ವಚನ ದಾಸೋಹ: ಶೀತವುಳ್ಳನ್ನಕ್ಕ ಉಷ್ಣವ ಪ್ರತಿಪಾದಿಸಬೇಕು.


ವಚನ ದಾಸೋಹ: 
ಶೀತವುಳ್ಳನ್ನಕ್ಕ ಉಷ್ಣವ ಪ್ರತಿಪಾದಿಸಬೇಕು.
ವಚನ:
#ಶೀತವುಳ್ಳನ್ನಕ್ಕ ಉಷ್ಣವ ಪ್ರತಿಪಾದಿಸಬೇಕು.
ಉಷ್ಣವುಳ್ಳನ್ನಕ್ಕ ಶೀತವ ಪ್ರತಿಪಾದಿಸಬೇಕು.
ದಿವದಲ್ಲಿ ಎದ್ದು, ರಾತ್ರಿಯಲ್ಲಿ ಒರಗುವನ್ನಕ್ಕರ
ಅದ್ವೈತ ಅಸತ್ಯ ನೋಡಾ.
ಇದು ಕಾರಣ, ಕ್ರಿಯೆ ಮರೆಯಲಿಲ್ಲ,
ಅರಿವು ಶೂನ್ಯವೆಂದು ಬಿಡಲಿಲ್ಲ.
ಅದು ಶಿಲೆಯ ಮರೆಯ ಪಾವಕ, ತಿಲದೊಳಗಣ ತೈಲ.
ಅವರ ಒಲವರದಲ್ಲಿ ಕುಲವ ಕಾಣಬೇಕು,
ಬಸವಣ್ಣಪ್ರಿಯ ನಾಗರೇಶ್ವರಲಿಂಗವನರಿವುದಕ್ಕೆ/402
*ಅರ್ಥ*:
ಸಾಧಕನಿಗೆ ಜ್ಞಾನ ಮತ್ತು ಕ್ರಿಯೆ ಒಂದಕ್ಕೊಂದು ಪೂರಕವಾಗಿವೆ. ಶೀತವೆಂದರೆ ಚಂದ್ರನಾಡಿ (ಇಡಾನಾಡಿ) ಯ  ಇಚ್ಛಾಶಕ್ತಿ. ಉಷ್ಣವೆಂದರೆ ಸೂರ್ಯನಾಡಿ (ಪಿಂಗಳಾನಾಡಿ)ಯ ಕ್ರಿಯಾ ಶಕ್ತಿ. ಶೀತದಂತೆ ಇರುವ ಜ್ಞಾನಿ ಉಷ್ಣದಂತೆ ಇರುವ ಕ್ರಿಯೆಯ ಪ್ರತಿಪಾದಿಸಬೇಕು. ಉಷ್ಣದಂತೆ ಇರುವ ಕ್ರಿಯಾತ್ಮಕ ವ್ಯಕ್ತಿ ಶೀತದಂತೆ ಇರುವ ಜ್ಞಾನ ಪ್ರತಿಪಾದಿಸಬೇಕು. ಸೂರ್ಯ ಬಂದ ಮೇಲೆ ಎದ್ದು, ರಾತ್ರಿಯಲ್ಲಿ ಮಲಗುವವರ
ಅದ್ವೈತ ಅಸತ್ಯ ನೋಡಾ. ಕ್ರಿಯೆ ಇಲ್ಲದೆ ಬರೀ ಜ್ಞಾನವೇ ಎಲ್ಲಾ ಎಂದು ಹೇಳುವ ಅದ್ವೈತ ಅಸತ್ಯ ನೋಡು ಎಂದಿದ್ದಾರೆ.
ಈ  ಕಾರಣದಿಂದ, ಕ್ರಿಯೆ ಮರೆಯಲಿಲ್ಲ,
ಅರಿವು ಎಂದರೆ  ಶೂನ್ಯವೆಂದು ಅರಿವು ಬಿಡಲಿಲ್ಲ. 
ಅರಿವು  ಶಿಲೆಯ ಮರೆಯ ಪಾವಕದಂತೆ, ಎಳ್ಳು ಒಳಗಿನ ತೈಲದಂತೆ  ಕಾಣ ಬರದಿದ್ದರೂ ಒಳಗೆ ಇರುವಂತಹದು.
ಬಸವಣ್ಣಪ್ರಿಯ ನಾಗರೇಶ್ವರಲಿಂಗವನರಿವುದಕ್ಕೆ ಕ್ರಿಯೆ ಮತ್ತು ಜ್ಞಾನ ಇದ್ದಾಗ ಮಾತ್ರ ಸಾಧ್ಯ.

