*ವೀರ ವಿರಾಗಿಣಿ ಶರಣೆ ಅಕ್ಕಮಹಾದೇವಿ*
ವೀರ ವಿರಾಗಿಣಿ ಶರಣೆ ಅಕ್ಕಮಹಾದೇವಿ:
ಕಾಲ: ಹನ್ನೆರಡನೆಯ ಶತಮಾನ.ಶಿವಮೊಗ್ಗೆ ಜಿಲ್ಲೆಯ ಉಡತಡಿ ಎಂಬ ಗ್ರಾಮದ ಸಂಪ್ರದಾಯಸ್ಥ ಮನೆತನದಲ್ಲಿ ಹುಟ್ಟಿದ ಮಹಾದೇವಿ ಶಿವಭಕ್ತರಾದ ನಿರ್ಮಲಶೆಟ್ಟಿ ಮತ್ತು ಸುಮತಿಯರ ಮಗಳು. ಬಾಲ್ಯದಿಂದಲೂ ಭಗವಂತನ ಬಗೆಗೆ ಆಕೆಗಿದ್ದ ಆಸಕ್ತಿˌ ಕುತೂಹಲಗಳು ನಂತರದಲ್ಲಿ ಹಂಬಲ ಮತ್ತು ಭಕ್ತಿಯಾಗಿ ಪರಿವರ್ತನೆ ಹೊಂದುತ್ತವೆ. ಸದಾ ದೇವರ ಧ್ಯಾನ ಮತ್ತು ಚಿಂತನೆಗಳಿಂದ ಆಕೆಯ ವ್ಯಕ್ತಿತ್ವ ವೈರಾಗ್ಯ ಮತ್ತು ಭಕ್ತಿಗಳಿಂದ ರೂಪುಗೊಳ್ಳುತ್ತ ಸಾಗುತ್ತದೆ. ಮಹಾದೇವಿ ಬಾಲ್ಯದಲ್ಲಿಯೇ ಚೆನ್ನಮಲ್ಲಿಕಾರ್ಜುನನನ್ನು ಮನದಿ ವರಿಸಿದವಳು.
ಊರಿನ ಜೈನ ರಾಜ ಕೌಶಿಕ ಅತ್ಯಂತ ರೂಪವತಿಯಾದ ಮಹಾದೇವಿಯನ್ನು ಮದುವೆಯಾಗಲು ಬಯಸಿ ಒತ್ತಾಯಿಸಿದ. . ದೇವರನ್ನೇ ಗಂಡˌ ದೇವರನ್ನೇ ಗುರುವೆಂದು ನಂಬಿದ್ದ ಅಕ್ಕನ ಮನಸ್ಸು ಈ ಲೋಕದ ಗಂಡನನ್ನು ಸ್ವೀಕರಿಸಲು ನಿರಾಕರಿಸುತ್ತದೆ. ರಾಜನಿಂದ ಮಾತಾ ಪಿತೃರಿಗೆ ತೊಂದರೆಯಾಗ ಬಾರದೆಂದು ಕೆಲವು ಶರತ್ತುಗಳನ್ನು ವಿಧಿಸಿ ಮದುವೆಗೆ ಒಪ್ಪುತ್ತಾಳೆ.
ಕೌಶಿಕನೊಡನೆ ಒತ್ತಾಯದ ಮದುವೆಗೊಳಪಟ್ಟ ಮಹಾದೇವಿ ಕೌಶಿಕ ವಚನ ಭಂಗ ಮಾಡಿ ಅವಳ ಪೂಜೆ ಸಮಯದಲ್ಲಿ ಅವಳುಟ್ಟ ಸೀರೆಯನ್ನು ಕಳೆದೆಸೆದಾಗ ಆತನ ನಡವಳಕೆಯಿಂದ ರೋಸಿˌ ಹೀಗೆ ನುಡಿಯುತ್ತಾಳೆ.
#ಎಮ್ಮೆಗೊಂದು ಚಿಂತೆ! ಸಮ್ಮಗಾರನಿಗೊಂದು ಚಿಂತೆ!
ನನಗೆ ನನ್ನ ಚಿಂತೆ! ತನಗೆ ತನ್ನ ಕಾಮದ ಚಿಂತೆ!
ಒಲ್ಲೆ ಹೋಗು, ಸೆರಗ ಬಿಡು ಮರುಳೆ!
ನನಗೆ ಚೆನ್ನಮಲ್ಲಿಕಾಜುನದೇವರು
ಒಲಿವನೋ ಒಲಿಯನೋ ಎಂಬ ಚಿಂತೆ!
