ವಚನ ದಾಸೋಹ : ಅಂಗಲಿಂಗಸಂಬಂಧಿಗಳು ನಿಮ್ಮನರಿಯರು.

ವಚನ ದಾಸೋಹ : ಅಂಗಲಿಂಗಸಂಬಂಧಿಗಳು ನಿಮ್ಮನರಿಯರು.
ವಚನ:
#ಅಂಗಲಿಂಗಸಂಬಂಧಿಗಳು ನಿಮ್ಮನರಿಯರು.
ಪ್ರಾಣಲಿಂಗಸಂಬಂಧಿಗಳು ನಿಮ್ಮನರಿಯರು.
ಎಂತೆನೆ, ಅಂಗಲಿಂಗವೆಂದು, ಪ್ರಾಣಲಿಂಗವೆಂದು
ಉಭಯದ ಸಂದುಂಟೆ ?
ಕರ್ಪುರಕುಂಭದಲ್ಲಿ ಹಾಕಿದ ಕಿಚ್ಚು
ಒಳಗು ಬೆಂದು, ಹೊರಗು ನಿಂದುದುಂಟೆ ?
ಇಂತೀ ಇಷ್ಟಲಿಂಗ ಪ್ರಾಣಲಿಂಗವೆಂದು
ಉಭಯದ ಗುಟ್ಟಿನಲ್ಲಿ ಮತ್ತರಾದರಿಗೆ
ಇಷ್ಟ ದೃಷ್ಟದಲ್ಲಿ ಇಲ್ಲ, ಆತ್ಮನು ನಿಶ್ಚಯದಲ್ಲಿ ನಿಲ್ಲ.
ಬಸವಣ್ಣಪ್ರಿಯ ನಾಗರೇಶ್ವರಲಿಂಗವನೆತ್ತ ಬಲ್ಲರೊ ?/394
- ಶರಣ ಬೊಕ್ಕಸದ ಚಿಕ್ಕಣ್ಣ
*ಅರ್ಥ*: 
ಅಂಗಲಿಂಗ, ಪ್ರಾಣಲಿಂಗ ಬೇರೆ ಬೇರೆ ಎಂದು ಹೇಳುವ ಅಂಗಲಿಂಗಸಂಬಂಧಿಗಳು ಮತ್ತು
ಪ್ರಾಣಲಿಂಗಸಂಬಂಧಿಗಳು ನಿಮ್ಮನ್ನು ಅರಿಯರು.
 ಕರ್ಪುರದ ಕುಂಭದಲ್ಲಿ  ಕಿಚ್ಚು ಹಾಕಿದಾಗ ಅದು  ಪ್ರಜ್ವಲವಾಗಿ  ಉರಿದು ತನ್ನ ಸುವಾಸನೆ ಬೀರಿ ಸಂಪೂರ್ಣವಾಗಿ ನಶಿಸಿ ಹೋಗುತ್ತದೆ. ಅದೇ ರೀತಿ ಶರಣನ ದೇಹವೆಂಬ ಕುಂಭದಲ್ಲಿ ಸಾಕ್ಷಾತ್ಕಾರವೆಂಬ ಕಿಚ್ಚು ಹತ್ತಿದಾಗ ಸಂಪೂರ್ಣವಾಗಿ ಉರಿದು ಸುತ್ತಲೂ ಜ್ಞಾನವೆಂಬ ಸುವಾಸನೆ ಬೀರಿ ಐಕ್ಯನಾಗುತ್ತಾನೆ. ಶರಣ
ಒಳಗಡೆ ಮಾತ್ರ ಬೆಂದು, ಹೊರಗಡೆ 
ಬೇಯದೆ ಉಳಿಯುವುದು ಸಾಧ್ಯವಿಲ್ಲ. ನಾವು ಬರೀ ಇಷ್ಟಲಿಂಗ ಪೂಜೆ ಮಾಡುತ್ತೇವೆ ಪ್ರಾಣಲಿಂಗದ ಸಾಕ್ಷಾತ್ಕಾರ ಅವಶ್ಯವಿಲ್ಲ ಎನ್ನುವವರಿಗೆ, 'ವಿಶ್ವಚೈತನ್ಯ ಸ್ವರೂಪಿ'   ಬಸವಣ್ಣಪ್ರಿಯ ನಾಗರೇಶ್ವರಲಿಂಗವನ್ನು ಅರಿಯಲು ಸಾಧ್ಯವಿಲ್ಲ. ನಾವು ಪ್ರಾಣ ಲಿಂಗದ ಸಾಧನೆ ಮಾಡಿದ್ದೇವೆ, ಇಷ್ಟಲಿಂಗದ ಅವಶ್ಯಕತೆ ಇಲ್ಲ ಎನ್ನುವವರಿಗೆ ಆತ್ಮ ಸ್ವರೂಪಿ ಪ್ರಾಣಲಿಂಗ ಧೃಢ ನಿಶ್ಚಯದಲ್ಲಿ  ನಿಲ್ಲುವದಿಲ್ಲ. ಅವರೂ ಸಹ ಬಸವಣ್ಣಪ್ರಿಯ ನಾಗರೇಶ್ವರಲಿಂಗವನ್ನು ಅರಿಯಲು ಸಾಧ್ಯವಿಲ್ಲ.
ಹೀಗೆ ಇಷ್ಟಲಿಂಗ ಪ್ರಾಣಲಿಂಗ ಬೇರೆ ಬೇರೆ ಎಂದು ಹೇಳುವವರಿಗೆ ಇಷ್ಟಲಿಂಗದ ದೃಷಿಯೋಗದ ಸಾಧನೆ ಸಾಧ್ಯವಾಗುವುದಿಲ್ಲ. 
ಇಷ್ಟಲಿಂಗ ಕುರುಹಾದರೂ ಸಹಿತ ತನ್ನ ದೇಹದಲ್ಲಿರುವ ಪ್ರಾಣವೇ ಲಿಂಗರೂಪವಾಗಿ ಕರಕ್ಕೆ ಬಂದಿದೆ; ಇದೇ ನನ್ನ ಪ್ರಾಣಲಿಂಗವೆಂದೆ ತಿಳಿದು ಪೂಜಿಸಿ ದೃಷ್ಟಿಯೋಗ ಸಾಧನೆ ಮಾಡಬೇಕು ಎನ್ನುತ್ತಾರೆ ಬೊಕ್ಕಸದ ಚಿಕ್ಕಣ್ಣ 
ಶರಣರು.

