ಶರಣ ಪರಿಚಯ : ಶರಣ ಬೊಕ್ಕಸದ ಚಿಕ್ಕಣ್ಣ



ಶರಣ ಪರಿಚಯ :  ಬೊಕ್ಕಸದ ಚಿಕ್ಕಣ್ಣ
*ಶರಣ ಬೊಕ್ಕಸದ ಚಿಕ್ಕಣ್ಣ* 
ಕಾಲ : 1160
ವಚನಾಂಕಿತ : ಬಸವಣ್ಣಪ್ರಿಯ ನಾಗರೇಶ್ವರಲಿಂಗ
ಕಾಯಕ : ಬೊಕ್ಕಸದ ಲೆಕ್ಕ (in charge of treasury department)
ಬೊಕ್ಕಸದ ಚಿಕ್ಕಣ್ಣ 12ನೇ ಶತಮಾನದ ಶಿವಶರಣರು. 'ಬಸವಣ್ಣಪ್ರಿಯ ನಾಗರೇಶ್ವರಲಿಂಗ' ಅಂಕಿತದಲ್ಲಿ ಬರೆದ 11 ವಚನಗಳು ದೊರೆತಿವೆ. ಇವುಗಳಲ್ಲಿ ನಾಲ್ಕು ಬೆಡಗಿನ ವಚನಗಳಿವೆ.
ಇವರು ಕಲ್ಯಾಣದಲ್ಲಿ ಬಿಜ್ಜಳನ ಬೊಕ್ಕಸದ ಅಧಿಕಾರಿಯಾಗಿದ್ದರು. ಚಿಕ್ಕಣ್ಣ ಶರಣರಿಗೆ ಅವರ ಕಾಯಕದ ಮೇಲೆ ವಿಶೇಷ ಪ್ರೀತಿ. ಚೆನ್ನಬಸವಣ್ಣ, ಬಸವಣ್ಣನವರು ಈ ಕಾಯಕವನ್ನು ತಮ್ಮ ಮೇಲೆ ನಂಬಿಕೆಯಿಟ್ಟು ಕೊಟ್ಟಿದ್ದಾರೆ ಎಂದು ಹೆಮ್ಮೆ ಮತ್ತು ಸಂತೋಷದಿಂದ ಹೇಳಿಕೊಂಡಿದ್ದಾರೆ. ಭವ್ಯವಾದ ರೀತಿಯಲ್ಲಿ ಮಹಾಮನೆಯಲ್ಲಿ ನಡೆಯುತ್ತಿದ್ದ ದಾಸೋಹ ಕಂಡ ಕೆಲವರು ಅಸೂಯೆಯಿಂದ ಬಿಜ್ಜಳ ರಾಜನಿಗೆ ಬೊಕ್ಕಸದ ಹಣ ವ್ಯಯಸುತ್ತಿರ ಬೇಕೆಂದು ದೂರು ಕೊಟ್ಟರೂ ಪ್ರತಿಸಲ ಲೆಕ್ಕ ತೋರಿಸುವಾಗ ಬೊಕ್ಕಸದ ಲೆಕ್ಕ ಸರಿಯಾಗಿಯೇ ಬರುತ್ತದೆ. ಇದರಿಂದ ಶರಣ ಚಿಕ್ಕಣ್ಣರು ಶುದ್ದ ಹಸ್ತರು, ವಿಶ್ವಾಸಕ್ಕೆ ಆರ್ಹರು ಎಂದು ಸಾಬೀತು ಆಗುತ್ತದೆ.
