ವಚನ ದಾಸೋಹ - ಪೂಜಿಸಿ ಕೆಳಯಿಂಕೆ ಇಳುಹಲದೇನೊ?

ವಚನ:
#ಪೂಜಿಸಿ ಕೆಳಯಿಂಕೆ ಇಳುಹಲದೇನೊ? ಅನಾಗತ ಪೂಜೆಯ ಮಾಡಲದೇನೊ? ದೇಹವೆ ಪಿಂಡಿಗೆ, ಜೀವವೆ ಲಿಂಗ ಗುಹೇಶ್ವರಾ.
- ಅಲ್ಲಮ ಪ್ರಭುಗಳು

*ಅರ್ಥ*:
12ನೇ ಶತಮಾನ ಭಾರತದ ಇತಿಹಾಸದಲ್ಲಿ ಧಾರ್ಮಿಕ ಸುವರ್ಣಕಾಲ. ಮೇಲುವರ್ಗದ, ಪುರೋಹಿತಶಾಹಿಗಳ ಸ್ವತ್ತಾಗಿದ್ದ ದೇವರು, ದೇವಾಲಯಗಳನ್ನು ಜನ ಸಾಮಾನ್ಯರ ಬಳಿಗೆ ತಂದು, ಇಷ್ಟಲಿಂಗ ಧಾರಣೆ ಮೂಲಕ ದೇಹವನ್ನೇ ದೇವಾಲಯವನ್ನಾಗಿಸಿದವರು ಬಸವಾದಿ ಶರಣರು. ಗುರು ಬಸವೇಶ್ವರರು ಕ್ರಾಂತಿಯ ಕೇಂದ್ರ ಬಿಂದುವಾದರೆ, ಈ ಕ್ರಾಂತಿ ದೀಪಕ್ಕೆ ತಾತ್ವಿಕ ನೆಲಗಟ್ಟನ್ನು ನೀಡಿ ಬೆಳಗಿಸಿದವರು ಅನುಪಮ ಚರಿತ ಅಲ್ಲಮಪ್ರಭುದೇವರು. ಶರಣರ ವಿಚಾರಕ್ರಾಂತಿಯ ಅಧ್ಯಾತ್ಮಚೇತನದ ಜ್ಯೋತಿಯನ್ನು ಪ್ರಕಾಶಗೊಳಿಸಿದವರು.
ಪ್ರಸ್ತುತ ವಚನದಲ್ಲಿ ಅಲ್ಲಮ ಪ್ರಭುಗಳು ಪ್ರಾಣಲಿಂಗಾರ್ಚನೆ ಮಾಡುವ ವಿಧಾನ ತಿಳಿಸಿದ್ದಾರೆ.
*ಪೂಜಿಸಿ ಕೆಳಯಿಂಕೆ ಇಳುಹಲದೇನೊ?

 ಇಷ್ಟಲಿಂಗವನ್ನು ಕರಸ್ಥಲದಲ್ಲಿ ಇರಿಸಿ  ಪೂಜಿಸುತ್ತೇವೆ. ಪೂಜೆ ಮುಗಿದ ಬಳಿಕ ಆ ಅರ್ಪಿತ ಉಪಚಾರಗಳನ್ನು ಹಾಗೂ ಲಿಂಗವನ್ನು ಹಸ್ತದಿಂದ ಕೆಳಗಿಳಿಸುತ್ತೇವೆ. ಪ್ರಾಣಲಿಂಗವನ್ನು ಹಾಗೆ ಪೂಜಿಸಲು ಸಾಧ್ಯವೇ? ಪೂಜೆ ಮುಗಿದ ಮೇಲೆ ಕೆಳಗೆ ಇಳಿಸಲು ಸಾಧ್ಯವೇ? ಪ್ರಾಣಲಿಂಗ ವನ್ನು ಬಹಿರಂಗವಾಗಿ ಪೂಜಿಸಲು ಮತ್ತು ಪೂಜೆ ಮುಗಿಸಿದ ನಂತರ ಇಳಿಸಲು ಆಗದು.

