ಅಷ್ಟಾವರಣ. - ಪ್ರಸಾದ

ಅಷ್ಟಾವರಣ. - ಪ್ರಸಾದ
ಅಷ್ಟಾವರಣ  - ಪ್ರಸಾದ
ಶರಣರಲ್ಲಿ 'ಪ್ರಸಾದ' ಎಂಬುದಕ್ಕೆ ವ್ಯಾಪಕವಾದ ಅರ್ಥವಿದೆ. 
“ನೈರ್ಮಲ್ಯಂ ಮನಸೋ ಲಿಂಗಂ ಪ್ರಸಾದ ಇತಿ ಕಥ್ಯತೇ” ಅಂದರೆ ಮನಸ್ಸಿನ ಈ ಪ್ರಸನ್ನತೆಗೆ ಕಾರಣವಾಗುವ ಎಲ್ಲವನ್ನೂ ಶರಣರು ಪ್ರಸಾದವೆಂದೇ ಕರೆದಿದ್ದಾರೆ. ಮನಸ್ಸಿನ ನಿರ್ಮಲತ್ವದ, ಪ್ರಸನ್ನತೆಯ ಚಿಹ್ನೆಯೇ ಪ್ರಸಾದ.

ಶಿವಪ್ರಸಾದೋ ಯದ್ಧವ್ಯಂ ಶಿವಾಯ ವಿನಿವೇದಿತಂ |
ನಿರ್ಮಾಲ್ಯಂ ತತ್ತು ಶೈವಾನಾಂ ಮನೋನೈರ್ಮಲ್ಯ ಕಾರಣಂ || 
ಅಂದರೆ "ಯಾವ ವಸ್ತು ಶಿವನಿಗೆ ಸಮರ್ಪಿತವಾಗುವುದೋ ಅದು ಪ್ರಸಾದ".  ಶಿವಪ್ರಸಾದವು ಮನೋನೈರ್ಮಲ್ಯಕ್ಕೆ ಕಾರಣವಾಗುತ್ತದೆ. "ಯಾವುದು ಮನೋನೈರ್ಮಲ್ಯಕ್ಕೆ ಕಾರಣವಾಗುವುದೋ ಅದು ಪ್ರಸಾದ". ಹೀಗೆ ಶರಣರು ಪ್ರಸಾದತತ್ವವನ್ನು ಎರಡು ರೀತಿಯಲ್ಲಿ ವಿವೇಚಿಸಿದ್ದಾರೆ. ತಾನೇ ಈಶ್ವರನಿಗೆ ಪ್ರಸಾದವಾಗಿ ಪರಿಣಮಿಸುವಿಕೆ ಒಂದಾದರೆ;
ಇಡೀ ಸೃಷ್ಟಿಯೆಲ್ಲಾ ಈಶ್ವರನ ಪ್ರಸಾದವೆಂಬ ಅರಿವು ಇನ್ನೊಂದು ಬಗೆಯಾಗಿ.
ಶಿವಯೋಗ ಸಾಧನೆಯಲ್ಲಿ ಎಲ್ಲ ಅಂಗತತ್ವಗಳು ಅರ್ಪಣೆಯಾಗಿ "ಪ್ರಸಾದಿಕರಣ"ಗೊಂಡು ಲಿಂಗತತ್ವ ಗಳಾಗುತ್ತವೆ.
 "ಲಿಂಗಾರ್ಪಣೆ" ಎಂಬುದನ್ನು ಬಹಳ ವ್ಯಾಪಕವಾದ ಅರ್ಥದಲ್ಲಿ ಕಂಡಿದ್ದಾರೆ ಶರಣರು, “ಒಳಹೊರಗೆ ತೆರಹಿಲ್ಲದ ಲಿಂಗಕ್ಕೆ ಅಂಗವನರ್ಪಿಸಿ ಪ್ರಸಾದವ ಗ್ರಹಿಸಿ ಘನ
ಲಿಂಗವಾಗಿರ್ಪ ಮಹಾಪ್ರಸಾದಿ" ಎಂದು ಅಂತಹ ಸಾಧಕರನ್ನು  ಪ್ರಸಾದ ಪರಿಣಾಮಿಗಳು ಎಂದು ಕರೆದಿದ್ದಾರೆ.

ಎಲ್ಲ ಅಷ್ಟಾವರಣಗಳಂತೆ ಪ್ರಸಾದ ಅರ್ಪಣೆಯು ಸಹ ಎರಡೂ ರೀತಿಯದು. ಒಂದು, ಶಿವನಿಗೆ ಅರ್ಪಿಸಿದ ಪದಾರ್ಥ (“ಶಿವಪ್ರಸಾದೋ ಯದ್ಧ ವ್ಯಂ ಶಿವಾಯ ವಿನಿವೇದಿತಂ') ಇದು ಬಹಿರಂಗದ ಅಷ್ಟಾವರಣ. ಇದು ಆಚರಣೆಯ ದ್ಯೋತಕ. 
ಅಂತರಂಗದ ಅಷ್ಟಾವರಣ ಆಂತರಿಕ ಅರ್ಪಣೆಯಿಂದ ಆದ ಮನಸ್ಸಿನ ನೈರ್ಮಲ್ಯ . ಬಹಿರಂಗದ ಆಚರಣೆಯಿಂದ ಅಂತರಂಗದ ಕಡೆಗೆ ತಿರುಗಿರುವ ಎರಡೂ ದೃಷ್ಟಿಯನ್ನು ಇಲ್ಲಿ ಕಾಣುತ್ತೇವೆ. ಬಾಹ್ಯ ಪ್ರಸಾದದ ಸ್ವೀಕಾರದಿಂದ ಮನಸ್ಸಿನ ಪ್ರಸನ್ನತೆ ಉಂಟಾಗುತ್ತದೆ. ಈ ಪ್ರಸನ್ನತೆಯನ್ನುಂಟು ಮಾಡುವಂತಹುದೇ ಪ್ರಸಾದ. ಆದಕ್ಕಾಗಿಯೇ ಬಾಹ್ಯ ಪದಾರ್ಥಗಳನ್ನು ಕೇವಲ ಪದಾರ್ಥಗಳನ್ನಾಗಿ ಸ್ವೀಕರಿಸದೆ  ಅವುಗಳನ್ನು ಅರ್ಪಿಸಿ ಪ್ರಸಾದವನ್ನಾಗಿ ಪರಿವರ್ತಿಸಿ ಅದರಿಂದ ಪ್ರಸನ್ನತೆಯನ್ನು ಪಡೆಯಬೇಕು. 