Translation:
The buffalo has its own concern!
The cobler yet another!
I have my own concern!
You have your concern for lust!
Get away , fool leave my saree,
I am concerned only whether my lord
Channamallikarjuna loves me or not!
ಉಟ್ಟ ಸೀರೆಯ ಸೀಳಿˌ
ತೊಟ್ಟ ತೊಡುಗೆಯ ಮುರಿದುˌ
ಬಿಟ್ಟಿಹೆನು ನಾನು ಬಿಡುಮುಡಿಯ
ಎಲೆ ದೇವಾ ಕೊಟ್ಟಿಹೆನು ಎನ್ನ ತನುಮನವ.
#ಕೈ ಸಿರಿಯ ದಂಡವ ಕೊಳಬಹುದಲ್ಲದೆˌ ಮೈಸಿರಿಯ
ದಂಡವನ್ನು ಕೊಳಲುಂಟೆ?
ಉಟ್ಟಂತಹ ಉಡುಗೆ ತೊಡುಗೆಯನ್ನೆಲ್ಲ ಸೆಳೆದುಕೊಳಬಹುದಲ್ಲದೆ ಮುಚ್ಚಿರ್ದ ಮುಸುಕಿರ್ದ ನಿರ್ವಾಣವ ಸೆಳೆದುಕೊಳಬಹುದೆ?
ಚೆನ್ನಮಲ್ಲಿಕಾರ್ಜುನದೇವರ
ಬೆಳಗನುಟ್ಟು ಲಜ್ಜೆಗೆಟ್ಟವಳಿಗೆ
ಉಡುಗೆ ತೊಡುಗೆಯ
ಹಂಗೇಕೊ ಮರುಳೆ?
ಅರ್ಥ:
ಕೈಯಲ್ಲಿರುವ ಸಿರಿ ಸಂಪತ್ತನ್ನು ಕಿತ್ತಿಕೊಳ್ಳಬಹುದಲ್ಲದೆ ಮೈಯ ಸಿರಿಯನ್ನು ಯಾರೂ ಅಪಹರಿಸಲಾರರು. ದೇವನ ಅರಿವೆಂಬ ಬೆಳಗಿನ ಬಟ್ಟೆಯುಟ್ಟು ಎಲ್ಲ ಸಂಕೋಚವ ಕಳಚಿದವಳಿಗೆ ಭೌತಿಕದ ಉಡುಪುಗಳ ಹಂಗೇಕೆ ಎಂದು ಅಕ್ಕ ಮಾರ್ಮಿಕವಾಗಿ ಪ್ರಶ್ನಿಸುವ ಪರಿ ಅಜ್ಞಾನದ ಶೃಂಗಾರ ಉಡುಪುಗಳಿಗಿಂತ ಸುಜ್ಞಾನದ ಅರಿವಿನ ಉಡುಪು ಶ್ರೇಷ್ಠ ಎನ್ನುವ ಸಂದೇಶ ನೀಡುತ್ತದೆ.
ಏರು ಜೌವ್ವನೆಯಾದ ಅಕ್ಕ ನಿರ್ಭಾವದಿಂದˌ ವೈರಾಗ್ಯದಿಂದ ದಿಟ್ಟ ದಿಗಂಬರೆಯಾಗಿ ನಿಂತ ಪರಿಯನ್ನು ಕಂಡು ಕೌಶಿಕ ದಿಗ್ಮೂಢನಾಗುತ್ತಾನೆ. ಉಡುಗೆಯನ್ನೂ ತೊರೆದು ಅರಮನೆ ಬಿಟ್ಟು ಹೊರಟುಬಿಡುತ್ತಾಳೆ.
ಕೌಶಿಕನೆಂಬ ನಶ್ವರ ಲೋಕದ ಗಂಡನ ಅಂಗವಿಕಾರದ ಸಂಗವ ತೊರೆದು ಅಗಮ್ಯˌಅಗೋಚರನಾದ ದೇವನೇ ತನ್ನ ಗಂಡನೆಂದು ನಂಬಿದ ಅಕ್ಕ ಮಹಾದೇವಿ ಕಲ್ಯಾಣದ ಶರಣರ ಕ್ರಾಂತಿ ವಿಷಯ ತಿಳಿದು ಕಲ್ಯಾಣಕ್ಕೆ ಪರ್ಯಟನೆ ಮಾಡಲು ನಿರ್ಧರಿಸುತ್ತಾಳೆ.
