ಶಿವಯೋಗ Part 4 - ಶಿವಯೋಗದಲ್ಲಿ ಇಷ್ಟಲಿಂಗ

ಶಿವಯೋಗ 4  - 
 ಶಿವಯೋಗದಲ್ಲಿ ಇಷ್ಟಲಿಂಗ
ಶಿವಯೋಗ  4 
*ಶಿವಯೋಗದಲ್ಲಿ ಇಷ್ಟಲಿಂಗ*:
ಶಿವದೇವಾಲಯಗಳಲ್ಲಿ ಪ್ರತಿಷ್ಟಾಪಿತವಾದುದು ಸ್ಥಾವರಲಿಂಗ. ಅದೇ ಆಕಾರದ ಎತ್ತಿಕೊಂಡು ಚಲಿಸಲಿಕ್ಕೆ ಬರುವಂತಹ, ಸ್ಥಾವರಲಿಂಗದ ಚುಳುಕಾದ ರೂಪ ಹೊಂದಿರುವುದು ಚರಲಿಂಗ. ಸದಾಕಾಲ ದೇಹದ ಮೇಲೆ ಧರಿಸುವಂತಹ, ಗೋಳಾಕಾರದ ಕಪ್ಪುಬಣ್ಣದ ಕಂತೆಯ ಆವರಣವನ್ನು ಹೊಂದಿರುವುದು ಇಷ್ಟಲಿಂಗ.

ಸಾಮಾಜಿಕ ಸಮಾನತೆಯನ್ನು ಸಾಧಿಸಲೋಸುಗ, ವಿಶ್ವಗುರು ಬಸವಣ್ಣನವರು ಇಷ್ಟಲಿಂಗವನ್ನು ರೂಪಿಸಿಕೊಟ್ಟು, ತನ್ಮೂಲಕ ಜಾತಿವೈಷಮ್ಯ, ವರ್ಗಭೇದ, ಅಸಮಾನತೆ, ಲಿಂಗಭೇದಗಳನ್ನು ತೊಡೆದು ಹಾಕಲು ಯತ್ನಿಸಿದರು. ಹೀಗೆ ಇಷ್ಟಲಿಂಗವು ಸಾಮಾಜಿಕ ಸಮಾನತೆಗೆ ಪ್ರಮುಖ ಸಾಧನವಾಯಿತು. ಇಷ್ಟಲಿಂಗವು ವೈಯಕ್ತಿಕ ಉಪಾಸನಾ ವಸ್ತು. ಏಕಾಂತದಲ್ಲಿ ಪೂಜಿಸುವ ಸಾಕಾರವು. ತನ್ನದೇ ಒಳಗಿನ ಪ್ರಾಣಲಿಂಗದ, ಭಾವಲಿಂಗದ ಪೂಜೆಯಾದ ಕಾರಣ ಲಿಂಗಪೂಜೆಯು ಅಹಂಗ್ರಹೋಪಾಸನೆ. ಇಷ್ಟಲಿಂಗದ ಕಂಥೆ ಯೊಳಗೆ ಇರುವ ಹುಟ್ಟುಲಿಂಗವು ಆತ್ಮನ ಕುರುಹು. ಆತ್ಮನ ಕುರುಹಾದ ಇಷ್ಟಲಿಂಗವು ಪಿಂಡಾಂಡದ ಆಕಾರದಲ್ಲಿ, ಶಾಂಭವೀ ಮುದ್ರೆಯ ಆಕಾರದಲ್ಲಿ ಸಾಕಾರವಾಗಿದೆ. ಇಷ್ಟಲಿಂಗದಲ್ಲಿ  ದೇವ-ದೇವತಾ ವಿಗ್ರಹ ಪೂಜೆಯಲ್ಲಿ ಇರುವ  ಆಹ್ವಾನ-ವಿಸರ್ಜನೆ ಗಳಿಲ್ಲ. ಪರಮಾತ್ಮನು ಸದಾ ಸರ್ವಾಂತರ್ಗತ, ಸರ್ವಸಮರಸನಾಗಿ ಹೊರಒಳಗೆ ಅವ್ಯಾಹತವಾಗಿ ತುಂಬಿ ತುಳುಕುತ್ತಿರುವಾಗ, ಪರಮಾತ್ಮನನ್ನು ಕರೆಯುವುದಾದರು ಎಲ್ಲಿಂದ? ಕಳಿಸುವುದಾದರೂ ಎಲ್ಲಿಗೆ! ಎನ್ನುತ್ತಾರೆ ಶರಣರು.

#ಆಹ್ವಾನಿಸಿ ಕರೆವಲ್ಲಿ ಎಲ್ಲಿರ್ದನೋ,
ಈರೇಳು ಲೋಕ ಹದಿನಾಲ್ಕು ಭುವನಂಗಳನೊಳಗೊಂಡಿಪ್ಪ ದಿವ್ಯವಸ್ತು ?
ಮತ್ತೆ ವಿಸರ್ಜಿಸಿ ಬಿಡುವಾಗ ಎಲ್ಲಿ ಅಡಗಿರ್ದನೋ ಮುಳ್ಳೂರ ತೆರಹಿಲ್ಲದಿರ್ಪ ಅಖಂಡ ವಸ್ತು ?
ಬರಿಯ ಮಾತಿನ ಬಳಕೆಯ ತೂತ ಜ್ಞಾನವ ಬಿಟ್ಟು, ನೆಟ್ಟನೆ ತನ್ನ ಕರಸ್ಥಲದೊಳಗಿರುತಿರ್ಪ ಇಷ್ಟಲಿಂಗವ ದಿಟ್ಟಿಸಿ ನೋಡಲು
ಅಲ್ಲಿ ತನ್ನ ಮನಕ್ಕೆ ಮನ ಸಂಧಾನವಾದ ದಿವ್ಯ ನಿಶ್ಚಯ ಒದಗೆ, ಈ ದಿವ್ಯ ನಿಶ್ಚಯದಿಂದ ಕುಳವಡಗಿ ಅದ್ವೈತವಪ್ಪುದು! 
ಇದು ಕಾರಣ, ನಮ್ಮ ಕೂಡಲಸಂಗನ ಶರಣ ಆಹ್ವಾನ ವಿಸರ್ಜನೆಯೆಂಬುಭಯ ಜಡತೆಯ ಬಿಟ್ಟು, ತಮ್ಮ ತಮ್ಮ ಕರಸ್ಥಳದಲ್ಲಿ ನಿಶ್ಚಯಿಸಿದವರಿಗೆ ಸ್ವಯಂ ಲಿಂಗವಾದ ಕಾಣಿರೋ!
- ಗುರು ಬಸವಣ್ಣನವರು /-ಬ.ಷ.ವ. ೧೨೧೫ 

