ವಚನ ದಾಸೋಹ - ಎನ್ನ ರೇಚಕ ಪೂರಕ ಕುಂಭಕಗಳೆಲ್ಲವು

ವಚನ:
#ಎನ್ನ ರೇಚಕ ಪೂರಕ ಕುಂಭಕಗಳೆಲ್ಲವು ಶಿವಮಂತ್ರಮಯವಾಗಿ ಸಂಚರಿಸುತಿಪ್ಪವು. ಎನ್ನ ಪೂರಕವೇ 'ಓಂ ಓಂ ಓಂ'ಯೆಂಬ ಪ್ರಣವ ಸ್ವರೂಪವಾಗಿಪ್ಪುದು ನೋಡಾ. ಎನ್ನ ರೇಚಕವೇ `ನಮಃ ಶಿವಾಯ ನಮಃ ಶಿವಾಯ ನಮಃ ಶಿವಾಯ' ಯೆನುತಿಪ್ಪುದು ನೋಡಾ. ಎನ್ನ ಕುಂಭಕವೇ ಪರಶಕ್ತಿಯಮಯವಾಗಿ ಪರಂಜ್ಯೋತಿಸ್ವರೂಪವಾಗಿ ಪರಮಚಿದ್ಭಾಂಡಸ್ಥಾನವಾಗಿಪ್ಪುದು ನೋಡಾ.
 "ಮಂತ್ರಮಧ್ಯೇ ಭವೇಲ್ಲಿಂಗಂ| ಲಿಂಗಮಧ್ಯೇ ಭವೇನ್ಮಂತ್ರಃ ಮಂತ್ರಲಿಂಗದ್ವಯೋರೈಕ್ಯಂ| ಇಷ್ಟಲಿಂಗಂ ತು ಶಾಂಕರಿ||" ಎಂದುದಾಗಿ, 
ಎನ್ನ ರೇಚಕ ಪೂರಕ ಕುಂಭಕ ಸ್ವರೂಪವಪ್ಪ ಶಿವಮಂತ್ರವೇ ಶಿವಲಿಂಗಸ್ವರೂಪವಾಗಿ ಎನ್ನ ಕರಸ್ಥಲದಲ್ಲಿ ಕರತಾಳಮಳಕವಾಗಿ ಕಾಣಲ್ಪಟ್ಟಿತ್ತು ನೋಡಾ. ಆ ಕರಸ್ಥಲದಲ್ಲಿ ಲಿಂಗವ ಕಂಗಳು ತುಂಬಿ ನೋಡಿ ಮನಮುಟ್ಟಿ ನೆನೆದು ಸಂದಿಲ್ಲದಿಷ್ಟಲಿಂಗದಲ್ಲಿ ಭಾವವಬಲಿದು ಲಿಂಗವನಪ್ಪಿ ಅಗಲದೆ ಆ ಲಿಂಗದಲ್ಲಿ ಸದಾ ಸನ್ನಿಹಿತನಾಗಿರ್ದು ಶಿವಶಿವಾ ಹರಹರಾಯೆನುತಿರ್ದೆನಯ್ಯ. ನಿಮ್ಮ ನೆನಹಿನಿಂದ ನಿಮ್ಮುವನೆ ನೆನವುತಿರ್ದೆನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
- ತೋಂಟದ ಸಿದ್ಧಲಿಂಗೇಶ್ವರ ಶಿವಯೋಗಿ
#ಅರ್ಥ:
ಹದಿನಾರನೆಯ ಶತಮಾನದಲ್ಲಿ ಅನುಭವ ಮಂಟಪಕ್ಕೆ ಮತ್ತೇ ಚಲನಶೀಲತೆ ನೀಡಿ ಅದು ವ್ಯಾಪಕವಾಗಿ ಹರಡಲು ಕಾರಣವಾದವರು ತೋಂಟದ ಸಿದ್ಧಲಿಂಗೇಶ್ವರ ಶಿವಯೋಗಿಗಳು.
ಅಲ್ಲಮಪ್ರಭು, ಚನ್ನಬಸವಣ್ಣ ಹಾಗು ಸೊನ್ನಲಿಗೆ ಸಿದ್ಧರಾಮರು ಅಲಂಕರಿಸಿದ ಶೂನ್ಯ ಪೀಠವನ್ನು ಅಲಂಕರಿಸಿದ್ದ ನಾಲ್ಕನೇ ಶೂನ್ಯ ಸಿಂಹಾಸನಾಧ್ಯಕ್ಷರು. ಹನ್ನೆರಡನೆಯ ಶತಮಾನದಲ್ಲಿ ಅನುಭವ ಮಂಟಪದ ಗೋಷ್ಠಿ ಕೇದ್ರೀಕೃತಗೊಂಡದ್ದು ಕಲ್ಯಾಣದಲ್ಲಿ. ಕಲ್ಯಾಣಕ್ಕೆ ಸೀಮಿತವಾಗಿದ್ದ ಅನುಭವ ಮಂಟಪವನ್ನು ತೋಂಟದಾರ್ಯರು ತಾವು ಚರಿಸಿದ ಬೇರೆ ಬೇರೆ ಗ್ರಾಮ ಪಟ್ಟಣಗಳಿಗೂ ಚರಿಸುವಂತೆ ಮಾಡಿದರು. 