ನಶ್ವರವಾದ ಸಂಸಾರದಲ್ಲಿ ಸಾವು-ಕೇಡು, ಎಡೆ-ಕಡೆˌ ಭವ-ಭಯ ಮತ್ತು ಕುಲ ಸೀಮೆಯುಳ್ಳ ಭೌತಿಕ ಗಂಡನಿಗಿಂತ ಇದಾವೂ ಇಲ್ಲದ ದೇವನೇ ತನ್ನ ಗಂಡನೆಂದು ನಂಬಿದ ಮಹಾದೇವಿ ಬಸವಣ್ಣ ಮತ್ತು ಇತರ ಶರಣರ ಸತ್ಸಂಗದಲ್ಲಿ ಆಧ್ಯಾತ್ಮಿಕ ಪಥ ಅರಿಯಲು ಕಲ್ಯಾಣದ ಹಾದಿ ಹಿಡಿದಳು.
ಕೌಶಿಕನ ಅರಮನೆಯಿಂದ ತಂದೆ ತಾಯಿಯ ಬಳಿಗೆ ಬಂದ ಮಹಾದೇವಿ ಕಲ್ಯಾಣದ ಬಸವಾದಿ ಶರಣರ ಕ್ರಾಂತಿ ವಿಷಯ ತಿಳಿಸಿ ಕಲ್ಯಾಣಕ್ಕೆ ಪರ್ಯಟನೆ ಮಾಡುವ ತನ್ನ ನಿರ್ಧಾರ ತಿಳಿಸುತ್ತಾಳೆ. ಕಲ್ಯಾಣಕ್ಕೆ ಪರ್ಯಟನೆ ಮಾಡುವ ಸಮಯದಲ್ಲಿ ತಂದೆ ತಾಯಿಯರ ಚಿಂತೆ, ದುಗುಡ, ಕಾತುರ ಅಳಿಯಲು ತನ್ನ ವಿಚಾರವಾಗಿ ಚಿಂತೆ ಮಾಡಬೇಡಿ ಎಂದು ಈ ವಚನ ಹೇಳುತ್ತಾಳೆ.
#ಹಸಿವಾದರೆ ಭಿಕ್ಷಾನ್ನಂಗಳುಂಟು
ತೃಷೆಯಾದರೆ ಕೆರೆ ಬಾವಿ ಹಳ್ಳಂಗಳುಂಟು
ಶಯನಕ್ಕೆ ಹಾಳುದೇಗುಲವುಂಟು
ಆತ್ಮಸಂಗಾತಕ್ಕೆ ಚೆನ್ನಮಲ್ಲಿಕಾರ್ಜುನ.
- ವೀರ ವಿರಾಗಿಣಿ ಅಕ್ಕ ಮಹಾದೇವಿ
Translation:
If I feel hungry, there are houses who give alms.
If I feel thirsty, there are lakes, wells and streams.
For sleeping, there are old depilated temples.
For soul company I have Chennamallikarjuna who is my soulmate.
ಅಕ್ಕ ಮಹಾದೇವಿ ಮಹಿಳಾ ಸಾಧಕಿಯರಲ್ಲಿಯೇ ಅಗ್ರಗಣ್ಯಳು ಹಾಗೂ ಅಪೂರ್ವ ವ್ಯಕ್ತಿ. ಹೆಣ್ಣುತನದ ಪರಿಪೂರ್ಣ ಸ್ವರೂಪವನ್ನು ಉಜ್ವಲವಾಗಿ ಬೆಳಗಿದ ಮಹಾಶಕ್ತಿ. ಈ ಜಗತ್ತು ಎನ್ನುವ ಕದಳಿಯಲ್ಲಿ ಅವಳು ಕರ್ಪುರದ ಪರಂಜ್ಯೋತಿ, ಅದಕ್ಕೆ ಸಂಕೇತವೋ ಎಂಬಂತೆ ಅವಳ ಜೀವನದ ಘಟನೆಗಳು ಬೆಳೆಯುತ್ತವೆ. ಅಕ್ಕನ ವೈರಾಗ್ಯದ ಪ್ರಭೆ ಅನುಭಾವಮಂಟಪದಲ್ಲಿ ಬಸವಾದಿ ಶರಣರ ಸತ್ಸಂಗದಲ್ಲಿ ಇನ್ನಷ್ಟು ಉಜ್ವಲವಾಗಿ ಹೊಳೆಯುತ್ತದೆ.
