ಕವಿ ಸುಜ್ಞಾನಿ ಪುಲಿಗೆರೆಯ ಸೋಮ -

*ಕವಿ ಸುಜ್ಞಾನಿ ಪುಲಿಗೆರೆಯ ಸೋಮ*- 
ಸುಮಾರು ಕ್ರಿ.ಶ. 1200- 1300 ರ ಸಮಯದಲ್ಲಿ  ಧಾರವಾಡ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಪುಲಿಗೆರೆ (ಈಗಿನ ಲಕ್ಷ್ಮೇಶ್ವರ) ಹುಟ್ಟಿದ
ಶಿವಭಕ್ತ ಕವಿ. ಸುಜ್ಞಾನಿ.
ಅಂಕಿತನಾಮ : “ಹರ ಹರಾ ಶ್ರೀ ಚೆನ್ನ ಸೋಮೇಶ್ವರ” . 
ಕನ್ನಡ, ಸಂಸ್ಕೃತ ಎರಡೂ ವಿಷಯದಲ್ಲಿ ಭಾಷಾಪಂಡಿತನಾಗಿದ್ದನು.
ಇವನು ರಚಿಸಿದ ಸೋಮೇಶ್ವರ ಶತಕ ಕನ್ನಡದಲ್ಲಿ ನೀತಿ ಶಾಸ್ತ್ರವನ್ನು ಹೇಳುವ ಬಹಳ ಜನಪ್ರಿಯವಾದ ಕಾವ್ಯ. ಹೆಸರೇ ಹೇಳುವಂತೆ ಅದು 1೦೦ ಪದ್ಯಗಳನ್ನು ಹೊಂದಿದೆ. ತಿಳಿಹೇಳಿದ ನೀತಿ ಮಾತುಗಳು ಎಲ್ಲಾ ಕಾಲಗಳಲ್ಲಿಯೂ ಅನ್ವಿಸುತ್ತವೆ.  ಮತ್ತೇ«ಭವಿ ಕ್ರೀಡಿತ ವೃತ್ತಗಳಲ್ಲಿ ರಚಿಸಲಾಗಿವೆ. ಇವನನ್ನು ನಡುಗನ್ನಡದ 
ವೀರಶೈವ ಕವಿಗಳ ಸಾಲಿಗೆ ಸೇರಿಸಿದೆ.

 #ಹುಲಿಗೆರೆಯ ಸೋಮಯ್ಯ ಜೈನರ ಮಗಳ ವರಿಸಿ
ಹಲಕಾಲವಿರಲವರ್ಗೆ ನೇತ್ರವೇದನೆಯಾಗೆ
ಕುಲತಿಲಕ ಸದ್ಭಕ್ತ ಲಿಂಗದರುಶನವಿಲ್ಲದುಪವಾಸ ಮಾಳ್ಪೆವೆನಲು
ಖಳಶ್ರಾವಕರು ತಮ್ಮೊಳೊರ್ವನಂ ಮನೆಯೊಳಗೆ
ನಿಲಿಸಿ ನಿನ್ನಯ ಲಿಂಗವಿದೆ ವಂದಿಸೈಯೆನಲು
ಹೊಳೆವುತವನಂಗದಲಿ ಲಿಂಗರೂಪಾದವನ ಚರಣಾಂಬುಜಕ್ಕೆ ಶರಣು
-  ಲಕ್ಕಣ್ಣ ದಂಡೇಶ
  ಶಿವತತ್ತ್ವಚಿಂತಾಮಣಿ 

ಸೋಮೇಶ್ವರ ಶತಕದ  ಕೆಲವು ಆಯ್ದ ಪದ್ಯಗಳು
1.
#ಕೆಲವಂ ಬಲ್ಲವರಿಂದ ಕಲ್ತು ಕೆಲವಂ ಶಾಸ್ತ್ರಂಗಳಂ ಕೇಳುತಂ।
ಕೆಲವಂ ಮಾಳ್ಪವರಿಂದ ಕಂಡು ಕೆಲವಂ ಸುಜ್ಞಾನದಿಂ ನೋಡುತಂ।।
ಕೆಲವಂ ಸಜ್ಜನ ಸಂಗದಿಂದಲರಿಯಲ್ ಸರ್ವಜ್ಞನಪ್ಪಂ ನರಂ।।
ಪಲವುಂ ಪಳ್ಳ ಸಮುದ್ರವೈ ಹರಹರಾ ಶ್ರೀಚೆನ್ನಸೋಮೇಶ್ವರಾ||೧||
- ಪುಲಿಗೆರೆ ಸೋಮನಾಥ

