ಶರಣ ಪರಿಚಯ : ಯೋಗಿ ವೇಮನರು
ಶರಣ ಪರಿಚಯ : ಯೋಗಿ ವೇಮನರು
ಸಮಾನತೆಯ ಸಮಾಜ ನಿರ್ಮಾಣಕ್ಕಾಗಿ ತಮ್ಮನ್ನೇ ಸಮರ್ಪಿಸಿಕೊಂಡ
ಮಹಾನ್ ಚೇತನ, ಶ್ರೇಷ್ಠ ಅನುಭಾವಿ, ವಚನಕಾರ, ದಾರ್ಶನಿಕ, ತತ್ವಜ್ಞಾನಿ, ಮಹಾಯೋಗಿ ವೇಮನರಿಗೆ ಭಕ್ತಿಪೂರ್ವಕ ಪ್ರಣಾಮಗಳು.
ವೇಮನರು ೧೫ನೆಯ ಶತಮಾನದಲ್ಲಿ ಆಂಧ್ರಪ್ರದೇಶದ ತೆಲುಗಿನ ಶ್ರೇಷ್ಠ ವಚನಕಾರರು, ಸಮಾಜ ಚಿಂತಕರು. ಸಮಸ್ತ ಮಾನವ ಕುಲದ ಏಳಿಗೆಗಾಗಿ ಶ್ರಮಿಸಿದರು. ಕನ್ನಡದಲ್ಲಿ ಸರ್ವಜ್ಞ, ತಮಿಳಿನ ತಿರುವಳ್ಳುವರ್ ಅವರಂತೆ ತೆಲುಗಿಗೆ ವೇಮನ ವಚನಕಾರರು, ಮಹಾಕವಿ, ವಿರಕ್ತ ಪರಂಪರೆಯ ಮಹಾಯೋಗಿಗಳು.
ಜನ್ಮಸ್ಥಳ : ಆಂಧ್ರಪ್ರದೇಶದ ಗುಂಟೂರ ಜಿಲ್ಲೆಯ ಕೊಂಡವೀಡು
ಮರಣ ಸ್ಥಳ : ಅನಂತಪುರ ಜಿಲ್ಲೆಯ ಕದಿರು ತಾಲೂಕಿನ ಕಟಾರುಪಲ್ಲಿ
ಜನನ : ಕ್ರಿ.ಶ. 1412
ಐಕ್ಯ : ಕ್ರಿ.ಶ. 1480ಮರಣ
ಶಾರ್ವರಿ ನಾಮ ಸಂವತ್ಸರ ಶ್ರೀರಾಮನವಮಿ ದಿನದಂದು ಇಹಲೋಕ ತ್ಯಜಿಸಿದರು.
ತಂದೆ : ವೇಮ ಭೂಪಾಲ ಕುಮಾರ ಗಿರಿರಡ್ಡಿ
ತಾಯಿ : ರಾಣಿ ಮಲ್ಲಮಾಂಬೆ.
ಅಂಕಿತನಾಮ : ಕೇಳು ವೇಮ
ಲಭ್ಯವಿರುವ ವಚನಗಳು : 15000
ಕೊಂಡವೀಡು ಗ್ರಾಮದಲ್ಲಿ ಕ್ರಿ.ಶ. 1412ರಲ್ಲಿ ಜನಿಸಿದ ವೇಮನರು ಮೂಗಚಿಪಲ್ಲಿಯ ದೊರೆ ಕೋಮಗಿರಿ ವೇಮ ಭೂಪಾಲ ಕುಮಾರ ಗಿರಿರಡ್ಡಿ ಮತ್ತು ಮಲ್ಲಮಾಂಬೆ ಎಂಬ ದಂಪತಿಗಳ ಮಗನಾಗಿ ಜನಿಸಿದನು. ತಂದೆ ತಾಯಿ ಶ್ರೀಶೈಲ ಪೀಠ ಮಲ್ಲಿಕಾರ್ಜುನ ಭಕ್ತರು.