ಬೊಕ್ಕಸದ ದ್ರವ್ಯವನ್ನು ಎಣಿಸುವುದು, ವಿತರಣೆ ಮಾಡುವುದು, ಕಾಯುವುದು ಇವರ ದಿನ ನಿತ್ಯ ಕಾಯಕ. ಈ  ಕಾಯಕ ಮಾಡುತ್ತಾ ಅವರಿಗೆ ಬೊಕ್ಕಸದ ಬಗ್ಗೆ ಬೇರೊಂದು ಅರ್ಥ ಹೊಳೆಯುತ್ತದೆ. ಅದೆಂದರೆ, ಪ್ರತಿಯೊಬ್ಬರೂ ಅಮೂಲ್ಯವಾದ ಐಶ್ವರ್ಯವನ್ನು ತುಂಬಿಕೊಂಡ ಬೊಕ್ಕಸವಾಗಿದ್ದೇವೆ. ಆದರೆ ಅದರ ಬೀಗ ತೆಗೆಯುವವರು ಇಲ್ಲ ಎಂದು. ಇದೇ ಭಾವದಲ್ಲಿ  ವಚನಗಳನ್ನು ರಚಿಸಿದ್ದಾರೆ. ಇಲ್ಲಿ ಶರೀರವೇ ಬೊಕ್ಕಸ. ಅದಕ್ಕೆ ಬೀಗ ಹಾಕಿದೆ. ಸತ್ವರಜಸ್ ತಮೋಗುಣವೆಂಬ ಬೀಗದ ಕೈ ಗೊಂಚಲಿನಲ್ಲಿ, ಸರಿಯಾದ ಕೀಲಿ ಕೈಯನ್ನು ಹುಡುಕಿ ತೆಗೆಯುವ "ಗುರು"ವಿನ ಅವಶ್ಯಕತೆ ಇದೆ. ನಾವು ಪಡೆಯಬಹುದಾದ ಅರಿವು ನಮ್ಮಲ್ಲಿಯೇ ಇದೆ ಎಂಬ ಒಂದು ಶಬ್ದ ಚಿತ್ರವನ್ನೇ  ರಚಿಸಿದ್ದಾರೆ. ವಚನಗಳಲ್ಲಿ ಬೊಕ್ಕಸವನ್ನೇ ಪ್ರತಿಮೆ ರೂಪಕಗಳಾಗಿ ಬಳಸಿರುವರು. ಇಷ್ಟಲಿಂಗ, ಪ್ರಾಣಲಿಂಗಗಳ ಅಭೇದತ್ವ, ಕಾಯಕದ ಮಹತ್ವವನ್ನು ಕೆಲವು ವಚನಗಳಲ್ಲಿ ತಿಳಿಸುತ್ತ ಕಾಯಕದಲ್ಲಿಯೇ ಶಿವನನ್ನು, ಶಿವಜ್ಞಾನವನ್ನು ಕಾಣಬೇಕು ಎಂದು ಹೇಳುತ್ತಾರೆ.  
*ಶರಣ ಬೊಕ್ಕಸದ ಚಿಕ್ಕಣ್ಣನವರ ವಚನಗಳು
1 ವಚನ:
#ಅಂಗದ ಬೊಕ್ಕಸದ ಮಂದಿರಕ್ಕೆ
ಚಿದ್ಘನಲಿಂಗವೆಂಬುದೊಂದು ಬೀಗ.
ತ್ರಿಗುಣವೆಂಬ ಮೂರೆಸಳಿನ ಸಿಕ್ಕು.
ಒಂದು ಪೂರ್ವಗತಿ, ಒಂದು ಮಧ್ಯಗತಿ,
ಒಂದು ಉತ್ತರಗತಿಯಾಗಿ ಸಿಕ್ಕಿದವು ಮೂರೆಸಳು.
ಆ ಎಸಳಿಗೆ ಘಟ ಒಂದೆ ಒಡಲು.
ಎಸಳ ತೆಗವುದಕ್ಕೆ ಕೈಯ ಕಾಣೆ.
ಪ್ರತಿ ಕೈಗೆ ಎಸಳು ಅಸಾಧ್ಯ ನೋಡಾ.
ಇಂತೀ ಬೀಗದ ಗುಣವ
ಬಸವಣ್ಣಪ್ರಿಯ ನಾಗರೇಶ್ವರಲಿಂಗಾ ನೀವೇ ಬಲ್ಲಿರಿ./393
 - ಶರಣ ಬೊಕ್ಕಸದ ಚಿಕ್ಕಣ್ಣ
ಅರ್ಥ:
 ಅಂಗದಲ್ಲಿಯ ಚಿದ್ಘನಲಿಂಗ ಎಂಬ ಬೀಗ ತೆಗೆಯುವುದಕ್ಕೆ ಮೂರು ಎಸಳ ಎಂದರೆ ಮೂರು ಗುಣಗಳು  ಸತ್ವ, ರಜಸ್ ಮತ್ತು ತಮಸ್ ಎಂಬ ತೊಡಕಗಳು. ಈ ಮೂರು ಗುಣಗಳಲ್ಲಿ ಒಂದು ಪೂರ್ವಗತಿ, ಒಂದು ಮಧ್ಯಗತಿ,
ಒಂದು ಉತ್ತರಗತಿ. ಈ ಮೂರು ಗುಣ ಗಳೆಂಬ ತೊಡಕು ನಿವಾರಿಸಿ, ನಿರ್ಗುಣನಾಗಿ  ಅಂಗದ ಮೇಲಿನ ಚಿದ್ಘನಲಿಂಗದ ಬೀಗ ತೆಗೆದು ಪರಶಿವನಲ್ಲಿ ಐಕ್ಯವಾಗುವ ಕೈ ಕಾಣೆನು.  ನಾಗರೇಶ್ವರಲಿಂಗ  ಈ ಬೀಗದ ಗುಣ ಅದನ್ನು ತೆಗೆಯುವ ಬಗೆ ನೀನೇ ಬಲ್ಲೆ ಎಂದು ತಮ್ಮ ಇಷ್ಟದೇವ  ಬಸವಣ್ಣಪ್ರಿಯ ನಾಗರೇಶ್ವರಲಿಂಗ ನಲ್ಲಿ ಮನವಿ ಮಾಡುತ್ತಾರೆ.