 *ಗುರುವಿನಲ್ಲಿ ಶುದ್ಧಪ್ರಸಾದ, ಲಿಂಗದಲ್ಲಿ ಸಿದ್ಧಪ್ರಸಾದ, ಜಂಗಮದಲ್ಲಿ ಪ್ರಸಿದ್ಧಪ್ರಸಾದ*
ಪ್ರಸಾದವು ಮೂರು ರೀತಿ. 
ಚನ್ನಬಸವಣ್ಣನವರು ಇವುಗಳ
ಸ್ವರೂಪವನ್ನು ಸ್ಪಷ್ಟ ಪಡಿಸುತ್ತಾರೆ:
#ಶುದ್ಧ ಸಿದ್ಧ ಪ್ರಸಿದ್ಧ ಪ್ರಸಾದವೆಂತುಟೆಂದು ಹೇಳಿಹೆ ಕೇಳಿರೇ:
ಶುದ್ಧಪ್ರಸಾದವು ಗುರುವಿನಲ್ಲಿ, ಸಿದ್ಧಪ್ರಸಾದವು ಲಿಂಗದಲ್ಲಿ,
ಪ್ರಸಿದ್ಧಪ್ರಸಾದವು ಜಂಗಮದಲ್ಲಿ.
ಇದರೊಳಗಾವುದು ಘನವೆಂಬೆನಾವುದು ಕಿರಿದೆಂಬೆ?
ಘನಕ್ಕೆ ಘನ ಮಹಾಘನ ಪ್ರಸಾದವು.
ಕೂಡಲಚೆನ್ನಸಂಗನಲ್ಲಿ ತ್ರಿವಿಧಪ್ರಸಾದವನು
ಸುಯಿಧಾನದಲ್ಲಿ ಕೊಳಬಲ್ಲನಯ್ಯಾ ಬಸವಣ್ಣನು. / 1524
ಪ್ರಸಾದವನ್ನು "ಮಹಕ್ಕೆ ಮಹ, ಘನಕ್ಕೆ ಘನ, ಮಹಾಘನ ಪ್ರಸಾದ" ಎಂದು ವರ್ಣಿಸಿದ್ದಾರೆ.
#ಗುರು ಪ್ರಸಾದದಿಂದ ತನು ಶುದ್ದವಾಯಿತ್ತು ;
ಲಿಂಗ ಪ್ರಸಾದದಿಂದ ಮನ ಶುದ್ಧವಾಯಿತ್ತು ;
ಜಂಗಮ ಪ್ರಸಾದದಿಂದ ಪ್ರಾಣ ಶುದ್ಧವಾಯಿತ್ತು ;
ಶರಣ ಸಂಗದಿಂದ ಪ್ರಸಾದ ಸಾಧ್ಯವಾಯಿತ್ತು.
ಕೂಡಲ ಚನ್ನಸಂಗಮದೇವಯ್ಯಾ
ಈ ತ್ರಿವಿಧ ಪ್ರಸಾದವ ಕೊಂಡನ್ನ ಭವಂ ನಾಸ್ತಿಯಾಯಿತ್ತು !

#ಅಗ್ನಿಮುಟ್ಟಲು ತೃಣವಗ್ನಿಯಪ್ಪುದು ತಪ್ಪದಯ್ಯ.
ಗುರುಪ್ರಸಾದವಂಗವ ಸೋಂಕಿದಲ್ಲಿ
ಸರ್ವಾಂಗ ಗುರುವಪ್ಪುದು ತಪ್ಪದಯ್ಯ.
ಲಿಂಗಪ್ರಸಾದ ಮನವ ಸೋಂಕಿದಲ್ಲಿ
ಮನ ಲಿಂಗವಪ್ಪುದು ತಪ್ಪದಯ್ಯ.
ಜಂಗಮಪ್ರಸಾದ ಅರಿವ ಸೋಂಕಿದಲ್ಲಿ
ಅಖಂಡಿತ ಪ್ರಸನ್ನಪ್ರಸಾದವಪ್ಪುದು ತಪ್ಪದಯ್ಯ.
ಶಿವಶಿವಾ, ಪ್ರಸಾದದ ಮಹಿಮೆಯನೇನೆಂದುಪಮಿಸುವೆ ?
ಪ್ರಸಾದವೇ ಗುರು, ಪ್ರಸಾದವೇ ಲಿಂಗ, ಪ್ರಸಾದವೇ ಜಂಗಮ,
ಪ್ರಸಾದವೇ ಪರಾತ್ಪರ, ಪ್ರಸಾದವೇ ಪರಮಾನಂದ,
ಪ್ರಸಾದವೇ ಪರಮಾಮೃತ, ಪ್ರಸಾದವೇ ಪರಮಜ್ಞಾನ,
ಪ್ರಸಾದವೇ ವಾಙ್ಮನೋತೀತ, ಪ್ರಸಾದವೇ ನಿತ್ಯಪರಿಪೂರ್ಣ.
ಇಂತಪ್ಪ ಪ್ರಸಾದವ ಕೊಂಡು ಬದುಕಿದೆನಯ್ಯ.
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ. / 11
ಎನ್ನುತ್ತಾರೆ ಉರಿಲಿಂಗ ಪೆದ್ದಿ ಶರಣ ಗುರುಗಳು.
ಅರ್ಥ: ಗುರುಪ್ರಸಾದದಿಂದ ಸರ್ವಾಂಗವೂ ಗುರುವಾಗುವುದು. ಲಿಂಗಪ್ರಸಾದದಿಂದ ಸರ್ವಮನವೂ ಲಿಂಗವಾಗುವುದು.
ಜಂಗಮಪ್ರಸಾದದಿಂದ ಅಖಂಡಿತ ಪ್ರಸನ್ನತೆಯು ಪ್ರಸಾದವಾಗುವುದು. ಪ್ರಸಾದವೇ ಗುರು, ಪ್ರಸಾದವೇ ಲಿಂಗ, ಜಂಗಮ, ಪರಾತ್ಪರ, ಪರಮಾನಂದ,
ಪರಮಾಮೃತ, ಪರಮಜ್ಞಾನ, ವಾಙ್ಮನೋತೀತ, ನಿತ್ಯಪರಿಪೂರ್ಣ ಎಂಬ ಮಾತು ಪ್ರಸಾದದ ಮಹತ್ವ ಮತ್ತು ಪರಿಣಾಮವನ್ನು ಅರ್ಥವತ್ತಾಗಿ ಸೂಚಿಸುತ್ತಿದೆ.
ಶರಣ ಧರ್ಮದಲ್ಲಿ ಪ್ರಸನ್ನತೆಯೇ ಪ್ರಸಾದ .

*ಸತ್ಯ, ಸದಾಚಾರ, ಸತ್ಕ್ರೀಯೆ, ಸಮ್ಯಜ್ಞಾನ,
ಸದ್ಭಕ್ತಿಗಳಿಂದ ಸಿಗುವ ಆನಂದದ ಅನುಭೂತಿಯೆ ಪ್ರಸಾದ. 

*ನಾವು ಮಾಡುವ ಕಾಯಕವೇ 
ಕ್ರಿಯಾ ಪ್ರಸಾದ.

*ಶುದ್ಧ ಚಿತ್ತದಿಂದ ನಾವು ಯೋಚಿಸುವ ಪರಿಶುದ್ಧ ವಿಚಾರಗಳೇ ವಿಚಾರ ಪ್ರಸಾದ.

*ಶಿವಯೋಗದ ಲಿಂಗಾಂಗ ಸಾಮರಸ್ಯದ
ಆನಂದದ ತುಟ್ಟ ತುದಿ ತಲುಪುವುದೇ 
ಅನುಭಾವ ಪ್ರಸಾದ.

*ಲಿಂಗಾಂಗ ಸಾಮರಸ್ಯದ ಸ್ಥಿತಿ ಮುಟ್ಟಿದ ಶರಣನ  ಅನಂದಾನುಭವವೇ 
ಆನಂದ ಪ್ರಸಾದ.

*ಪರಮ ಜ್ಞಾನ ವೈಚಾರಿಕ ಪ್ರಜ್ಞೆ, ಅರಿವಿನ ಜ್ಞಾನದ ಪ್ರಸಾದ.

*ಶರಣರ ಪ್ರಸನ್ನತೆಯ ಭಾವವೇ 
ಭಾವ ಪ್ರಸಾದ.

