ಬಯಲು 4 : ದೇವರ ಸ್ವರೂಪ
ಬಯಲು 4 : ದೇವರ ಸ್ವರೂಪ
*ದೇವರ ಸ್ವರೂಪ*:
ಅಣುವಿಂಗೆ ಅಣುವಾಗಿರುವ, ಮಹತ್ತಿಂಗೆ ಮಹತ್ತಾಗಿರುವ ದೇವನು ನೆಲದ ಮರೆಯ ನಿಧಾನದಂತೆ, ಮುಗಿಲ ಮರೆಯ ಮಿಂಚಿನಂತೆ, ಕಂಗಳ ಮರೆಯ ಬೆಳಗಿನಂತೆ, ಬಯಲ ಮರೆಯ ಮರೀಚಿಯಂತೆ ಯಾರಿಗೂ ಕಾಣದಂತಿದ್ದಾನೆ. ನಿರಂಜನ, ನಿರಾಕಾರ ನಿರಾಳ ಸ್ವರೂಪನಾಗಿರುವ ಅವನನ್ನು ಅಲ್ಲಮ ಪ್ರಭುದೇವರು ಬಚ್ಚ ಬರಿಯ ಬಯಲು ಎನ್ನುತ್ತಾರೆ.
ಇಲ್ಲಿ ಪರಶಿವನ ಸ್ವರೂಪ, ಅವನ ನೆಲೆ ವರ್ಣನೆ ಮಾಡಲಾಗಿದೆ.
ಅದೇ ರೀತಿ ದೇವ ಸ್ವರೂಪವನ್ನು ಕುರಿತು ಗುರು ಬಸವಣ್ಣನವರು" ಜಗದಗಲ ಮುಗಿಲಗಲ, ಮಿಗೆಯಗಲ, ನಿಮ್ಮಗಲ ಬ್ರಹ್ಮಾಂಡದಿಂದತ್ತತ್ತ ನಿಮ್ಮ ಶ್ರೀಮಕುಟ, ಪಾತಾಳದಿಂದತ್ತತ್ತ ನಿಮ್ಮ ಶ್ರೀಚರಣ ಅಗಮ್ಯ, ಅಗೋಚರ, ಅಪ್ರತಿಮ ಎಂದು ಹೇಳಿ ಆ ಪರಶಿವನು ಶಾಸ್ತ್ರ-ಸ್ಮೃತಿ- ಶ್ರುತಿಗಳಿಗತೀತನಾಗಿದ್ದಾನೆ ಎನ್ನುತ್ತಾರೆ
ಗುರು ಬಸವಣ್ಣನವರು "ಬಯಲು ರೂಪ ಮಾಡಬಲ್ಲಾತನೇ ಶರಣನು. ಆ ರೂಪ ಬಯಲ ಮಾಡಬಲ್ಲಾತನೇ ಲಿಂಗಾನುಭಾವಿ " ಎಂದು ಉಭಯ ಬೆರೆಯಬೇಕು. ಬೆಳಗು ಬೆಳಗನೆ ಕೂಡಿದಂತಾಗಬೇಕು ಎಂದಿದ್ದಾರೆ.
#ಬಯಲ ರೂಪ ಮಾಡಬಲ್ಲಾತನೆ ಶರಣನು,
ಆ ರೂಪ ಬಯಲ ಮಾಡಬಲ್ಲಾತನೆ ಲಿಂಗಾನುಭಾವಿ.