ಶರಣ ನಿರ್ಗುಣನಾದರೆ ಮಾತ್ರ ನಿಜಕ್ಯ ಸ್ಥಿತಿ ತಲುಪುತ್ತಾನೆ. ಸತ್ವ, ರಜಸ್ ಮತ್ತು ತಮಸ್ 
ಈ ತ್ರಿಗುಣಗಳು ಸ್ಥೂಲ ಶರೀರದ ರಚನೆಗೆ ಕಾರಣವಾಗಿವೆ ಮತ್ತು ಇವು ಪ್ರಕೃತಿ ಶಕ್ತಿಯಿಂದ ಉದ್ಭವವಾಗುತ್ತವೆ. ತ್ರಿಗುಣಗಳನ್ನು ನಿವಾರಿಸಿ, ನಿರ್ಗುಣನನ್ನಾಗಿ ಮಾಡಿ  ಚಿದ್ಘನಲಿಂಗದ ಬೀಗ ತೆಗೆದು ಪರಶಿವನಲ್ಲಿ ಐಕ್ಯವಾಗಿಸು ಎನ್ನುತ್ತಾರೆ.
2. ವಚನ:
#ಅಂಗಲಿಂಗಸಂಬಂಧಿಗಳು ನಿಮ್ಮನರಿಯರು.
ಪ್ರಾಣಲಿಂಗಸಂಬಂಧಿಗಳು ನಿಮ್ಮನರಿಯರು.
ಎಂತೆನೆ, ಅಂಗಲಿಂಗವೆಂದು, ಪ್ರಾಣಲಿಂಗವೆಂದು
ಉಭಯದ ಸಂದುಂಟೆ ?
ಕರ್ಪುರಕುಂಭದಲ್ಲಿ ಹಾಕಿದ ಕಿಚ್ಚು
ಒಳಗು ಬೆಂದು, ಹೊರಗು ನಿಂದುದುಂಟೆ ?
ಇಂತೀ ಇಷ್ಟಲಿಂಗ ಪ್ರಾಣಲಿಂಗವೆಂದು
ಉಭಯದ ಗುಟ್ಟಿನಲ್ಲಿ ಮತ್ತರಾದರಿಗೆ
ಇಷ್ಟ ದೃಷ್ಟದಲ್ಲಿ ಇಲ್ಲ, ಆತ್ಮನು ನಿಶ್ಚಯದಲ್ಲಿ ನಿಲ್ಲ.
ಬಸವಣ್ಣಪ್ರಿಯ ನಾಗರೇಶ್ವರಲಿಂಗವನೆತ್ತ ಬಲ್ಲರೊ ?/394
ಅರ್ಥ: 
ಅಂಗಲಿಂಗ, ಪ್ರಾಣಲಿಂಗ ಬೇರೆ ಬೇರೆ ಎಂದು ಹೇಳುವ ಅಂಗಲಿಂಗಸಂಬಂಧಿಗಳು ಮತ್ತು
ಪ್ರಾಣಲಿಂಗಸಂಬಂಧಿಗಳು ನಿಮ್ಮನ್ನು ಅರಿಯರು.
ದೇಹವೆಂಬ ಕರ್ಪುರದ ಕುಂಭದಲ್ಲಿ ಸಾಕ್ಷಾತ್ಕಾರ ವೆಂಬ ಕಿಚ್ಚು ಹಾಕಿದಾಗ, ಒಳಗಡೆ ಮಾತ್ರ ಬೆಂದು, ಹೊರಗಡೆ ಬೆಂದದೆ ಉಳಿಯುವುದು ಸಾಧ್ಯವಿಲ್ಲ.
ಹೀಗೆ ಇಷ್ಟಲಿಂಗ ಪ್ರಾಣಲಿಂಗ ಬೇರೆ ಬೇರೆ ಎಂದು ಹೇಳುವವರಿಗೆ ಇಷ್ಟಲಿಂಗದ ದೃಷಿಯೋಗದ ಸಾಧನೆ ಸಾಧ್ಯವಾಗುವುದಿಲ್ಲ. ಆತ್ಮ ಸ್ವರೂಪಿ ಪ್ರಾಣಲಿಂಗ ನಿಶ್ಚಯದಲ್ಲಿ ನಿಲ್ಲುವದಿಲ್ಲ.
ಅವರು ಬಸವಣ್ಣಪ್ರಿಯ ನಾಗರೇಶ್ವರಲಿಂಗವನ್ನು ಅರಿಯಲು ಸಾಧ್ಯವಿಲ್ಲ. ಇಷ್ಟಲಿಂಗ ಕುರುಹಾದ ರೂ ಸಹಿತ ತನ್ನ ದೇಹದಲ್ಲಿರುವ ಪ್ರಾಣವೇ ಲಿಂಗ ರೂಪವಾಗಿ ಕರಕ್ಕೆ ಬಂದಿದೆ; ಇದೇ ನನ್ನ ಪ್ರಾಣಲಿಂಗವೆಂದೆ ತಿಳಿದು ಪೂಜಿಸಿ ದೃಷ್ಟಿಯೋಗ ಸಾಧನೆ ಮಾಡಬೇಕು ಎನ್ನುತ್ತಾರೆ ಬೊಕ್ಕಸದ ಚಿಕ್ಕಣ್ಣ ಶರಣರು.