ಪರ್ಯಟನೆ ಮಾಡುತ್ತ ಉಡತಡಿಯಿಂದ ಮಹದೇವಿ ಭಕ್ತಿ ಭಂಡಾರಿ ಬಸವಣ್ಣನವರ ಮಹಿಮೆ ಕೇಳಿ ಕಲ್ಯಾಣಕ್ಕೆ ಪಯಣಿಸಿದಳು. ತನ್ನ ಇಷ್ಟ ದೈವವಾದ ಚೆನ್ನಮಲ್ಲಿಕಾರ್ಜುನನನ್ನು ಸೇರುವುದೇ ಅವಳ ಬಾಳಿನ ಪರಮ ಗುರಿಯಾಗಿತ್ತು. ಅದಕ್ಕಾಗಿಯೇ ಆಕೆ ಸದಾಕಾಲ ಹಂಬಲಿಸಿದಳು. ಅವಳ ಆ ಹಂಬಲಿಕೆಯ ಪ್ರತಿಬಿಂಬವೇ ಈ ವಚನಗಳು. “ಚೆನ್ನಮಲ್ಲಿಕಾರ್ಜುನ” ಅಕ್ಕಮಹಾದೇವಿಯ ಸರ್ವಸ್ವ. ಅಕ್ಕ ವಚನಗಾರ್ತಿ, ಅನುಭಾವಿ, ಕವಯಿತ್ರಿ.
1.ವಚನ
#ಹಸಿವೇ ನೀನು ನಿಲ್ಲು, ನಿಲ್ಲು, ತೃಷೆಯೇ ನೀನು ನಿಲ್ಲು ನಿಲ್ಲು
ನಿದ್ರೆಯೇ ನೀನು ನಿಲ್ಲು ನಿಲ್ಲು, ಕಾಮವೇ ನೀನು ನಿಲ್ಲು ನಿಲ್ಲು
ಕ್ರೋಧವೇ ನೀನು ನಿಲ್ಲು ನಿಲ್ಲು, ಮೋಹವೇ ನೀನು ನಿಲ್ಲು ನಿಲ್ಲು
ಲೋಭವೇ ನೀನು ನಿಲ್ಲು ನಿಲ್ಲು, ಮದವೇ ನೀನು ನಿಲ್ಲು ನಿಲ್ಲು
ಮಚ್ಚರವೇ ನೀನು ನಿಲ್ಲು ನಿಲ್ಲು, ಸಚರಾಚರವೇ ನೀನು ನಿಲ್ಲು ನಿಲ್ಲು
ನಾನು ಚೆನ್ನಮಲ್ಲಿಕಾರ್ಜುನದೇವರ ಅವಸರದ
ಓಲೆಯನೊಯ್ಯುತ್ತಲಿದ್ದೇನೆ ಶರಣಾರ್ಥಿ
- ಶರಣೆ ಅಕ್ಕಮಹಾದೇವಿ
Translation:
Hunger, you keep away
Thirst, you keep away
Sleep, you keep away
Lust, you keep away
Anger, you keep away
Delusion, you keep away
Greed, you keep away
Arrogance, you keep away
Jealousy, you keep away
Things moving and unmoving stay away
I am carrying an urgent letter to Chennamallikarjuna.
Salutations to you.
-Sharane Akkamahadevi
*ಅರ್ಥ*-
ಕಲ್ಯಾಣದ ದಾರಿಯಲ್ಲಿ ಹಸಿವು, ಬಾಯಾರಿಕೆ, ನಿದ್ರೆ, ಸುಡುಬಿಸಿಲು ಲೆಕ್ಕಿಸದೆ ಬಳಲಿದಳು. ಹಸಿವು, ಬಾಯಾರಿಕೆ, ನಿದ್ರೆ, ಕಾಮ, ಕ್ರೋಧ, ಮೋಹ, ಮದ, ಮತ್ಸರ, ಲೋಭ ಮತ್ತು ಸಕಲ ಚರಾಚರ ವಿಷಯಗಳು ತನ್ನ ಬಳಿ ಸುಳಿಯದಿರಲಿ ಎಂದು ಪ್ರಾಥಿಸುತ್ತ, ತನ್ನ ಇಷ್ಟ ದೈವ ಚನ್ನಮಲ್ಲಿಕಾರ್ಜುನನ ಕಾಣಲು ಅವಸರದ ಕಾತರದಿಂದ ತನ್ನ ಬಿನ್ನಹವನ್ನು ಒಯ್ಯುತ್ತಿದ್ದೇನೆ. ಚೆನ್ನಮಲ್ಲಿಕಾರ್ಜುನ ಅಕ್ಕಮಹಾದೇವಿಯ ಇಷ್ಟದೇವ ಮತ್ತು ಅವಳ ವಚನಾಂಕಿತವು. ಅವನ ದರ್ಶನದ ಹಂಬಲದಲ್ಲಿ ಎಲ್ಲವನ್ನೂ ಸ್ವತಃ ತನ್ನನ್ನೇ ಮರೆತವಳು ಅಕ್ಕ ಮಹಾದೇವಿ. ಭಕ್ತಿ ಸ್ಥಲದ ಪರಿಕಾಷ್ಟತೆಯಲ್ಲಿ ಈ ವಚನಗಳು ರಚಿತವಾಗಿವೆ.