ಭಾವಾರ್ಥ-
 ಕೆಲವು ವಿಷಯಗಳನ್ನು ಬಲ್ಲವರಿಂದಲೂ, 
ಕೆಲವನ್ನು ಶಾಸ್ತ್ರಗಳಿಂದಲೂ,
ಕೆಲವನ್ನು ತಿಳಿದವರ ಆಚರಣೆಯಿಂದಲೂ,
ಕೆಲವನ್ನು ಸುಜ್ಞಾನದಿಂದಲೂ, 
ಕೆಲವನ್ನು ಸಜ್ಜನರ ಸಹವಾಸದಿಂದಲೂ, ತಿಳಿದುಕೊಳ್ಳುವುದರಿಂದ ಮಾನವ ಸರ್ವಜ್ಞನಾಗುವನು, ಅನೇಕ ತೊರೆಗಳು ಬಂದು ಸೇರಿ ಒಂದು ದೊಡ್ಡ ಸಮುದ್ರವಾಗುವಂತೆ.

 2.
#ಉಡುರಾಜಂ ಕಳೆಗುಂದಿ ಪೆರ್ಚದಿಹನೇ ನೃಗ್ರೋಧಭೀಜಂ ಕೆಲಂ | 
ಸಿಡಿದುಂ ಪೆರ್ಮರನಾಗದೇ ಎಳಗರುಂ ಎತ್ತಾಗದೇ ಲೋಕದೊಳ್ ||
ಮಿಡಿ ಪಣ್ಣಾಗದೆ ದೈವನೊಲ್ಮೆಯಿರಲಾ ಕಾಲಾನುಕಾಲಕ್ಕೆ ತಾಂ |
ಬಡವಂ ಬಲ್ಲಿದನಾಗನೇ ಹರಹರಾ ಶ್ರೀಚೆನ್ನಸೋಮೇಶ್ವರಾ || ೨ ||

ಭಾವಾರ್ಥ-
   ಚಂದ್ರನು ಒಂದೇ ಸಮನಾಗಿರುವುದಿಲ್ಲ. ಕಳೆಗುಂದುತ್ತಾನೆ ಮತ್ತೆ ಹೆಚ್ಚಾಗುವುದಿಲ್ಲವೇ? ಆಲದ ಮರದ ಕೆಲವು ಬೀಜಗಳಾದರೂ ಸಿಡಿದು, ಭೂಮಿಯಲ್ಲಿ ಚಿಗುರಿ ಹೆಮ್ಮರವಾಗುವುದಿಲ್ಲವೇ? ಈ ಲೋಕದಲ್ಲಿ ಎಳೆಗರು ಬೆಳೆದು ಎತ್ತಾಗುವುದಿಲ್ಲವೇ? 
ಮಿಡಿ ಹಣ್ಣಾಗುವುದಿಲ್ಲವೇ? ದೇವರ ಕೃಪೆಯೊಂದಿದ್ದರೆ ಕಾಲಾಂತರದಲ್ಲಿ ಬಡವನು ಬಲ್ಲಿದ ಸಿರಿವಂತನಾಗುವುದಿಲ್ಲವೇ? ಜೀವನದಲ್ಲಿ ಯಾವುದೂ ನಿಶ್ಚಿತವಲ್ಲ. ಬದಲಾವಣೆ ಜಗದ ನಿಯಮ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾನೆ. ಜೀವನದಲ್ಲಿ ಆಶಾವಾದಿಯಾಗಿರಬೇಕು. ಒಂದಲ್ಲಾ ಒಂದು ದಿನ ಒಳ್ಳೆಯದು ಆಗೇ ಆಗುತ್ತದೆ.
3.
ಅದರಿಂ ನೀತಿಯೆ ಸಧನಂ ಸಕಲ ಲೋಕಕ್ಕಾಗಬೇಕೆಂದು ಪೇ
ಳಿದ ಸೋಮಂ ಸುಜನರ್ಕಳೀಶತಕದೊಳ್ ತಪ್ಪಿರ್ದೊಡಂ ತಿದ್ದಿ ತೋ
ರ್ಪುದು ನಿಮ್ಮುತ್ತಮ ಸದ್ಗುಣಂಗಳ ಜಗದ್ವಿಖ್ಯಾತಮಂ ಮಾಳ್ಪುದಾಂ
ಮುದದಿಂ ನಿಮ್ಮವನೆಂಬುದೈ ಹರಹರಾ ಶ್ರೀಚೆನ್ನಸೋಮೇಶ್ವರಾ ||೨||