ಬಸವಣ್ಣನವರ ಸ್ವಾನುಭವ ಚಿಂತನೆಯ ಫಲವಾಗಿ ಇಷ್ಟಲಿಂಗದ ಆವಿಷ್ಕಾರವಾಗಿ ಇಷ್ಟಲಿಂಗವು  ಉಪಾಸನೆಗೆ ದೇವರಾಗಿಯೂ, ದೀನ ದಲಿತರಾದಿಯಾಗಿ ಎಲ್ಲ ಜಾತಿ ಧರ್ಮದವರಿಗೂ ದೀಕ್ಷೆಯಲ್ಲಿ ಕೊಡಮಾಡುವ, ಸದಾಕಾಲ ಅಂಗದ ಮೇಲೆ ಧರಿಸುವ ಪೂಜಿತವಾಗುವ ಮತ್ತು  ಲಿಂಗಾಯತರ ಧರ್ಮದ ಕುರುಹು ವಾದಾಗ ಬಸವಣ್ಣನವರಿಗೆ ಆದ ಆನಂದ ಅಪರಿಮಿತ, ವರ್ಣಿಸಲಸದಳ.
ಆ ಆನಂದದ ಉತ್ತುಂಗದಲ್ಲಿದ್ದ ಬಸವಣ್ಣನವರು ಆರಂಭದ ದಿನಗಳಲ್ಲಿ ಶೈವಸಂಸ್ಕೃತಿ  ಮೂಲದ ಅಷ್ಟವಿಧಾರ್ಚನೆ ಷೋಡಶೋಪಚಾರಗಳನ್ನು ಇಷ್ಟಲಿಂಗ ಪೂಜೆಗೂ ಅಳವಡಿಸಿಕೊಂಡರು. ಬಸವಣ್ಣನವರು, ಅಕ್ಕಮಹಾದೇವಿ ಮುಂತಾದವರೆಲ್ಲ ಹುಟ್ಟಿದ್ದು ಶಿವೋಪಾಸಕರ ಮನೆತನಗಳಲ್ಲೇ. ಈ ಕಾರಣ ವಚನಗಳನ್ನು ಸ್ಥಲದ ಪ್ರಕಾರ ಅರ್ಥ ಮಾಡಿಕೊಳ್ಳದೇ, ಬಿಡಿ ಬಿಡಿಯಾಗಿ ಅಭ್ಯಸಿಸುವವರಿಗೆ ಎರಡು ಸಂಪೂರ್ಣ ವೈರುದ್ಧಮಯ ವಚನಗಳು ಎದುರಾಗುತ್ತವೆ.
ಭಕ್ತಸ್ಥಲದ ಬಹಿರಂಗದ ಪೂಜೆಯಲ್ಲಿ ಅಷ್ಟವಿಧಾರ್ಚನೆ ಮತ್ತು ಷೋಡಷೋಪಚಾರಗಳ ಮೂಲಕ ಇಷ್ಟಲಿಂಗ ಪೂಜಿಸಬೇಕೆಂದು ಸೂಚಿಸಿದ್ದರೆ, ಪ್ರಾಣಲಿಂಗಿ, ಶರಣ, ಐಕ್ಯ ಸ್ಥಲಗಳ ಅಂತರಂಗ ಪೂಜೆಯಲ್ಲಿ ಅಷ್ಟವಿಧಾರ್ಚನೆ ಮತ್ತು ಷೋಡಷೋಪಚಾರಗಳನ್ನು ಅಲ್ಲಗಳೆಯಲಾಗಿದೆ. 
ಅಷ್ಟವಿಧಾರ್ಚನೆ:
ಅಷ್ಟವಿಧಾರ್ಚನೆ ಎಂದರೆ  ಎಂಟು ಪದಾರ್ಥಗಳಿಂದ ಮಾಡುವ ಪೂಜೆ: ಅವು- ೧) ಜಲ, ೨) ಗಂಧ, ೩) ಅಕ್ಷತೆ, ೪) ಪುಷ್ಪ, ೫) ಧೂಪ, ೬) ದೀಪ, ೭) ನೈವೇದ್ಯ, ೮) ತಾಂಬೂಲ.
ಷೋಡಷೋಪಚಾರ:
ಷೋಡಶೋಪಚಾರಗಳು ಯಾವುವೆಂದರೆ: ೧) ಸುಖತಲ್ಪ, ೨) ಸುವಸ್ತ್ರ,  ೩) ಆಭರಣ, ೪) ಅನುಲೇಪನ, ೫) ಛತ್ರ, ೬) ಚಾಮರ, ೭) ವ್ಯಂಜನ,  ೮) ದರ್ಪಣ, ೯) ನಾದ, ೧೦) ವಾದ್ಯ, ೧೧) ನೃತ್ಯ, ೧೨) ಗೀತ, ೧೩) ಸ್ತೋತ್ರ, ೧೪) ಪುಷ್ಪಾಂಜಲೀ,  ೧೫) ಪ್ರಣಾಮ, ೧೬) ಪ್ರದಕ್ಷಿಣ,
ಅಷ್ಟವಿಧಾರ್ಚನೆಯ ಮೂಲಕ ಜಲ, ಗಂಧ, ಅಕ್ಷತೆ, ಪುಷ್ಪ, ಧೂಪ, ದೀಪ,ನೈವೇದ್ಯ,ತಾಂಬೂಲಗಳನ್ನು ಲಿಂಗಕ್ಕೆ  ಅರ್ಪಿಸುವುದು ಮತ್ತು ಅದರ ಪ್ರತಿಫಲವಾಗಿ ಪ್ರಸಾದವನ್ನು ಪಡೆಯುವುದು. ಅದಕ್ಕೆ ಗುರು ಬಸವಣ್ಣನವರ ಭಕ್ತಿಸ್ಥಲದ ಈ ವಚನಗಳೇ ಸಾಕ್ಷಿ.
ಬಸವಣ್ಣನವರ ವಚನಗಳಲ್ಲಿ
ಅಷ್ಟವಿಧಾರ್ಚನೆ ಷೋಡಶೋಪಚಾರಗಳನ್ನು ಪುಷ್ಟೀಕರಿಸುವ ವಚನಗಳು.
1.
#ಅಷ್ಟವಿಧಾರ್ಚನೆ ಷೋಡಶೋಪಚಾರವ ಮಾಡುವುದು,
ಮಾಡಿದ ಪೂಜೆಯ ನೋಡುವುದಯ್ಯಾ.
ಶಿವತತ್ವಗೀತವ ಪಾಡುವುದು,
ಶಿವನ ಮುಂದೆ ನಲಿದಾಡುವುದಯ್ಯಾ.
ಭಕ್ತಿಸಂಭಾಷಣೆಯ ಮಾಡುವುದು,
ನಮ್ಮ ಕೂಡಲಸಂಗನ ಕೂಡುವುದು. / 155
2.
#ಅಷ್ಟವಿಧಾರ್ಚನೆ ಷೋಡಶೋಪಚಾರವಲ್ಲದೆ ನಿಮ್ಮ ಮುಟ್ಟಲರಿಯದರ ಕಂಡಡೆ, ಅಯ್ಯ ಎಂತೆಂಬೆನವರ ಆವ ಭಾವದಲ್ಲಿ, ಆವ ಜ್ಞಾನದಲ್ಲಿ, ಆವ ಮುಖದಲ್ಲಿ ಅರಿವವರದಾರಯ್ಯಾ ಏನೆಂಬೆ ನಿಮ್ಮಲ್ಲಿ ಸಮ್ಯಕ್ಕರಾದ ಸತ್ಯಶರಣರ ಕಂಡು,
ಕೂಡಲಸಂಗಮದೇವಾ, ಅವರನಯ್ಯ ಎಂಬೆನು.
3.
#ಎನ್ನಿಷ್ಟಲಿಂಗಕ್ಕೆ ಅಷ್ಟವಿಧಾರ್ಚನೆ ಷೋಡಶೋಪಚಾರಂಗಳ ಮಾಡುವೆನು.
ಅವಾವುವಯ್ಯಾ ಎಂದಡೆ;
ಜಲಗಂಧಾಕ್ಷತಂ ಚೈವ ಪುಷ್ಪಂ ಚ ಧೂಪದೀಪಯೋ ನೈವೇದ್ಯಂ ಚೈವ ತಾಂಬೂಲಂ ಯಥೇಚ್ಛಾಷ್ಟವಿಧಾರ್ಚನಂ
ಇನ್ನು ಷೋಡಶೋಪಚಾರಗಳು;
ಸುಖತಲ್ಪಂ ಸುವಸ್ತ್ರಂ ಚ ಆಭರಣಾನುಲೇಪನಂ
ಛತ್ರಚಾಮರವ್ಯಜನಂ 
ದರ್ಪಣಂ ನಾದವಾದ್ಯಯೋ
ನೃತ್ಯಂ ಗೀತಂ ತಥಾ ಸ್ತೋತ್ರಂ ಪುಷ್ಪಾಂಜಲೀ ಪ್ರಣಾಮಕಂ ಪ್ರದಕ್ಷಿಣಂ ಚ ಮೇ ಯಕ್ತಂ 
ಷೋಡಶಂಚೋಪಚಾರಕಂ
ಈ ಕ್ರಮವಿಡಿದು ಇಷ್ಟಲಿಂಗಾರ್ಚನೆಯ ಮಾಡಿ ನಿಮ್ಮಲ್ಲಿ ಕೂಡುವೆನು,
ಕೂಡಲಸಂಗಮದೇವಾ. / 368
4.
  #ಅಷ್ಟವಿಧಾರ್ಚನೆ ಷೋಡಶೋಪಚಾರವ
ಅಂದಂದಿನ ಕೃತ್ಯವ ಅಂದಂದಿಗೆ ಆನು ಮಾಡಿ ಶುದ್ಧನಯ್ಯಾ.
ಹಂಗು ಹರಿಯಿಲ್ಲದ ಕಾರಣ,
ಕೂಡಲಸಂಗಮದೇವ ನಿಷ್ಫಲದಾಯಕನಾಗಿ
ಆನು ಮಾಡಿ ಶುದ್ಧನಯ್ಯಾ. / 153

