ಶರಣೆ ಪರಿಚಯ - ಶರಣೆ ಹಡಪದ ಲಿಂಗಮ್ಮ
ಕಾಲ : c:1160
ಈಕೆ ಬಸವಣ್ಣನವರ ಆಪ್ತರಲ್ಲಿ ಮುಖ್ಯವೆನಿಸಿದ ಹಡಪದ ಅಪ್ಪಣ್ಣನವರ ಹೆಂಡತಿ.
ಅಂಕಿತನಾಮ : ಅಪ್ಪಣ್ಣಪ್ರಿಯ ಚನ್ನಬಸವಣ್ಣ
ಗುರು : ಚೆನ್ನಮಲ್ಲೇಶ.
ಉನ್ನತ ಅನುಭಾವಿಯಾದ ಶರಣೆ ಲಿಂಗಮ್ಮನವರ 114 ವಚನ, 1 ಸ್ವರವಚನ, 1 ಮಂತ್ರಗೋಪ್ಯ ದೊರೆತಿವೆ. ಈಕೆಯ ವಚನಗಳು “ಹಡಪದಪ್ಪಣ್ಣನ ಪುಣ್ಯಸ್ತ್ರೀ ಲಿಂಗಮ್ಮನ ಭೋಧೆಯ ವಚನಗಳು“ ಎಂದು ಹೆಸರು ಮಾಡಿವೆ. ಪುಣ್ಯಸ್ತ್ರೀ ಎಂದರೆ ಧರ್ಮಪತ್ನಿ ; ಬೋಧೆ ಎಂದರೆ ಅರಿವು, ತಿಳುವಳಿಕೆ ಕೊಡುವ ವಚನಗಳು. ವಚನಗಳಲ್ಲಿ ತತ್ವಭೋಧೆಯೇ ಮುಖ್ಯವಾಗಿರುವದರಿಂದ ಭೋಧೆಯ ವಚನಗಳು ಎಂದು ಕರೆದಿದ್ದಾರೆ. ಮನದ ಚಂಚಲತೆ, ಅದನ್ನು ನಿಗ್ರಹಿಸುವ ವಿಧಾನ, ಗುರು-ಲಿಂಗ-ಜಂಗಮ ಭಕ್ತಿ, ಶರಣರ ನಡೆನುಡಿ, ಆಚಾರ ವಿಚಾರ ನಿಷ್ಠೆ, ಡಾಂಭಿಕಭಕ್ತರ ಟೀಕೆ, ಶಿವಯೋಗ, ವಿಚಾರ ಪ್ರಜ್ಞೆ, ಬೆಡಗಿನ ವಚನಗಳು ಮತ್ತು ಲಿಂಗಾಂಗ ಯೋಗ ಈಕೆಯ ವಚನಗಳಲ್ಲಿ ತೋರುವ ಪ್ರಮುಖ ವಿಷಯಗಳಾಗಿವೆ. ಭಾಷೆಯ ತಾತ್ವಿಕ ವಿಷಯ ನಿರೂಪಣೆಯಲ್ಲಿ ಬೆಡಗಿನಿಂದ ಕೂಡಿದ್ದರೆ, ಟೀಕೆ ವಿಡಂಬನೆಗಳಲ್ಲಿ ನೇರ, ದೇಶೀ ಸೊಗಡಿನಿಂದ ಸಂಭ್ರಮಿಸುತ್ತದೆ.
ಈಕೆಯ ಗುರು ಚನ್ನಮಲ್ಲೇಶನ ಸ್ತುತಿ ವಿಶೇಷವಾಗಿದೆ.