ಭಾವಾರ್ಥ:
ಆದಕಾರಣ ಸಕಲರಿಗೂ ನೀತಿಯು ಸಹಾಯವಾಗಬೇಕೆಂದು ಸೋಮನೆಂಬ ಕವಿಯಾದ ನಾನು ಈ ಸೋಮೇಶ್ವರ ಶತಕವನ್ನು ರಚಿಸಿದೆನು. ಇದರಲ್ಲಿ ತಪ್ಪುಗಳಿದ್ದರೆ ಸಜ್ಜನರು ಅವನ್ನು ತಿದ್ದಿ ತೋರಿಸಿ ತಮ್ಮ ಸದ್ಗುಣಗಳನ್ನು ಲೋಕದಲ್ಲಿ ಹರಡಬೇಕಲ್ಲದೆ ನಾನೂ ನಿಮ್ಮಲ್ಲಿ ಸೇರಿದವನೇ ಎಂದು ಭಾವಿಸಬೇಕು.
4.
ರವಿಯಾಕಾಶಕೆ ಭೂಷಣಂ ರಜನಿಗಾಚಂದ್ರಂ ಮಹಾಭೂಷಣಂ
ಕುವರಂ ವಂಶಕೆ ಭೂಷಣಂ ಸರಸಿಗಂಬೋಜಾತಗಳ್ ಭೂಷಣಂ
ಹವಿಯಜ್ಞಾಳಿಗೆಭೂಷಣಂ ಸತಿಗೆ ಪಾತಿವ್ರತವೇ ಭೂಷಣಂ
ಕವಿಯಾಸ್ಥಾನಕೆ ಭೂಷಣಂ ಹರಹರಾ ಶ್ರೀಚೆನ್ನಸೋಮೇಶ್ವರಾ||೫||

ಭಾವಾರ್ಥ:
ಆಕಾಶಕ್ಕೆ ಸೂರ್ಯನೂ, ರಾತ್ರಿಗೆ ಚಂದ್ರನೂ, ವಂಶಕ್ಕೆ ಮಗನೂ, ಸರೋವರಕ್ಕೆ ಕಮಲವೂ, ಯಜ್ಞಕ್ಕೆ ಹೋಮಮಾಡುವ ಪದಾರ್ಥವೂ, ಹೆಂಗಸಿಗೆ ಪಾತಿವ್ರತ್ಯವೂ, ರಾಜಸಭೆಗೆ ಕವಿಯೂ ಅಲಂಕಾರ ಭೂಷಣವಾಗಿರುತ್ತದೆ.
5.
ಹಿತವಂ ತೋರುವನಾತ್ಮಬಂಧು ಪೊರೆವಾತಂ ತಂದೆ ಸದ್ಧರ್ಮದಾ
ಸತಿಯೇ ಸರ್ವಕೆ ಸಾಧನಂ ಕಲಿಸಿದಾತಂ ವರ್ಣಮಾತ್ರಂ ಗುರು
ಶೃತಿಮಾರ್ಗಂ ಬಿಡದಾತ ಸುವ್ರತಿ ಮಹಾಸದ್ವಿದ್ಯೆಯೇ ಪುಣ್ಯದಂ
ಸುತನೇ ಸದ್ಗತಿದಾತನೈ ಹರಹರಾ ಶ್ರೀಚೆನ್ನಸೋಮೇಶ್ವರಾ||೮||