*ಪ್ರಸಾದಕ್ಕೆ ಈ ಶಕ್ತಿ ಬರುವುದು ಅದನ್ನು ಆಚರಿಸುವ ಭಾವನೆಯಿಂದ*
ಎಂದು ಗುರು ಬಸವಣ್ಣನವರು ಹೇಳಿದ್ದಾರೆ.
#ಗುರು ಲಿಂಗ ಜಂಗಮದಿಂದ ಪಾದೋದಕ ಪ್ರಸಾದವಾುತ್ತು.
ಆ ಭಾವವೆ ಮಹಾಪ್ರಸಾದವಾಗಿ
ಎನಗೆ ಬೇರೆ ಪ್ರಸಾದವೆಂಬುದಿಲ್ಲ
ಕೂಡಲಸಂಗಮದೇವಾ. / 600
 ಬಹಿರಂಗದ ಆಚರಣೆಗಳಿಗೆಲ್ಲಾ ಶಕ್ತಿಯನ್ನು ಕೊಡುವುದು ಈ ಭಾವನೆ ಮತ್ತು ಆದರಿಂದ ಪ್ರೇರಿತವಾದ ನಿಷ್ಠೆ,

#ಲಿಂಗಕ್ಕಲ್ಲದೆ ಮಾಡೆನೀ ಮನವನು,
ಜಂಗಮಕ್ಕಲ್ಲದೆ ಮಾಡೆನೀ ಧನವನು,
ಪ್ರಸಾದಕ್ಕಲ್ಲದೆ ಮಾಡೆನೀ ತನುವನು,
ಲಿಂಗಜಂಗಮಪ್ರಸಾದಕ್ಕಲ್ಲದೆ ಬಾಯ್ದೆರೆಯೆನೆಂಬುದೆನ್ನ ಭಾಷೆ.
ಅನರ್ಪಿತವಾದಡೆ ತಪ್ಪೆನ್ನದು,
ಮೂಗ ಕೊಯಿ, ಕೂಡಲಸಂಗಮದೇವಾ. / 1108
ಎಂಬಲ್ಲಿ ಬಸವಣ್ಣನವರ ಪ್ರಸಾದನಿಷ್ಠೆ ವ್ಯಕ್ತವಾಗಿದೆ. "ಪಾದೋದಕ ಪ್ರಸಾದ
ಜೀವಿಯ ಕಂಡು, ಹೋದ ಪ್ರಾಣ ಬಂದಂತಾಯಿತ್ತು” ಎಂಬಂತಹ ನಂಬಿಕೆ ಪ್ರಸಾದದಲ್ಲಿ ಅವರದು.
 *ನಂಬಿದರೆ ಪ್ರಸಾದ, ನಂಬದಿದ್ದರೆ ವಿಷ* ಎನ್ನುತ್ತಾರೆ. 
#ಹುತ್ತದ ಮೇಲಣ ರಜ್ಜು ಮುಟ್ಟಿದಡೆ ಸಾವರು ಶಂಕಿತರಾದವರು,
ದರ್ಪದಷ್ಟವಾದಡೆಯೂ ಸಾಯರು ನಿಶ್ಯಂಕಿತರಾದವರು.
ಕೂಡಲಸಂಗಮದೇವಯ್ಯಾ,
ಶಂಕಿತಂಗೆ ಪ್ರಸಾದ ಸಿಂಗಿ, ಕಾಳಕೂಟವಿಷವು.
ಅರ್ಥ:
ಅರ್ಪಣೆಯನ್ನು ನಂಬಿದಾಗ ಬರುವದೇ ಶಿವಪ್ರಸಾದ. ನಂಬದೇ ಮಾಡಿದ ಅರ್ಪಣೆ ವಿಷವಾಗುವುದು. ಲಿಂಗಪ್ರಸಾದ, ಕೂಡಲಸಂಗನ ಪ್ರಸಾದವನ್ನು  ತುಡುಕಬಾರದು ಅಂದರೆ ಅವಿಶ್ವಾಸದಿಂದ ನೋಡಬಾರದು. ಅಂಥ ಪ್ರಸಾದ ಅಥವಾ ಅವಿಶ್ವಾಸದಿಂದ ಮಾಡಿದ ಅರ್ಪಣೆ ವಿಷದ ಹಾಗೆ ಅಂತ ಬಸವಣ್ಣನವರು ಹೇಳುತ್ತಾರೆ.

ತ್ಯಾಗ ಮತ್ತು ಭೋಗಗಳ, ವೈರಾಗ್ಯ ಮತ್ತು  ಸಂಸಾರಗಳ ಪರಸ್ಪರ ವಿರೋಧದ ಗಡಿರೇಖೆಯನ್ನು ಪ್ರಸಾದದಿಂದ ಅಳಿಸಿ ಹಾಕಿದರು ಗುರು ಬಸವಣ್ಣ ನವರು.
#ಒಲ್ಲೆನೆಂಬುದು ವೈರಾಗ್ಯ, ಒಲಿವೆನೆಂಬುದು ಕಾಯಗುಣ.
ಆವ ಪದಾರ್ಥವಾದಡೇನು ತನ್ನಿದ್ದೆಡೆಗೆ ಬಂದುದ
ಲಿಂಗಾರ್ಪಿತವ ಮಾಡಿ ಭೋಗಿಸುವುದೆ ಆಚಾರ.
ಕೂಡಲಸಂಗಮದೇವರನೊಲಿಸ ಬಂದ
ಪ್ರಸಾದಕಾಯವ ಕೆಡಿಸಲಾಗದು. / 431
ಎಂಬ ಸರಳವಾದ ಮಾತಾದರೂ ಅರ್ಥ ಗರ್ಭಿತವಾಗಿದೆ. ದೇಹಸುಖಕ್ಕಾಗಿ, ನಾಲಗೆಯ ಚಪಲಕ್ಕಾಗಿ ಬಯಸುವ ಆಶೆ ಸಲ್ಲದು. ಹಾಗೆಯೇ ಬಂದದ್ದನ್ನು ತಿರಸ್ಕರಿಸಬೇಕೆಂಬ ವೈರಾಗ್ಯವೂ ಬೇಕಾಗಿಲ್ಲ. ಪ್ರಭು ಹೇಳುವಂತೆ ಉಂಡೇನೆಂಬ ಬಯಕೆಯೂ ಇಲ್ಲ. ಒಲ್ಲೆನೆಂಬ ವೈರಾಗ್ಯವೂ ಇಲ್ಲ. ತಾನಿದ್ದೆಡೆಗೆ ಬಂದುದನ್ನು ಲಿಂಗಾರ್ಪಿತವ ಮಾಡಿ ಭೋಗಿಸುವುದೇ ಯುಕ್ತವಾದುದು. ಕೂಡಲಸಂಗನನ್ನು ಒಲಿಸುವುದಕ್ಕಾಗಿ ಬಂದ ಈ ದೇಹ ಪವಿತ್ರವಾದದ್ದು ; ಈ ಪ್ರಸಾದಕಾಯವನ್ನು ಕೆಡಿಸಲಾಗದು ಎಂಬ ಬಸವಣ್ಣನವರ ಮಾತು ಮನನೀಯವಾಗಿದೆ.
ಜೀವನು ದೀಕ್ಷೆಯಿಂದ ಶುದ್ಧವಾಗಿ 'ಅಂಗ' ಎನಿಸಿಕೊಳ್ಳುತ್ತಾನೆ. ಪ್ರಸಾದಿಕರಣದಿಂದ ಅವನ ದೇಹದ ಅಂಗಗುಣಗಳು ಅಳಿದು ಲಿಂಗಗುಣಗಳಾಗಿ ಪರಿಣಮಿಸುತ್ತವೆ. ಆ ಲಿಂಗಗುಣಗಳಿಂದ ಸಮನ್ವಿತನಾಗಿ ಪರಿಣಮಿಸುತ್ತಾನೆ. ಸ್ವೀಕರಿಸುವ ಆಹಾರದಿಂದ ಹಿಡಿದು ಇತರ ಎಲ್ಲ ಕ್ರಿಯೆಗಳಲ್ಲಿಯೂ ಪ್ರಸಾದವನ್ನೇ ಕಾಣುವ ದೈವಿಕ ದೃಷ್ಟಿ ಶರಣರದು.