*ಶರಣ ಪರಿಚಯ*:
*ಶರಣ ಬೊಕ್ಕಸದ ಚಿಕ್ಕಣ್ಣ* 
ಕಾಲ : 1160
ವಚನಾಂಕಿತ : ಬಸವಣ್ಣಪ್ರಿಯ ನಾಗರೇಶ್ವರಲಿಂಗ
ಕಾಯಕ : ಬೊಕ್ಕಸದ ಲೆಕ್ಕ (in charge of treasury department)
ಬೊಕ್ಕಸದ ಚಿಕ್ಕಣ್ಣ 12ನೇ ಶತಮಾನದ ಶಿವಶರಣರು. 'ಬಸವಣ್ಣಪ್ರಿಯ ನಾಗರೇಶ್ವರಲಿಂಗ' ಅಂಕಿತದಲ್ಲಿ ಬರೆದ 11 ವಚನಗಳು ದೊರೆತಿವೆ. ಇವುಗಳಲ್ಲಿ ನಾಲ್ಕು ಬೆಡಗಿನ ವಚನಗಳಿವೆ.
ಇವರು ಕಲ್ಯಾಣದಲ್ಲಿ ಬಿಜ್ಜಳನ ಬೊಕ್ಕಸದ ಅಧಿಕಾರಿಯಾಗಿದ್ದರು. ಚಿಕ್ಕಣ್ಣ ಶರಣರಿಗೆ ಅವರ ಕಾಯಕದ ಮೇಲೆ ವಿಶೇಷ ಪ್ರೀತಿ. ಚೆನ್ನಬಸವಣ್ಣ, ಬಸವಣ್ಣನವರು ಈ ಕಾಯಕವನ್ನು ತಮ್ಮ ಮೇಲೆ ನಂಬಿಕೆಯಿಟ್ಟು ಕೊಟ್ಟಿದ್ದಾರೆ ಎಂದು ಹೆಮ್ಮೆ ಮತ್ತು ಸಂತೋಷದಿಂದ ಹೇಳಿಕೊಂಡಿದ್ದಾರೆ. ಭವ್ಯವಾದ ರೀತಿಯಲ್ಲಿ ಮಹಾಮನೆಯಲ್ಲಿ ನಡೆಯುತ್ತಿದ್ದ ದಾಸೋಹ ಕಂಡ ಕೆಲವರು ಅಸೂಯೆಯಿಂದ ಬಿಜ್ಜಳ ರಾಜನಿಗೆ ಬೊಕ್ಕಸದ ಹಣ ವ್ಯಯಸುತ್ತಿರ ಬೇಕೆಂದು ದೂರು ಕೊಟ್ಟರೂ ಪ್ರತಿಸಲ ಲೆಕ್ಕ ತೋರಿಸುವಾಗ ಬೊಕ್ಕಸದ ಲೆಕ್ಕ ಸರಿಯಾಗಿಯೇ ಬರುತ್ತದೆ. ಇದರಿಂದ ಶರಣ ಚಿಕ್ಕಣ್ಣರು ಶುದ್ದ ಹಸ್ತರು, ವಿಶ್ವಾಸಕ್ಕೆ ಆರ್ಹರು ಎಂದು ಸಾಬೀತು ಆಗುತ್ತದೆ.
ಬೊಕ್ಕಸದ ದ್ರವ್ಯವನ್ನು ಎಣಿಸುವುದು, ವಿತರಣೆ ಮಾಡುವುದು, ಕಾಯುವುದು ಇವರ ದಿನ ನಿತ್ಯ ಕಾಯಕ. ಈ  ಕಾಯಕ ಮಾಡುತ್ತಾ ಅವರಿಗೆ ಬೊಕ್ಕಸದ ಬಗ್ಗೆ ಬೇರೊಂದು ಅರ್ಥ ಹೊಳೆಯುತ್ತದೆ. ಅದೆಂದರೆ, ಪ್ರತಿಯೊಬ್ಬರೂ ಅಮೂಲ್ಯವಾದ ಐಶ್ವರ್ಯವನ್ನು ತುಂಬಿಕೊಂಡ ಬೊಕ್ಕಸವಾಗಿದ್ದೇವೆ. ಆದರೆ ಅದರ ಬೀಗ ತೆಗೆಯುವವರು ಇಲ್ಲ ಎಂದು. ಇದೇ ಭಾವದಲ್ಲಿ  ವಚನಗಳನ್ನು ರಚಿಸಿದ್ದಾರೆ. ಇಲ್ಲಿ ಶರೀರವೇ ಬೊಕ್ಕಸ. ಅದಕ್ಕೆ ಬೀಗ ಹಾಕಿದೆ. ಸತ್ವರಜಸ್ ತಮೋಗುಣವೆಂಬ ಬೀಗದ ಕೈ ಗೊಂಚಲಿನಲ್ಲಿ, ಸರಿಯಾದ ಕೀಲಿ ಕೈಯನ್ನು ಹುಡುಕಿ ತೆಗೆಯುವ "ಗುರು"ವಿನ ಅವಶ್ಯಕತೆ ಇದೆ. ನಾವು ಪಡೆಯಬಹುದಾದ ಅರಿವು ನಮ್ಮಲ್ಲಿಯೇ ಇದೆ ಎಂಬ ಒಂದು ಶಬ್ದ ಚಿತ್ರವನ್ನೇ  ರಚಿಸಿದ್ದಾರೆ. ವಚನಗಳಲ್ಲಿ ಬೊಕ್ಕಸವನ್ನೇ ಪ್ರತಿಮೆ ರೂಪಕಗಳಾಗಿ ಬಳಸಿರುವರು. ಇಷ್ಟಲಿಂಗ, ಪ್ರಾಣಲಿಂಗಗಳ ಅಭೇದತ್ವ, ಕಾಯಕದ ಮಹತ್ವವನ್ನು ಕೆಲವು ವಚನಗಳಲ್ಲಿ ತಿಳಿಸುತ್ತ ಕಾಯಕದಲ್ಲಿಯೇ ಶಿವನನ್ನು, ಶಿವಜ್ಞಾನವನ್ನು ಕಾಣಬೇಕು ಎಂದು ಹೇಳುತ್ತಾರೆ.  
-✍️ Dr Prema Pangi
#ಪ್ರೇಮಾ_ಪಾಂಗಿ,
#ಶೀತವುಳ್ಳನ್ನಕ್ಕ_ಉಷ್ಣವ_ಪ್ರತಿಪಾದಿಸಬೇಕು.

Comments

Popular posts from this blog

Shika chakra or Bindu chakra:Bindu visarga

Hrit Chakra or Eight Petals Chakra

A-Ka-Ta triangle or Akshara Brahma