*ಅನಾಗತ ಪೂಜೆಯ ಮಾಡಲದೇನೊ?* :

  ಕೈಗೇ ಸಿಗದ ಪ್ರಾಣಲಿಂಗಕ್ಕೆ ಅನಾಗತವಾದ ಪೂಜೆ ಮಾಡಲು ಬರುವುದೇ? ಆ ಅನಾಗತ ಪೂಜೆಯ ವಿಧಾನವನ್ನು ಮುಂದೆ ವಿವರಿಸುತ್ತಾರೆ.

*ದೇಹವೆ ಪಿಂಡಿಗೆ, ಜೀವವೆ ಲಿಂಗ ಗುಹೇಶ್ವರಾ*

 ನಮ್ಮ ದೇಹವೇ ನಮ್ಮ ಪ್ರಾಣಲಿಂಗದ ನೆಲೆ. ಪ್ರಾಣಲಿಂಗ ನಮ್ಮ ಸೂಕ್ಷ್ಮಕಾಯದಲ್ಲಿ ಇದೆ.
ನಮ್ಮ ದೇಹವೇ ಪ್ರಾಣಲಿಂಗದ ಪೀಠಿಕೆ, ನಮ್ಮ ಜೀವವೆ ಪ್ರಾಣಲಿಂಗ. ಆ ಲಿಂಗವನ್ನು ನಮ್ಮ  ಶರೀರದಿಂದ  ಅಗಲಿಸಲು ಸಾಧ್ಯವಿಲ್ಲ.  ಪ್ರಾಣಲಿಂಗ ಸಾಧಕನಾದವನು ಎಂದೆಂದಿಗೂ ಅಗಲದ ಆ ಲಿಂಗವನ್ನು ಅನನ್ಯಭಾವದಿಂದ ಅನುಸಂಧಾನಿಸಬೇಕು. ಅದುವೆ ಪ್ರಾಣಲಿಂಗ ಪೂಜೆ.
ಎನ್ನ ಕಾಲೇ ಕಂಬ, ದೇಹವೇ ದೇಗುಲ
ಶಿರವೇ ಹೊನ್ನ ಕಳಶವಯ್ಯ
ಕೂಡಲಸಂಗಮದೇವಾ ಕೇಳಯ್ಯ
ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ.
ಎಂದು ದೇಹವನ್ನೇ ದೇಗುಲವಾಗಿ ಮಾಡಿ ಪ್ರಾಣಲಿಂಗ ಪೂಜೆ ಮಾಡುವ ವಿಧಾನವೆಂದು ವಿವೇಚಿಸುತ್ತಾರೆ.
*ವಚನ ಚಿಂತನ*
ಇದು ಪ್ರಾಣಲಿಂಗಿ ಸ್ಥಲದ ವಚನ. ಇಲ್ಲಿ  ಅಲ್ಲಮ ಪ್ರಭುಗಳು ಪ್ರಾಣಲಿಂಗ ಪೂಜೆ ಮಾಡುವ ವಿಧಾನ ವಿವರಿಸಿದ್ದಾರೆ. ಸಾಧನೆ ಮುಂದುವರೆದಂತೆ ಇಷ್ಟಲಿಂಗದ ಬಹಿರಂಗ ಪೂಜೆ, ಅಂತರಂಗದ ಪ್ರಾಣಲಿಂಗ ಉಪಾಸನೆಗೆ ಪರಿವರ್ತಿತವಾಗಬೇಕು. ಪ್ರಾಣಲಿಂಗ ಪೂಜೆಯಲ್ಲಿ ಸಾಧಕನು ಅಂತರ್ಮುಖಿಯಾಗುತ್ತಾನೆ. "ಲಿಂಗದಲ್ಲಿ ಪ್ರಾಣವನಿಲಿಸಿ, ಪ್ರಾಣದಲ್ಲಿ ಲಿಂಗವನಿರಿಸಿ ನೆನೆವುತ್ತಿದ್ದ ಕಾರಣ ಪ್ರಾಣಲಿಂಗವಾಯಿತು” ಎನ್ನುತ್ತಾರೆ  ಶರಣರು. ಅಂಗದ ಮೇಲೆ ಕುರುಹು ಆಗಿಟ್ಟ ಇಷ್ಟಲಿಂಗವನ್ನು ಅನುಸಂಧಾನ ಮಾಡುತ್ತಾ ಅಲ್ಲಿ ಆಯತವಾದುದನ್ನು ಸ್ವಾಯತ ಮಾಡಿಕೊಳ್ಳಬೇಕು. ಅದಕ್ಕೆ ಸಹಾಯಕವಾದ ಅಂತರಂಗದ ಯೋಗಸಾಧನೆಯನ್ನು ಪ್ರಾಣಲಿಂಗದ ಅನುಸಂಧಾನದಲ್ಲಿ ಕಾಣುತ್ತೇವೆ. 
*ಪ್ರಾಣಲಿಂಗ ಪೂಜೆ ಮಾಡಲು ಬೇಕಾದ ಅರ್ಹತೆ*:
ಪಂಚಾಚಾರ ಪಾಲನೆ
ಸ್ವಸ್ಥ , ಧ್ಯಾನಶೀಲ, ಶಾಂತ ಮನಸ್ಸು 
ಅಂಗ - ಲಿಂಗ ತತ್ವಗಳ (ಆತ್ಮ- ಪರಮಾತ್ಮ)    ಜ್ಞಾನ ಮತ್ತು ಅವುಗಳ ಅನುಸಂಧಾನ.