ನಾವು ಸ್ವೀಕರಿಸುವ ಆಹಾರ, ಅದು ದೇಹವನ್ನು ಪರಿಶುದ್ಧಗೊಳಿಸಿ ಮನಸ್ಸಿನ
ಪವಿತ್ರತೆಗೆ ಕಾರಣವಾಗುವ ಪ್ರಸಾದವಾಗಬೇಕು “ಒಡಲ ಕಳವಳಕ್ಕೆ, ಬಾಯ ಸವಿಗೆ ಬಯಸಿ ಉಂಡೆನಾದರೆ ನಿಮ್ಮ ತೊತ್ತಿನ ಮಗನಲ್ಲಾ !” ಎನ್ನುತ್ತಾರೆ ಬಸವಣ್ಣ
ನವರು. ಲಿಂಗಮುಖದಿಂದ ಬಂದ ಪ್ರಸಾದವನ್ನಲ್ಲದೆ ಬೇರೇನನ್ನೂ ಕೊಳ್ಳೆನೆಂಬುದು ಅವರ ಭಾಷೆ, “ಲಿಂಗಾರ್ಪಿತವಲ್ಲದೆ ಉದಕವ ಮುಕ್ಕಳಿಸಿದೆನಾದರೆ ಸಲ್ಲೆನು ನಿಮ್ಮ
ಗಣಾಚಾರಕ್ಕಯ್ಯ” ಎಂಬುದು ಅವರ ವೀರನಿಷ್ಠೆ. ಆಹಾರ ಸಮರ್ಪಣೆ ಮಾಡಿದಾಗ ಅದು ಶುದ್ಧವಾಗಿ ಪ್ರಸಾದವಾಗುತ್ತದೆ. ಆಗ ಅದು ಸೇವನೆಗೆ ಯೋಗ್ಯವಾಗುತ್ತದೆ.

"ಯಾವುದು ಶಿವನಿಗೆ
ಸಮರ್ಪಿತವಾಗುವುದೋ ಅದು ಪ್ರಸಾದ" ವೆನ್ನಿಸಿಕೊಳ್ಳುವುದು ಎಂದು
ಅನ್ನಶುದ್ಧಿ ಮತ್ತು ಅರ್ಪಣೆಯ ಮಹತ್ವವನ್ನು ಹೇಳುತ್ತಾರೆ.
"ನಾವು ಸ್ವೀಕರಿಸುವ ಆಹಾರವೆಲ್ಲಾ ಶಿವನ ಪ್ರಸಾದ, ಆತನ ಕೃಪೆಯಿಂದ ಬೆಳೆದು ಬಂದುದು. ಆತನ ಸಾಕ್ಷಾತ್ಕಾರವನ್ನು ಪಡೆಯಲು ಸಾಧಕವಾದ ಈ ದೇಹಕ್ಕೆ ಚೈತನ್ಯವನ್ನೊದಗಿಸುವ ದಿವ್ಯಶಕ್ತಿ ಅನ್ನ. ಆದುದರಿಂದ ಅದನ್ನು ಅತಿ ಪವಿತ್ರವಾದ ಭಾವನೆಯಿಂದ ಸ್ವೀಕರಿಸಬೇಕು".
#ಮೌನದಲುಂಬುದು ಆಚಾರವಲ್ಲ.
ಲಿಂಗಾರ್ಪಿತವ ಮಾಡಿದ ಬಳಿಕ
ತುತ್ತಿಗೊಮ್ಮೆ ಶಿವ ಶರಣುನುತ್ತಿರಬೇಕು.
ಕರಣವೃತ್ತಿಗಳಡಗುವವು,
ಕೂಡಲಸಂಗನ ನೆನೆವುತ್ತ ಉಂಡಡೆ. / 1087
ಹೀಗೆ ಪ್ರಸನ್ನ ಮನಸ್ಸಿನಿಂದ ದೇವನಿಗೆ ಅರ್ಪಿಸಿ ಸ್ವೀಕರಿಸಿದ ಆಹಾರ ಪ್ರಸಾದ
ವಾಗುತ್ತದೆ. ಅದರಿಂದ ಕರಣವೃತ್ತಿಗಳಡಗುವುವು. ನಾವು ತಿನ್ನುವ ಅನ್ನದಿಂದ ಹಿಡಿದು ಎಲ್ಲವೂ ಪ್ರಸಾದಮಯವಾಗಬೇಕು.
ಪ್ರಸಾದದಿಂದ ಪೋಷಿತವಾದ ದೇಹ ಪವಿತ್ರವಾಗುತ್ತದೆ. ಕರಣವೃತ್ತಿಗಳು ಅಡಗಿ
ಅದು ಪ್ರಸಾದಕಾಯವಾಗುತ್ತದೆ. ವಿಷಯ ಸುಖಗಳನ್ನು ಗ್ರಹಿಸುವ ಜ್ಞಾನೇಂದ್ರಿಯಗಳು ವಿಷಯಸುಖ ವ್ಯಾಮೋಹವನ್ನು ಕಳೆದುಕೊಂಡು ಪ್ರಸಾದವನ್ನು ಗ್ರಹಿಸುವ ಲಿಂಗಮುಖಗಳಾಗಿ ಪರಿಣಮಿಸುತ್ತದೆ. ಹೀಗೆ  ಸಾಧಕನು ಭೋಗಸಾಧನವಾದ
ಬಾಹೇಂದ್ರಿಯಗಳನ್ನು ಗುರುಲಿಂಗ ಜಂಗಮಕ್ಕೆ ಅರ್ಪಿಸಿ ಇವೆಲ್ಲವನ್ನೂ ಪ್ರಸಾದ
ನನ್ನಾಗಿಸಿಕೊಂಡು ತ್ಯಾಗಮುಖದಿಂದ ಉಪಭೋಗಿಸುತ್ತಾ ತಾನು ಶಿವನಂತೆ ಪ್ರಸಾದ ರೂಪವಾಗಿ ಪರಿಣಮಿಸುತ್ತಾನೆ. 

 *ಪ್ರಸಾದದ ತಳಹದಿ ಅರ್ಪಣ*
 ಇದನ್ನು ಶರಣರು ಬಹುವ್ಯಾಪಕವಾದ ಅರ್ಥದಲ್ಲಿ ಕಂಡಿದ್ದಾರೆ. ಅರ್ಪಣತತ್ವ ಅಹಂಕಾರ ನಿರಸನಕ್ಕೆ ಸಾಧನ. ತನ್ನದೆಂಬುದೇನನ್ನೂ ಉಳಿಸಿಕೊಳ್ಳದೆ ಎಲ್ಲವನ್ನೂ ಶಿವಾರ್ಪಣ ಮಾಡಬೇಕು. 
ಕ್ರಿಯಾಪ್ರಧಾನವಾದ ಆಚರಣೆಗೆ ಸಹಜಾಚರಣೆ ಎಂದೂ ಜ್ಞಾನಪ್ರಧಾನವಾದ
ಆಚರಣೆಗೆ ಸಂಬಂಧಾಚರಣೆಯೆಂದೂ ಕರೆಯುತ್ತಾರೆ. ಈ ಸಹಜ ಮತ್ತು ಸಂಬಂಧಾ
ಚರಣೆಗಳೆರಡರಿಂದಲೂ ಸಮನ್ವಿತವಾದದ್ದು ಶರಣರ ಪ್ರಸಾದಮಾರ್ಗ.
ಅರ್ಪಣದಲ್ಲಿ ಎರಡು ವಿಧ.
*ಕಾಯಾರ್ಪಣ ಮತ್ತು ಜ್ಞಾನಾರ್ಪಣ*
ಕಾಯಾರ್ಪಣವು (ಕ್ರಿಯಾರ್ಪಣ) ಕ್ರಿಯಾಪ್ರಧಾನವಾದದ್ದು. 
ಜ್ಞಾನಾರ್ಪಣ (ಕರಣಾರ್ಪಣ, ಭಾವಾರ್ಪಣ)  ಜ್ಞಾನಪ್ರಧಾನವಾದದ್ದು.