ಈ ವಚನದಲ್ಲಿ ಶಿವಯೋಗಿ ಎಡೆಯೂರು ಸಿದ್ದಲಿಂಗೇಶ್ವರರು ಪ್ರಾಣಾಯಮದಲ್ಲಿ  ಷಡಕ್ಷರ ಮಂತ್ರ ಅಳವಡಿಸಿಕೊಳ್ಳುವ ಸಕೀಲ ವನ್ನು, ಭವಿಕಾಯವನ್ನು ಮಂತ್ರಕಾಯ ಮಾಡುವ ವಿಧಾನವನ್ನು  ಮತ್ತು ತಾವು ಅದಕ್ಕೆ ಅನುಸರಿಸಿದ ವಿಧಾನವನ್ನು ತಿಳಿಸಿ ಕೊಡುತ್ತಿದ್ದಾರೆ. ಯಾವುದೇ ಮಂತ್ರವನ್ನು
ಸಕೀಲ ಅರಿಯದೆ ಸರಿಯಾಗಿ ಅಳವಡಿಸಿಕೊಳ್ಳದಿದ್ದರೆ ಮಂತ್ರದ ಫಲ ಸಿಗುವದಿಲ್ಲ.
 ನಿರ್ವಚನ:
*ಎನ್ನ ರೇಚಕ ಪೂರಕ ಕುಂಭಕಗಳೆಲ್ಲವು ಶಿವಮಂತ್ರಮಯವಾಗಿ ಸಂಚರಿಸುತಿಪ್ಪವು. ಎನ್ನ ಪೂರಕವೇ 'ಓಂ ಓಂ ಓಂ'ಯೆಂಬ ಪ್ರಣವ ಸ್ವರೂಪವಾಗಿಪ್ಪುದು ನೋಡಾ. ಎನ್ನ ರೇಚಕವೇ `ನಮಃ ಶಿವಾಯ ನಮಃ ಶಿವಾಯ ನಮಃ ಶಿವಾಯ' ಯೆನುತಿಪ್ಪುದು ನೋಡಾ. ಎನ್ನ ಕುಂಭಕವೇ ಪರಶಕ್ತಿಯಮಯವಾಗಿ ಪರಂಜ್ಯೋತಿಸ್ವರೂಪವಾಗಿ ಪರಮಚಿದ್ಭಾಂಡಸ್ಥಾನವಾಗಿಪ್ಪುದು ನೋಡಾ*.
ಯೋಗದರ್ಶನದ ಪ್ರಕಾರ ಅಷ್ಟಾಂಗಯೋಗದ  ನಾಲ್ಕನೆಯ ಅಂಗವಾದ ಪ್ರಾಣಾಯಾಮ ಅಂದರೆ ಶ್ವಾಸೋಚ್ಚ್ವಾಸಗಳ ಮೂಲಕ ಉಸಿರಾಡುವ ವಾಯುವನ್ನು ನಮ್ಮ ಅಂಕೆಯಲ್ಲಿಟ್ಟಿಕೊಳ್ಳುವುದು. ಯೋಗ ಸಾಧನಾಸಕ್ತರು ಯಮ, ನಿಯಮ ಮತ್ತು ಆಸನ ಎಂಬ ಮೂರು ಯೋಗಾಂಗಗಳನ್ನು ಸಿದ್ಧಿಸಿಕೊಂಡ ಮೇಲೆ ನಾಲ್ಕನೆಯದಾದ ಪ್ರಾಣಾಯಾಮವನ್ನು ಅಭ್ಯಸಿಸುತ್ತಾರೆ.
ಪ್ರಾಣಾಯಾಮಕ್ಕೆ ಪೂರಕ, ಕುಂಭಕ ಮತ್ತು ರೇಚಕಗಳೆಂದು ಮೂರು ಕ್ರಿಯೆಗಳಿವೆ. ವಾಯುವನ್ನು ಮೂಗಿನ ಮೂಲಕ ಒಳಗೆ ತೆಗೆದುಕೊಳ್ಳುವುದಕ್ಕೆ ಪೂರಕವೆಂದೂ ಹಾಗೆ ತೆಗೆದುಕೊಂಡ ವಾಯುವನ್ನು ಒಳಗೇ ತಡೆಹಿಡಿಯುವುದಕ್ಕೆ ಕುಂಭಕವೆಂತಲೂ ಅನಂತರ ಅದನ್ನು ಹೊರಗೆ ಬಿಡುವುದಕ್ಕೆ ರೇಚಕವೆಂತಲೂ ಕರೆಯುವರು.