 ಬಸವಣ್ಣನವರ ಕೆಲವು ಭಕ್ತಿ ಸ್ಥಲದ ವಚನಗಳಲ್ಲಿ ಮಾತ್ರ  ಅಷ್ಟವಿಧಾರ್ಚನೆ ಷೋಡಶೋಪಚಾರಗಳನ್ನು ಮಾಡಬೇಕೆಂದು ಹೇಳುತ್ತವೆ. ಈ ಆಚರಣೆಗಳು ಅಲ್ಲಮಪ್ರಭುದೇವರು ಅನುಭವಮಂಟಪಕ್ಕೆ ಬರುವವರೆಗೂ ಮುಂದುವರೆದಿತ್ತು. 
ಅಲ್ಲಮ ಪ್ರಭುದೇವರು ಬಸವಣ್ಣನವರ ಮಹಾಮನೆಗೆ ಬಂದಾಗ ಬಸವಣ್ಣನವರು ಇಷ್ಟಲಿಂಗಪೂಜೆಯಲ್ಲಿ ನಿರತರಾಗಿದ್ದರು. ಲಿಂಗಕ್ಕೆ ಅಷ್ಟವಿಧಾರ್ಚನೆ ಷೋಡಶೋಪಚಾರಗಳ ಆಚರಣೆಯಲ್ಲಿದ್ದ ಬಸವಣ್ಣನವರಿಗೆ ಪ್ರಭುದೇವರನ್ನು ಇದಿರುಗೊಂಡು ಸ್ವಾಗತಿಸಲು ಬಹಳ ಸಮಯ ಹಿಡಿಯಿತು. ಪ್ರಭುದೇವರಿಗೆ ಬಹಳ ಹೊತ್ತು ಕಾಯ್ದು ಸಹನೆ ಮೀರಿ ಪ್ರಭುದೇವರು ಹೀಗೆ ಹೇಳಿದ್ದಾರೆ.

