ವಚನ ದಾಸೋಹ - ಕತ್ತಲಮನೆಯಲ್ಲಿರ್ದ ಮನಜನು,
ಕತ್ತಲಮನೆಯಲ್ಲಿರ್ದ ಮನಜನು,
ಜ್ಯೋತಿಯನೆನಿತು ಹೊತ್ತು ನೆನೆದಡೆಯೂ ಬೆಳಕಾಗಬಲ್ಲುದೆ
ಬೆಂಕಿಯ ಹೊತ್ತಿಸದನ್ನಕ್ಕ ?
ಮರದುದಿಯ ಫಲವು ನೋಟಮಾತ್ರಕ್ಕುದುರುವುದೆ
ಹತ್ತಿ ಹರಿಯದನ್ನಕ್ಕ ?
ಹುಟ್ಟುಗುರುಡನು ಕಷ್ಟಪಟ್ಟು, ಎಷ್ಟುಹೊತ್ತು ನಡೆದಡೆಯೂ
ಇಚ್ಛಿತ ಪಟ್ಟಣವ ಮುಟ್ಟುವನೆ ಕಣ್ಣುಳ್ಳವನ ಕೈವಿಡಿಯದನ್ನಕ್ಕ ?
ಹಾಂಗೆ, ಸಮ್ಯಗ್‍ಜ್ಞಾನಾತ್ಮಕವಾದ
ಲಿಂಗಾರ್ಚನ, ಲಿಂಗನಿರೀಕ್ಷಣ, ಲಿಂಗಧ್ಯಾನಗಳಿಲ್ಲದೆ,
ಆ ನೆನಹು, ನಿರೀಕ್ಷಣೆ, ಪೂಜೆ ಇವುಗಳೊಂದೊಂದೆ
ಮುಕ್ತಿಯನೀವವೆಂಬ ಯುಕ್ತಿಗೆಟ್ಟ ಮಂದಮತಿಗಳ ಮೆಚ್ಚುವನೆ
ಕೂಡಲಚೆನ್ನಸಂಗಮದೇವನು ?
- ಅವಿರಳ ಜ್ಞಾನಿ ಚೆನ್ನಬಸವಣ್ಣನವರು
ಸಮಗ್ರ ವಚನ ಸಂಪುಟ: 3 ವಚನದ ಸಂಖ್ಯೆ: 1090
ಅರ್ಥ:
ಹನ್ನೆರಡನೆ ಶತಮಾನದಲ್ಲಿ ಕಲ್ಯಾಣದ ಶರಣರಲ್ಲಿ ಅಗ್ರಗಣ್ಯನಾಗಿ ಭಕ್ತಿ, ಜ್ಞಾನ, ವೈರಾಗ್ಯ ಮೂರ್ತಿಯಾಗಿ ಬೆಳಗಿದವರು ಚೆನ್ನಬಸವಣ್ಣನವರು. ಚೆನ್ನಬಸವಣ್ಣನವರು ಅವಿರಳಜ್ಞಾನಿ, ಸದಮಲಜ್ಞಾನಿ, ಷಟುಸ್ಥಲ ಸ್ಥಾಪನಾಚಾರ್ಯ, ದಿವ್ಯಗುಣ ಸಂಪನ್ನನೆಂದು ಪ್ರಸಿದ್ಧನಾಗಿದ್ದಾರೆ. ಅತಿಚಿಕ್ಕ ವಯಸ್ಸಿನಲ್ಲೇ ಅಸಾಧರಣ ಕಾರ್ಯಗಳನ್ನು ಮಾಡಿದ ಮಹಾಪುರುಷನಾಗಿದ್ದಾರೆ.
ಅಂತರಂಗದಲ್ಲಿ ಅರಿವಿಲ್ಲದವಂಗೆ
ಬಹಿರಂಗದಲ್ಲಿ ಕ್ರೀಯಿದ್ದು ಫಲವೇನು ?