1. *ಕಾಯಾರ್ಪಣೆ(ಕ್ರಿಯಾರ್ಪಣ)*:
ಇಷ್ಟ ಪ್ರಾಣ ಭಾವಲಿಂಗಗಳಿಗೆ ಮತ್ತು  ಇಷ್ಟ ಪ್ರಾಣ ಭಾವ ಸ್ವರೂಪನಾದ ಗುರು ಲಿಂಗ ಜಂಗಮರಿಗೆ ಅರ್ಪಿಸಿ ಆ ಪ್ರಸಾದವನ್ನು ಸ್ವೀಕರಿಸುವುದು ಕ್ರಿಯಾರ್ಪಣ ಎನಿಸುತ್ತದೆ.
ಇಲ್ಲಿ ಕ್ರಿಯಾಪೂರ್ವಕವಾದ ಅರ್ಪಣೆಯೇ ಪ್ರಧಾನ  ಮತ್ತು ಸ್ಥೂಲತನುವಿನ ಆಹಾರಾದಿ ವಸ್ತುಗಳಿಗೆ ಇದು ಮುಖ್ಯವಾಗಿ ಸಂಬಂಧಿಸಿದೆ. ಇಲ್ಲಿ ಸ್ಥೂಲ ದೇಹಕ್ಕೂ ಇಷ್ಟಲಿಂಗಕ್ಕೂ ಅರ್ಪಣೆಯ ಸಂಬಂಧವಾಗಿ ಕಾಯಶುದ್ಧವಾಗಿ ಪ್ರಸಾದಕಾಯವಾಗುತ್ತದೆ.
ಭೋಜ್ಯ (ತುತ್ತು ಮಾಡಿ ಸ್ವೀಕರಿಸುವುದು), ಪಾನ್ಯ (ಕುಡಿಯುವ ಪದಾರ್ಥ), ಭಕ್ಷ (ಅಗಿದು ಸ್ವೀಕರಿಸುವಪದಾರ್ಥ), ಚೋಹ್ಯ (ಸುರಿ ಸುರಿದು ಸ್ವೀಕರಿಸುವುದು), ಲೇಹ್ಯ (ನಾಲಿಗೆಯಿಂದನೆಕ್ಕಿ ಸ್ವೀಕರಿಸುವುದು)
ಈ ಪಂಚವಿಧ ಪದಾರ್ಥಗಳನ್ನು ಮಂತ್ರಸ್ಮರಣೆಯಿಂದ ಇಷ್ಟಲಿಂಗಕ್ಕೆ ಸಮರ್ಪಿಸಿ “ಆ ಇಷ್ಟಲಿಂಗ ಮುಖದಿಂದ ಉಳುಮೆಯಾಗಿ ಬಂದ ತೃಪ್ತಿಪ್ರಸಾದ ಪಡೆದನುಭವಿಸಿ ಪರಮ ಪರಿಣಾಮಿ” ಆಗುವುದು ಕಾರ್ಯಾರ್ಪಣೆ.
ಆಹಾರ ಸ್ವೀಕಾರ ಕ್ರಮವನ್ನು ಹನ್ನೊಂದು ಬಗೆಗಳಾಗಿ ವಿವರವಾಗಿ ವಿವೇಚಿಸಿದ್ದಾರೆ.
1.ಪೂಜಾ ನಂತರದಲ್ಲಿ ಭಸ್ಮವನ್ನು ಭೋಜನ ಪಾತ್ರೆಗೆ ಧರಿಸುವುದು ಶುದ್ಧ ಪ್ರಸಾದ
2.ಅನಂತರ ತನ್ನ ಆಹಾರ ಪದಾರ್ಥವನ್ನು ಇಷ್ಟಲಿಂಗಕ್ಕೆ ಅರ್ಪಿಸಿಕೊಳ್ಳುವುದು ಸಿದ್ಧ ಪ್ರಸಾದ
3.ಜಂಗಮಾರ್ಪಣ ಭಾವದಿಂದ
ನಾಲಗೆಯಲ್ಲಿಟ್ಟು ಭುಂಜಿಸುವುದು ಇದು ಪ್ರಸಿದ್ಧಪ್ರಸಾದ.
4.ಇವುಗಳ ಸೇವನೆಯಿಂದುಂಟಾದ ತೃಪ್ತಿಯೇ ಆಪ್ಯಾಯನ ಪ್ರಸಾದ. 
5.ಇತರ ಪದಾರ್ಥಗಳನ್ನು ಅನರ್ಪಿತಗಳೆಂದು ತಿಳಿದು ಅವುಗಳಲ್ಲಿ ಮನವಿಡದಿರುವುದು ಸಮಯ ಪ್ರಸಾದ. 
6.ಇತರ ವಿಷಯಗಳ ಕಡೆ ಹೋಗದಂತೆ ಪಂಚೇಂದ್ರಿಯಗಳನ್ನು ಪ್ರಸಾದದಲ್ಲಿಯೇ ಕೇಂದ್ರೀಕರಿಸುವುದು ಪಂಚೇಂದ್ರಿಯ ವಿರಹಿತ ಪ್ರಸಾದ.
7.ಸಂಕಲ್ಪಾದಿಗಳಿಗೆ ಅವಕಾಶವೀಯದಂತೆ ನಿಶ್ಚಲತೆಯಿಂದ ಪ್ರಸಾದವನ್ನು ಸೇವಿಸುವುದು ಅಂತಃಕರಣವಿರಹಿತ ಪ್ರಸಾದ.
8.ಪ್ರಸಾದವನ್ನು ಜಂಗಮಕ್ಕೆ ಸಮರ್ಪಿಸಿ ಸಮರಸ ಭೋಗಮಾಡುವುದು ಪ್ರಸಾದಿಯ ಪ್ರಸಾದಿ. 
9.ಪ್ರಸಾದವನ್ನು ಸದ್ಭಾವನೆಯಿಂದ, ಇದು ಕೇವಲ ಪದಾರ್ಥ ಎಂಬ ಭಾವನೆಯನ್ನುಳಿದು
ಸೇವಿಸುವುದು ಸದ್ಭಾವಪ್ರಸಾದ. 
10.ಹಸಿವನ್ನು ಅಡಗಿಸಿಕೊಂಡು ಶಾಂತಿ ಸೈರಣೆಯನ್ನು ಪಡೆಯುವುದೇ ಸಮತಾಪ್ರಸಾದ. 
11.ಈ ಸಮತಾಪ್ರಸಾದದಿಂದ ಪ್ರಸಾದಕಾಯನಾಗಿರುವೆನೆಂಬ ಸುಜ್ಞಾನವೇ ಜ್ಞಾನಪ್ರಸಾದ. 
ಈ ಎಲ್ಲ ಏಕಾದಶ ಪ್ರಸಾದಗಳೆಲ್ಲದರಲ್ಲಿಯೂ ಕಂಡುಬರುವ ಅತಿ ಮುಖ್ಯವಾದ ಅಂಶವೆಂದರೆ ಆಹಾರಶುದ್ಧಿ. ಇದು ದೇಹ ಮತ್ತು ಮನಸ್ಸುಗಳ ಮೇಲೆ ಮಹತ್ತರವಾದ ಪ್ರಭಾವವನ್ನು ಬೀರುತ್ತದೆಂದು ನಂಬಿದವರು ಶರಣರು.
2.*ಜ್ಞಾನಾರ್ಪಣ*
(ಕರಣಾರ್ಪಣ  ಮತ್ತು ಭಾವಾರ್ಪಣೆ)
ಎಲ್ಲ ಇಂದ್ರಿಯಗಳನ್ನು ಲಿಂಗಸ್ವರೂಪವನ್ನಾಗಿ ಮಾಡಿಕೊಂಡು ಏನನ್ನು ಸ್ವೀಕರಿಸಿದರೂ
ಅದನ್ನು ಪ್ರಸಾದವಾಗಿ ಪರಿವರ್ತಿಸಿಕೊಳ್ಳುವುದು 'ಜ್ಞಾನಾರ್ಪಣ'.
ಕರಣಾರ್ಪಣ, ಭಾವಾರ್ಪಣಗಳು ಎರಡೂ ಜ್ಞಾನಪ್ರಧಾನವಾದುವುಗಳು.