ಮೇಲಿನ ಮೂರು ಕ್ರಿಯೆಗಳಲ್ಲಿ ಕುಂಭಕ  ಅಂದರೆ ಕುಂಭದಂತೆ ನಿಶ್ಚಲ ಸ್ಥಿತಿಯನ್ನು ಹೊಂದುವುದು ಅಂದರೆ ಪ್ರಾಣಗತಿಯನ್ನು ರೋಧಮಾಡಿ ನಿಶ್ಚಲ ಸ್ಥಿತಿಯನ್ನು ಸಾಧಿಸಿಕೊಳ್ಳುವುದೇ ಯೋಗಿಗಳ ಗುರಿ. ಅದೇ ಯೋಗಾಭ್ಯಾಸಿಗಳ ಉದ್ದೇಶ. ಈ ಕುಂಭಕ ಸ್ಥಿತಿಯಲ್ಲಿ ಶ್ವಾಸೋಚ್ಚ್ವಾಸವಿಲ್ಲದುದರಿಂದ ಶರೀರ ಮತ್ತು ಮನಸ್ಸು ನಿಶ್ಚಲವಾಗಿರುತ್ತವೆ. ವಾಯಚಲನೆಯಿಂದ ಚಿತ್ತ ಚಲಿಸುತ್ತದೆ. ವಾಯು ನಿಶ್ಚಲವಾಗಿದ್ದರೆ ಚಿತ್ತವೂ ನಿಶ್ಚಲವಾಗಿರುತ್ತದೆ. 
ಉಚ್ಚ್ವಾಸ ಮಾಡಿದ ವಾಯುವನ್ನು ಶ್ವಾಸಕೋಶಗಳೊಳಗೆ ತಡೆದು ನಿಲ್ಲಿಸುವುದು ಒಂದು ಬಗೆಯ ಕುಂಭಕ. ಇದಕ್ಕೆ "ಸಹಿತಕುಂಭಕ"ವೆನ್ನುವರು. ಗಾಳಿಯನ್ನು ಹೊರಗೆ ರೇಚಿಸಿದ ಮೇಲೆ ಮತ್ತೆ ಒಳಗೆ ತೆಗೆದುಕೊಳ್ಳದೆ ಶ್ವಾಸಕೋಶಗಳನ್ನು ಒಂದು ವಿಧವಾದ ಶೂನ್ಯಸ್ಥಿತಿಯಲ್ಲಿಡುವುದು "ಕೇವಲ ಕುಂಭಕ"ವೆಂಬ ಎರಡನೆಯ ಬಗೆ. 
ಕುಂಭಕದಲ್ಲಿ ಸೂರ್ಯಭೇದನ, ಉಜ್ಜಾಯೀ, ಸೀತ್ಕಾರೀ, ಸೀತಲೀ, ಭಸ್ತ್ರಿಕಾ, ಭ್ರಾಮರೀ, ಮೂಚ್ರ್ಫಾ ಮತ್ತು ಪ್ಲಾವಿನೀ ಎಂಬುದಾಗಿ ಎಂಟು ಬಗೆಯಾಗಿರುತ್ತದೆಯೆಂದು ಹಠಯೋಗ ಪ್ರದೀಪಿಕೆಯಲ್ಲಿ ಹೇಳಿದೆ. ಆದ್ದರಿಂದ ಕುಂಭಕವೇ ಪ್ರಾಣಾಯಾಮದಲ್ಲಿ ಬಹು ಮುಖ್ಯವಾದ ಕ್ರಿಯೆ ಮತ್ತು ಸ್ಥಿತಿ. ಮೊದಮೊದಲು ಸಹಿತಕುಂಭಕವನ್ನು ಅಭ್ಯಾಸ ಮಾಡಿ ಕ್ರಮಕ್ರಮವಾಗಿ ಕೇವಲಕುಂಭಕವನ್ನು ಸಿದ್ಧಿಸಿಕೊಳ್ಳಬೇಕು.
 ಪೂರಕ, ಕುಂಭಕ ಮತ್ತು ರೇಚಕಗಳನ್ನು  ಮೂರು ಕ್ರಿಯೆಗಳೂ ಒಟ್ಟಿಗೆ ಸೇರಿಸಿದರೆ ಒಂದು ಪ್ರಾಣಾಯಾಮವಾಗುತ್ತದೆ. ಉದಾಹರಣೆಗೆ ನಾಲ್ಕು ಸೆಕೆಂಡುಗಳ ಕಾಲ ಶ್ವಾಸವನ್ನು ಒಳಗೆ ತೆಗೆದುಕೊಂಡು ಹದಿನಾರು ಸೆಕೆಂಡುಗಳು ಕುಂಭಕಮಾಡಿ ಆಮೇಲೆ ಎಂಟು ಸೆಕೆಂಡುಗಳ ಕಾಲ ನಿಧಾನವಾಗಿ ರೇಚಕ ಮಾಡಿದರೆ ಅಲ್ಲಿಗೆ ಒಂದು ಪ್ರಾಣಾಯಾಮ ಮಾಡಿದಂತಾಯಿತು.