ವಿಲಾಸಜೀವನದಿಂದ ವಿರಾಗಭಾವದ ವೈರಾಗ್ಯದೆಡೆಗೆ :
ಯೌವನದಲ್ಲಿ ದುಶ್ಚಟಗಳ ದಾಸನಾದ ವೇಮನ ಪರಸ್ತ್ರೀ ಸಂಗದಲ್ಲಿ ವಿಷಯಾಸಕ್ತನಾಗಿ ಭೋಗಾಸಕ್ತನಾಗುತ್ತಾನೆ. ವೇಶ್ಯಾಸ್ತ್ರೀಯೊಬ್ಬಳ ಸಹವಾಸ ಮಾಡಿ, ಮನೆಯ ಸಂಪತ್ತನ್ನೆಲ್ಲಾ ಹಾಳುಗೆಡವುತ್ತಾನೆ. ಈ ಕಾರಣ ವೇಮನ ಹೆತ್ತವರಿಂದ, ಒಡಹುಟ್ಟಿದವರಿಂದ, ಸಂಬಂಧಿಕರಿಂದ ಅನಾದಾರಕ್ಕೆ ಗುರಿಯಾಗಿರುತ್ತಾನೆ. ವೇಮನನಿಗೆ ಅತ್ತಿಗೆಯಾಗಿ ಬಂದ ಮಹಾ ಸ್ವಾದಿ ಹೇಮರೆಡ್ಡಿ ಮಲ್ಲಮ್ಮ ಮೈದುನನ ಮನ ತಿದ್ದುವಲ್ಲಿ ಪ್ರಯತ್ನಿಸಿ ಸಫಲಳಾಗುತ್ತಾಳೆ. ದುಶ್ಚಟಗಳ ದಾಸನಾದ ವೇಮನ ವೇಶ್ಯಾಸ್ತ್ರೀಯೊಬ್ಬಳ ಮನದಾಸೆ ಈಡೇರಿಸಲು, ಅತ್ತಿಗೆಯಾಗಿದ್ದ ಹೇಮರೆಡ್ಡಿ ಮಲ್ಲಮ್ಮನ ಮೂಗುತಿಯನ್ನು ಬೇಕೆಂದು ಕೇಳುತ್ತಾನೆ. ಹೇಮರೆಡ್ಡಿ ಮಲ್ಲಮ್ಮ ಮೈದುನನಾದ ವೇಮನನಿಗೆ ಮೂಗುತಿ ತೆಗೆದು ಕೊಟ್ಟು, ಕರಾರೊಂದನ್ನು ವಿಧಿಸುತ್ತಾಳೆ. "ವೇಮನ ಹೇಮರೆಡ್ಡಿ ಮಲ್ಲಮ್ಮನ ಮೂಗುತಿಯನ್ನು ಆ ವೇಶ್ಯಾಸ್ತ್ರೀಗೆ ಕೊಡುವಾಗ, ಆಕೆ ನಗ್ನಳಾಗಿ ಬಂದು ವೇಮನ ಕುಳಿತದ್ದ ಮಂಚವನ್ನು ಮೂರು ಸುತ್ತು ಸುತ್ತಬೇಕು. ಮೂರು ಸುತ್ತು ಹಾಕಿದ ನಂತರ ಹಿಂಬದಿಗೆ ಬಾಗಿ, ಎರಡು ಕಾಲುಗಳ ನಡುವೆ ಬಗ್ಗಿ ಕೈ ಚಾಚಿ ವೇಮನನಿಂದ ಮೂಗುತಿಯನ್ನು ಪಡೆಯಬೇಕು. ಅವಳು ಆ ಮೂಗುತಿಯನ್ನು ಪಡೆಯುವವರೆಗೂ ವೇಮನ ಆಕೆಯ ನಗ್ನದೇಹವನ್ನು ನೋಡಬೇಕು". ವೇಮನ ಅತ್ತಿಗೆ ಹೇಮರೆಡ್ಡಿ ಮಲ್ಲಮ್ಮನ ಮಾತನ್ನು ಪಾಲಿಸುತ್ತಾನೆ.
ಸ್ವಾದಿ ಅತ್ತಿಗೆಯ ಮೂಗತಿಗೆ ಆಸೆ ಪಟ್ಟ ವೇಶ್ಯಾಸ್ತ್ರೀಯ ದುರಾಸೆಯಿಂದ ಹಾಗೂ ಅತ್ತಿಗೆಯ ಮೂಗುತಿಯನ್ನು ಕೊಟ್ಟ ತನ್ನ ಮೇಲೆಯೂ ಅವನಲ್ಲಿ ಜಿಗುಪ್ಸೆ ಮೂಡಿ, ವೇಶ್ಯಾಸ್ತ್ರೀಯ ನಗ್ನ ಶರೀರವನ್ನು ಕಂಡು, ಅಸಹ್ಯಭಾವನೆ ಆವರಿಸಿ ಕಣ್ಮುಚ್ಚಿಕೊಳ್ಳುತ್ತಾನೆ.
#ತಾಯಿಯ ಗರ್ಭದಿಂದ ತಾಂ ಬರುವ ಸಮಯದಿ ಮೊದಲು ವಸ್ತ್ರಮಿಲ್ಲ, ತುದಿಗುಮಿಲ್ಲ
ನಡುವೆ ಬಟ್ಟೆಯುಡುವುದೇಕೆಂದು ತಿಳಿಯಿರಿ
ವಿಶ್ವತೋಭಿರಾಮ ಕೇಳು ವೇಮ/
ಎಂಬ ತತ್ವ್ತಜ್ಞಾನ ಮನದಲ್ಲಿ ಮೂಡಿ, ತಾನು ನಗ್ನವೈರಾಗಿಯಂತೆ ಹೊರ ಹೊರಟನು, ಲೌಕಿಕ ಜೀವನ ತ್ಯಜಿಸಿ, ಜನರಿಗೆ ತತ್ವ್ತಜ್ಞಾನ ಹೇಳುತ್ತಾ, ಮುಂದೆ ತನ್ನ ಸಾಧನೆಯಿಂದ ಮಹಾಯೋಗಿಯಾಗುತ್ತಾನೆ.
