ಬಯಲು - 2
ಶರಣರ ಆಧ್ಯಾತ್ಮಿಕ ಚಿಂತನೆ, ಅನುಭಾವದಲ್ಲಿ ಪರಶಿವನು ಭೇದಜ್ಞಾನವಿಲ್ಲದ ಶುದ್ಧ ಚೇತನ. ಜಾತಿ ಲಿಂಗ ವರ್ಗ ಭೇದವಿಲ್ಲದ ಚೈತನ್ಯ, ಆ ಚೈತನ್ಯದ ಸ್ವರೂಪವೇ ಪರಶಿವನು.(Cosmic Consciousness) ಅವನದು ನಿರವಯ ಸ್ವರೂಪ. ಅವನು ನಿರಾಮಯ ನಿರಾಕಾರ ನಿರ್ಗುಣ ನಿರಾಲಂಬ ನಿರ್ಮಾಯ ಬಯಲು.
ಅಲ್ಲಮ ಪ್ರಭುಗಳು ಲಿಂಗಯೋಗದ ಅನುಭಾವವನ್ನು ತಮ್ಮದೇ ಬೆಡಗಿನ ಶೈಲಿಯಲ್ಲಿ ಚಿತ್ರಿಸಿದ್ದಾರೆ.
#ಬಯಲು ಬಯಲನೆ ಬಿತ್ತಿ ಬಯಲು ಬಯಲನೆ ಬೆಳೆದು
ಬಯಲು ಬಯಲಾಗಿ ಬಯಲಾಯಿತ್ತಯ್ಯಾ.
ಬಯಲ ಜೀವನ ಬಯಲ ಭಾವನೆ,
ಬಯಲು ಬಯಲಾಗಿ ಬಯಲಾಯಿತ್ತಯ್ಯಾ.
ನಿಮ್ಮ ಪೂಜಿಸಿದವರು ಮುನ್ನವೆ ಬಯಲಾದರು
ನಾ ನಿಮ್ಮ ನಂಬಿ ಬಯಲಾದೆ ಗುಹೇಶ್ವರಾ. / 1164
ಅಲ್ಲಮಪ್ರಭುವಿನ ವಚನ, 'ಬಯಲು' ಮಾತಿನ ತಾತ್ವಿಕ ಕಲ್ಪನೆ ವಿಶಾಲ ವ್ಯಾಪಕತೆಯನ್ನು ವ್ಯಕ್ತಪಡಿಸುತ್ತದೆ. ಬಯಲು ಎಂಬ ಒಂದೇ ಶಬ್ಧ ಉಪಯೋಗಿಸಿ ಪರಶಿವನದು ಬಯಲೆಂಬ ಸಹಜ ಸ್ಥಿತಿ. ಶಿವಯೋಗಿ ಮತ್ತೇ ಬಯಲು ಸ್ಥಿತಿಯಲ್ಲಿ ಬಯಲಿನಲ್ಲಿ ಬಯಲಾಗುತ್ತಾನೆ ಎಂದು ತಮ್ಮ ಅಮೋಘವಾದ ರೂಪಕ ಶೈಲಿಯಲ್ಲಿ ರಚಿಸಿದ್ದಾರೆ.
"ಬಯಲು" ಪರಮಸತ್ಯ ಪರಶಿವನ ಸಹಜ ಸ್ಥಿತಿ. ಜೀವನು ಬಯಲಿನಲ್ಲಿ ಹುಟ್ಟಿ, ಬಯಲಿನಲ್ಲಿ ಇದ್ದು, ಬಯಲಿನಲ್ಲಿಯೇ ಕೊನೆಗೊಳುತ್ತಾನೆ. ಮತ್ತು ಬಯಲಾಗಿಯೆ ಉಳಿಯುತ್ತಾನೆ. "ಪಿಂಡಾoಡ ಯುರೆಕ್ಯಂ" ದಂತೆ ಬ್ರಹ್ಮಾಂಡವು ಸಹ ಮಹಾಬಯಲಿನಲ್ಲೆ ಹುಟ್ಟಿ ಮಹಾಬಯಲಿನಲ್ಲಿಯೇ ಬೆಳೆದು ಮಹಾಬಯಲಿನಲ್ಲಿಯೇ ಕೊನೆಗೊಳ್ಳುತ್ತದೆ.