#ಹರಹರಾ ನೀವಿಪ್ಪಠಾವನರಿಯದೆ,
ಅಷ್ಟವಿಧಾರ್ಚನೆ ಷೋಡಶೋಪಚಾರ ಮಾಡುವರ ದಿಟ್ಟತನವ ನೋಡಾ !
ಶಿವಶಿವಾ ನಿಮ್ಮ ಶ್ರೀಮುಖವನರಿಯದೆ
ಸಕಲ ಪದಾರ್ಥವ ನಿಮಗರ್ಪಿಸಿ
ಪ್ರಸಾದವ ಕೊಂಡೆವೆಂದೆಂಬವರ ಎದೆಗಲಿತನವ ನೋಡಾ !
ಹಗರಣದ ಹಣ್ಣ ಮೆದ್ದು ಹಸಿವು ಹೋಯಿತ್ತೆಂದಡೆ
ಆರು ಮೆಚ್ಚುವರು ಹೇಳಾ ಗುಹೇಶ್ವರಾ ? / 1560

ಎಂದು ಪ್ರಭುದೇವರು ಬಸವಣ್ಣನವರನ್ನು ವಿಚಾರಿಸುತ್ತಾರೆ. ಶರಣರ ಪ್ರಕಾರ ಜಂಗಮವೇ ಲಿಂಗ ಎಂದು ನೆನಪಿಸುತ್ತಾರೆ. ಪ್ರಭುದೇವರಂಥ ಜಂಗಮಲಿಂಗವೇ ಮನೆಗೆ ಬಂದಿರುವಾಗ ಬಸವಣ್ಣನವರು ಒಳಗೆ ಅಷ್ಟವಿಧಾರ್ಚನೆ ಷೋಡಶೋಪಚಾರದಲ್ಲಿ ನಿರತರಾಗಿದ್ದು ಸರಿಯಲ್ಲವೆಂದು ಎಂದು ತಿಳಿಸುತ್ತಾರೆ. ಆಗ ಬಸವಣ್ಣನವರು ಎಚ್ಚೆತ್ತು

#ಅಷ್ಟವಿಧಾರ್ಚನೆ ಷೋಡಶೋಪಚಾರಂಗಳನು,
ಅರಸರಿಯದ ಬಿಟ್ಟಿ ಮಾಡುವೆನು.
ಎನ್ನ ತಾಗಿದ ಸುಖವ ಜಂಗಮಕ್ಕರ್ಪಿಸಲರಿಯದ ಉಪಚಾರಿಯಾನು.
ಸ್ಥಾವರ, ಜಂಗಮವನರಿಯದ ಪೂಜಕ ನಾನು.
ಮತ್ತೆ ನಾಚದೇ ಕೂಡಲಸಂಗಮದೇವಯ್ಯಾ,
ಜಂಗಮವೆನ್ನ ಪ್ರಾಣಲಿಂಗವೆಂಬೆನು. / 152

ತಮ್ಮನ್ನು ತಾವೇ ಪರೀಕ್ಷೆಗೊಳಪಡಿಸಿಕೊಂಡು ಲಿಂಗಕ್ಕೆ ಅಷ್ಟವಿಧಾರ್ಚನೆ ಷೋಡಶೋಪಚಾರಗಳಂಥಾ ಆಚರಣೆಗಳು ಡಾಂಭಿಕ ಆಡಂಬರವೆಂದು ತಿಳಿದು ಈ ರೀತಿಯಾಗಿ ನೊಂದುಕೊಂಡಿದ್ದಾರೆ.

#ಎಳ್ಳಿಲ್ಲದ ಗಾಣವನಾಡಿದ ಎತ್ತಿನಂತಾಯಿತ್ತೆನ್ನ ಭಕ್ತಿ.
ಉಪ್ಪ ಅಪ್ಪುವಿನಲ್ಲಿ ಅದ್ದಿ ಮೆಲಿದಂತಾಯಿತ್ತೆನ್ನ ಭಕ್ತಿ.
ಕೂಡಲಸಂಗಮದೇವಾ,
ಆನು ಮಾಡದೆನೆಂಬ ಕಿಚ್ಚು ಸಾಲದೆ / 386

#ಅಷ್ಟವಿಧಾರ್ಚನೆ ಷೋಡಶೋಪಚಾರವ
ಮಾಡುವ ಹಮ್ಮಿನಲ್ಲಿ ಬೆಂದೆನಯ್ಯಾ.
ಲಿಂಗವೆಂದರಿಯದೆ, ಜಂಗಮವೆಂದರಿಯದೆ,
ಪ್ರಸಾದವೆಂದರಿಯದೆ ಆನು ಬೆಂದೆನಯ್ಯಾ.
ಕೂಡಲಸಂಗಮದೇವಾ, 
ಆನು ಮಾಡುವುದೆಲ್ಲವೂ
ಉಪಚಾರವಯ್ಯಾ. / 154

#ಎರೆದಡೆ ನನೆಯದು, ಮರೆದಡೆ ಬಾಡದು,
ಹುರುಳಿಲ್ಲ ಹುರುಳಿಲ್ಲ ಲಿಂಗಾರ್ಚನೆ;
ಕೂಡಲಸಂಗಮದೇವಾ, ಜಂಗಮಕ್ಕೆರೆದಡೆ ಸ್ಥಾವರ ನನೆದಿತ್ತು. / 374

ಹೀಗೆ ಬಸವಣ್ಣನವರ ಆಗಾಧವಾದ ವ್ಯಕ್ತಿತ್ವ,  ಹಮ್ಮುಬಿಮ್ಮಿನದಲ್ಲ, ಸರಳ ನೇರ ನಡೆ-ನುಡಿ. ಶ್ರೇಷ್ಟ ವೈಚಾರಿಕ ವಿಚಾರಗಳನ್ನು ಬಹಳ ಸಲೀಸಾಗಿ ಅಂಗೀಕರಿಸಿ ಅಳವಡಿಸಿಕೊಂಡರು. ಹಾಗಾಗಿ ಕಲ್ಯಾಣಕ್ಕೆ ಪ್ರಭುದೇವರ ಆಗಮನದ ನಂತರ ಬಸವಣ್ಣನವರು ಅಷ್ಟವಿಧಾರ್ಚನೆ ಷೋಡಶೋಪಚಾರಗಳಂಥ ಆಚರಣೆಗಳನ್ನು ನಿಲ್ಲಿಸಿ, ಸರಳ ಸಹಜ ಲಿಂಗಾಂಗಯೋಗವನ್ನು 
ಆಚರಿಸಿದರು. ಗುರು ಬಸವಣ್ಣನವರು  ಅಂತರಂಗ ಶುದ್ಧಿಯಿಲ್ಲದೆ ಮಾಡುವ ಪೂಜೆ ವ್ಯರ್ಥ ವೆನ್ನುತ್ತಾರೆ. ಮನದಲ್ಲಿ ಶಿವ, ಜೀವ ಎರಡೂ ಎಂಬುದು ಹೋಗಿ ಒಂದೇ ಆಗಬೇಕು. ಏಕಾತ್ಮವಾಗಬೇಕು ಎನ್ನುತ್ತಾರೆ.  ಈ ಬದಲಾವಣೆಯಿಂದ ಸಂತುಷ್ಟರಾದ ಅಲ್ಲಮಪ್ರಭುಗಳು ಬಸವಣ್ಣರನ್ನು ತುಂಬಾ ಮೆಚ್ಚಿ ಬಸವಣ್ಣಂಗೆ ನಮೋ ನಮೋ ಎನ್ನುತ್ತಾರೆ. ಲಿಂಗ ಜಂಗಮದ ಸಕೀಲವ ಅರಿತು ಲಿಂಗಾರ್ಚನೆ ಜಂಗಮಾರ್ಚನೆ ಮಾಡಬೇಕು ಎನ್ನುತ್ತಾರೆ.