ಬಯಲ ರೂಪ ಮಾಡಲರಿಯದಿದ್ದಡೆ ಎಂತು ಶರಣನಂಬೆ
ಆ ರೂಪ ಬಯಲು ಮಾಡಲರಿಯದಿದ್ದಡೆ ಎಂತು ಲಿಂಗಾನುಭಾವಿಯೆಂಬೆ
ಈ ಉಭಯ ಒಂದಾದಡೆ ನಿಮ್ಮಲ್ಲಿ ತೆರಹುಂಟೆ
ಕೂಡಲಸಂಗಮದೇವಾ / 909
ಅಲ್ಲಮನ ಆಧ್ಯಾತ್ಮಿಕ ಅನುಭವಗಳ ಅಸಾಮಾನ್ಯತೆಯಿಂದ ಅವನ ವಚನಗಳನ್ನು ಅರ್ಥಮಾಡಿಕೊಳ್ಳುವುದು ಕಷ್ಟ. ಅವನದು ಬಹುಮಟ್ಟಿಗೆ ರೂಪಕ ಭಾಷೆ. "ಶೂನ್ಯ ಮತ್ತು ಬಯಲು " ಎರಡೂ ಶರಣ ಧರ್ಮಕ್ಕೆ ವ್ಯೋಮ ಮೂರ್ತಿ ಅಲ್ಲಮ ಪ್ರಭುಗಳ ಕೊಡುಗೆ. ಇಷ್ಟಲಿಂಗ ಸರ್ವರಿಗೂ ಕೊಟ್ಟು ಶರಣರನ್ನು ಮಾಡಿದ ಗುರು ಬಸವಣ್ಣ ನವರಿಗೆ ಶರಣು ಎಂದು ಗೌರವ ಕೊಟ್ಟ ಅಲ್ಲಮ ಪ್ರಭುಗಳ ಹಾಗೆ ಬಯಲು ಸಮಾಧಿ ಅರುಹಿದ ಅಲ್ಲಮರಿಗೂ ಗುರು ಬಸವಣ್ಣನವರು ಶರಣು ಎಂದಿದ್ದಾರೆ.
#ಬಟ್ಟಬಯಲಲ್ಲಿ ಒಂದು ತಲೆಯಿಲ್ಲದ ಆನೆಯಿದ್ದಿತ್ತು,
ಆನೆ ಬಂದು ಆನೆಯ ನುಂಗಿ ತಾನೆ ಅಳಿಯಿತ್ತು,
ಅಂತರವಿಲ್ಲದ ಒಳಗು, ಅವಲಂಬನವಿಲ್ಲದ ಹೊರಗು ನೋಡಾ.
ದಳವಿಲ್ಲದ ಕುಸುಮದ ಗದ್ದುಗೆಯಲ್ಲಿ ಒಡಲಿಲ್ಲದ ಘನವು ಮೂರ್ತಿಗೊಂಡು,
ವಿಚಿತ್ರವಾಯಿತ್ತು ಜಗವೆಲ್ಲ.
ಕೂಡಲಸಂಗಮದೇವರ ಶರಣ ಪ್ರಭುದೇವರ ಶ್ರೀಪಾದಕ್ಕೆ
ಆನು ನಮೋ ನಮೋ ಎಂಬೆನು. / 902
ಶರಣ ಸಾಧನಾ ಮಾರ್ಗದಲ್ಲಿ ಸಾಕಾರ ಹಿಡಿದು ನಿರಾಕಾರ ಅರಿಯಬೇಕು. ನಿರಾಕಾರ ಹಿಡಿದು 'ನಿರಾವಲಂಬ ಬಯಲು ' ಅರಿಯಬೇಕು. ಶರಣ ಧರ್ಮದಲ್ಲಿ ಸಾಕಾರವೆಂದರೆ ಇಷ್ಟಲಿಂಗ. 'ಇಷ್ಟಲಿಂಗ ' ಬಯಲಿಗೆ ಪರ್ಯಾಯ ಪದವಲ್ಲ. ಇಷ್ಟಲಿಂಗ, ಬಯಲನ್ನು ಸಾಕ್ಷಾತ್ಕಾರ ಗೊಳಿಸುವ ನಿರಾಕಾರ ಪರಶಿವನ ಸಾಕಾರ ಕುರುಹು. ನಿರಾಕಾರವೆಂದರೆ ನಿರಾಕಾರ ನಿರ್ಗುಣ ಪರಶಿವ, ಪರಮಾತ್ಮ, ಪರವಸ್ತು.