2.ವಚನ:
#ತೆರಣಿಯ ಹುಳು ತನ್ನ ಸ್ನೇಹದಿಂದ ಮನೆಯ ಮಾಡಿ
ತನ್ನ ನೂಲು ತನ್ನನೇ ಸುತ್ತಿ ಸುತ್ತಿ ಸಾವ ತೆರನಂತೆ
ಮನ ಬಂದುದ ಬಯಸಿ ಬಯಸಿ ಬೇವುತ್ತಿರುವೆನಯ್ಯ!
ಅಯ್ಯ, ಎನ್ನ ಮನದ ದುರಾಶೆಯ ಮಾಣಿಸಿ
ನಿಮ್ಮತ್ತ ತೋರಾ, ಚೆನ್ನಮಲ್ಲಿಕಾರ್ಜುನ
- ಶರಣೆ ಅಕ್ಕಮಹಾದೇವಿ
Translation:
Like a silk worm weaving its home in love
Out of its own secretion
And dying encircled in its own thread
Craving whatever comes to mind
I burn O Lord
Blot out the greed of my heart
And lead me towards you
O Chennamallikarjuna.
-Sharane Akka Mahadevi
ಅರ್ಥ:
ರೇಷ್ಮೆ ಹುಳ ತನ್ನ ಸ್ನೇಹದಿಂದ ಮನೆ ಮಾಡಿ ತನ್ನದೇ ನೂಲಿನ ಪ್ರೀತಿಯ ಬಲೆಯಲ್ಲಿ ತನ್ನನ್ನೆ ಸುತ್ತಿ ಸುತ್ತಿ ಸಾಯುವಂತೆ, ನಾನು ನಿಮ್ಮನ್ನು ಮನ ಬಂದಂತೆ ಬಯಸಿ ಬಯಸಿ ಬೇಯುತ್ತಿದ್ದೇನೆ. ನನ್ನ ಮನದ ದುರಾಶೆಯ ಮನ್ನಿಸಿ ಚೆನ್ನಮಲ್ಲಿಕಾರ್ಜುನ ನಿಮ್ಮ ದರ್ಶನ ಕೊಡಿ ಎಂದು ಪ್ರಾಥಿಸುತ್ತಾಳೆ.
3.ವಚನ:
#ಮನೆಮನೆದಪ್ಪದೆ ಕೈಯೊಡ್ಡಿ ಬೇಡುವಂತೆ ಮಾಡಯ್ಯ
ಬೇಡಿದರೆ ಇಕ್ಕದಂತೆ ಮಾಡಯ್ಯ
ಇಕ್ಕಿದರೆ ನೆಲಕ್ಕೆ ಬೀಳುವಂತೆ ಮಾಡಯ್ಯ
ನೆಲಕ್ಕೆ ಬಿದ್ದರೆ ನಾನೆತ್ತಿಕೊಂಬುದಕೆ ಮುನ್ನವೇ
ಶುನಿ ಎತ್ತಿಕೊಂಬಂತೆ ಮಾಡು
ಚೆನ್ನಮಲ್ಲಿಕಾರ್ಜುನಯ್ಯ!
- ಶರಣೆ ಅಕ್ಕಮಹಾದೇವಿ
Translation:
Make me go with hands outstretched
Begging from house to house O Lord
When I beg, make them not give O God!
Even if they give, O God!
Make it fall to the ground
And when it falls, Lord
Make the dog pick it up
Before I pick it up O Lord! Chennamallikarjuna
-Sharane Akka Mahadevi
*ಅರ್ಥ*-
ತನ್ನ ಅಗಾಧವಾದ ಪ್ರೀತಿ, ದರ್ಶನದ ಹಂಬಲವನ್ನು ದೇವರು ಪರೀಕ್ಷಿಸಲಿ, ಊಟಕ್ಕೆ ಭಿಕ್ಷೆ ಸಿಗದಿರಲಿ ಎಂದು ಚನ್ನಮಲ್ಲಿಕಾರ್ಜುನ ನಲ್ಲಿ ಬಿನ್ನವಿಸಿಗೊಳ್ಳುತ್ತಾಳೆ.