ವ್ಯಕ್ತಿಯ ಹುಟ್ಟಿಗೂ ಜಾತಿಗೂ ಅವನು ಸಾಧಿಸುವ ಸಿದ್ಧಿಗೂ ಏನೇನು ಸಂಬಂಧವಿಲ್ಲ ಎಂಬುದನ್ನು ನಿರೂಪಿಸಿದವಳು. ಇವರ ವಚನಗಳಲ್ಲಿ ಬೋಧೆಯ ಧಾಟಿ, ಕಂಡ ದರ್ಶನ, ಬೀರಿದ ಬೆಳಕು, ಏರಿದ ನಿಲುವು ಸರ್ವರಿಗೂ ಆದರ್ಶನಿಯವಾದುದು. ಸಾಮಾನ್ಯರಿಗೂ, ಶರಣರಿಗೂ ಇರುವ ವ್ಯತ್ಯಾಸವನ್ನು ತಿಳಿಸಿದ್ದಾರೆ. ಶಿವಯೋಗದಲ್ಲಿ ಮಹಾಬೆಳಗು ಕಂಡಿದನ್ನು, ಅರಿಷಡ್ವರ್ಗಗಳನ್ನು ಜಯಸಿದ ವಿಚಾರವಾಗಿ ವಚನಗಳನ್ನು ರಚಿಸಿದ್ದಾರೆ. ಎಲ್ಲ ಸಾಧನೆಗೂ ಮೂಲವಾದ ಮನಸ್ಸನ್ನು ಸ್ವೇಚ್ಛೆಯಾಗಿ ಹರಿದಾಡಲು ಬಿಡದೆ ಬಯಲಿನೊಳಗೆ ಓಲಾಡುವ ಶರಣರ ಪಾದದಲ್ಲಿ ಬೆರೆಯಬೇಕೆನ್ನುವರು. 12ನೆಯ ಶತಮಾನದ ಸಾಮಾನ್ಯ ಕಾಯಕ ಮಹಿಳೆ ಆಧ್ಯಾತ್ಮ ದ ಉತ್ತುಂಗಕ್ಕೆ ಏರಿ ಶಿವಯೋಗದ ನಿಜೈಕ್ಯ ಸ್ಥಲ ತಲುಪಿ ಸಮಾಜಕ್ಕೇ ಬೋಧೆ ಮಾಡುವ ಸಾಧನೆಗೆ ಏರಿದ ನಿಲುವುಗೆ ಕಾರಣ ಮಹಾಶರಣರ ಸತ್ಸಂಗ, ಅನುಭವ ಮಂಟಪದ ವಿಚಾರ ಸಂಕಿರಣಗಳು ಮತ್ತು ಉನ್ನತ ಶಿವಯೋಗ ಸಾಧನೆ ಎಂದು ತಿಳಿಸಿದ್ದಾಳೆ. ಶರಣೆ ಲಿಂಗಮ್ಮನವರು ಒಬ್ಬ ಮಹಾ ಸಾಧಕಿ, ಶಿವಯೋಗಿ ಎಂದು ಅವರ ವಚನ ಗಳಿಂದ ಅರ್ಥವಾಗುತ್ತದೆ.
1. ವಚನ
#ಏರುವ ಇಳಿಯುವ ಆದಿಯ ಅನಾದಿಯನರಿದು,
ಭೇದವ ತಿಳಿದು ಸಾದಿಸಿ ನೋಡಿ,
ಅಂತರಂಗದಲ್ಲಿ ವೇದಿಸಿ ನೋಡುತಿರಲು,
ಭೋಗ್ಯವಲ್ಲದ ಮಣಿ ಪ್ರಜ್ವಲವಾಯಿತ್ತು.
ಆ ಬೆಳಗಿನೊಳಗೆ ಪಶ್ಚಿಮದ ಕದವ ತೆಗೆದು ಪರಮನೊಡಗೂಡಿ,
ಬಚ್ಚಬರಿಯ ಬಯಲಬೆಳಗಿನೊಳಗಾಡುವ ಶರಣ ಅಪ್ಪಣ್ಣಪ್ರಿಯ ಚೆನ್ನಬಸವಣ್ಣ ತಾನೆ ನೋಡಾ.
- ಶರಣೆ ಲಿಂಗಮ್ಮ
ಅರ್ಥ:
ಶಿವಯೋಗ ವಿಧಾನ ಮತ್ತು ಅನುಭಾವದ ಬೆಡಗಿನ ವಚನ. ಶರಣಪಥದ ಅನುಭಾವದ ನಿಜೈಕ್ಯದ ಸ್ಥಿತಿ ತಲುಪಿದ ವರ್ಣನೆ.
ಪಶ್ಚಿಮದ ಕದ ಅಂದರೆ ಪಶ್ಚಿಮಚಕ್ರ, ಸುಷುಮ್ನ ದ್ವಾರಕವಾಟ ತೆಗೆದಾಗ ಬಯಲು ಎಂಬ ಪರಮನ ಬೆಳಗಿನಲ್ಲಿ ಸಾಮರಸ್ಯ ವಾಯಿತು ಎಂದು ಹೇಳಿದ್ದಾರೆ. ಬಯಲು ಸಾಧನೆ ನವಚಕ್ರ ಪಶ್ಚಿಮ ಚಕ್ರದ ಸಾಧನೆ ಶಿವಯೋಗದ ಅತ್ಯುನ್ನತ ಸಾಧನೆ.
2. ವಚನ
#ಒಂದು ಊರಿಗೆ ಒಂಬತ್ತು ಬಾಗಿಲು.
ಆ ಊರಿಗೆ ಐವರು ಕಾವಲು, ಆರುಮಂದಿ ಪ್ರಧಾನಿಗಳು,
ಇಪ್ಪತ್ತೈದು ಮಂದಿ ಪರಿವಾರ.
ಅವರೊಳಗೆ ತೊಟ್ಟನೆ ತೊಳಲಿ ಬಳಲಲಾರದೆ
ಎಚ್ಚತ್ತು ನಿಶ್ಚಿಂತನಾದ ಅರಸನ ಕಂಡೆ.
