ವೀರ ರಾಣಿ ಬೆಳವಡಿ ಮಲ್ಲಮ್ಮ
ಬೆಳವಡಿ ಮಲ್ಲಮ್ಮ(17th century) ಕರ್ನಾಟಕದ ವೀರರಾಣಿ. ಮರಾಠರ ವಿರುದ್ಧ ಹೋರಾಡಲು ಮಹಿಳಾ ಸೈನ್ಯವನ್ನು ಸಂಘಟಿಸಿದ ವೀರರಾಣಿ. ವಿಶ್ವದಲ್ಲಿ ಪ್ರಥಮವಾಗಿ ಎರಡು ಸಾವಿರ ಮಹಿಳಾ ಸೈನ್ಯ ಕಟ್ಟಿ ಪ್ರಭಲ ಮರಾಠಾ ಸೈನ್ಯದೊಂದಿಗೆ ಹೋರಾಡಿದವಳು ಬೆಳವಡಿಯ ವೀರರಾಣಿ ಮಲ್ಲಮ್ಮ.
ಅವಳು ಸೋದೆಯ ರಾಜ ಮಧುಲಿಂಗ ನಾಯಕನ ಮಗಳು. ಚಿಕ್ಕವಯಸ್ಸಿನಲ್ಲಿಯೇ ವೈರಿಗಳೊಂದಿಗೆ ಯುದ್ಧ ಮಾಡಲು ಶಸ್ತ್ರಭ್ಯಾಸ ತರಬೇತಿ ಪಡೆದವರು.
ವರ್ಷ 1678 ರಲ್ಲಿ ಶಿವಾಜಿಯ ಸೈನ್ಯ ಕೊಪ್ಪಳ, ಗದಗ, ಧಾರವಾಡ ಮೇಲೆ ದಾಳಿ ಮಾಡಿ ಗೆದ್ದು ನಂತರ ಯುದ್ಧ ಮುಗಿಸಿ ಹೋಗುತ್ತಿದ್ದ ಸಮಯ. ಶಿವಾಜಿ ಮಹಾರಾಜರ ಸೈನ್ಯ ಬೆಳವಡಿ ಸಮೀಪದ ಹಳ್ಳಿಯಲ್ಲಿ ಬೀಡುಬಿಟ್ಟಿರುವಾಗ ಸೈನ್ಯಕ್ಕೆ ಬೇಕಾಗುವಷ್ಟು ಸಾಕಷ್ಟು ಆಹಾರ, ಹಾಲು ಕೊಡಲು ಸ್ಥಳೀಯ ಗ್ರಾಮಸ್ಥರು ನಿರಾಕರಿಸಿದರು. ಇದರಿಂದ ಕೆರಳಿದ ಶಿವಾಜಿ ಮಹಾರಾಜರ ಸೈನಿಕರು ಹಳ್ಳಿಗೆ ಹೋಗಿ ಹಸುಗಳನ್ನು ದೌರ್ಜನ್ಯದಿಂದ ಎಳೆದೊಯ್ದರು. ಸೈನಿಕರು
ಪುಂಡಾಟದಿಂದ ಬೆಳವಡಿ ಮೇಲೆ ಆಕ್ರಮಣ ಮಾಡಿದರು. ಬೆಳವಡಿ ರಾಜನಾದ ಈಶ್ವರ ಪ್ರಭು(ಈಶಾಪ್ರಭು) ಮರಾಠ ಸೈನಿಕರ ಈ ದೌರ್ಜನ್ಯವನ್ನು ಖಂಡಿಸಿ ತನ್ನ ಸೈನ್ಯದೊಂದಿಗೆ ಮರಾಠ ದಂಡನಾಯಕ ರಘುನಾಥ್ ನೇಡ್ಕರ್ ಸೈನ್ಯವನ್ನು ವೀರವೇಶದಿಂದ ಹೋರಾಡಿ ತಮ್ಮ ಹಸುಗಳನ್ನು ಹಿಂಪಡೆದು ಹಳ್ಳಿ ಜನರಿಗೆ ಹಿಂತಿರುಗಿಸಿದರು. ಆದರೆ ಮರಾಠಾ ಸೈನ್ಯದ ವಿರುದ್ಧ ಹೋರಾಡುವಾಗ ಯುದ್ಧಭೂಮಿಯಲ್ಲಿ ರಾಜ ಈಶ್ವರ ಪ್ರಭು ನಿಧನರಾದರು. ನಂತರ ಕೋಟೆಯ ರಕ್ಷಣೆಯ ಜವಾಬ್ದಾರಿ ರಾಣಿ ಮಲ್ಲಮ್ಮಳ ಮೇಲೆ ಬಿದ್ದಿತು. ಯುದ್ದದಲ್ಲಿ
