ವಚನ ದಾಸೋಹ - ಶಿವಶಕ್ತಿ ಸಂಪುಟವೆಂಬುದೆಂತು ಹೇಳಿರಣ್ಣಾ

ವಚನ ದಾಸೋಹ: ಶಿವಶಕ್ತಿ ಸಂಪುಟವೆಂಬುದೆಂತು ಹೇಳಿರಣ್ಣಾ

ವಚನ:
#ಶಿವಶಕ್ತಿ ಸಂಪುಟವೆಂಬುದೆಂತು ಹೇಳಿರಣ್ಣಾ; 
ಶಿವನೆ ಚೈತನ್ಯಾತ್ಮಕನು, ಶಕ್ತಿಯೆ ಚಿತ್ತು.ಇಂತು ಚೈತನ್ಯಾತ್ಮಕನೆ ಚಿತ್‍ಸ್ವರೂಪನೆಂದರಿಯ ಬಲ್ಲಡೆ 
ಆತನೆ ಶರಣ ಗುಹೇಶ್ವರಾ.
- ಅಲ್ಲಮಪ್ರಭುಗಳು
ಅರ್ಥ:
ಶಿವನಲ್ಲಿ ಶಕ್ತಿ ಕೂಡಿಕೊಂಡಿರುವುದೇ ಶಿವಶಕ್ತಿ ಸಂಪುಟ (ಸಂಯೋಗ). ಶಿವನು ಚೈತನ್ಯಾತ್ಮಕನಾದರೆ, ಶಕ್ತಿಯು ಅವನ ಚಿತ್ತು ಅಂದರೆ ಶಿವನ ಚಿತ್ ಶಕ್ತಿ. ಹೀಗೆ ಚಿತ್ ಶಕ್ತಿಯಿಂದ ಚೈತನ್ಯಾತ್ಮಕನಾದ ಶಿವನೇ ಚಿತ್‍ಸ್ವರೂಪನು. ಶಿವ-ಶಕ್ತಿ ಪ್ರಸಾದದಿಂದ ರೂಪುಗೊಂಡು ವಿಶ್ವ ವ್ಯವಹರಿಸುತ್ತಿರುತ್ತದೆ. ಇದನ್ನು ಅರಿತು ಶಿವನೊಳಗೆ  ಲೀನನಾದವನು  ಶರಣನೆನಿಸಿಕೊಳ್ಳುತ್ತಾನೆ. ಶಿವಯೋಗ ಸಾಧಕನಲ್ಲಿ ಶಕ್ತಿಯು ಅಧೋಮುಖಿಯಾಗಿ ಸುಪ್ತಾವಸ್ಥೆಯಲ್ಲಿ ಆಧಾರ ಸ್ಥಾನ (ಆಧಾರ ಚಕ್ರ)ದಲ್ಲಿ ಅವಿತುಕೊಂಡಿರುತ್ತದೆ. ಈ ಶಕ್ತಿಯನ್ನು ಜಾಗೃತಗೊಳಿಸಿ ಊರ್ಧ್ವಮುಖ ಮಾಡಿದಾಗ ಅದು ಆಧಾರದಿಂದ ಷಟ್ ಚಕ್ರಗಳನ್ನು ಭೇದಿಸಿ ಮೇಲೆ ಏರತೊಡಗುತ್ತದೆ.
ಕೊನೆಗೆ ಅದರ ಸಹಸ್ರಾರವನ್ನು ಸೇರಿ ಅಲ್ಲಿರುವ ಶಿವನೊಡನೆ ಬೆರೆತು ಶಿವಶಕ್ತಿ ಸಂಪುಟವನ್ನೂ ವ್ಯಕ್ತಗೊಳಿಸುತ್ತದೆ ಎಂದು ಅಲ್ಲಮಪ್ರಭುಗಳು ಹೇಳುತ್ತಾರೆ. ಶಿವನೇ ಚೈತನ್ಯಾತ್ಮಕ, ಶಕ್ತಿಯೇ ಶಿವನ ಚಿತ್‍ಸ್ವರೂಪ ಎಂದು ಅರಿತವನೆ ಶರಣ ಎಂದು ಅಲ್ಲಮ ಪ್ರಭುಗಳು ಶರಣನು ಈ ಅನುಭಾವ ಭಕ್ತಿ, ಜ್ಞಾನ ಹೊಂದಿದವನು ಎನ್ನುತ್ತಾರೆ. 
ಸೃಷ್ಟಿಗಿಂತ ಮೊದಲು ಶಿವ, ನಿರಂಜನ  ಸ್ವರೂಪನಾಗಿದ್ದ. ಸೃಷ್ಟಿಯನ್ನು ನಿರ್ಮಿಸಬೇಕೆಂಬ ನೆನಹು ಆತನಲ್ಲಿ ಸುಳಿಯಿತು. ಅದೇ ಚಿತ್ ಶಕ್ತಿ ಎನಿಸಿಕೊಂಡು ಈ ಸೃಷ್ಟಿಗೆ ಕಾರಣವಾಯಿತು, ಇದು ಒಟ್ಟಿನಲ್ಲಿ ಶರಣರು ವ್ಯಕ್ತಪಡಿಸುವ ಶಕ್ತಿ ಕಲ್ಪನೆಯ ಸಾರ.
#ಬಯಲು ಮೊಳಗಿ, ಮಳೆ ಸೃಜಿಸೆ, ಆ ಬಯಲು ಆ ಮಳೆಯನೊಡಗೂಡಿ,
ದೃಷ್ಟವಪ್ಪ ವಾರಿಕಲ್ಲಾಗಿ ತೋರಿದಂತೆ, ನಿನ್ನ ನೆನಹೆ ನಿನಗೆ ಶಕ್ತಿಯಾಯಿತ್ತಲ್ಲಾ.
ಆ ನಿಮ್ಮಿಬ್ಬರ ಸಮರತಿಯೆ,
ನಿಮಗೆ ಅಖಂಡವೆಂಬ ನಾಮ ಸೂಚನೆಯಾಯಿತ್ತಲ್ಲಾ.
ಮಹಾಲಿಂಗ ಕಲ್ಲೇಶ್ವರಾ, 
ನಿಮ್ಮ ಆದಿಗೆ, ಇದೇ ಪ್ರಥಮವಾಯಿತ್ತಲ್ಲಾ. / 68
ಎಂಬ ಶರಣ ಹಾವಿನಹಾಳ ಕಲ್ಲಯ್ಯನವರ ವಚನದಲ್ಲಿ ಈ ಅಂಶ ಸ್ಪಷ್ಟವಾಗಿ ಮೂಡಿದೆ, 

