ಶರಣ ಪರಿಚಯ - ಅಪ್ರಮಾಣದೇವ

ಶರಣ ಅಪ್ರಮಾಣದೇವ:

ಶರಣ ಅಪ್ರಮಾಣದೇವರು  
ಬಸವೋತ್ತರಯುಗವಾದ ಪ್ರೌಡದೇವರ ಕಾಲದ ಮಹತ್ವದ ವಚನಕಾರರು. 
ಈತನನ್ನು ಬಾಲಸಂಗಯ್ಯ ಎಂದು ಕೆಲವರು ಕರೆದಿದ್ದಾರೆ. ಆದರೆ ಇವರ ನಿಜನಾಮ 'ಅಪ್ರಮಾಣದೇವ'
ಅಂಕಿತ: ಅಪ್ರಮಾಣ ಕೂಡಲಸಂಗಮದೇವ
 (ಅಪ್ರಮಾಣ ಅಂದರೆ ಯಾವುದೇ ಅಳತೆಗೆ ನಿಲುಕದ ಕೂಡಲಸಂಗಮದೇವ)
ಕಾಯಕ:  ಶ್ರೇಷ್ಠ ಪಂಡಿತ, ಶ್ರೇಷ್ಠ ಅನುಭಾವಿ.
ಅನುಪಮ ಶಾಸ್ತ್ರಾನುಭಾವಿ, ಉದ್ದಾಮ ಪಂಡಿತ, 
ವಚನಗಳು: 920
ಕಾಲ: 15-16 ಶತಮಾನವಿರಬಹುದು. 
ಈತನ ಬದುಕಿಗೆ ಸಂಬಂಧಿಸಿದ ಯಾವುದೇ ಹೆಚ್ಚಿನ ವಿವರಗಳು ದೊರೆತಿಲ್ಲ.
ವಚನಕಾರರಲ್ಲಿ ಮೂವರು ಬಾಲಸಂಗಯ್ಯ ಹೆಸರಿನವರು ಕಂಡುಬರುವರು.
ಮೊದಲನೆಯದಾಗಿ ವಿಶ್ವಗುರು ಬಸವಣ್ಣನವರಿಗೆ ಬಾಲಸಂಗಯ್ಯ ಎಂಬ ಏಕಮಾತ್ರ ಪುತ್ರನಿದ್ದು , ಆತನು ತನ್ನ ಎಳೆಯ ವಯಸ್ಸಿನಲ್ಲಿಯೇ ಲಿಂಗೈಕ್ಯನಾದರಿಂದ ಅವನು ವಚನಕಾರನಲ್ಲ.
ಎರಡನೆಯದಾಗಿ, ಬಾಲಸಂಗಣ್ಣ ಎಂಬ ವಚನಕಾರನಿದ್ದು, ಆತನ ವಚನಗಳ ಅಂಕಿತ "ಕಮಠೇಶ್ವರಲಿಂಗ" ಎಂದಿರುತ್ತದೆ.
ಮೂರನೆಯವರು ಈ ಶರಣ ಅಪ್ರಮಾಣದೇವರು, ಬಾಲಸಂಗಯ್ಯ ಎಂದು ಕರೆಯಲ್ಪಟ್ಟವರು.  ಶರಣ ಅಪ್ರಮಾಣದೇವ ಇವರು, 15 ನೆಯ ಶತಮಾನದಲ್ಲಿ ಏಳುನೂರಾವೊಂದು ವಿರಕ್ತರೊಡಗೂಡಿ ದೇಶ ಸಂಚರಿಸಿ, ಜನರಲ್ಲಿ ಧಾರ್ಮಿಕ ಪ್ರಜ್ಞೆಯನ್ನು ಮೂಡಿಸಿದ ಶ್ರೀ ತೋಂಟದ ಸಿದ್ಧಲಿಂಗ ಶಿವಯೋಗಿಗಳ ಪಟ್ಟದ ಶಿಷ್ಯ ಶ್ರೀ ಗುರು  ಬೋಳಬಸವೇಶ್ವರರ  ಶಿಷ್ಯರು. ಇವರ ವಿದ್ವತ್ ದಿಂದ ಪ್ರಭಾವಗೊಂಡು  ಬಾಲಸಂಗಯ್ಯ ಎಂದು ಕರೆಯಲ್ಪಟ್ಟವರು. ಇವರು ಗುರು ಬೋಳಬಸವೇಶ್ವರರಿಂದ ಲಿಂಗದೀಕ್ಷೆ , ಜಂಗಮದೀಕ್ಷೆ ಸ್ವೀಕರಿಸಿದರು.