ಆಂಧ್ರಪ್ರದೇಶದ ಗುಂಟೂರ ಜಿಲ್ಲೆಯ ರಾಜ ಮಗನಾಗಿದ್ದರೂ ವೇಮನರು ತಮ್ಮ ಜೀವಿತ ಕಾಲದಲ್ಲಿ ಸುಖದ ಸುಪ್ಪತ್ತಿಗೆಯಲ್ಲಿರಲಿಲ್ಲ. ಬಟ್ಟೆಯಿಲ್ಲದೆ ಊರೂರು ತಿರುಗಿ ಭಿಕ್ಷಾನ್ನವನ್ನುಂಡು ಜನರ ನೋವು ನಲಿವುಗಳನ್ನು ಕಣ್ಣಾರೆ ಕಂಡು ಕಾವ್ಯ ರಚಿಸಿದ್ದಾರೆ. ಹೇಗೆ ಕನ್ನಡದಲ್ಲಿ ಸರ್ವಜ್ಞ ಕವಿ ಊರೂರು ಸುತ್ತಿ ಜನರ ಹತ್ತಿರ ಇದ್ದು ಆ ಅನುಭವದಿಂದ ತ್ರಿಪದಿಗಳನ್ನು ರಚಿಸಿದರೋ ಹಾಗೆ ತೆಲುಗಿನಲ್ಲಿ ಯೋಗಿ ವೇಮನರು ಲೋಕಸಂಚಾರಿಯಾಗಿ ಜನರ ಬದುಕನ್ನು ಕಂಡು ವಚನಗಳನ್ನು ರಚಿಸಿದರು.
ಅದಕ್ಕಾಗಿಯೆ ಅವರ ಕಾವ್ಯದಲ್ಲಿ ಸತ್ವ ಇದೆ.
ವೇಮನರು ರಚಿಸಿದ 15 ಸಾವಿರ ಪದ್ಯಗಳನ್ನು ಕಡಪಾದ ವೇಮನ ವಿಶ್ವವಿದ್ಯಾಲಯ ಪ್ರಕಟಿಸಿದೆ. ವೇಮನರು ತಮ್ಮ ಹೆಸರನ್ನೇ (ಕೇಳು ವೇಮ) ವಚನಗಳ ಅಂಕಿತನಾಮ ಮಾಡಿಕೊಂಡಿರುವುದು ವಿಶೇಷ. 'ನೀನು ಹೀಗೆ ಇರಬೇಕು ಕೇಳುವೇಮ ' ಎಂದು ತಮಗೆ ತಾವೇ ಹೇಳಿಕೊಳ್ಳುವ ಹಾಗೆ ವಚನಗಳನ್ನು ರಚಿಸಿದ್ದಾರೆ., 'ಮನುಷ್ಯರೆಲ್ಲರೂ ಪರಿಪೂರ್ಣರಲ್ಲ, ಪ್ರತಿಯೊಬ್ಬರು ತಮ್ಮನ್ನು ತಾವು ತಿದ್ದಿಕೊಂಡು ನಡೆಯಬಹುದು' ಎಂಬ ಸಂದೇಶ ಅವರ ಜೀವನದಲ್ಲಿದೆ. ವಿಶ್ವಅಭಿರಾಮನೆಂಬ ಗುರು ವೇಮನರ ಜ್ಞಾನವೃದ್ಧಿಗೆ ಕಾರಣನಾಗಿದ್ದರಿಂದ ಅವನ ಹೆಸರನ್ನು ಅಂಕಿತನಾಮದಲ್ಲಿ ಸೇರಿಸಿದರು ಎನ್ನಲಾಗುತ್ತದೆ.