#ಲಿಂಗ ಜಂಗಮವೆಂಬ ಸಕೀಲವ ಅರಿದು
ಲಿಂಗಾರ್ಚನೆ ಜಂಗಮಾರ್ಚನೆಯ ಮಾಡಲು
ಆ ಲಿಂಗ ಜಂಗಮದೊಳಡಗಿ,
ಆ ಜಂಗಮ ಪರಾಪರವೆಂದರಿದು ತೋರಿತ್ತು-
ಆ ಜಂಗಮವೆಂಬ ಘನವು ನಿಮ್ಮೊಳಡಗಿದ ಕಾರಣ,
ಗುಹೇಶ್ವರಾ, ನಿಮ್ಮ ಅನುವನರಿದು
ಸಂಗನಬಸವಣ್ಣನು ತನ್ನ ಪ್ರಸಾದವನಿಕ್ಕಿದಡೆ
ನಿಮ್ಮ ಪ್ರಮಥರೆಲ್ಲರು ಜಯ ಜಯ ಎನುತಿರ್ದರಾಗಿ
ನಾನು ಬಸವಣ್ಣಂಗೆ ನಮೋ ನಮೋ ಎನುತಿರ್ದೆನು. / 1381

ಅಷ್ಟವಿಧಾರ್ಚನೆ ಷೋಡಶೋಪಚಾರ ಮಾಡುವುದನ್ನು ಖಂಡಿಸುವ ವಚನಗಳು
 ಅಲ್ಲಮಪ್ರಭುದೇವರು ತಮ್ಮ ಒಂದು ವಚನದಲ್ಲಿ 
1.

#ಮಜ್ಜನಕ್ಕೆರೆದು ಫಲವ ಬೇಡುವರಯ್ಯಾ,
ತಮಗೆಲ್ಲಿಯದೊ ಆ ಫಲವು ಸಿತಾಳಕ್ಕಲ್ಲದೆ?
ಪತ್ರೆ ಪುಷ್ಪದಲ್ಲಿ ಪೂಜಿಸಿ ಫಲವ ಬೇಡುವರಯ್ಯಾ,
ತಮಗೆಲ್ಲಿಯದೊ ಆ ಫಲವು ಗಿಡಗಳಿಗಲ್ಲದೆ ?
ಸೈಯಿಧಾನ್ಯವನರ್ಪಿಸಿ ಫಲವ ಬೇಡುವರಯ್ಯಾ
ತಮಗೆಲ್ಲಿಯದೊ ಆ ಫಲವು ಹದಿನೆಂಟು ಧಾನ್ಯಕ್ಕಲ್ಲದೆ ?
ಲಿಂಗದೊಡವೆಯ ಲಿಂಗಕ್ಕೆ ಕೊಟ್ಟು,
ಫಲವ ಬೇಡುವ ಸರ್ವ ಅನ್ಯಾಯಿಗಳನೇನೆಂಬೆ ಗುಹೇಶ್ವರಾ ! / 1264