ತೋಂಟದ ಸಿದ್ಧಲಿಂಗೇಶ್ವರರು ಪ್ರಾಣಲಿಂಗದ ಪೂಜೆಯನ್ನು ಹೀಗೆ ವರ್ಣಿಸಿದ್ದಾರೆ. 
"ಆ ಲಿಂಗವನ್ನು ಮನಸ್ಸಿನಲ್ಲಿ ಧ್ಯಾನಿಸಿ ಮನೋಮಧ್ಯದಲ್ಲಿಪ್ಪ ನಿಃಕಲ ಬ್ರಹ್ಮವನು
ಧ್ಯಾನವೆಂಬ ಹಸ್ತದಲ್ಲಿ ಹಿಡಿದು ಕರಸ್ಥಲದಲ್ಲಿಪ್ಪ ಲಿಂಗದ ಗೊತ್ತಿನಲ್ಲಿ ಕಟ್ಟಿ ನೆರೆವುದೀಗ ಪ್ರಾಣಲಿಂಗದ ಪೂಜೆ".
ತದೇಕ ಚಿತ್ತದಿಂದ ಇಷ್ಟಲಿಂಗ ದೃಷ್ಟಿಸಲು ಅದು ಅಂತರಂಗದಲ್ಲಿ ತುಂಬಿ ಪ್ರಾಣಲಿಂಗ ವಾಗುತ್ತದೆ. ಈ ಎಂದೆಂದೂ ಅಗಲದ ಪ್ರಾಣಲಿಂಗವನ್ನು ಪರಿಭಾವಿಸಬೇಕು. ಅನನ್ಯ ಭಾವದಿಂದ ಅನುಸಂಧಾನ ಮಾಡಿದರೆ ಸತ್ಯದ ದರ್ಶನವಾಗುತ್ತದೆ. ಆ ಬೆಳಗಿನಲ್ಲಿ ಒಂದಾಗಬೇಕು. ಅದುವೇ ಪ್ರಾಣಲಿಂಗ ಪೂಜೆ. 
ಈ "ಪ್ರಾಣ ಲಿಂಗಾನುಭವ" ವನ್ನು ಗುರು ಬಸವಣ್ಣನವರು ಹೀಗೆ ವರ್ಣಿಸಿದ್ದಾರೆ. 
#ಕಂಗಳು ತುಂಬಿದ ಬಳಿಕ ನೋಡಲಿಲ್ಲ,
ಕಿವಿಗಳು ತುಂಬಿದ ಬಳಿಕ ಕೇಳಲಿಲ್ಲ,
ಕೈಗಳು ತುಂಬಿದ ಬಳಿಕ ಪೂಜಿಸಲಿಲ್ಲ,
ಮನ ತುಂಬಿದ ಬಳಿಕ ನೆನೆಯಲಿಲ್ಲ,
ಮಹಂತ ಕೂಡಲಸಂಗಮದೇವನ. / 446
ಎನ್ನುತ್ತಾರೆ ಗುರು ಬಸವಣ್ಣನವರು 