3.ವಚನ:
#ಆ ಬೊಕ್ಕಸದ ಮನೆಯಿಪ್ಪ ಭೇದ : ಹೊರಗಣ ಹೊದಕೆ ನಾನಾ ಚಿತ್ರವಿಚಿತ್ರ.
ಮಳೆಗೆ ನೆನವುದು, ಬೆಂಕಿಗೆ ಬೇವುದು,
ಗಾಳಿಗೆ ಮುರಿಯುವುದು.
ಆ ಮನೆಗೆ ವಿರೋಧವಾಹಲ್ಲಿ ಪಟ್ಟಿ ಕೆಡದು
ದೇವಾಂಗ ಬೇಯದು, ರತ್ನ ಗಾಳಿಯ ತಪ್ಪಲಿಗೆ ಒಳಗಾಗದು.
ಈ ಬೊಕ್ಕಸದ ಮನೆಯ ಹೊರಗಣ ಕೇಡು,
ಒಳಗಣ ಲಾಭವ ನಿರೀಕ್ಷಿಸಿ ನೋಡಬೇಕು.
ಬಸವಣ್ಣಪ್ರಿಯ ನಾಗರೇಶ್ವರಲಿಂಗವ ಕೇಳಬೇಕು./395
ಅರ್ಥ:
ಶರೀರವೇ ಬೊಕ್ಕಸ. ಸ್ಥೂಲ ದೇಹ ವೆಂಬುದು ಹೊರಗಣ ಹೊದಕೆ ಇದು ಚಿತ್ರವಿಚಿತ್ರ.
ಮಳೆಗೆ ನೆನೆಯುವುದು., ಬೆಂಕಿಗೆ ಬೇಯುವುದು,
ಗಾಳಿಗೆ ಮುರಿಯುವುದು. ಒಳಗಡೆಯ ಚಿದ್ಘನ ಲಿಂಗ ಮಳೆಗೆ ನೆನೆಯದು., ಬೆಂಕಿಗೆ ಬೇಯದು,
ಗಾಳಿಗೆ ಮುರಿಯದು. ಬಸವಣ್ಣಪ್ರಿಯ ನಾಗರೇಶ್ವರಲಿಂಗದ ಮಾರ್ಗದರ್ಶನದಲ್ಲಿ 
ಈ ಬೊಕ್ಕಸದ ಮನೆಯೆಂಬ ದೇಹಕ್ಕೆ ಹೊರಗಡೆ  ಕೇಡಾಗದಂತೆಯೆ, ಒಳಗಡೆಯ ಚಿದ್ಘನ ಲಿಂಗ ಸಮರಸವನ್ನು  ನಿರೀಕ್ಷಿಸಿ ನೋಡಬೇಕು. 
4.ವಚನ :
#ಎಲ್ಲರ ಪರಿಯಲ್ಲ ಎನ್ನ ಊಳಿಗ.
ಬಸವಣ್ಣ ಚೆನ್ನಬಸವಣ್ಣ ಕೊಟ್ಟ ಕಾಯಕ
ಸತ್ಕ್ರೀಯೆಂಬ ಅರಸಿಯ ಅಪಮಾನಕ್ಕೆ,
ಲೌಕಿಕಕ್ಕೆ, ಬೊಕ್ಕಸದ ಭಂಡಾರಕ್ಕೆ.
ಈ ವರ್ತಕ ಶುದ್ಧವಾದ ಮತ್ತೆ
ಒಳಗಣ ಮುತ್ತು, ಬೆಳಗುವ ರತ್ನ, ಥಳಥಳಿಸುವ ವಜ್ರ.