ಸಿತಾಳ ವೆಂದರೆ ಪವಿತ್ರ ಜಲ, ಮಜ್ಜನಕ್ಕೆರೆಯಲು ಬಳಸುವ ಶುದ್ಧೋದಕ.
ಮಜ್ಜನದ ಪುಣ್ಯಫಲ ತನ್ನನ್ನೇ ಅರ್ಪಿಸಿಕೊಂಡ ಆ ಪವಿತ್ರ ಜಲಕ್ಕೆ ಬರುತ್ತದೆ. ಪತ್ರೆ ಪುಷ್ಪಗಳಿಂದ ದೇವರನ್ನು  ಪೂಜಿಸಿದರೆ  ಆ ಪುಣ್ಯಫಲವು ಪತ್ರೆ ಪುಷ್ಪಗಳನ್ನು ಅರ್ಪಿಸಿದ ಗಿಡ ಮರಗಳಿಗೆ ಬರುತ್ತದೆ. ನೈವಿದ್ಯೆಯ ಪುಣ್ಯದ ಫಲ ಅಡಿಗೆಗೆ ಉಪಯೋಗಿಸಿದ ತಮ್ಮನ್ನೇ ಅರ್ಪಿಸಿಕೊಂಡ ಹದಿನೆಂಟು ಧಾನ್ಯಗಳಿಗೆ ಬರುತ್ತದೆ.
ಪೂಜೆಯಲ್ಲಿ ಬಳಸಲಾಗುವ ಎಲ್ಲ ಪದಾರ್ಥಗಳು ಲಿಂಗದ ಒಡವೆಗಳು. ಮಹಾಲಿಂಗದಿಂದಲೇ ರಚಿತವಾದ ಪ್ರಕೃತಿ ಯನ್ನು  ಸಿಂಗರಿಸುವದರಿಂದ ಇವು ಲಿಂಗದ ಒಡವೆಗಳು ಎನ್ನುತ್ತಾರೆ. ಭಕ್ತಿ ವಿರಹಿತರಾದ ಜನ ತಮ್ಮದಲ್ಲದ ವಸ್ತುಗಳನ್ನು ಲಿಂಗದೇವನಿಗೆ ಸೇರಿದ ಅವನದೇ ಆದ ವಸ್ತುಗಳನ್ನು ಇತ್ತು ತಮಗಾಗಿ ಫಲ ಬೇಡುತ್ತಾರೆ. ಪೂಜೆಯಲ್ಲಿ ಉಪಯೋಗಿಸಿದ ಪರಿಕರಗಳೆಲ್ಲವೂ ಆತನ ಕೊಡುಗೆ ಎಂಬ ಪ್ರಜ್ಞೆ ಇಲ್ಲದವರನ್ನು  ಪ್ರಭುದೇವರು 'ಸರ್ವಅನ್ಯಾಯಿಗಳು' ಎಂದು ಕರೆದು ಅಂಥವರಿಗೆ ಎನು ಹೇಳುವದು ಎನ್ನುತ್ತಾರೆ. 
 ದೇವರ ವಸ್ತುವನ್ನು ಭಕ್ತಿಭಾವದಿಂದ ಅರ್ಪಿಸಿ  ಪ್ರತಿಯಾಗಿ ಏನನ್ನೂ ಅಪೇಕ್ಷಿಸದಿರುವುದು "ನಿಷ್ಕಾಮ ಭಕ್ತಿ". ಎಲ್ಲವೂ ದೇವನದೆಂದು ಪರಿಭಾವಿಸಿ  ಭಕ್ತಿಯಿಂದ ಅರ್ಪಿಸಿ ಸಂತೋಷಿಸುವುದು "ನೈಷ್ಠಿಕ ಭಕ್ತಿ". ಭಕ್ತಿಮಾರ್ಗ ಬಹಳ ಸುಲಭ. ಆಡುತ್ತಾ ಹಾಡುತ್ತಲೂ ಅಥವಾ ಮೌನವಾಗಿಯೂ ಪೂಜೆ ಮಾಡಬಹುದು. ಹೂ ಹಣ್ಣು ಧೂಪ ದೀಪ ನೈವಿದ್ಯೆ ಯಾವುದೇ ಪರಿಕರ ಇಲ್ಲದೆಯೂ ಪೂಜೆ ಮಾಡಬಹುದು. ಬೇಕಾಗಿರುವುದು ನಿರ್ಮಲ ಭಕ್ತಿ ಮತ್ತು ನೈತಿಕ ನಿಷ್ಟೆ ಅಷ್ಟೇ. "ನಿಜವಾದ ದೇವರು ಪೂಜೆಗೆ ಒಳಗಾಗನು, ನಿಜವಾದ ಭಕ್ತ ಪೂಜಿಸಲಾರ" ಎಂದು ಎನ್ನುತ್ತಾರೆ ಅಲ್ಲಮ ಪ್ರಭುಗಳು. 
ನಾವು  ಪರಮಾತ್ಮನಿಗೆ ಅರ್ಪಿಸಬೇಕಾದ್ದು ಯಾವುದೇ ಹೊರಗಿನ ವಸ್ತುಗಳನ್ನಲ್ಲ. ಬದಲಿಗೆ  ನಮ್ಮನ್ನೇ ನಾವು ಅರ್ಪಿಸಿಕೊಳ್ಳಬೇಕು.
(ಪ್ರಸಾದಿ ಸ್ಥಲ)
  2.
ಧೂಪ ದೀಪಾರತಿಯ ಬೆಳಗುವಡೆ, ನೀನು ಸ್ವಯಂಜ್ಯೋತಿಪ್ರಕಾಶನು.
ಅರ್ಪಿತವ ಮಾಡುವಡೆ, ನೀನು ನಿತ್ಯತೃಪ್ತನು.
ಅಷ್ಟವಿಧಾರ್ಚನೆಯ ಮಾಡುವಡೆ, ನೀನು ಮುಟ್ಟಬಾರದ ಘನವೇದ್ಯನು.
ನಿತ್ಯನೇಮಂಗಳ ಮಾಡುವಡೆ ನಿನಗೆ ಅನಂತನಾಮಂಗಳಾದವು
ಗುಹೇಶ್ವರಾ. / 963

ಸ್ವಯಂ ಜ್ಯೋತಿಪ್ರಕಾಶನಾದ ಲಿಂಗದೇವನಿಗೆ ಧೂಪ ದೀಪಾರತಿಗಳು ಯಾಕೆ? ನಿತ್ಯತೃಪ್ತನಾದ ಲಿಂಗದೇವನಿಗೆ ಅರ್ಪಿತ ನೈವಿದ್ಯೆಗಳು ಯಾಕೆ? ಮುಟ್ಟಬಾರದ ಘನವೇದ್ಯ ಲಿಂಗದೇವನಿಗೆ ಅಷ್ಟವಿಧಾರ್ಚನೆ ಹೇಗೆ ಮಾಡುವುದು? ಹೀಗೆ ನಿತ್ಯನೇಮಗಳನ್ನು  ಮಾಡಿದ್ದಕ್ಕಾಗಿಯೇ ಒಬ್ಬನೇ ದೇವನಿಗೆ ಅನಂತನಾಮ ಗಳೆಂದು ಕರೆದರು ಮೂಡಭಕ್ತರು.
3.

#ರೂಪ ಕಂಡರು, ನಿರೂಪ ಕಾಣರು.
ಅನುವನೆ ಕಂಡರು, ತನುವನೆ ಕಾಣರು.
ಆಚಾರವನೆ ಕಂಡರು, ವಿಚಾರವನೆ ಕಾಣರು.
ಗುಹೇಶ್ವರಾ-ನಿಮ್ಮ ಕುರುಹನೆ ಕಂಡರು,
ಕೂಡಲರಿಯದೆ ಕೆಟ್ಟರು ! / 1375
4.
#ಮಜ್ಜನಕ್ಕೆರೆವಡೆ; ನೀನು ಶುದ್ಧ ನಿರ್ಮಲದೇಹಿ. 
ಪೂಜೆಯ ಮಾಡುವಡೆ; ನಿನಗೆ ಗಗನಕಮಲಕುಸುಮದ ಅಖಂಡಿತಪೂಜೆ. 
ಧೂಪದೀಪಾರತಿಗಳ ಬೆಳಗುವಡೆ; ನೀನು ಸ್ವಯಂ ಜ್ಯೋತಿಪ್ರಕಾಶನು. 
ಅರ್ಪಿತವ ಮಾಡುವಡೆ; ನೀನು ನಿತ್ಯತೃಪ್ತನು.
ಅಷ್ಟವಿಧಾರ್ಚನೆಗಳ ಮಾಡುವಡೆ; ನೀನು ಮುಟ್ಟಬಾರದ ಘನವೇದ್ಯನು. ನಿತ್ಯನೇಮಗಳ ಮಾಡುವಡೆ; ನಿನಗೆ ಅನಂತನಾಮಂಗಳಾದವು ಗುಹೇಶ್ವರಾ. 
5.

