ವಚನ ದಾಸೋಹ - ಲಿಂಗವೆಂಬುದು ಸರ್ವಕಾರಣ ಪರಮ ನಿರ್ಮಲ

ವಚನ ದಾಸೋಹ - ಲಿಂಗವೆಂಬುದು ಸರ್ವಕಾರಣ ಪರಮ ನಿರ್ಮಲ

ವಚನ:
#ಲಿಂಗವೆಂಬುದು ಸರ್ವಕಾರಣ ಪರಮ ನಿರ್ಮಲ.
ಲಿಂಗವೆಂಬುದು ಸಚ್ಚಿದಾನಂದ ನಿತ್ಯಪರಿಪೂರ್ಣ.
ಲಿಂಗವೆಂಬುದು ಸರ್ವಲೋಕೋತ್ಪತ್ತಿಗೆ ಮೂಲಕಾರಣ.
ಲಿಂಗವೆಂಬುದು ಜನ್ಮವಾರಿಧಿಯ ದಾಂಟಿಸುವ ಭೈತ್ರವು.
ಲಿಂಗವೆಂಬುದು ಶರಣರ ಹೃದಯದಲ್ಲಿ ಬೆಳಗುವ
ಜ್ಯೋತಿರ್ಮಯ ಲಿಂಗವು.
ಇಂತೀ ಲಿಂಗದ ಮರ್ಮವನರಿದವನೇ ಅರಿದವನು,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ. / 332

ಅರ್ಥ:
'ಲಿಂಗವೆಂಬುದು ಸತ್ ಚಿತ್ ಆನಂದ, ನಿತ್ಯ ಪರಿಪೂರ್ಣ, ಸರ್ವಲೋಕೋತ್ಪತ್ತಿಗೆ ಕಾರಣ ಎನ್ನುತ್ತಾರೆ ಎಡೆಯೂರು ಸಿದ್ಧಲಿಂಗೇಶ್ವರರ ಶಿಷ್ಯರಾದ ಸ್ವತಂತ್ರ ಸಿದ್ಧಲಿಂಗೇಶ್ವರರು.
"ಲಿಂಗ" ಅರ್ಥಾತ್ ಪರಮಾತ್ಮನು ಸರ್ವಕಾರಣ ನಿರ್ಮಲನು, ಅಂದರೆ ತಾನು ವಿಕಾರಕ್ಕೊಳಗಾಗದೆಯೇ (ಬದಲಾಗದೆ) ಎಲ್ಲವನ್ನೂ ಸೃಷ್ಟಿಸಬಲ್ಲ, ಲಯವಾಗಿಸಬಲ್ಲ. ಎಲ್ಲಕ್ಕೂ ಆದಿ ಕಾರಣವಾದ ಮೂಲಶಕ್ತಿ. ಸಕಲ ತತ್ವಗಳಿಗೆ ಆಶ್ರಯೀಭೂತವಾದುದು, ಚೈತನ್ಯ ಸ್ವರೂಪವು. ಇದು ಪ್ರಕಾಶ ಸ್ವರೂಪವು. ಜೀವರ ಹೃದಯ ಕಮಲದಲ್ಲಿ ಅಂಶರೂಪದಲ್ಲಿ ಆತ್ಮವಾಗಿ ನೆಲೆಸಿರುತ್ತದೆ.
"ಜನ್ಮ ವಾರಿಧಿಯ ದಾಂಟಿಸುವ ಭೈತ್ರ” ಎಂಬಲ್ಲಿಗೆ ಲಿಂಗ ಪದವು ಉಪಾಸ್ಯ ವಸ್ತುವಾದ ಇಷ್ಟಲಿಂಗವನ್ನು ನಿರ್ದೇಶಿಸುತ್ತದೆ. ಮಾನವ ಜನ್ಮವೆಂಬ ಭವಸಾಗರವನ್ನ ದಾಟಲು ಇದು ಒಂದು ನಾವೆ ಎಂಬುದಾಗಿ ಪ್ರತಿಪಾದಿಸಲ್ಪಟ್ಟಿದೆ. ಈ ಮರ್ಮವನ್ನರಿತು ನಡೆದಾಗಲೇ ಓರ್ವನು ಶಿವನುಭಾವಿಯಾಗಬಲ್ಲ ಎನ್ನುತ್ತಾರೆ ಸ್ವತಂತ್ರ ಸಿದ್ದಲಿಂಗೇಶ್ವರರು.