ಮಹಾಬಯಲು ಬಯಲೆಂಬ ಬ್ರಹ್ಮಾಂಡವನ್ನು ಸೃಷ್ಟಿಸಿತು (ಬಿತ್ತಿತು). ಮಹಾಬಯಲು ಬಯಲೆಂಬ ಬ್ರಹ್ಮಾಂಡವನ್ನು ಬೆಳೆದಿತು (ಸೃಷ್ಠಿ ರಚನೆ ಆಯಿತು). ಆ ಬಯಲೆಂಬ ಬ್ರಹ್ಮಾಂಡ ಮತ್ತೆ ಬಯಲಾಗಿ ಬಯಲಾಯಿತು ಅಂದರೆ ಲಯವಾಗಿ ಮತ್ತೆ ತನ್ನ ಮೂಲಸ್ಥಿತಿ ಹೊಂದಿತು (ಬಯಲಾಯಿತು).ಬಯಲನ್ನು ಬಿತ್ತಿ ಬಯಲನ್ನು ಬೆಳೆದದ್ದು ಇದು ಸೃಷ್ಟಿ ಕ್ರಿಯೆಯನ್ನು ನಿರೂಪಿಸುತ್ತದೆ. ಬಯಲು ಎಂಬ ನಿರಾಕಾರ ನಿರಾವಲಂಬಿ ಸೃಷ್ಟಿಕರ್ತ, ತನ್ನದೇ ಚಿತ್-ಶಕ್ತಿಯಿಂದ, ಬಯಲೆಂಬ ವಿಶ್ವವಾಗಿ ಪರಿಣಮಿಸಿದ. ಇದು ಅವನದೇ ಅಂಶವಾದ್ದರಿಂದ ಒಂದರ್ಥದಲ್ಲಿ ವಿಶ್ವವೂ ಬಯಲೇ. ಕೊನೆಯಲ್ಲಿ ವಿಶ್ವ ಲಯವಾಗಿ ತನ್ನ ಮೂಲಸ್ವರೂಪ ಬಯಲಾಗಿ ಬಯಲಾಗುತ್ತದೆ. ಇದು ಸರ್ವಶೂನ್ಯ ನಿರಾಲಂಬ ಸ್ಥಿತಿಯನ್ನು ಸೂಚಿಸುತ್ತದೆ.
*ಬಯಲ ಜೀವನ ಬಯಲ ಭಾವನೆ,
ಬಯಲು ಬಯಲಾಗಿ ಬಯಲಾಯಿತ್ತಯ್ಯಾ.*
ಶಿವಯೋಗಿಯಾದವನದು ಬಯಲ ಭಾವನೆ, ಬಯಲ ಜೀವನ. ಅವನು ಲೌಕಿಕದಲ್ಲಿ ಇರುವಾಗಲೂ ಬಯಲು ಸ್ವರೂಪಿ. ಯಾವ ಬಂಧನ ಗಳಿಲ್ಲದ ಮುಕ್ತ. ಯೋಗದ ಅತ್ಯುನ್ಯತೆಯ ಸ್ಥಿತಿಯಲ್ಲಿ ಪಶ್ಚಿಮಚಕ್ರದಲ್ಲಿ ಬಯಲಿನಲ್ಲಿ ಬಯಲಾಗುತ್ತಾನೆ.
ಶರಣ ಧರ್ಮದ ಶಿವಯೋಗದಲ್ಲಿ "ಬಯಲು" ಆನಂದಮಯವಾದ ಮುಕ್ತಾಮುಕ್ತ ಸ್ಥಿತಿ.