*ಶರಣರು ಕಂಡ ಶಕ್ತಿ" :
ಶಿವಶಕ್ತಿ ಸಂಪುಟ
ಎಲ್ಲೆಲ್ಲಿಯೂ ಶಕ್ತಿಯ ವಿರಾಡ್ರೂಪದ ಅನುಭವ ಕಂಡರು ಶರಣರು ಮತ್ತು ಶಿವಯೋಗಿಗಳು. ಗ್ರಹ ಚಂದ್ರ ನೀಹಾರಿಕೆಗಳಲ್ಲಿರುವ ಗುರುತ್ವಾಕರ್ಷಣಶಕ್ತಿ, ಸೂರ್ಯನಲ್ಲಿರುವ ತೇಜೋಮಯ ಶಕ್ತಿ, ಈ ಸೃಷ್ಟಿಯ ಜೀವರುಗಳ ವಿಕಾಸಶಕ್ತಿ, ಈ ಸೃಷ್ಟಿ ನಿರ್ಮಾಣಕ್ಕೆ ಕಾರಣವಾದ ಪಂಚಭೂತಗಳು, ಇವುಗಳ ಪಂಚಿಕರಣ, ವಿವಿಧ ಮೂಲ ವಸ್ತುಗಳು (elements) ಮತ್ತು ಅವುಗಳ ಸಂಬಂಧದಿಂದ ಉಂಟಾಗುವ ಸಂಯುಕ್ತ ವಸ್ತುಗಳು  ಇವು ಎಲ್ಲದರಲ್ಲಿಯೂ ಒಂದೊಂದು ವಿಶಿಷ್ಟ ಶಕ್ತಿಯಿದೆ. ಬೆಂಕಿಗೆ ಸುಡುವ ಶಕ್ತಿ, ಗಾಳಿಗೆ ಬೀಸುವ ಶಕ್ತಿ, ನೀರಿನ ಶೈತ್ಯ ಶಕ್ತಿ, ಇವುಗಳ ಒಂದೊಂದು ಅಣುವಿನಲ್ಲಿಯೂ ಇರುವ ಶಕ್ತಿ, ಜಲಜನಕದ ಶಕ್ತಿ, ಆಮ್ಲಜನಕದ ಶಕ್ತಿ, ಅವೆರಡೂ ಸೇರಿದಾಗ ನೀರಾಗುವ ಶಕ್ತಿ, ಅಯಸ್ಕಾಂತದ ಶಕ್ತಿ, ಅದರಿಂದ ಉಂಟಾಗುವ ವಿದ್ಯುತ್‌ಶಕ್ತಿ- ಹೀಗೆ ಅನಂತ ರೂಪಗಳನ್ನು ಧರಿಸಿದ ಶಕ್ತಿಯ ಸಹಸ್ರ ಮುಖಗಳು ಸೃಷ್ಟಿಯಲ್ಲಿ ಗೋಚರವಾದವು. ಈ ಶಕ್ತಿಗಳೆಲ್ಲಕ್ಕೂ ಮೂಲ ಭೂತವಾದ ಶಕ್ತಿಯೊಂದು ಇದ್ದಿರಬೇಕು. ಇದನ್ನೇ ಆದಿ ಶಕ್ತಿ (Primordial Power) ಎಂದು ಕರೆದಿದ್ದಾರೆ. 
ಈ ಆದಿಶಕ್ತಿಯ ಚಾಲನೆಯಿಂದ ವಿಶ್ವ ಚಲಿಸುತ್ತಿದೆ. ಈ ಶಕ್ತಿ ತನಗೆ ತಾನೆ ಸ್ವತಂತ್ರವಲ್ಲ. ಇದಕ್ಕೆ ಆಧಾರಭೂತವಾದ ನಿರಂಜನ ತತ್ವವೊಂದಿದೆ. ಆತನೇ ಪರಶಿವ, ಶಕ್ತಿವಿಶಿಷ್ಟನಾದ ಆ ಪರಶಿವ, ಶಕ್ತಿವಿಶಿಷ್ಟವಾದ ಈ ಸೃಷ್ಟಿಗೆ ತನ್ನ ಶಕ್ತಿ ನಿಮಿತ್ತದಿಂದ ಕಾರಣನಾಗುತ್ತಾನೆ. 