ಅದು ಕಣ್ಣಿಲ್ಲದವನ ಬಾಳುವೆಯಂತೆ.
ಬಹಿರಂಗದಲ್ಲಿ ಕ್ರೀಯಿಲ್ಲದವಂಗೆ
ಅಂತರಂಗದಲ್ಲಿ ಅರಿವಿದ್ದು ಫಲವೇನು ?
ಅದು ಶೂನ್ಯಾಲಯದ ದೀಪದಂತೆ.
ಅಂತರಂಗದ ಅರಿವು, ಬಹಿರಂಗದ ಕ್ರಿಯೆ-
ಈ ಉಭಯಾಂಗವೊಂದಾಗಬೇಕು. ಎನ್ನುವುದೇ ಶರಣವಾಣಿ. ವ್ಯಕ್ತಿಯು ತನ್ನ ಜೀವನದಲ್ಲಿ ಜ್ಞಾನವನ್ನು ಹೊಂದದೆ ಕೇವಲ ಆಚರಣೆಗಳನ್ನು ಮಾತ್ರ ಮಾಡುತ್ತಿದ್ದರೆ ಇಲ್ಲವೇ ಸಾಧನೆ, ಆಚರಣೆಗಳನ್ನು ಮಾಡದೆ ಕೇವಲ ಜ್ಞಾನವನ್ನು ಮಾತ್ರ ಹೊಂದಿದ್ದರೆ, ಯಾವ ಪ್ರಯೋಜನವೂ ಇಲ್ಲ.
ಕ್ರಿಯೆ ಸಾಧನೆಯು, ಜ್ಞಾನದ ಜತೆಗೂಡಿದಾಗ ಮಾತ್ರ ವ್ಯಕ್ತಿಗೆ ಜೀವನದಲ್ಲಿ ನೆಮ್ಮದಿ ಮತ್ತು ಏಳಿಗೆಯು ಉಂಟಾಗುತ್ತದೆ. ಸತ್ ಚಿತ್ ಆನಂದ ಸ್ವರೂಪನಾದ ನಿಜಗುರು ಆದಿಗುರು ನಿರಾಕಾರ ಶಿವನಲ್ಲಿ ಬೆರೆಯಲು ಶಿವಾಯೋಗದ ಜ್ಞಾನ ಮತ್ತು ಶಿವಯೋಗ ಸಾಧನೆಯ ಕ್ರಿಯೆ ಎರಡೂ ಬೇಕು.
ಲಿಂಗಾರ್ಚನೆ(ಪೂಜೆ), ಲಿಂಗನಿರೀಕ್ಷಣ (ಲಿಂಗ
ನಿರೀಕ್ಷಣೆ) ಲಿಂಗಧ್ಯಾನ (ನೆನಹು) ಇವು ಶರಣರು ಆವಿಷ್ಕರಿಸಿದ ಲಿಂಗಾಂಗ ಯೋಗದ ಸಮ್ಯಕ ಜ್ಞಾನಾತ್ಮಕಗಳು. ಅರಿವು ಮತ್ತು ಆಚರಣೆಗಳ ಈ ಸಾಂಗತ್ಯವು ಕ್ರಿಯಾತ್ಮಕವಾಗಿ ಸಾಗಿದಾಗ ಮಾತ್ರವೇ ಮುಕ್ತಿಯನ್ನು ಪಡೆಯಲು ಸಾಧ್ಯ.