ಕರಣಾರ್ಪಣೆ:
ಇಲ್ಲಿ ಆಚಾರಾದಿ ಆರು ಲಿಂಗಗಳಿಗೂ (ಪಂಚೇಂದ್ರಿಯಗಳು ಮತ್ತು ಹೃದಯ) ಅರ್ಪಣೆಯ ಸಂಬಂಧ ಏರ್ಪಡುತ್ತದೆ. ಶಿವಯೋಗದಲ್ಲಿ ಒಂದೊಂದು ಇಂದ್ರಿಯವನ್ನು ಒಂದೊಂದು ಲಿಂಗಕ್ಕೆ ಸಮರ್ಪಿಸಿಬಿಟ್ಟರೆ ಅವುಗಳಿಂದ ಉಪಭೋಗಿಸುವುದೆಲ್ಲಾ ಲಿಂಗಭೋಗೋಪಭೋಗವೇ ಆಗಿ ಪರಿಣಮಿಸುತ್ತದೆ :

#......ಶಿವಶರಣನ ಗಂಧ ವಿಷಯವನುಳ್ಳ ಘ್ರಾಣೇಂದ್ರಿಯದೊಳಗೆ ಪಂಚಾಚಾರ
ಸ್ವರೂಪವಾದ ಆಚಾರ ಬ್ರಹ್ಮಲಿಂಗವಾಗಿ ನೆಲೆಗೊಂಡಿಪ್ಪುದು. ಜಿಹ್ವೆಯಲ್ಲಿ ರಸವಿಷಯ
ವನ್ನುಳ್ಳ ರಸನೇಂದ್ರಿದೊಳಗೆ ಮಂತ್ರ ಮೂರ್ತಿಯಾದ ಗುರುಲಿಂಗವಾಗಿ ನೆಲೆಗೊಂಡಿಪ್ಪುದು. 
ನೇತ್ರದಲ್ಲಿ ರೂಪು ವಿಷಯವನುಳ್ಳ ನಯನೇಂದ್ರಿಯದೊಳಗೆ ಪರಮ ಪ್ರಕಾಶ
ಸ್ವರೂಪವಾದ ಶಿವಲಿಂಗವಾಗಿ ನೆಲೆಗೊಂಡಿಪ್ಪುದು, 
ತ್ವಕ್ಕಿನಲ್ಲಿ ಸ್ಪರ್ಶನ ವಿಷಯವನುಳ್ಳ
ತ್ವಗಿಂದ್ರಿಯದಲ್ಲಿ ಯಜನ ಸ್ವರೂಪವಾದ ಚರಲಿಂಗವಾಗಿ ನೆಲೆಗೊಂಡಿಪ್ಪುದು. 
ಶ್ರೋತ್ರದಲ್ಲಿ ಶಬ್ದ ವಿಷಯವನುಳ್ಳ ಶ್ರವಣೇಂದ್ರಿಯದೊಳಗೆ ಈಳನ ಸ್ವರೂಪವಾದ ಪ್ರಸಾದ
ಲಿಂಗವಾಗಿ ನೆಲೆಗೊಂಡಿಪ್ಪುದು. ಹೃದಯದಲ್ಲಿ ತೃಪ್ತಿ ವಿಷಯವನುಳ್ಳ ಹೃದಯೇಂದ್ರಿಯದೊಳಗೆ ಪ್ರಾಣಲಿಂಗವೆಂಬುದು ತಾನೆ ಬೋಧಾಸ್ವರೂಪವಾದ ಮಹಾಲಿಂಗವಾಗಿ ನೆಲೆಗೊಂಡಿಪ್ಪುದು

 ಘ್ರಾಣೇಂದ್ರಿಯದಲ್ಲಿ ಆಚಾರ
ಲಿಂಗ (ಪಂಚಾಚಾರ ಆಚರಣೆ), ಜಿಹ್ವೆಯಲ್ಲಿ ಗುರುಲಿಂಗ (ಮಂತ್ರ), ನೇತ್ರದಲ್ಲಿ
ಶಿವಲಿಂಗ (ಪ್ರಕಾಶ ಅಥವಾ ತೇಜಸ್ಸು), ತ್ವಕ್ಕಿನಲ್ಲಿ ಜಂಗಮಲಿಂಗ (ಅರ್ಚನೆ),
 ಶ್ರೋತ್ರದಲ್ಲಿ ಪ್ರಸಾದಲಿಂಗ (ಸ್ತುತಿ), ಹೃದಯದಲ್ಲಿ ಮಹಾಲಿಂಗ (ಬೋಧೆ)
ಇವುಗಳು ನೆಲಸಿವೆ ಎಂದು ಹೇಳಿರುವ ಈ ಕ್ರಮ ಅರ್ಥವತ್ತಾಗಿದೆ. ಕಣ್ಣು ಕಿವಿ
ಮೂಗು ನಾಲಗೆ ಚರ್ಮ ಮತ್ತು ಹೃದಯ ಇವುಗಳೆಲ್ಲ ಲಿಂಗಸ್ವರೂಪವಾಗಿ ಬಿಟ್ಟರೆ
ಇಡೀ ವಿಶ್ವವೇ ಸಹಜ ಪ್ರಸಾದವಾಗಿ ಪರಿಣಮಿಸುತ್ತದೆ. ಈ ಇಂದ್ರಿಯಗಳ ವಿಷಯ
ಗಳಾದ ರೂಪ ಶಬ್ದ ಗಂಧ ರಸ ಸ್ಪರ್ಶ ಈ ಪಂಚತನ್ಮಾತ್ರೆಗಳೂ ಇವುಗಳ ಪರಿಣಾಮ
ವಾದ ತೃಪ್ತಿಯೂ ಆರು ಲಿಂಗಗಳಿಗೆ ಅರ್ಪಿತವಾಗಿ ಬಿಡುವುದರಿಂದ, ಆಯಾ
ಇಂದ್ರಿಯಗಳು  ಪ್ರಸಾದಮಯವಾಗುತ್ತವೆ ; ಬೇಕುಬೇಡೆಂಬ ದ್ವಂದ್ವಗಳನ್ನು ಕಳೆದುಕೊಳ್ಳುತ್ತವೆ. ಇದನ್ನು ಚನ್ನಬಸವಣ್ಣನವರು ಒಂದುವಚನದಲ್ಲಿ ಹೀಗೆ ನಿರೂಪಿಸಿದ್ದಾರೆ:
#ಬೇಕೆನ್ನಲಾಗದು ಶರಣಂಗೆ,
ಬೇಡೆನ್ನಲಾಗದು ಶರಣಂಗೆ,
ಬಂದ ಸುಖವನತಿಗಳೆಯಲಾಗದು ಶರಣಂಗೆ,
ಇದಕಾರಣ ಕೂಡಲಚನ್ನಸಂಗಯ್ಯ 
ನಿಮ್ಮ ಶರಣ ಉಂಡು ಉಪವಾಸಿಗಳು
ಬಳಸಿ ಬ್ರಹ್ಮಚಾರಿಗಳು.