ಶರಣ ಅಪ್ರಮಾಣದೇವರು ಅದ್ವಿತೀಯ ಪಂಡಿತರಾಗಿದ್ದು, ಸರ್ವಧರ್ಮ ಶಾಸ್ತ್ರಗಳು, ಪುರಾಣ, ವೇದ, ಉಪನಿಷತ್ತು, ಆಗಮಗಳನ್ನು ಬಲ್ಲವರಾಗಿದ್ದರು.  ವೀರಶೈವ ತತ್ವಗಳನ್ನು ಕ್ರಮಬದ್ಧವಾಗಿ  ತಮ್ಮ ವಚನ ಗ್ರಂಥದಲ್ಲಿ ನಿರೂಪಿಸಿದ್ದಾರೆ. ಇವರ ವಚನಗಳು ಶಾಸ್ತ್ರ ಸಮ್ಮತ, ನೀತಿ ಪ್ರಧಾನ, ತತ್ವ ಪ್ರಬೋಧಕವಾಗಿವೆ. ಷಟಸ್ಥಲ ಅರಿತುಕೊಳ್ಳುವ ಜಿಜ್ಞಾಸುಗಳಿಗೆ ಬಾಲಸಂಗಯ್ಯರ "ವಚನ ಗ್ರಂಥ" ದಾರಿದೀಪವಾಗಿ ನಿಲ್ಲಬಲ್ಲ ಶಕ್ತಿಯನ್ನು ಹೊಂದಿದೆ. ಗುರು ಕಾರುಣ್ಯವಿಲ್ಲದೇ, ಲಿಂಗದೀಕ್ಷೆಯಾಗದೇ ಶಿವಪಥ ದೊರೆಯಲಾರದೆಂಬುದು ಬಾಲಸಂಗಯ್ಯನವರ  ಅಭಿಮತ.
ಕೃತಿಗಳು :
"ಸಕಲಾಗಮ ಶಿಖಾಮಣಿ" ಇದು ಅಪ್ರಮಾಣದೇವರ ಕೃತಿಯ ಹೆಸರು, ಇದರಲ್ಲಿ 'ಅಪ್ರಮಾಣ ಕೂಡಲ ಸಂಗಮದೇವ' ಅಂಕಿತದ ಒಟ್ಟು ೯೨೦ ವಚನಗಳು ಸಂಕಲನಗೊಂಡಿವೆ. ಇದು ಒಂದು ಶುದ್ಧ ತಾತ್ವಿಕ ಶಾಸ್ತ್ರ ಕೃತಿ. 
12 ನೆಯ ಶತಮಾನದ ಬಸವಾದಿ ಶರಣರು ಹೇಳಿದ ಲಿಂಗಾಯತ ಧರ್ಮತತ್ವಗಳನ್ನು ವ್ಯವಸ್ಥಿತವಾಗಿ ಪ್ರತಿಪಾದಿಸುವುದೇ ಇದರ ಪರಮ ಉದ್ದೇಶ. ಸೃಷ್ಟಿಯ ಉತ್ಪತ್ತಿಯಿಂದ ಹಿಡಿದು ಲಿಂಗಾಂಗ ಸಾಮರಸ್ಯ ವರೆಗಿನ ವಿಷಯಗಳು ಇಲ್ಲಿ ಅನೇಕ ಉಪಶೀರ್ಷೆಕೆಗಳ ಅಡಿಯಲ್ಲಿ ವಿವರಗೊಂಡಿವೆ. ಅಪ್ರಮಾಣದೇವರು ಶ್ರೇಷ್ಠ ಅನುಭಾವಿ ಎಂಬುದನ್ನು ಈ ವಚನಗಳು ಸಾಕ್ಷೀಕರಿಸುತ್ತವೆ. ಇದು ಶುದ್ಧ ತಾತ್ತ್ವಿಕ ಶಾಸ್ತ್ರಕೃತಿ. ಲಿಂಗಾಯತ ಧರ್ಮದ ತತ್ತ್ವವಿವೇಚನೆಯೇ ಇದರ ಪರಮ ಗುರಿ. ತಾನು ಹೇಳುವ ಪ್ರತಿಯೊಂದು ವಿಷಯಕ್ಕೂ ಸಂಸ್ಕೃತ ಪ್ರಮಾಣ ವಾಕ್ಯಗಳನ್ನು ಈತ ನೀಡಿರುವನು. ಹೀಗಾಗಿ ವೇದ, ಆಗಮ, ಉಪನಿಷತ್ತು, ಪ್ರಮಾಣ ಸಂಹಿತೆ, ಶ್ರುತಿ, ಸ್ಮೃತಿ, ಸೂಕ್ತ ಮೊದಲಾದವುಗಳಿಂದ ಧಾರಾಳವಾಗಿ ತನ್ನ ವಿಚಾರ ಸಮರ್ಥನೆಗೆ ಉಕ್ತಿಗಳನ್ನು ಎತ್ತಿಕೊಟ್ಟಿರುವನು. ಅನುಭಾವ ಮತ್ತು ಬೆಡಗನ್ನು ಕುರಿತು ಇವರ ಅನೇಕ ವಚನಗಳಿವೆ.

