ಶೂನ್ಯ - 1
ಶೂನ್ಯ:
ಶಬ್ಧ ಕೋಶದಲ್ಲಿ "ಶೂನ್ಯ"ಎಂದರೆ ಇಲ್ಲವಾಗುವುದು, ಖಾಲಿ, ರಿಕ್ತ, ಇಲ್ಲವಾದುದು, ನಿರ್ಜನವಾದ ಬಯಲು, ಸೊನ್ನೆ, ಬಿಂದು, ಬರಿದಾಗುವುದು ಎಂದು ಅರ್ಥ.
ಇಂಗ್ಲಿಷನಲ್ಲಿ ಶೂನ್ಯದ ಅರ್ಥ Zero, Empty, Void, Vacant ಎಂದಾಗಿದೆ.
ಗಣಿತದ ಅಂಕ ಶಾಸ್ತ್ರದ ಪ್ರಕಾರ ಶೂನ್ಯವೆಂದರೆ ಸೊನ್ನೆ.
ಲೌಕಿಕದ ಪ್ರಕಾರ ಶೂನ್ಯವೆಂಬುದು ಬರಿದು, ಖಾಲಿ.
ಆಧ್ಯಾತ್ಮದಲ್ಲಿ ಶೂನ್ಯ ಎಂಬುದು ವಿವರಿಸಲಾಗದ, ಅರ್ಥಕ್ಕೆ ಸಿಗದ ನಿರ್ಗುಣ ನಿರಾಕಾರ, ಪರಶಿವ ಶೂನ್ಯಲಿಂಗ.
"ಶೂನ್ಯ " ಎಂಬ ಮಾತು ಶರಣರ ತತ್ವ ವಿವೇಚನೆಯಲ್ಲಿ ಬಹಳ ಮಹತ್ವವನ್ನು ಪಡೆದಿದೆ. ವ್ಯೋಮಯೋಗಿ ಅಲ್ಲಮ ಪ್ರಭುಗಳು ಶೂನ್ಯವನ್ನು ಅತ್ಯಂತ ವೈಜ್ಞಾನಿಕವಾದ ವಿವೇಚನೆಯಿಂದ ಸುಂದರ ರೂಪಕವಾಗಿ ಬಳಿಸಿದ್ದಾರೆ. ಶರಣ ಧರ್ಮದಲ್ಲಿ ಶೂನ್ಯ ಪದ ಮೂರು ಬಗೆಯಲ್ಲಿ ಉಪಯೋಗಿಸಲಾಗಿದೆ.
1. ಶೂನ್ಯಲಿಂಗ
ನಿರಾಕಾರ ಸ್ವರೂಪನಾದ ಪರವಸ್ತು ಸೃಷ್ಟಿಮುಖವಾಗಿ, ಈ ಜಗತ್ತಿನ ನಿರ್ಮಾಣದಲ್ಲಿ ತೊಡಗುತ್ತದೆ. ಆಗ ಬಹುಮುಖವಾದ ಈ ಸೃಷ್ಟಿ ಹಲವಾರು ಹಂತಗಳಲ್ಲಿ ರೂಪುಗೊಳ್ಳುತ್ತದೆ. ಅದಕ್ಕೆ ಮೊಟ್ಟಮೊದಲನೆಯದೇ ಹಂತವೇ ಶೂನ್ಯಲಿಂಗ ಸ್ಥಿತಿ. ದೇವರು ಒಂದು ಅನಂತ ಬಯಲು ಸ್ಥಿತಿ. ಶೂನ್ಯ ಅದರ ಸಹಜ ಸ್ಥಿತಿ. ಶೂನ್ಯ ಒಂದು ಅದ್ಭುತ ಸಂಖ್ಯೆ. ಶೂನ್ಯ ದ ಕಲ್ಪನೆ, ಇದು ಗಣಿತಶಾಸ್ತ್ರದಲ್ಲಿ ಕ್ರಾಂತಿಯನ್ನೇ ಉಂಟುಮಾಡಿತು. ಶೂನ್ಯದಿಂದ ಅನಂತವನ್ನು ತಲುಪುವುದು