ತೋಂಟದ ಸಿದ್ಧಲಿಂಗ ಯತಿಗಳು ಹೇಳುತ್ತಾರೆ 
ನನ್ನ ರೇಚಕ ಪೂರಕ ಕುಂಭಕಗಳೆಲ್ಲವು ಶಿವಮಂತ್ರಮಯವಾಗಿಯೇ ನಡೆಯುತ್ತಿವೆ. ನನ್ನ ಪೂರಕವು (inspiration) "ಓಂ ಓಂ ಓಂ"ಯೆಂಬ ಪ್ರಣವ ಸ್ವರೂಪವಾಗಿರುವುದು. ಓಂ ಓಂ ಓಂ'ಯೆಂಬ ಪ್ರಣವ ವನ್ನು ಮಾನಸವಾಗಿ ಜಪಿಸುತ್ತಲೆ ಪೂರಕ ಮಾಡಬೇಕು. ನನ್ನ ರೇಚಕವು(expiration) "ನಮಃ ಶಿವಾಯ ನಮಃ ಶಿವಾಯ ನಮಃ ಶಿವಾಯ" ವಾಗಿರುವುದು. ರೇಚಕವನ್ನು  "ನಮಃ ಶಿವಾಯ ನಮಃ ಶಿವಾಯ ನಮಃ ಶಿವಾಯ" ಎಂದು ಮಾನಸವಾಗಿ ಜಪಿಸುತ್ತಲೇ ರೇಚಕ ಮಾಡಬೇಕು. ಆಗ ಇವುಗಳ ಮಧ್ಯದ ಕುಂಭಕ ಸ್ಥಿತಿಯಲ್ಲಿ ಅಂತರ ದೃಷ್ಠಿಯನ್ನು ಭ್ರುಮಧ್ಯ ಸ್ಥಾನದಲ್ಲಿ ಸ್ಥಿರಗೊಳಿಸಿದರೆ,  ಆಜ್ಞಾಚಕ್ರವು  ಪರಾಶಕ್ತಿ ಮಯವಾಗಿ ಪರಂಜ್ಯೋತಿ ಸ್ವರೂಪವಾಗಿ ಪರಮ ಚಿದ್ ಬ್ರಹ್ಮಾಂಡ ಸ್ಥಾನವಾಗುವುದು.