ಜನಸಾಮಾನ್ಯರ ಕವಿಯಾದ ಯೋಗಿ ವೇಮನರು ಜಾತೀಯತೆ, ಅಂಧ ಶ್ರದ್ಧೆ, ಮೇಲು-ಕೀಳುಗಳನ್ನು 12ನೆಯ ಶತಮಾನದ ಬಸವಾದಿ ಶರಣರಂತೆಯೆ ತಮ್ಮ ವಚನಗಳ ಮೂಲಕ ಧಿಕ್ಕರಿಸಿದವರು. ಜೀವನವೆಂಬ ಸಂತೆಯೊಳಗಿದ್ದುಕೊಂಡೇ ಸಂತನಾಗಿ ಬೆಳೆದ ಅವರು ಒಬ್ಬ ಅಪೂರ್ವ ಸಮಾಜ ಸುಧಾರಕರಾಗಿ ಜನರ ಪ್ರಜ್ಞೆ ಬೆಳೆಸಿದರು. ಮಹಾಯೋಗಿ ವೇಮನರು ಸರಳತೆಯಿಂದ ಬದುಕಿ, ಸಂತ ಜೀವನಕ್ಕೆ ಮಾದರಿ ಎನಿಸಿದ್ದರು. ವೇಮನರ ಉತ್ಕೃಷ್ಟ ಸಾಹಿತ್ಯವು ಜನರ ಮನಸ್ಸಿಗೆ ಪರಿಪೋಷಣೆ ನೀಡುವುದಲ್ಲದೆ ಜೀವನದಲ್ಲಿ ಪ್ರತಿಕೂಲ ಪ್ರಸಂಗ ಬಂದಾಗ ಸಾಂತ್ವನ ಹೇಳುತ್ತದೆ. ಪ್ರಸನ್ನತೆಯನ್ನು ತಂದುಕೊಡುತ್ತದೆ
ಕರುಣೆ, ಸಮಾನತೆ, ಧಾರ್ಮಿಕ ಸೌಹಾರ್ದ, ವಿಶ್ವಮಾನವ ಸಂದೇಶ ಎಲ್ಲವೂ ವೇಮನರ ಕಾವ್ಯಗಳಲ್ಲಿ ಇದ್ದರೂ ಅವುಗಳಿಗೆ ಸಿಗಬೇಕಾದ ಪ್ರಚಾರ ಸಿಗಲಿಲ್ಲ. ವೇಮನರು ಪಟ್ಟಭದ್ರರು
ಪುರೋಹಿತಶಾಹಿಯ ಡಾಂಭಿಕ ಆಚರಣೆ,
ಜಾತಿಪದ್ಧತಿಯ ತಾರತಮ್ಯ ವಿರೋಧಿಸಿದವರು.
ಮುಟ್ಟಾಗದೆ ಹುಟ್ಟೆಲ್ಲಿದೆಯೆಂದು ಪ್ರಶ್ನಿಸಿ ಮಹಿಳೆಯರಿಗೆ, ಅಸ್ಪುರುಷರ ಸ್ವಾಭಿಮಾನವ ಎತ್ತರಿಸಿ ಕೆಳಜಾತಿಯವರಿಗೆ ಸಮಾನ ಸ್ಥಾನ ಕಲ್ಪಿಸಿಕೊಟ್ಟ ಪರಮವಿಭೂತಿ ಯೋಗಿಗಳು. ಆಂಧ್ರದಲ್ಲಿಯ ಸಾಹಿತ್ಯ ಮತ್ತು ರಾಜಕೀಯವಲಯ ತಾಳಿದ ತಾರತಮ್ಯ ಧೋರಣೆಗೆ ಇದು ಕಾರಣವಾಯಿತು. ಕೆಲವು ಸಾಂಪ್ರದಾಯಸ್ಥರಿಗೆ ವೇಮನರ ಪದ್ಯಗಳು ಹಿಡಿಸದೇ ಇದ್ದುದರಿಂದ ಆಂಧ್ರದಲ್ಲಿ ವೇಮನ ಸಾಹಿತ್ಯವನ್ನು ವಿರೋಧಿಸುವ ಒಂದು ವರ್ಗವೇ ಹುಟ್ಟಿಕೊಂಡಿತು. ಇದರ ಪರಿಣಾಮ ಸುಮಾರು 300 ವರ್ಷ ವೇಮನರ ಕಾವ್ಯ ಜನಸಾಮಾನ್ಯರನ್ನು ತಲುಪದೆ ಹೋಯಿತು.
