ಪರಿಚಯ ವಿಶೇಷ: ಗಾರ್ಗಿ ವಾಚಕ್ನವಿ
ಗಾರ್ಗಿ ವಾಚಕ್ನವಿ ವೇದಕಾಲದಲ್ಲಿದ್ದ ದಿಟ್ಟ ಮಹಿಳಾ ವಿದ್ವಾಂಸೆ. ಗಾರ್ಗಿ ಒಬ್ಬ ವಿಶಿಷ್ಟ ಬುದ್ಧಿವಂತೆ. ವೇದಕಾಲದ ಬ್ರಹ್ಮವಾದಿನಿಯರಲ್ಲಿ ಅಗ್ರಗಣ್ಯಳು.
ತನ್ನ ಆತ್ಮ ವಿಶ್ವಾಸ ಮತ್ತು ಬುದ್ಧಿಶಕ್ತಿಯಿಂದ, ಗಾರ್ಗಿ ಘನತೆಯ ವ್ಯಕ್ತಿತ್ವವನ್ನು ಹೊಂದಿದ್ದಳು. ಆಕೆಯ ಜ್ಞಾನ ಮತ್ತು ತಾತ್ವಿಕ ದೃಷ್ಟಿಕೋನಗಳನ್ನು ಛಾಂದೋಗ್ಯ ಉಪನಿಷತ್ತಿನಲ್ಲಿ ವಿವರಿಸಲಾಗಿದೆ. ಮಿಥಿಲೆಯ ರಾಜ ಜನಕನ ಆಸ್ಥಾನದಲ್ಲಿ ನವರತ್ನಗಳಲ್ಲಿ ಒಬ್ಬಳಾಗಿ ಅವಳನ್ನು ಗೌರವಿಸಲಾಯಿತು. ಇವಳು ಬ್ರಹ್ಮಜಿಜ್ಞಾಸೆಯಲ್ಲಿ ಪರಿಣಿತಳು ಮತ್ತು ಆಸಕ್ತಳು ಆಗಿದ್ದಳು. ಈಕೆ ಗರ್ಗ ಗೋತ್ರದಲ್ಲಿ ಹುಟ್ಟಿದ್ದರಿಂದ ಗಾರ್ಗಿ ಎಂತಲೂ ವಚಕ್ನು ಮುನಿಯ ಮಗಳಾದ್ದರಿಂದ ವಾಚಕ್ನವಿ ಎಂತಲೂ ಅಭಿಧಾನವನ್ನು ಹೊಂದಿದ್ದಳು. ಸಕಲ ಶಾಸ್ತ್ರಪಾರಂಗತೆಯಾಗಿದ್ದ ಇವಳು ಕುಂಡಲಿನೀ ವಿದ್ಯೆಯನ್ನೂ ಕರಗತ ಮಾಡಿಕೊಂಡು ಆ ಕಾಲದ ಬ್ರಹ್ಮಜಿಜ್ಞಾಸು ಪಂಡಿತಮಂಡಳಿಯಲ್ಲಿ ಗೌರವಸ್ಥಾನವನ್ನು ಹೊಂದಿದ್ದಳು.