*ಮಂತ್ರಮಧ್ಯೇ ಭವೇಲ್ಲಿಂಗಂ| ಲಿಂಗಮಧ್ಯೇ ಭವೇನ್ಮಂತ್ರಃ ಮಂತ್ರಲಿಂಗದ್ವಯೋರೈಕ್ಯಂ| ಇಷ್ಟಲಿಂಗಂ ತು ಶಾಂಕರಿ||' ಎಂದುದಾಗಿ*

ಷಡಕ್ಷರಿ ಮಂತ್ರದ ಮಧ್ಯದಲ್ಲಿ ಲಿಂಗವಿದೆ. ಲಿಂಗ ಮಧ್ಯದಲ್ಲಿ ಮಂತ್ರವಿದೆ. ಮಂತ್ರ ಲಿಂಗದ ಸಮರಸವೆ ಈ ಜಗತ್ತು, ಪರಾಶಕ್ತಿ ಶಾಂಕರಿ, ಇಷ್ಟಲಿಂಗವೆ ನೀನು. ಈ ಷಡಕ್ಷರ ಮಂತ್ರದಲ್ಲಿ ಪಿಂಡ ಬ್ರಹ್ಮಾಂಡ ಯೊರೈಕಂ - ಇದು ಆತ್ಮ ಪರಮಾತ್ಮರ ಸಾಮರಸ್ಯವಾಗಿದೆ.

*ಎನ್ನ ರೇಚಕ ಪೂರಕ ಕುಂಭಕ ಸ್ವರೂಪವಪ್ಪ ಶಿವಮಂತ್ರವೇ ಶಿವಲಿಂಗಸ್ವರೂಪವಾಗಿ ಎನ್ನ ಕರಸ್ಥಲದಲ್ಲಿ ಕರತಾಳಮಳಕವಾಗಿ ಕಾಣಲ್ಪಟ್ಟಿತ್ತು ನೋಡಾ*. 

ಈ ಮಾನಸ ಷಡಕ್ಷರಿ ಮಂತ್ರಜಪದಿಂದ ನನ್ನ ರೇಚಕ ಪೂರಕ ಕುಂಭಕ ಸ್ವರೂಪವೆಲ್ಲಾ ಶಿವಮಂತ್ರವೇ ಆಗಿದೆ. ಆ ಶಿವಮಂತ್ರವೇ ಶಿವಲಿಂಗ ಸ್ವರೂಪವಾಗಿ ನನ್ನ ಕರಸ್ಥಲದಲ್ಲಿ ಇಷ್ಟಲಿಂಗವಾಗಿ  ಕರತಾಳಮಳಕವಾಗಿ
 ಕಾಣಲ್ಪಟ್ಟಿತ್ತು.