ಬ್ರಿಟಿಷ್ ಸರ್ಕಾರದ ಸೇವೆಯಲ್ಲಿ ಬ್ರೌನ್ ಎಂಬವರು ಮಹಾಮೇಧಾವಿಯಾಗಿದ್ದರು. ವೇಮನರನ್ನು ಪ್ರಪ್ರಥಮವಾಗಿ ಜಗತ್ತಿಗೆ ಪರಿಚಯಿಸಿದ ಕೀರ್ತಿ ಬ್ರೌನರಿಗೆ ಸಲ್ಲುತ್ತದೆ. ಕನ್ನಡಕ್ಕೆ ಕಿಟೆಲ್ ಹೇಗೊ ಹಾಗೆ ತೆಲುಗಿನವರಿಗೆ ಸಿ.ಪಿ. ಬ್ರೌನ್. ಅವರ ಪರಿಶ್ರಮದಿಂದಲೇ ವೇಮನರ ಪದ್ಯಗಳು ಇಂಗ್ಲಿಷಿಗೆ ಅನುವಾದಗೊಂಡು ಭಾರತದಲ್ಲಷ್ಟೆ ಅಲ್ಲ ವಿಶ್ವದ ಅನೇಕ ದೇಶಗಳಲ್ಲಿ ಜನಪ್ರಿಯವಾದವು. ಇತರ ದೇಶಗಳ ಭಾಷೆಗಳಿಗೂ
ಅನುವಾದಗೊಂಡವು. ಸ್ಥಳೀಯರ ಅಸೂಯೆಯ ಮಧ್ಯೆಯೂ ವೇಮನರು ವಿಶ್ವಕವಿಯಾದರು. ಅನಂತಪುರ ಜಿಲ್ಲೆಯ ಕದಿರು ತಾಲೂಕಿನ ಕಟಾರುಪಲ್ಲಿಯಲ್ಲಿ ಕೊನೆಯ ದಿನಗಳನ್ನು ಕಳೆದ ವೇಮನರು ಕ್ರಿ.ಶ. 1480ರಲ್ಲಿ ಐಕ್ಯರಾದರು. ಅವರ ಸಮಾಧಿಯು ಈಗಲೂ ಅಲ್ಲಿದೆ. ಅದೊಂದು ಪುಣ್ಯಸ್ಥಳವಾಗಿ, ಶ್ರದ್ಧಾಕೇಂದ್ರವಾಗಿ ಮಾರ್ಪಟ್ಟಿದೆ. ಅಲ್ಲಿಗೆ ಈಗಲೂ ವೇಮನರ ಅಭಿಮಾನಿಗಳು, ಭಕ್ತರು ಭೇಟಿ ಕೊಡುತ್ತಾರೆ.
ಜ. 19ರಂದು ಅವರ ಜಯಂತಿಯನ್ನು ನಾಡಿನಾದ್ಯಂತ ಆಚರಿಸಲಾಗುತ್ತಿದೆ.
ಯೋಗಿ ವೇಮನರ ವಚನಗಳು:
ತೆಲುಗು ಭಾಷೆಯ ಅನುವಾದ.
1.
#ತಾವಿತರರಿಗಿಡಲು ತಮಗೆ ಬರುವುದು ಕೂಡ, ಕೇಳಿದರೆ ಕೊಡಲು ಯಾಚಿಸಿ ಜೀವಿಸುವವರು ಅವರು ಇಲ್ಲಿ ಕೊಡದವನೆ ಎಲ್ಲಿಯೂ ಬಾರದು, ವಿಶ್ವದಾಭಿರಾಮ ಕೇಳು ವೇಮಾ
ಅರ್ಥ:
ಕೇಳಿಸಿಕೊಳ್ಳದೆ ಕೊಟ್ಟಲ್ಲಿ ದೈವ ಕೊಟ್ಟವನಿಗೆ ಮತ್ತೆ ಕೊಡುವುದು.
ಕೇಳಿಸಿಕೊಂಡು ಕೊಟ್ಟವರಿಗೆ ಪರರನ್ನು ಯಾಚಿಸಿ ಜೀವಿಸಬೇಕಾಗಿ ಬರುವ ಅವಸ್ಥೆಯುಂಟಾಗುವುದು.
ಈ ಲೋಕದಲ್ಲಿ ದಾನ ಮಾಡದವನಿಗೆ ಯಾವ ಲೋಕದಲ್ಲೇ ಆಗಲಿ ಏನು ಲಭಿಸದು.
2.
#ಒಣಗಿದ ಮರವೊಂದು ಕಾಡಿನಲ್ಲಿದ್ದಲ್ಲಿ
ಕಾಡ್ಕಚ್ಚು ಅದರಿಂಪುಟ್ಟಿ ಗಿಡಗಳೆಲ್ಲಂ ಸುಡುಂ, ಹೊಳೆಯುವ ವಂಶದೊಲೋರ್ವ ಚಂಡಾಲಂ ಜನಿಸೆ, ಕೆಡಿಸುವ ವಂಶ ಮೆಲ್ಲಂ ವೇಮಾ.
ಅರ್ಥ:
ಅರಣ್ಯದೊಳಗೆನ ಒಂದು ಒಣಗಿದ ಮರಕ್ಕೆ ಕಾಲಾವಶದಿಂದ ಬೆಂಕಿಬಿದ್ದಲ್ಲಿ ಅದು ಕಾಡನಲ್ಲಿಯ ಗಿಡಗಳೆಲ್ಲವನ್ನು ಸುಟ್ಟು ಬಿಡುವಂತೆ, ಉತ್ತಮ ವಂಶದಲ್ಲಿ ಒಬ್ಬ ನೀಚ ಚಂಡಾಲನೊಬ್ಬ ಜನಿಸಿ ಕುಲವನೆಲ್ಲಾ ಅಪಕೀರ್ತಿಗೊಳಿಸುವನು.
3.
#ಪಂಚಭೂತಗಳನ್ನು ಮನದಲ್ಲಿ ನೆನೆಯುತ್ತ ಮನವನೀಶನೊಳ್ ಲೀನಗೊಳಿಸಿ ಮೃತ್ಯುವಂ ಜಯಿಸಿ ಮುಕುತಿ ಪಡದವನೆ ಸದ್ವಿವೇಕಿಯಾದ ಯೋಗಿ ವೇಮಾ.
