ತಿದಂತಾಗಿ ಅಲ್ಲಿಯೇ
ಪಾದಾರ್ಚನೆ, ಅಲ್ಲಿಯೇ ಪಾದೋದಕ ಸೇವನೆ, ಬೇರೆ ಪ್ರತ್ಯೇಕವಿಲ್ಲವಯ್ಯ; ಅದೆಂತೆಂದೊಡೆ-ಪರಮಜ್ಞಾನಲಿಂಗ ಜಂಗಮ ಸಂಬಂಧ ಸಮರತಿಯ ಸೋಂಕಿನಲ್ಲಿ
ಪರಮಾನಂದ ಜಲವೇ ಪ್ರವಾಹವಾಗಿ ಸರ್ವಾಂಗದಲ್ಲಿ ಪುಳಕಿತವಾಗಿ ಹರಿವುತ್ತಿರಲು, ಆ ಪರಮಸುಖಸೇವನೆಯ ಮಾಡುವಲ್ಲಿ ಪಾದೋದಕ ಸೇವನೆ ಎನಿಸಿತ್ತಯ್ಯ”
- ಮಡಿವಾಳ ಮಾಚಯ್ಯ
ಅನುಭಾವದ ಸಮರತಿಯಲ್ಲಿ
ಪರಮಾನಂದ ಜಲವೇ ಪ್ರವಾಹವಾಗಿ ಸರ್ವಾಂಗದಲ್ಲಿ ಪುಳಕಿತವಾಗಿ ಹರಿವುತ್ತಿರಲು, ಆ ಪರಮಸುಖಸೇವನೆಯ ಮಾಡುವಲ್ಲಿ ಪಾದೋದಕ ಸೇವನೆ ಎನಿಸಿತು. ಬೇರೆ ಪ್ರತ್ಯೇಕ ಪಾದೋದಕವಿಲ್ಲ ಎನ್ನುತ್ತಾರೆ ಗಣಾಚಾರಿ ಮಾಚಿದೇವರು.
*ಬಹಿರಂಗದ ಕ್ರಿಯೆಯಿಂದ ಅಂತರಂಗದ ಅರಿವಿನ ಮಾರ್ಗವಾಗಿ ಪಾದೋದಕ*
ಶರಣರದು ಮುಖ್ಯವಾಗಿ ಜ್ಞಾನಮಾರ್ಗ
ವೆಂಬುದು ಅವರ ಪಾದೋದಕದಲ್ಲಿಯೂ ಕಂಡುಬರುತ್ತದೆ. ಜ್ಞಾನ, ಕ್ರಿಯೆ ಈ ಎರಡು ದೃಷ್ಟಿಗಳನ್ನು ಪಾದೋದಕತತ್ವ ಒಳಗೊಂಡಿದೆ. ಇದನ್ನು ಪಡೆಯುವುದೇ ಪರಮಗುರಿ.
ಈ ಪಾದೋದಕದ ಪ್ರಭಾವವನ್ನೂ ಪರಿಣಾಮವನ್ನೂ ಸಿದ್ಧರಾಮ ಹೀಗೆ ಹೇಳಿದ್ದಾರೆ :
#ಗುರುಪಾದೋದದಿಂದ ಸ್ಥೂಲ ದೇಹಶುದ್ಧಿ;
ಕ್ರಿಯಾಪಾದೋದಕದಿಂದ ಸೂಕ್ಷ್ಮ ದೇಹಶುದ್ಧಿ
ಜ್ಞಾನಪಾದೋದಕದಿಂದ ಕಾರಣ ದೇಹಶುದ್ಧಿ ;
ಗುರುಪಾದೋದಕದಲ್ಲಿ ಇಷ್ಟಂಗ ಸಂಬಂಧ;
ಕ್ರಿಯಾಪಾದೋದಕದಲ್ಲಿ ಪ್ರಾಣಂಗ ಸಂಬಂಧ;
ಜ್ಞಾನಪಾದೋದಕದಲ್ಲಿ ಭಾವಂಗ ಸಂಬಂಧ.