ಅಪ್ರಮಾಣದೇವರ ವಚನಗಳು :
1.ವಚನ
#ಬ್ರಹ್ಮ ದೇವರಲ್ಲ, ವಿಷ್ಣು ದೇವರಲ್ಲ, ರುದ್ರ ದೇವರಲ್ಲ,
ಈಶ್ವರ ದೇವರಲ್ಲ, ಸದಾಶಿವ ದೇವರಲ್ಲ,
ಸಹಸ್ರಶಿರ, ಸಹಸ್ರಾಕ್ಷ, ಸಹಸ್ರಪಾದವನುಳ್ಳ ವಿರಾಟ್ಪುರುಷ ದೇವರಲ್ಲ ;
ವಿಶ್ವತೋಮುಖ, ವಿಶ್ವತೋಚಕ್ಷು, ವಿಶ್ವತೋಬಾಹು,
ವಿಶ್ವತೋಪಾದವನುಳ್ಳ ಪರಮಪುರುಷ ದೇವರಲ್ಲ,
ಸಹಜನಿರಾಲಂಬವೇ ತಾನೆಂದರಿದ ಮಹಾಶರಣ ತಾನೇ ದೇವ ನೋಡಾ
ಅಪ್ರಮಾಣಕೂಡಲಸಂಗಮದೇವ.
–ಶರಣ ಬಾಲಸಂಗಯ್ಯ ಅಪ್ರಮಾಣ ದೇವ
ಅರ್ಥ: ಬ್ರಹ್ಮ, ವಿಷ್ಣು, ರುದ್ರ,
ಈಶ್ವರ, ಸದಾಶಿವ,
ಸಹಸ್ರಶಿರ, ಸಹಸ್ರಾಕ್ಷ, ಸಹಸ್ರಪಾದವನುಳ್ಳ ವಿರಾಟ್ ಪುರುಷ ದೇವರಲ್ಲ ;
ವಿಶ್ವತೋಮುಖ, ವಿಶ್ವತೋಚಕ್ಷು, ವಿಶ್ವತೋಬಾಹು, ವಿಶ್ವತೋಪಾದವನುಳ್ಳ ಪರಮಪುರುಷ ದೇವರಲ್ಲ,
ಸೃಷ್ಟಿಯ ರಚನೆಗಿಂತ ಮೊದಲಿದ್ದ ಬಟ್ಟ ಬಯಲು ಸಹಜ ನಿರಾಲಂಬವೇ ದೇವರು. ಅದು ತಾನು ಎಂದು ಅನುಭಾವದಿಂದ ಅರಿತ ಮಹಾ ಶರಣನೇ ದೇವರು. ಅರಿವೇ ಗುರು. ಆ ಅರಿವೆಂಬ ಗುರುವಿನಿಂದ ತಾನೇ ದೇವರ ಸ್ವರೂಪ ಎಂದು ಅರಿಯಬೇಕು. ಇದು ಅಹಂಕಾರದಿಂದ ಬಂದ ಅರಿವಲ್ಲ. ಅನುಭಾವದಿಂದ ಬಂದ ಅರಿವು.
2. ವಚನ
#ಕಲ್ಲು ದೇವರು ದೇವರಲ್ಲ ಮಣ್ಣ ದೇವರು ದೇವರಲ್ಲ.
ಪಂಚ ಲೋಹಗಳಲ್ಲಿ ಮಾಡಿದ ದೇವರು ದೇವರಲ್ಲ.
ಸೇತುಭಂದ ರಾಮೇಶ್ವರ, ಗೋಕರ್ಣ, ಕಾಶಿ ಕೇದಾರ ಮೊದಲಾದ ಅಷ್ಟಶಷ್ಟಿಪುಣ್ಯಕ್ಷೇತ್ರಂಗಳು.
ಪುಣ್ಯ ಕ್ಷೇತ್ರಂಗಳಲ್ಲಿಹ ದೇವರು ದೇವರಲ್ಲ.
ತನ್ನ ತಾನು ಅರಿತು ತಾನು ಆರೆಂಬುದ ತಿಳಿದೊಡೆ ತಾನೆ ಕಾಣ ದೇವ .
ಅಪ್ರಮಾಣ ಕೂಡಲಸಂಗಮದೇವ... 
–ಶರಣ ಬಾಲಸಂಗಯ್ಯ ಅಪ್ರಮಾಣ ದೇವ
 ಅರ್ಥ:
ಕಲ್ಲು ಮಣ್ಣು ಮತ್ತು ಪಂಚ ಲೋಹಗಳನ್ನು ಸೇರಿಸಿ ಮಾಡಿದ ದೇವರುಗಳು ದೇವರು ಅಲ್ಲ.