ರಾಜಮಹರ್ಷಿ ಮಿಥಿಲೆಯ ಜನಕ ಮಹಾರಾಜ ತಾನು ಕೈಕೊಂಡ ಬಹುದಕ್ಷಿಣಯಜ್ಞ ಪೂರ್ತಿಯಾದ ಅನಂತರ ಸಂತುಷ್ಟ ಬ್ರಹ್ಮಸಂಸತ್ತನ್ನು ಏರ್ಪಡಿಸಿದ್ದನು. ಕುರು-ಪಾಂಚಾಲದೇಶಗಳಿಂದ ವೇದಜ್ಞರು ಅಲ್ಲಿಗೆ ಆಗಮಿಸಿದ್ದರು. ಆ ಎಲ್ಲರಲ್ಲಿ ಶ್ರೇಷ್ಠ ಬ್ರಹ್ಮಜ್ಞಾನ ದಲ್ಲಿ ಶ್ರೇಷ್ಟ ಬ್ರಹ್ಮಿಷ್ಠ ಯಾರು ಎಂಬುದಾಗಿ ತಿಳಿದುಕೊಳ್ಳುವ ಬಯಕೆ ಜನಕನಿಗಾಯಿತು. ಅವನು ೧೦೦೦ ಗೋವುಗಳನ್ನು ಚಿನ್ನದಿಂದ ಶೃಂಗರಿಸಿ ಶ್ರೇಷ್ಠ ಬ್ರಹ್ಮಜ್ಞಾನಿಗೆ ಅವನ್ನು ಕೊಡುವುದಾಗಿ ಸಾರಿದನು. ಬ್ರಹ್ಮಸಭೆಯನ್ನುದ್ದೇಶಿಸಿ "ಬ್ರಹ್ಮಿಷ್ಠ (ಎಲ್ಲರಿ
ಗಿಂತ ಶ್ರೇಷ್ಠ ಬ್ರಹ್ಮಜ್ಞಾನ ಹೊಂದಿದವನು) ಸುವರ್ಣಾಲಂಕೃತವಾದ ಸಾವಿರ ಆಕಳುಗಳನ್ನು ಕೊಂಡೊಯ್ಯಲಿ" ಎಂದಾಗ, ಬ್ರಹ್ಮಿಷ್ಠ ಯಾರು ಇನ್ನೂ ನಿರ್ದರಿಸುವ ಮೊದಲೇ ಸಭೆಯಲ್ಲಿ ಉಪಸ್ಥಿತರಿದ್ದ ಯಾಜ್ಞವಲ್ಕ್ಯರು ತಮ್ಮ ಶಿಷ್ಯನಾದ ಸಾಮಶ್ರವನಿಗೆ ಹೇಳಿದರು:
“ಶಿಷ್ಯನೇ, ಆ ಸಾವಿರ ಗೋವುಗಳನ್ನೂ ನೀನು ಈಗಲೇ ನಮ್ಮ ಆಶ್ರಮಕ್ಕೆ ಹೊಡೆದುಕೊಂಡು ಹೋಗು.” ಎನ್ನುತ್ತಾರೆ.
(ಯಾಜ್ಞವಲ್ಕ್ಯ ಯಾರೆಂದು ತಿಳಿಯೋಣ.
ಯಾಜ್ಞವಲ್ಕ್ಯ ರು ಬ್ರಹ್ಮರಾತ ಋಷಿ ಮತ್ತು ಸುನಂದಾದೇವಿಯವರ ಮಗ. ಗುರು ವೈಶಂಪಾಯನರು ಯಾಜ್ಞವಲ್ಕ್ಯನ ಸೋದರಮಾವ. ಯಜುರ್ವೇದ, ಋಗ್ವೇದ, ಸಾಮವೇದ, ಅಥರ್ವವೇದದಲ್ಲೂ ಪಂಡಿತರು ಕದಿರಮುನಿಗಳ ಮಗಳಾದ ಕಾತ್ಯಾಯನಿ, ಮೈತ್ರೇಯಿ ಇಬ್ಬರು ಪತ್ನಿಯರು. ವೇದಮಂತ್ರಗಳಿಗೆ ಯಾಜ್ಞವಲ್ಕ್ಯರೇ ಸೂಕ್ತ ರೀತಿಯ ಅರ್ಥವಿವರಣೆಯನ್ನು ನೀಡುತ್ತಾ, ಜನರ ಮನ ಗೆದ್ದಿದ್ದು ಅವರ ಕೀರ್ತಿ ದೇಶ-ವಿದೇಶಗಳಲ್ಲಿಯೂ ಆಗಲೇ ಹರಡಿತ್ತು.)
ಶಿಷ್ಯ ಸಾಮಶ್ರವ ಗುರುಗಳಾದ ಯಾಜ್ಞವಲ್ಕ್ಯ ರ ಆದೇಶದ ಹಾಗೇ ಮಾಡಲಾಗಿ ಅಲ್ಲಿ ಸೇರಿದ್ದ ಪಂಡಿತರೆಲ್ಲ ಕೆರಳಿದರು. ಸಭೆಯಲ್ಲಿ ಗೊಂದಲ ಎದ್ದಿತು. “ ತೀರ್ಮಾನಿಸುವ ಮೊದಲೇ ಹೀಗೆಲ್ಲಾ ಮಾಡುವುದು ಸರಿಯಲ್ಲ” ಎಂದು ಯಾಜ್ಞವಲ್ಕ್ಯರ ಬಗ್ಗೆ ಟೀಕಿಸತೊಡಗಿದರು.