*ವಚನ ಚಿಂತನೆ*:
 ಇಷ್ಟಲಿಂಗ, ಪ್ರಾಣಲಿಂಗ, ಭಾವಲಿಂಗ ಇವು ಲಿಂಗತ್ರಯಗಳು (ತ್ರಿವಿಧ ಲಿಂಗಗಳು). ಶಿವಯೋಗದಲ್ಲಿ ಶರಣರು ಕಂಡ ಆಂತರಿಕ ಅನುಭಾವದ ದೃಷ್ಟಿ ಲಿಂಗತ್ರಯಗಳಲ್ಲಿ ಗೋಚರಿಸುತ್ತದೆ.
*ಇಷ್ಟಲಿಂಗ, ಪ್ರಾಣಲಿಂಗ *
ಇಷ್ಟಲಿಂಗವೆಂದರೆ 
ಸ್ಥೂಲ ಶರೀರದ ಮೇಲೆ ಧರಿಸಿದ ಲಿಂಗವು.
ಪ್ರಾಣಲಿಂಗವೆಂದರೆ ಪ್ರತಿಯೊಂದು ಜೀವಿಯಲ್ಲಿಯೂ ಪ್ರಾಣರೂಪವಾಗಿ ಇರುವ ಲಿಂಗಚೈತನ್ಯವು.