ಇದು ಕರಣಾರ್ಪಣೆ ತಂದುಕೊಡುವ ನಿಲುವು. ಇಂದ್ರಿಯಗಳೆಲ್ಲಾ ಶಿವನಿಗೆ ಅರ್ಪಿತ
ವಾದನಂತರ ಅಲ್ಲಿ ತನ್ನದೆನ್ನುವುದೇನೂ ಉಳಿಯುವುದಿಲ್ಲ; ಇಂದ್ರಿಯ ವ್ಯಾಪಾರ
ಗಳೆಲ್ಲಾ ಅಲ್ಲಿ ಉದಾತ್ತೀಕರಣಗೊಳ್ಳುತ್ತವೆ. ಆಗ ಅವು ಬಂಧನಕ್ಕೆ ಕಾರಣವಾಗುವುದಿಲ್ಲ. ತಾರಕ ಸಾಧನಗಳಾಗುತ್ತವೆ.
ಹೀಗೆ ಕರಣಾರ್ಪಣೆಯಿಂದ ಇಂದ್ರಿಯಗಳು ಶುದ್ಧವಾಗುತ್ತವೆ.
ಭಾವಾರ್ಪಣೆ:
ಭಾವಾರ್ಪಣೆಯಿಂದ ಈ ಪ್ರಸಾದ ಭಾವನೆ ಇನ್ನೂ ಬಲವತ್ತರಗೊಂಡು ಜೀವನವೆಲ್ಲಾ ಪ್ರಸಾದಮಯವಾಗಿ ಪರಿಣಮಿಸುತ್ತದೆ. ಕಾಯಾರ್ಪಣೆಯಲ್ಲಿ ಇಷ್ಟಲಿಂಗಕ್ಕೂ ಕರಣಾರ್ಪಣೆಯಲ್ಲಿ ಪ್ರಾಣಲಿಂಗಕ್ಕೂ ಪ್ರಾಧಾನ್ಯವಿದ್ದಂತೆ ಮತ್ತು ಅವು ಸ್ಥೂಲ ಸೂಕ್ಷ್ಮ ದೇಹಗಳಿಗೆ ಸಂಬಂಧಿಸಿದಂತೆ, ಭಾವಾರ್ಪಣೆಯಲ್ಲಿ ಭಾವಲಿಂಗಕ್ಕೆ ಪ್ರಾಧಾನ್ಯ. ಕಾರಣತನುವಿನ
ಸಂಬಂಧ. ಬಹಿರ್ಮುಖದಿಂದ ಅಂತರ್ಮುಖವಾಗಿ ವಿಕಾಸಗೊಳ್ಳುತ್ತದೆ
ಇಲ್ಲಿ ಪ್ರಸಾದ ಭಾವನೆ.

#ಮಾಡುವ ತನುವು ನೀವೇ ಆದಿರಿ.
ಕೂಡುವ ಮನವು ನೀವೇ ಆದಿರಿ.
ನೀಡುವ ಧನವು ನೀವೇ ಆದಿರಿ.
ಅಖಂಡೇಶ್ವರಾ, ನಾನೂ ಇಲ್ಲ, ನೀವೂ ಇಲ್ಲ , ಏನೇನೂ ಇಲ್ಲ. / 524
ಹೀಗೆ ತನು ಮನ ಧನಗಳನ್ನು ಅರ್ಪಿಸಿ, ಅರ್ಪಿಸಿದೆನೆಂಬ ಭಾವನೆಯೂ ಇಲ್ಲದಂತಾಗಿ
ಅತೀತನಾಗಿ ಪರಿಣಮಿಸುತ್ತಾನೆ. ಇದನ್ನು “ಅತೀತ ಪ್ರಸಾದ” ಎಂದು ಕರೆಯುವರು.
ಈ ನಿಲವಿನಲ್ಲಿ ಕೊಟ್ಟುದೆಲ್ಲಾ ಶಿವನಿಗೆ ಕೊಡುಗೆಯಾಗುತ್ತದೆ . ಅರ್ಪಿಸಿದುದೆಲ್ಲಾ
ಪ್ರಸಾದವಾಗುತ್ತದೆ. ಈ ಅರ್ಥದಲ್ಲಿಯೇ ಅಲ್ಲಮಪ್ರಭು “ತನ್ನ ಮುಟ್ಟಿ ನೀಡಿದುದೆಲ್ಲಾ
ಪ್ರಸಾದ ; ತನ್ನ ಮುಟ್ಟದೆ ನೀಡಿದುದೇ ಓಗರ” ಎಂದಿರುವುದು, ಏನನ್ನು ಕೊಡು
ತೇವೆಂಬುದು ಮುಖ್ಯವಲ್ಲ ; ಹೇಗೆ ಕೊಡುತ್ತೇವೆಂಬುದು ಮುಖ್ಯ. 
ಶರಣ ಮಾರ್ಗದಲ್ಲಿ ಕಾಯಾರ್ಪಣ(ಕ್ರಿಯಾರ್ಪಣ), ಜ್ಞಾನಾರ್ಪಣ ಎರಡೂ ಇರಬೇಕು ಎನ್ನುತ್ತಾರೆ.

#ರೂಪಾಗಿ ಬಂದ ಪದಾರ್ಥವ ಕಾಯದ ಕೈಯಲ್ಲಿ ಇಷ್ಟಲಿಂಗಕ್ಕೆ ಕೊಟ್ಟು ಶುದ್ಧ ಪ್ರಸಾದವ ಕೊಂಡು ಸರ್ವಾಂಗಶುದ್ಧನಾದೆನು ನೋಡಾ. 
ರುಚಿಯಾಗಿ ಬಂದ ಪದಾರ್ಥವ ಮನದ ಕೈಯಲ್ಲಿ, ಜಿಹ್ವೆಯ ಮುಖದಲ್ಲಿ ಪ್ರಾಣಲಿಂಗಕ್ಕೆ ಕೊಟ್ಟು ಸಿದ್ಧಪ್ರಸಾದಗ್ರಾಹಕನಾಗಿ ಮನ ನಿರ್ಮಲವಾಯಿತ್ತು ನೋಡಾ. 
ಪರಿಣಾಮವಾಗಿ ಬಂದ ಪದಾರ್ಥವ ಭಾವದ ಕೈಯಲ್ಲಿ, ಹೃದಯದ ಮುಖದಲ್ಲಿ ತೃಪ್ತಿಲಿಂಗಕ್ಕೆ ಕೊಟ್ಟು ಪ್ರಸಿದ್ಧಪ್ರಸಾದವ ಕೊಂಡು ಶುದ್ಧಪರಮಾತ್ಮನಾದೆನು ನೋಡ. 
ಈ ಕ್ರಿಯಾಜ್ಞಾನಾರ್ಪಣವಿರಬೇಕು. 
ಕಾಯವು ಆತ್ಮನು ಬಯಲಾಹನ್ನಕ್ಕರ. 
ಈ ಕಾಯವೂ ಜೀವವೂ ಪರತತ್ವದಲ್ಲಿ ಅಡಗದೆ, ಬರಿಯ ವಾಗದ್ವೈತದಿಂದ ತಾನೆ ಲಿಂಗವಾದೆನೆಂದು, ಇಷ್ಟಲಿಂಗಾರ್ಪಣವ ಬಿಡುವ ನಾಯ ಮುಖವ ಎನಗೊಮ್ಮೆ ತೋರದಿಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
ಎನ್ನುತ್ತಾರೆ ತೋಂಟದ ಸಿದ್ಧಲಿಂಗೇಶ್ವರ ಯತಿಗಳು.