*ಕತ್ತಲಮನೆಯಲ್ಲಿರ್ದ ಮನಜನು,
ಜ್ಯೋತಿಯನೆನಿತು ಹೊತ್ತು ನೆನೆದಡೆಯೂ ಬೆಳಕಾಗಬಲ್ಲುದೆ
ಬೆಂಕಿಯ ಹೊತ್ತಿಸದನ್ನಕ್ಕ ?*
ಕತ್ತಲೆಯ ಮನೆಯಲ್ಲಿದ್ದ ಮಾನವನು
ಜ್ಯೋತಿಯನ್ನು ಸತತವಾಗಿ ಎಷ್ಟೇ ನೆನೆದರೆ ಬೆಳಕಾಗಬಲ್ಲುದೆ ? ಮನೆಯಲ್ಲಿನ ಕತ್ತಲೆಯನ್ನು ಕಳೆದುಕೊಳ್ಳಬೇಕು ಎಂದರೆ ಜ್ಯೋತಿಯ ಬೆಳಕು ಬೇಕು. ಜ್ಯೋತಿಯನ್ನ ಕೇವಲ ನೆನೆಪು ಮಾತ್ರ ಮಾಡಿಕೊಂಡ ಮಾತ್ರಕ್ಕೆ ಬೆಳಕಾಗಲು ಸಾಧ್ಯವಿಲ್ಲ. ಕತ್ತಲೆ ಹೋಗಿ ಜ್ಯೋತಿಯ ಬೆಳಕು ಬೇಕಾದರೆ ದೀಪವನ್ನು ( ಬೆಂಕಿಯನ್ನು) ಹೊತ್ತಿಸಬೇಕು. ಅದೇ ರೀತಿ ಅಂತರಂಗದ ಕತ್ತಲೆಯನ್ನು ಕಳೆದುಕೊಳ್ಳಲು ಅರಿವಿನ ಜ್ಯೋತಿಯನ್ನು ಹೊತ್ತಿಸಿ ಕೊಳ್ಳಬೇಕು.
*ಮರದುದಿಯ ಫಲವು ನೋಟಮಾತ್ರಕ್ಕುದುರುವುದೆ
ಹತ್ತಿ ಹರಿಯದನ್ನಕ್ಕ ?*
ಮರದ ತುದಿಯ ಫಲವು ನೋಟ ಮಾತ್ರದಿಂದ ಉದುರುವುದೆ? ಮರದ ತುದಿಯಲ್ಲಿರುವ ಫಲ ಬೇಕಾದರೆ ಮರ ಹತ್ತಿ ಹರಿಯಬೇಕು. ಅದೇ ರೀತಿ
ಅಂತರಂಗದಲ್ಲಿನ ಅನುಭಾವದ ಹಣ್ಣನ್ನು ಇಷ್ಟ ಪಟ್ಟು ನೋಡುತ್ತ ಕುಳಿತುಕೊಳ್ಳದೆ ಕ್ರಿಯಾತ್ಮಕ ಸಾಧನೆಯ ಮೂಲಕ ಫಲ ಪಡೆಯಬೇಕು.
*ಹುಟ್ಟುಗುರುಡನು ಕಷ್ಟಪಟ್ಟು, ಎಷ್ಟುಹೊತ್ತು ನಡೆದಡೆಯೂ
ಇಚ್ಛಿತ ಪಟ್ಟಣವ ಮುಟ್ಟುವನೆ ಕಣ್ಣುಳ್ಳವನ ಕೈವಿಡಿಯದನ್ನಕ್ಕ ?*
ಹುಟ್ಟು ಕುರುಡನಾದವನು ಕಷ್ಟಪಟ್ಟು ಎಷ್ಟುಹೊತ್ತು ನಡೆದರೂ ಆತ ತಾನು ಹೋಗಲು ಇಚ್ಛಿಸುವ ಪಟ್ಟಣ ಮುಟ್ಟಲಾರ. ಕಣ್ಣುಳ್ಳವನ ಕೈ ಹಿಡಿದು ನಡೆಯಬೇಕು. ಆಗ ಇಚ್ಛಿಸುವ ಪಟ್ಟಣ ಮುಟ್ಟುತ್ತಾನೆ. ಅದೇ ರೀತಿ ಅರಿಯದ ಸಾಧಕನ ಕೈ ಹಿಡಿದು ನಡೆಸಲು ದೃಷ್ಟಿ ಹೊಂದಿದ ಗುರು ಇದ್ದರೆ ಇಚ್ಛಿತ ಗುರಿ ಮುಟ್ಟಬಹುದು. ಬಹಿರಂಗ ಸಾಧನೆಗೆ ಗುರು, ಅಂತರಂಗ ಸಾಧನೆಗೆ ಅರಿವೇ ಗುರುವಾಗಿ ನಮ್ಮ ಕೈ ಹಿಡಿದು ಮುನ್ನಡೆಸುತ್ತದೆ.