ಭಕ್ತನ ದೃಷ್ಟಿಗಾಗಿ, ನೆನಹು ನಿರೀಕ್ಷಣೆಗಾಗಿ, ಸಾಧನೆಗೆ ಉಪಾಸ್ಯವಸ್ತುವಾಗಿ ಕರಸ್ಥಳಕ್ಕೆ ಬಂದ ಶಿವಕಳೆಯ ಸಾಕಾರ ರೂಪವಾಗಿ ಶರಣ ಧರ್ಮದಲ್ಲಿ ಇಷ್ಟಲಿಂಗವಾಯಿತು.
 ಭಕ್ತನ ಧ್ಯಾನಯೋಗಕ್ಕಾಗಿ ಮನಸ್ಥಳದಲ್ಲಿ ಕಾಣಬಂದದ್ದೇ ಪ್ರಾಣಲಿಂಗ.
ಇಷ್ಟಲಿಂಗವನ್ನ ಹಿಡಿದೇ ಪ್ರಾಣಲಿಂಗವನ್ನು  ದರ್ಶಿಸಬೇಕು ಹಾಗಾಗಿ  ಇಷ್ಟಲಿಂಗದ ಮೇಲಿನ ನಿಷ್ಟೆ ಅತ್ಯಂತ ಮುಖ್ಯವಾದದ್ದು. 

"ಅಂತರಂಗದೊಳಗಿರ್ದ ನಿರವಯಲಿಂಗವನು ಸಾವಯವಲಿಂಗವ ಮಾಡಿ, ಶ್ರೀಗುರುಸ್ವಾಮಿ ಕರಸ್ಥಲಕ್ಕೆ ತಂದುಕೊಟ್ಟನಾಗಿ,
ಆ ಇಷ್ಟಲಿಂಗವೆ ಅಂತರಂಗವನಾವರಿಸಿ
ಅಂತರಂಗದ ಕರಣಂಗಳೆ ಕಿರಣಂಗಳಾಗಿ
ಬೆಳಗುವ ಚಿದಂಶವೆ ಪ್ರಾಣಲಿಂಗವು" ಎನ್ನುತ್ತಾರೆ ಗುರು ಬಸವಣ್ಣನವರು. ಕರಸ್ಥಲದಲ್ಲಿಯ ಇಷ್ಟಲಿಂಗವು ಸಂಪೂರ್ಣ ವಾಗಿ ಅಂತರಂಗವನ್ನು ಆವರಿಸಬೇಕು.
ಅಂತರಂಗದ ಕರಣಗಳಾದ ಮನಸ್ಸು, ಜ್ಞಾನ, ಚಿತ್ತ, ಸ್ವಹಂ ಇವುಗಳು ಕಿರಣಗಳಾಗಿ ಇವುಗಳಿಂದ ಬೆಳಗುವ ಚಿದಂಶವೆ ಪ್ರಾಣಲಿಂಗವು ಎನ್ನುತ್ತಾರೆ ಗುರು ಬಸವಣ್ಣನವರು.

ಚೆನ್ನಬಸವಣ್ಣನವರು ತಮ್ಮ ವಚನದಲ್ಲಿ  ಇಷ್ಟಲಿಂಗದ ದೃಷ್ಟಿಯೋಗವಿಲ್ಲದೆ ಪ್ರಾಣಲಿಂಗವನ್ನು ಕಾಣಲಾಗದು; ಅದೇರೀತಿ ಪ್ರಾಣಲಿಂಗ ದೃಷ್ಟಿಪಟಲದಲ್ಲಿ ಉದಯಿಸಿದಲ್ಲದೆ ಇಷ್ಟಲಿಂಗವನ್ನು ನಿಜ ಅರ್ಥದಲ್ಲಿ ಕಾಣಲು ಸಾಧ್ಯವಿಲ್ಲ  ಕಾಣಬಾರದು ಎನ್ನುತ್ತಾರೆ. ಇಷ್ಟಲಿಂಗ, ಪ್ರಾಣಲಿಂಗ ಎರಡೂ ಭಿನ್ನವಲ್ಲ ಎಂಬ ಭಾವ  ಅಹಂಗ್ರಹೋಪಾಸನೆಗೆ, ಮುಂದಿನ ಸಾಧನೆಗೆ, ಅಂಗ-ಲಿಂಗ ಸಮರಸಕ್ಕೆ ಅವಶ್ಯವಾಗುತ್ತದೆ.