ಪ್ರಾಣಲಿಂಗ ಪೂಜೆಯು ಒಂದು ಯೋಗ ವಿಧಾನವಾಗಿದೆ. ಇಷ್ಟಲಿಂಗ ಪೂಜೆಯಲ್ಲಿ ಭಕ್ತಿ, ಕ್ರಿಯೆ, ಜ್ಞಾನದ ಪೂರ್ವಸಿದ್ಧತೆ ಪಡೆದ ನಂತರ, ಪ್ರಾಣಲಿಂಗ ಪೂಜೆಯಲ್ಲಿ ದೇಹದಲ್ಲಿರುವ ಅಂತಃಶಕ್ತಿಯನ್ನು ಜಾಗೃತಗೊಳಿಸುವ ಯೋಗಸಾಧನೆಯನ್ನು ಕೈಗೊಳ್ಳಬೇಕು. ಇಲ್ಲಿ ಸಾಧನೆಯು ಧ್ಯಾನ ಮತ್ತು ಅನುಸಂಧಾನದ ಕಡೆಗೆ ತಿರುಗುತ್ತದೆ. ಇಲ್ಲಿ ಲಿಂಗವು ಉಪಾಸ್ಯವಾದ ಸ್ಥೂಲವಸ್ತು ಅಲ್ಲ. ಅದು ತನ್ನ ಅಂತರಂಗ ಬಹಿರಂಗವನ್ನೆಲ್ಲಾ ವ್ಯಾಪಿಸಿದ ಶಕ್ತಿಯಾಗುತ್ತದೆ. ಲಿಂಗವೆ ತಾನೆಂದರಿಯ ಬಲ್ಲಡೆ, ಅದೇ  ಪ್ರಾಣಲಿಂಗ ಎನ್ನುತ್ತಾರೆ ಅಲ್ಲಮ ಪ್ರಭುಗಳು.

#ಎನ್ನ ಕಾಯವೆಂಬ ಸಿಂಹಾಸನದಲ್ಲಿ,
ಪ್ರಾಣವೆಂಬ ಲಿಂಗವ ಮೂರ್ತಿಗೊಳಿಸಿ,
ಧ್ಯಾನವೆಂಬ ಹಸ್ತದಲ್ಲಿ ಮುಟ್ಟಿ ಪೂಜಿಸುತ್ತಿರಲು,
ಮೆಲ್ಲಮೆಲ್ಲನೆ ಸುತ್ತಿ ಮುತ್ತಿದ ಸಂಸಾರ ಬಯಲ ಬೆರಸಿ,
ನಾ ನೀನೆಂಬ ಭೇದವಳಿದು,
ಮಹಾದಾನಿ ಸೊಡ್ಡಳನಲ್ಲಿ ಲಿಂಗೈಕ್ಯವಾಯಿತ್ತು./ 14
ಎಂಬ ಸೊಡ್ಡಳ ಬಾಚರಸನ ವಚನವು ಪ್ರಾಣಲಿಂಗ ಪೂಜೆಯ ಸಾಧನೆಯನ್ನು ಸುಂದರವಾಗಿ ಸೂಚಿಸುತ್ತಿದೆ. ಪ್ರಾಣವೇ ಲಿಂಗ, ಧ್ಯಾನವೇ ಹಸ್ತ. ಯೋಗಾಭ್ಯಾಸದಲ್ಲಿ ಮುಖ್ಯವಾದ ಧ್ಯಾನ ಧಾರಣ ಸಮಾಧಿ ಈ ಮೂರು ಅಂಶಗಳೂ ಇಲ್ಲಿ ಅಡಕವಾಗುತ್ತವೆ.
ಪ್ರಾಣಲಿಂಗಕ್ಕೆ ಕಾಯವೆ ಸೆಜ್ಜೆ, ಆಕಾಶಗಂಗೆಯಲ್ಲಿ ಮಜ್ಜನ. ಹೂವಿಲ್ಲದ ಪರಿಮಳದ ಪೂಜೆ! ಹೃದಯಕಮಲದಲ್ಲಿ `ಶಿವಶಿವಾ' ಎಂಬ ಶಬ್ದ ಎನ್ನುತ್ತಾರೆ ಅಲ್ಲಮ ಪ್ರಭುಗಳು.