4.ವಚನ:
#ಅಳಿಸಂಕುಳವೆ, ಮಾಮರವೇ, ಬೆಳದಿಂಗಳೇ,
ಕೋಗಿಲೆಯೇ, ನಿಮ್ಮನ್ನೆಲ್ಲರನೂ ಒಂದು ಬೇಡುವೆನು
ಎನ್ನೊಡೆಯ ಚೆನ್ನಮಲ್ಲಿಕಾರ್ಜುನ ದೇವರ ಕಂಡಡೆ
ಕರೆದು ತೋರಿರೆ
- ಶರಣೆ ಅಕ್ಕಮಹಾದೇವಿ
Translation:
O Squrills, Mango tree, Moonlight, Koel,
I request you all for one wish.
If you see my master, Channamallikarjuna, please call me and show me.
-Sharane Akka Mahadevi
*ಅರ್ಥ*-
ಅಕ್ಕಮಹಾದೇವಿ ಪ್ರಕೃತಿ ಪ್ರೇಮಿ. ತನ್ನ ಇಷ್ಟ ದೈವವಾದ ಚೆನ್ನಮಲ್ಲಿಕಾರ್ಜುನನನ್ನು ಅರಸುತ್ತಾ ಸಾಗುವಾಗ ದಾರಿಯಲ್ಲಿ ಎದುರಾಗುವ ಅಳಿಲುಗಳು, ಮಾಮರ, ಕೋಗಿಲೆ ಮುಂತಾದ ಗಿಡ, ಪ್ರಾಣಿ, ಪಕ್ಷಿ ಹಾಗೂ ಬೆಳದಿಂಗಳ ಸುಂದರ ತಂಪಾದ ರಾತ್ರಿಗೆ ತನ್ನೊಡೆಯ ಚೆನ್ನಮಲ್ಲಿಕಾರ್ಜುನ ದೇವರ ದರ್ಶನದ ಕಾತರ ಹಂಬಲಿಕೆ ತಿಳಿಸುತ್ತಾಳೆ. ವಚನದಲ್ಲಿ ಅವಳ ಹಂಬಲಿಕೆ ಅತ್ಯುತ್ತಮವಾಗಿ ಬಿಂಬಿತವಾಗಿದೆ. ತನ್ನ ವಚನಗಳಲ್ಲಿ ಯಾವುದೇ ಹಿಂಜರಿಕೆ ಇಲ್ಲದೇ ತನ್ನ ಉತ್ಕಟ ನಿಷ್ಕಮಲ ಪ್ರೀತಿ, ಪ್ರೇಮ, ಹಂಬಲ, ವಿರಹವನ್ನು ಅಭಿವ್ಯಕ್ತಿಸಿದ್ದಾಳೆ
5. ವಚನ:
#ಚಿಲಿಮಿಲಿ ಎಂದೋದುವ ಗಿಳಿಗಳಿರಾ!
ನೀವು ಕಾಣಿರೆ? ನೀವು ಕಾಣಿರೆ?
ಸರವೆತ್ತಿ ಪಾಡುವ ಕೋಗಿಲೆಗಳಿರಾ !
ನೀವು ಕಾಣಿರೆ? ನೀವು ಕಾಣಿರೆ?
ಎರಗಿ ಬಂದಾಡುವ ತುಂಬಿಗಳಿರಾ !
ನೀವು ಕಾಣಿರೆ? ನೀವು ಕಾಣಿರೆ?
ಕೊಳನ ತಡಿಯಾಡುವ ಹಂಸಗಳಿರಾ !
ನೀವು ಕಾಣಿರೆ? ನೀವು ಕಾಣಿರೆ?
ಗಿರಿಗಹ್ವರದೊಳಗಾಡುವ ನವಿಲುಗಳಿರಾ !
ನೀವು ಕಾಣಿರೆ? ನೀವು ಕಾಣಿರೆ?
ಚೆನ್ನಮಲ್ಲಿಕಾರ್ಜುನನೆಲ್ಲಿದ್ದಹನೆಂಬುದ ಬಲ್ಲೆಡೆ
ನೀವು ಹೇಳಿರೇ !
- ಶರಣೆ ಅಕ್ಕಮಹಾದೇವಿ
Translation:
O Parrots chirping !
have you seen, have you seen?
O Cuckoos singing melodiously !
have you seen, have you seen?