ಆ ಅರಸಿನ ಗೊತ್ತುವಿಡಿದು,
ಒಂಬತ್ತು ಬಾಗಿಲಿಗೆ ಲಿಂಗಸ್ಥಾಪ್ಯವ ಮಾಡಿ, ಒಂದು ಬಾಗಿಲಲ್ಲಿ ನಿಂದು,
ಕಾವಲವನೆ ಕಟ್ಟಿಸಿ, ಪ್ರಧಾನಿಗಳನೆ ಮೆಟ್ಟಿಸಿ,
ಪರಿವಾರವನೆ ಸುಟ್ಟು, ಅರಸನ ಮುಟ್ಟಿಹಿಡಿದು ಓಲೈಸಲು
ಸಪ್ತಧಾತು ಷಡುವರ್ಗವನೆ ಕಂಡು, ಕತ್ತಲೆಯ ಕದಳಿಯ ದಾಂಟಿ,
ನಿಶ್ಚಿಂತದಲ್ಲಿ ಬಚ್ಚಬರಿಯ ಬೆಳಗಿನೊಳಗೋಲಾಡಿ
ಸುಖಿಯಾದೆನಯ್ಯಾ ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ.
- ಶರಣೆ ಲಿಂಗಮ್ಮ
ಅರ್ಥ :
ಶಿವಯೋಗ ವಿಧಾನ ಮತ್ತು ಅನುಭಾವದ ಬೆಡಗಿನ ವಚನ. ಶರಣಪಥದ ಅನುಭಾವದ ನಿಜೈಕ್ಯದ ಸ್ಥಿತಿ ತಲುಪಿದ ವರ್ಣನೆ.
3. ವಚನ
#ಒಂದು ಹುತ್ತಕ್ಕೆ ಒಂಬತ್ತು ಬಾಗಿಲು.
ಒಂದು ಸರ್ಪ ಒಂಬತ್ತು ಬಾಗಿಲಲ್ಲಿಯೂ ನೋಡುತ್ತಿಪ್ಪುದು.
ಒಂಬತ್ತು ಬಾಗಿಲಿಗೆ ಕದವನಿಕ್ಕಿ,
ಒಂದು ಬಾಗಿಲ ಅಗುಳಿ ದಾರವಂದವನಿಕ್ಕಿ ಬಲಿಯಲು,
ತಿರುಗುವುದಕ್ಕೆ ತಾವ ಕಾಣದೆ, ಇರುವುದಕ್ಕೆ ಇಂಬ ಕಾಣದೆ,
ನಿಲುವುದಕ್ಕೆ ಎಡೆಯ ಕಾಣದೆ, ಉರಿ ಎದ್ದು ಊಧ್ರ್ವಕ್ಕೇರಲು,
ಶರದಿ ಬತ್ತಿತ್ತು, ಅಲ್ಲಿದ್ದ ಖಗಮೃಗವೆಲ್ಲ ದಹನವಾದವು.
ಸರೋವರವೆಲ್ಲ ಉರಿದು ಹೋದವು, ಕತ್ತಲೆ ಹರಿಯಿತ್ತು.
ಮುಂದೆ ದಿಟ್ಟಿಸಿ ನೋಡುವನ್ನಕ್ಕ ಇಟ್ಟೆಡೆಯ ಬಾಗಿಲು ಸಿಕ್ಕಿತ್ತು.
ಆ ಇಟ್ಟೆಡೆಯ ಬಾಗಿಲ ಹೊಕ್ಕು ಹೊಡೆಕರಿಸಿ, ಪಶ್ಚಿಮದ ಕದವ ತೆಗೆದು,
ಬಟ್ಟ ಬಯಲಲ್ಲಿ ನಿಂದು ನಾನೆತ್ತ ಹೋದೆಹೆನೆಂದರಿಯೆನಯ್ಯಾ
ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ.
- ಶರಣೆ ಲಿಂಗಮ್ಮ
ಅರ್ಥ:
ಶಿವಯೋಗ ವಿಧಾನ ಮತ್ತು ಅನುಭಾವದ ಬೆಡಗಿನ ವಚನ. ಶರಣಪಥದ ಅನುಭಾವದ ನಿಜೈಕ್ಯದ ಸ್ಥಿತಿ ತಲುಪಿದ ವರ್ಣನೆ.
4. ವಚನ
#ಕನಿಷ್ಠದಲ್ಲಿ ಹುಟ್ಟಿದೆ, ಉತ್ತಮರಲ್ಲಿ ಬೆಳೆದೆ
ಸತ್ಯಶರಣರ ಪಾದವಿಡಿದೆ, ಆ ಶರಣರ
ಪಾದವಿಡಿದು ಗುರುವ ಕಂಡೆ, ಲಿಂಗವ ಕಂಡೆ
ಜಂಗಮವ ಕಂಡೆ, ಪಾದೋದಕವ ಕಂಡೆ
ಪ್ರಸಾದವ ಕಂಡೆ, ಇಂತಿವರ ಕಂಡೆನ್ನ ಕಂಗಳ
ಮುಂದಣ ಕತ್ತಲೆ ಹರಿಯಲೊಡನೆ ಮಂಗಳದ
ಮಹಾಬೆಳಗಿನೊಳೊಗೋಲಾಡಿ ಸುಖಿಯಾದೆನಯ್ಯಾ
ಅಪ್ಪಣ್ಣಪ್ರಿಯ ಚನ್ನಬಸವಣ್ಣ
- ಶರಣೆ ಲಿಂಗಮ್ಮ
Translation :
Though I am born in lower caste; in the Satsang with truthful Sharanas I saw Guru, Linga,Jangam,Padodaka and Prasad.( all these are auspecious in Lingayat dharma).After seeing all these the darkness infront of my eyes disappeared and I became one with God and became blessed Appanna Priya Channabasavanna ( Shiva).