ಬಹಳ ಸುಲಭ. ಒಂದನ್ನು ಶೂನ್ಯದಿಂದ ಭಾಗಿಸಿದರೆ ಸಾಕು, ಅದು ಅನಂತವಾಗಿಬಿಡುತ್ತದೆ. ಶೂನ್ಯದಿಂದ ಅದೆಷ್ಟು ಶೂನ್ಯವನ್ನು ಕಳೆದರೂ, ಶೂನ್ಯದಿಂದ ಶೂನ್ಯವನ್ನು ಗುಣಿಸಿದರೂ, ಭಾಗಿಸಿದರೂ, ಶೂನ್ಯವೇ ಉಳಿಯುತ್ತದೆ. ಮೂಲದಲ್ಲಿ ಏನೇನೂ ಬದಲಾವಣೆಯಾಗುವುದಿಲ್ಲ. ಅದೇ ರೀತಿ ಬ್ರಹ್ಮಾಂಡದ ರಚನೆ, ಸ್ಥಿತಿ, ಲಯಗಳಿಂದ, ಮೂಲ ಶೂನ್ಯ ಸ್ಥಿತಿಯ ಪರಶಿವನಲ್ಲಿ ಏನೂ ಬದಲಾವಣೆ ಆಗುವದಿಲ್ಲ. ಇದು ಶಕ್ತಿ ವಿಶಷ್ಟಾದ್ವೈತ ಸಿದ್ಧಾಂತ.
ಶರಣರ ಶೂನ್ಯ ತತ್ವ ಬೌದ್ಧರಂತೆ ಅನಾತ್ಮವಾದವಲ್ಲ, ಆತ್ಮವಾದ ಪೂರ್ಣಮಾರ್ಗ, ಜಗತ್ ಸೃಷ್ಟಿಕರ್ತ ಪರಶಿವನ ಆ ಬಹುರೂಪದಿಂದ ಕೂಡಿದ ಈ ಸೃಷ್ಟಿ ಶಿವತತ್ವದಿಂದಲೇ ರಚಿತವಾದದ್ದು. ಪರಶಿವನು ಈ ಸೃಷ್ಟಿಯಲ್ಲಿರುವ ಸಕಲ ಜೀವಿಗಳಲ್ಲಿ ಪರಿಣಮಿಸಿ ಪುನಃ ಅದಕ್ಕೆ ಅತೀತನಾಗಿ ನಿಂತಿದ್ದಾನೆ.
ಶೂನ್ಯಲಿಂಗವು ಬ್ರಹ್ಮಾಂಡದಂತೆ ಅಂಡಾಕಾರವಾಗಿದೆ.(Elliptical in shape)
2. ಅನುಭಾವಾತ್ಮಕ ಶೂನ್ಯ
ಸಮಾಧಿಯ ಸ್ವರೂಪವನ್ನು ವಿವೇಚಿಸುವಾಗ 'ಶೂನ್ಯ' ಪದಬಳಿಕೆಯಾಗುತ್ತದೆ. ಶಿವಯೋಗ ಸಾಧನೆಯ ಅಂತಿಮ ಸ್ಥಿತಿಯೂ ಶೂನ್ಯ ಸ್ಥಿತಿ. ಈ 'ಶೂನ್ಯ'ದ ವಿರಾಟ ಸ್ವರೂಪವನ್ನು ಅರ್ಥೈಸಿಕೊಂಡು ನಾವೂ ಶೂನ್ಯಸ್ಥಿತಿ ಆಗುವುದೇ "ಶೂನ್ಯ ಸಂಪಾದನೆಯ ಸಾಧನೆ.". ಜ್ಞಾನೇಂದ್ರಿಯಗಳಿಗೆ ನಿಲುಕದ, ಅನುಭಾವಕ್ಕೆ, ಅಂಕಗಣಿತ ಚೌಕಟ್ಟಿನಲ್ಲಿಯ ಸಂಖ್ಯಾಶಾಸ್ತ್ರದ ಶೂನ್ಯ ಆಧಾರವಾಗಿದ್ದು, ಈ ರೂಪಕ ಅಸಾಧಾರಣವಾಗಿದೆ.
