ವಚನ ದಾಸೋಹ - ಲಿಂಗವೆನ್ನೆ ಲಿಂಗೈಕ್ಯವೆನ್ನೆ.
#ಲಿಂಗವೆನ್ನೆ ಲಿಂಗೈಕ್ಯವೆನ್ನೆ.
ಸಂಗವೆನ್ನೆ ಸಮರಸವೆನ್ನೆ.
ಆಯಿತ್ತೆನ್ನೆ ಆಗದೆನ್ನೆ.
ನಾನೆನ್ನೆ ನೀನೆನ್ನೆ.
ಚೆನ್ನಮಲ್ಲಿಕಾರ್ಜುನಯ್ಯ,
ಲಿಂಗೈಕ್ಯವಾದ ಬಳಿಕ ಏನೂ ಎನ್ನೆ.
- ವೀರ ವಿರಾಗಿಣಿ ಅಕ್ಕ ಮಹಾದೇವಿ
ಅರ್ಥ:
ಬಾಲ್ಯದಿಂದಲೂ ಇಷ್ಟದೈವ ಮಲ್ಲಿಕಾರ್ಜುನನ ಬಗೆಗೆ ಮಹಾದೇವಿಗಿದ್ದ ಆಸಕ್ತಿˌ ಕುತೂಹಲಗಳು ನಂತರದಲ್ಲಿ ಹಂಬಲ, ಪ್ರೀತಿ ಮತ್ತು ಭಕ್ತಿಯಾಗಿ ಪರಿವರ್ತನೆ ಹೊಂದುತ್ತವೆ. ಸದಾ ದೇವರ ಧ್ಯಾನ ಮತ್ತು ಚಿಂತನೆಗಳಿಂದ ಆಕೆಯ ವ್ಯಕ್ತಿತ್ವ ವೈರಾಗ್ಯ ಮತ್ತು ಭಕ್ತಿಗಳಿಂದ ರೂಪುಗೊಳ್ಳುತ್ತ ಸಾಗುತ್ತ ಬಸವಾದಿ ಶರಣರ ಸಂಪರ್ಕದಲ್ಲಿ ಬಂದ ಬಳಿಕ ಅವಳನ್ನು ಶ್ರೇಷ್ಟ ಯೋಗಿಣಿ ಯಾಗಿ ಪರಿವರ್ತಿತವಾಗಿ ಮಾಡುತ್ತದೆ. ಅಕ್ಕಮಹಾದೇವಿ ಬರೆದ "ಯೋಗಾಂಗ ತ್ರಿವಿಧಿ" ಎಂಬ ಕೃತಿಯು ಯೋಗಮಾರ್ಗದ ಸರ್ವಕಾಲಿಕ ಶ್ರೇಷ್ಟ ಕೃತಿ. ಶರಣೆ ವಿರಾಗಿಣಿ ಅಕ್ಕಮಹಾದೇವಿ ತಾವು ಅನುಭವಿಸಿದ, ವರ್ಣನಾತೀತ ಐಕ್ಯಸ್ಥಲದ ಆನಂದದ ಅನುಭೂತಿಯನ್ನು ಈ ವಚನದಲ್ಲಿ ಅತ್ಯಂತ ನೈಜವಾಗಿ ಸಮರ್ಥವಾಗಿ ತಿಳಿಸಿದ್ದಾರೆ.
*ಲಿಂಗವೆನ್ನೆ ಲಿಂಗೈಕ್ಯವೆನ್ನೆ.
ಸಂಗವೆನ್ನೆ ಸಮರಸವೆನ್ನೆ*
.
ಲಿಂಗವೋ, ಲಿಂಗದಲ್ಲಿ ಐಕ್ಯವೋ ನುಡಿಯಲಾರೆ! ನಾನೇ ಲಿಂಗ ವಾದೇನೋ,ಲಿಂಗದಲ್ಲಿ ಐಕ್ಯ ವಾದೆನೋ ನುಡಿಯಲಾರೆ!
ಲಿಂಗದ ಸಂಗದಲ್ಲಿಯೋ, ಲಿಂಗದಲ್ಲಿ ಸಮರಸವೋ ನುಡಿಯಲಾರೆ!
*ಆಯಿತ್ತೆನ್ನೆ ಆಗದೆನ್ನೆ.