ಶರಣ ಧರ್ಮದಲ್ಲಿ "ಬಯಲಾಗುವುದು" ಅಂದರೆ ಅಷ್ಟಮದಗಳನ್ನೆಲ್ಲಾ ನಿರಸನಗೊಳಿಸಿದ ನಂತರದ ವಿಕಾಸಗೊಂಡ ಆತ್ಮವು ವಿಶ್ವಾತ್ಮನೊಡನೆ ಸಮರಸಗೊಳ್ಳುವ ಪರಿಪೂರ್ಣ ಸ್ಥಿತಿ. ಶಿವಯೋಗಿಯು ಬಯಲಿನಂತೆ ನಿರ್ಮಲ ನಿಷ್ಕಳ ನಿರ್ಮಾಯ ಮುಕ್ತಜೀವನ ನಡೆಯಿಸಿ, ಭಾವನೆಗಳನ್ನು ಅಂದರೆ ಕರಣಗಳನ್ನು ಬಯಲು ಮಾಡಿದಾಗ ಅವನು ಬಯಲಿನಲ್ಲಿ ಅಂಗಲಿಂಗ ಸಮರಸದಿಂದ ಬಯಲಾಗುತ್ತಾನೆ.
ಈ ವಿಶ್ವವು ಸಕಲ ಚರಾಚರ ಜಗತ್ತಿಗೆ ಆಶ್ರಯ.ಕೊಟ್ಟಿದೆ. ಆದರೂ ಜಗತ್ತು ಕಾಲ ಪ್ರಭಾವಕ್ಕೆ ಒಳಗಾಗಿ, ಪ್ರತಿಕ್ಷಣ ಪರಿಣಮಿಸುತ್ತದೆ. ಮಹಾಕಾರಣವಾದ ಶಿವ-ಶಕ್ತಿ ಸಂಪುಟವೆಂಬ ಮಹಾಲಿಂಗದಿಂದ ವಿಶ್ವ ಹೊರಬಂದಿದೆ. ಕಾರ್ಯರೂಪವಾದ ವಿಶ್ವ, ಕಾರಣರೂಪವಾದ ಮಹಾಲಿಂಗ .ಇವೆರಡಕ್ಕೂ ಪರಮಮೂಲವಾದುದು ಕಾರ್ಯವೂ ಅಲ್ಲದ, ಕಾರಣವೂ ಅಲ್ಲದ ಪರವಸ್ತು. ಅದು ಏನೂ ಅಲ್ಲದ್ದರಿಂಧ, ಅದರೊಳಗೆ ಎನೂ ಇಲ್ಲದ್ದರಿಂದ ಅದು ಬರಿ ಬಯಲು. ಅದು ನಿತ್ಯನಿರಂಜನ ಸತ್ ಚಿತ್ ಆನಂದ. ಶಿಷ್ಯನ ನಿರ್ಮಾಲಂತರಂಗದಲ್ಲಿ ಗುರು ಬಯಲಜ್ಞಾನವೆಂಬ ಬೀಜವನ್ನು ಬಿತ್ತುತ್ತಾನೆ. ಶಿಷ್ಯನು ಭಕ್ತಿಜಲವನ್ನೆರೆದು ಬಯಲು ಜ್ಞಾನವನ್ನು ಬೆಳೆಸುತ್ತಾನೆ. ಅಂಗಲಿಂಗ ಸಮರಸದಲ್ಲಿ ಆ ಪರಮವಸ್ತುವೇ ನಾನು'-ಎಂಬ ಪ್ರಜ್ಞಾಫಲವನ್ನು ಪಡೆದು ಆಸ್ವಾದಿಸುತ್ತಾನೆ.ಆಗ.ಅವನ ಬದುಕು-ಭಾವನೆಗಳೂ ಬಯಲಾಗಿ ಹೋಗುತ್ತವೆ. ಅದು ಅವಿರಳ ಸ್ಥಿತಿ; ಅಂಗ-ಲಿಂಗದೊಳು ಬೆರೆತು ಬಯಲಾದ ಬಯಲ ನಿಲುವು. ಹಿಂದಿನ ಮಹಾನುಭಾವರೆಲ್ಲ ಬಯಲಾದುದು ಹೀಗೆಯೇ. ಬಯಲನರಿತು, ಬಯಲನೇ ಪರಿಭಾವಿಸಿ ಆ ಬಯಲಿನೊಳಗೆ ತಮ್ಮನ್ನು ಅರ್ಪಿಸಿಕೊಳ್ಳುವುದೇ ಲಿಂಗಪೂಜೆ. ಅಂಥ ಪೂಜೆಯಗೈದವರು ಅವರು. 'ನಾನು ನಿಮ್ಮನ್ನು ನಂಬಿ ಬಯಲಿನಲ್ಲಿ ಬಯಲಾಗಿ ಹೋದೆ!'
ಬಯಲೇ ಮೂರ್ತಗೊಂಡು ಬಂದ ಆ ಪರಶಿವನನ್ನು ಮಾನವ ರೂಪದಿಂದ ಪೂಜಿಸುವುದಕ್ಕಿಂತ ಬಯಲಿನ ಸಂಕೇತದಿಂದಲೇ ಅನುಸಂಧಾನ ಮಾಡುವುದು ಶರಣರಿಗೆ ಹೆಚ್ಚು ಪ್ರಿಯವಾಗಿ ತೋರಿತು. ಗುಹೇಶ್ವರಾ, ನಿಮ್ಮ ಬಯಲು ಸ್ಥಿತಿ ಅರಿತು ನಿಮ್ಮನ್ನ ಪೂಜಿಸಿದವರು ಸಾಯುವ ಮುನ್ನವೇ ಬಯಲಾದರು. ನಾನು ಸಹ ನಿಮ್ಮನ್ನು ಭಕ್ತಿ, ನಿಷ್ಠೆ, ಜ್ಞಾನ, ಕ್ರಿಯೆಯಿಂದ ಅರಿತು ನಂಬಿ ಸಾಧನೆಯಿಂದ ಬಯಲಾದೆನು ಎನ್ನುತ್ತಾರೆ ಅಲ್ಲಮ ಪ್ರಭುಗಳು.
ಬಯಲು ಅಂದರೆ ಶೃಷ್ಟಿ ರಚನೆಯಲ್ಲಿ ಕಾರ್ಯರೂಪವಾದ ಜಗತ್ತು ಹಾಗೂ ಕಾರಣರೂಪವಾದ ಮಹಾಲಿಂಗ ಇವೆರಡಕ್ಕೂ ಮೊದಲಿನ ಸ್ಥಿತಿ. ಬಯಲು ವಿಶ್ವವೂ ಅಲ್ಲ ಮಹಾಲಿಂಗವೂ ಅಲ್ಲ. ಅದು ಏನೂ ಅಲ್ಲ ಮತ್ತು ಅದರಲ್ಲಿ ಏನೂ ಇಲ್ಲದ್ದರಿಂದ, ಅದು ಬರಿಬಯಲು, ಬಟ್ಟಬಯಲು, ನಿರಾವಲಂಬ ಬಯಲು. ಶರಣರು ಎಲ್ಲ ತತ್ವಗಳನ್ನು ಒಳಗೊಂಡ ಪರಿಪೂರ್ಣತೆಯನ್ನು "ಶೂನ್ಯ"ವೆಂದು ನಿರ್ದೇಶಿಸಿದ್ದಾರೆ. ಈ ತೋರಿಕೆಯ ಸೃಷ್ಟಿಯ ಎಲ್ಲವೂ ಪೂರ್ಣ ಸ್ವರೂಪದ ಆ ಶೂನ್ಯಲಿಂಗದಿಂದ ಹೊರಹೊಮ್ಮಿದುದು ; ಮತ್ತು ಅಲ್ಲಿಯೇ ಅಡಗಿ ಬಯಲಾಗುವಂತಹುದು.
ಹಾಗೆಯೇ ಶರಣ ಹಡಪದ ಅಪ್ಪಣ್ಣನವರು
#ಬಯಲಿಂದಲೆ ಹುಟ್ಟಿ, ಬಯಲಿಂದಲೆ ಬೆಳೆದು,
ಬಯಲಾಮೃತವನೆ ಉಂಡು, ಬಯಲನೆ ಉಟ್ಟು,
ಬಯಲನೆ ತೊಟ್ಟು, ಬಯಲು ಬಯಲೊಳಗೆ ಬೆರೆದ ಭೇದವ,
ಈ ಭುವನದೊಳಗೆ ಇಪ್ಪ ಭವಭಾರಿಗಳು ಎತ್ತಬಲ್ಲರು, ಭವವಿರಹಿತ ಶರಣರ ನಿಲವ,ಬಸವಪ್ರಿಯ ಕೂಡಲಚನ್ನಬಸವಣ್ಣಾ ?