'ಶೂನ್ಯ ಸಂಪಾದನೆ' ಅಂದರೆ ಶರಣ ಧರ್ಮದ ಆಧ್ಯಾತ್ಮಿಕವಾದ ಸಾಧನೆ. ತನ್ನ ಕರ್ತೃತ್ಯದೊಂದಿಗೆ ತನ್ನ ಸಾಕ್ಷಿ ಸ್ಥಿತಿಯನ್ನು ನೀಗಿ, ಇಲ್ಲದಂತಾಗುವುದು ಶೂನ್ಯಸ್ಥಿತಿ. ಇದು ಅನುಭಾವಾತ್ಮಕ ಶೂನ್ಯ. ಎಲ್ಲ ಶರಣರಿಗಿಂತ ಅಲ್ಲಮ ಪ್ರಭುವಿನ ವಚನಗಲ್ಲಿ ಶೂನ್ಯ ಸ್ಥಿತಿ ಕುರಿತು ವಿವರಣೆ ಹೆಚ್ಚಾಗಿ ದೊರೆಯುತ್ತದೆ.
ಶೂನ್ಯ ಮತ್ತು ಶೂನ್ಯಸಂಪಾದನೆಯ ಸಾಧನೆ ಆಧ್ಯಾತ್ಮಕ್ಕೆ, ವಿಜ್ಞಾನಕ್ಕೆ ಅಲ್ಲಮ ಪ್ರಭು ಬಸವಾದಿ ಶರಣರು ಕೊಟ್ಟ ಕೊಡುಗೆ.
3. ಶೂನ್ಯ ಸಂಪಾದನೆ ಕೃತಿಗಳು
ಶೂನ್ಯ ಸಂಪಾದನೆ ಎಂಬ ಹೆಸರಿನ 4 ಶರಣರ ಕೃತಿಗಳು ಇವೆ.
*ವಚನಗಳಲ್ಲಿ ಶೂನ್ಯ*:
ಈ ಸೃಷ್ಟಿ ರಚನೆ, ವಿಕಾಸದ ವಿಧಾನದಲ್ಲಿ ಪ್ರಪ್ರಥಮ ಹಂತವನ್ನು 'ಶೂನ್ಯಲಿಂಗ' ಎಂದು ಶರಣರು ಕರೆದು ಅದರ ಲಕ್ಷಣವನ್ನು ಅನೇಕ ರೀತಿಯಲ್ಲಿ ವರ್ಣಿಸಿದ್ದಾರೆ. ಶೂನ್ಯ, ವಿಶ್ವ ಹುಟ್ಟುವ ಮೊದಲಿನ ಸ್ಥಿತಿ, ಆದ್ದರಿಂದ ಯಾವುದೂ ಅಸ್ತಿತ್ವದಲ್ಲಿ ಇಲ್ಲದ ಸ್ಥಿತಿ. ಈ ತೋರಿಕೆಯ ಸೃಷ್ಟಿಯ ಎಲ್ಲವೂ, ಪೂರ್ಣ ಸ್ವರೂಪದ ಆ ಶೂನ್ಯಲಿಂಗದಿಂದಲೇ ಹೊರಹೊಮ್ಮಿದುದು; ಮತ್ತು ಅಲ್ಲಿಯೇ ಅಡಗಿ ಬಯಲಾಗುವಂತಹುದು.