ಈ ಕಾಯಕದ ಹೊಲಬ ಕೊಟ್ಟ ಮತ್ತೆ
ಕಳವಿನಿಸಿಲ್ಲದಿರಬೇಕು,
ಬಸವಣ್ಣಪ್ರಿಯ ನಾಗರೇಶ್ವರಲಿಂಗವನರಿಯಬಲ್ಲಡೆ./396
 - ಶರಣ ಬೊಕ್ಕಸದ ಚಿಕ್ಕಣ್ಣ
ಅರ್ಥ:
ತನ್ನ ವೃತ್ತಿ ವಿವೇಚನೆ ಮಾಡುತ್ತಾನೆ. ವಚನಗಳಲ್ಲಿ ಬೊಕ್ಕಸವನ್ನೇ ಪ್ರತಿಮೆ ರೂಪಕಗಳಾಗಿ ಬಳಸಿ ವಿವೇಚಿಸುತ್ತಾರೆ. ಕಾಯಕದಿಂದ ಶಿವಜ್ಞಾನವನ್ನೂ, ಶಿವನನ್ನೂ ತಿಳಿಯಲು ಸಾಧ್ಯವೆನ್ನುವರು. ತನ್ನ ಕಾಯಕ ಬಸವಣ್ಣ , ಚನ್ನಬಸವಣ್ಣ ನವರು ಕೊಟ್ಟದ್ದು ಎಂದಿರುವನು. ಬೊಕ್ಕಸ ಭಂಡಾರದ ಕಾಯಕ ಲೌಕಿಕಕ್ಕೆ, ಅದನ್ನು ಸತ್-ಕ್ರಿಯೆ ಯಿಂದ ಮಾಡಲು ಒಳ ಹೊರಗೆ ಶುದ್ಧನಾಗಿ  ಹೊಳೆಯುತ್ತಾರೆ. ನಂಬಿಕೆಯಿಂದ ಕಾಯಕ ಕೊಟ್ಟವರಿಗೆ ಕಳವಳ ಏನಿಸಬಾರದು.  
5.ವಚನ:
#ಕಾಯ ಧರ್ಮ ಕರ್ಮವನುಂಬನ್ನಕ್ಕ
ಜೀವ ಭವಕ್ಕೆ ಬಪ್ಪುದು ತಪ್ಪದು.
ಅದು ಕುಂಭದೊಳಗಣ ಜಲ ಹಿಂಗುವನ್ನಕ್ಕ
ಹುಗಿಲವಾಯಿತ್ತು.
ಕುಂಭ ಹೋಳಾಗಿ ಜಲ ನೆಲದಲ್ಲಿ ಹಿಂಗೆ,
ಉಭಯದ ಬಂಧ ಬಿಟ್ಟಿತ್ತು.
ಕಾಯ ಕರ್ಮವನರಿಯದೆ ಜೀವ ಭವವನುಣ್ಣದೆ,
ಸರ್ಪನ ದವಡೆಯಲ್ಲಿ ಸಿಕ್ಕಿದ ಕಪ್ಪೆಯಂತೆ
ಆ ವಿಷ ತಪ್ಪಿದ ಮತ್ತೆ ನೆಟ್ಟಹಲ್ಲೇನ ಮಾಡುವದು.
ಇಂತೀ ಗುಣವ ತಪ್ಪೂದು, ತಪ್ಪಿ ಒಪ್ಪವನೊಪ್ಪಿದಲ್ಲಿ
ಬಸವಣ್ಣಪ್ರಿಯ ನಾಗರೇಶ್ವರಲಿಂಗ ನಿಶ್ಚಿಂತನಾಗಿ./397
6.ವಚನ:
#ಗಾಂಧರ್ವಕ್ಕೆ ರಾಗವ ಹೆಸರಿಟ್ಟಂತೆ,
ಸ್ವರವೊಂದು, ಸಂಚಾರದ ಪರಿ ಬಣ್ಣ ಬೇರಾದಂತೆ,
ಗೋವರ್ಣ ಹಲವು, ಕ್ಷೀರ ಏಕವರ್ಣವಾದಂತೆ,
ಕಾಯಕ ಹಲವಾದಲ್ಲಿ ಮಾಡುವ ಮಾಟ, ಶರಣರೊಳಗಾಟ,
ಲಿಂಗವ ಕೂಟ ಕೂಡುವ ಏಕವಾಗಿರಬೇಕು,
ಬಸವಣ್ಣಪ್ರಿಯ ನಾಗರೇಶ್ವರಲಿಂಗವನರಿವುದಕ್ಕೆ./398
ಅರ್ಥ:
ಗಾಂಧರ್ವ ವಿದ್ಯೆಯಾದ ಸಂಗೀತದಲ್ಲಿ ಅಸಂಖ್ಯ ರಾಗಗಳಿದ್ದರೂ ಅವೆಲ್ಲಕ್ಕೂ ಆಧಾರವಾಗಿರುವ ಸ್ವರಗಳು ಒಂದೇ ಬಗೆಯವು. ಸ್ವರ ಸಂಚಾರದ ಮೂಲಕ ಅವು ಭಿನ್ನ ರಾಗಗಳ ಅನುಭವ ಕೊಡುತ್ತವೆಯಷ್ಟೆ. ಅದೇ ರೀತಿ ಹಸುಗಳ ಬಣ್ಣ ಹಲವು ತೆರೆನಾದುದಾಗಿದ್ದರೂ, ಅವೆಲ್ಲ ಕೊಡುವ ಹಾಲಿನ ಬಣ್ಣ ಮಾತ್ರ ಬಿಳಿಯದು. ಕಾಯಕದ ಉದ್ದೇಶವೂ ಅದೇ ರೀತಿಯದು ಎನ್ನುತ್ತಾನೆ ಚಿಕ್ಕಣ್ಣ. ಕಾಯಕಗಳು ಅಸಂಖ್ಯ ನಿಜ, ಅವು ದೇಹಶ್ರಮದ ಭಿನ್ನ ರೀತಿಗಳು. ಲಿಂಗಕ್ಕೆ ಉಭಯವಿಲ್ಲ,  ಕಾಯಕ ಹಲವಾದರೇನಂತೆ ಬಸವಣ್ಣಪ್ರಿಯ ನಾಗರೇಶ್ವರಲಿಂಗವನರಿವುದಕ್ಕೆ ಶರಣರೊಳಗಣ ಸತ್ಸಂಗದಲ್ಲಿ  ಲಿಂಗಾಂಗ ಯೋಗದಲ್ಲಿ  ಮಾಡುವ ಕ್ರಿಯೆ, ಲಿಂಗವ ಮಾಟ ಕೂಟ, ಸ್ಥಲಗಳು ಮತ್ತು ಲಿಂಗದರಿವು ಇವನ್ನು ಸಾಧಿಸುವ ಮಾರ್ಗಗಳು ಏಕವಾಗಿವೆ ಎನ್ನುತ್ತಾರೆ ಬೊಕ್ಕಸದ ಚಿಕ್ಕಣ್ಣ ಶರಣರು.