ಪುಣ್ಯ ಕ್ಷೇತ್ರಗಳಾದ ರಾಮೇಶ್ವರ, ಗೋಕಣ೯, ಕಾಶಿ, ಕೇದಾರ ಮುಂತಾದ ದೇವಾಲಯ ಗಳಲ್ಲಿರುವ  ಸ್ಥಾವರ ಮೂತಿ೯ಗಳೂ ದೇವರಲ್ಲ. ಅರಿವು, ಜ್ಞಾನ, ಸದ್ಭಕ್ತಿಯಿಂದ ಶುದ್ಧ ಕಾಯಕಯೋಗಿಯಾಗಿ ನಿನ್ನನ್ನು ನೀನು ಅರಿತರೆ, ನಿನ್ನ ಅಂಗವೇ ಲಿಂಗವಾಗಿ (ಸರ್ವಾಂಗ ಲಿಂಗಿ) ಪರಿಣಮಿಸುವದು. ನಿನ್ನನ್ನೇ ನೀನೇ ಅರಿತರೆ  ನೀನು ದೇವರು ಬೇರೆ ಅಲ್ಲ ಎಂದು ಅರಿವಾಗುತ್ತದೆ.
3. ವಚನ
#ಈ ವಚನಾನುಭಾವದಲುಳ್ಳರ್ಥವು
ಸಕಲ ವೇದಾಗಮ ಶಾಸ್ತ್ರ ಪುರಾಣಂಗಳಲ್ಲಿಯುಂಟು ನೋಡಾ.
ಈ ವಚನಾನುಭಾವದಲ್ಲಿಲ್ಲದರ್ಥವು
ಸಕಲ ವೇದಾಗಮ ಶಾಸ್ತ್ರ ಪುರಾಣಂಗಳಲ್ಲಿಯೂ ಇಲ್ಲ ನೋಡಾ.
ಈ ವಚನಾನುಭಾವದ ಅರ್ಥವು
ಸಕಲ ವೇದಾಗಮ ಶಾಸ್ತ್ರ ಪುರಾಣಂಗಳಿಗೂ ನಿಲುಕದು ನೋಡಾ.
ಈ ವಚನಾನುಭಾವದ ಅರ್ಥವು
ಸಕಲ ವೇದಾಗಮ ಶಾಸ್ತ್ರ ಪುರಾಣಾತೀತವು ನೋಡಾ
ಅಪ್ರಮಾಣಕೂಡಲಸಂಗಮದೇವಾ. 
–ಶರಣ ಬಾಲಸಂಗಯ್ಯ ಅಪ್ರಮಾಣ ದೇವ
ಅರ್ಥ:
 ವಚನ ಅನುಭಾವಗಳ ಅರ್ಥ, ಸಕಲ ವೇದಾಗಮ ಶಾಸ್ತ್ರ ಪುರಾಣಂಗಳಲ್ಲಿ ಉಂಟು.
ವಚನ ಅನುಭಾವಗಳಲ್ಲಿ ಇಲ್ಲದ ಅರ್ಥ, ಸಕಲ ವೇದಾಗಮ ಶಾಸ್ತ್ರ ಪುರಾಣಂಗಳಲ್ಲಿಯೂ ಇಲ್ಲ. ಆದರೆ ವಚನ ಅನುಭಾವಗಳ ಸಂಪೂರ್ಣ ಅರ್ಥ, ಸಕಲ ವೇದಾಗಮ ಶಾಸ್ತ್ರ ಪುರಾಣಂಗಳಗೆ ನಿಲುಕದು.ವಚನಾನುಭಾವದ ಅರ್ಥ, ಸಕಲ ವೇದಾಗಮ ಶಾಸ್ತ್ರ ಪುರಾಣ ಗಳಿಗೆ ಅತೀತವು ಎಂದು ವಚನಾನುಭಾವವು ಸಕಲ ವೇದಾಗಮ ಶಾಸ್ತ್ರ ಪುರಾಣಗಳಿಗಿಂತ ಶ್ರೇಷ್ಠ ಎಂದಿದ್ದಾರೆ.
4. ವಚನ
#ಅನೇಕ ವೇದಾಗಮಶಾಸ್ತ್ರಪುರಾಣವನೋದಿ ಕೇಳಿದಡೇನು ?
ಮನದ ಕತ್ತಲೆ ಹರಿಯದು ನೋಡಾ.
ಓಂಕಾರವೆಂಬ ಕಂಬದ ಮೇಲೆ ಮನ ಬುದ್ದಿ ಚಿತ್ತ ಅಹಂಕಾರವೆಂಬ
ಪಣಿತೆಯನಿಡಿಸಿ, ಅಷ್ಟಮದವೆಂಬ ಬತ್ತಿಯ ತೀವಿ,
ಜ್ಞಾನೇಂದ್ರಿಯ ಕರ್ಮೆಂದ್ರಿಯವೆಂಬ ತೈಲವನೆರೆದು,
ಜ್ಞಾನಾಗ್ನಿಯ ಮುಟ್ಟಿಸಿ, ಸ್ವಯಂಪ್ರಕಾಶವ ಬೆಳಗುವದು ನೋಡಾ.