*ಆ ಕರಸ್ಥಲದಲ್ಲಿ ಲಿಂಗವ ಕಂಗಳು ತುಂಬಿ ನೋಡಿ ಮನಮುಟ್ಟಿ ನೆನೆದು ಸಂದಿಲ್ಲದಿಷ್ಟಲಿಂಗದಲ್ಲಿ ಭಾವವಬಲಿದು ಲಿಂಗವನಪ್ಪಿ ಅಗಲದೆ ಆ ಲಿಂಗದಲ್ಲಿ ಸದಾ ಸನ್ನಿಹಿತನಾಗಿರ್ದು ಶಿವಶಿವಾ ಹರಹರಾಯೆನುತಿರ್ದೆನಯ್ಯ. ನಿಮ್ಮ ನೆನಹಿನಿಂದ ನಿಮ್ಮುವನೆ ನೆನವುತಿರ್ದೆನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ*.

ಕರಸ್ಥಲದಲ್ಲಿಯ ಇಷ್ಟಲಿಂಗವನ್ನು ದೃಷ್ಟಿ ಯೋಗದಿಂದ ಕಂಗಳು ತುಂಬುವರೆಗೆ ನೋಡಿ, ಪ್ರಾಣಲಿಂಗವನ್ನು ಮನಮುಟ್ಟಿ ನೆನೆದು, ಅಗಲದ ಪ್ರಾಣಲಿಂಗದಲ್ಲಿ ಭಾವವು ಬಲಿದು, ಲಿಂಗವನಪ್ಪಿ ಅಗಲದೆ, ಆ ಭಾವಲಿಂಗದಲ್ಲಿ ಸದಾ ಸನ್ನಿಹಿತನಾಗಿದ್ದೇನೆ. ಶಿವಶಿವಾ ಹರಹರಾಯೆ ಎನ್ನುತ್ತಿದ್ದೇನೆ. ನಿಮ್ಮ ನೆನಹಿನಿಂದ ನಿಮ್ಮನ್ನೇ ನೆನವುತಿದ್ದೇನೆ.  ಮಹಾಲಿಂಗಗುರು ಶಿವಸಿದ್ಧೇಶ್ವರಪ್ರಭುವೇ ಎನ್ನುತ್ತಾರೆ ತೋಂಟದ ಸಿದ್ಧಲಿಂಗ ಯತಿಗಳು.
*ವಚನ ಚಿಂತನ*
ಮಂತ್ರದ ಅರ್ಥವನ್ನು ಕುರಿತು ಮನನ ಮಾಡಬೇಕು. ಆಗ ಮಾತ್ರ ಅದು ಮಂತ್ರವೆನಿಸಲು ತಕ್ಕದಾಗುವದು.
ಮಂತ್ರದಲ್ಲಿರಿಸಿದ ವಿಶ್ವಾಸ ನಿಷ್ಠೆ ಮತ್ತು ಚಿತ್ತದ ಏಕಾಗ್ರತೆ ಇವುಗಳ ಮೂಲಕ ಯೋಗಿಯು ಭೌತಿಕ ಬಂಧನಗಳಿಂದ ಮುಕ್ತನಾಗಿ ಆತ್ಮತತ್ವ ಸಾಕ್ಷಾತ್ಕಾರವನ್ನು ಮಾಡಿಕೊಳ್ಳುತ್ತಾನೆ. 
 ಮಂತ್ರ ಜಪದಿಂದ ಚಂಚಲ ಮನಸ್ಸಿನ ಹೊಯ್ದಾಟ ನಿವಾರಿಸಿ ದೃಢ ನಿರ್ಧಾರ ತೆಗೆದುಕೊಳ್ಳಬಹುದು. ಮಂತ್ರ ಜಪದಿಂದ ಮನವು ಸ್ಥಿರವಾಗಿ ಸ್ಥಿಮಿತಕ್ಕೆ ಬರುತ್ತದೆ. ಮಂತ್ರ ಒಂದು ಶಕ್ತಿಯಾಗಿದೆ, ಸರಿಯಾಗಿ ಉಪಯೋಗ ಮಾಡಿಕೊಳ್ಳುವುದರಿಂದ ಮಂತ್ರ, ಆಧ್ಯಾತ್ಮಿಕ ವಿಕಾಸದಲ್ಲಿ ಅತ್ಯಧಿಕವಾದ ಸಹಾಯವನ್ನು ಮಾಡುತ್ತದೆ.