#ಅಂಗದ ಮೇಲೆ ಆಯತವಾದುದೆ ಇಷ್ಟಲಿಂಗ,
ಆ ಇಷ್ಟಲಿಂಗವಿಡಿದಿಹುದೆ ಪ್ರಾಣಲಿಂಗ ಸ್ವಾಯತ,
ಇಷ್ಟಲಿಂಗ ಉದಯಿಸಿದಲ್ಲದೆ ಪ್ರಾಣಲಿಂಗವ ಕಾಣಬಾರದು
ಪ್ರಾಣಲಿಂಗ ಉದಯಿಸಿದಲ್ಲದೆ ಇಷ್ಟಲಿಂಗವ ಕಾಣಬಾರದು,
ಈ ಭೇದವ ಭೇದಿಸಬಲ್ಲರೆ ಕೂಡಲಚೆನ್ನಸಂಗನಲ್ಲಿ ಲಿಂಗೈಕ್ಯವು. / 22
- ಚಿನ್ಮಯಜ್ಞಾನಿ ಚೆನ್ನಬಸವಣ್ಣನವರು

*ಇಷ್ಟಲಿಂಗ, ಪ್ರಾಣಲಿಂಗ, ಭಾವಲಿಂಗದ ಪೂಜೆಯ ಸ್ವರೂಪ*
#ಇಷ್ಟಲಿಂಗದ ಪೂಜೆಯಾವುದು,
ಪ್ರಾಣಲಿಂಗದ ಪೂಜೆಯಾವುದು,
ಭಾವಲಿಂಗದ ಪೂಡೆಯಾವುದುಯೆಂದರೆ ಹೇಳಿಹೆ ಕೇಳಿರಯ್ಯ.

ಇಷ್ಟಲಿಂಗಕ್ಕೆ ಅಷ್ಟವಿಧಾರ್ಚನೆಯ ಮಾಡುವುದು,
ಅದು ಇಷ್ಟಲಿಂಗದ ಪೂಜೆ.

ಆ ಲಿಂಗವನು ಮನಸ್ಸಿನಲ್ಲಿ ಧ್ಯಾನಿಸಿ
ಮನೋಮಧ್ಯದಲಿಪ್ಪ ನಿಃಕಲ ಬ್ರಹ್ಮವನು
ಧ್ಯಾನವೆಂಬ ಹಸ್ತದಲ್ಲಿ ಹಿಡಿದು
ಕರಸ್ಥಲದಲ್ಲಿಪ್ಪ ಲಿಂಗದ ಗೊತ್ತಿನಲ್ಲಿ ಕಟ್ಟಿ ನೆರೆವುದೀಗ
ಪ್ರಾಣಲಿಂಗದ ಪೂಜೆಯೆಂದು ಹೇಳಲ್ಪಟ್ಟಿತ್ತಯ್ಯ.

ಮನಸು ಲಿಂಗದಲ್ಲಿ ತಲ್ಲೀಯವಾಗಿ ನಚ್ಚಿ ಮಚ್ಚಿ
ಅಚ್ಚೊತ್ತಿ ಅಪ್ಪಿ ಅಗಲದಿಪ್ಪುದೇ
ಭಾವಲಿಂಗದ ಪೂಜೆಯೆಂದು ಹೇಳಲ್ಪಟ್ಟಿತ್ತಯ್ಯ.