ಭಾವಾರ್ಥ:
ತನಗೆ ಒಳ್ಳೆಯದನ್ನು ಹಿತವನ್ನು  ಮಾಡುವವನೇ ಬಂಧು, ತನ್ನನ್ನು ಕಾಪಾಡುವವನೇ ತಂದೆ, ಧರ್ಮಮಾರ್ಗದಲ್ಲಿ ನಡೆವ ಹೆಂಡತಿಯೇ ಸಕಲ ಸುಖಕ್ಕೂ ಕಾರಣ. ಒಂದಕ್ಷರವನ್ನು ಕಲಿಸಿದವನೂ ಗುರು, ವೇದಮಾರ್ಗವನ್ನು ಬಿಡದೆ ನಡೆಯುವವನೇ ಮುನಿ, ಒಳ್ಳೆಯ ವಿದ್ಯೆಯೇ ಬ್ರಹ್ಮವಿದ್ಯೆಯೇ ಪುಣ್ಯವನ್ನು ಕೊಡುವುದು, ಮಗನೇ ಸದ್ಗತಿಗೆ ಕಾರಣನು.
6.
ಧರಣೀಶಂ ಧುರ ಧೀರನಾಗೆ ಧನಮುಳ್ಳಂ ತ್ಯಾಗಿಯಾಗಲ್ ಕವೀ
ಶ್ವರ ಸಂಗೀತದಿ ಜಾಣನಾಗೆ ಸುಕಲಾ ಪ್ರೌಢಂಗಿರಲ್ ಪ್ರೌಡೆವೆಣ್
ಬರೆವಂ ಧಾರ್ಮಿಕನಾಗೆ ಮಂತ್ರಿ ಚತುರೋಪಾಯಂಗಳಂ ಬಲ್ಲೊಡಂ
ದೊರೆವೋಲ್ ಚಿನ್ನಕೆ ಸೌರಭಂ ಹರಹರಾ ಶ್ರೀಚೆನ್ನಸೋಮೇಶ್ವರಾ||೧೧||

ಭಾವಾರ್ಥ:
ದೊರೆಗೆ ಯುದ್ಧದಲ್ಲಿ ಧೈರ್ಯವೂ, ಧನಿಕನಿಗೆ ದಾನ ಮಾಡುವ ಬುದ್ಧಿಯೂ, ಕವಿತ್ವ ಮಾಡುವವನಿಗೆ ಸಂಗೀತದಲ್ಲಿ ಪಾಂಡಿತ್ಯವೂ, ಸಂಗೀತ, ಚಿತ್ರ ಮೊದಲಾದ ಲಲಿತ ಕಲೆಗಳಲ್ಲಿ ನಿಪುಣನಾದವನಿಗೆ ಚತುರಳಾದ ಹೆಂಡತಿಯೂ, ಕರಣಿಕನಿಗೆ ಧರ್ಮದಲ್ಲಿ ಬುದ್ಧಿಯೂ, ಮಂತ್ರಿಗೆ ಸಾಮ ದಾನ ಭೇದ ದಂಡಗಳೆಂಬ ನಾಲ್ಕು ಉಪಾಯಗಳ ತಿಳಿವೂ ಇದ್ದರೆ ಅದು ಚಿನ್ನಕ್ಕೆ ಸುವಾಸನೆಯುಂಟಾದಂತೆ ಶೋಭಿಸುತ್ತದೆ.
7.
ಶ್ರೀಮತ್ಕೈಲಾಸವಾಸಂ ಸ್ಮಿತಮೃದುವಚನಂ ಪಂಚವಕ್ತ್ರಂ ತ್ರಿಣೇತ್ರಂ
ಪ್ರೇಮಾಂಕಂ ಪೂರ್ಣಕಾಮಂ ಪರಮ ಪರಶಿವಂ ಪಾರ್ವತೀಶಂ ಪರೇಶಂ
ಧೀಮಂತಂ ದೇವದೇವಂ ಪುಲಿಗಿರಿನಗರೀ ಶಾಸನಾಂಕಂ ಮೃಗಾಂಕಂ
ಸೋಮೇಶಂ ಸರ್ಪಭೂಷಂ ಸಲಹುಗೆ ಜಗಮಂ ಸರ್ವದಾ ಸುಪ್ರಸನ್ನಂ