ಪರವಸ್ತುವನ್ನು ಮೊದಲು ಇಷ್ಟಲಿಂಗ ರೂಪದಲ್ಲಿ, ನಂತರ ಪ್ರಾಣಲಿಂಗವಾಗಿಸಿ ಭಾವದೃಷ್ಟಿಯಿಂದ ಕಂಡು ಭಾವಲಿಂಗ ವಾಗಿಸಿ, ಅಭಿನ್ನಭಾವದಿಂದ ಬೆರೆಸಿ ಲಿಂಗಾಂಗಸಮರಸ ಅನುಭವಿಸಿದಾಗ
ಅಂಗ ಮತ್ತು ಲಿಂಗ ಸಮರಸವಾಗಿ 36 ತತ್ವಗಳು( 25 ಅಂಗ ತತ್ವ,11 ಲಿಂಗ ತತ್ವಗಳು ) ಒಂದರಲ್ಲಿ ಒಂದು ಅಡಗುತ್ತ ಹೋಗುತ್ತವೆ. ಇದು ಶೃಷ್ಟಿಯ ನಿರ್ವತ್ತಿ ಮುಖ. " ಸೃಷ್ಟಿ ರಚನೆ ಬಯಲಿನ ಪ್ರವರ್ತಿ ಮಾರ್ಗವಾದರೆ, ಶಿವಯೋಗದಿಂದ ಬಯಲಿನಲ್ಲಿ ಬಯಲಾಗುವದು ನಿರ್ವತ್ತಿ ಮಾರ್ಗ".
ಪ್ರಥ್ವಿ, ಆಕಾಶ, ಅಪ್ಪು, ತೇಜ, ವಾಯು ತತ್ವ ಗಳು,ಜ್ಞಾನೇಂದ್ರಿಯಗಳು,ಕರ್ಮೆಂದ್ರಿಯಗಳು ,11 ಲಿಂಗ ತತ್ವಗಳು ಬಯಲಾಗುತ್ತವೆ. ಆಗ ದಿವ್ಯಲಿಂಗ "ವಾರಿಕಲ್ಲು ಕರಗಿ ನೀರಾದಂತೆ " ಸರ್ವ ಶೂನ್ಯವಾಗಿ ಯೋಗಿಯಲ್ಲಿ ಪರಮಾನಂದ ಆವರಿಸುತ್ತದೆ. ನಿರಾವಲಂಬ ಸ್ಥಿತಿ ಉಂಟಾಗುತ್ತದೆ. ಹಾಲಿನಲ್ಲಿ ಹಾಲು ಬೆರೆದಂತೆ, ಜ್ಯೋತಿಯಲ್ಲಿ ಜ್ಯೋತಿ ಬೆರೆದಂತೆ , ನೀರಿನಲ್ಲಿ ನೀರು ಬೆರೆದಂತೆ, ಅಗ್ನಿಯಲ್ಲಿ ಅಗ್ನಿ ಬೆರೆದಂತೆ; ಬೆರೆತೆನೆಂಬ ಭಾವವೂ ಇಲ್ಲ, ಪರವಸ್ತುವೂ ಇಲ್ಲ. ಭಾವ ಬಯಲಾಗಿ ಅರುಹು ಶೂನ್ಯವಾಗಿ ಅಖಂಡ ನಿರಾಳವೆನಿಸುವ ಸ್ಥಿತಿ. ಏನೂ ಇಲ್ಲದ ಬಚ್ಚಬರಿಯ ಬಯಲು.
to be continued.....
- ✍️ Dr Prema Pangi
ಬಯಲ ರೂಪ ಮಾಡಬಲ್ಲಾತನೆ ಶರಣನು #ಬಟ್ಟಬಯಲಲ್ಲಿ ಒಂದು ತಲೆಯಿಲ್ಲದ ಆನೆಯಿದ್ದಿತ್ತು,
Comments
Post a Comment