#..ಏನೆಂದನಲಿಲ್ಲದ ಮಹಾಘನವು
ತನ್ನ ಲೀಲೆಯಿಂದ ತಾನೇ ಸ್ವಯಂಭುಲಿಂಗವಾಯಿತ್ತು!
ಆ ಲಿಂಗದಿಂದಾಯಿತ್ತು ಶಿವಶಕ್ತ್ಯಾತ್ಮಕ,
ಆ ಶಿವಶಕ್ತ್ಯಾತ್ಮಕದಿಂದಾದುದು ಆತ್ಮ,
ಆತ್ಮನಿಂದಾದುದು ಆಕಾಶ,
ಆಕಾಶದಿಂದಾದುದು ವಾಯು,
ವಾಯುವಿನಿಂದಾದುದು ಅಗ್ನಿ,
ಅಗ್ನಿಯಿಂದಾದುದು ಅಪ್ಪು,
ಅಪ್ಪುವಿನಿಂದಾದುದು ಪೃಥ್ವಿ,
ಪೃಥ್ವಿಯಿಂದಾದುದು ಸಕಲ ಜೀವವೆಲ್ಲಾ.
ಇವೆಲ್ಲಾ ನಿಮ್ಮ ನೆನಹುಮಾತ್ರದಿಂದಾದವು
ಸಿಮ್ಮಲಿಗೆಯ ಚೆನ್ನರಾಮಾ. / 25