ಅರ್ಥ:
ಪಂಚಭೂತಗಳಾದ ಭೂಮಿ, ಆಕಾಶ, ಅಗ್ನಿ, ಜಲ, ಗಾಳಿಗಳನ್ನು ಮನದಲ್ಲಿ ನೆನೆಯುತ್ತ ಮನಸ್ಸನ್ನು ಈಶನಲ್ಲಿ ಲೀನ ಮಾಡಿ, ಮೃತ್ಯುವನ್ನು ಜಯಿಸಿ, ಮುಕ್ತಿ ಪಡೆದವನು ಸದ್ವಿವಿವೇಕೀಯಾದ ಯೋಗಿ ಎನಿಸುತ್ತಾನೆ.
4.
#ಪಂಚಭೂತಗಳಲ್ಲಿ ಪ್ರಖ್ಯಾತನಾದವನು. ಪಂಚಲಿಂಗಗಳಲ್ಲಿ ಪ್ರಬಲಿಸಿರುವವನು ಪಂಚಬೀಜಗಳಲ್ಲಿ ಯೋಚಿಸಲ್ ತಾನೆಯೇ ವಿಶ್ವದಾಭಿರಾಮ ಕೇಳು ವೇಮಾ.
ಅರ್ಥ:
ಶಿವಯೋಗದ ಪಂಚಭೂತಗಳು, ಪಂಚೇಂದ್ರಿಯಗಳು, ಚಕ್ರಗಳಲ್ಲಿಯ ಪಂಚಲಿಂಗಗಳಲ್ಲಿ ಸಾಧನೆ ಮಾಡಿ ಪ್ರಭಲ ನಾದವನು, ಪಂಚಬೀಜಾಕ್ಷರಗಳಲ್ಲಿ ಧ್ಯಾನಿಸಿದವನು ಸರ್ವೇಶ್ವರನಾಗಿ ವಿಶ್ವದ ಅಭಿರಾಮ ನಾಗುತ್ತಾನೆ.. ಇವನ್ನು ವೇಮನನು ಚೆನ್ನಾಗಿ ಅರಿತವರಾಗಿ ಯೋಗಾನಂದದ ಆಳವನ್ನನುಭವಿಸಿದನು.
5.
#ಪರರಿಗುಪಕರಿಸಿ ಪರರ ಒಡವೆಯನಿತರರಿಗೆ ಕೊಟ್ಟಲ್ಲಿ ಪರಮ ಪದವಿ ಲಭಿಸುವುದು. ಪರಕ್ಕಿಂತ ಅಧಿಕ ಪವಿತ್ರವೇಂ ಹಣವು? ವಿಶ್ವದಾಭಿರಾಮ ಕೇಳು ವೇಮಾ
ಅರ್ಥ:
ಮಾನವ ತಾನು ಗಳಿಸಿದ ಹಣ ತನ್ನದೆ ಎನ್ನುವುದು ನಿಜವಾದರೂ, ಅವನ ಶ್ರೀಮಂತಿಕೆಗೆ ಇತರರೂ ಶ್ರಮಿಸಿರುವುದಂತೂ ಖಂಡಿತ. ಆದುದರಿಂದ ಅವನ ಸಂಪತ್ತಿನಲ್ಲಿ ಸ್ವಲ್ಪ ಭಾಗವದರೂ ಪರರಿಗೆ ಸೇರಬೇಕಾದುದೇ. ಪರರಿಗೆ ಉಪಕರಿಸುವುದಕ್ಕಾಗಿ ಪರರ ಹಣವನ್ನು ಪರರಿಗೆ ಕೊಟ್ಟರೂ ಪರಲೋಕ ಪ್ರಾಪ್ತಿಯಾಗುವುದು. ಹಣ ಪರಲೋಕ ಪ್ರಾಪ್ತಿಗಿಂತಲೂ ಪವಿತ್ರವಾದುದಲ್ಲ. ಆದುದರಿಂದ ದಾನಮಾಡಿ ಎಂದು ಉಪದೇಶಿಸಿದರು.
6.
#ಕೇಳದೇ ಅರ್ಥವಂ ಕೊಡುವವನು ಬ್ರಹ್ಮಜ್ಞಾನಿ,
ಕೇಳಲು ಅರ್ಥವಂ ಕೊಡುವವನೆ ತ್ಯಾಗಿ, ಕೇಳಿದರು ಅರ್ಥವಂ ಕೊಡದವನು ಕಡು ಲೋಭಿ, ವಿಶ್ವದಾಭಿರಾಮ ಕೇಳು ವೇಮಾ.