#ಮಹಾಮೇರುವಿನ ಮರೆಯಲ್ಲಿರ್ದು,
ಭೂತದ ನೆಳಲನಾಚರಿಸುವ ಕರ್ಮಿ, 
ನೀ ಕೇಳಾ,
ಆ ಮಹಾಲಿಂಗಕ್ಕೆ ಮಜ್ಜನವೆಂದೇನೊ ?
ಪರಿಮಳಲಿಂಗಕ್ಕೆ ಪತ್ರಪುಷ್ಪಗಳೆಂದೇನೊ ?
ಜಗಜ್ಯೋತಿಲಿಂಗಕ್ಕೆ ಧೂಪದೀಪಾರತಿಗಳೆಂದೇನೊ ?
ಅಮೃತಲಿಂಗಕ್ಕೆ ಆರೋಗಣೆಯೆಂದೇನೊ ?
ಗುಹೇಶ್ವರಲಿಂಗದಂತುವ ಬಲ್ಲವರಾರೊ ? / 1314
ಹೀಗೆ ಹಲವಾರು ವಚನಗಳಲ್ಲಿ ಅಷ್ಟವಿಧಾರ್ಚನೆ ಷೋಡಶೋಪಚಾರಗಳನ್ನು ಶರಣರು ತಿರಸ್ಕರಿಸಿರುವುದನ್ನು ನೋಡಬಹುದು. ಇಷ್ಟಲಿಂಗದ ಉಪಾಸನೆ , ವಿಗ್ರಹಾರಾಧನೆಯಲ್ಲ, ದ್ವೈತಭಾವವಿಲ್ಲ. ಇಷ್ಟಲಿಂಗದ ಪೂಜೆಯಲ್ಲಿಯೂ ಹಲವು ಮಾರ್ಪಾಡುಗಳಾದವು. ಶರಣರ ಒಡಲಗೊಂಡ ಪ್ರಾಣಲಿಂಗಕ್ಕೆ ಆರ್ಚನೆ ಅರ್ಪಿತ ಅವಧಾನ ಗಳೆಂಬ ಕ್ರಿಯೆಯ ಆಚರಣೆಯ ಅಗತ್ಯವಿಲ್ಲ ಎನ್ನುತ್ತಾರೆ ಅಲ್ಲಮ ಪ್ರಭುಗಳು.

#ಶರಣನ ಒಡಲುಗೊಂಡ ಅಖಂಡಿತಲಿಂಗಕ್ಕೆ ಅರ್ಚನೆಯಿಲ್ಲ,
ಶರಣನ ಒಡಲುಗೊಂಡ ಅಚಲಿತಲಿಂಗಕ್ಕೆ ಅರ್ಪಿತವಿಲ್ಲ,
ಶರಣನ ಒಡಲುಗೊಂಡ ಅನುಪಮಲಿಂಗಕ್ಕೆ ಅವಧಾನವಿಲ್ಲ.
ಅದೇನು ಕಾರಣವೆಂದಡೆ: ಶರಣನಿಂದಾದ ಆರ್ಚನೆ, ಶರಣನಿಂದಾದ ಅರ್ಪಿತ,
ಶರಣನಿಂದಾದ ಅವಧಾನ.
ಇದು ಕಾರಣ ಸಂದಳಿದು ಲಿಂಗವಾದ ಮತ್ತೆ
ಆನಂದವಲ್ಲದೆ ಅಣುಮಾತ್ರ ಕ್ರೀಯಿಲ್ಲ ಕಾಣಾ ಗುಹೇಶ್ವರಾ. / 1449

ಇಷ್ಟಲಿಂಗವನ್ನೇ  ಕೇಂದ್ರವಾಗಿ ಮಾಡಿಕೊಂಡ ಶರಣರ ಲಿಂಗಾಂಗ ಯೋಗವು, ಭಕ್ತಿಯೋಗ, ಜ್ಞಾನಯೋಗ, ಕ್ರಿಯಾಯೋಗ, ಕುಂಡಲಿನಿಯೋಗ, ಮಂತ್ರಯೋಗ, ಹಠಯೋಗ, ರಾಜಯೋಗ ವೆಂಬ ಶಿವನಿಂದ ಸಪ್ತ ಋಷಿಗಳಿಗೆ  ಭೋದಿತ ವಾದ ಏಳು ಯೋಗಗಳಿಂದ ಕೂಡಿದ ಸರ್ವಯೋಗ ಸಮನ್ವಯಸಾರ "ಶಿವಯೋಗವು" ಆವಿಷ್ಕಾರವಾಯಿತು.
ಹೀಗೆ ಉಪಾದಿತವಾದ ಕಪ್ಪು ಕಂತೆ ಕಟ್ಟಿದ ಬ್ರಹ್ಮಾಂಡ ಸ್ವರೂಪ ಇಷ್ಟಲಿಂಗವು ಶಿವಯೋಗ ಸಾಧನೆಯಲ್ಲಿ ತ್ರಾಟಕ ಯೋಗಕ್ಕೆ ಸಹಾಯಕವಾಯಿತು. ಈ ದೃಷ್ಟಿಯೋಗವನ್ನು ಅಭ್ಯಾಸಮಾಡುತ್ತ ಇಷ್ಟಲಿಂಗ ಪೂಜಕನು ವಿವಿಧ ಅನುಭೂತಿಗಳನ್ನು ಪಡೆಯುವನು. ಹೀಗೆ ಇಷ್ಟಲಿಂಗವು ಕೇವಲ ಭಕ್ತಿ ಪೂಜೆಯ ತೃಪ್ತಿಗಾಗಿ ಅಷ್ಟೇ ಇರದೆ ಲಿಂಗಾಂಗ ಯೋಗಕ್ಕೆ ಸಹಕಾರಿಯಾಯಿತು. ಶರಣ ಧರ್ಮದ ವೈಶಿಷ್ಟ್ಯವೇ ನೆಟ್ಟನೇ ಪೂಜಿಸಿ ಭವಗೆಡುವುದು.

*ಇಷ್ಟಲಿಂಗವು ಲಿಂಗಾಯತರ ಪರಮಾತ್ಮನ ಸಾಕಾರ ಕುರುಹು ಆಗಿ ಉಪಾದಿತವು ಹೌದು*. 

*ಇಷ್ಟಲಿಂಗ, ಕಪ್ಪು ಬಣ್ಣದ ಕಾಂತಿಯಿಂದಾಗಿ ತ್ರಾಟಕಕ್ಕೆ ಶಿವಯೋಗಕ್ಕೆ ಸಹಾಯಕವು ಹೌದು*.

*ಇಷ್ಟಲಿಂಗವು "ಪರಮಾತ್ಮನಲ್ಲಿ ಜೀವಾತ್ಮ'ನೆಂಬ ಲಿಂಗಾಯತ ಧರ್ಮದ ಸಿದ್ಧಾಂತವು ಹೌದು*.