ಅನೇಕ ಸೈನಿಕರನ್ನು ಕಳೆದುಕೊಂಡ ಮರಾಠರು ಮತ್ತಷ್ಟು ಮರಾಠ ಸೈನ್ಯದೊಂದಿಗೆ ಮಲ್ಲಮ್ಮರವರ ಸೈನ್ಯವನ್ನು ಸುತ್ತುವರೆದರು. ಆದರೂ ಮಲ್ಲಮ್ಮ ಶತ್ರು ಪಡೆಗಳ ಜತೆ ಕುದುರೆ ಮೇಲೆ ಸೀರೆಯಲ್ಲಿ ವೀರಗಚ್ಚೆ ಹಾಕಿ ಧೈರ್ಯದಿಂದ ಹೋರಾಟ ಮುಂದುವರಿಸಿದಳು. ತನ್ನ ರಾಜ್ಯದ ರಕ್ಷಣೆಗಾಗಿ ಮರಾಠಾ ಸೈನ್ಯದ ದಳಪತಿಯ ಜತೆ ವಿರುದ್ಧ ಹೋರಾಡಿದಳು. ಶಿವಾಜಿ ಮಹಾರಾಜರ ಸೈನ್ಯ ನಿರಂತರ ಇಪ್ಪತ್ತೇಳು ದಿನಗಳ ಪ್ರಯತ್ನ ಮಾಡಿದರೂ ಬೆಳವಡಿ ಕೋಟೆ ಬೇದಿಸಲು ಸಾದ್ಯವಾಗಲಿಲ್ಲ. ಬೆಳವಡಿ ಕೋಟೆಯನ್ನು ಮುತ್ತಿಗೆ ಹಾಕಲು ಯತ್ನಿಸಿದರೂ ಅದು ಸಾಧ್ಯವಾಗಲಿಲ್ಲ. ಎಷ್ಟೋ ರಾಜ್ಯಗಳನ್ನು ಗೆದ್ದ ಶಿವಾಜಿಯ ಸೈನ್ಯಕ್ಕೆ ಬೆಳವಡಿಯ ದೇಸಾಯಿ ವಂಶದ ಮಲ್ಲಮ್ಮಳನ್ನು ಬಗ್ಗಿಸಲು ಸಾಧ್ಯವಾಗಲಿಲ್ಲ.
ಶಿವಾಜಿಯ ಸೈನಿಕರು ಅವಳನ್ನು ಬಂಧಿಸಿ ಶಿವಾಜಿಯ ಬಳಿಗೆ ಕರೆದುಕೊಂಡು ಹೋದರು. ಶಿವಾಜಿ ಮಹಾರಾಜರು ವೀರಮಾತೆ ಮಲ್ಲಮ್ಮರವರನ್ನು ಕಂಡ ತಕ್ಷಣ ತನ್ನ ಸೈನ್ಯ ಮಾಡಿದ ತಪ್ಪಿನ ಅರಿವಾಗಿ ತನ್ನ ಸಿಂಹಾಸನದಿಂದ ತಕ್ಷಣ ಕೆಳಕ್ಕಿಳಿದು ಮಲ್ಲಮ್ಮರವರ ಮಂದೆ ಮಂಡಿಯೂರಿ "ತಾಯೀ, ದಯವಿಟ್ಟು ನನ್ನನ್ನು ಕ್ಷಮಿಸಿ. ನನಗೆ ನಿಮ್ಮ ರಾಜ್ಯ ಬೇಕಿಲ್ಲ. ನಿಮ್ಮಂತ ಧೈರ್ಯಶಾಲಿ, ಧೀರ ಮಹಿಳೆಯನ್ನು ಸೆರೆಯಾಳಾಗಿಸಿದ್ದು ಮಹಾತಪ್ಪು. ನೀವು ನನ್ನ ತಾಯಿ ಜೀಜಾಮಾತೆಗೆ ಸಮನಾದವರು ಕ್ಷಮೆ ಮಾತೆ ಕ್ಷಮೆ. ನಮ್ಮ ಸೈನಿಕರಿಂದ ತಪ್ಪಾಗಿದೆ" ಎಂದು ಕ್ಷಮೆ ಕೇಳಿದರು. ಅವಳ ಧೈರ್ಯಕ್ಕೆ ಮೆಚ್ಚಿ ತನ್ನ ಸೈನ್ಯದ ಪುಂಡಾಟಕ್ಕೆ ಬಹಳ ಪಶ್ಚಾತಾಪ ಪಟ್ಟರು. ವೀರಮಾತೆ ಮಲ್ಲಮ್ಮ ಶಿವಾಜಿ ಮಹಾರಾಜರೇ ನಿಮ್ಮ ಪರಾಕ್ರಮದ ಬಗ್ಗೆ ಸಾಕಷ್ಟು ಕೇಳಿರುವೆ. ಮಹಿಳೆಯರ ಮೇಲೆ ನಿಮಗಿರುವ ಗೌರವ ಕಂಡು ಮತ್ತಷ್ಟು ನಿಮ್ಮ ಬಗ್ಗೆ ಹೆಮ್ಮೆಯಾಯಿತು ಎಂದು ಛತ್ರಪತಿ ಶಿವಾಜಿ ಮಹಾರಾಜರನ್ನು ಸಮಾಧಾನ ಮಾಡಿದರು. ಶಿವಾಜಿ ಮಹಾರಾಜರು "ಮಾತೆ ನೀವು ಎಂದೆಂದಿಗೂ ಸ್ವತಂತ್ರರು, ನಿಮ್ಮ ಎಲ್ಲಾ ಕಷ್ಟ ಸುಖಗಳಿಗೆ ನಾವು ಸದಾ ಸಿದ್ಧರಾಗಿರುತ್ತೇವೆ" ಎಂದು ಗೌರವಪೂರ್ಣವಾಗಿ ರಾಣಿ ಮಲ್ಲಮ್ಮರಿಗೆ "ಸಾವಿತ್ರಿ" ಎಂಬ ಗೌರವ ಸನ್ಮಾನ ಮಾಡಿ ಸತ್ಕರಿಸಿ ಬೆಳವಡಿ ಸಂಸ್ಥಾನಕ್ಕೆ ಬೀಳ್ಕೊಟ್ಟರು. ವೀರ ವನಿತೆ ಮಲ್ಲಮ್ಮನವರಿಗೆ ತನ್ನ ಸೈನ್ಯದಿಂದ ಆದ ಅವಮಾನ ಕೊನೆಯ ಗಳಿಗೆಯವರೆಗೆ ಶಿವಾಜಿ ಮಹಾರಾಜರನ್ನು ಕಾಡಿತು ಎಂದು ಇತಿಹಾಸಕಾರರು ಉಲ್ಲೇಖಿಸಿದ್ದಾರೆ.
ರಾಣಿ ಮಲ್ಲಮ್ಮಗೆ ಅವಮಾನಿಸಿದ ಸುಖೋಜಿ ಗಾಯಕವಾಡನ ಕಣ್ಣುಗಳನ್ನು ಶಿವಾಜಿ ಮಹಾರಾಜರು ಕೀಳಿಸಿರುವುದಾಗಿ ಇತಿಹಾಸಕಾರರು ಬರೆದಿದ್ದಾರೆ. ಈ ಯುದ್ಧದ ನೆನಪಿಗಾಗಿ ವೀರಗಲ್ಲುಗಳನ್ನು ಬೆಳವಡಿಯ ಸಂಸ್ಥಾನದಲ್ಲಿ ಮಲ್ಲಮ್ಮನ ಹೆಸರಲ್ಲಿ ಕಟ್ಟಿಸಲಾಯಿತು.
ಈ ಐತಿಹಾಸಿಕ ಘಟನೆ ಮುಂದೆ ಕನ್ನಡಿಗರ ಮತ್ತು ಮರಾಠರ ಬಾಂಧವ್ಯದ ಸಂಕೇತವಾಗಿ ಇತಿಹಾಸದ ಪುಟಗಳಲ್ಲಿ ದಾಖಲಾಯಿತು. ರಾಣಿ ಮಲ್ಲಮ್ಮ ಕೆತ್ತಿಸಿದ ಶಿವಾಜಿ ಮಹಾರಾಜರ ಮೂರ್ತಿ ಶಿಲ್ಪ ಬೆಳವಡಿಯಲ್ಲಿ ಇದೆ.ಇದು ಶಿವಾಜಿ ಯವರ ಕಾಲದಲ್ಲಿ ನಿರ್ಮಾಣಗೊಂಡ ಅವರ ಏಕ ಮಾತ್ರ ಮೂರ್ತಿ. ಕರ್ನಾಟಕ ಸರಕಾರ ಅವಳ ನೆನಪಿನಲ್ಲಿ ಪೆಬ್ರುವರಿ ೨೮ ರಂದು ಬೆಳವಡಿ ಉತ್ಸವ ನಡೆಸುತ್ತದೆ.
- ✍️Dr Prema Pangi
#ಪ್ರೇಮಾ_ಪಾಂಗಿ,#ಬೆಳವಡಿ_ಮಲ್ಲಮ್ಮ
Comments
Post a Comment