ಎಂದು ತಮ್ಮ ಲಿಂಗಾಂಗ ಸಾಮರಸ್ಯದ ಅನುಭಾವವನ್ನು ಅತ್ಯಂತ ಮಾರ್ಮಿಕವಾಗಿ ತಿಳಿಸಿದ್ದಾರೆ. ಈ ಸತ್ಯವು, ಭವಭಾರಿಗಳಿಗೆ ವೇದ್ಯವಾಗಿಲ್ಲ ಹೇಳುತ್ತಾರೆ.
.
ಷಣ್ಮುಖಸ್ವಾಮಿಗಳು ತಮ್ಮ ಅನುಭಾವ ಸ್ಥಿತಿಯನ್ನು ವರ್ಣಿಸಿದ್ದಾರೆ.
#ಆದಿಯಿಲ್ಲದ ಬಯಲು, ಅನಾದಿಯಿಲ್ಲದ ಬಯಲು,
ಶೂನ್ಯವಿಲ್ಲದ ಬಯಲು, ನಿಃಶೂನ್ಯವಿಲ್ಲದ ಬಯಲು,
ಸುರಾಳವಿಲ್ಲದ ಬಯಲು, ನಿರಾಳವಿಲ್ಲದ ಬಯಲು,
ಸಾವಯವಿಲ್ಲದ ಬಯಲು, ನಿರಾವಯವಿಲ್ಲದ ಬಯಲು,
ಅಖಂಡೇಶ್ವರನೆಂಬ ಬಯಲಿನ ಬಯಲು
ಮಹಾಘನ ಬಚ್ಚಬರಿಯ ಬಯಲೊಳಗೆ
ಎಚ್ಚರವಡಗಿ ನಾನೆತ್ತ ಹೋದೆನೆಂದರಿಯೆನು. / 69
ಮಹಾಘನ ಬಚ್ಚಬರಿಯ ಬಯಲೊಳಗೆ
ಎಚ್ಚರವಡಗಿ ನಾನೆತ್ತ ಹೋದೆನೆಂದರಿಯೆನು ಎಂಬುದೇ ಮೋಕ್ಷ, ಇದೇ ಲಿಂಗಾಂಗ ಸಾಮರಸ್ಯ ಎಂಬುದನ್ನು ಇಂತಹ ಅನೇಕ ವಚನಗಳಲ್ಲಿ ಶರಣರು ಪ್ರತಿಪಾದಿಸಿದ್ದಾರೆ. ಒಬ್ಬೊಬ್ಬ ಶರಣರು ಇದನ್ನು ತಮ್ಮ ತಮ್ಮ ಹಂತಕ್ಕನುಗುಣವಾಗಿ ನಿರೂಪಿಸಿದ್ದಾರೆ, ಮುಖ್ಯವಾಗಿ ಗಮನಿಸಬೇಕಾದುದೆಂದರೆ ಅವರೆಲ್ಲರೂ ಕಂಡ ತಾತ್ವಿಕ ದರ್ಶನ ಒಂದೇ; ಎರಿದ ನಿಲುವು ಒಂದೇ.
ಅಲ್ಲಮ ಪ್ರಭುಗಳು" ನಿರ್ವಾಣದಲ್ಲಿ ನಿಂದು ಅಗಮ್ಯನಾಗಿ ಭಕ್ತಿಕಂಪಿತನೆನಿಸಿದೆ" ಎಂದು ನಿರ್ವಾಣಸಮಾದಿಯ ಅನುಭಾವ ಸ್ಥಿತಿ ಆರುಹಿದ್ದಾರೆ.