*ಮಂತ್ರಜಪ ವಿಧಾನ* :
 ಮಾನಸ, ವಾಚಕ, ಉಪಾಂಸಿಕ ವೆಂದು ಪ್ರಣಮ ಪಂಚಾಕ್ಷರಿಯ ಜಪ ಮೂರು ವಿಧವಾಗಿದೆ. ಮನಸ್ಸಿನಲ್ಲಿಯೇ ಪ್ರಣಮ ಮಂತ್ರವ ಜಪ್ಪಿಸುವುದು ಮಾನಸ. ಎಲ್ಲರಿಗೂ ಕೇಳುವಂತೆ ವಾಕ್ಯದಿಂದ ಶಿವಾಯ ಹರಾಯ ಭವಾಯ ಮೃಡಾಯ ಶರಣೆಂಬುದು ವಾಚಕ,  ಒಬ್ಬರೂ ಕೇಳದ ಹಾಗೆ ತನ್ನ ಕಿವಿ ಕೇಳುವ ಹಾಗೆ ಶಿವಮಂತ್ರದಲ್ಲಿ ಸುಯಿಧಾನಿಯಗಿ ತುಟಿಯನ್ನು ಮಾತ್ರ ಅಲ್ಲಾಡಿಸಿ ಮಂತ್ರಪಠಣ ಮಾಡುವುದು  ಉಪಾಂಸಿಕ.
ಮಾನಸಿಕ ಜಪವೇ ನಿಜವಾದ ಜಪ. ಮಂತ್ರ ಜಪದಲ್ಲಿ ಮನಃಪೂರ್ವಕವಾಗಿ ಮನದಲ್ಲಿ ನೆನೆಯುವುದೇ ಶ್ರೇಷ್ಠವಾದ ಜಪವಾಗಿದೆ.
ಬಾಹ್ಯಮೂರ್ತಿಯೊಂದನ್ನು ಕುರಿತು ಭ್ರಾಂತಿಗೀಡಾಗಿ ಮಂತ್ರಜಾಪಿಯಾಗದೆ  ಅಂತರಂಗದಲ್ಲಿ ಗುರು ಭೋದಿಸಿದ ಮಂತ್ರವನ್ನು ಜಪಿಸಿ ಮುಕ್ತನಾಗಿರಬೇಕು.

* ಮಂತ್ರ ಜಪ ಸಾಧಕನ ಅರ್ಹತೆ* :
ದಯವಿರಬೇಕು ಸಕಲ ಪ್ರಾಣಿಗಳಲ್ಲಿ, ಭಯವಿರಬೇಕು ಗುರು-ಹಿರಿಯರಲ್ಲಿ ಸೈಯವಿರಬೇಕು ಸಕಲ ಗುಣಗಳಲ್ಲಿ ಸಂಯಮನ ಸತ್ಯವಿರಬೇಕು ನುಡಿಗಡಣದಲ್ಲಿ; ಅಂಥವರು ಮಂತ್ರಯೋಗವನಾಚರಿಸಲು ಅರ್ಹರು.
ಮಂತ್ರದಲ್ಲಿ ಸರಿಯಾದ ಉಚ್ಚಾರಣೆ, ಪ್ರಾಣಾಯಾಮ ಅಳವಡಿಸಿಕೊಂಡರೆ ದೈಹಿಕ ಮಾನಸಿಕ ಆರೋಗ್ಯ ಸುಧಾರಿಕೆಯೂ  ಸಾಧ್ಯ. ಮಂತ್ರದ ಅನುಸಂಧಾನದಿಂದ ಶಾಂತಿ ಆನಂದಗಳು ಲಭಿಸುವವು, ಸಾಮರಸ್ಯ ಒಡೆಮೂಡುವುದು.