ಹಲವು ರಾಗ ಹುಟ್ಟಿಸುವ ಸಂಗೀತದ ಸ್ವರಗಳಂತೆ, ವಿಭಿನ್ನ ಬಣ್ಣದ ಹಸುಗಳು ಕೊಡುವ ಹಾಲಿನಂತೆ, ಕಾಯಕಗಳು ಹಲವಿದ್ದರೂ ಅವುಗಳ ಗುರಿ-ಉದ್ದೇಶ ಒಂದೇ. ಈ ಸತ್ಯವನ್ನು ಬೊಕ್ಕಸದ ಚಿಕ್ಕಣ್ಣ ಈ ವಚನದಲ್ಲಿ ಎತ್ತಿತೋರಿಸಿದ್ದಾರೆ.
7.ವಚನ:
#ಗುರುವಾದಡೆ ಭೃತ್ಯರ ಚಿತ್ತವನರಿಯಬೇಕು.
ಲಿಂಗವಾದಡೆ ಅರ್ಚಕನ ಚಿತ್ತದಲ್ಲಿ ಅಚ್ಚೊತ್ತಿದಂತಿರಬೇಕು.
ಜಂಗಮವಾದಡೆ ಉತ್ಪತ್ತಿ ಸ್ಥಿತಿ ಲಯದ
ಗೊತ್ತ ಮೆಟ್ಟದೆ ನಿಶ್ಚಿಂತನಾಗಿರಬೇಕು.
ಇಂತೀ ತ್ರಿವಿಧಲಿಂಗ ತ್ರಿವಿಧಾರ್ಪಣಕ್ಕೆ ಒಳಗಾಗಿ,
ತ್ರಿವಿಧಾಂಗ ತ್ರಿವಿಧಾರ್ಪಣಕ್ಕೆ ಒಳಗಾಗಿ,
ತ್ರಿವಿಧಾಂಗ ತ್ರಿವಿಧಮಲಕ್ಕೆ ಹೊರಗಾಗಿ,
ತ್ರಿವಿಧಾತ್ಮ ತ್ರಿವಿಧ ಅರಿವಿನಲ್ಲಿ ಕರಿಗೊಂಡು,
ವಿಶ್ವಾಸಕ್ಕೆ ಎಡದೆರಪಿಲ್ಲದೆ ತನ್ಮಯಮೂರ್ತಿ ತಾನಾದ ನಿಜೈಕ್ಯಂಗೆ
ರಾಗ ವಿರಾಗವಿಲ್ಲ, ಪುಣ್ಯ ಪಾಪವಿಲ್ಲ, ಕರ್ಮ ನಿಃಕರ್ಮವಿಲ್ಲ.
ಇಂತೀ ಭಿನ್ನಭಾವನಲ್ಲ,
ಬಸವಣ್ಣಪ್ರಿಯ ನಾಗರೇಶ್ವರಲಿಂಗವನರಿದ ಶರಣ. /399
 - ಶರಣ ಬೊಕ್ಕಸದ ಚಿಕ್ಕಣ್ಣ
 8.ವಚನ :
#ನಿಜೈಕ್ಯಂಗೆರಾಗ ವಿರಾಗವಿಲ್ಲ, 
ಪುಣ್ಯ ಪಾಪವಿಲ್ಲ, ಕರ್ಮ ನಿಃಕರ್ಮವಿಲ್ಲ.