ಸೃಷ್ಟಿಕರ್ತನಿಂದ ಹಿಡಿದು ಸೃಷ್ಟಿಯಲ್ಲಿ ಕಂಡುಬರುವ ಕೊನೆಯ ಅಣುವಿನವರೆಗೆ ಎಲ್ಲೆಲ್ಲಿಯೂ ವ್ಯಾಪ್ತವಾಗಿರುವ ಶಕ್ತಿತತ್ವವನ್ನು(Energy) ಗಮನಿಸಿ ಅದರ ಅಭಿವ್ಯಕ್ತಿಯ ವಿರಾಡ್ರೂಪವನ್ನೂ ವಿಶಿಷ್ಟತೆಯನ್ನೂ ಗಮನಿಸಿದರು. ಶಕ್ತಿ ವಿಶಿಷ್ಟನಾದವನು ಶಿವ, ಶಕ್ತಿ ವಿಶಿಷ್ಟನಾದವನು ಜೀವ.
 “ಶಕ್ತಿಶ್ಚ ಶಕ್ತಿಶ್ಚ ಶಕ್ತೀ-ತಾಭ್ಯಾಂ 
ವಿಶಿಷ್ಟೌ ಜೀವೇಶೌ, ತಯೋಃಅದ್ವೈತಂ ಶಕ್ತಿವಿಶಿಷ್ಟಾದ್ವೈತಂ” - ಎರಡು ಬಗೆಯ ಶಕ್ತಿಗಳಿಂದ ಕೂಡಿದ ಜೀವ ಬ್ರಹ್ಮರ ಸಾಮರಸ್ಯವೇ ಶಕ್ತಿವಿಶಿಷ್ಟಾದ್ವೈತ.
ಶಿವನನ್ನು ಬಿಟ್ಟು ಶಕ್ತಿಯೂ ಶಕ್ತಿಯನ್ನು ಬಿಟ್ಟು ಶಿವನೂ ಇರುವುದಿಲ್ಲ. ಈ ವಿಮರ್ಶಶಕ್ತಿಯೇ ಸೂಕ್ಷ್ಮ ಚಿದಾತ್ಮಕ ಶಕ್ತಿ, ಈ ಶಕ್ತಿಯಿಂದ ವಿಶಿಷ್ಟನಾದವನು ಶಿವ, ಇದು ಬ್ರಹ್ಮನಿಷ್ಟವಾದದ್ದು ಮತ್ತು ಗುಣತ್ರಯಾತ್ಮಕವಾದದ್ದು.

#ಯೋಗದ ಹೊಲಬ ನಾನೆತ್ತ ಬಲ್ಲೆನಯ್ಯಾ? ಯೋಗ ಶಿವಶಕ್ತಿ ಸಂಪುಟವಾಗಿಪ್ಪುದಲ್ಲದೆ, ಶಿವಶಕ್ತಿವಿಯೋಗವಪ್ಪ ಯೋಗವಿಲ್ಲವಯ್ಯಾ. ಹೃದಯಕಮಲದಲಿ ಇಪ್ಪಾತ ನೀನೆಯಲ್ಲದೆ, ಎನಗೆ ಬೇರೆ ಸ್ವತಂತ್ರವಿಲ್ಲ ಕೇಳಾ, ಕಪಿಲಸಿದ್ಧಮಲ್ಲಿಕಾರ್ಜುನ./
ಶಿವಶಕ್ತಿ ಸಂಪುಟವಾಗಿರುವುದೇ ಯೋಗ, ಶಿವಶಕ್ತಿವಿಯೋಗವು ಯೋಗವಿಲ್ಲವಯ್ಯಾ
ಎನ್ನುತ್ತಾರೆ ಶಿವಯೋಗಿ ಸಿದ್ಧರಾಮೇಶ್ವರರು.

#ಎನ್ನ ರೋಮಂಗಳೆಲ್ಲವು ನಯನಂಗಳಾದಡೆ ಸಾಲ್ವವು ನೋಡಾ, ಜಗದಂಬೆಯ ಪಾದಪಂಕಜದರ್ಶನಕ್ಕೆ.
 ಎನ್ನ ನಯನಂಗಳೆಲ್ಲ ಜ್ಞಾನಚಕ್ಷುಗಳಾದಡೆ ಸಾಲ್ವವು ನೋಡಾ, ಜಗದಂಬೆಯ ಪಾದಪಂಕಜಧ್ಯಾನಕ್ಕೆ.
 ಎನ್ನ ಜ್ಞಾನಚಕ್ಷುಗಳೆಲ್ಲ `ಅಖಂಡಾದ್ವಯ ಏಕೋನೇತ್ರ'ವಾದಡೆ ಕೂಡುವುದು ನೋಡಾ, ಜಗದಂಬೆಯ ಪಾದಪಂಕಜದಲ್ಲಿ ಭಾವವು,
 ಭವಹರ ಪುರಹರ ಕಪಿಲಸಿದ್ಧಮಲ್ಲೇಂದ್ರಾ.
- ಶಿವಯೋಗಿ ಸಿದ್ದರಾಮೇಶ್ವರರು