ಅದು ಕಾರಣ, ಪಾದೋದಕವೆ ಪ್ರತ್ಯಕ್ಷ ಪರಬ್ರಹ್ಮ ನೋಡಾ
ಕಪಿಲಸಿದ್ಧಮಲ್ಲಿಕಾರ್ಜುನ. / 796
#ಉದಕ ಹೋಗಿ ಗುರುಪಾದೋದಕವೆನಿಸಿತ್ತು;
ಗುರುಪಾದೋದಕ ಹೋಗಿ ಕ್ರಿಯಾಪಾದೋದಕವೆನಿಸಿತ್ತು;
ಕ್ರಿಯಾಪಾದೋದಕ ಹೋಗಿ ಜ್ಞಾನಪಾದೋದಕವೆನಿಸಿತ್ತು;
ಜ್ಞಾನಪಾದೋದಕವೆ ಶರಣನ ಮನದ ಮೊನೆಯಲ್ಲಿ
ಕಪಿಲಸಿದ್ಧಮಲ್ಲಿಕಾರ್ಜುನನಾಗಿ ನಿಂದಿತ್ತು. / 416
ಹೀಗೆ ಪಾದೋದಕದಿಂದ ಶರಣ ಮನದಲ್ಲಿ ಪ್ರತ್ಯಕ್ಷ ಪರಬ್ರಹ್ಮ, ಸಾಕ್ಷಾತ್ ಕಪಿಲಸಿದ್ಧ ಮಲ್ಲಿಕಾರ್ಜುನನ ಸ್ವರೂಪವ ಅಗುತ್ತದೆ ಎನ್ನುತ್ತಾರೆ ಶಿವಯೋಗಿ ಸಿದ್ಧರಾಮೇಶ್ವರರು. ಇನ್ನೊಂದು ವಚನದಲ್ಲಿ ಪಾದೋದಕವೆಂಬುದು ಪರಮಾತ್ಮನ ಚಿದ್ರೂಪು ನೋಡಾ” ಎಂದು ಹೇಳಿದ್ದಾರೆ.
ಪಾದೋದಕ ಸ್ಪರ್ಶವಾದರೆ ಪರಮಪವಿತ್ರ, ಮಡಿಮೈಲಿಗೆ ಸೂತಕಾದಿ ಕೋಟಲೆ ಇಲ್ಲ; ಹವನ ಹೋಮಾದಿ ಕರ್ಮಗಳ ಹಂಗೂ ಇಲ್ಲ. ಇದರಿಂದ ಇತರ ಎಲ್ಲ ಕರ್ಮಗಳನ್ನು ಶರಣರು ಗೆದ್ದಿದ್ದಾರೆ.
*ಪರಿಪೂರ್ಣತ್ವವೇ ಪಾದೋದಕ*
ಎಂಬ ನಿಷ್ಠೆ, ನಡೆ ಬೇಕು
"ಪಾದೋದಕ ಪಾದೋದಕವೆಂದು ಕೊಂಬಿರಿ, ಎಲ್ಲರಿಗೆ ಎಲ್ಲಿಹುದೋ ಪಾದೋದಕ? ಈ ಪಾದೋದಕದ ಭೇದವ ಬಲ್ಲರೆ ಹೇಳಿರಿ, ಅರಿಯದಿದ್ದರೆ ಕೇಳಿರಿ. ಪಾದೋದಕವೆಂಬುದು ಪಾತಾಳಾದಿ ಪರಲೋಕಾಂತ್ಯಮಾದ ಅಖಿಲಕೋಟಿ ಬ್ರಹ್ಮಾಂಡಗಳ ಗರ್ಭೀಕರಿಸಿ ಕೊಂಡಿರ್ದ ಪರಿಪೂರ್ಣತ್ವವೇ ಪಾದೋದಕ. ಪಾದೋದಕವೆಂಬುದು ಶರಣನ ಥಳಥಳಿಸಿ ಹೊಳೆಯುವ ಸರ್ವಾಂಗವನೊಳಕೊಂಡ ಚಿದ್ರಸವೇ ಪಾದೋದಕ…” ಎನ್ನುವರು. ಜೀವಾತ್ಮನ ಪರಿಪೂರ್ಣತ್ವವೇ ಪಾದೋದಕ ವೆಂದಿದ್ದಾರೆ. ಸಾಧಕನು ಪರಿಪೂರ್ಣಾವಸ್ಥೆ ತಲುಪಿದಾಗ ಆತನ ಸರ್ವಾಂಗದಲ್ಲಿಯೂ ಸದಾಚಾರವನ್ನಳವಡಿಸಿಕೊಂಡು ಭಾವ-ನಿರ್ಭಾವವಾಗಿ ಅನುಭವಿಸುವ ಸಂತೃಪ್ತಿಯೇ ಚಿದಮೃತ ಅಥವಾ ಚಿದ್ರಸ. ಆ ಚಿದ್ರಸವೇ ಪಾದೋದಕ ಎನ್ನುತ್ತಾರೆ ಶರಣರು.