ನಾನೆನ್ನೆ ನೀನೆನ್ನೆ.*
ಸಮರಸ ಆಯಿತೋ ಇಲ್ಲವೋ ಎಂಬುದು ನುಡಿಯಲಾರೆ!
ನಾನೋ, ನಾನು ನೀನಾದೆನೋ ನುಡಿಯಲಾರೆ!
*ಚೆನ್ನಮಲ್ಲಿಕಾರ್ಜುನಯ್ಯ,
ಲಿಂಗೈಕ್ಯವಾದ ಬಳಿಕ ಏನೂ ಎನ್ನೆ*.
ಚೆನ್ನಮಲ್ಲಿಕಾರ್ಜುನಾ, ನಾನು ನಿನ್ನಲ್ಲಿ ಐಕ್ಯವಾದ ಬಳಿಕ ಎನನ್ನೂ ನುಡಿಯಲಾರೆ!
ಆ ಸಮರಸದ ಅನುಭವ ಮಾತಿಗೂ ಮೀರಿದುದು. ''ಮಾತೆಂಬುದು ಜ್ಯೋತಿರ್ಲಿಂಗ" ನಿಜ. ಆದರೆ ಮಾತೆಂಬ ಜ್ಯೋತಿರ್ಲಿಂಗವು ಅಂತರಂಗದ ಅಂಗಲಿಂಗದ ಸಮರಸದಲ್ಲಿ ಅಡಗಬೇಕಾದದು ಐಕ್ಯದ ಸ್ಥಿತಿ . ಇಲ್ಲಿ ಮಾತು ಭವಭಾರ ಘೋರವಾಗಿ ಪರಿಣಮಿಸುತ್ತದೆ. ಎನನ್ನೂ ನುಡಿಯಲಾರದ ವರ್ಣನಾತೀತ ಅತೀಂದ್ರಿಯ ಸ್ಥಿತಿ.
*ಐಕ್ಯಸ್ಥಲ*:
ಐಕ್ಯಸ್ಥಲ ಸಾಧಕಯೋಗಿಯ ಪರಮೋಚ್ಚ ಸ್ಥಲ. ಜೀವಾತ್ಮವು ಪರಮಾತ್ಮನಲ್ಲಿ ವಿಲೀನವಾಗುವ ಉಚ್ಚ ಸಾಧನಾ ಮೆಟ್ಟಿಲು . ತನ್ನ ಕರ್ತವ್ಯವನ್ನು ನಿರ್ವಹಿಸಿದ ಅನುಭಾವಿ, ಸಂಪೂರ್ಣ ಸಾಮರಸ್ಯದಲ್ಲಿ ಲೀನವಾಗುವುದನ್ನು ಇಲ್ಲಿ ಕಾಣುತ್ತೇವೆ. ಅಂಗ-ಲಿಂಗದ (ಜೀವಾತ್ಮ- ಪರಮಾತ್ಮ) ಸಮರಸವು , ಹೀಗೆ
ಘೃತ ಘ್ರತವ ಬೆರಸಿದಂತೆ, ಕ್ಷೀರ ಕ್ಷಿರವ ಬೆರಸಿದಂತೆ, ತೈಲ ತೈಲವ ಬೆರಸಿದಂತೆ ಜ್ಯೋತಿ ಜ್ಯೋತಿಯ ಬೆರೆಸಿದಂತೆ, ಬಯಲು ಬಯಲು ಬೆರೆಸಿದಂತೆ, ಪ್ರಾಣ ಪ್ರಾಣದ ಸಂಯೋಗವಾಗಿ ಲಿಂಗಸಮರಸವಾಗುತ್ತದೆ. "ಕರ್ಪೂರಕ್ಕೆ ಅಗ್ನಿಯ ಸಂಯೋಗವಾಗಿ ಕರ್ಪೂರದ ಗುಣವಳಿದು ಅಗ್ನಿಯಾದಂತೆ", ಲಿಂಗವ ನೆನೆದು ಲಿಂಗವೇ ತಾನಾಗಿ ಪರಿಣಮಿಸುತ್ತಾನೆ ಸಾಧಕ. ಅಂಗ ಲಿಂಗಗಳಲ್ಲಿ ಎರಡು ಎಂಬ ಭಾವವಳಿದು ಏಕೋಭಾವ ಮೂಡುತ್ತದೆ.