ಭಕ್ತಿ, ನಿಷ್ಠೆಯಿಂದ ಏನನ್ನು ಅರ್ಪಿಸಿದರೂ ಅದು ಪ್ರಸಾದವಾಗುತ್ತದೆ. ಕಾಯ, ಕರಣ
ಭಾವಾರ್ಪಣೆಗಳಿಂದ ಸರ್ವಾಂಗಲಿಂಗಿಯಾದ ಶರಣನಿಗೆ ಪ್ರಸಾದವಲ್ಲದುದೇ ಜಗತ್ತಿನಲ್ಲಿ ಯಾವುದೂ ಇಲ್ಲ. ತಾನೇ ಈಶ್ವರನಿಗೆ ಪ್ರಸಾದವಾಗಿ ಪರಿಣಮಿಸುವಿಕೆಯಿಂದ ಇಡೀ ಸೃಷ್ಟಿಯೆಲ್ಲಾ ಈಶ್ವರನ ಪ್ರಸಾದವೆಂಬ ಭಾವನೆ ಒಡಮೂಡುತ್ತದೆ.

#ನೆಲ ತಳವಾರನಾದಡೆ, ಕಳ್ಳಂಗೆ ಹೊಗಲೆಡೆಯುಂಟೆ ?
ಸರ್ವಾಂಗಲಿಂಗಿಗೆ ಅನರ್ಪಿತವುಂಟೆ,
ನಿಃಕಳಂಕ ಮಲ್ಲಿಕಾರ್ಜುನಾ ? / 470
ಎನ್ನುತ್ತಾರೆ ಮೋಳಿಗೆಯ ಮಾರಯ್ಯ, ಭೂಮಿಯೇ ತಳವಾರನಾದರೆ ಕಳ್ಳ ಇನ್ನೆಲ್ಲಿ
ಹೊಕ್ಕು ತಪ್ಪಿಸಿಕೊಳ್ಳಬಲ್ಲ? ಹಾಗೆಯೇ ಅಂಗವೆಲ್ಲಾ ಲಿಂಗಸ್ವರೂಪವಾಗಿ ಪರಿಣಮಿ
ಸಿದ ಶರಣನ ಬಳಿಯಲ್ಲಿ, ಅಂಗಗುಣಗಳಿಂದ ಮೈದೋರಿ ಕಾಡುವ ಅನರ್ಪಿತವೆಂಬ
ಅಂಹಂಕಾರದ ಕಳ್ಳ ಸುಳಿಯಲಾರನು. ಅವನು ಮಾಡುವ ಕರ್ಮಗಳೆಲ್ಲವೂ ಶಿವನಿಗೆ
ಅರ್ಪಿತವಾದ ಪ್ರಸಾದವಾಗಿ ಪರಿಣಮಿಸುತ್ತವೆ.
 ಈ ಪ್ರಪಂಚವು ಮಿಥೈಯೂ ದುಃಖಮಯವೂ ಆಗಿದೆಯೆಂದು ಪ್ರಸಾದಿ ತಿಳಿಯುವುದಿಲ್ಲ. ದುಃಖವೂ ಸುಖವೂ ವಸ್ತು
ಗಳಲ್ಲಿಲ್ಲ . ಅವುಗಳನ್ನು ನೋಡುವ ಮನೋಧರ್ಮದಲ್ಲಿದೆ ಎಂಬುದನ್ನು ಆತ ಕಂಡುಕೊಳ್ಳುತ್ತಾನೆ. ಮನದ ಮುಂದಣ ಆಶೆಯನ್ನು ಅಳಿದು, ಬಂದುದೆಲ್ಲವನ್ನೂ ಶಿವನಿಗೆ ಅರ್ಪಿಸುವ ಭಾವ ಸಹಜವಾಗಿ ಅಳವಡುತ್ತದೆ. ಇದನ್ನೇ :

#ಸರ್ವಸುಯಿಧಾನಿ ಎಂದೆನಿಸಿಕೊಳ್ಳಬಲ್ಲಡೆ,
ಬಂದ ಕಾಮ ಕ್ರೋಧವ ಲಿಂಗಕ್ಕರ್ಪಿತವ ಮಾಡಬೇಕು.
ಅಲಗಿನ ಕೊನೆಯ ಮೊನೆಯ ಮೇಲಣ ಸಿಂಹಾಸನ ಹೊರಳಿ ಹೋಗಬಾರದು!
ಶಿವಾಚಾರದ ಧಾರೆ ಮೇರೆ ಮುಟ್ಟದ ಮುನ್ನ,
ಅರ್ಪಿತವ ಮಾಡಬಲ್ಲಡೆ;
ಬಿನ್ನಭಾವವೆಲ್ಲಿಯದೊ-ಗುಹೇಶ್ವರಾ? / 1508

ಹೀಗೆ ಆತನಿಗೆ ಭಿನ್ನ ಭಾವವೆಂಬುದೇ ಉಳಿಯುವುದಿಲ್ಲ. ಇಂದ್ರಿಯಗಳೆಲ್ಲಾ ಲಿಂಗ
ಸ್ವರೂಪವಾಗುವುದರಿಂದ ತನುವಿಕಾರ, ಮನವಿಕಾರಗಳು ಇಲ್ಲದಂತಾಗಿ ಪ್ರಸಾದ
ಜೀವನವಾಗುತ್ತದೆ. ಈ ಲೌಕಿಕ ಜೀವನದಲ್ಲಿ ಆತ ನಿರತನಾಗಿ ಯಾವುದೇ ಕಾರ್ಯ
ವನ್ನು ಕೈಗೊಂಡಿದ್ದರೂ ಅದು ಸಾಧನೆಗೆ ಸಹಾಯಕವೇ ಆಗುತ್ತದೆ. ಭೋಗಮಯ
ಜೀವನವೆಲ್ಲಾ ಶಿವಮಯ ಜೀವನವಾಗಿ ಪರಿಣಮಿಸುತ್ತದೆ. ಈ ಪ್ರಪಂಚ ಹೇಯ
ವಾದುದೆಂದು ಆತ ತ್ಯಜಿಸಿ ಓಡಿಹೋಗುವುದಿಲ್ಲ. ಶಿವನ ಪ್ರಸಾದರೂಪವಾದ ಈ ಸೃಷ್ಟಿಯ ಸೇವೆಯಲ್ಲಿ ಸ್ವಾರ್ಥಕತೆ ಕಾಣುವ ಶಿವಯೋಗಿ ಆಗುತ್ತಾನೆ. ಹೀಗೆ ವ್ಯಕ್ತಿ ಸಮಾಜ ಗಳ ಉದ್ಧಾರಕ್ಕೆ ಸಹಾಯವಾಗುವ ಸಮನ್ವಯ ಯೋಗ ಪ್ರಸಾದದಲ್ಲಿ ಇದೆ.
- ✍️Dr Prema Pangi
#ಪ್ರೇಮಾ_ಪಾಂಗಿ,,#ಅಷ್ಟಾವರಣ,#ಪ್ರಸಾದ

Comments

Popular posts from this blog

Shika chakra or Bindu chakra:Bindu visarga

Hrit Chakra or Eight Petals Chakra

A-Ka-Ta triangle or Akshara Brahma