ಅನಂತಕೋಟಿ ಸೂರ್ಯ-ಚಂದ್ರಾಗ್ನಿಮಯವಾಗಿ
ಮಹಾಜ್ಯೋತಿ ಬೆಳಗುತ್ತಿಹುದು.
ಆ ಮಹಾಜ್ಯೋತಿಪ್ರಕಾಶದಲ್ಲಿ ಆಣವ ಮಾಯಾ ಕಾರ್ಮಿಕವೆಂಬ
ಹುಳುಗಳು ಬಿದ್ದು ಸತ್ತವು.
ಹೃದಯದ ಕತ್ತಲೆ ಹರಿಯಿತ್ತು ನೋಡಾ
ಅಪ್ರಮಾಣಕೂಡಲಸಂಗಮದೇವಾ.
–ಶರಣ ಬಾಲಸಂಗಯ್ಯ ಅಪ್ರಮಾಣ ದೇವ
ಅರ್ಥ:
ಅನೇಕ ವೇದ ಆಗಮ ಶಾಸ್ತ್ರ ಪುರಾಣಗಳನ್ನು ಬರಿ ಓದಿದರೆ ಕೇಳಿದರೆ ಉಪಯೋಗವಿಲ್ಲ. ಇದರಿಂದ ಮನದ ಕತ್ತಲೆ ಹರಿಯದು. ಓಂಕಾರ ವೆಂಬ ಪ್ರಣವದ ಮೇಲೆ ಮನ ಬುದ್ದಿ ಚಿತ್ತ ಸ್ಥಿರಗೊಳಿಸಿ ಅಹಂಕಾರವೆಂಬ ಪಣಿತೆ ಇಟ್ಟು ,ಅಷ್ಟಮದವೆಂಬ ಬತ್ತಿಯ ತೀವಿ, ಜ್ಞಾನೇಂದ್ರಿಯ ಕರ್ಮೆಂದ್ರಿಯವೆಂಬ (ಜ್ಞಾನ, ಕಾಯಕ) ತೈಲವನೆರೆದು, ಜ್ಞಾನಾಗ್ನಿಯ ಮುಟ್ಟಿಸಿದರೆ , ಅಹಂಕಾರ ನಾಶವಾಗಿ ಕಾಮ ಕ್ರೋಧ ಮದ ಮತ್ಸರ ಮೋಹ ಲೋಭ ಅಳಿದು ಸ್ವಯಂಪ್ರಕಾಶವ ಬೆಳಗುವದು. ಆ ಮಹಾಜ್ಯೋತಿಪ್ರಕಾಶದಲ್ಲಿ ಆಣವ ಮಾಯಾ ಕಾರ್ಮಿಕ ಮಲಗಳು ಅಳಿದು ಹೃದಯದ ಕತ್ತಲೆ ಅಳಿಯಿತು. ಆ ಜ್ಞಾನದ ಪ್ರಕಾಶದಲ್ಲಿ ತನ್ನ  ತಾನೇ ಅರಿವಾಗುವುದು.
5. ವಚನ
#ಅಪ್ಪುವೆ ಅಂಗವಾದ ಮಹೇಶ್ವರನ ಸುಬುದ್ಧಿಹಸ್ತದಲ್ಲಿಹ
ಗುರುಲಿಂಗವನು ಕತರ್ೃತ್ವನಾಗಿಯು ತನ್ನ ಜ್ಞಾನಶಕ್ತಿಯ ವೈಭವದಿಂದ
ಸಮಸ್ತವಾದ ಉಪದೇಶ ವಿಧಾನ ಶಾಸ್ತ್ರಂಗಳಲ್ಲಿ ಮಾಡಲ್ಪಟ್ಟ
ಆಸ್ಪದವನುಳ್ಳುದಾಗಿಯು, ಕಡೆಯಿಲ್ಲದ ಸುಖಸಮುದ್ರವನಾಗಿಯು,
ಬುದ್ಧಿತತ್ವದಾಸ್ಥಾನದಲ್ಲಿ ಪ್ರತಿಷ್ಠಿತನಾಗಿಹ ಗುರುಲಿಂಗವಿಹುದು ನೋಡಾ,
ಇದಕ್ಕೆ ಮಹಾವಾತುಲಾಗಮೇ :ವೃತ್ತ -
``ಸ್ವಜ್ಞಾನ ಶಕ್ತಿವಿಭವೋದಿತ ಕತರ್ೃತ್ವಂ |
ಸವರ್ೊಪದೇಶವಿದಿತಂ ತತ್ರಕೃತಂ ಪ್ರತಿಷ್ಠಿತಂ,|
ತೇಜೋನಿಧಿಂ ಪರಮಪಾಠ ಸುಖಾಂಬುರಾಸಿ
ಬುದ್ಧೇಃ ಪದೇ ವಿನಿಹಿತಂ ಗುರುಲಿಂಗಮಾಹುಃ ||''
ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.