O Bees buzzing playfully !
have you seen, have you seen?
O Swans playing gently on the lake !
have you seen, have you seen?
O Peacocks dancing in hills and caves !
Have you seen, have you seen?
If you know tell me !
Where my Chennamallikaarjuna is. -Sharane Akka Mahadevi
*ಅರ್ಥ*-
ಅಕ್ಕಮಹಾದೇವಿ ಪ್ರಕೃತಿ ಪ್ರೇಮಿ. ತನ್ನ ಇಷ್ಟ ದೈವವಾದ ಚೆನ್ನಮಲ್ಲಿಕಾರ್ಜುನನನ್ನು ಅರಸುತ್ತಾ ಸಾಗುವಾಗ ದಾರಿಯಲ್ಲಿ ಎದುರಾಗುವ ಗಿಳಿ, ಕೋಗಿಲೆ, ದುಂಬಿ, ಹಂಸ ಮತ್ತು ನವಿಲು ಮುಂತಾದ ಪ್ರಾಣಿ-ಪಕ್ಷಿಗಳಲ್ಲಿ ಅವಳು ಅವನ ಇರುವನ್ನು ಪ್ರಶ್ನಿಸಿರುವುದು. ವಚನದಲ್ಲಿ ಅವಳ ಹಂಬಲಿಕೆ ಅತ್ಯುತ್ತಮವಾಗಿ ಬಿಂಬಿತವಾಗಿದೆ. ತನ್ನ ವಚನಗಳಲ್ಲಿ ಯಾವುದೇ ಹಿಂಜರಿಕೆ ಇಲ್ಲದೇ ತನ್ನ ಉತ್ಕಟ ನಿಷ್ಕಮಲ ಪ್ರೀತಿ, ಪ್ರೇಮ, ಹಂಬಲ, ವಿರಹವನ್ನು ಅಭಿವ್ಯಕ್ತಿಸಿದ್ದಾಳೆ. ಇಡೀ ವಚನಕ್ಕೆ ಒಂದು ರೀತಿಯ ಲಯ ಸಂಯೋಜನೆ ಇದ್ದು, ಅದು ವಚನದ ಸೌಂದರ್ಯವನ್ನು ಹೆಚ್ಚಿಸುತ್ತದೆ. “ನೀವು ಕಾಣಿರೇ.. ನೀವು ಕಾಣಿರೇ..” ಎಂಬುದು ಪುನರುಕ್ತಿಯಾಗಿ ಕಾವ್ಯಮಯವಾಗಿದೆ. ವಚನದಲ್ಲಿ ಅವಳ ನಿಸರ್ಗ ಪ್ರೇಮವು ಕಾಣುತ್ತದೆ. ಅಕ್ಕಮಹಾದೇವಿ ಅತೀ ಶ್ರೇಷ್ಟ ಆಧ್ಯಾತ್ಮ ಸಾಧಕಳು.
6.ವಚನ:
#ಈಳೆ-ನಿಂಬೆ-ಮಾವು-ಮಾದಲಕ್ಕೆ
ಹುಳಿನೀರೆರೆದವರಾರಯ್ಯ?
ಕಬ್ಬು-ಬಾಳೆ-ನಾರಿವಾಳಕ್ಕೆ ಸಿಹಿನೀರೆರೆದವರಾರಯ್ಯ?
ಕಳವೆ-ಶಾಲಿಗೆ ಓಗರದ ಉದಕವನೆರೆದವರಾರಯ್ಯ?
ಮರುಗ-ಮಲ್ಲಿಗೆ-ಪಚ್ಚೆ-ಮುಡಿವಾಳಕ್ಕೆ
ಪರಿಮಳದುದಕವನೆರೆದವರಾರಯ್ಯ?
ಇಂತೀ ಜಲ ಒಂದೆ, ನೆಲ ಒಂದೆ, ಆಕಾಶ ಒಂದೆ!
ಒಂದೇ ಜಲವು ಹಲವು ದ್ರವ್ಯಂಗಳ ಕೂಡಿ
ತನ್ನ ಪರಿ ಬೇರಾಗಿಹ ಹಾಂಗೆ
ಎನ್ನ ದೇವ ಚೆನ್ನಮಲ್ಲಿಕಾರ್ಜುನಯ್ಯನು
ಹಲವು ಜಗಂಗಳ ಕೂಡಿಕೊಂಡಿದ್ದರೇನು?
ತನ್ನ ಪರಿ ಬೇರೆ!