ಶೂನ್ಯಲಿಂಗ ವಿಶ್ವ ಹುಟ್ಟುವ ಮೊದಲಿನ ಸ್ಥಿತಿ, ಆದ್ದರಿಂದ ಯಾವುದೂ ಅಸ್ತಿತ್ವದಲ್ಲಿ ಇಲ್ಲದ ಸ್ಥಿತಿ. ಅಲ್ಲಮನ ವಚನಗಳಲ್ಲಿ ಶೂನ್ಯಲಿಂಗ ಕ್ಕಿಂತ ಮೊದಲಿನ ಸ್ಥಿತಿಗೆ ಬಯಲು, ನಿರ್ಬಯಲು ನಿರಾವಲಂಬ ಬಯಲು ಎಂದು ಬಳಕೆಯಾಗಿದೆ. ಪರಶಿವನ ಪರಿಪೂರ್ಣ ಸ್ಥಿತಿಯನ್ನು ವಿವರಿಸಲು ಅಲ್ಲಮಪ್ರಭುವಿನ ವಚನ ಹೀಗಿದೆ:
ನಕ್ಷತ್ರಗ್ರಹಂಗಳಿಲ್ಲದ ಮುನ್ನ, ಯೋಗ ಕರಣಂಗಳಿಲ್ಲದ ಮುನ್ನ,
ಖೇಚರ ಭೂಚರರಿಲ್ಲದ ಮುನ್ನ, ಆರಾರೂ ಇಲ್ಲದ ಮುನ್ನ,
ಆಕಾಶ ಮಾರುತರಿಲ್ಲದ ಮುನ್ನ, ಅಂಬುದಿ ಕಮಠರಿಲ್ಲದ ಮುನ್ನ-
ಹರಿಬ್ರಹ್ಮಾದಿಗಳಾರ ನಿಲವಿಲ್ಲದ ಮುನ್ನ
ಹಿಮಕರದಿನಕರ ಸುಳುಹಿಲ್ಲದ ಮುನ್ನ-
ಹಿಂದಿಲ್ಲ ಮುಂದಿಲ್ಲ ಒಂದೂ ಇಲ್ಲದ ಮುನ್ನ,
ಗುಹೇಶ್ವರನಿರ್ದ ತನ್ನ ತಾನರಿಯದಂತೆ / 295
ಕಾಲದೇಶಗಳಿಗೆ ಅತೀತನಾಗಿ ನಿಲ್ಲುವ ಒಂದು ಅವ್ಯಕ್ತ ಸ್ಥಿತಿಯನ್ನು ವಿವರಿಸುವ ಈ ವಚನ "ಶೂನ್ಯಾವಸ್ಥೆ"ಯ ಸ್ಥಿತಿಯನ್ನು ಹೇಳುತ್ತದೆ. ಈ ವಿಸ್ತಾರವಾದ ವಿಶ್ವವನ್ನು ಚೈತನ್ಯಾತ್ಮಕವಾದ ಪರಮಾತ್ಮನೊಂದಿಗೆ ಸಮನ್ವಯಗೊಳಿಸಿ ವಿಶ್ವವು ಅನಾದಿ ತತ್ವದೊಂದಿಗೆ ವಿಲೀನಗೊಂಡಿರುವ ಸ್ಥಿತಿಯ ಮುಂಚಿನ ಸ್ಥಿತಿಯನ್ನು "ಆರಾರೂ ಇಲ್ಲದ ಒಂದು ಇಲ್ಲದ, ಮುನ್ನ ತನ್ನನ್ನು ತಾನರಿಯದಂತಿದ್ದನು" ಎಂಬುದು ಗಮನ ಸೆಳೆಯುವಂತದ್ದು.
ಆದಿ ಆಧಾರಕ್ಕೆ ಮುಂಚೆ, ಯಾವುದೇ ಅವಸ್ಥೆ ಮತ್ತು ಸಂಬಂಧ ಇಲ್ಲದಂದು, ಸಕಲ ಚರಾಚರ ವಿಶ್ವ ರಚನೆಗೆ ಬಾರದಂದು, ಎಲ್ಲವನ್ನೂ ಮೀರಿದ ಅನಿರ್ವಚನೀಯ ಸಂಕಲ್ಪ ಸ್ಪುರಣೆಯಿಂದ ಹುಟ್ಟಿ ನಿಂತಿದ್ದೆ ಶೂನ್ಯಲಿಂಗ.