ಇಂತೀ ಭಿನ್ನಭಾವನಲ್ಲ, ಬಸವಣ್ಣಪ್ರಿಯ 
ನಾಗರೇಶ್ವರಲಿಂಗವನರಿದ ಶರಣ./400
9. ವಚನ:
#ಗುರುವಿಂಗೆ ಗುರುವುಳ್ಳನ್ನಕ್ಕ, ಲಿಂಗಕ್ಕೆ ಲಿಂಗವುಳ್ಳನ್ನಕ್ಕ
ಜಂಗಮಕ್ಕೆ ಜಂಗಮವುಳ್ಳನ್ನಕ್ಕ, ಆತ್ಮಂಗೆ ಅರಿವುಳ್ಳನ್ನಕ್ಕ,
ಅರಿವು ಮರವೆಗೆ ಇದಿರೆಡೆಯುಂಟು.
ಗುರುವೀಂಗೆ ಉಭಯವಿಲ್ಲದೆ, ಲಿಂಗಕ್ಕೆ ಉಭಯವಿಲ್ಲದೆ,
ಜಂಗಮಕ್ಕೆ ಉಭಯವಿಲ್ಲದೆ,
ಆತ್ಮಂಗೆ ಎರಡಳಿದು, ನಿಜ ಏಕವಹನ್ನಬರ
ಒಂದನಹುದು ಒಂದನಲ್ಲಾ ಎಂದು
ಸಂದೇಹಕ್ಕೆ ಒಡಲಾಗಬಾರದು.
ತಾ ನಿಂದ ನಿಂದಲ್ಲಿಯೇ ಸಂದಳಿಯಬೇಕು,
ಬಸವಣ್ಣಪ್ರಿಯ ನಾಗರೇಶ್ವರಲಿಂಗವನರಿಯಬಲ್ಲಡೆ.
10.ವಚನ:
ನಾನಾ ಬಹುವರ್ಣದ ಬೊಕ್ಕಸವ ಹೊತ್ತು ಮಾಡುವಲ್ಲಿ
ಭಾವದ ಬಹುಚಿತ್ತವನರಿಯಬೇಕು.
ನಾನಾ ವರ್ಣದ ಆಭರಣ, ಹದಿನೆಂಟು ಆಶ್ರಯಂಗಳ ತೊಡುವಲ್ಲಿ
ದ್ರವ್ಯವ ಕೊಡುವಲ್ಲಿ ಇಂದ್ರಿಯಾತ್ಮನ ಬೆಂಬಳಿಯನರಿಯಬೇಕು.
ಎಂಟುರತ್ನದ ಕಾಂತಿ, ಜೀವರತ್ನದ ಕಳೆ
ಭಾವಿಸಿ ಏಕವ ಮಾಡಿ ನಡೆವುದು.
ನೀವು ಕೊಟ್ಟ ಕಾಯಕ ತನುವಿಂಗೆ ಕ್ರೀ, ಆತ್ಮಂಗೆ ಅರಿವು.
ಆ ಅರಿವಿಂಗೆ ಮಹಾಬೆಳಕು ಒಡಗೂಡಿ ಕರಿಗೊಂಡಲ್ಲಿ
ಬೊಕ್ಕಸದ ಮಣಿಹವನೊಪ್ಪಿಸಬೇಕು,
ಬಸವಣ್ಣಪ್ರಿಯ ನಾಗರೇಶ್ವರಲಿಂಗಕ್ಕೆ./401
ಅರ್ಥ:
ಹಲವಾರು ಭಾವನೆಗಳನ್ನು ಒಳಗೊಂಡ ಮನಸ್ಸನ್ನು ಅರಿಯುವುದು ಮುಖ್ಯ. ಚಿನ್ನ ಒಂದೇ ಆದರೂ ಮಾಡುವ ಬಂಗಾರದ ಆಭರಣಗಳು ಹಲವಾರು ಎನ್ನುತ್ತಾರೆ ಚಿಕ್ಕಣ್ಣ. ಗುರು ಬಸವಣ್ಣನವರು ಕೊಟ್ಟ ಕಾಯಕ  ಇದು  ತನುವಿಗೆ ಕ್ರೀಯೆಯಾಗಿದೆ. ಆತ್ಮಕ್ಕೆ ಅರಿವು ದಯಪಾಲಿಸಿದೆ. ಆ ಅರಿವಿನಲ್ಲಿ ಮಹಾದೇವನ ಮಹಾಬೆಳಕು ಒಡಗೂಡಿ ಗಟ್ಟಿಗೊಂಡಲ್ಲಿ ಬಸವಣ್ಣಪ್ರಿಯ ನಾಗರೇಶ್ವರಲಿಂಗಕ್ಕೆ ಬೊಕ್ಕಸದ ಮಣಿಹವನೊಪ್ಪಿಸಬೇಕು. ಕ್ರಿಯಾಜ್ಞಾನ ಸಮನ್ವಯತೆಯಿಂದ ಪರಿಶುದ್ಧ ಅರಿವಿನ ಬೆಳಕನ್ನು ಪಡೆದಾಗಲೇ ಬೊಕ್ಕಸದ ಕಾಯಕದ ಲೆಕ್ಕ ಒಪ್ಪಿಸಬಹುದು ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ಇವರು ಅಪರೂಪದ ಪರಿಶುದ್ಧ ಶರಣರಾಗಿದ್ದಾರೆ.