ಸಿದ್ಧರಾಮೇಶ್ವರರು ಅಲ್ಲಮ ಪ್ರಭುಗಳ ಸಂಪರ್ಕಕ್ಕೆ ಬಂದಮೇಲೆ , ಅವರೊಟ್ಟಿಗೆ ಕಲ್ಯಾಣಕ್ಕೆ ಬಂದು ಅಲ್ಲಿ ನಡೆಯುತ್ತಿದ್ದ ಕಾರ್ಯಗಳನ್ನು ನೋಡಿ ಅಚ್ಚರಿಗೊಂಡು  ಅನುಭವ ಮಂಟಪದ ವಿಚಾರ ಸಂಕೀರ್ಣದಲ್ಲಿ ಪಾತ್ರ ವಹಿಸಿ ಇಷ್ಟಲಿಂಗ ದೀಕ್ಷೆ ಪಡೆದು ಮಹಾನ್ ಶಿವಯೋಗಿ ಆದವರು. ಕಲ್ಯಾಣ ಕ್ರಾಂತಿಯ ನಂತರ ದಕ್ಷಿಣ ಕರ್ನಾಟಕಕ್ಕೆ ಧರ್ಮ ಪ್ರಸಾರ ಮಾಡುವುದರಲ್ಲಿ , ಅಲ್ಲಿ ಸ್ಥಳಾಂತರಗೊಂಡು ನೆಲೆಸಿದ ಶರಣರ ಯೋಗಕ್ಷೇಮದಲ್ಲಿ ಮಹತ್ತರ ಕೊಡುಗೆ ಕೊಟ್ಟವರು. ಈ ವಚನದಲ್ಲಿ ಅವರು ಪ್ರಶ್ನೆ ಮಾಡಿದ್ದಾರೆ ಅನುಭವ ಮಂಟಪದಲ್ಲಿ. ಇಬ್ಬರೂ ಒಂದೇ ಆದರೂ, ಸಾಕಾರ ಶಿವೆಯ ಮಂತ್ರ ಅನ್ನುವುದನ್ನು ಬಿಟ್ಟು ನಿರಾಕಾರ ಶಿವನ ಮಂತ್ರವಷ್ಟೇ ಏಕೆ ಅಂತ. ಅದಕ್ಕೆ ಅವರೇ ಉತ್ತರಿಸಿದ್ದಾರೆ ಮತ್ತೊಂದು ವಚನದಲ್ಲಿ.

#ಎಲ್ಲರು ಶಿವಮಂತ್ರವ ಜಪಿಸುವುದಕ್ಕಿಂತ, ಎಮ್ಮಮ್ಮನವರ ಮಂತ್ರವ ಜಪಿಸಿ ಸೇವೆಯಲ್ಲಿರಲಾರರು ನೋಡಾ, ಮನುಮುನೀಶ್ವರರು. ಎಲ್ಲರು ಶಿವಮಂತ್ರವ ಜಪಿಸುವುದಕ್ಕಿಂತ ಎಮ್ಮಮ್ಮನವರ ಮಂತ್ರ `ಸರ್ವಮಂಗಳಾಯೈ ಶಿವಾಯೈ ಜಗದಂಬಾಯೈ ಜಗದ್ವಂದ್ಯಜಗದಾಧಾರಾಯೈ ನಮೋ ನಮಃ!' ಎನ್ನರು ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ, ಮಹಾಪ್ರಮಥರು.
ಉತ್ತರ -
#"ಶಿವಾ ಭವಾನೀ ರುದ್ರಾಣೀ ಶಿವೋ ಮಹೇಶ್ವರಃ ಶಂಭುಃ" ಎಂಬಲ್ಲಿ,
ನಮ್ಮಮ್ಮನ ಶಿವನ ನಾಮ ಒಂದೆ ನೋಡಾ.
ವಿವೇಕದೃಷ್ಟಿಯಿಂದ ನೋಡಿದಡೆ,
ಅದು ಶಿವನ ಶಕ್ತಿಮಂತ್ರವಾಗಿ ಅರಿಯಬಂದಿತ್ತು ನೋಡಾ.
"ಓಂ ನಮಃ ಶಿವಾಯ, ನಮಃ ಶಿವಾಯೈ"
ಎಂಬುಭಯ ಮಂತ್ರ ಒಂದೆ ನೋಡಾ,
ಕಪಿಲಸಿದ್ಧಮಲ್ಲಿಕಾರ್ಜುನಾ
ಸಮಗ್ರ ವಚನ ಸಂಪುಟ: 4   ವಚನದ ಸಂಖ್ಯೆ: 1926 