#ಆದಿ ಆಧಾರವಿಲ್ಲದಂದು, ಹಮ್ಮುಬಿಮ್ಮುಗಳಿಲ್ಲದಂದು
ಸುರಾಳನಿರಾಳವಿಲ್ಲದಂದು, ಸಚರಾಚರವೆಲ್ಲ ರಚನೆಗೆ ಬಾರದಂದು,
ಗುಹೇಶ್ವರಾ ನಿಮ್ಮ ಶರಣನುದಯಿಸಿದನಂದು. / 290
ಶೂನ್ಯದ ವಿವರವನ್ನು ಹೇಳುವ ಈ ವಚನ ವಿಧಿ ಶಬ್ದಗಳಿಂದ ವರ್ಣಿಸಲಾಗದನ್ನು ಪರಮ ಶೂನ್ಯವೆಂದು ಸಂಕೇತಿಸಿದ್ದನ್ನು ಹೇಳುತ್ತದೆ. ಸೃಷ್ಟಿ ಆದಿಯಾದರೆ , ಈ ಸೃಷ್ಟಿಗೆ ಮೂಲಕಾರಣವಾದ ಮಹಾಲಿಂಗ ಅದಕ್ಕೇ ಆಧಾರ. 'ಅಹಂ' ಎನ್ನುವುದು ಸಂಕಲ್ಪ. ಇಂದ್ರಿಯಗಳಿಗೆ ಸಹಜ ವಾಗಿ ತೋರುವ ಸಗುಣ ಪ್ರಪಂಚ "ಸುರಾಳ ಪ್ರಪಂಚ" ವಾದರೆ ; ವೇದ್ಯವಾಗದದಿರುವುದು, ತತ್ವಭರಿತವಾದದ್ದು "ನಿರಾಳ ಪ್ರಪಂಚ". ಇವೆರಡೂ ಸುರಾಳ ನಿರಾಳ ಇಲ್ಲದಂದು 'ಶೂನ್ಯಲಿಂಗ'ವಿತ್ತು ಅನ್ನುತ್ತಾರೆ ಶರಣರು. ಶೂನ್ಯವು ವ್ಯಷ್ಟಿಗತ ದೇಹಚೇತನ ವಾದರೆ ನಿಶೂನ್ಯವು ಸಮಷ್ಟಿಗತ ಶಿವಚೇತನ.
ಜೀವ ಪ್ರಪಂಚ "ಚರ"ವಾದರೆ, ಜಡ ಪ್ರಪಂಚ "ಅಚರ". ಇವೆರಡೂ ರಚನೆಗೆ ಬರದ ಮುನ್ನ ಪರಮ ಮೂಲವಸ್ತು ಪರತತ್ವ ಪರಶಿವ. ದೇಶ ಕಾಲ, ಸ್ಥಿತಿ, ಆವಸ್ಥೆ ಇವೆಲ್ಲವುಗಳಿಗೆ ಅತೀತವಾದ ಪರಮ ಸತ್ಯವೇ ಶೂನ್ಯ. ಒಟ್ಟಿನಲ್ಲಿ ಏನೂ ಏನೂ ಇಲ್ಲದ ಶೂನ್ಯಲಿಂಗದ ಸಂಕಲ್ಪ ಮಾತ್ರದಿಂದ ಉದಯಿಸಿದ್ದು ಪರಶಿವ ತತ್ವ. ಅಲ್ಲಿಂದ 36 ತತ್ವಗಳು, ಆ 36 ತತ್ವಗಳಿಂದ ವಿಶ್ವ ಮತ್ತು ಜೀವಚೇತನಗಳು ಉದಯಿಸಿದರು ಎಂದು ಹೇಳುತ್ತಾರೆ ಅಲ್ಲಮಪ್ರಭುಗಳು.
- ✍️ Dr Prema Pangi
Comments
Post a Comment