ಭಾವಾರ್ಥ:
ಶ್ರೀ ಮತ್ಕೈಲಾಸವಾಸಿಯಾದ, ನಗೆಯಿಂದ ಕೂಡಿದ, ಮೃದುವಾದ ಮಾತುಳ್ಳ, ಐದು ಮುಖವುಳ್ಳ, ಮೂರು ಕಣ್ಣುಳ್ಳ, ಪ್ರೇಮವೇ ಗುರುತಾಗುಳ್ಳ, ಸರ್ವ ಸಮೃದ್ಧಿಯನೊಳಗೊಂಡಿರುವ, ಸರ್ವೋತ್ಕೃಷ್ಟ ಮಂಗಳಸ್ವರಕಪನಾದ, ಪಾರ್ವತೀಪತಿಯಾದ, ಸರ್ವೇಶ್ವರನಾದ, ಜ್ಞಾನಿಯಾದ,ದೇವತೆಗಳಿಗೆ ದೇವನಾದ, ಪುಲಿಗಿರೌನಗರಿಯ ಪಾಲನೆಯೇ ಲಕ್ಷಣವಾಗುಳ್ಳ, ಜಿಂಕೆಯನ್ನುಕೈಯಲ್ಲಿ ಧರಿಸಿರುವ, ನಾಗಾಭರಣನಾದ ಸೋಮೇಶ್ವರನು ಸರ್ವದಾ ದಯೆಯಿಂದ ಲೋಕವನ್ನು ರಕ್ಷಿಸಲಿ.
8.
ಪುರ ದುರ್ಗಂಗಳಬಲ್ಮೆಮಾಡದೆ ಪ್ರಜಾಕ್ಷೋಭಂಗಳಂ ನೋಡದೆ
ಲ್ಲರು ವಿಶ್ವಾಸಿಗಳೆಂದು ನಂಬಿ ಬಹುದಂ ಪೋದಪ್ಪುದಂ ಕಾಣದಾ
ತುರದಿಂದುಂಡತಿ ನಿದ್ರೆಗೆಯ್ದು ಮದನಂಗಳಾಗಿಹಂ ಲೋಕದೊಳ್
ದೊರೆಯೇ ಸೊಕ್ಕಿದ ಕೋಣನೈ ಹರಹರಾ ಶ್ರೀಚೆನ್ನಸೋಮೇಶ್ವರಾ ||೫೫||

ಭಾವಾರ್ಥ:- ಪಟ್ಟಣಗಳನ್ನೂ, ಕೋಟೆಗಳನ್ನೂ ಬಲಪಡಿಸದೆ , ಪ್ರಜೆಗಳ ಕಷ್ಟವನ್ನು ಲಕ್ಷಿಸದೆ, ಎಲ್ಲರೂ ತನ್ನಲ್ಲಿ ವಿಶ್ವಾಸವುಳ್ಳವರೆಂದು ನಂಬಿ, ತನ್ನ ಆದಾಯ ವೆಚ್ಚಗಳನ್ನು ವಿಚಾರಮಾಡದೆ, ಬೇಕಾದ ಹಾಗೆ ತಿಂದು ಮಿತಿಮೀರಿ, ನಿದ್ದೆ ಮಾಡುತ್ತ ಯಾವಾಗಲೂ ವಿಷಯಾಸಕ್ತನಾಗಿರುವವನು ಸೊಕ್ಕಿದ ಕೋಣನೇ ಹೊರತು ದೊರೆಯಲ್ಲ.
9.
ಸವಿವಣ್ಣಲ್ಲಿನಿಮಾವು ಸರ್ವರಸದೊಳ್ ಶೃಂಗಾರ ಸಂಭಾರದೊಳ್
ಲವಣಂ ಕೇಳಲು ಬಾಲಭಾಷೆ ಸಿರಿಯಲ್ಲಾರೋಗ್ಯ ದೈವಂಗಳೊಳ್
ಶಿವ ಬಿಲ್ಲಾಳ್ಗಳೊಳಂಗಜಂ ಜನಿಸುವ ಜನ್ಮಂಗಳೊಳ್ ಮಾನುಷಂ
ಕವಿತಾ ವಿದ್ಯೆಸುವಿದ್ಯೆಯೊಳ್ ಹರಹರಾ ಶ್ರೀಚೆನ್ನಸೋಮೇಶ್ವರಾ||೧೩||