Meaning :
In this vachana Sharane Lingamma highlights importance of Satsang or the company of Sharanas and how it changed her life and made her blissful.
ಅರ್ಥ :
ಮಹಾಶರಣ ಸತ್ಸಂಗದಲ್ಲಿ ನಡೆದ ತನ್ನ ಸಾಧನಾ ಪಥ ವರ್ಣಿಸಿದ್ದಾರೆ.ಶರಣಪಥದ ಅನುಭಾವದ ನಿಜೈಕ್ಯದ ಸ್ಥಿತಿ ತಲುಪಿದ ವರ್ಣನೆ.
5. ವಚನ
#ಅಯ್ಯಾ, ಅದೇನು ಕಾರಣವೆಂದಡೆ,
ಕಂಗಳ ಕತ್ತಲೆಯನೆ ಹರಿದಿರಿ
ಮನದ ಕಾಳಿಕೆಯನೆ ಹಿಂಗಿಸಿದಿರಿ
ಮಾತಿನ ಮೊದಲನೆ ಹರಿದಿರಿ
ಜ್ಯೋತಿಯ ಬೆಳಗನೆ ತೋರಿದಿರಿ
ಮಾತು ಮಥನವ ಕೆಡಿಸಿದಿರಿ.
ವ್ಯಾಕುಳವನೆ ಬಿಡಿಸಿ, ವಿವೇಕಿಯ ಮಾಡಿ,
ನಿಮ್ಮ ಪಾದದಲ್ಲಿ ಏಕವಾದ ಕಾರಣದಿಂದ
ನಾ ನಿಜಮುಕ್ತಳಾದೆನಯ್ಯಾ ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ.
- ಶರಣೆ ಲಿಂಗಮ್ಮ
ಅರ್ಥ :
ಮಹಾಶರಣ ಸತ್ಸಂಗದಲ್ಲಿ ನಡೆದ ತನ್ನ ಸಾಧನಾ ಪಥ ವರ್ಣಿಸಿದ್ದಾರೆ.
6. ವಚನ
#ಅಯ್ಯಾ, ನರರೊಳು ಹುಟ್ಟಿ, ಮರಹಿನೊಳಗೆ ಬಿದ್ದವಳ ತಂದು,
ಮಹಾಶರಣರು ಎನಗೆ ಕುರುಹ ತೋರಿದರು.
ಗುರುವೆಂಬುದನರುಹಿದರುದ ಜಂಗಮವೆ ಜಗದ ಕರ್ತುವೆಂದರುಹಿದರು.
ಅವರ ನೆಲೆವಿಡಿದು ಮನವ ನಿಲಿಸಿದೆ, ಕಾಯ ಜೀವವೆಂಬುದನರಿದೆ,
ಭವಬಂಧನವ ಹರಿದೆ, ಮನವ ನಿರ್ಮಲವ ಮಾಡಿದೆ.
ಬೆಳಗಿದ ದರ್ಪಣದಂತೆ ಚಿತ್ತ ಶುದ್ಭವಾದಲ್ಲಿ,
ನೀವು ಅಚ್ಚೊತ್ತಿದ್ದ ಕಾರಣದಿಂದ ನಿಮ್ಮ ಪಾದವಿಡಿದು ನಾನು ನಿಜಮುಕ್ತಳಾದೆನಯ್ಯಾ ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ.
- ಶರಣೆ ಲಿಂಗಮ್ಮ
ಅರ್ಥ :
ಮಹಾಶರಣ ಸತ್ಸಂಗದಲ್ಲಿ ನಡೆದ ತನ್ನ ಸಾಧನಾ ಪಥ ವರ್ಣಿಸಿದ್ದಾರೆ.
7. ವಚನ
#ಆಸೆಯುಳ್ಳನ್ನಕ್ಕ ರೋಷ ಬಿಡದು
ಕಾಮವುಳ್ಳನ್ನಕ್ಕ ಕಳವಳ ಬಿಡದು
ಕಾಯಗುಣವುಳ್ಳನ್ನಕ್ಕ ಜೀವನ ಬುದ್ಧಿ ಬಿಡದು;
ಭಾವವುಳ್ಳನ್ನಕ್ಕ ಬಯಕೆ ಸವೆಯದುದ
ನಡೆಯುಳ್ಳನ್ನಕ್ಕ ನುಡಿಗೆಡದು.
ಇವೆಲ್ಲವು ಮುಂದಾಗಿದ್ದು ಹಿಂದನರಿದೆನೆಂಬ
ಸಂದೇಹಿಗಳಿರಾ, ನೀವು ಕೇಳಿರೋ.