ಯಾಜ್ಞ ವಲ್ಕ್ಯರು ನಗುತ್ತಲೇ ಹೇಳಿದರು “ನೀವೆಲ್ಲಾರೂ ಬ್ರಹ್ಮ ವಿದ್ಯೆಯ ಬಗ್ಗೆ ಕೇಳುವ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಲು ನಾನು ಸಿದ್ಧ. ಅಶ್ವಲ, ಕಹೋಲ ಮುಂತಾದ ಘಟಾನುಘಟಿಗಳು ತಮ್ಮ ಪ್ರಶ್ನೆಗಳನ್ನು ಯಾಜ್ಞವಲ್ಕ್ಯನಿಗೆ ಕೇಳಿ ಸೋತಾಗ ಧೈರ್ಯದಿಂದ ಎದ್ದುನಿಂತವಳು ಗಾರ್ಗಿ ವಾಚಕ್ನವಿ. ಬೃಹದಾರಣ್ಯಕೋಪನಿಷತ್ತಿನ ಮೂರನೆಯ ಅಧ್ಯಾಯದ ಆರನೆಯ ಬ್ರಾಹ್ಮಣದಲ್ಲಿ ಗಾರ್ಗಿಯ ಪ್ರಶ್ನೆಯ ಉಲ್ಲೇಖವಿದೆ. ಯಾಜ್ಞವಲ್ಕ್ಯನ ಬ್ರಹ್ಮಜ್ಞಾನವನ್ನು ಕುರಿತು ಪ್ರಶ್ನಿಸ ಹೊರಟವರಲ್ಲಿ 6ನೆಯವಳಾಗಿ ಗಾರ್ಗಿ ಬರುತ್ತಾಳೆ.
"ಪೃಥ್ವಿಯು ನೀರಿನಿಂದ ವ್ಯಾಪ್ತವಾಗಿದ್ದರೆ, ಎಲ್ಲವನ್ನೂ ಆವರಿಸಿದ್ದು ಎನ್ನಲಾದ ನೀರು, ಯಾವುದರಿಂದ ವ್ಯಾಪ್ತವಾಗಿದೆ?"
ಯಾಜ್ಞವಲ್ಕ್ಯನಿಂದ ಉತ್ತರ
"ವಾಯುವಿನಿಂದ"
ಗಾರ್ಗಿಯ ಮುಂದಿನ ಪ್ರಶ್ನೆ:
"ವಾಯು ಯಾವುದರಿಂದ ವ್ಯಾಪ್ತವಾಗಿದೆ?"
ಹೀಗೆ ಯಾಜ್ಞವಲ್ಕ್ಯ ಉತ್ತರಕೊಡುತ್ತ ಹೋದಂತೆ ಗಾರ್ಗಿ ಪ್ರಶ್ನಿಸುತ್ತ ಹೋದಳು. ಕೊನೆಯಲ್ಲಿ ಕೇಳಿದಳು:
"ಬ್ರಹ್ಮಲೋಕ ಯಾವುದರಿಂದ ವ್ಯಾಪ್ತವಾಗಿದೆ?"
ಯಾಜ್ಞವಲ್ಕ್ಯ ಗುಡುಗಿದ.
" ಬ್ರಹ್ಮವನ್ನು ತರ್ಕದಿಂದ ಅರಿಯಲಸಾಧ್ಯ, ಗಾರ್ಗಿ! ಅತಿ ಪ್ರಶ್ನೆಯನ್ನು ಮಾಡಬೇಡ. ನೀನು ಕೇಳಿದ ತತ್ತ್ವವು ಪ್ರಶಾತೀತ; ಪ್ರಶ್ನೆ ಗಳನ್ನ ಮೀರಿದ್ದು. ವಿಪರೀತ ಪ್ರಶ್ನಿಸಿದರೆ ತಲೆ ಸಿಡಿದೀತು!"