ಇವು ಮೂರು ಲಿಂಗದ ಅರ್ಚನೆ.
ಮೂರು ಲಿಂಗದ ಉಪಚಾರ.
ಶಿವಾರ್ಥಿಗಳಾದ ವೀರಶೈವರುಗಳು ಮಾಡುವ
ಲಿಂಗಾರ್ಚನೆಯ ಕ್ರಮವೆಂದು ಹೇಳಲ್ಪಟ್ಟಿತ್ತಯ್ಯಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ. / 136
- ತೋಂಟದ ಸಿದ್ಧಲಿಂಗೇಶ್ವರರು
ಇಷ್ಟಲಿಂಗ ಪೂಜೆ:
 ದೇವಾಲಯಗಳಲ್ಲಿಟ್ಟು ಪೂಜಿಸುವ ಸ್ಥಾವರಲಿಂಗಗಳಿಂದ ಬೇರೆಯಾದುದು ಇಷ್ಟಲಿಂಗ. ಇದು ದೇಹದ ಮೇಲೆ ಆಯತವಾಗಿ, ಅನಿಷ್ಟವನ್ನು ದೂರಗೊಳಿಸಿ, ಲಿಂಗಾಂಗ ಸಾಮರಸ್ಯದ ಇಷ್ಟಾರ್ಥವನ್ನು ಸಾಧಿಸಿಕೊಡುವ ಸಾಧನ. ಅರುಹನ್ನು ಅರಿಯಲು ಕೊಟ್ಟ ಕುರುಹು ಇದು. ಭಕ್ತ ಮಹೇಶ ಪ್ರಸಾದಿ ಸ್ಥಲಗಳು ಇದರ ಅನುಸಂಧಾನದ ಮಾರ್ಗದಲ್ಲಿ ಕಂಡುಬಂದ ವಿಕಾಸದ ಹೆಜ್ಜೆಗಳು. ಅಂಗದ ಮೇಲೆ ಲಿಂಗವನ್ನು ಧರಿಸಿದ ವ್ಯಕ್ತಿ ಅದನ್ನು ಅನನ್ಯ ಶ್ರದ್ಧೆಯಿಂದ ನಂಬುತ್ತಾನೆ. ಏಕೈಕ ನಿಷ್ಠೆಯಿಂದ ಉಪಾಸಿಸುತ್ತಾನೆ. ವಿಶ್ವವೆಲ್ಲಾ ಅದರ ಪ್ರಸಾದವೆಂದು ಭಾವಿಸುತ್ತಾನೆ; ಸಾವಧಾನ ಭಕ್ತಿಯಿಂದ ತನ್ನನ್ನು ಅದಕ್ಕೆ ಆರ್ಪಿಸಿಕೊಂಡು ತಾನೇ ಪ್ರಸಾದರೂಪನಾಗಿ ಪರಿಣಮಿಸುತ್ತಾನೆ. 
ಪ್ರಾಣಲಿಂಗ ಪೂಜೆ:
ಇದರ ಮುಂದಿನ ಹೆಜ್ಜೆಯೇ ಪ್ರಾಣಲಿಂಗದ ಯೋಗ ಅನುಸಂಧಾನ. ಇಷ್ಟಲಿಂಗದ ಶ್ರದ್ಧೆ ಪೂಜೆ ನಿಷ್ಠೆ ಅರ್ಪಣೆಗಳ ಒಳಗೊಂಡು ಆಂತರಿಕ ಜಗತ್ತನ್ನು ಪ್ರವೇಶಿಸುತ್ತದೆ.
ಇಷ್ಟಲಿಂಗವನ್ನು ಕರಸ್ಥಳದಲ್ಲಿಡಿದು 