ನಮ್ಮ ಶರಣರು ಹಿಂದ ಹೇಗೆ ಅರಿದರೆಂದಡೆ
ಆಸೆಯನಳಿದರು, ರೋಷವ ಹಿಂಗಿದರು,
ಕಾಮನ ಸುಟ್ಟರು, ಕಳವಳವ ಹಿಂಗಿದರು,
ಕಾಯಗುಣವಳಿದರು, ಜೀವನ ಬುದ್ಧಿಯ ಹಿಂಗಿದರು,
ಭಾವವ ಬಯಲುಮಾಡಿದರು, ಬಯಕೆಯ ಸವೆದರು.
ಹಿಂದನರಿದು ಮುಂದೆ ಲಿಂಗವೆ ಗೂಡಾದ ಶರಣರ ಈ ಸಂದೇಹಿಗಳೆತ್ತ ಬಲ್ಲರು, ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ ?
- ಶರಣೆ ಲಿಂಗಮ್ಮ
Translation :
As long as there is desire
there is no respite from anger;
as long as there is lust
there is no respite from anxiety;
as long as there is worldly body
there is no respite from the pulls of this life;
as long as there is emotion
there is no respite from desire;
as long as there is action
there is no respite from words.
all these hold sway.
You claim to know the past,
listen you skeptics,
this is how our sharanas came to know the past;
they destroyed desire
they controlled anger
they burnt lust
they controlled worry
they annihilated all interest in the body
they controlled the pulls of this earth
they revealed their minds
they renounced their longings
How can these skeptics know
the sharanas
who know the past
and now reside in the linga
Appannapriya Chennabasavanna?
8. ವಚನ
#ಈ ಪರಂಜ್ಯೋತಿ ಪ್ರಕಾಶವಾದ ಬೆಳಗ
ನೋಡಿ ನೋಟವ ಮರೆದೆ, ಕೂಡಿ ಕೂಟವ ಮರೆದೆ.
ತಾನು ತಾನಾಗಿಪ್ಪ ಮಹಾಬೆಳಗಿನಲ್ಲಿ ನಾನು ಓಲಾಡಿ ಸುಖಿಯಾದೆನಯ್ಯಾ,
ಚೆನ್ನಮಲ್ಲೇಶ್ವರನ ಕರುಣವಿಡಿದು ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ.
- ಶರಣೆ ಲಿಂಗಮ್ಮ
ಅರ್ಥ :
ಶರಣಪಥದ ಅನುಭಾವದ ನಿಜೈಕ್ಯದ ಸ್ಥಿತಿ
ಶಿವಾಯೋಗದ ಅನುಭಾವದ ಪರಂಜ್ಯೋತಿ ಪ್ರಕಾಶವಾದ ಬೆಳಕಿನಲ್ಲಿ ಅನುಭವಿಸಿದ ಪ್ರಶಾಂತತೆಯ ವರ್ಣನೆ.
9. ವಚನ
#ಈ ಮಹಾದೇವನ ಸ್ತೋತ್ರವ ಮಾಡುವುದಕ್ಕೆ ಜಿಹ್ವೆ ಮೆಟ್ಟದು.
ಆ ಮಹಾದೇವನ ಸ್ತೋತ್ರವ ಕೇಳುವುದಕ್ಕೆ ಕರ್ಣಮೆಟ್ಟದು.
ಮುಟ್ಟಿ ಪೂಜಿಸಿಹೆನೆಂದಡೆ ಹಸ್ತ ಮೆಟ್ಟದು.
ನೋಡಿಹೆನೆಂದಡೆ ನೋಟಕ್ಕೆ ಅಗೋಚರ, ಅಪ್ರಮಾಣ.
ಇಂತು ನಿಶ್ಚಿಂತ ನಿರಾಳ ಬಯಲದೇಹಿ ರಿನ್ನಲ್ಲಿ ಅಚ್ಚೊತ್ತಿದಂತೆ ನಿಂದ ಕಾರಣದಿಂದ
ಬಟ್ಟಬಯಲನೆ ಕಂಡೆ, ಮಹಾಬೆಳಗನೆ ಕೂಡಿದೆ.
ಚಿತ್ತದಲ್ಲಿ ಚೆನ್ನಮಲ್ಲೇಶ್ವರನು ನೆಲೆಗೊಂಡ ಕಾರಣದಿಂದ
ನಾನೆತ್ತ ಹೋದೆನೆಂದರಿಯೆನಯ್ಯಾ, ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ.
ಉಸುರ ಉನ್ಮನಿಗಿತ್ತು
- ಶರಣೆ ಲಿಂಗಮ್ಮ
ಅರ್ಥ :
ಶರಣಪಥದ ಅನುಭಾವದ ಸ್ಥಿತಿ, ನಿರಾಕಾರ ನಿರ್ಗುಣ ಶಿವನಲ್ಲಿ ನಿಜೈಕ್ಯವಾದ ಸ್ಥಿತಿ
10. ವಚನ
#ಕಂಡಿಹೆ ಕೇಳಿಹೆನೆಂದು ಮುಂದುಗಾಣದೆ ಸಂದೇಹದಲ್ಲಿ ಮುಳುಗಿ.