ಈ ವಚನದಲ್ಲಿ ತೋಂಟದ ಸಿದ್ಧಲಿಂಗ ಯತಿಗಳು ಷಡಕ್ಷರಿ ಮಂತ್ರದ ಸಕೀಲವನ್ನು ಎಲ್ಲರಿಗೂ ತಿಳಿಯುವಂತೆ ವಿವರಿಸಿದ್ದಾರೆ. ಲಿಂಗದೀಕ್ಷೆ ಕೊಡುವಾಗ ಗುರುಗಳು ಮಂತ್ರ ಮತ್ತು ಅದನ್ನು ಉಚ್ಚಾರ ಮಾಡುವ ಸಕೀಲವನ್ನು ಸಾಧಕನಿಗೆ ತಿಳಿಸಿಕೊಡುತ್ತಾರೆ. ಇಲ್ಲಿ ಇನ್ನೊಂದು ಮಹತ್ವದ ಅಂಶವೆಂದರೆ ಏಕಾಕ್ಷರಿ ಮಂತ್ರ "ಓಂ" ಎನ್ನುವಾಗ ಅದನ್ನು ಬರೀ ರೇಚಕದಲ್ಲಿ ಅಳವಡಿಸಿಕೊಳ್ಳಬೇಕು. ಷಡಕ್ಷರಿ ಮಂತ್ರದಲ್ಲಿ "ಓಂ" ಪೂರಕದಲ್ಲಿಯೂ "ನಮಃ ಶಿವಾಯ" ರೇಚಕದಲ್ಲಿ ಅಳವಡಿಸಿಕೊಳ್ಳಬೇಕು.ಮತ್ತು ಕುಂಭಕಗಳನ್ನು ಅಭ್ಯಾಸ ಬಲದಿಂದ ದೀರ್ಘ ಮಾಡಿಕೊಳ್ಳಬೇಕು. ಇನ್ನು ಒಂದು ಉಸಿರಿಗೆ ಒಮ್ಮೆ ಓಂ ಮತ್ತು ನಮಃ ಶಿವಾಯ ಅನ್ನಬೇಕೋ, ಈ ವಚನದಲ್ಲಿ ಬರುವ ಹಾಗೆ ಒಂದು ಉಸಿರಿಗೆ ಮೂರು ಬಾರಿ ಮಾನಸ ಜಪ ಮಾಡಬೇಕೋ ದೀಕ್ಷೆ ಕೊಡಮಾಡುವ ಗುರುಗಳು, ದೀಕ್ಷೆ ಪಡೆದವರೆಲ್ಲ ತಮ್ಮ ಅನಸಿಕೆ ಅನುಭವವನ್ನು ತಿಳಿಸಿರಿ.
-✍️ Dr Prema Pangi
#ಪ್ರೇಮಾ_ಪಾಂಗಿ,
#ತೋಂಟದ_ಸಿದ್ಧಲಿಂಗೇಶ್ವರ_ಶಿವಯೋಗಿಗಳು
#ಎನ್ನ_ರೇಚಕ_ಪೂರಕ_ಕುಂಭಕಗಳೆಲ್ಲವು

Comments

Popular posts from this blog

Shika chakra or Bindu chakra:Bindu visarga

Hrit Chakra or Eight Petals Chakra

A-Ka-Ta triangle or Akshara Brahma