ಅನಿಮಿಷ ದೃಷ್ಟಿ - ತದೇಕ ಚಿತ್ತದಿಂದ ನೋಡುತ್ತ, ಓಂ ನಮಃ ಶಿವಾಯ ಎಂಬ ಮಂತ್ರವನ್ನು ಜಪಿಸುತ್ತಾ, ನಾಸಿಕರಂದ್ರದಿಂದ ಸಮಚಿತ್ತವಾದ ಉಸಿರಾಟವಾಗಿ ಮನಸ್ಸು ಲಿಂಗಕಳೆಯನ್ನು ಹೊಂದಿ, ಅಷ್ಟದಳ ಕಮಲದಲ್ಲಿ ಚಲಿಸುವ ಹಂಸರೂಪಿ ಜೀವಾತ್ಮನು ಹೃದಯಾಬ್ಜ ಕೋಶದಲ್ಲಿ ಸ್ಥಿರವಾಗುವುದೇ ಪ್ರಾಣಲಿಂಗದ ಅನುಭಾವವು. 
*ಶರಣ ಪರಿಚಯ*:
*ಶರಣ ಬೊಕ್ಕಸದ ಚಿಕ್ಕಣ್ಣ* 
ಕಾಲ : 1160
ವಚನಾಂಕಿತ : ಬಸವಣ್ಣಪ್ರಿಯ ನಾಗರೇಶ್ವರಲಿಂಗ
ಕಾಯಕ : ಬೊಕ್ಕಸದ ಲೆಕ್ಕ (in charge of treasury department)
ಬೊಕ್ಕಸದ ಚಿಕ್ಕಣ್ಣ 12ನೇ ಶತಮಾನದ ಶಿವಶರಣರು. 'ಬಸವಣ್ಣಪ್ರಿಯ ನಾಗರೇಶ್ವರಲಿಂಗ' ಅಂಕಿತದಲ್ಲಿ ಬರೆದ 11 ವಚನಗಳು ದೊರೆತಿವೆ. ಇವುಗಳಲ್ಲಿ ನಾಲ್ಕು ಬೆಡಗಿನ ವಚನಗಳಿವೆ.
ಇವರು ಕಲ್ಯಾಣದಲ್ಲಿ ಬಿಜ್ಜಳನ ಬೊಕ್ಕಸದ ಅಧಿಕಾರಿಯಾಗಿದ್ದರು. ಚಿಕ್ಕಣ್ಣ ಶರಣರಿಗೆ ಅವರ ಕಾಯಕದ ಮೇಲೆ ವಿಶೇಷ ಪ್ರೀತಿ. ಚೆನ್ನಬಸವಣ್ಣ, ಬಸವಣ್ಣನವರು ಈ ಕಾಯಕವನ್ನು ತಮ್ಮ ಮೇಲೆ ನಂಬಿಕೆಯಿಟ್ಟು ಕೊಟ್ಟಿದ್ದಾರೆ ಎಂದು ಹೆಮ್ಮೆ ಮತ್ತು ಸಂತೋಷದಿಂದ ಹೇಳಿಕೊಂಡಿದ್ದಾರೆ. ಭವ್ಯವಾದ ರೀತಿಯಲ್ಲಿ ಮಹಾಮನೆಯಲ್ಲಿ ನಡೆಯುತ್ತಿದ್ದ ದಾಸೋಹ ಕಂಡ ಕೆಲವರು ಅಸೂಯೆಯಿಂದ ಬಿಜ್ಜಳ ರಾಜನಿಗೆ ಬೊಕ್ಕಸದ ಹಣ ವ್ಯಯಸುತ್ತಿರ ಬೇಕೆಂದು ದೂರು ಕೊಟ್ಟರೂ ಪ್ರತಿಸಲ ಲೆಕ್ಕ ತೋರಿಸುವಾಗ ಬೊಕ್ಕಸದ ಲೆಕ್ಕ ಸರಿಯಾಗಿಯೇ ಬರುತ್ತದೆ. ಇದರಿಂದ ಶರಣ ಚಿಕ್ಕಣ್ಣರು ಶುದ್ದ ಹಸ್ತರು, ವಿಶ್ವಾಸಕ್ಕೆ ಆರ್ಹರು ಎಂದು ಸಾಬೀತು ಆಗುತ್ತದೆ.