ಜಲವು ತೀರ್ಥವಲ್ಲ. ಕೊಟ್ಟಾತ ಗುರುವಲ್ಲ, ಕೊಂಡಾತ ಭಕ್ತನಲ್ಲ ಎಂದು ಇಬ್ಬರನ್ನೂ ಠಿಕಿಸಿದ್ದಾರೆ. ಭ್ರೂಮಧ್ಯಸ್ಥಾನದಲ್ಲಿರ್ದುದನರಿದರ್ಚಿಸಿದ ಪರಿಣಾಮವೆ ಚಿದಾನಂದ ಬಿಂದು ತೊಟ್ಟಿಟ್ಟುದೆ ಪಾದೋದಕವು ಎನ್ನುತ್ತಾರೆ ಮಾದಾರ ಚನ್ನಯ್ಯ ಶರಣರು.
“ಸಕಲ ಸಂಸಾರ ವಿಷಯ ಲಂಪಟದಲ್ಲಿ ಮಗ್ನರಾಗಿ ಮಂದಮತಿ ಅಧಮ ಜಂಗಮನ
ಕಾಲ ತ್ರಿಕಾಲದಲ್ಲಿ ಜಲದಿಂದ ತೊಳೆದು ಪಾದೋದಕವೆಂದು ಬಟ್ಟ ಬಟ್ಟಲು ತುಂಬ
ನೀರ ಕುಡಿದು, ತಮ್ಮ ದೇಹದ ಪ್ರಾಣಾಗ್ನಿಯ ತೃಸ್ಥೆಯನಡಗಿಸಿಕೊಂಡು ಮಡಿಮೈಲಿಗೆಯೆಂದು ನುಡಿವ ಮಲದೇಹಿಗಳನ್ನು ಶರಣರು ಖಂಡಿಸುತ್ತಾರೆ. ಅರಿವಿನ ನುಡಿ ಮತ್ತು ಅರಿವಿನ ನಡೆಯಿಂದ ಮಾತ್ರ ಪಾದೋದಕ ಸಿದ್ಧಿಸುತ್ತದೆ.
“ಅರಿದೊಡೆ ಶರಣ, ಮರೆದೊಡೆ ಮಾನವ” ಎಂಬ ಸೂತ್ರವನ್ನು ಪಾದೋದಕಕ್ಕೂ ಅನ್ವಯಿಸಿದ್ದಾರೆ. ಸಾಧಕ ಎಲ್ಲ ಹಂತಗಳಲ್ಲಿಯೂ ಅರಿವಿನ ಬೆಳಕಿನಿಂದಲೇ ಮುನ್ನಡೆಯಬೇಕು. ಅರಿವಿನಿಂದ ಎಚ್ಚೆತ್ತವನಿಗೆ ನೀರೆಲ್ಲವೂ ಪಾದೋದಕ ವಾಗುತ್ತದೆ.
“ಜಿತೇಂದ್ರಿಯಗಳಲ್ಲಿ ತೀರ್ಥಪ್ರಸಾದವಿಪ್ಪುದಲ್ಲದೆ ಕೃತಕೇಂದ್ರಿಯಗಳಲ್ಲಿ ತೀರ್ಥ ಪ್ರಸಾದವಿಪ್ಪು
ದೇನಯ್ಯ?” ನಡೆನುಡಿಗಳಲ್ಲಿ ಶುದ್ಧನಾದ ಭಕ್ತನ ಅರಿವಿನ ಆಚರಣೆಯಲ್ಲಿ ಪಾದೋದಕಕ್ಕೆ ಮಹತ್ವವಿದೆಯೇ ಹೊರತು ಕೇವಲ ತೋರಿಕೆಯ ಆಡಂಬರದಲ್ಲಿಲ್ಲ.
ಪಾದೋದಕದ ಮಹತ್ವ ಇರುವುದು ಅರಿವಿನಲ್ಲಿ.
“ಅರಿದಡೆ ಪಾದೋದಕ, ಅರಿಯದಿರ್ದೊರಡೆ ಬರಿಯ ನೀರೆಂದರಿಯರು, ಅರಿದರಿದು ಬರುದೊರೆವೋದರು ಮಾನವರೆಲ್ಲ ; ಅರಿವು ಸಾಮಾನ್ಯವೇ ?” ಎನ್ನುತ್ತಾರೆ ಉರಿಲಿಂಗ ಪೆದ್ದಿ ಶರಣರು. ಪಾದೋದಕದ ನಿಜವಾದ ಸ್ವರೂಪವನ್ನು ಸೂಚಿಸುವ ಬಹಳ ಅರ್ಥವತ್ತಾದ ಮಾತಿದು.
-✍️ Dr Prema Pangi
Comments
Post a Comment