*ಹಾಂಗೆ, ಸಮ್ಯಗ್‍ಜ್ಞಾನಾತ್ಮಕವಾದ
ಲಿಂಗಾರ್ಚನ, ಲಿಂಗನಿರೀಕ್ಷಣ, ಲಿಂಗಧ್ಯಾನಗಳಿಲ್ಲದೆ,
ಆ ನೆನಹು, ನಿರೀಕ್ಷಣೆ, ಪೂಜೆ ಇವುಗಳೊಂದೊಂದೆ
ಮುಕ್ತಿಯನೀವವೆಂಬ ಯುಕ್ತಿಗೆಟ್ಟ ಮಂದಮತಿಗಳ ಮೆಚ್ಚುವನೆ
ಕೂಡಲಚೆನ್ನಸಂಗಮದೇವನು ?*
ಹಾಗೆಯೇ ಸಮ್ಯಕ ಜ್ಞಾನಾತ್ಮಕವಾದ
ಲಿಂಗಾರ್ಚನ, ಲಿಂಗನಿರೀಕ್ಷಣ, ಲಿಂಗಧ್ಯಾನ ಗಳಿಲ್ಲದೆ, ಆ ನೆನಹು, ನಿರೀಕ್ಷಣೆ, ಪೂಜೆ ಇವುಗಳನ್ನು ಹೊಂದದೆ ಮುಕ್ತಿಯನ್ನು ಪಡೆಯುವೆವು ಎನ್ನುವವರು ಯುಕ್ತಿಗೆಟ್ಟ ಮಂದಮತಿಗಳು. ಇಂಥವರನ್ನು
ಕೂಡಲಚೆನ್ನಸಂಗಮದೇವನು ಮೆಚ್ಚುವುದಿಲ್ಲ.
ಸಮ್ಯಕ ಜ್ಞಾನ ವೆಂದರೆ ಮುಕ್ತಿಯ ಮಾರ್ಗ ತೋರಿಸುವ ಸರಿಯಾದ ಜ್ಞಾನ. ಜೈನ ದರ್ಶನದ ರತ್ನಾತ್ರಯಗಳಲ್ಲಿ ಸಮ್ಯಕ್ ಜ್ಞಾನವು ಮುಖ್ಯವಾದುದು. ಶರಣರ ಮುಕ್ತಿ ಮಾರ್ಗವಾದ ಲಿಂಗಾಂಗಯೋಗದಲ್ಲಿ ಸಮ್ಯಕ್ ಜ್ಞಾನವೆಂದರೆ " ಲಿಂಗಾರ್ಚನೆ, ಲಿಂಗನಿರೀಕ್ಷಣೆ, ಲಿಂಗಧ್ಯಾನ"ವೆಂಬ ಮೂರು ಹಂತಗಳು ಅಥವಾ ಮೂರು ಮೆಟ್ಟಿಲುಗಳಿವೆ.
ಲಿಂಗಾರ್ಚನೆ ಅಂದರೆ ಮೊದಲು ಇಷ್ಟಲಿಂಗ ಪೂಜೆ. ಲಿಂಗವನ್ನು ವಿಧಿವತ್ತಾಗಿ ಆರ್ಚಿಸುವುದು.