ಕಳವಳಿಸಿ ಕಾತರಿಸುವ ಅಣ್ಣಗಳಿರಾ, ನೀವು ಕೇಳಿರೆ, ಹೇಳಿಹೆನು.
ಕಾಣಬಾರದ ಘನವ ಹೇಳಬಾರದಾಗಿ,
ಹೇಳುವುದಕ್ಕೆ ನುಡಿಯಿಲ್ಲ, ನೋಡುವುದಕ್ಕೆ ರೂಪಿಲ್ಲ.
ಇಂತಪ್ಪ ನಿರೂಪದ ಮಹಾಘನವು
ಶರಣರ ಹೃದಯದಲ್ಲಿ ನೆಲೆಗೊಂಬುದಲ್ಲದೆ,
ಈ ಜನನ ಮರಣಕ್ಕೊಳಗಾಗುವ ಮನುಜರೆತ್ತ ಬಲ್ಲರು ಆ ಮಹಾಘನದ ನೆಲೆಯ, ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ ?
- ಶರಣೆ ಲಿಂಗಮ್ಮ
ಅರ್ಥ :
ದೇವರನು ಕಂಡೆ ಕೇಳಿದೆ ಎಂದು ಹೇಳಿ ದಾರಿ ತಿಳಿಯದೆ ಕಳವಳಿಸುವ ಸಂದೇಹಿ ಗಳಾದ ದೊಡ್ಡ ಮನುಸ್ಸರೆ ಕೇಳಿ. ಕಾಣಬಾರದ ಘನ ಕಂಡರೆ ಅದನ್ನು ಹೇಳಲು ವರ್ಣಿಸಲು ಪದಗಳೇ ಇಲ್ಲ. ಈ ನಿರಾಕಾರ ನಿರೂಪದ ಘನ (ದೇವರ ಸ್ವರೂಪ) ಶರಣರ ಹೃದಯದಲ್ಲಿ ನೆಲೆಗೊಳ್ಳುತ್ತದೆ. ಈ ಜನನ ಮರಣಕ್ಕೊಳಗಾಗುವ ಮನುಜರು ಈ ನೆಲೆಯ ಎತ್ತ ಬಲ್ಲರು? ಆ ಮಹಾಘನದ ನೆಲೆಯ ಅಪ್ಪಣ್ಣಪ್ರಿಯ ಚೆನ್ನಬಸವಣ್ಣ ಬಲ್ಲರು.
11. ವಚನ
#ದಾರಿವಿಡಿದು ಬರಲು ಮುಂದೆ ಸರೋವರವ ಕಂಡೆ.
ಆ ಸರೋವರದ ಮೇಲೆ ಒಂದು ದಳದ ಕಮಲವ ಕಂಡೆ,
ಆ ಕಮಲವರಳಿ ವಿಕಸಿತವಾಗಿತ್ತು, ಪರಿಮಳವೆಸಗಿತ್ತು.
ಆ ಪರಿಮಳದ ಬೆಂಬಳಿವಿಡಿದು ಹೋಗುತ್ತಿರಲು,
ಮುಂದೆ ಒಂದು ದಾರಿಯ ಕಂಡು,
ಆ ಮುಂದಳ ದಾರಿಯಲ್ಲಿ ಹೋದವರೆಲ್ಲರು
ನಿಂದೆ ಕುಂದುಗಳಿಗೊಳಗಾಗಿ ಸಂದುಹೋದರು.
ಇದ ಕಂಡು ನಾ ಹೆದರಿಕೊಂಡು ಎಚ್ಚತ್ತು,
ಚಿತ್ತವ ಸುಯಿದಾನವ ಮಾಡಿ,
ಹಿತ್ತಲ ಬಾಗಿಲ ಕದವ ತೆಗೆದು ನೋಡಿದಡೆ ಬಟ್ಟಬಯಲಾಗಿದ್ದಿತ್ತು.
ಆ ಬಟ್ಟಬಯಲೊಳಗೆ ಮಹಾಬೆಳಗನೆ ನೋಡಿ
ನಾ ಎತ್ತಹೋದೆನೆಂದರಿಯೆನಯ್ಯಾ
ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ.
- ಶರಣೆ ಲಿಂಗಮ್ಮ
12. ವಚನ
#ದಾರಿವಿಡಿದು ಬರಲು ಮುಂದೆ ಸರೋವರವ ಕಂಡೆ.
ಆ ಸರೋವರದ ಮೇಲೆ ಮಹಾಘನವ ಕಂಡೆ.
ಆ ಮಹಾಘನವಿಡಿದು ಮನವ ನಿಲಿಸಿ
ಕಾಯಗುಣವನುಳಿದು ಕರಣಗುಣವ ಸುಟ್ಟು,
ಆಸೆಯನೆ ಅಳಿದು, ರೋಷವನೆ ನಿಲಿಸಿ,
ಜಗದೀಶ್ವರನಾದ ಶರಣರ ಮರ್ತ್ಯದ ಹೇಸಿಗಳೆತ್ತಬಲ್ಲರು
ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ ?