#ಬಯಲ ಮೂರ್ತಿಗೊಳಿಸಿದನೊಬ್ಬ ಶರಣ.
ಆ ಮೂರ್ತಿಯಲ್ಲಿ ಭಕ್ತಿಸ್ವಾಯತವ ಮಾಡಿದನೊಬ್ಬ ಶರಣ.
ಆ ಭಕ್ತಿಯನೆ ಸುಜ್ಞಾನ ಮುಖವ ಮಾಡಿದನೊಬ್ಬ ಶರಣ.
ಆ ಸುಜ್ಞಾನವನು ಲಿಂಗಮುಖವಾಗಿ ಧರಿಸಿದನೊಬ್ಬ ಶರಣ.
ಆ ಲಿಂಗವನೆ ಸರ್ವಾಂಗದಲ್ಲಿ ವೇದಿಸಿಕೊಂಡನೊಬ್ಬ ಶರಣ.
ಆ ಸರ್ವಾಂಗವನೆ ನಿರ್ವಾಣಸಮಾದಿಯಲ್ಲಿ ನಿಲಿಸಿದನೊಬ್ಬ ಶರಣ.
ನಾನು ನಿರ್ವಾಣದಲ್ಲಿ ನಿಂದು ಅಗಮ್ಯನಾದೆನೆಂದಡೆ,
ಭಕ್ತಿಕಂಪಿತನೆನಿಸಿ ಎನ್ನ ತನ್ನಲ್ಲಿಗೆ ಬರಿಸಿಕೊಂಡನೊಬ್ಬ ಶರಣ.
ಗುಹೇಶ್ವರಾ ನಿಮ್ಮ ಶರಣ ಸಂಗನಬಸವಣ್ಣನ ಶ್ರೀಪಾದವ ಕಂಡು
ಶರಣೆಂದು ಬದುಕಿದೆನು / 1162
ಎಂದು ಆ ಬಯಲ ಸಾಕಾರ ಸ್ವರೂಪವೇ ಇಷ್ಟಲಿಂಗ ಹಾಗೂ ಬಯಲನ್ನು ಸಾಕಾರ ಸ್ವರೂಪವಾಗಿ ಮಾಡಿ ಪೂಜೆಗೆ, ಯೋಗಕ್ಕೆ ಎಲ್ಲ ಶರಣರಿಗೆ ಕೊಟ್ಟ ಬಸವಣ್ಣನವರಿಗೆ ಶರಣು ಎಂದಿದ್ದಾರೆ. ಆ ಇಷ್ಟಲಿಂಗದಲ್ಲಿ ಭಕ್ತಿಸ್ವಾಯತವ ಮಾಡಿ ಆ ಭಕ್ತಿಯನ್ನೇ ಸುಜ್ಞಾನವಾಗಿಸಿ ಲಿಂಗಮುಖವಾಗಿ, ಸರ್ವಾಂಗಲಿಂಗಿಯಾಗಿ, ನಿರ್ವಾಣದಲ್ಲಿ ನೆಲೆ ನಿಂತೆ ಎಂದು ಶರಣರಿಗೆ ಇಷ್ಟಲಿಂಗ, ಲಿಂಗಯೋಗದ ಮಹತ್ವ ತಿಳಿಸಿದ್ದಾರೆ. ಹೀಗೆ ಶರಣರಿಗೆ 'ಬಯಲು ' ಅಂತಿಮ ಗುರಿ, ಶಿವಯೋಗ ಗುರಿ ಸಾಧಿಸುವ ಮಾರ್ಗ ಮತ್ತು ಸಾಧನೆಗೆ ಸಹಾಯ ಮಾಡುವ ನಿರಾಕಾರ ಪರವಸ್ತುವಿನ ಕುರುಹು' ಇಷ್ಟಲಿಂಗ'.