*ಇಷ್ಟಲಿಂಗವು ವೈಜ್ಞಾನಿಕವಾಗಿ ವಿಶ್ವದ ಸ್ವರೂಪವು ಹೌದು*.
ಈ ವಿಶ್ವವು ನಿರಾಕಾರ ನಿರಂಜನನಾದ ಪರಮಾತ್ಮನ ಸಾಕಾರ ಸ್ವರೂಪ. ಈ  ವಿಶ್ವದ ಸ್ವರೂಪ ಗೋಲಾಕಾರವಾಗಿರುವದರಿಂದ. ಚುಳುಕಾದ ಚಿನ್ಮಯ ಇಷ್ಟಲಿಂಗವು ಗೋಲಾಕಾರವಾಗಿರುವುದು.

* ಇಷ್ಟಲಿಂಗ, ಲಿಂಗಾಯತ ಧರ್ಮದವರ ಕುರುಹು(ಗುರುತು) ಹೌದು*. 

*ಲಿಂಗ ವರ್ಗ ಜಾತಿಗಳ ಸಮಾನತೆಯ ಸಂಕೇತವೂ ಹೌದು* 
ಜಾತಿ ಬೇಧವಿಲ್ಲದೆ ಎಲ್ಲ ಜಾತಿಯವರು ಲಿಂಗದೀಕ್ಷೆಗೆ ಅರ್ಹರಾಗಿರುವದರಿಂದ ಇದು ಸಮಾನತೆಯ ಸಂಕೇತ.

ಇಷ್ಟಲಿಂಗವು ಶಿವಯೋಗ ಸಾಧನೆಯ ಶಿಖರವೇರಿದವರಿಗೆ ಅಂತರಂಗ ಪೂಜೆಯಲ್ಲಿ  ಅವಶ್ಯವೋ ಅಥವಾ ಇಲ್ಲವೋ ವೆಂಬುದಕ್ಕೆ ಬೇರೆ ಬೇರೆ ಶರಣರು ತಮ್ಮದೇ ಅನುಭವದ ವಿಚಾರಗಳನ್ನು ವಚನಗಳ ಮೂಲಕ ವ್ಯಕ್ತ ಪಡಿಸಿದ್ದಾರೆ. ಲಿಂಗ ನಿರೀಕ್ಷಣೆಯಿಂದ ಕ್ರಮೇಣ ಅಂಗಭಾವವಳಿದು ಲಿಂಗಭಾವವು ಬಂದು "ಸರ್ವಾಂಗಲಿಂಗಿ" ಯಾಗಿ "ಕುರುಹನಿಡಿದು ಕುರುಹಗೆಡುತ್ತಾನೆ ಶರಣ" ಎಂದು ಅಲ್ಲಮ ಪ್ರಭುಗಳು ವಚನಗಳಲ್ಲಿ ವ್ಯಕ್ತ ಪಡಿಸಿದ್ದಾರೆ.

#ಈ ಪ್ರಾಣಲಿಂಗದ ಪ್ರಸನ್ನ ಮುಖವ ಪರಿಣಾಮಿಸಲೋಸುಗ, 
ಕರತೇಜವೆಂಬ ದರ್ಪಣವ ಹಿಡಿದಿಪ್ಪನು ನೋಡಾ! ಗುಹೇಶ್ವರ ಲಿಂಗದಲ್ಲಿ ನಿಜವನೈದಿಹೆನೆಂದರೆ 
ಕುರುಹುವಿಡಿದು ಕುರುಹುಗೆಡಬೇಕು ಕಾಣಾ
ಸಿದ್ದರಾಮಯ್ಯಾ/ ಎನ್ನುತ್ತಾರೆ ಅಲ್ಲಮಪ್ರಭುಗಳು.
ಅರ್ಥ: 
ಪ್ರಾಣಲಿಂಗವನ್ನು ದರ್ಶಿಸಲಿಕ್ಕಾಗಿ ಕರಸ್ಥಳದಲ್ಲಿ ಇಷ್ಟಲಿಂಗವೆಂಬ ದರ್ಪಣವನ್ನು ಹಿಡಿದಿರುವೆನು. ಕುರುಹನ್ನಿಡಿದು ಕುರುಹಗೆಡಬೇಕು ಎಂದು ಅಲ್ಲಮರು ಇಷ್ಟಲಿಂಗದ ಮಹತ್ತನ್ನು ಯೋಗಿ ಸಿದ್ಧರಾಮೇಶ್ವರರಿಗೆ ತಿಳಿಸುತ್ತಾರೆ. ಅಂದರೆ ಪರಶಿವನ ಕುರುಹಾದ ಇಷ್ಟಲಿಂಗವನ್ನು ಕರದಲ್ಲಿ ಹಿಡಿದು ನಾನು ಎಂಬ ಅಹಂ ಎಂಬುವ ನನ್ನ ಕುರುಹನ್ನು ಬಿಡಬೇಕು. 
ಭಾವಲಿಂಗದ ಅನುಭಾವವಾದ ನಂತರ ಶಿವಯೋಗ ಸಾಧನೆಯಲ್ಲಿ ಕುರುಹಿನ ಅವಶ್ಯಕತೆ ಇಲ್ಲ ಎನ್ನುತ್ತಾರೆ. ಅವಶ್ಯಕತೆ ಇಲ್ಲೇನ್ನುವುದು ಶಿವಯೋಗ ಸಾಧನೆಯಲ್ಲಿ ಮಾತ್ರ. ಸಾಧನೆಯ ನಂತರವೂ ಸಮಾನತೆಯ ಕುರುಹಾಗಿ, ಧರ್ಮದ ಗುರುತಾಗಿ, ಧರ್ಮಸಿದ್ಧಾಂತವಾಗಿ ಇಷ್ಟಲಿಂಗ ಧಾರಣೆ ಬಸವಾದಿ ಶರಣರಿಂದ ಪುರಸ್ಕೃತ ಗೊಂಡು ಸಮಾಜದಲ್ಲಿ ರೂಢಿಯಲ್ಲಿದೆ.
- ✍️Dr Prema Pangi
#ಪ್ರೇಮಾ_ಪಾಂಗಿ,#ಶಿವಯೋಗ,
#ಶಿವಯೋಗದಲ್ಲಿ_ಇಷ್ಟಲಿಂಗ

Comments

Popular posts from this blog

Shika chakra or Bindu chakra:Bindu visarga

Hrit Chakra or Eight Petals Chakra

A-Ka-Ta triangle or Akshara Brahma