11. ವಚನ:
ಶೀತವುಳ್ಳನ್ನಕ್ಕ ಉಷ್ಣವ ಪ್ರತಿಪಾದಿಸಬೇಕು.
ಉಷ್ಣವುಳ್ಳನ್ನಕ್ಕ ಶೀತವ ಪ್ರತಿಪಾದಿಸಬೇಕು.
ದಿವದಲ್ಲಿ ಎದ್ದು, ರಾತ್ರಿಯಲ್ಲಿ ಒರಗುವನ್ನಕ್ಕರ
ಅದ್ವೈತ ಅಸತ್ಯ ನೋಡಾ.
ಇದು ಕಾರಣ, ಕ್ರಿಯೆ ಮರೆಯಲಿಲ್ಲ,
ಅರಿವು ಶೂನ್ಯವೆಂದು ಬಿಡಲಿಲ್ಲ.
ಅದು ಶಿಲೆಯ ಮರೆಯ ಪಾವಕ, ತಿಲದೊಳಗಣ ತೈಲ.
ಅವರ ಒಲವರದಲ್ಲಿ ಕುಲವ ಕಾಣಬೇಕು,
ಬಸವಣ್ಣಪ್ರಿಯ ನಾಗರೇಶ್ವರಲಿಂಗವನರಿವುದಕ್ಕೆ/402
ಅರ್ಥ:
ಸಾಧಕನಿಗೆ ಜ್ಞಾನ ಮತ್ತು ಕ್ರಿಯೆ ಒಂದಕ್ಕೊಂದು ಪೂರಕವಾಗಿವೆ. ಶೀತವೆಂದರೆ  ಚಂದ್ರನಾಡಿ
 (ಇಡಾನಾಡಿ)ಯ  ಇಚ್ಛಾಶಕ್ತಿ. ಉಷ್ಣವೆಂದರೆ ಸೂರ್ಯನಾಡಿ (ಪಿಂಗಳಾನಾಡಿ)ಯ ಕ್ರಿಯಾ ಶಕ್ತಿ. ಶೀತದಂತೆ ಇರುವ ಇಚ್ಛಾಶಕ್ತಿ ಉಷ್ಣದಂತೆ ಇರುವ ಕ್ರಿಯೆಯ ಪ್ರತಿಪಾದಿಸಬೇಕು. ಉಷ್ಣದಂತೆ ಇರುವ ಕ್ರಿಯಾತ್ಮಕ ವ್ಯಕ್ತಿ ಶೀತದಂತೆ ಇರುವ ಇಚ್ಛೆ ಪ್ರತಿಪಾದಿಸಬೇಕು. ಎರಡೂ ಸಮ ಇದ್ದಾಗ ಸುಷುಮ್ನದ ಜ್ಞಾನ ಉದಯವಾಗುವುದು. ಸೂರ್ಯ ಬಂದ ಮೇಲೆ ಎದ್ದು, ರಾತ್ರಿಯಲ್ಲಿ ಮಲಗುವವರ ಅದ್ವೈತ ಅಸತ್ಯ ನೋಡಾ ಅಂದರೆ ಕ್ರಿಯೆ ಇಲ್ಲದೆ ಬರೀ ಜ್ಞಾನವೇ ಎಲ್ಲಾ ಎಂದು ಹೇಳುವ ಅದ್ವೈತ ಅಸತ್ಯ ನೋಡು ಎಂದಿದ್ದಾರೆ.
ಈ  ಕಾರಣದಿಂದ, ಕ್ರಿಯೆ ಮರೆಯಲಿಲ್ಲ,
ಅರಿವು ಎಂದರೆ  ಶೂನ್ಯವೆಂದು ಅರಿವು ಬಿಡಲಿಲ್ಲ. 
ಅರಿವು  ಶಿಲೆಯ ಮರೆಯ ಪಾವಕದಂತೆ, ಎಳ್ಳು ಒಳಗಿನ ತೈಲದಂತೆ  ಕಾಣ ಬರದಿದ್ದರೂ ಒಳಗೆ ಇರುವಂತಹದು.
ಬಸವಣ್ಣಪ್ರಿಯ ನಾಗರೇಶ್ವರಲಿಂಗವನರಿವುದಕ್ಕೆ ಕ್ರಿಯೆ ಮತ್ತು ಜ್ಞಾನ ಇದ್ದಾಗ ಮಾತ್ರ ಸಾಧ್ಯ.
  - ✍️Dr Prema Pangi
#ಪ್ರೇಮಾ_ಪಾಂಗಿ, #ಬೊಕ್ಕಸದಚಿಕ್ಕಣ್ಣ

Comments

Popular posts from this blog

Shika chakra or Bindu chakra:Bindu visarga

Hrit Chakra or Eight Petals Chakra

A-Ka-Ta triangle or Akshara Brahma