#ಅರಿದೆನೆಂಬುದು ತಾ ಬಯಲು,
ಅರಿಯೆನೆಂಬುದು ತಾ ಬಯಲು,
ಅರಿವಿನ ಕುರುಹಿನ, ಮರಹಿನೊಳಗೆ
ಗುಹೇಶ್ವರನೆಂಬುದು ತಾ ಬಯಲು! /623
ಅರ್ಥ:
ಅರಿವೇ ಗುರು. ಸತ್ಯದ ದಾರಿಯಲ್ಲಿ ಮುಂದೆ ನಡೆಸುವ ಅಂತರಂಗದ ಗುರು. ಸರಿ- ತಪ್ಪುಗಳನ್ನು ವಿವೇಚಿಸಿ, ಬೆಳಕಾಗಿ ನಿಲ್ಲುವ ಅಂತರ್ಗತ ಪ್ರಜ್ಞೆ. ಬದುಕು ಜೀವನದ ಅರ್ಥ, ವಿಶ್ವದ ಸ್ವರೂಪ ಗೋಚರಿಸಲು ಅರಿವು ಬೇಕು.
ನಾನು ಅರಿದಿದ್ದೇನೆ ಎಂದಾಗ ಬಯಲು ಸ್ಥಿತಿ. ಅದರಂತೆಯೇ ಸಂಪೂರ್ಣವಾಗಿ ಖಚಿತವಾಗಿ ಸೃಷ್ಠಿಯ ಎಲ್ಲವನ್ನು ಅರಿಯಲು ಸಾಧ್ಯವಿಲ್ಲ ಎಂದು ಅರಿವು ಮೂಡಿದರೆ ಅದೂ ಸಹ ಬಯಲು ಸ್ಥಿತಿ. ಅರಿವಿನ ಕುರುಹಾದ ಇಷ್ಟಲಿಂಗದ ಧ್ಯಾನದ ಮರುಹಿನಲ್ಲೆ ಆತ್ಮ ಸಾಕ್ಷಾತ್ಕಾರವಾಗಿ ಗುಹೇಶ್ವರ ಎಂಬುದು ಬಯಲಾಗುತ್ತದೆ. ಬಯಲು ಸ್ಥಿತಿ ಅನುಭಾವವಾಗುತ್ತದೆ. ನೀವು ಅರಿವಾಗಿ ಮುಂದುದೋರಿದ ಕಾರಣ ನಿಮ್ಮಿಂದಲೇ ನಿಮ್ಮನ್ನು ಅರಿತು ನಾ ಬಯಲಾದೆ ಎನ್ನುತ್ತಾರೆ ಗುರು ಬಸವಣ್ಣನವರು.
ಬಯಲಿನಲ್ಲಿ ಬಯಲಾಗುವುದನ್ನು ಸಾಧಿಸಿದ ಅಲ್ಲಮಪ್ರಭು ಬಯಲದೇಹಿಯಾದ. ಬಯಲ ಜೀವನ, ಬಯಲಭಾವನೆ ಆತನಲ್ಲಿ ಅಳವಟ್ಟವು. ಬಯಲಿನೊಳಗೆ ಬಯಲಾಗುವ ರಹಸ್ಯವನ್ನು ಅರಿತು, ಭೋದಿಸಿದ ಪ್ರಭುದೇವರು ತತ್ವ ಪ್ರಸಾರಮಾಡುತ್ತಾ ಸಾಧಕರಿಗೆ ಮಾರ್ಗದರ್ಶನ ಮಾಡುತ್ತಾ ಜಂಗಮವಾಗಿ ಸುಳಿದಾಡಿದರು.
ಮುಂದುವರಿಯುವುದು...............
- ✍️ Dr Prema Pangi
#ಬಯಲು ಬಯಲನೆ ಬಿತ್ತಿ ಬಯಲು ಬಯಲನೆ ಬೆಳೆದು
#ಬಯಲಿಂದಲೆ ಹುಟ್ಟಿ, ಬಯಲಿಂದಲೆ ಬೆಳೆದು,
#ಆದಿಯಿಲ್ಲದ ಬಯಲು, ಅನಾದಿಯಿಲ್ಲದ ಬಯಲು,
#ಬಯಲ ಮೂರ್ತಿಗೊಳಿಸಿದನೊಬ್ಬ ಶರಣ.
#ಅರಿದೆನೆಂಬುದು ತಾ ಬಯಲು,
Comments
Post a Comment