–ಶರಣ ಬಾಲಸಂಗಯ್ಯ ಅಪ್ರಮಾಣ ದೇವ
ಅರ್ಥ: 
 ಸ್ವಾದಿಷ್ಠಾನ  ಚಕ್ರದಲ್ಲಿಯ ಗುರುಲಿಂಗದ ವರ್ಣನೆ ಮಾಡಿದ್ದಾರೆ. ಅಪ್ಪುವೆ ಅಂಗ(ಪಂಚ ಭೂತ ಅಪ್ಪು ಅಂದರೆ ಜಲ), ಅಧಿಪತಿ ಮಹೇಶ್ವರ, ಸುಬುದ್ಧಿ ಎಂಬ ಹಸ್ತದಲ್ಲಿರುವ ಗುರುಲಿಂಗವನ್ನು  ಕತರ್ತ್ವನಾಗಿ ಮತ್ತು  ತನ್ನದೆ ಜ್ಞಾನಶಕ್ತಿಯಿಂದ, ಸಮಸ್ತ ಉಪದೇಶ ವಿಧಾನ ಶಾಸ್ತ್ರಗಳಲ್ಲಿಯ ಜ್ಞಾನದಿಂದ ಸುಖಸಮುದ್ರವನ್ನಾಗಿಸಿ
ಬುದ್ಧಿ ಮತ್ತು ತತ್ವದ ಆಸ್ಥಾನದಲ್ಲಿ ಪ್ರತಿಷ್ಠಿತನಾಗಿಹ ಗುರುಲಿಂಗ ಇದು ನೋಡಾ ಎಂದು ಗುರುಲಿಂಗದ ವರ್ಣನೆ ಮಾಡಿದ್ದಾರೆ.
6. ವಚನ
#ತಾನೆ ಗುರುತತ್ವ, ತಾನೆ ಶಿವತತ್ವ, ತಾನೆ ಪರತತ್ವ ತಾನಲ್ಲದೆ ಬೇರೆ ಪರಬ್ರಹ್ಮವುಂಟೆಂಬ ಭ್ರಾಂತುಭ್ರಮಿತರ ನಾನೇನೆಂಬೆನಯ್ಯಾ,ಅಪ್ರಮಾಣಕೂಡಲಸಂಗಮದೇವಾ. 
–ಶರಣ ಬಾಲಸಂಗಯ್ಯ ಅಪ್ರಮಾಣ ದೇವ
ಅರ್ಥ:
ಸಾಧಕ ತಾನೇ ಗುರುತತ್ವ, ತಾನೇ ಶಿವತತ್ವ, ತಾನೇ ಪರತತ್ವ ಎಂದು ಅರಿಯಬೇಕು. ತಾನಲ್ಲದೆ ಬೇರೆ ಪರಬ್ರಹ್ಮ ಇಲ್ಲ. ಪರಬ್ರಹ್ಮ ಬೇರೆ ತಾನು ಬೇರೆ ಎನ್ನುವದು ಭ್ರಾಂತು. ಹೀಗೆ ಬೇರೆ ಎನ್ನುವವರು ಭ್ರಮಿತರು.
7. ವಚನ
#ಅನಂತಕೋಟಿ ಸೂರ್ಯ ಚಂದ್ರಾಗ್ನಿಪ್ರಕಾಶವಾಗಿಹ
ಪರಂಜ್ಯೋತಿಯಲ್ಲಿ ನಿರಾಮಯಬೀಜ ಹುಟ್ಟಿತ್ತು ನೋಡಾ.
ನಿರಾಮಯಬೀಜದಲ್ಲಿ ನಿರಾಳ ನಿರಂಜನವೆಂಬ ವೃಕ್ಷ ತಲೆದೋರಿ,
ಉದಯಾಸ್ತಮಾನವೆಂಬೆರಡರಿದ ಶರಣಂಗೆ,
ಅನಂತಕೋಟಿ ಶಾಖಾದಿಗಳಾದವು ನೋಡಾ.
ಪರಮಾನಂದವೆಂಬ ಹೂವಾಯಿತ್ತು.
ಪರಮಪರಿಣಾಮವೆಂಬ ಕಾಯಾಯಿತ್ತು,
ಪರಮಪರಿಣಾಮದ ತೃಪ್ತಿಯೆಂಬ ಹಣ್ಣಾಯಿತ್ತು ನೋಡಾ
ಅಪ್ರಮಾಣಕೂಡಲಸಂಗಮದೇವಾ.