ಹೀಗೆ ಶರಣರು ಪರಾತ್ಪರ ವಸ್ತುವನ್ನು ಲಿಂಗವೆಂದೂ, ಶಿವನೆಂದೂ, ಬಯಲು, ನಿರ್ಬಯಲೆಂದೂ, ಶೂನ್ಯ-ನಿಶೂನ್ಯವೆಂದು ಕರೆದಿದ್ದಾರೆ.

#ಅಮೂಲ್ಯನು ಅಪ್ರಮಾಣನು ಅಗೋಚರ ಲಿಂಗ; ಆದಿ ಮಧ್ಯಾವಸಾನಗಳಿಲ್ಲದ ಸ್ವತಂತ್ರ ಲಿಂಗ; ನಿತ್ಯ ನಿರ್ಮಳ ಲಿಂಗ; 
ಅಯೋನಿ ಸಂಭವನಯ್ಯಾ, 
ನಮ್ಮ ಕೂಡಲಸಂಗಮದೇವರು./58*

ಬಸವಣ್ಣನವರು "ಲಿಂಗ" ಎಂಬ ಪದದ ತಾತ್ವಿಕ ಅರ್ಥವನ್ನು ಸ್ಪಷ್ಟವಾಗಿ ಹೇಳಿದ್ದಾರೆ. ಪರಮಾತ್ಮನು ಅಮೂಲ್ಯನು; ಬೆಲೆ ಕೆಟ್ಟ ಲಾರದವನು; ಯಾವುದೇ ಲೌಕಿಕ ಪ್ರಮಾಣಗಳಿಂದ ಸಾಧಿಸಿ ತೋರಿಸದ ಅಪ್ರಮಾಣನು; ಪಂಚೇಂದ್ರಿಯಗಳ ಅನುಭವಕ್ಕೆ ನಿಲುಕದ ಆಗೋಚರನು, ಹುಟ್ಟು ಅವಸಾನ ಇಲ್ಲದ, ಪರವಲಂಬಿಯಲ್ಲದ ಸ್ವತಂತ್ರನು, ನಾಶವಿಲ್ಲದ ನಿತ್ಯನು; ಕಾಮ ಕ್ರೋಧಾದಿಗಳೇನು ಇಲ್ಲದ ನಿರ್ಮಲನು, ಅವನು ತಾಯಿತಂದೆಗಳಲ್ಲಿ ಹುಟ್ಟಿದವನಲ್ಲ, ಅಸಂಭವ ಅಜಾತ ಹೀಗೆ "ಲಿಂಗ" ಪದವು ನಿರ್ದೇಶಿಸುವುದು ಪರಾತ್ಪರ ಪರಬ್ರಹ್ಮವಾದ ಪರಶಿವನನ್ನು.
ಇಡೀ ಬ್ರಹ್ಮಾಂಡವನ್ನು ಲಿಂಗರೂಪದಲ್ಲಿ ಆರಾಧನೆಯಾಗಿ ಮಾಡಿ ಲಿಂಗಾಂಗ ಸಾಮರಸ್ಯದಿಂದಲೇ ಬ್ರಹ್ಮಾಂಡದ ಸತ್ಯದರ್ಶನ ಮಾಡಿದ ಅನುಭಾವಿಗಳು ನಮ್ಮ ಶರಣರು.
- ✍️Dr Prema Pangi
#ಪ್ರೇಮಾ_ಪಾಂಗಿ,
#ಸ್ವತಂತ್ರ_ಸಿದ್ಧಲಿಂಗೇಶ್ವರರು.
#ಲಿಂಗವೆಂಬುದು_ಸರ್ವಕಾರಣ_ಪರಮ
#ಅಮೂಲ್ಯನು_ಅಪ್ರಮಾಣನು_ಅಗೋಚರ
Picture post designed and created by me. Hope you all will like it. A small service to popularise Vachan Sahitya

Comments

Popular posts from this blog

Shika chakra or Bindu chakra:Bindu visarga

Hrit Chakra or Eight Petals Chakra

A-Ka-Ta triangle or Akshara Brahma