ನಂತರ ಲಿಂಗ ನಿರೀಕ್ಷಣೆ ಅಂದರೆ ಲಿಂಗವನ್ನು ತದೇಕ ಚಿತ್ತದಿಂದ ನೋಡುವುದು ಅಥವಾ ತ್ರಾಟಕ ಯೋಗ.
ನಂತರ ಲಿಂಗಧ್ಯಾನ ಅಂದರೆ ಏಕಾಗ್ರ ಚಿತ್ತದ ಧ್ಯಾನಾವಸ್ಥೆಯ, ಲಿಂಗಾಂಗ ಸಮರಸದ ಭಾವ ಅನುಭವಿಸುವುದು.
ವಚನ ಚಿಂತನೆ:
ಕತ್ತಲೆಯ ಮನೆಯಲ್ಲಿ ಕುಳಿತ ಮನುಜನು ಬೆಳಕನ್ನು ಎಷ್ಟು ಹೊತ್ತು ನೆನೆದರೂ ಬೆಳಕು ಕಾಣುವುದಿಲ್ಲ. ಅದೇ ರೀತಿಯಾಗಿ ಬರೀ ನೆನೆಯುತ್ತ ಕುಳಿತರೆ ಕತ್ತಲೆಂಬ ಅಜ್ಞಾನ ಹೋಗುವದಿಲ್ಲ. ಅಂತರಂಗದ ಕತ್ತಲೆಯನ್ನು ಕಳೆದುಕೊಳ್ಳಲು ಜ್ಞಾನದ ಜ್ಯೋತಿಯನ್ನು ಹೊತ್ತಿಸಿಕೊಳ್ಳಬೇಕು.
ಮರದೊಳಗಿರುವ ಹಣ್ಣು ನಾವು ಮರವೇರಿ ಹರಿಯದೆ ಕೇವಲ ತದೇಕ ಚಿತ್ತದಿಂದ ನೋಡಿದ ಮಾತ್ರಕ್ಕೆ ಉದುರಿ ಹೇಗೆ ಬೀಳುವುದಿಲ್ಲವೊ ಅದೇ ರೀತಿ ಪೂಜೆ ಯೋಗ ಸಾಧನೆ ಮಾಡದೆ ಬರೀ ನೋಡುತ್ತ ಕುಳಿತ ಮಾತ್ರಕ್ಕೆ ಅನುಭಾವ ಮತ್ತು ಮುಕ್ತಿ ಸಾಧ್ಯವಿಲ್ಲ.
ಹುಟ್ಟು ಕುರುಡನಾದವನು ಕಷ್ಟಪಟ್ಟು ಎಷ್ಟೊತ್ತು ನಡೆದರೂ ಕಣ್ಣುಳ್ಳವರ ಸಹಾಯವಿಲ್ಲದೆ ತಾ ಮುಟ್ಟಬೇಕಾದ ಸ್ಥಳ ಮುಟ್ಟಲಾರನೋ ಅದೇ ರೀತಿ ಅರಿವೆಂಬ ಗುರುವಿನ ಸಹಾಯವಿಲ್ಲದೆ ಆತ್ಮೋನ್ನತಿಯ, ಮುಕ್ತಿಯ ದಡ ಮುಟ್ಟುವುದಿಲ್ಲ.
ಗುರು ಅರಿವು:
#ಎನ್ನ ಕರಸ್ಥಲದ ಮದ್ಯದಲ್ಲಿ ಪರಮ ನಿರಂಜನದ
ಕುರುಹು ತೋರಿದ, ಆ ಕುರುಹಿನ ಮಧ್ಯದಲ್ಲಿ
ಅರುಹಿನ ಕಳೆಯ ತೋರಿದ;
ಆ ಕಳೆಯ ಮಧ್ಯೆದಲ್ಲಿ ಮಹಾಜ್ಞಾನದ ಬೆಳಗ ತೋರಿದ
ಆ ಬೆಳಗಿನ ನಿಳುವಿನೊಳಗೆ ಎನ್ನ ತೋರಿದ
ಎನ್ನೋಳಗೇ ತನ್ನ ತೋರಿದ, ತನ್ನೊಳಗೆ ಎನ್ನ ನಿಂಬಿಟ್ಟು ಕೊಂಡ
ಮಹಾ ಗುರುವಿಗೆ ನಮೋ ನಮೋ ಎನುತಿರ್ಪೆನಯ್ಯಾ ಅಖಂಡೇಶ್ವರಾ !