ಅರ್ಥ:
ಮಾನವನು ಜೀವಿಸಿರುವಾಗ ಋಜು ಮಾರ್ಗದಲ್ಲಿ ಹಣವನ್ನು ಗಳಿಸಬೇಕು. ಗಳಿಸಿದ ಹಣವನ್ನು ಸದ್ದಿನಿಯೋಗ ಮಾಡಬೇಕು. ಅಂತಹ ಸದ್ವಿನಿಯೋಗಗಳಲ್ಲಿ ದಾನವನ್ನೀಯುವುದೂ ಒಂದು. ಇದ್ದಾಗ ಹಿಂದು ಮುಂದು ನೋಡದೆ ಕೊಡುವವನು ಬ್ರಹ್ಮಜ್ಞಾನಿ, ಕೇಳಿಸಿಕೊಂಡು ಕೊಡುವವನು ತ್ಯಾಗಿ, ಕೇಳಿದರು ಕೊಡದವನು ಲೋಭೀ.
7.
#ತಂದೆಯ ಮೇಣ್ ಜ್ಞಾತಿಗಳ ಹಣವಾದರುಂ, ಪರರ ಧನವಾದರುಂ ತನ್ನ ಕೈಸೇರೆ, ದಯೆಯಿಂ ದೀನರಿಗೆ ದಾನಕೊಟ್ಟವನೆ ಪರಮ ಪುಣ್ಯಶಾಲಿಯಾಗುವನು ವೇಮಾ
ಅರ್ಥ:
ತಂದೆಯ ಹಣ, ದಾಯಾದಿಗಳ ಹಣ, ಇತರರ ಹಣ ಯಾರದಾದರೂ ಸರಿಯೇ ಅದು ತನ್ನ ಕೈಸೇರಿದಾಗ, ಅದು ತನ್ನದೇ ಇತರರದೇ ಎಂಬುವುದನ್ನೂ ವಿಚಾರಿಸದೆ ದಯೆಯಿಂದ ದೀನರಿಗೆ ದಾನಮಾಡುವನೇ ನಿಜವಾದ ದಾತ. ಅವನೇ ಅಧಿಕ ಪುಣ್ಯಶಾಲಿ ಎಂದು ವೇಮನ ಅಭಿಪ್ರಾಯ.
8.
#ತನ್ನ ಪ್ರಭುವಿನೊಡನೆ,
ತನ್ನ ಆಯುಧ ದೊಡನೆ, ಬೆಂಕಿಯೊಡನೆ, ಪರಸತಿಯರೊಡನೆ ಸರಸವಾಡುವವಗೆ ಮೃತ್ಯು ಖಂಡಿತ, ವಿಶ್ವದಾಭಿರಾಮ ಕೇಳು ವೇಮಾ
ಅರ್ಥ:
ತನ್ನನ್ನು ಪೋಷಿಸುವ ಪ್ರಭುವಿನೋಡನೆ, ತನ್ನ ಆಯುಧದೋಡನೆ, ಬೆಂಕಿಯೊಡನೆ, ಪರಕಾಂತೆಯರೊಡನೆ ಸರಸವಾಡುವವನಿಗೆ ತಪ್ಪದೆ ಮೃತ್ಯು ಸಂಭವಿಸುವುದು.
9.
#ತಂದೆತಾಯಿಯರಲಿ ದಯೆತೋರದ ಪುತ್ರ
ಹುಟ್ಟಲೇನು? ಮತ್ತೆ ಸತ್ತರೇನು?
ಹುತ್ತದಲಿ ಗೆದ್ದಲು ಹುಟ್ಟವೇ? ಸಾಯವೇ?
ವಿಶ್ವದಾಭಿರಾಮ ಕೇಳು ವೇಮ
ಅರ್ಥ:
ತಂದೆತಾಯಿಯರಲ್ಲಿ ದಯೆಯನ್ನು ತೋರದ ಮುಪ್ಪಿನಲ್ಲಿ ಸಾಕದ ಪುತ್ರ ಹುಟ್ಟಿದರೆ, ಸತ್ತರೇ ಎನು ಪ್ರಯೋಜನ? ಅಂತ ಪುತ್ರ ಹುತ್ತದ ಗೆದ್ದಲುಗಳ ಸಮ. ಹುತ್ತದಲ್ಲಿ ಗೆದ್ದಲುಗಳು ಹುಟ್ಟುತ್ತವೆ ಸಾಯುತ್ತವೆ.
10.
#ಧ್ವಜವೆತ್ತಿಸಾರು ದೇವನೊಬ್ಬನೆಂದು,
ನಿಜವಿಹುದು ಒಳಗೆ ನಿಂತಿರುವನು
ಚೊಕ್ಕನೋಡುವವನು ಸಂತಸದಿ ಮುಳುಗುವೆ ವಿಶ್ವದಾಭಿರಾಮ ಕೇಳು ವೇಮ
ಅರ್ಥ:
ದೇವನು ಒಬ್ಬನೇ. ಇದನ್ನು ದ್ವಜ ಎತ್ತಿ ಧೈರ್ಯದಿಂದ ಸಾರು. ಇದು ನಿಜ. ನಿನ್ನ ಒಳಗೆಯೇ ಇರುವ ದೇವನನ್ನು ನೋಡು. ಕಂಡು ಸಂತಸದಿಂದ ಅವನಲ್ಲಿ ಲೀನವಾಗಿರು.