ಬೊಕ್ಕಸದ ದ್ರವ್ಯವನ್ನು ಎಣಿಸುವುದು, ವಿತರಣೆ ಮಾಡುವುದು, ಕಾಯುವುದು ಇವರ ದಿನ ನಿತ್ಯ ಕಾಯಕ. ಈ  ಕಾಯಕ ಮಾಡುತ್ತಾ ಅವರಿಗೆ ಬೊಕ್ಕಸದ ಬಗ್ಗೆ ಬೇರೊಂದು ಅರ್ಥ ಹೊಳೆಯುತ್ತದೆ. ಅದೆಂದರೆ, ಪ್ರತಿಯೊಬ್ಬರೂ ಅಮೂಲ್ಯವಾದ ಐಶ್ವರ್ಯವನ್ನು ತುಂಬಿಕೊಂಡ ಬೊಕ್ಕಸವಾಗಿದ್ದೇವೆ. ಆದರೆ ಅದರ ಬೀಗ ತೆಗೆಯುವವರು ಇಲ್ಲ ಎಂದು. ಇದೇ ಭಾವದಲ್ಲಿ  ವಚನಗಳನ್ನು ರಚಿಸಿದ್ದಾರೆ. ಇಲ್ಲಿ ಶರೀರವೇ ಬೊಕ್ಕಸ. ಅದಕ್ಕೆ ಬೀಗ ಹಾಕಿದೆ. ಸತ್ವರಜಸ್ ತಮೋಗುಣವೆಂಬ ಬೀಗದ ಕೈ ಗೊಂಚಲಿನಲ್ಲಿ, ಸರಿಯಾದ ಕೀಲಿ ಕೈಯನ್ನು ಹುಡುಕಿ ತೆಗೆಯುವ "ಗುರು"ವಿನ ಅವಶ್ಯಕತೆ ಇದೆ. ನಾವು ಪಡೆಯಬಹುದಾದ ಅರಿವು ನಮ್ಮಲ್ಲಿಯೇ ಇದೆ ಎಂಬ ಒಂದು ಶಬ್ದ ಚಿತ್ರವನ್ನೇ  ರಚಿಸಿದ್ದಾರೆ. ವಚನಗಳಲ್ಲಿ ಬೊಕ್ಕಸವನ್ನೇ ಪ್ರತಿಮೆ ರೂಪಕಗಳಾಗಿ ಬಳಸಿರುವರು. ಇಷ್ಟಲಿಂಗ, ಪ್ರಾಣಲಿಂಗಗಳ ಅಭೇದತ್ವ, ಕಾಯಕದ ಮಹತ್ವವನ್ನು ಕೆಲವು ವಚನಗಳಲ್ಲಿ ತಿಳಿಸುತ್ತ ಕಾಯಕದಲ್ಲಿಯೇ ಶಿವನನ್ನು, ಶಿವಜ್ಞಾನವನ್ನು ಕಾಣಬೇಕು ಎಂದು ಹೇಳುತ್ತಾರೆ.  
-✍️ Dr Prema Pangi
# ಪ್ರೇಮಾ_ಪಾಂಗಿ, #ಅಂಗಲಿಂಗಸಂಬಂಧಿಗಳು_ನಿಮ್ಮನರಿಯರು, #ಬೊಕ್ಕಸದ_ಚಿಕ್ಕಣ್ಣ

Comments

Popular posts from this blog

Shika chakra or Bindu chakra:Bindu visarga

Hrit Chakra or Eight Petals Chakra

A-Ka-Ta triangle or Akshara Brahma