ಎಂದು ಷಣ್ಮುಖ ಶಿವಯೋಗಿಗಳು ಗುರುವಿನ ಮಹತ್ವ ತಿಳಿಸಿದ್ದಾರೆ.
ಲಿಂಗಾಂಗ ಯೋಗ:
ಲಿಂಗಾಯತ ಧರ್ಮದ ವ್ಯೆಶಿಷ್ಟ್ಯ ಪೂರ್ಣ ಉಪಾಸನಾ ಸಾಧನ ಇಷ್ಟಲಿಂಗ. ಅದೇ ರೀತಿ ಲಿಂಗಾಯತ ಧರ್ಮದ ವ್ಯೆಶಿಷ್ಟ್ಯಪೂರ್ಣ ಯೋಗ ವಿಧಾನ ಲಿಂಗಾಂಗ ಯೋಗ. ನಿರಾಕಾರ ದೇವನನ್ನು ವಿಶ್ವದ ಆಕಾರದಲ್ಲಿ ರೂಪಿಸಿ, ಸತ್ ಚಿತ್ಆನಂದ ಸ್ವರೂಪ ನಿರಾಕಾರವನ್ನು ಇಷ್ಟಲಿಂಗವೆಂಬ ಸಾಕಾರದ ಮೂಲಕ ಗ್ರಹಿಸಿಕೊಂಡು ನಿರಾಕಾರ ನಿರ್ಗುಣ ನಿರಂಜನನಲ್ಲಿ ಉರಿಯುಂಡ ಕರ್ಪೂರದಂತೆ ಬೆರೆಯುವ ಯೋಗ ವಿಧಾನವಿದು. ಲಿಂಗವಂತರು ಧರಿಸಿ ಪೂಜಿಸುವ ಇಷ್ಟಲಿಂಗವು ಪೌರಾಣಿಕ ಶಿವನ ಪ್ರತಿಕವಲ್ಲ. ನಮ್ಮಲ್ಲಿಯೇ ನೆಲಸಿರುವ ಪರಮಾತ್ಮನ ಪ್ರತೀಕ ಎನ್ನುವುದು ಶರಣರ ವಚನಗಳಲ್ಲಿ ವೇದ್ಯವಾಗುತ್ತದೆ.
ಮಾನವನ ಒಳಗಿರುವ ಆತ್ಮ ಚೈತನ್ಯವು ತನ್ನಿಂದ ತಾನೇ ಭವವನ್ನು ಕಳೆಯಲಾರದು. ಭವಿತನ ಕಳೆದುಕೊಂಡು ಸಾಧನಾ ಪಥ ಕ್ರಮಿಸಿ ಪರಶಿವನಲ್ಲಿ ಸಮರಸವಾಗಿ ಮುಕ್ತಿ ಪಡೆಯಲು ಲಿಂಗಾರ್ಚನೆ, ಲಿಂಗ ನಿರೀಕ್ಷಣೆ, ಲಿಂಗಧ್ಯಾನ ಮೂರು ಅವಶ್ಯವೆಂದು ಚೆನ್ನಬಸವಣ್ಣನವರು ಲಿಂಗಾಂಗ ಯೋಗದ ಮಾರ್ಗವನ್ನು ತಿಳಿಸಿದ್ದಾರೆ.
-✍️ Dr Prema Pangi
#ಕತ್ತಲಮನೆಯಲ್ಲಿರ್ದ_ಮನಜನು
Comments
Post a Comment