ಭಾವಾರ್ಥ:
ರುಚಿಯಾದ ಹಣ್ಣುಗಳಲ್ಲಿ ಸಿಹಿ ಮಾವೂ, ನವರಸಗಳಲ್ಲಿ ಶೃಂಗಾರವೂ, ಸಂಭಾರಗಳಲ್ಲಿ ಉಪ್ಪೂ , ಮಾತುಗಳಲ್ಲಿ ಎಳೆಯ ಮಕ್ಕಳ ಮಾತೂ, ಭಾಗ್ಯಗಳಲ್ಲಿ ಆರೋಗ್ಯಭಾಗ್ಯವೂ, ದೇವರುಗಳಲ್ಲಿ ಶಿವನೂ, ಬಿಲ್ಲನ್ನು ಹಿಡಿದು ಯುದ್ಧ ಮಾಡುವ ಶೂರರಲ್ಲಿ ಮನ್ಮಥನೂ, ಜನ್ಮಗಳಲ್ಲಿ ಮನುಷ್ಯ ಜನ್ಮವೂ, ವಿದ್ಯೆಗಳಲ್ಲಿ ಕವಿತ್ವ ವಿದ್ಯೆಯೂ ಶ್ರೇಷ್ಠವಾದುವು.
10.
ಮಳೆಯೇ ಸರ್ವಜನಾಶ್ರಯಂ ಶಿವನೇ ದೇವರ್ಕಳ್ಗೆ ತಾನಾಶ್ರಯಂ
ಬೆಳೆಯೇ ಸರ್ವರ ಜೀವನಂ ಬಡವನೇ ಸರ್ವರ್ಗೆ ಸಾಧಾರಣಂ
ಬಳೆಯೇ ಸರ್ವ ವಿಭೂಷಣಕ್ಕೆ ಮೊದಲೈ ಪುತ್ರೋತ್ಸವಂ ಸೂತ್ಸವಂ
ಕೆಳೆಯೇ ಸರ್ವರೊಳುತ್ತಮಂ ಹರಹರಾ ಶ್ರೀಚೆನ್ನಸೋಮೇಶ್ವರಾ||೧೪||

ಭಾವಾರ್ಥ:
ಎಲ್ಲ ಜನಕ್ಕೂ ಮಳೆಯೇ ಆಧಾರ, ಎಲ್ಲದೇವತೆಗಳಿಗೂ ಶಿವನೇ ಆಶ್ರಯ, ಎಲ್ಲರ ಜೀವನಕ್ಕೂ ಬೆಳೆಯೇ ಕಾರಣ, ಎಲ್ಲ ಜನರಿಗೂ ಬಡವನೇ ಸುಲಭನು ಅಂದರೆ ಕೆಲಸಕ್ಕೊದಗುವವನು, ಒಡವೆಗಳಲ್ಲೆಲ್ಲ ಬಳೆಯೇ ಮುಖ್ಯ, ಉತ್ಸವಗಳಲ್ಲಿ ಪುತ್ಪರೋತ್ಸವವೇ ಶ್ರೇಷ್ಠ, ಎಲ್ಲರಲ್ಲಿಯೂ ಸ್ನೇಹಿತನೇ ಉತ್ತಮನು.
- ✍️Dr Prema Pangi
#ಪ್ರೇಮಾ_ಪಾಂಗಿ,#ಪುಲಿಗೆರೆಯ_ಸೋಮ
#ಸೋಮೇಶ್ವರ_ಶತಕ

Comments

Popular posts from this blog

Shika chakra or Bindu chakra:Bindu visarga

Hrit Chakra or Eight Petals Chakra

A-Ka-Ta triangle or Akshara Brahma