ಗಾರ್ಗಿ ಸುಮ್ಮನಾದಳು. ಅವಳು ಸುಮ್ಮನಾದದ್ದು ಹೆದರಿಕೆಯಿಂದ ಅಲ್ಲ. ತಾನು ಕೇಳಿದ ಪ್ರಶ್ನೆಯ ಉತ್ತರ ಅತ್ಯಂತ ಗೂಢವಾದದ್ದು ಮತ್ತು ಸಾರ್ವಜನಿಕ ಸಭೆಯಲ್ಲಿ ಹೇಳಲಾರದ್ದು ಎಂಬುದರ ಅರಿವು ಗಾರ್ಗಿಗಿತ್ತು.
ಏಳನೆಯವನಾಗಿ ಪ್ರಶ್ನಿಸಿದ ಉದ್ದಾಲಕನೂ ಸೋತಮೇಲೆ, ತಡೆಯಲಾರದೆ, ಸಭೆಯಲ್ಲಿರುವ ಪಂಡಿತರೆಲ್ಲ ಯಾಜ್ಞವಲ್ಕ್ಯನ ಪಾಂಡಿತ್ಯಪ್ರಭೆಯಿಂದ ತತ್ತರಿಸಿದಾಗ ಬ್ರಹ್ಮಸಭೆಯ ಅಪ್ಪಣೆಯೊಂದಿಗೆ ಗಾರ್ಗಿ ಮತ್ತೆರಡು ಪ್ರಶ್ನೆಗಳನ್ನು ಕೇಳುತ್ತಾಳೆ.
ಗಾರ್ಗಿ ಎಂಟನೆಯ ಮಂಡಲದಲ್ಲಿ ಕೇಳಿದ ಪ್ರಶ್ನೆ:
"ಯಾವುದು ದ್ಯುಲೋಕಕ್ಕಿಂತ ಮೇಲೆ, ಭೂಮಿಗಿಂತ ಕೆಳಗೆ, ಅವುಗಳ ಮಧ್ಯೆ ಭೂತ, ವರ್ತಮಾನ, ಭವಿಷ್ಯತ್ತಿನಲ್ಲಿ ಶಾಶ್ವತವಾಗಿ ಇರುವುದೋ ಅಂತಹ ಯಾವ ತತ್ತ್ವವು ವ್ಯಕ್ತವಾದ ಜಗತ್ತನ್ನು ಆವರಿಸಿದೆ?"
ಯಾಜ್ಞವಲ್ಕ್ಯ ಉತ್ತರಿಸಿದರು:
"ಅವ್ಯಕ್ತವಾದ ಆಕಾಶ"
ಅವಳ ಮುಂದಿನ ಪ್ರಶ್ನೆ ಸಿದ್ಧವಾಗಿತ್ತು.
"ಅವ್ಯಕ್ತವಾದ ಆಕಾಶ ಯಾವುದರಿಂದ ವ್ಯಾಪ್ತವಾಗಿದೆ?"
ಅದಕ್ಕೆ ಉತ್ತರವಾಗಿ ಯಾಜ್ಞವಲ್ಕ್ಯ ಅವ್ಯಕ್ತವಾದ ಆಕಾಶವನ್ನು ವ್ಯಾಪ್ತಮಾಡಿದ "ಅಕ್ಷರಬ್ರಹ್ಮ'ದ ಸವಿಸ್ತರ ವಿವರಣೆಯನ್ನು ಮಾಡುತ್ತಾರೆ. ಅವರ ಉತ್ತರದಿಂದ ಸಂತುಷ್ಟಳಾದ ಗಾರ್ಗಿ ಯಾಜ್ಞವಲ್ಕ್ಯನನ್ನು ಬ್ರಹ್ಮಜ್ಞಾನಿಯೆಂದು ಒಪ್ಪಿಕೊಳ್ಳುತ್ತಾಳೆ. ಯಾಜ್ಞವಲ್ಕ್ಯನನ್ನು ಬ್ರಹ್ಮಿಷ್ಠನೆಂದು ಮನ್ನಿಸಲು ಸಭೆಯನ್ನು ಕೇಳಿಕೊಳ್ಳುತ್ತಾಳೆ.