- ಶರಣೆ ಲಿಂಗಮ್ಮ
13. ವಚನ
#ನರರ ಬೇಡೆನು, ಸುರರ ಹಾಡೆನು, ಕರಣಂಗಳ ಹರಿಯಬಿಡೆನು,
ಕಾಮನ ಬಲೆಗೆ ಸಿಲ್ಕೆನು, ಮರವೆಗೊಳಗಾಗೆನು.
ಪ್ರಣವ ಪಂಚಾಕ್ಷರಿಯ ಜಪಿಸಿಹೆನೆಂದು
ತನುವ ಮರೆದು ನಿಜಮುಕ್ತಳಾದೆನಯ್ಯಾ, ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ.
- ಶರಣೆ ಲಿಂಗಮ್ಮ
Translation :
I shall not beg mere mortals
I shall not sing the praise of gods.
I shall not let my senses wander.
I shall not be caught in the snare of Kama,
I shall not allow myself to forget
As I recite Pranava Panchakshari
forgetting my body
I become truly liberated
Appannapriya Chennabasavanna.
14. ವಚನ
ತನುವೆಂಬ ಹುತ್ತದಲ್ಲಿ ಮನವೆಂಬ ಸರ್ಪ ಹೆಡೆಯನುಡುಗಿಕೊಂಡಿರಲು
ಅಷ್ಟಮದವೆಲ್ಲ ಹಿಟ್ಟುಗುಟ್ಟಿದವುದ ಕರಣಂಗಳೆಲ್ಲ ಉರಿದುಹೋದವು.
ಇದ್ದ ಶಕ್ತಿಯನೆ ಕಂಡು, ಮನ ನಿಶ್ಚಯವಾದುದನೆ ನೋಡಿ,
ಪಶ್ಚಿಮದ ಕದವ ತೆಗೆದು, ಬಟ್ಟಬಯಲ ಬೆಳಗಿನೊಳಗೆ ಓಲಾಡಿ
ಸುಖಿಯಾದೆನಯ್ಯಾ ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ.
ಜ್ಞಾನಶಕ್ತಿ ಬಂದು ಎಬ್ಬಿಸಲು,
ಉರಿ ಭುಗಿಲೆನುತ್ತ ಹೆಡೆಯನೆತ್ತಿ ಊಧ್ರ್ವಕ್ಕೇರಲು,
- ಶರಣೆ ಲಿಂಗಮ್ಮ
ಅರ್ಥ:
ಶಿವಯೋಗ ವಿಧಾನ ಮತ್ತು ಅನುಭಾವದ ಬೆಡಗಿನ ವಚನ
15. ವಚನ
#ಕಾಮವಿಲ್ಲ ಕ್ರೋಧವಿಲ್ಲ ಲೋಭವಿಲ್ಲ
ಮೋಹವಿಲ್ಲ ಮದವಿಲ್ಲ ಮತ್ಸರವಿಲ್ಲ
ಎಂಬ ಅಣ್ಣಗಳಿರಾ ನೀವು ಕೇಳಿರೊ ಹೇಳಿಹೆನು
ಕಾಮವಿಲ್ಲದವಂಗೆ ಕಳವಳವುಂಟೆ
ಕ್ರೋಧವಿಲ್ಲದವಂಗೆ ರೋಷವುಂಟೆ
ಲೋಭವಿಲ್ಲದವಂಗೆ ಆಸೆಯುಂಟೆ
ಮೋಹವಿಲ್ಲದವಂಗೆ ಪಾಶವುಂಟೆ
ಮದವಿಲ್ಲದವಂಗೆ ತಾಮಸವುಂಟೆ
ಮತ್ಸರವಿಲ್ಲದವನು ಮನದಲ್ಲಿ ಮತ್ತೊಂದ ನೆನೆವನೆ
ಇವು ಇಲ್ಲವೆಂದು ಮನವ ಕದ್ದು ನುಡಿವ
ಅಬದ್ಧರ ಮಾತ ಮೆಚ್ಚುವನೆ
ನಮ್ಮ ಅಪ್ಪಣ್ಣಪ್ರಿಯ ಚೆನ್ನಬಸವಣ್ಣ.
- ಶರಣೆ ಲಿಂಗಮ್ಮ
ಅರ್ಥ :
ನನ್ನಲ್ಲಿ ಕಾಮವಿಲ್ಲ ಕ್ರೋಧವಿಲ್ಲ ಲೋಭವಿಲ್ಲ
ಮೋಹವಿಲ್ಲ, ಮದವಿಲ್ಲ ಮತ್ಸರವಿಲ್ಲ
ಎಂದು ಹೇಳುವ ಅಣ್ಣಗಳಿರಾ ನೀವು ಕೇಳಿರಿ ಹೇಳುವೆನು ಕಾಮವಿಲ್ಲದಿದ್ದರೆ ಕಳವಳ ಹೇಗೆ ಉಂಟಾಯಿತು?