–ಶರಣ ಬಾಲಸಂಗಯ್ಯ ಅಪ್ರಮಾಣ ದೇವ
ಅರ್ಥ:
 ಅನಂತ ಕೋಟಿ ಸೂರ್ಯ ಚಂದ್ರ ಅಗ್ನಿ ಯ ಪ್ರಕಾಶವಾಗಿರುವ 
ಪರಮ  ಜ್ಯೋತಿಯಲ್ಲಿ ನಿರಾಮಯ ಬೀಜ ಹುಟ್ಟಿತು. ಆ ನಿರಾಮಯ ಬೀಜದಲ್ಲಿ ನಿರಾಳ ನಿರಂಜನವೆಂಬ ವೃಕ್ಷ  ಹುಟ್ಟಿ ಕಂಡು ಬಂದಿತು.,
ಉದಯ ಅಸ್ತಮಾನ ವೆಂಬ ಪ್ರವೃತ್ತಿ ಮಾರ್ಗ, ನಿವೃತ್ತಿ ಮಾರ್ಗ ಎರಡನ್ನೂ  ಅರಿದ ಶರಣನಿಗೆ, ಭಾವಲಿಂಗದಲ್ಲಿಯ ಕಲ್ಪವೃಕ್ಷಕ್ಕೆ
ಅನಂತಕೋಟಿ ಶಾಖೆ ಗಳಾಗಿ ಅರಿವು ಅನುಭಾವ ಮೂಡಿತು.ಆ ಅನುಭಾವದಿಂದ ಕಲ್ಪವೃಕ್ಷ ಕ್ಕೆ
ಪರಮಾನಂದವೆಂಬ ಹೂವಾಯಿತು.
ಪರಮ ಪರಿಣಾಮವೆಂಬ ಕಾಯಾಯಿತು.
ಪರಮಪರಿಣಾಮದ ತೃಪ್ತಿಯೆಂಬ ಹಣ್ಣಾಯಿತು. ಈ ಹಣ್ಣು ಮೇಳೆದ ಶರಣನು ಪರಿಣಾಮ ಸ್ವರೂಪಿಯಾಗಿ ತೃಪ್ತಿ ಪಡೆದನು.
8. ವಚನ
#ಅನಲಾಂಗವಾದ ಪ್ರಸಾದಿಯ ನಿರಹಂಕಾರಹಸ್ತದಲ್ಲಿಹ
ಶಿವಲಿಂಗವು ಜ್ಞಾನಕಲೆಗಳಿಂದ ಕೂಡಿದ ರೂಪದಿಂದ
ಮಿಗೆ ಒಪ್ಪುತಿದ್ದಂಥಾದಾಗಿ, ಒಂದು ಮುಖವಾಗಿ,
ಮಿಗೆ ಶಾಂತವಾದ ದಿವ್ಯತೇಜಃಪುಂಜವನು, ಅಹಂಕಾರಕ್ಕೆ ಸ್ಥಾನವಪ್ಪ
ಪ್ರಪಂಚದಲ್ಲಿ ತನ್ನ ಇಚ್ಛಾಶಕ್ತಿಯಿಂದ ವ್ಯಾಪಿಸಲುಪಟ್ಟ
ಮೂರ್ತಿಕರಿಸಿದ ತತ್ವವಾದ ಶಿವಲಿಂಗವಿಹುದು ನೋಡಾ.
ಇದಕ್ಕೆ ಮಹಾವಾತುಲಾಗಮೇ :ವೃತ್ತ -
``ವಿದ್ಯಾಕಲಾಕಲಿತರೂಪಸು ಶೋಭಮಾನಂ
ದಿವ್ಯಂ ಪ್ರಭಾಪಟಲಮೇಕಮುಖಂ ಪ್ರಶಾಂತಂ |
ಇಚ್ಛಾಶಕ್ತಿಪರ ಝೃಂಬಿತಮೂರ್ತಿತತ್ವಂ
ವ್ಯಕ್ತೋಹ್ಯಹಂಕೃತಿಪದೇ ಶಿವಲಿಂಗಮಾಹುಃ ||''
ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.
–ಶರಣ ಬಾಲಸಂಗಯ್ಯ ಅಪ್ರಮಾಣ ದೇವ
ಅರ್ಥ:
 ಪ್ರಸಾದಿ ಸ್ಥಲದ ಶಿವಲಿಂಗದ ವರ್ಣನೆ ಮಾಡಿದ್ದಾರೆ. ಅನಲವೇ ಅಂಗ (ಪಂಚಭೂತ ಅನಲ ಅಂದರೆ ವಾಯುವೇ ಅಂಗ) ನಿರಹಂಕಾರ ವೆಂಬ ಹಸ್ತದಲ್ಲಿರುವ ಶಿವಲಿಂಗವು ಜ್ಞಾನ ಮತ್ತು ಕಲೆಗಳಿಂದ ಕೂಡಿದ ರೂಪದಿಂದ
ಜಗತ್ತೆಲ್ಲ ಒಪ್ಪುತಿದ್ದಂತೆ, ಶಿವಲಿಂಗವು ಒಂದು ಮುಖವಾಗಿ, ಶಾಂತವಾದ ದಿವ್ಯತೇಜಃಪುಂಜವು, ಅಹಂಕಾರಕ್ಕೆ ಸ್ಥಾನವಾಗಿದ್ದ ಈ
ಪ್ರಪಂಚದಲ್ಲಿ ತನ್ನ ಇಚ್ಛಾಶಕ್ತಿಯಿಂದ ವ್ಯಾಪಿಸಿ ಮೂರ್ತಿ ಆಕಾರ ತಾಳಿದ ತತ್ವವು. ಆ ತತ್ವವೇ ಆದ ಶಿವಲಿಂಗವಿದು ನೋಡಾ ಎಂದು ಶಿವಲಿಂಗದ ವರ್ಣನೆ ಮಾಡಿದ್ದಾರೆ.