ಭಿನ್ನ ಭಿನ್ನವೆಂಬ ಪ್ರಾಪ್ತಿ ಅಳಿದು ಅವಿರಳ ಸಮರಸದ ಸೌಖ್ಯದ ಶಿವಾದ್ವೈತ ಸಿದ್ಧಿಸುತ್ತದೆ. ಇದು ನದಿಯೊಳಗೆ ನದಿ ಬೆರೆದಂತಾಗುತ್ತದೆ ಎನ್ನುತ್ತಾರೆ ಶಿವಯೋಗಿಗಳು. ಅದರರ್ಥ ಬೆರೆದ ನಂತರ ಬೇರ್ಪಡಿಸಲು ಸಾಧ್ಯವಿಲ್ಲ; ಅದಕ್ಕೆ ಕಾರಣ ಮೂಲಸ್ವರೂಪದಲ್ಲಿ ಎರಡೂ ಒಂದೇ!
ಲಿಂಗೈಕ್ಯವು ಒಂದು ಬಗೆಯ ನಿವೃತ್ತಿ ಮಾರ್ಗ, ತನು ಮನ ಪ್ರಾಣ ಭಾವಗಳು ನಿವೃತ್ತಿಯಾಗಿ ಲಿಂಗ ಸ್ವರೂಪ ವಾಗುತ್ತವೆ. "ಲಿಂಗಲೀಯ"ವಾಗುತ್ತವೆ. "ಭಾವವಿಲ್ಲದ ಬಯಲು, ಬಯಲಿಲ್ಲದ ಭಾವ ಅಗಮ್ಯದ ಐಕ್ಯಸ್ಥಲ" ಎನ್ನುತ್ತಾರೆ ಅನುಭಾವಿಗಳು.
ಲಿಂಗೈಕ್ಯದ ಸ್ಥಳವನ್ನು ಕುರಿತು ಶರಣೆ ಸತ್ಯಕ್ಕ ಹೇಳುವ ಒಂದು ವಚನವನ್ನು ಇಲ್ಲಿ ಉದಾಹರಿಸಬಹುದು.
#ಉದಕದೊಳಗಣ ಕಿಚ್ಚಿನಂತೆ ಲಿಂಗೈಕ್ಯವು.
ವಾಯುನುಂಗಿದ ಪರಿಮಳದಂತೆ ಲಿಂಗೈಕ್ಯವು
ಉರಿಯೊಳಡಗಿದ ಕರ್ಪೂರದಂತೆ ಲಿಂಗೈಕ್ಯವು.
ಭಾವವನಡಸಿದ ಬಯಲಿನಂತೆ ಲಿಂಗೈಕ್ಯವು.
ಅರಿವು ನುಂಗಿದ ಮರಹಿನಂತೆ ಲಿಂಗೈಕ್ಯವು.
ಯತೋ ವಾಚೋ ನಿವರ್ತಂತೇ ಅಪ್ರಾಪ್ಯಮನಸಾ ಸಹ್ಳರಿಂದುದಾಗಿ,
ವಾಙ್ಮನಕ್ಕೆ ಅಗೋಚರವಾದ ಮಹಾಶರಣನ ಒಳಗೊಂಡು
ಥಳಥಳಿಸಿ ಬೆಳಬೆಳಗಿ ಹೊಳೆವುತ್ತ,
ನಿಶ್ಶಬ್ದಬ್ರಹ್ಮವಾಗಿರ್ದನಯ್ಯಾ ನಮ್ಮ ಶಂಭುಜಕ್ಕೇಶ್ವರನು. / 8
ಶರಣೆ ಸತ್ಯಕ್ಕ , ಐಕ್ಯಸ್ಥಲದ ನಿಲುವನ್ನು "ನಿಶ್ಶಬ್ದಬ್ರಹ್ಮವಾಗಿರ್ದನಯ್ಯಾ" ಎಂಬ ಮಾತಿನಲ್ಲಿ ನಿಚ್ಚಳವಾಗಿ ನಿರೂಪಿಸಿದ್ದಾರೆ.
- ✍️Dr Prema Pangi
#ಲಿಂಗವೆನ್ನೆ_ಲಿಂಗೈಕ್ಯವೆನ್ನೆ.
Picture post designed and created by me. Hope you all will like it. A small service to popularise Vachana Sahitya.
Comments
Post a Comment