11.
#ಆತ್ಮಶುದ್ಧಿ ಇರದ ಆಚಾರವೇತಕೆ?
ಮಡಕೆ ಶುದ್ಧಿ ಇರದ ಅಡಿಗೆ ಯಾತಕೆ?
ಚಿತ್ತಶುದ್ಧಿ ಇರದ ಶಿವನ ಪೂಜೆ ಯಾಕೆ?
ವಿಶ್ವದಾಭಿರಾಮ ಕೇಳು ವೇಮ
ಅರ್ಥ:
ಮಡಕೆ ಶುದ್ಧಿ ಇರದ ಅಡಿಗೆ ಹೇಗೆ ಸೇವನೆಗೆ ಯೋಗ್ಯ ವಲ್ಲವೋ ಅದೇ ರೀತಿ ಆತ್ಮಶುದ್ಧಿ ಇರದ ಆಚಾರ ದೇವರಿಗೆ ಸಲ್ಲದು. ಚಿತ್ತಶುದ್ಧಿ ಇರದ ಶಿವನ ಪೂಜೆ ಇಂದ ಯಾವ ಪ್ರಯೋಜನವಿಲ್ಲ.
12.
#ಒಂದು ತೊಗಲು ತಂದು ಚೆಂದ ಗೊಂಬೆಯ ಮಾಡಿ
ಕುಣಿವಂತೆ ಮಾಡಿ ಹಾಗೆ ಇಡುವ
ತನ್ನ ಆಡಿಸುವವನ ತಾನೇಕೆ ಕಾಣನೊ
ವಿಶ್ವದಾಭಿರಾಮ ಕೇಳು ವೇಮ
ಅರ್ಥ:
ಒಂದು ತೊಗಲು ತಂದು ಚೆಂದ ಗೊಂಬೆಯಾಂತೆ ಮನುಜನನ್ನು ಸೃಷ್ಠಿ ಮಾಡಿ ಜಗತ್ತಿನಲ್ಲಿ ಆಟ ಆಡಿಸಿತ್ತಿದ್ದಾನೆ. ಹಾಗೆ
ಕುಣಿವಂತೆ ಮಾಡಿದ ದೇವರು
ತನ್ನ ಆಡಿಸುವವನು ನಮಗೇಕೆ ಕಾಣಿಸುವದಿಲ್ಲನೋ?
13.
#ಮಿಥ್ಯ ತಿಳಿವಿನಿಂದ ಮೋಕ್ಷ ದೊರಕಬಹುದೆ?
ಕೈಲಾಗದ ಕೆಲಸ ಗೆಯ್ಯಬೇಡ
ಗುರುವು ಎನ್ನಬೇಡ ಗುಣಹೀನನಾಗಿರೆ
ವಿಶ್ವದಾಭಿರಾಮ ಕೇಳು ವೇಮ
ಅರ್ಥ:
ಗುಣ ಹೀನ ನಾದವನು ತಾನು ಗುರು ಎಂದು ಹೇಳಬಾರದು. ಮಿಥ್ಯ ವಾದ ಅಜ್ಞಾನದಿಂದ ಮೋಕ್ಷ ದೊರಕುವದಿಲ್ಲ. ಇಂಥಹ ಅಜ್ಞಾನಿಗಳು ಮಿಥ್ಯ ಜ್ಞಾನ ಉಳ್ಳವರು ತಮ್ಮಕೈಲಾಗದ ಕೆಲಸ ಗುರುವಿನ ಬೋಧನೆ ಮಾಡಬಾರದು.
14.
#ಮಾತಲ್ಲಿ ಒಂದು, ಮನಸಲ್ಲಿ ಮತ್ತೊಂದು
ಒಡಲಿನ ಗುಣ ಬೇರೆ,ನಡತೆ ಬೇರೆ |
ಎಂತು ಮುಕ್ತನಪ್ಪ ಇಂತು ತಾನಿದ್ದೊಡೆ
ವಿಶ್ವದಭಿರಾಮ ಕೇಳು ವೇಮ ||
ಅರ್ಥ:
ಮನದಲ್ಲಿ ಇರುವುದು ಬೇರೆ, ಮಾತನಾಡುವುದು ಬೇರೆ, ಮನಸ್ಸಿನ ಗುಣಲಕ್ಷಣ ಬೇರೆ, ಇನ್ನೂ ನಡತೆ ಬೇರೆ ಇಂತವರಿಗೆ ಮುಕ್ತಿ ಸಿಗಲಾರದು.
-✍️ Dr Prema Pangi
Comments
Post a Comment