ಕ್ರೋಧವಿಲ್ಲದಿದ್ದರೆ ರೋಷ ಹೇಗೆ ಉಂಟಾಯಿತು?
ಲೋಭವಿಲ್ಲದಿದ್ದರೆ ಆಸೆ ಹೇಗೆ ಉಂಟಾಯಿತು?
ಮೋಹವಿಲ್ಲದಿದ್ದರೆ ಪಾಶ ಹೇಗೆ ಉಂಟಾಯಿತು?
ಮದವಿಲ್ಲದಿದ್ದರೆ ತಾಮಸ ಹೇಗೆ ಉಂಟಾಯಿತು?
ಮತ್ಸರವಿಲ್ಲದವನು ಮನದಲ್ಲಿ ಸೃಷ್ಟಿಕರ್ತನನ್ನು ಬಿಟ್ಟು ಬೇರೆಯನ್ನು ನೆನೆಯುವನೆ?
ಇವು ಇಲ್ಲವೆಂದು ಸುಮ್ಮನೆ ಹೇಳುವವರು ತಮ್ಮ ಮನಸ್ಸಿಗೆ ವಿರೋಧವಾಗಿ ಕದ್ದು ನುಡಿಯುವವರು.ಅವರು ಅಬದ್ಧರು. ಅವರ ಮಾತನ್ನು ದೇವರು ಮೆಚ್ಚುವನೆ?
ಮಾನವ ಜೀವಿಯ ಮನದಲ್ಲಿ ಕ್ರೋಧ, ಲೋಭ, ಮೋಹ, ಮದ, ಮತ್ಸರಗಳು ಸಹಜ. ವ್ಯಕ್ತಿಯು ತನ್ನ ಮತ್ತು ಸಹಮಾನವರ ಒಳಿತಿಗಾಗಿ ಮನಗಳಲ್ಲಿ ಮೂಡಿದ ಇವುಗಳನ್ನು ಹತೋಟಿಯಲ್ಲಿಟ್ಟುಕೊಂಡು ಸಮಾಜದಲ್ಲಿ ಬಾಳಬೇಕು. ಅದು ಬಿಟ್ಟು
ನನ್ನ ಮನದಲ್ಲಿ ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರವಿಲ್ಲ ಎಂದು ಹೇಳಿಕೊಂಡು ಮೆರೆಯುವ ದೊಡ್ಡ ವ್ಯಕ್ತಿಗಳು ತಮ್ಮ ನಯವಾದ ಮಾತುಗಾರಿಕೆಯಿಂದ ಸುಳ್ಳನ್ನೇ ದಿಟವೆಂದು ಜನರು ನಂಬುವಂತೆ ಮಾಡಿ, ಸಮಾಜವನ್ನು ವಂಚಿಸುವ ಕಲೆಯಲ್ಲಿ ಚೆನ್ನಾಗಿ ಪಳಗಿರುತ್ತಾರೆ. ಮನದಲ್ಲಿ ಉಂಟಾಗುತ್ತಿರುವ ಒಳಮಿಡಿತಗಳನ್ನು ಮರೆಮಾಚಿ, ಬಹಿರಂಗದಲ್ಲಿ ಅವು ಇಲ್ಲವೆಂದು ಹೇಳಿ ತನ್ನ ಮನಸ್ಸಿಗೆ ತಾನೇ ವಂಚನೆ ಮಾಡಿ ಕೊಂಡಿರುತ್ತಾರೆ. ಸಂಸಾರಿಯಾಗಿರಲಿ ಇಲ್ಲವೇ ಸನ್ಯಾಸಿಯಾಗಿರಲಿ ಮನದೊಳಗಿನ ಒಳಮಿಡಿತಗಳನ್ನು ಮುಚ್ಚಿಕೊಂಡು, ಜನರನ್ನು ವಂಚಿಸುತ್ತಾ ಸುಳ್ಳನ್ನಾಡುವ, ಕಪಟ ವ್ಯಕ್ತಿಗಳನ್ನು ಒಪ್ಪಿಕೊಳ್ಳಬಾರದು. ಎಲ್ಲರಿಗೂ ಸುಳ್ಳು ಹೇಳಿದರೂ ಮನಕ್ಕೆ ಸುಳ್ಳು ಹೇಳಲು ಸಾಧ್ಯವಿಲ್ಲ. ಎಲ್ಲದಕ್ಕೂ ಮನವೇ ಸಾಕ್ಷಿ. ಇಂಥ ಡಾಂಭಿಕ ವ್ಯಕ್ತಿಗಳನ್ನು ನಂಬಬಾರದು.
- ✍️Dr.Prema Pangi
#ಹಡಪದ_ಅಪ್ಪಣ್ಣರ_ಪುಣ್ಯಸ್ತ್ರೀ_ಶರಣೆ_ಲಿಂಗಮ್ಮ,#ಶರಣೆ_ಲಿಂಗಮ್ಮ
Comments
Post a Comment