- ಶರಣೆ ಅಕ್ಕಮಹಾದೇವಿ
Translation :
Who waters Lemon, Mango, Orange and Citron with water so sour?
Who waters Sugarcane, Banana, Jackfruit, Coconut with water so sweet?
Who pours such delicious sour water
into the Berries?
Who pours such sweet-smelling water
into Jasmine, Maruga, Pachche and Mudivaala leaves?
Though all water is one,
All earth is one,
All sky is one ;
like water changes its character
mingling with other essences,
so does my lord Chennamallikarjuna
Though He is in many worlds
He is still apart.
*ಅರ್ಥ*-
ವಚನದಲ್ಲಿ ಅವಳ ನಿಸರ್ಗ ಪ್ರೇಮ ಕಾಣುತ್ತದೆ. ಈಳೆ-ನಿಂಬೆ-ಮಾವು-ಮಾದಲಕ್ಕೆ ಹುಳಿ ನೀರು; ಕಬ್ಬು-ಬಾಳೆ-ನಾರಿವಾಳಕ್ಕೆ ಸಿಹಿ ನೀರು; ಕಳವೆ-ಶಾಲಿಗೆ ಓಗರ ನೀರು; ಮರುಗ-ಮಲ್ಲಿಗೆ-ಪಚ್ಚೆ-ಮುಡಿವಾಳಕ್ಕೆ
ಪರಿಮಳ ನೀರು ಯಾರು ಏರೆದಿದ್ದಾರೆ? ಈ ಎಲ್ಲವೂಗಳಿಗೆ ಒಂದೇ ಜಲ, ಒಂದೇ ನೆಲ, ಒಂದೇ ಆಕಾಶ ಆದರೂ ಎಲ್ಲವೂ ಬೇರೆ ಬೇರೆಯಾಗಿ ಪರಿವರ್ತನೆಯಾಯಿತು. ಚನ್ನಮಲ್ಲಿಕಾರ್ಜುನ ಹಲವು ಜಗಗಳಲ್ಲಿ ಕೂಡಿದ್ದರೂ ತನ್ನಲ್ಲಿ ಬೇರೆಯೇ ರೀತಿಯಲ್ಲಿ ಕೂಡಿಕೊಂಡು ಪ್ರಕಟಗೊಂಡಿದ್ದಾನೆ. ಹೀಗೆ ಅಕ್ಕಮಹಾದೇವಿ ತನ್ನಲ್ಲಿಯೇ ‘ದೇವರ’ ಇರುವನ್ನು ಸದ್ದಿಲ್ಲದೇ ಪ್ರಕಟಗೊಳಿಸುತ್ತಾಳೆ.
ಅಕ್ಕಮಹಾದೇವಿ ಹನ್ನೆರಡನೆಯ ಶತಮಾನದ ಶ್ರೇಷ್ಠ ವಚನಕಾರ್ತಿ, ಕನ್ನಡದ ಮೊದಲ ಕವಿಯಿತ್ರಿ, ವಿರಾಗಿಣಿ ಮತ್ತು ಅನುಭಾವಿ. ಶ್ರೀಶೈಲದ ಚೆನ್ನಮಲ್ಲಿಕಾರ್ಜುನ ಅಕ್ಕಮಹಾದೇವಿಯ ಆರಾಧ್ಯದೈವ. ಚೆನ್ನಮಲ್ಲಿಕಾರ್ಜುನನಲ್ಲಿಯೇ ಸರ್ವಸ್ವವನ್ನು ಕಂಡ ಈಕೆ ತನ್ನ ಆದರ್ಶಕ್ಕಾಗಿ ಸಾಮಾಜಿಕ ಮತ್ತು ರಾಜಕೀಯ ವ್ಯವಸ್ಥೆಗಳನ್ನು ಧಿಕ್ಕರಿಸಿ, ವೀರ ವಿರಾಗಿಣಿ ಎನಿಸಿದರು. ಉಡುತಡಿ ಯಿಂದ ಕಲ್ಯಾಣದ ಪಯಣದಲ್ಲಿ ರಚಿತವಾದ ವಚನಗಳ ಸಾರದಲ್ಲಿ ಭಕ್ತಿಸ್ಥಲದ ಪರಿಕಾಷ್ಟತೆಯನ್ನು ಕಾಣಬಹುದು.
ಮುಂದುವರೆಯುವುದು..........
- ✍️Dr Prema Pangi
#ಪ್ರೇಮಾ_ಪಾಂಗಿ,#Akkamahadevi,
#ಅಕ್ಕಮಹಾದೇವಿ
Comments
Post a Comment