ಜನಕಮಹಾರಾಜನಿಗೆ ತನ್ನ ಗುರು ಯಾಜ್ಞವಲ್ಕ್ಯವಿನ ವಾದ ವೈಖರಿ ಅಚ್ಚುಮೆಚ್ಚಿನದೆನಿಸಿತು. ಯಾಜ್ಞವಲ್ಕ್ಯರಿಗೆ ಸರ್ವಜ್ಞ ಕಿರೀಟದಿಂದ ಅಲಂಕರಿಸಲಾಯಿತು. ಚಿನ್ನದ ಪದಕಗಳಿಂದ ಅಲಂಕರಿಸಿದ ಸಹಸ್ರ ಗೋವುಗಳನ್ನು ನೀಡಿ, ಸನ್ಮಾನಿಸಲಾಯಿತು. ಮುಂದೆ ಯಾಜ್ಞವಲ್ಕ್ಯರು ಹಲವಾರು ಅಮೂಲ್ಯ ಕೃತಿಗಳನ್ನು ಬ್ರಹ್ಮವಿದ್ಯೆಯ ಬಗ್ಗೆ ರಚಿಸಿದರು. ಇವುಗಳಲ್ಲಿ “ಯಾಜ್ಞವಲ್ಕ್ಯಸ್ಮೃತಿ” ಅತಿ ಮುಖ್ಯವಾದುದು.
ಗಾರ್ಗಿ ಯಾಜ್ಞವಲ್ಕ್ಯನಿಂದ ವಾದದಲ್ಲಿ ಸೋತಿರಬಹುದು. ಆದರೆ ಯಾಜ್ಞವಲ್ಕ್ಯನನ್ನು ತುಂಬಿದ ಸಭೆಯಲ್ಲಿ ಗಹನವಾದ ಆತ್ಮಜ್ಞಾನದ ವಿಚಾರದಲ್ಲಿ ಪ್ರಶ್ನಿಸುವುದು ಸಾಮಾನ್ಯವಾದ ವಿಚಾರವಾಗಿರಲಿಲ್ಲ. ವೇದಕಾಲದಲ್ಲಿ ಸ್ತ್ರೀಯರಿಗೆ ವಿದ್ಯಾಭ್ಯಾಸದ ಹಾಗೂ ಪ್ರಶ್ನಿಸುವ ಅಧಿಕಾರ ಇರಲಿಲ್ಲ ಎಂಬ ವಾದವನ್ನು ಹುಸಿಮಾಡುವ ಗಟ್ಟಿ ನಿದರ್ಶನವಾದ ಗಾರ್ಗಿಯು ವಿದ್ಯಾವಂತ ಮಹಿಳೆಯರಿಗೆ ಆದರ್ಶವಾಗಿ ನಿಲ್ಲುತ್ತಾಳೆ. ವೇದಕಾಲದಿಂದಲೂ ಮಹಿಳೆ ಪ್ರಶ್ನಿಸುವ ಹಕ್ಕನ್ನ ಪಡೆದಿರುತ್ತಾಳೆ ಎಂಬುದಕ್ಕೆ ಈಕೆ ಜ್ವಲಂತ ನಿದರ್ಶನ.
Vachaknavi Gargi -
Distinct Intellectual:
Gargi Vachaknavi was born around the seventh century BCE in India. Gargi Vachaknavi was a women scholar and intellectual in ancient India . She had profound interest in Vedas and philosophy and wrote some hyms in Rigveda. She contributed numerous hymns to Vedas.
Philosophical discussions were a significant convention in old India. While Gargi was alive, discussions were the essential way sages expressed their insights and flaunted their aptitude. In King Janaka s Jnyan- sabha she questioned the wellknown scholar of that time Rishi Yadnyavalkya about the origin of all the existence.
Rishi Gargi was bestowed the title of Bramhavadini, one who has realised knowledge of Bramhan, the Super Consciousness. Her dialogue with Rishi Yadnyavalkya is preserved in Brihadaranyak Upanishad. Her knowledge and philosophical views have been elaborated in Chandogya Upanishad. Bramhavadini Gargi is indeed an icon of boldness and knowledge for every woman of all eras.
With her self-confidence and intellect, Gargi was dignity personified. She was also honoured as one of the Navaratnas (nine gems) in the court of King Janaka of Mithila. She broke the stereotype that excluded women from acquiring Brahmavidya and debating in a public platform. In ancient India women were not stopped from pursuing education. They were not regarded inferior to men.
- ✍️Dr Prema Pangi
Comments
Post a Comment