ಶೃಷ್ಟಿರಚನೆಯಲ್ಲಿ, ಓಂಕಾರ ಸ್ವರೂಪದಲ್ಲಿ ಶಕ್ತಿಯ ವಿವಿಧ ರೂಪಗಳ ಅರಿವು ಶರಣರಿಗೆ ಇತ್ತು.
#ಓಂಕಾರವೇ ಶಿವ,................
ಈ ಷಡಕ್ಷರವೆ ಷಡ್ವಿಧಬ್ರಹ್ಮವೆಂದು ಹೇಳಲ್ಪಟ್ಟಿತ್ತು ನೋಡಾ. ಮತ್ತೆ 
-ನಕಾರವೇ ಕ್ರಿಯಾಶಕ್ತಿ:
ಮಕಾರವೇ ಜ್ಞಾನಶಕ್ತಿ, ಶಿಕಾರವೇ ಇಚ್ಛಾಶಕ್ತಿ, 
ವಾಕಾರವೇ ಆದಿಶಕ್ತಿ, ಯಕಾರವೇ ಪರಶಕ್ತಿ, ಓಂಕಾರವೇ ಚಿಚ್ಛಕ್ತಿ, ಇಂತಿವು ಮಂತ್ರಶಕ್ತಿಸ್ವರೂಪೆಂದರಿವುದು ನೋಡಾ.
...................
-ತೋಂಟದ ಸಿದ್ಧಲಿಂಗ ಶಿವಯೋಗಿಗಳು

ಶಿವಯೋಗಿಯ ಸಾಧನೆಯಲ್ಲಿ ಶಕ್ತಿಯ ಮಹತ್ವದ ಅರಿವು ಶರಣರು ವಿವರಿಸಿದ್ದಾರೆ.
#ನಿರಾಮಯವೆಂಬ ಭಕ್ತನ ಅಂಗದಲ್ಲಿ ಝೇಂಕಾರವೆಂಬ ಜಂಗಮವು ಜಂಗಿಟ್ಟು ನಡೆಯಲೊಡನೆ ನಿರಂಜನವಾಯಿತ್ತು. ಆ ನಿರಂಜನದೊಡನೆ ನಿರಾಕಾರವಾಯಿತ್ತು. 
.....................
ನಾದಪ್ರಭೆಯು ಭಕ್ತ-ಮಹೇಶ್ವರ, 
ಬಿಂದು ಪ್ರಭೆಯು ಪ್ರಸಾದಿ-ಪ್ರಾಣಲಿಂಗಿ, 
ಕಳಾಪ್ರಭೆಯು ಶರಣ-ಐಕ್ಯ. 
ಇಂತೀ ಷಡ್ವಿಧಮೂರ್ತಿಗಳಿಗೆ ಷಡ್ವಿಧಲಿಂಗವು. ಅವು ಆವಾವುಯೆಂದೊಡೆ: ಆಚಾರಲಿಂಗ ಗುರುಲಿಂಗ ಶಿವಲಿಂಗ ಜಂಗಮಲಿಂಗ ಪ್ರಸಾದಿಲಿಂಗ ಮಹಾಲಿಂಗ. ಈ ಷಡ್ವಿಧಲಿಂಗಕು ಷಡ್ವಿಧ ಶಕ್ತಿಯರು ಅವು ಆವಾವುಯೆಂದೊಡೆ: ಕ್ರಿಯಾಶಕ್ತಿ, ಜ್ಞಾನಶಕ್ತಿ, ಇಚ್ಫಾಶಕ್ತಿ, ಆದಿಶಕ್ತಿ, ಪರಾಶಕ್ತಿ, ಚಿತ್‍ಶಕ್ತಿ. ಇಂತೀ ಶಕ್ತಿಯರಿಗೂ ಷಡ್ವಿಧಭಕ್ತಿ. ...........
- ಶರಣ ಜಕ್ಕಣ್ಣಯ್ಯ 
-✍️ Dr Prema Pangi
#ಪ್ರೇಮಾ_ಪಾಂಗಿ,#ಅಲ್ಲಮ_ಪ್ರಭುಗಳು
#ಶಿವಶಕ್ತಿ_ ಸಂಪುಟವೆಂಬುದೆಂತು
Picture post designed and created by me. A small service to popularise Vachana Sahitya.

Comments

Popular posts from this blog

Shika chakra or Bindu chakra:Bindu visarga

Hrit Chakra or Eight Petals Chakra

A-Ka-Ta triangle or Akshara Brahma