*ಪರಿಣಾಮ*:
ಪ್ರಾಣಲಿಂಗ ಪೂಜೆಯಲ್ಲಿ ಸತ್ಯಾನುಭಾವ ವಾಗುತ್ತದೆ. ಸರ್ವವ್ಯಾಪಕನಾದ ಭಗವಂತನು ವಿಶ್ವದಲ್ಲಿ ಎಲ್ಲಾ ಕಡೆಗೆ ಇರುವಂತೆ ತನ್ನಲ್ಲಿಯೂ ಇರುವುದನ್ನು ಅರಿತು ಪ್ರಾಣಲಿಂಗಿ ಆನಂದಿಸುತ್ತಾನೆ.
ತಾನೂ ಪರಮಾತ್ಮನ ಒಂದಂಶ , ಅದೇ ರೀತಿಯಾಗಿ ಸಕಲ ಜೀವರಾಶಿಗಳಲ್ಲಿ ದೇವನಿರುವನು ಎಂದು ಅರಿಯುತ್ತಾನೆ.
 "ತನ್ನ ದೇಹದಲ್ಲಿದ್ದ ಜೀವ ಚೇತನ ವಿಶ್ವದ ಮಹಾಚೇತನ" ಎಂದು ಅರಿಯುತ್ತಾನೆ.
ಮಣ್ಣಿನ ಪಣತಿಯೆ ಇರಲಿ, ಹೊನ್ನಿನ ಪಣತಿಯೇ ಇರಲಿ, ಆದರೆ ಎರಡರಲ್ಲಿಯೂ ಬೆಳಗುವ ಜ್ಯೋತಿ ಮಾತ್ರ ಒಂದೇ!  ಹಾಗೆಯೇ ಎಲ್ಲರಲ್ಲಿಯೂ ಹೊಳೆಯುವ ಪ್ರಾಣಜ್ಯೋತಿ ಪರಮಾತ್ಮನು ಒಬ್ಬನೇ.- ಆ ಪ್ರಾಣಜ್ಯೋತಿಯೇ ಪ್ರಾಣಲಿಂಗ. ಕಣ್ಣು ಮುಚ್ಚಿದಾಗಲೂ ಅದು ಸ್ಮೃತಿಪಟಲದಲ್ಲಿ ದರ್ಶನವಾಗುತ್ತದೆ. ಹೀಗೆ ತನ್ನೊಳಗೆ ದೇವರನ್ನು, ದೇವನಲ್ಲಿ ತನ್ನನ್ನು ಕಂಡು ಪ್ರಪಂಚವೆಲ್ಲವೂ ಪರಮಾತ್ಮನಿಂದ ತುಂಬಿಹೋಗಿದೆ ಎಂದರಿತು ಆನಂದಿಸುತ್ತಾನೆ. 
-✍️ Dr Prema Pangi
#ಪ್ರೇಮಾ_ಪಾಂಗಿ,#ಅಲ್ಲಮ_ಪ್ರಭುಗಳು
#ಪೂಜಿಸಿ_ಕೆಳಯಿಂಕೆ_ಇಳುಹಲದೇನೊ?

Comments

Popular posts from this blog

Shika chakra or Bindu chakra:Bindu visarga

Hrit Chakra or Eight Petals Chakra

A-Ka-Ta triangle or Akshara Brahma