9. ವಚನ
#ರೂಪಿಲ್ಲದ ಪುಸ್ತಕದ ಬರಹವ 
ಕಣ್ಣಿಲ್ಲದ ಕುರುಡನು ಕಂಡು ತೋರಿದನು.
ಬಾಯಿಲ್ಲದ ಮೂಗನು ಓದಿದನು.
ಕಿವಿಯಿಲ್ಲದ ಕಿವುಡ ಕೇಳಿ ಪರಿಣಾಮಿಸಿದ.
ತಲೆಯಿಲ್ಲದ ಮುಂಡನು ನಿಶ್ಚೈಸಿದನೆಂದು
ನೆಲೆಯಿಲ್ಲದವ ಹೇಳಿದನು ನೋಡಾ.
ಅಪ್ರಮಾಣ ಕೂಡಲ ಸಂಗಮದೇವ.
- ಶರಣ ಬಾಲಸಂಗಯ್ಯ ಅಪ್ರಮಾಣ ದೇವ
ಅರ್ಥ: 
ನಿಜೈಕ್ಯದ ಅನುಭಾವ ಸ್ಥಿತಿಯಲ್ಲಿ ಪಂಚೇಂದ್ರಿಯಗಳು ನಿಶ್ಚಲ. ಅನುಭಾವ ಸ್ಥಿತಿ ಪಂಚೇಂದ್ರಿಯ ಗಳಿಗೆ ಅತೀತ.
ಕಣ್ಣು ಇದ್ದರೂ ಕಾಣುವದಿಲ್ಲ.
ಬಾಯಿ ಇದ್ದರೂ ಮಾತಾಡುವುದಿಲ್ಲ
ಕಿವಿ ಇದ್ದರೂ ಕೇಳುವುದಿಲ್ಲ.
ತಲೆ ಇದ್ದರೂ ಮಿದುಳಿಗೆ ಏನೂ ನಿಶ್ಚೈಸಲಾಗುದ ಸ್ಥಿತಿ. ನೋಡುವದು ನಿರಾಕಾರ ಸ್ವರೂಪವನ್ನು ,ಓದುವದು ರೂಪಿಲ್ಲದ ಪುಸ್ತಕದ ಬರಹವನ್ನ, ತಿಳಿಸಿ ಹೇಳುವವರು
ನೆಲೆಯಿಲ್ಲದವರು ಜಂಗಮರು!!
10. ವಚನ
#ಬ್ರಹ್ಮ ವಿಷ್ಣು ರುದ್ರ ಈಶ್ವರ ಸದಾಶಿವರಿಲ್ಲದಂದು,
ಸರಸ್ವತಿ ಮಹಾಲಕ್ಷ್ಮಿ ಗಿರಿಜೆ ಉಮಾಶಕ್ತಿ ಮನೋನ್ಮನಿಶಕ್ತಿ ಮೊದಲಾದ
ಮಹಾಶಕ್ತಿಗಳಿಲ್ಲದಂದು,
ಸಚರಾಚರಂಗಳೆಲ್ಲ ರಚನೆಗೆ ಬಾರದಂದು,
ಅವಾಚ್ಯಪ್ರಣವವಾಗಿದ್ದನು ನೋಡಾ ಇಲ್ಲದಂತೆ,
ನಮ್ಮ ಅಪ್ರಮಾಣಕೂಡಲಸಂಗಮದೇವನು.
–ಶರಣ ಬಾಲಸಂಗಯ್ಯ ಅಪ್ರಮಾಣ ದೇವ
ಅರ್ಥ:
ಸೃಷ್ಟಿಯ ರಚನೆಗಿಂತ ಮುಂಚಿನ ನುಡಿಯಲಾಗದ 'ಪ್ರಣವ ಓಂಕಾರ' ನೇ ದೇವರು. ಅಪ್ರಮಾಣ ಅಂದರೆ ಅಳತೆಗೆ ನಿಲುಕದಷ್ಟು ವಿಶಾಲ ನಮ್ಮ ಅಪ್ರಮಾಣ ಕೂಡಲ ಸಂಗಮದೇವ ಶರಣರು.
- ✍️ Dr Prema Pangi
#ಬಾಲಸಂಗಯ್ಯ ,#ಅಪ್ರಮಾಣದೇವ,
#ಅಪ್ರಮಾಣದೇವ_ವಚನಗಳು

Comments

Popular posts from this blog

Shika chakra or Bindu chakra:Bindu visarga

Hrit Chakra or Eight Petals Chakra

A-Ka-Ta triangle or Akshara Brahma